ಪ್ರಪಂಚದ ಪುರಾತನ ಭಾಷೆಗಳು

ನಾಗರಿಕತೆ ಬೆಳೆದಂತೆ ಸಂವಹನಕ್ಕಾಗಿ ಭಾಷೆ ರೂಪುಗೊಳ್ಳುತ್ತಾ ಹೋಯಿತು. ನಮ್ಮ ಪೂರ್ವಿಕರು ಸನ್ನೆಗಳ ಮೂಲಕ ಸಂವಹನ ನಡೆಸುತ್ತಿದ್ದರು. ಸುಮಾರು 10 ಸಾವಿರ ವರ್ಷಗಳ ಹಿಂದೆ ಭಾಷೆಯೆಂಬುದು ಮನುಷ್ಯನ ಬದುಕನ್ನು ಬದಲಿಸಿತು. ಸಾವಿರಾರು ವರ್ಷಗಳಿಂದ, ಜನಾಂಗದಿಂದ ಜನಾಂಗಕ್ಕೆ ತಲುಪಿ, ವಿಕಾಸದ ಗತಿಯಲ್ಲಿ ಸಾಗುತ್ತಲೇ ಇದೆ. ಭಾಷೆಗೆ ಶುದ್ಧತೆಯ ಗೀಳಿಲ್ಲ. ಹಲವು ಭಾಷೆಗಳಿಂದ ಎರವಲು ಪಡೆದುಕೊಂಡ ಪದ, ಲಯ, ಗತಿಗಳೆಲ್ಲವೂ ಮತ್ತೊಂದು ಭಾಷೆಯಾಗಿರುವುದು ಭಾಷೆಯ ವೈಶಿಷ್ಟ್ಯ. ಮೊದಲು ಆಡಿದ ಭಾಷೆ ಯಾವುದು ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೀಗಿದ್ದೂ ಲಿಪಿಯಿಂದಾಗಿ ಕೆಲವು ಭಾಷೆಗಳನ್ನು ಅತ್ಯಂತ ಪುರಾತನ ಭಾಷೆ ಎಂದು ಪರಿಗಣಿಸಲಾಗಿದೆ. ಅವುಗಳಲ್ಲಿ ಕೆಲವುದರ ಬಗ್ಗೆ ತಿಳಿದುಕೊಳ್ಳೋಣ. ತಮಿಳು (ಐದು ಸಾವಿರ ವರ್ಷಗಳ ಇತಿಹಾಸ) ಸರಾಸರಿ 7.8 ಕೋಟಿ ಜನ ತಮಿಳು ಭಾಷೆಯನ್ನು ಮಾತನಾಡುತ್ತಾರೆ. ಶ್ರೀಲಂಕಾ ಮತ್ತು ಸಿಂಗಪುರ ದೇಶಗಳ ಅಧಿಕೃತ ಭಾಷೆ ತಮಿಳು. ಅತ್ಯಂತ ಹಳೆಯ ಭಾಷೆಯಾಗಿದ್ದರೂ ಇಂದಿಗೂ ಆಧುನಿಕ ಯುಗದಲ್ಲಿ ದೊಡ್ಡ ಪ್ರಮಾಣದಲ್ಲಿಯೇ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಏಕೈಕ ಭಾಷೆಯೆಂಬ ಖ್ಯಾತಿಯನ್ನು ತಮಿಳು ಪಡೆದಿದೆ. ದ್ರಾವಿಡ ಭಾಷಾ ಬಳಗಕ್ಕೆ ಸೇರಿರುವ ಈ ಭಾಷೆಯು ತಮಿಳುನಾಡಿನಾದ್ಯಂತ ಪ್ರಚಲಿತದಲ್ಲಿರುವ ಭಾಷೆ. 