ಆನ್‌ಲೈನ್‌ನಲ್ಲಿ ಇಗೋ ಕನ್ನಡ

 

ಐದು ವರ್ಷಗಳ ಹಿಂದೆ ಆರಂಭವಾದ ಈ ಕಲಿಕಾ ತಾಣ ಇಂದು 17 ಸಾವಿರಕ್ಕೂ ಹೆಚ್ಚು ಜನರಿಗೆ ಕನ್ನಡ ಕಲಿಸುವಲ್ಲಿ ಸಫಲವಾಗಿದೆ ‘ಕನ್ನಡ ಗೊತ್ತಿಲ್ಲ’ ಎನ್ನುವ ಕನ್ನಡೇತರರ ಬಾಯಲ್ಲಿ ‘ನಮಗೆ ಕನ್ನಡ ಬರತ್ತೆ’ ಅಂತ ಹೇಳಿಸುವುದು ಸುಲಭದ ಮಾತಲ್ಲ. ಅದೊಂದು ದೀರ್ಘ ಪ್ರಯಾಣವೇ ಸರಿ. ಕನ್ನಡ ಕಲಿಯಲು ಬಯಸುವವರಿಗೆ ವರ್ಣಮಾಲೆ, ವ್ಯಾಕರಣ, ಶಬ್ದಾರ್ಥ, ಭಾವಾರ್ಥಗಳನ್ನು ನಿಯಮಿತವಾಗಿ ಹೇಳಿಕೊಟ್ಟು, ಅವರನ್ನು ‘ಕನ್ನಡ ಸುಶಿಕ್ಷಿತ’ರನ್ನಾಗಿ ಮಾಡುವ ಕೆಲಸ ಸುಲಭದ್ದೇನಲ್ಲ. ಆದರೆ, ಸಾವಿರಾರು ಜನ ಕನ್ನಡೇತರರಿಗೆ ಕನ್ನಡ ಕಲಿಸುವ ಕಾಯಕದಲ್ಲಿ ತೊಡಗಿ, ಯಶಸ್ವಿಯಾಗಿದೆ ‘ಕನ್ನಡ ಗೊತ್ತಿಲ್ಲ.ಕಾಂ’ ತಂಡ. ಪುತ್ತೂರಿನಿಂದ ಬೆಂಗಳೂರಿಗೆ ಬಂದವರು ರಾಕೇಶ್ ಮಯ್ಯ (ಮಗಳು ಜಾನಕಿ ಧಾರಾವಾಹಿಯ ಕಲಾವಿದ). ಅವರ ಸಹೋದರ ಅನೂಪ್ ಮಯ್ಯ (ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿ). ಹಲವು ವರ್ಷಗಳಿಂದ ಬೆಂಗಳೂರಿನಲ್ಲಿದ್ದರೂ ಕನ್ನಡ ಕಲಿಯದ ಕನ್ನಡೇತರರ ಮನೋಭಾವದ ಬಗ್ಗೆ ಇವರು ಒಂದಿಷ್ಟು ಆಲೋಚನೆ ಮಾಡತೊಡಗಿದರು. ‘ಇವರೆಲ್ಲ ಕನ್ನಡ ಕಲಿಯುತ್ತಿಲ್ಲವಲ್ಲ ಎನ್ನುವ ಬದಲು, ಇವರು ಕನ್ನಡ ಕಲಿಯುವಂತೆ ಮಾಡುವುದು ಹೇಗೆ ಎಂದು ನಾವಿಬ್ಬರೂ ಯೋಚಿಸಿ, ಕನ್ನಡ ಗೊತ್ತಿಲ್ಲ.ಕಾಂ ಎಂಬ ವೆಬ್ ಪೋರ್ಟಲ್‍ ಆರಂಭಿಸಿದೆವು. ಕಲಿಯುವವರಿಗೂ ಕಲಿಸುವವರಿಗೂ ಹೆಚ್ಚು ಶ್ರಮ ಮತ್ತು ಸಮಯ ವ್ಯರ್ಥವಾಗಬಾರದು. ಖರ್ಚೂ ಹೆಚ್ಚಾಗಬಾರದು. ಅವರಿರುವ ಸ್ಥಳದಿಂದಲೇ ಕಲಿಯುವ-ಕಲಿಸುವ ವ್ಯವಸ್ಥೆಯಾಗಬೇಕು ಎನ್ನುವ ಉದ್ದೇಶ ಈ ಪೋರ್ಟಲ್‍ನದು. ಐದು ವರ್ಷಗಳ ಹಿಂದೆ ಆರಂಭವಾದ ಈ ಕಲಿಕಾ ತಾಣ ಇಂದು 17 ಸಾವಿರಕ್ಕೂ ಹೆಚ್ಚು ಜನರಿಗೆ ಕನ್ನಡ ಕಲಿಸುವಲ್ಲಿ ಸಫಲವಾಗಿದೆ’ ಎನ್ನುತ್ತಾರೆ ಅನೂಪ್. ತಂತ್ರಜ್ಞಾನದ ಬೆಂಬಲದೊಂದಿಗೆ ಆರಂಭವಾದ ಈ ಜಾಲಪುಟದ ಕೆಲವು ವೈಶಿಷ್ಟ್ಯಗಳು ಹೀಗಿವೆ ಸುಲಭವಾಗಿ ಲಭ್ಯ ಯಾರೇ ಆಗಲಿ, ಗೂಗಲ್ ಸರ್ಚ್‌ಗೆ ಹೋಗಿ, ‘ಕನ್ನಡ ಗೊತ್ತಿಲ್ಲ.ಕಾಂ’ ಎಂದು ಟೈಪ್ ಮಾಡಿದರೆ, ಆ ಪುಟ ತೆರೆದುಕೊಳ್ಳುತ್ತದೆ. ಇಂದು, ಹದಿಮೂರು ದೇಶಗಳ ಜನ ಇದರ ಮೂಲಕ ಕನ್ನಡ ಕಲಿತಿದ್ದಾರೆ. ತ್ವರಿತ ನೋಂದಣಿ ಕಲಿಕಾ ತಾಣಕ್ಕೆ ಹೋಗಿ ಸ್ವವಿವರ ನೀಡಿ, ನೋಂದಾಯಿಸಿಕೊಳ್ಳಬಹುದು. ತಕ್ಷಣವೇ ಅವರಿಗೊಂದು ಮಿಂಚಂಚೆ ಬರುತ್ತದೆ. ಅದು ಅವರ ನೋಂದಣಿಯನ್ನು ಖಚಿತಪಡಿಸುತ್ತದೆ. ಎರಡು ಹಂತ ಕನ್ನಡ ಕಲಿಯುವಲ್ಲಿ ಎರಡು ಹಂತದ ಕೋರ್ಸುಗಳಿವೆ – ಆರಂಭಿಕ ಮತ್ತು ಪ್ರೌಢ. ಕಡಿಮೆ ಶುಲ್ಕ ಶುಲ್ಕವನ್ನು ಸಾಂಕೇತಿಕವಾಗಿ (₹249) ಮಾತ್ರ ಪಡೆಯಲಾಗುವುದು. ಇಂದಿನ ಇತರ ಕೆಲವು ಶುಲ್ಕಗಳಿಗೆ ಹೋಲಿಸಿದರೆ, ಇದನ್ನು ‘ಉಚಿತ’ ಎಂದೂ ಹೇಳಬಹುದು. ಆ್ಯಪ್ ಶಿಕ್ಷಣ: ಮೊಬೈಲ್ ಯುಗದಲ್ಲಿ ಆ್ಯಪ್‍ಗಳನ್ನು ಬಳಸದಿರುವವರೇ ಇಲ್ಲ ಎನ್ನಬಹುದು. ಈ ಸೌಲಭ್ಯ ಬಳಸಿಕೊಂಡಿರುವ ಕನ್ನಡ ಗೊತ್ತಿಲ್ಲ ತಾಣವು ಎರಡು ವೆಬ್ ಸೈಟುಗಳು, ಯೂಟ್ಯೂಬ್, ಬ್ಲಾಗ್, ಸಾಮಾಜಿಕ ಮಾಧ್ಯಮಗಳು, ವಾಟ್ಸ್‌ಆ್ಯಪ್ ಮೂಲಕ ಕನ್ನಡದ ಕಂಪನ್ನು ಬೀರುತ್ತಿದೆ. ಅವಧಿ-ಸಮಯ ಕನ್ನಡ ಕಲಿಯಲು ಬಯಸುವವರು ಅದಕ್ಕಾಗಿ ದಿನಕ್ಕೆ 10 ನಿಮಿಷದಂತೆ, ಒಂದು ತಿಂಗಳು ‘ಕನ್ನಡ ಗೊತ್ತಿಲ್ಲ ವಾಟ್ಸ್‌ಆ್ಯಪ್ ಗುಂಪು’ ಬಳಸಿದರೆ ಸಾಕು. ಸುಲಭವಾಗಿ ಕನ್ನಡ ಕಲಿಯಬಹುದು. ಪ್ರತಿ ಗುಂಪಿನಲ್ಲೂ ಇಬ್ಬರು ತರಬೇತಿದಾರರು ಇರುತ್ತಾರೆ. ದ್ವಿಮುಖ ಸಂವಹನ ಇಲ್ಲಿ, ಶಿಕ್ಷಕರು ವಿದ್ಯಾರ್ಥಿಗಳ ಎದುರು ಬರದಿದ್ದರೂ, ಎಲ್ಲರ ಕಲಿಕೆಯ ಮೇಲೂ ವೈಯಕ್ತಿಕ ಗಮನ ಇರುತ್ತದೆ. ವಿದ್ಯಾರ್ಥಿಗಳು ತಮ್ಮೆಲ್ಲ ಸಂದೇಹಗಳನ್ನು ಆ ಕ್ಷಣವೇ ಪರಿಹರಿಸಿಕೊಳ್ಳಬಹುದು. ಆಧುನಿಕ ಕನ್ನಡ ಇಲ್ಲಿ ಬಹುತೇಕರು ಕನ್ನಡೇತರರೇ ಆಗಿರುವುದರಿಂದ, ಸರಳವಾದ, ದಿನ ನಿತ್ಯದ ಕನ್ನಡ ಕಲಿಸಲಾಗುತ್ತದೆ. ಸರಳೀಕೃತ ವ್ಯಾಕರಣದ ಮೂಲಕ ಕನ್ನಡದಲ್ಲಿ ಮಾತನಾಡಲು ಮಾರ್ಗದರ್ಶನ ಮಾಡಲಾಗುತ್ತದೆ ಪಠ್ಯಕ್ರಮ ಇಲ್ಲಿನ ಪಠ್ಯಕ್ರಮ ಯಾವುದೇ ಪುಸ್ತಕ ಅಥವಾ ಪೋರ್ಟಲ್‍ನ ನಕಲಲ್ಲ. ಮಯ್ಯ ಸಹೋದರರು ಮತ್ತು ಅವರ ತಂಡದ ಆಲೋಚನೆಯ ಫಲವಾಗಿ ಮೊಳೆತ ಪಠ್ಯಕ್ರಮ ಇದು. ಇಂಗ್ಲಿಷ್ ತಿಳಿವಳಿಕೆ: ಇಂಗ್ಲಿಷ್ ಬಲ್ಲವರು ಮಾತ್ರ ಈ ಕಲಿಕಾ ತಾಣದ ಸದಸ್ಯರಾಗಬಹುದು. ಏಕೆಂದರೆ, ಇಲ್ಲಿ ಕನ್ನಡವನ್ನು ಕಲಿಸುವುದು ಇಂಗ್ಲಿಷಿನ ಮೂಲಕ. ಹೀಗಾಗಿ, ಕಲಿಕಾ ವಿಧಾನದಲ್ಲಿ ಅನುವಾದದ ಪಾತ್ರ ಹಿರಿದು. ಆದರೆ, ಕನ್ನಡ ಕಲಿಕೆಗೆ ಇಂಗ್ಲಿಷ್‌ ಒಂದು ಮೆಟ್ಟಿಲು ಮಾತ್ರ. ಎಲ್ಲ ಸದಸ್ಯರೂ, ಕನ್ನಡವನ್ನು ಅರ್ಥ ಮಾಡಿಕೊಂಡು ಮತ್ತು ಕನ್ನಡ ವ್ಯಾಕರಣದ ಸೌಲಭ್ಯವನ್ನು ಅರಿತುಕೊಂಡೇ ವಾಕ್ಯ ರಚನೆ, ಆಡುಮಾತು ಅಥವಾ ಸಂಭಾಷಣೆ ನಡೆಸಬೇಕಾಗುತ್ತದೆ. ನಿರಂತರ ಸಂಪರ್ಕ 30 ದಿನಗಳ ಕೋರ್ಸ್ ಮುಗಿದ ನಂತರ, ಆಸಕ್ತರು ಪ್ರೌಢ ಹಂತಕ್ಕೂ ಮರು ನೊಂದಾಯಿಸಿಕೊಂಡು ಕಲಿಕೆ ಮುಂದುವರೆಸಬಹುದು. ಇಲ್ಲವೇ ಆರಂಭಿಕ ಹಂತವನ್ನು ಮುಗಿಸಿ, ಸುಮ್ಮನಾಗಬಹುದು. ಆಗಲೂ ಅವರು ಈ ತಂಡದೊಡನೆ ನಿರಂತರ ಸಂಪರ್ಕದಲ್ಲಿದ್ದು, ಅವರ ಮಾರ್ಗದರ್ಶನ ಪಡೆಯಬಹುದು. ಕನ್ನಡ ಬಳಸುವಲ್ಲಿ ಯಾವುದೇ ಸಹಾಯ ಬೇಕಾದರೂ, ಕನ್ನಡ ಗೊತ್ತಿಲ್ಲ.ಕಾಂ ತಂಡವು ಅವರ ನೆರವಿಗೆ ಬರುತ್ತದೆ. ಈ ಕಲಿಕಾ ತಾಣದ ಶಿಕ್ಷಕಿ ಮತ್ತು ಲೇಖಕಿಯೂ ಆದ ಮೇಘನಾ ಸುಧೀಂದ್ರ ಹೇಳುವಂತೆ: ‘ಕನ್ನಡದ ಹುಡುಗರನ್ನು ಮದುವೆಯಾಗಬಯಸುವ ಹುಡುಗಿಯರು ಮೊದಲು ನಮ್ಮ ಪೋರ್ಟಲ್‍ ಬಳಸುತ್ತಿದ್ದರು. ಈಗ, ವೈದ್ಯರು, ಐ.