ಪರ್ವ: ಭಾವ- ಸ್ವಭಾವಗಳ ಶೋಧ

ಕಾದಂಬರಿ ರಚನೆಯಾಗಿ ನಾಲ್ಕು ದಶಕದ ನಂತರವೂ ಅದರ ಕುರಿತು ಚರ್ಚೆಯಾಗುತ್ತಿರುವುದು ಎಸ್‌.ಎಲ್‌. ಭೈರಪ್ಪನವರ ‘ಪರ್ವ’ದ ಹೆಚ್ಚುಗಾರಿಕೆ. ಮಾನವ ಇತಿಹಾಸದಲ್ಲಿ ಮಹಾಭಾರತದಂತಹ ಘಟನಾವಳಿಗಳು ನಡೆದಿದ್ದರೆ ಹೇಗೆಲ್ಲ ನಡೆದಿರಲು ಸಾಧ್ಯ ಎನ್ನುವ ಕಲ್ಪನೆಯನ್ನು ಈ ಕಾದಂಬರಿ ಓದುಗರ ಕಲ್ಪನೆಗೆ ತರುತ್ತದೆ. ವರ್ತಮಾನ ಕಾಲದಲ್ಲಿ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಬರೆಯುತ್ತಿರುವ ಲೇಖಕರ ಪೈಕಿ ಬಹುಶಃ ‘ಪ್ಯಾನ್ ಇಂಡಿಯನ್’ ಎನ್ನಬಹುದಾದ ಏಕೈಕ ಕಾದಂಬರಿಕಾರರೆಂದರೆ ಎಸ್. ಎಲ್. ಭೈರಪ್ಪ. ಅವರಿಗೆ ಹಿಂದಿ, ಮರಾಠಿ ಸೇರಿದಂತೆ ಕನ್ನಡೇತರ ಭಾರತೀಯ ಭಾಷೆಗಳಲ್ಲಿ ದೊಡ್ಡ ಸಂಖ್ಯೆಯ ಓದುಗರಿರಲು ಕಾರಣ ಅವರ ಕಾದಂಬರಿಗಳ ವಸ್ತು-ವಿಸ್ತಾರ ‘ಭಾರತ ಸಾಮಾನ್ಯ’ ಎನಿಸುವಂತೆ ಇರುವುದೇ ಆಗಿದೆ. ‘ಪರ್ವ’ದ ವಸ್ತುವಂತೂ ಭಾರತವಷ್ಟೇ ಅಲ್ಲ; ಹೊರಗೂ ಚಾಚಿರುವಂಥದ್ದು. ಮಹಾಭಾರತದ ಕಥಾಭಿತ್ತಿಯನ್ನು ಹೊಂದಿರುವ ಪರ್ವ ಕಾದಂಬರಿಯನ್ನು ಪ್ರವೇಶಿಸುವುದಕ್ಕೆ ಹಿನ್ನೆಲೆಯಾಗಿ ಒಂದಂಶವನ್ನು ಗಮನಿಸಬೇಕು. ಬಹುಸಂಸ್ಕೃತಿಗಳ ಭಾರತದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾದ, ಕೆಲವೊಮ್ಮೆ ಒಂದಕ್ಕೊಂದು ವಿರುದ್ಧ ಎನ್ನಿಸಬಹುದಾದ ಸಂಸ್ಕೃತಿಗಳು ಇರುವಾಗ ಇಡೀ ಭಾರತಕ್ಕೇ ಅನ್ವಯಿಸುವ ಒಂದು ಸಾಂಸ್ಕೃತಿಕ ವಿಚಾರವೆಂದರೆ ದೇವ ದೇವತೆಗಳ ಕಥೆಗಳನ್ನು ಒಳಗೊಂಡ ಪುರಾಣಗಳ ವಿಮರ್ಶೆ, ಮರುವ್ಯಾಖ್ಯಾನ, ಮರುಸೃಷ್ಟಿ ಮತ್ತು ಹೊಸ ಪುರಾಣಗಳ ಸೃಷ್ಟಿ. ಲಿಖಿತ ಮತ್ತು ಮೌಖಿಕ ಇವೆರಡು ಪರಂಪರೆಗಳ ಮಟ್ಟಿಗೂ ಇದು ಸತ್ಯವೇ. ಹೀಗೆ, ದೇವ ದೇವತೆಗಳ ಭಾವ, ಸ್ವಭಾವಗಳ ಶೋಧ ನಡೆಸುವುದು ಭಾರತೀಯ ಪರಂಪರೆಯ ಅತಿಮುಖ್ಯ ಭಾಗ. ಶಿಲ್ಪ, ನೃತ್ಯದಂಥ ಭಾರತೀಯ ಕಲೆಗಳ ಶ್ರೀಮಂತಿಕೆಯ ಮೂಲದಲ್ಲಿ ಇರುವುದೂ ಈ ಕುತೂಹಲ ಮತ್ತು ಸ್ವಾತಂತ್ರ್ಯವೇ. ವ್ಯಾಸಭಾರತದಲ್ಲಿ ಹೇಳಲಾದ ಘಟನೆಗಳು ನಿಜವಾಗಿಯೂ ನಡೆದಿವೆಯೇ ಇಲ್ಲವೇ ಎಂಬ ಪ್ರಶ್ನೆ ಇಲ್ಲಿ ಅಪ್ರಸ್ತುತ. ಆದರೆ ಮಾನವ ಇತಿಹಾಸದಲ್ಲಿ ಅಂಥ ಘಟನಾವಳಿಗಳು ನಡೆದಿದ್ದರೆ ಹೇಗೆಲ್ಲ ನಡೆದಿರಲು ಸಾಧ್ಯ ಎನ್ನುವ ಕಲ್ಪನೆಯನ್ನು ‘ಪರ್ವ’ ಕಾದಂಬರಿ ಓದುಗರ ಕಲ್ಪನೆಗೆ ತರುವ ಕೆಲಸ ಮಾಡುತ್ತದೆ. ಆ ಮೂಲಕ ವಿವಿಧ ಸಂದಿಗ್ಧ ಸನ್ನಿವೇಶಗಳಲ್ಲಿ ಮಾನವನ ಭಾವ, ಸ್ವಭಾವಗಳು ಹೇಗೆ ವ್ಯಕ್ತವಾಗುತ್ತವೆ ಎನ್ನುವುದನ್ನು ಶೋಧಿಸುತ್ತದೆ. ಭೈರಪ್ಪನವರ ಕಾದಂಬರಿಗಳಲ್ಲಿ ಈ ಬಗೆಯ ಜಿಜ್ಞಾಸೆಯು ಪ್ರಜ್ಞಾಪೂರ್ವಕವಾಗಿ ರಸಾನುಭವದ ಉದ್ದೇಶದೊಂದಿಗೆ ಕಲಾತ್ಮಕವಾಗಿ ನಡೆಯುವುದರಿಂದ ಅವರ ರಚನೆಗಳು ಜನಪ್ರಿಯವಾಗುತ್ತವೆ. ಭೈರಪ್ಪನವರ ಆಸಕ್ತಿಯ ಕೇಂದ್ರ ಮಾನವ ಹೊರತು ದೇವ ದೇವತೆಗಳಲ್ಲ. ಹಾಗಾಗಿ ಅತಿಮಾನುಷ ಅಥವಾ ದೈವಿಕ ಪಾತ್ರಗಳು ಈ ಕಾದಂಬರಿಯಲ್ಲಿಲ್ಲ. ಪ್ರಜ್ಞಾವಂತ ಮಾನವನಿಗೆ ತನ್ನ ಭಾವ, ಸ್ವಭಾವಗಳ ಜಿಜ್ಞಾಸೆಯ ಬಗೆಗಿನ ಆಸಕ್ತಿ ಸಾರ್ವಕಾಲಿಕ ಮತ್ತು ಸಾರ್ವದೇಶಿಕ ಅಗಿರುವುದರಿಂದಲೇ ಪ್ರಕಟವಾದ 40 ವರ್ಷಗಳಲ್ಲಿ ‘ಪರ್ವ’ ಓದುಗರ ಕುತೂಹಲವನ್ನು ನಿರಂತರವಾಗಿ ಹೆಚ್ಚಿಸುತ್ತಲೇ ಬಂದಿದೆ. ಯಾವುದೇ ಕೃತಿಯ ಯಶಸ್ಸು ನಿಂತಿರುವುದು ಅದರ ವಸ್ತು ಮತ್ತು ತಂತ್ರಗಳ ಹೊಂದಾಣಿಕೆಯಲ್ಲಿ. ‘ಪರ್ವ’ದಲ್ಲಿ ಬಳಸಲಾದ ನಿರೂಪಣಾತಂತ್ರ ತುಂಬ ಪರಿಣಾಮಕಾರಿಯಾಗಿದೆ. ಕುಂತಿ, ದ್ರೌಪದಿ, ಭೀಮ ಮೊದಲಾದ ಪ್ರಮುಖ ಪಾತ್ರಗಳು ತಮ್ಮ ತಮ್ಮ ನೆನಪುಗಳ ಮೂಲಕ ತಮ್ಮ ಅಂತರಂಗವನ್ನು ತಾವು ಶೋಧಿಸಿಕೊಳ್ಳುತ್ತ ಇತರ ಪಾತ್ರಗಳ ಅಂತರಂಗವನ್ನು ಓದುಗರೆದುರು ಬಿಚ್ಚಿಡುತ್ತಾ ಹೋಗುತ್ತವೆ. ‘ಪರ್ವ’ದ ಹಲವು ಆಯಾಮಗಳ ಬಗ್ಗೆ ಎಂ.ಫಿಲ್., ಪಿಎಚ್.ಡಿ.ಯಂಥ ಶೈಕ್ಷಣಿಕ ಅಧ್ಯಯನಗಳು ಹಾಗೂ ಸಾಕಷ್ಟು ವಿಮರ್ಶೆಗಳು ಬಂದಿವೆ. ಹಾಗಿದ್ದರೂ ಪುಟಪುಟದಲ್ಲೂ ವ್ಯಾಖ್ಯಾನಾರ್ಹ ಅಂಶಗಳನ್ನು ಹೊಂದಿರುವ ಈ ಬೃಹತ್ ಕಾದಂಬರಿಯೆಂಬ ಕೆಚ್ಚಲು ಬತ್ತಿಲ್ಲ. ಆದರೆ, ದೀರ್ಘ ಮತ್ತು ವಿಸ್ತೃತ ಚರ್ಚೆಗೆ ಇಲ್ಲಿ ಅವಕಾಶ ಇಲ್ಲದಿರುವುದರಿಂದ ನಿರೂಪಣೆಯಲ್ಲಿರುವ ಒಂದೆರಡು ಕಲಾತ್ಮಕ ಮತ್ತು ಸ್ವಾರಸ್ಯಕರ ಅಂಶಗಳ ಕಡೆಗೆ ಬೊಟ್ಟು ಮಾಡುವುದಕ್ಕೆ ಈ ಲೇಖನವನ್ನು ಸೀಮಿತಗೊಳಿಸಲಾಗಿದೆ. ವಿವಿಧ ಪಾತ್ರಗಳ ಭೂತಕಾಲದ ನೆನಪುಗಳು ವರ್ತಮಾನದೊಡನೆ ಕಲಸಿಹೋಗುವುದು ಇಡೀ ಕಾದಂಬರಿಯಲ್ಲಿ ಪುರಾಣ ಮತ್ತು ವರ್ತಮಾನ ಬೆರಕೆಯಾಗಿರುವುದನ್ನು ಸೂಚಿಸುವಂತೆ ತೋರುತ್ತದೆ. ಕಾಲ ಬದಲಾದಂತೆ ಮನುಷ್ಯ ಬದಲಾಗುವ ಮತ್ತು ಬದಲಾಗದಿರುವ ಬಗ್ಗೆ ಕಾದಂಬರಿಯಲ್ಲಿ ಹಲವು ಧ್ವನಿಪೂರ್ಣ ಸನ್ನಿವೇಶಗಳು ಇವೆ. ಅಂಥ ಒಂದೆರಡನ್ನು ಇಲ್ಲಿ ಉಲ್ಲೇಖಿಸಬಹುದು. ಕಾದಂಬರಿಯ ಆರಂಭದಲ್ಲಿಯೇ ಶಲ್ಯ ಮತ್ತು