ನಾಟಕಕಾರ ಸಫ್ದರ್ ಹಶ್ಮಿಗೆ ಸಾವಿಲ್ಲ

1989ರ ಜ. 1ರಂದು ನವದೆಹಲಿ ಸಮೀಪದ ಸಾಹಿಬಾಬಾದ್ ನಗರದ ಝಂಡಾಪುರ ಕಾಲೊನಿಯ ರಸ್ತೆಯೊಂದರಲ್ಲಿ ಸಾರ್ವಜನಿಕರ ಬೃಹತ್ ಗುಂಪು ಜಮಾಯಿಸಿರುತ್ತದೆ. ಬೆಳಿಗ್ಗೆ 11ಗಂಟೆಗೆ ಜನನಾಟ್ಯ ಮಂಚ್ (ಜನಮ್) ತಂಡವು ಫ್ಯಾಕ್ಟರಿ ಕಾರ್ಮಿಕರು ಅನುಭವಿಸುವ ದಬ್ಬಾಳಿಕೆ ಕುರಿತು ‘ಹಲ್ಲಾ ಬೋಲ್’ ಎಂಬ ಬೀದಿನಾಟಕ ಪ್ರದರ್ಶನ ಆರಂಭಿಸುತ್ತದೆ. ಭಾರತೀಯ ಕಮ್ಯೂನಿಸ್ಟ್ ಪಕ್ಷದಿಂದ ಗಾಜಿಯಾಬಾದ್ ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದ ರಾಮಾನಂದ ಝಾ ಅವರಿಗೆ ಬೆಂಬಲ ಸೂಚಿಸಿ ಈ ನಾಟಕ ನಡೆಯುತ್ತಿತ್ತು. ನಾಟಕ ಆರಂಭವಾದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬರುವ ಎದುರಾಳಿ ಕಾಂಗ್ರೆಸ್ ಪಕ್ಷದ ಮುಖೇಶ್ ಶರ್ಮಾ ಹಾಗೂ ಅವರ ಸಹಚರರು ಆ ರಸ್ತೆ ಮೂಲಕ ಹಾದು ಹೋಗಲು ನಾಟಕ ನಿಲ್ಲಿಸಲು ಒತ್ತಾಯಿಸುತ್ತಾರೆ. ಆಗ ಅಲ್ಲಿಯೇ ಇದ್ದ 34 ವರ್ಷದ ಪ್ರತಿಭಾನ್ವಿತ ಯುವ ನಾಟಕಕಾರ ಸ್ವಲ್ಪಹೊತ್ತು ಕಾದು ನಿಲ್ಲಿ ಅಥವಾ ಬೇರೆ ದಾರಿಯ ಮೂಲಕ ಹೋಗಿ ಎಂದು ಪ್ರತಿಕ್ರಿಯಿಸುತ್ತಾನೆ. ಆತನ ಉತ್ತರದಿಂದ ಕೆಂಡಾಮಂಡಲರಾಗುವ ಶರ್ಮಾ ಮತ್ತವನ ಗ್ಯಾಂಗ್ ಏಕಾಏಕಿ ಕಬ್ಬಿಣದ ರಾಡುಗಳು ಮತ್ತಿತರ ಮಾರಕಾಸ್ತ್ರಗಳಿಂದ ಕಲಾವಿದರು ಮತ್ತು ಪ್ರೇಕ್ಷಕರೆನ್ನದೆ ಎಲ್ಲರ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸುತ್ತದೆ. ಈ ಹಠಾತ್ ದಾಳಿಯಲ್ಲಿ ಮಾರಣಾಂತಿಕವಾಗಿ ಹಲ್ಲೆಗೊಳಗಾಗುವ ಯುವ ನಾಟಕಕಾರನನ್ನು ಸಿಐಟಿಯು ಕಚೇರಿಗೆ ಕರೆದೊಯ್ಯಲಾಗುತ್ತದೆ. ಅಲ್ಲಿಗೂ ಹಿಂಬಾಲಿಸುವ ಶರ್ಮಾ ಮತ್ತವನ ತಂಡ ಇನ್ನೊಮ್ಮೆ ಆತನ ಮೇಲೆ ಹಲ್ಲೆ ನಡೆಸುತ್ತಾರೆ. ಮೊದಲಿಗೆ ಆತನನ್ನು ನರೇಂದ್ರ ಮೋಹನ್ ಆಸ್ಪತ್ರೆಗೆ, ನಂತರ ರಾಮಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ತೀವ್ರವಾಗಿ ಹಲ್ಲೆಗೊಳಗಾಗಿದ್ದ ಆತ ಮರುದಿನ ಅಂದರೆ ಜ. 2ರಂದು ಬೆಳಿಗ್ಗೆ 10ಗಂಟೆಗೆ ಕೊನೆಯುಸಿರೆಳೆಯುತ್ತಾನೆ. ಆತ ಅಸುನೀಗಿದ ಎರಡು ದಿನಗಳ ಬಳಿಕ ಆತನ ಪತ್ನಿ ಮೊಲೊಯಶ್ರಿ, ಅದೇ ಸ್ಥಳದಲ್ಲಿ ‘ಹಲ್ಲಾ ಬೋಲ್’ ನಾಟಕವನ್ನು ಪೂರ್ಣಪ್ರಮಾಣದಲ್ಲಿ ಪ್ರದರ್ಶಿಸುವ ಮೂಲಕ ಪತಿಯ ಅಪೂರ್ಣ ಕಾರ್ಯವನ್ನು ಪೂರ್ಣಗೊಳಿಸುತ್ತಾರೆ. ಅಂದಿನ ಆಡಳಿತಾರೂಢ ಕಾಂಗ್ರೆಸ್‌ನ ರಾಜಕಾರಣಿ ಮತ್ತು ಆತನ ಸಹಚರರ ತಣ್ಣನೆಯ ಈ ಕ್ರೌರ್ಯ ಇಡೀ ದೇಶದ ಕಲಾವಿದರು, ಹೋರಾಟಗಾರರು, ಸಿನಿಮಾ ನಟ-ನಿರ್ದೇಶಕರನ್ನು ತಲ್ಲಣಗೊಳಿಸಿತ್ತು. ಅಂದಿನ ಪ್ರಧಾನಿ ರಾಜೀವ್‌ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈ ಘಟನೆಯಿಂದ ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗೆ ಒಬ್ಬ ಪ್ರಭಾವಿ ರಾಜಕಾರಣಿಯೊಬ್ಬನ ಬಾಡಿಗೆ ರೌಡಿಗಳಿಂದ ದುರಂತ ಅಂತ್ಯ ಕಂಡರೂ ಸಾವಿನ ನಂತರ ಭಾರತದ ಸಾಂಸ್ಕೃತಿಕ ಲೋಕದಲ್ಲಿ ದಂತಕಥೆಯಾದ ಆ ಯುವ ನಾಟಕಕಾರನ ಹೆಸರು ಸಫ್ದರ್ ಹಶ್ಮಿ.ಹೌದು, ಸಫ್ದರ್ ಹಶ್ಮಿ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಕ್ರಾಂತಿಕಾರಿ ಸಾಧನೆಯ ಹಾದಿಯಲ್ಲಿ ದಾಪುಗಾಲಿಡುತ್ತಿದ್ದ ದೇಶ ಕಂಡ ಅತ್ಯಂತ ಪ್ರತಿಭಾವಂತ ನಟ-ನಿರ್ದೇಶಕ. ಬೀದಿನಾಟಕಗಳ ಮೂಲಕ ಅತ್ಯಂತ ಪ್ರಖರವಾದ ಜನಪರ ಸಂದೇಶಗಳನ್ನು ಪ್ರಭುತ್ವಕ್ಕೆ ತಲುಪಿಸುತ್ತಿದ್ದ ಹಶ್ಮಿ ಕೇವಲ ನಾಟಕಕಾರನಾಗಿರಲಿಲ್ಲ. ಕವಿ, ಗಾಯಕ, ಬರಹಗಾರ, ಹೋರಾಟಗಾರ, ಉಪನ್ಯಾಸಕ ಹೀಗೆ ಹತ್ತು ಹಲವು ಪಾತ್ರಗಳನ್ನು ತನ್ನ ಬದುಕಿನಲ್ಲಿ ಅದ್ಭುತವಾಗಿ ನಿರ್ವಹಿಸುತ್ತಿದ್ದ ಅವರದು ಬಹುಮುಖಿ ವ್ಯಕ್ತಿತ್ವ. ಹಶ್ಮಿ ಅಗಲಿ ಇಂದಿಗೆ 31 ವರ್ಷಗಳು ಕಳೆದರೂ ಆತ ಹಾಕಿಕೊಟ್ಟ ಪ್ರತಿರೋಧದ ಕಲಾತ್ಮಕ ಮಾದರಿ ಅನೇಕ ರೂಪಗಳಲ್ಲಿ ಇಂದಿಗೂ ಜೀವಂತವಾಗಿದೆ. ಅಂದು ನಡೆದ ಹಶ್ಮಿಯ ಭೀಕರ ಹತ್ಯೆಯು ವಿವಿಧ ಬಗೆಯ ಸಾಂಸ್ಕೃತಿಕ ಅಭಿವ್ಯಕ್ತಿಗಳ ಮೂಲಕ ಜನಪರ ಹೋರಾಟಗಳಲ್ಲಿ ತೊಡಗಿದ್ದ ದೇಶದ ಕಲಾವಿದರು ಮತ್ತು ಬೌದ್ಧಿಕ ವಲಯವನ್ನು ಒಗ್ಗೂಡಿಸಿತ್ತು. ಪಾದರಸದಂತಹ ವ್ಯಕ್ತಿತ್ವದ ಸಫ್ದರ್ ಹಶ್ಮಿ ಜನಪರ ವಿಚಾರಗಳಿಗಾಗಿ ಪ್ರಭುತ್ವವನ್ನು ಪ್ರಶ್ನಿಸುವ ಛಾತಿ ಹೊಂದಿದ್ದರು. 1954ರಲ್ಲಿ ದೆಹಲಿಯಲ್ಲಿ ಜನಿಸಿದ ಹಶ್ಮಿ, ವಿದ್ಯಾರ್ಥಿ ದೆಸೆಯಲ್ಲಿಯೇ ಎಡಪಂಥೀಯ ವಿಚಾರಧಾರೆಯನ್ನು ರೂಢಿಸಿಕೊಂಡು, ಭಾರತೀಯ ಸ್ಟೂಡೆಂಟ್ ಫೆಡರೇಷನ್ (ಎಸ್‌ಎಫ್‌ಐ) ಮತ್ತು ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್ (ಐಪಿಟಿಎ)ನ ಹಲವಾರು ನಾಟಕಗಳಿಗೆ ಕೆಲಸ ಮಾಡಿದವರು. 1973ರಲ್ಲಿ ಜನ ನಾಟ್ಯ ಮಂಚ್ ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ರಾಜಕೀಯ ನಾಟಕ ಪ್ರಕಾರಕ್ಕೆ ಹೊಸ ಆಯಾಮ ತಂದುಕೊಡುವ ಅವರು ನಂತರದ ದಿನಗಳಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷದೊಂದಿಗೆ ಸೇರಿ ಹಲವಾರು ಬೀದಿನಾಟಕಗಳನ್ನು ನಿರ್ದೇಶಿಸುತ್ತಾರೆ. ಜನ ನಾಟ್ಯ ಮಂಚ್‌ನ ಮೂಲಕ ದೆಹಲಿಯ ಕಾರ್ಖಾನೆಗಳು, ಮೊಹಲ್ಲಾಗಳು, ಜನನಿಬಿಡ ರಸ್ತೆಗಳು ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಟಕಗಳನ್ನು ಪ್ರದರ್ಶಿಸುವ ಮೂಲಕ ಕಾರ್ಮಿಕ ವರ್ಗ, ಬಡವರು, ದಲಿತರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ನಿರತರಾಗಿದ್ದರು. ಹಶ್ಮಿ ಬರೆದು ನಿರ್ದೇಶಿಸಿದ ಒಂದೊಂದು ನಾಟಕವೂ ಒಂದೊಂದು ರೀತಿಯ ವೈಚಾರಿಕ ಕಿಡಿ ಹೊತ್ತಿಸುತ್ತಿದ್ದವು. 1974ರಲ್ಲಿ ಸುಮಾರು ಎರಡು ಲಕ್ಷ ಕಾರ್ಮಿಕರು ಭಾಗವಹಿಸಿದ್ದ ಟ್ರೇಡ್ ಯೂನಿಯನ್‌ನ ಸಭೆಯಲ್ಲಿ ‘ಮಷಿನ್’ ಎಂಬ ಬೀದಿನಾಟಕ ಪ್ರದರ್ಶಿಸುವ ಹಶ್ಮಿ, ನಂತರ ಕೂಲಿಕಾರ್ಮಿಕರನ್ನು ಕುರಿತ ‘ಗಾವ್ ಸೆ ಷೆಹರ್ ತಕ್,’ ಆಡಳಿತಶಾಹಿಯ ದಬ್ಬಾಳಿಕೆ ಕುರಿತ ‘ಹತ್ಯಾರೆ’, ‘ಅಪಹರಣ್ ಭಾಯ್‌ಚಾರೆ ಕಿ,’ ನಿರುದ್ಯೋಗ ಕುರಿತ ‘ತೀನ್ ಕರೋಡ್,’ ಮಹಿಳಾ ದೌರ್ಜನ್ಯ ಕುರಿತ ‘ಔರತ್,’ ಹೀಗೆ ಹಲವಾರು ಬೀದಿನಾಟಕಗಳನ್ನು ನಿರ್ದೇಶಿಸುತ್ತಾರೆ. 1973ರಲ್ಲಿ ಇಂದಿರಾಗಾಂಧಿ ಚುನಾವಣಾ ಅಕ್ರಮದ ಆರೋಪಕ್ಕೆ ಸಿಲುಕಿದ್ದಾಗ ‘ಕುರ್ಸಿ ಕುರ್ಸಿ ಕುರ್ಸಿ’ ಬೀದಿನಾಟಕ ಬರೆದು ದೆಹಲಿಯ ಬೋಟ್ ಕ್ಲಬ್‌ನಲ್ಲಿ ಒಂದು ವಾರ ಪ್ರದರ್ಶನ ನೀಡಿ ಇಡೀ ದೇಶದ ಗಮನ ಸೆಳೆದಿದ್ದರು. ಎಡಪಂಥೀಯ ವಿಚಾರಧಾರೆಯನ್ನು ಮೈಗೂಡಿಸಿಕೊಂಡಿದ್ದರೂ, ತಮ್ಮ ಬಹುಮುಖಿ ಪ್ರತಿಭೆಯಿಂದ ಇತರೆ ಸೈದ್ಧಾಂತಿಕ ನಿಲುವಿನ ಜನರನ್ನು ಕೂಡ ಸೆಳೆಯುವ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಹಶ್ಮಿ, ನಾಟಕಗಳ ಮೂಲಕ, ಕವಿತೆಗಳ ಮೂಲಕ, ಹಾಡುಗಳ ಮೂಲಕ ಯಥಾಸ್ಥಿತಿವಾದದ ವಾರಸುದಾರರಿಗೆ ಚಳಿ ಬಿಡಿಸುತ್ತಿದ್ದರು. ಬಡವರು ಮತ್ತು ತುಳಿತಕ್ಕೊಳಗಾದವರ ಪರವಾಗಿ ಪ್ರತಿರೋಧದ ಹೊಸ ಅಲೆಯನ್ನೇ ಸೃಷ್ಟಿಸಿದ್ದರು. ಕೆಲಕಾಲ ಉಪನ್ಯಾಸಕರಾಗಿ ಕೆಲಸ ಮಾಡಿದ್ದ ಅವರು ಸ್ಥಾವರಗಳ ಗೋಡೆಗಳ ಒಳಗೆ ಬಂಧಿಯಾಗದೆ ಜಂಗಮಸ್ವರೂಪಿಯಾಗಿ ರಸ್ತೆಗಿಳಿದು ಪ್ರತಿರೋಧಕ್ಕೆ ಕಲಾತ್ಮಕ ರೂಪ ಕೊಟ್ಟಿದ್ದರು. ತಾನು ನಂಬಿದ ಸಿದ್ಧಾಂತಗಳನ್ನು ಯಾವುದೇ ಅಂಜಿಕೆಯಿಲ್ಲದೆ ಅಭಿವ್ಯಕ್ತಿಸುವ ಮೂಲಕ ಅಪಾಯದ ಅಂಚಿನಲ್ಲಿಯೇ ಬದುಕುತ್ತಿದ್ದ ಸಫ್ದರ್ ಹಶ್ಮಿಯ ಅಂತ್ಯವೂ ಒಂದು ರೀತಿಯಲ್ಲಿ ಪೂರ್ವನಿರ್ಧಾರಿತವಾಗಿತ್ತು! ಅಧಿಕಾರಸ್ಥ ಪಟ್ಟಭದ್ರರ ಅಸ್ತಿತ್ವಕ್ಕೆ ಅಕ್ಷರದ ಮೂಲಕ ಕೊಡಲಿಪೆಟ್ಟು ಕೊಡುತ್ತಿದ್ದ ಹಶ್ಮಿಯನ್ನು