3ನೇ ಶತಮಾನದ ಶಾಸನಗಳಲ್ಲಿ ತಮಿಳುಭಾಷೆಯ ಉಲ್ಲೇಖವಿದೆ. ಸಂಸ್ಕೃತ (5000 ವರ್ಷಗಳ ಇತಿಹಾಸ )ಸಂಸ್ಕೃತವು ಅತ್ಯಂತ ಪುರಾತನ ಭಾಷೆಗಳಲ್ಲಿ ಒಂದು. ಈ ಹಿಂದೆ ಭಾರತದಾದ್ಯಂತ ಸಂವಹನಕ್ಕಾಗಿ ಬಳಕೆಯಾಗುತ್ತಿದ್ದ ಭಾಷೆ ಈಗ ಧಾರ್ಮಿಕ ಆಚರಣೆಯ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿದೆ. ಹಿಂದೂಧರ್ಮ, ಬೌದ್ಧಧರ್ಮ ಹಾಗೂ ಜೈನಧರ್ಮಗಳ ಹಲವು ಶಾಸನಗಳು ಸಂಸ್ಕೃತ ಭಾಷೆಯಲ್ಲಿವೆ. ಕ್ರಿಸ್ತ ಪೂರ್ವ 600ರಲ್ಲಿ ಈ ಭಾಷೆ ಪ್ರಚಲಿತದಲ್ಲಿತ್ತು. ಸಂಸ್ಕೃತದ ಬರವಣಿಗೆಯ ರೂಪವನ್ನು ಋಗ್ವೇದದಲ್ಲಿ ನೋಡಬಹುದು. ಅಧ್ಯಯನಗಳ ಪ್ರಕಾರ ಸಂಸ್ಕೃತವು ಯುರೋಪಿಯನ್‌ ಭಾಷೆಗಳಿಗೆ ಮೂಲಾಧಾರವಾಗಿದೆ. ಭಾರತದ ಅಧಿಕೃತ ಭಾಷೆಗಳಲ್ಲಿ ಇದೂ ಒಂದು.ಈಜಿಪ್ಟಿಯನ್‌ (ಐದು ಸಾವಿರ ವರ್ಷಗಳ ಇತಿಹಾಸ ) ಪುರಾತನ ನಾಗರಿಕತೆಗಳಲ್ಲಿ ಈಜಿಪ್ಟ್‌ ನಾಗರಿಕತೆ ಕೂಡ ಒಂದು. ಈಜಿಪ್ಟಿಯನ್‌ ಕಾಪ‍್ಟಿಕ್‌ ಭಾಷೆಯು ಅತ್ಯಂತ ಹಳೆಯ ಪ್ರಾದೇಶಿಕ ಭಾಷೆ. ಕ್ರಿಸ್ತ ಪೂರ್ವ 3,400 ವರ್ಷಗಳಷ್ಟು ಹಳೆಯದಾದ ಲಿಪಿ ಇದರ ಅಧಿಕೃತತೆಯನ್ನು ಸಾರುತ್ತದೆ. 17ನೇ ಶತಮಾನದವರೆಗೂ ಈಜಿಪ್ಟ್‌ನಾದ್ಯಂತ ಈ ಭಾಷೆ ಪ್ರಚಲಿತದಲ್ಲಿತ್ತು. ಕ್ರಮೇಣ ಮುಸ್ಲಿಮರು ಅಧಿಕಾರಕ್ಕೆ ಬಂದ ನಂತರ ಈಜಿಪ್ಟಿಯನ್‌ ಅರೇಬಿಕ್‌ ಭಾಷೆ ಅಸ್ತಿತ್ವಕ್ಕೆ ಬಂತು. ಸದ್ಯಕ್ಕೆ ಈಜಿಪ್ಟಿಯನ್‌ ಕಾಪ್ಟಿಕ್‌ ಭಾಷೆಯು ಚರ್ಚ್‌ಗಳಲ್ಲಿ, ಧಾರ್ಮಿಕ ಆಚರಣೆಗಳಲ್ಲಿ ಚಾಲ್ತಿಯಲ್ಲಿದೆ.