ನರಿ ಮತ್ತು ಗುಡ್ಡು ಕೋಳಿ

ಅದೊಂದು ಸಣ್ಣ ಕಾಡು. ಆ ಕಾಡಿನಲ್ಲಿ ಒಂದು ನರಿ ವಾಸವಾಗಿತ್ತು. ಆ ಕಾಡಿನ ಪಕ್ಕದಲ್ಲೇ ಬಹಾದ್ದೂರ್ ಎನ್ನುವ ವ್ಯಕ್ತಿ ದೊಡ್ಡ ಕೋಳಿ ಫಾರಂ ಒಂದನ್ನು ನಡೆಸುತ್ತಿದ್ದ. ಅವನ ಬಳಿ ನೂರಾರು ಕೋಳಿಗಳು ಇದ್ದವು. ಅದರಲ್ಲಿ ಒಂದು ದೊಡ್ಡದಾದ ಕೋಳಿ ಇತ್ತು. ಬಹಾದ್ದೂರ್ ಅದಕ್ಕೆ ಗುಡ್ಡು ಎಂದು ಹೆಸರಿಟ್ಟಿದ್ದ ಮತ್ತು ಆತ ಅದನ್ನು ಯಾರಿಗೂ ಮಾರುತ್ತಿರಲಿಲ್ಲ. ಅದು ಎಲ್ಲಾ ಕೋಳಿಗಳಿಗಿಂತ ಕೊಬ್ಬಿ ದೊಡ್ಡದಾಗಿ ಬೆಳೆದಿತ್ತು. ಕಾಡಿನ ಪಕ್ಕ ಬಯಲು ಪ್ರದೇಶ ಇದ್ದುದರಿಂದ ಆತ ಅಲ್ಲಿಯೇ ಪ್ರತಿದಿನ ಬೆಳಿಗ್ಗೆ ಕೋಳಿಗಳನ್ನು ಬಿಡುತ್ತಿದ್ದ. ಅವು ಕಾಳು ಕಡ್ಡಿಗಳನ್ನು, ಹುಳ ಹುಪ್ಪಟೆಗಳನ್ನು ತಿನ್ನಲಿ ಎಂಬುದು ಅವನ ಉದ್ದೇಶವಾಗಿತ್ತು. ಮತ್ತೆ ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಕೋಳಿಗಳನ್ನು ಗೂಡಿಗೆ ವಾಪಸ್‌ ತಂದು ಬಿಡುವಂತೆ ವ್ಯವಸ್ಥೆ ಮಾಡಿದ್ದ. ಅದೊಂದು ದಿನ ಬೆಳಿಗ್ಗೆ ಅತ್ತ ಕಡೆ ಬಂದ ಒಂದು ನರಿ, ನೂರಾರು ಕೋಳಿಗಳು ಬಯಲಲ್ಲಿ ತಿರುಗಾಡುತ್ತಿರುವುದನ್ನು ನೋಡಿತ್ತು. ಹೇಗಾದರೂ ಮಾಡಿ ದಿನಾ ಒಂದು ಕೋಳಿಯನ್ನು ಕದ್ದು ತಿನ್ನಬೇಕು ಎಂದು ಬಯಸಿತು. ಹಾಗೆ ಹೊಂಚುಹಾಕಿ ಕುಳಿತು ದಿನಾ ಒಂದೊಂದು ಕೋಳಿಯನ್ನು ಕದ್ದು ಒಯ್ಯತೊಡಗಿತು. ಒಂದೆರಡು ಬಾರಿ ಬಹಾದ್ದೂರ್‌ನ ಕೈಯಲ್ಲಿ ಸಿಕ್ಕಿಬಿದ್ದು ಸರಿಯಾಗಿ ಪೆಟ್ಟು ತಿಂದಿತ್ತು ಕೂಡ. ಆದರೂ ಆ ನರಿ ಕೋಳಿ ಕದಿಯುವ ತನ್ನ ಅಭ್ಯಾಸ ಬಿಟ್ಟಿರಲಿಲ್ಲ. ಸುಮಾರು ಒಂದು ತಿಂಗಳ ಬಳಿಕ ಆ ನರಿಯು, ಗುಡ್ಡು ಕೋಳಿಯ ದೊಡ್ಡ, ಕೊಬ್ಬಿದ ದೇಹವನ್ನು ನೋಡಿ ಅದನ್ನು ಕದ್ದೊಯ್ಯಲು ತೀರ್ಮಾನಿಸಿತು. ಸಮಯ ನೋಡಿ, ಗುಡ್ಡು ಕೋಳಿಯ ಮೇಲೆ ಆಕ್ರಮಣ ಮಾಡಿ, ಅದರ ರೆಕ್ಕೆಯನ್ನು ಕಚ್ಚಿ ಹಿಡಿದು ಕಾಡಿನ ನಡುವೆ ಇರುವ ತನ್ನ ಮನೆಯ ಬಳಿ ಎಳೆದು