ಸಾವು ಹಿಂಬಾಲಿಸಿದ್ದು ಸುಳ್ಳಲ್ಲ. ಮೇಲ್ವರ್ಗದ ಕುಟುಂಬಕ್ಕೆ ಸೇರಿದ ಸಫ್ದರ್ ಹಶ್ಮಿ ಬಯಸಿದ್ದರೆ ಅತ್ಯಂತ ಸುರಕ್ಷಿತವಾದ ಶ್ರೀಮಂತ ಜೀವನ ನಡೆಸಬಹುದಿತ್ತು. ಆದರೆ, ಬದುಕಿದ್ದ ಅಲ್ಪಾವಧಿಯಲ್ಲಿಯೇ ಸಮಾಜದ ಅಸಹಾಯಕರ ಪರವಾಗಿ ಪ್ರಾಣ ತೆತ್ತ ಸಫ್ದರ್ ಹಶ್ಮಿ ಸ್ವಾತಂತ್ರ್ಯೋತ್ತರ ಭಾರತ ಕಂಡ ದುರಂತ ನಾಯಕರಲ್ಲಿ ಒಬ್ಬ ಎಂದರೆ ಅತಿಶಯೋಕ್ತಿಯಾಗಲಾರದು. ಇದನ್ನೂ ಓದಿ: ಜನವರಿ ಒಂದರಂದು ಬಹುತೇಕ ಇಡೀ ದೇಶ ಹೊಸ ವರ್ಷಾಚರಣೆಯ ಮೋಜು ಮಸ್ತಿಯಲ್ಲಿ ತೊಡಗಿರುವ ಸಂದರ್ಭದಲ್ಲಿ, ದೆಹಲಿಯ ಸಫ್ಧರ್ ಹಶ್ಮಿ ಸ್ಮಾರಕ ಟ್ರಸ್ಟ್ (ಸಹಮತ್) ಆವರಣದಲ್ಲಿ ಇಡೀ ದಿನ ನಡೆಯುವ ’ಜಶ್ನ್-ಎ-ನೋರಾ’ (ಕ್ರಾಂತಿಯ ಉತ್ಸವ) ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತದೆ. ಭಾರತದ ಬಹುತ್ವ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳ ಕ್ರಿಯಾಶೀಲ ಅಭಿವ್ಯಕ್ತಿಗೆ ಕಂಟಕಪ್ರಾಯವಾಗಿರುವ ಸಾಂಪ್ರದಾಯಿಕ ಶಕ್ತಿಗಳನ್ನು ಎದುರಿಸಲು ಸಮಾನ ಮನಸ್ಕ ಕಲಾವಿದರು ಸೇರಿ ಕಟ್ಟಿದ ಸಂಸ್ಥೆ ಸಹಮತ್. ಈ ಬಾರಿ ಜನವರಿ ಒಂದರಂದು ಸಫ್ದರ್ ಹಶ್ಮಿ ಹತ್ಯೆಗೀಡಾದ ಸಾಹಿಬಾಬಾದ್‌ನ ಝಂಡಾಪುರ ಕಾಲೋನಿಯಲ್ಲಿಯೇ ಆತನ ೩೧ನೇ ಹುತಾತ್ಮ ದಿನವನ್ನು ಆಚರಿಸಲಾಯಿತು. ಜನ ನಾಟ್ಯ ಮಂಚ್‌ನ ಸದಸ್ಯರು, ಯುವ ಕಲಾವಿದರು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಅವರ ಕುಟುಂಬದವರು ಮತ್ತು ವಿಶೇಷ ಅತಿಥಿಗಳಾಗಿ ಚಿತ್ರಸಾಹಿತಿ ಜಾವೇದ್ ಅಕ್ತರ್ ಮತ್ತು ಶಬಾನಾ ಆಜ್ಮಿ ಭಾಗವಹಿಸಿದ್ದರು.

courtsey:prajavani.net

https://www.prajavani.net/artculture/article-features/great-dramatist-safdhar-hashmi-698975.html

Leave a Reply