ಮೊಮ್ಮಗಳು ಹಿರಣ್ಯವತಿಯ ನಡುವೆ ಸಂಭಾಷಣೆ ನಡೆಯುವಾಗ ‘ಹಿಂದಿನ ಕಾಲದವರು ಯಾಕೆ ಗಟ್ಟಿ’ ಎಂಬ ಪ್ರಶ್ನೆಗೆ ಉತ್ತರಿಸುತ್ತ ಶಲ್ಯ ಹೇಳುವುದು ಹೀಗೆ- ‘ಅವರ ಪದ್ಧತಿಯೇ ಹಾಗೆ… ನಿಮ್ಮ ಹಾಗಲ್ಲ. ದೇಶಾಚಾರ ಕುಲಾಚಾರಗಳನ್ನೆಲ್ಲ ಬಿಟ್ಟು, ಬೇರೆಯೋರ ರೀತಿ ನಾವು ಇರಬೇಕು ಅಂತ ಹೊರಟು…’ ಮುಂದೆ ಏಕಲವ್ಯ ಮತ್ತು ದ್ರೋಣರ ಮುಖಾಮುಖಿಯ ಸನ್ನಿವೇಶ ಈ ಬದಲಾಗುವಿಕೆಯನ್ನು ವ್ಯಾಖ್ಯಾನಿಸುವ ಬಗೆ ವಿಶಿಷ್ಟವಾಗಿದೆ. ಎಷ್ಟೆಷ್ಟೋ ಕಾವ್ಯ ನಾಟಕಗಳಲ್ಲಿ ಬಂದು ಹೋಗಿರುವ ಈ ಸನ್ನಿವೇಶವನ್ನು ಹೊಸಬಗೆಯಲ್ಲಿ ಚಿತ್ರಿಸುವುದು ಲೇಖಕನಿಗೆ ಒಂದು ಸವಾಲು. ಏಕಲವ್ಯ ಬಂದು ಸಾಷ್ಟಾಂಗ ನಮಸ್ಕಾರ ಮಾಡಿ ಹೆಸರು ಹೇಳಿದರೂ ದ್ರೋಣರಿಗೆ ನೆನಪಾಗುವುದಿಲ್ಲ, ಗುರುತು ಹತ್ತುವುದಿಲ್ಲ. ದ್ರೋಣರು ‘ಮತ್ತೇನಾದರೂ ಗುರುತು ಹೇಳು’ ಎಂದಾಗ ಏಕಲವ್ಯ ‘ಇಲ್ಲಿ ನೋಡಿ ಗುರುತು’ ಎಂದು ಹೆಬ್ಬೆರಳಿಲ್ಲದ ಬಲಗೈ ತೋರಿಸುವ ಸನ್ನಿವೇಶ ಮಾರ್ಮಿಕವಾಗಿದೆ. ಮುಂದೆ ಏಕಲವ್ಯ ಹೇಳುವ ಈ ಮಾತುಗಳು ಧ್ವನಿಯ ಎಷ್ಟು ಪದರುಗಳನ್ನು ಹೊರಡಿಸುತ್ತದೆ ಗಮನಿಸಿ: ‘ಪ್ರಾಣಿಗಳ ಸೂಕ್ಷ್ಮ ಸದ್ದನ್ನು ಕೇಳಿ ದಿಕ್ಕು ತಿಳಿದು ಹೊಡೆಯುವ ಊಹೆ ಮತ್ತು ಗುರಿ ನಮ್ಮ ಕಾಡುಜನರಿಗೆ ಸಹಜವಾಗಿಯೇ ಬಂದಿರುತ್ತದೆ. ಅದಕ್ಕೆ ಶಬ್ದವೇಧಿ ಎಂಬ ನಿಮ್ಮ ಭಾಷೆಯ ಹೆಸರನ್ನಷ್ಟೇ ನೀವು ಹೇಳಿದುದು. ನಿಮ್ಮ ಹುಡುಗರಿಗೆ ಹೆಸರು ಗೊತ್ತು. ಊಹೆಯಾಗಲಿ ಗುರಿಯಾಗಲಿ ಸಾಧ್ಯವಿರಲಿಲ್ಲ…’ ಸ್ವಾಯತ್ತವಾಗಿ ಕಾಡನ್ನು ಆಳಲು ಧಾರಾಳ ಸಾಕಾಗುವಷ್ಟು