ತಂದಿತು. ಇನ್ನೇನು ಅದು ತನ್ನನ್ನು ಕೊಲ್ಲಬೇಕು ಎನ್ನುವಾಗ ಗುಡ್ಡು ಕೋಳಿ ಹೇಳಿತು, ‘ಗೆಳೆಯ ನರಿಯೇ, ದಯವಿಟ್ಟು ನನ್ನನ್ನು ಕೊಲ್ಲಬೇಡ. ನನ್ನ ಯಜಮಾನನಿಗೆ ನಾನೆಂದರೆ ಬಹಳ ಪ್ರೀತಿ. ನಿನಗೆ ಬೇಕಿದ್ದರೆ ಬೇರೆ ಕೋಳಿಯನ್ನು ನಾನೇ ದಿನವೂ ತಂದೊಪ್ಪಿಸುತ್ತೇನೆ. ನಿನ್ನ ಶ್ರಮವೂ ಕಡಿಮೆಯಾಗುತ್ತದೆ. ನನ್ನ ಯಜಮಾನನ ಕೈಯಲ್ಲಿ ನೀನು ಸಿಕ್ಕಿಬಿದ್ದು ಪೆಟ್ಟು ತಿನ್ನುವುದೂ ತಪ್ಪುತ್ತದೆ. ಅಲ್ಲವೇ?’ ಎಂದಿತು. ನರಿಗೂ ಈ ಯೋಚನೆ ಇಷ್ಟವಾಯಿತು.‘ಸರಿ, ನೀನು ದಿನವೂ ನನಗೆ ಒಂದು ಕೋಳಿಯನ್ನು ತಂದೊಪ್ಪಿಸಬೇಕು. ಮಾತಿಗೆ ತಪ್ಪಿದಲ್ಲಿ ನಿನ್ನನ್ನು ಖಂಡಿತ ಕೊಲ್ಲುತ್ತೇನೆ’ ಎಂದಿತು ನರಿ. ಗುಡ್ಡು ಕೋಳಿಯು ‘ಇಲ್ಲ, ನಾನು ಮಾತಿಗೆ ತಪ್ಪಲಾರೆ. ನಾಳೆಯಿಂದಲೇ ನಾನು ಮಾತನ್ನು ಪಾಲಿಸುತ್ತೇನೆ’ ಎಂಬ ಭರವಸೆ ನೀಡಿತು. ನರಿ ಸಂತೋಷದಿಂದ ಗುಡ್ಡು ಕೋಳಿಯನ್ನು ಬಿಟ್ಟಿತು.ಮಾರನೆಯ ದಿನದಿಂದಲೇ ಗುಡ್ಡು ಕೋಳಿಯು ದಿನವೂ ಬೆಳಿಗ್ಗೆ ತನ್ನ ಜೊತೆಯಲ್ಲಿ ಬಯಲಲ್ಲಿರುತ್ತಿದ್ದ ಯಾವುದಾದರೂ ಒಂದು ಕೋಳಿಯನ್ನು ಬಣ್ಣದ ಮಾತುಗಳಿಂದ ಪುಸಲಾಯಿಸಿ ಕಾಡಿನ ಹತ್ತಿರ ಕರೆದೊಯ್ಯುತ್ತಿತ್ತು. ಮೊದಲೇ ಅಲ್ಲಿ ಕಾದು ಕುಳಿತಿರುತ್ತಿದ್ದ ನರಿ ಆ ಕೋಳಿಯನ್ನು ಹಿಡಿದು ತಿನ್ನುತ್ತಿತ್ತು. ಹೀಗೇ ಹತ್ತಾರು ದಿನಗಳು ಕಳೆದವು. ಬಹಾದ್ದೂರ್‌ಗೆ ತನ್ನ ಕೋಳಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅನ್ನಿಸತೊಡಗಿತ್ತು. ಆತ ಕೋಳಿಗಳನ್ನು ಬಯಲಲ್ಲಿ ಬಿಡುವುದನ್ನು ನಿಲ್ಲಿಸಿದ. ಗುಡ್ಡು ಕೋಳಿಯೂ ಗೂಡೊಳಗೆ ಇರಬೇಕಾಗಿ ಬಂದ ಕಾರಣ ನರಿಗೆ ದಿನವೂ ಆಹಾರ ಸಿಗುವುದು ತಪ್ಪಿತ್ತು.