ಟಿ. ಉದ್ಯೋಗಿಗಳೂ ಸೇರಿದಂತೆ ಸುಮಾರು 13 ದೇಶಗಳ ಆಸಕ್ತರು ನಮ್ಮ ತಾಣದ ಉಪಯೋಗ ಪಡೆಯುತ್ತಿದ್ದಾರೆ. ಸುಲಭವಾಗಿ ಮತ್ತು ಸರಿಯಾಗಿ ಕನ್ನಡ ಕಲಿಸುವವರಿದ್ದರೆ, ಕನ್ನಡೇತರರು ಖಂಡಿತವಾಗಿ ಕನ್ನಡ ಕಲಿಯುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ರಾಜ್ಯ ಸರ್ಕಾರದ ಪೋರ್ಟಲ್‍ ಸೇರಿದಂತೆ ಅನೇಕ ಕಲಿಕಾ ತಾಣಗಳು ಈಚೆಗೆ ಆರಂಭವಾಗಿದ್ದರೂ, ನಮ್ಮ ತಾಣದ ವೈಶಿಷ್ಟ್ಯಗಳಿಂದಾಗಿ ಅದು ಮೊದಲ ಸ್ಥಾನದಲ್ಲಿದೆ’. ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಮೇಷ್ಟ್ರು! ಮಯ್ಯ ಸಹೋದರರು ಹವ್ಯಾಸ ಎಂಬಂತೆ ಆರಂಭಿಸಿದ ಕನ್ನಡ ಕಲಿಕಾ ತಾಣವು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಬಲ್ಲದು ಎಂದು ಅವರೇ ಊಹಿಸಿರಲಿಲ್ಲ. ‘ಈಗಂತೂ ವಾಟ್ಸ್‌ಆ್ಯಪ್ ಅಲ್ಲದೆ, ಅಪಾರ್ಟ್‌ಮೆಂಟುಗಳು, ಆರ್ಟ್ ಆಫ್ ಲಿವಿಂಗ್‍ನಂತಹ ಸಂಸ್ಥೆಗಳಿಗೇ ಹೋಗಿ, ಕನ್ನಡ ಕಲಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಈವರೆಗೆ ಹದಿನೇಳು ಸಾವಿರ ಜನ ನಮ್ಮ ಮೂಲಕ ನಮ್ಮ ನುಡಿಯನ್ನು ಕಲಿತಿದ್ದಾರೆ. ಕನ್ನಡದಲ್ಲಿ ಸಾಹಿತ್ಯ ರಚಿಸಿದರೆ, ಚಲನಚಿತ್ರ ಮಾಡಿದರೆ ಮಾತ್ರ ಕನ್ನಡ ಸೇವೆ ಎಂದುಕೊಳ್ಳಬಾರದು. ಕಸ್ತೂರಿ ಕನ್ನಡದ ಪರಿಚಯ ಮಾಡಿಕೊಡುತ್ತಿರುವ ನಮ್ಮ ಈ ಕೆಲಸದ ಬಗ್ಗೆ ನಮಗೆ ತೃಪ್ತಿ, ಸಂತೋಷ ಮತ್ತು ಹೆಮ್ಮೆಯಿದೆ’ ಎನ್ನುತ್ತಾರೆ ಅನೂಪ್ ಮಯ್ಯ.

author- ಭಾಗ್ಯಲಕ್ಷ್ಮಿ ಪದಕಿ

courtsey:prajavani.net

https://www.prajavani.net/artculture/article-features/kannada-teaching-from-online-682149.html

Leave a Reply