ಬಿಲ್ವಿದ್ಯೆಯನ್ನು ಹೊಂದಿದ್ದ ಏಕಲವ್ಯ ಹೊರಜಗತ್ತನ್ನು ಎದುರಿಸಬೇಕಾದರೆ ಹೊಸ ನಾಗರಿಕ ತಂತ್ರಗಳನ್ನು ಕೂಡ ಕಲಿಯುವುದು ಅನಿವಾರ್ಯ. ಅಂದರೆ ಕ್ಷತ್ರಿಯರಂತಾಗುವುದು ಅನಿವಾರ್ಯ. ದ್ರೋಣರ ಮೂಲಕ ಅದು ಸಾಧ್ಯವಾಯಿತು. ಆದರೆ, ಕೌರವ ಪಾಂಡವರ ನಡುವಿನ ಯುದ್ಧದ ಗೋಜಲುಗಳನ್ನು ನೋಡಿ, ಈ ಕ್ಷತ್ರಿಯರು ಸ್ಪರ್ಧೆಗೂ ಯೋಗ್ಯರಲ್ಲ ಎಂಬ ತೀರ್ಮಾನಕ್ಕೆ ಬಂದನೋ ಎಂಬಂತೆ ಅವನು ಕ್ಷತ್ರಿಯಾನುಕರಣೆಯನ್ನು ತ್ಯಜಿಸುವ ಬಗೆ ವಿನೂತನವಾಗಿದೆ. ‘ಪರ್ವ’ದ ಬಗ್ಗೆ ಬರೆಯುತ್ತಾ ಭೈರಪ್ಪನವರು ಹೆಂಡಿರನ್ನು ಕೆಣಕಬಂದವನನ್ನು ಮುಗಿಸಬೇಕೆಂಬುದು ಸಾರ್ವತ್ರಿಕ ಮತ್ತು ಸಾರ್ವಕಾಲಿಕವಾದ ಪುರುಷ ಭಾವ, ಪುರುಷ ಅಹಂಕಾರ, ಪುರುಷ ಯಾಜಮಾನ್ಯ ಎಂದು ಹೇಳುತ್ತಾರೆ. ಕಾದಂಬರಿಯುದ್ದಕ್ಕೂ ವಿವಿಧ ನಮೂನೆಗಳಲ್ಲಿ ಮುಖ ತೋರಿಸುವ ಪುರುಷಾಹಂಕಾರ ಸೋರಿ ಹೋಗುವ ಒಂದು ಸನ್ನಿವೇಶ ಹೀಗಿದೆ: ದಿಗ್ವಿಜಯ ಮಾಡಿ ಹಿಂದಿರುಗಿದ ಪಾಂಡುರಾಜ ಹೆಮ್ಮೆಯಿಂದ ‘ಕೇಳಿತೇ ಕುಂತಿ, ಆರು ಮಾಸಗಳು ದಿಗ್ವಿಜಯ ಮಾಡಿದೆ’ ಎಂದು ಹೇಳಿದಾಗ ಅವಳ ತಣ್ಣನೆಯ ಉತ್ತರ ‘ಆರು ಸಲ ನನಗೆ ಋತುಸ್ರಾವವಾಯಿತು’. ದ್ರೌಪದಿ ಆರ್ಯಧರ್ಮವನ್ನು ವಿಮರ್ಶಿಸುವುದಾಗಲೀ ಗಾಂಧಾರಿ ಪ್ರತಿಭಟನಾರ್ಥವಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡದ್ದಾಗಲೀ ಪುರುಷ ಯಾಜಮಾನ್ಯದ ವ್ಯಾಖ್ಯಾನಗಳೇ. ಅಂತೆಯೇ ಒಬ್ಬೊಬ್ಬರ ಜೊತೆಗಿನ ಕುಂತಿಯ ನಿಯೋಗವೂ ಗಂಡು ಹೆಣ್ಣಿನ ಸಂಬಂಧಕ್ಕೆ ಹೊಸ ಹೊಸ ಭಾಷ್ಯಗಳೇ. ಯುದ್ಧದ ವಿವರಗಳಲ್ಲಿ ಹಲವಾರು ಸೂಕ್ಷ್ಮಗಳನ್ನು ಲೇಖಕರು ತಂದಿರುವುದು ಗಮನಾರ್ಹ. ಅದಕ್ಕಿಂತ ಮುಖ್ಯವಾಗಿ ಯುದ್ಧದ ಪರಿಣಾಮದ ಚಿತ್ರಣ ನಮ್ಮನ್ನು ಕಲಕಿಬಿಡುವಂಥದ್ದು. ಮೊಮ್ಮಗಳು ಹಿರಣ್ಯವತಿಯ ಋತುನಷ್ಟದ ಬಗ್ಗೆ ಶಲ್ಯನ ಚಿಂತೆಯೊಂದಿಗೆ ಆರಂಭವಾಗುವ ಕಾದಂಬರಿ ಅಂತ್ಯವಾಗುವಾಗ ಅರಮನೆಯಲ್ಲಿ ಹೆರಲು ಹೆಂಗಸರಿಲ್ಲ. ಅದರೆ ಯುದ್ಧದಿಂದಾಗಿ ಬೇಡದ ಗರ್ಭ ಧರಿಸಿದ ಅಸಂಖ್ಯ ಹೆಂಗಸರಿದ್ದಾರೆ. ಕೊನೆಯ ಭಾಗದ ಅರ್ಧರ್ಧ ವಾಕ್ಯಗಳ ನಿರೂಪಣೆಯಲ್ಲಿ ಭೀಮನ ನೆನಪುಗಳು, ಉತ್ತರೆಯ ಹೆರಿಗೆ ನೋವು, ಕುಂತಿಯ ಆತಂಕ, ದ್ರೌಪದಿಯ ಉಪೇಕ್ಷೆ, ಸೂತಕೇರಿಯ ಹೆಂಗಸರ ವಾಂತಿ ಹೀಗೆ ರಕ್ತ, ಕಣ್ಣೀರು, ನೀರು, ಬೆಂಕಿ ಎಲ್ಲವೂ ಬೆರೆತು ಹೋದುದನ್ನು ಕಾಣುತ್ತೇವೆ. ಸಂಪೂರ್ಣ ನಾಶವಾಗಿ ಹೊಸಹುಟ್ಟು ಆಗುವ ಕಾಲಚಕ್ರದ ಸೂಚನೆಯಿರುವಂತೆಯೇ ಲೋಹದ ಚೂರುಗಳನ್ನು ಕರಗಿಸಿ ಹೊಸರೂಪ ನೀಡಿ ಮರುಸೃಷ್ಟಿ ಮಾಡುವ ಲೋಹಕಾರನೂ ಈ ನಿರೂಪಣೆಯೊಳಗೆ ಸೇರಿಹೋಗುವುದನ್ನು ಗಮನಿಸಬೇಕು. ಅಲ್ಲಿ ಆಗಾಗ ಬಣ್ಣ ಬದಲಿಸಿಕೊಂಡು ಹರಿಯುವ ನದಿಯೆಂದರೆ ಅದು ಹುಟ್ಟು ಸಾವುಗಳ ಚಿಂತೆಯಿಲ್ಲದ ಕಾಲಪ್ರವಾಹದ ಸಂಕೇತವೂ ಹೌದು. (‘ಪರ್ವ’ ಕುರಿತ ವಿಚಾರಗೋಷ್ಠಿ ಬೆಂಗಳೂರಿನ ಜಯನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಇಂದು (ಡಿ.29) ನಡೆಯಲಿದೆ

courtsaey:prajavani.net

https://www.prajavani.net/artculture/article-features/parva-novel-slbhyarappa-693998.html

Leave a Reply