ಸ್ವಲ್ಪ ದಿನಗಳ ಬಳಿಕ ಎಲ್ಲವೂ ಸರಿ ಇದೆ ಅಂತ ಅನ್ನಿಸಿ ಬಹಾದ್ದೂರ್ ತನ್ನ ಕೋಳಿಗಳನ್ನು ಮತ್ತೆ ಬಯಲಿಗೆ ಬಿಟ್ಟಿದ್ದ. ಇದೇ ಸಮಯವನ್ನು ಕಾಯುತ್ತಿದ್ದ, ಹಸಿವಿನಿಂದ ಕಂಗೆಟ್ಟಿದ್ದ ನರಿಯು ಕೋಳಿಗಳನ್ನು ಓಡಿಸಿಕೊಂಡು ಬಂತು. ದೊಡ್ಡ ದೇಹದ ಗುಡ್ಡು ಕೋಳಿ ಮತ್ತೊಮ್ಮೆ ಸುಲಭವಾಗಿ ನರಿಯ ಬಾಯಿಗೆ ಸಿಕ್ಕಿತು. ನರಿಯು ಗುಡ್ಡು ಕೋಳಿಯನ್ನು ಕಾಡಿನ ಒಳಕ್ಕೆ ಎಳೆದು ತಂದಿತು. ಅಲ್ಲಿ ನರಿಯ ಬಳಿ ಗುಡ್ಡು ಮತ್ತೆ ಹಿಂದಿನಂತೆಯೇ ಬೇಡಿಕೊಂಡಿತು. ಆಗ ನರಿ ಹೇಳಿತು, ‘ಈಗ ನಾನು ನಿನ್ನನ್ನು ಖಂಡಿತ ಬಿಡಲಾರೆ. ನೀನು ನಿಜಕ್ಕೂ ದ್ರೋಹಿ. ನಿನ್ನ ಜೀವ ಉಳಿಸಿಕೊಳ್ಳುವುದಕ್ಕಾಗಿ ನೀನು ನಿನ್ನ ಯಜಮಾನನಿಗೆ ಮಾತ್ರವೇ ಅಲ್ಲದೆ ನಿನ್ನೊಂದಿಗೆ ಇರುತ್ತಿದ್ದ ಸ್ನೇಹಿತರಿಗೂ ಮೋಸ ಮಾಡಿದ್ದೀಯಾ. ಮುಂದೊಂದು ದಿನ ನೀನು ನನಗೂ ಮೋಸ ಮಾಡುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ನಿನ್ನನ್ನು ಕೊಂದರೆ ನನಗೆ ಯಾವ ಪಾಪವೂ ಅಂಟುವುದಿಲ್ಲ. ನನ್ನ ಆಹಾರ ನಾನೇ ಸಂಪಾದಿಸಿಕೊಳ್ಳುತ್ತೇನೆ. ಅಷ್ಟು ಶಕ್ತಿ ನನ್ನಲ್ಲಿ ಇದೆ. ನನಗೆ ಇನ್ನು ನಿನ್ನ ಸಹಾಯ ಬೇಡ’ ಎಂದು. ನಂತರ ಅದು ಗುಡ್ಡು ಕೋಳಿಯನ್ನು ಕೊಂದು ತಿಂದಿತು. ಇತ್ತ ಬಹಾದ್ದೂರ್‌ಗೆ ತನ್ನ ಪ್ರೀತಿಯ ಗುಡ್ಡು ಕೋಳಿಯನ್ನು ನರಿ ಹೊತ್ತುಕೊಂಡು ಹೋದ ವಿಚಾರ ಕೇಳಿ ಸಿಟ್ಟು ಬಂದಿತು. ಮರುದಿನ ನರಿ ಮತ್ತೆ ಯಾವುದಾದರೂ ಒಂದು ಕೋಳಿಯನ್ನು ಕದ್ದೊಯ್ಯಲು ಬಯಲಿಗೆ ಬಂದಾಗ ಮರೆಯಲ್ಲಿ ನಿಂತಿದ್ದ ಬಹಾದ್ದೂರ್ ಅದಕ್ಕೆ ಗುಂಡು ಹಾರಿಸಿ ಕೊಂದು ಹಾಕಿದ. ನೀತಿ: ಯಾವತ್ತೂ ದ್ರೋಹಿಗಳ ಸಂಗ ಮಾಡಬಾರದು. ಕೆಟ್ಟದ್ದನ್ನು ಮಾಡುವವರು ಮತ್ತು ಕೆಟ್ಟದ್ದನ್ನು ಬೆಂಬಲಿಸುವವರು ಇಬ್ಬರೂ ತಪ್ಪಿತಸ್ಥರೇ ಆಗಿರುತ್ತಾರೆ. ಅವರಿಗೆ ತಕ್ಕ ಶಾಸ್ತಿ ಆಗಲೇಬೇಕು.

author – ನರೇಂದ್ರ ಎಸ್ ಗಂಗೊಳ್ಳಿ

courtsey:prajavani.net

https://www.prajavani.net/artculture/short-story/nari-mattu-koli-661650.html

Leave a Reply