ಹೀಬ್ರೂ ಭಾಷೆಯು ಕ್ರಿ.ಶ 400ರಲ್ಲಿ ಬಹಳ ಉತ್ತುಂಗದಲ್ಲಿದ್ದ ಭಾಷೆ. ಆದರೆ, ಸದ್ಯಕ್ಕೆ ಇದು ಯಹೂದಿಗಳಿಗೆ ಸಂಬಂಧಿಸಿದ ಧಾರ್ಮಿಕ ಆಚರಣೆಗಳಲ್ಲಿ ಮಾತ್ರ ಉಳಿದುಕೊಂಡಿದೆ. 19 ಮತ್ತು 20ನೇ ಶತಮಾನದಲ್ಲಿ ಝಿಯಾನಿಸಂ ಬಂದ ಮೇಲೆ ಹೀಬ್ರೂ ಭಾಷೆ ಪುನರುಜ್ಜೀವನ ಪಡೆದುಕೊಂಡು ಇಸ್ರೇಲಿನ ಅಧಿಕೃತ ಭಾಷೆಯಾಗಿ ರೂಪುಗೊಂಡಿದೆ. ಆಧುನಿಕ ಹೀಬ್ರೂ ಭಾಷೆ ಮತ್ತು ಪುರಾತನ ಹೀಬ್ರೂ ಭಾಷೆ ನಡುವೆ ಹಲವು ಭಿನ್ನತೆಗಳಿವೆ. ಯುಹೂದಿಗಳ ಇತರೆ ಭಾಷೆಗಳಿಂದ ಹೀಬ್ರೂ ಭಾಷೆಯು ಪ್ರಭಾವಿತಗೊಂಡಿದೆ. ಗ್ರೀಕ್‌ (2,900 ವರ್ಷಗಳ ಇತಿಹಾಸ)ಗ್ರೀಸ್‌ ಹಾಗೂ ಸಿಪ್ರಸ್‌ ದೇಶಗಳ ಅಧಿಕೃತ ಭಾಷೆ ಗ್ರೀಕ್‌. ಗ್ರೀಕ್‌ ಲಿಪಿ ಹಾಗೂ ಭಾಷೆ ವ್ಯಾಪಕವಾಗಿ ಬಳಕೆಯಲ್ಲಿತ್ತು. ಇಂಡೊ ಯುರೋಪಿಯನ್‌ ಭಾಷೆಗಳಲ್ಲಿ ಇದೂ ಒಂದಾಗಿದ್ದು, ಇದರ ಇತಿಹಾಸವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಪುರಾತನ ಗ್ರೀಕ್‌, ಮಧ್ಯಯುಗದ ಗ್ರೀಕ್‌, ಆಧುನಿಕ ಗ್ರೀಕ್‌. 1.5 ಕೋಟಿಯಷ್ಟು ಜನ ಗ್ರೀಕ್‌ ಭಾಷೆಯನ್ನು ಮಾತನಾಡುತ್ತಾರೆ. ಅಮೆರಿಕ ಹಾಗೂ ಆಸ್ಟ್ರೇಲಿಯಾದಲ್ಲಿಯೂ ಗ್ರೀಕ್‌ ಮಾತನಾಡುವ ಜನರು ಅಪಾರ ಪ್ರಮಾಣದಲ್ಲಿದ್ದಾರೆ. ಬ್ಯಾಸ್ಕ್ ಸ್ಪೇನ್‌ ಮತ್ತು ಫ್ರಾನ್ಸ್‌ನಲ್ಲಿರುವ ಕೆಲವು ಸಮುದಾಯಗಳು ಮಾತ್ರ ಬ್ಯಾಸ್ಕ್ ಭಾಷೆಯನ್ನು ಮಾತನಾಡುತ್ತರೆ. ಫ್ರೆಂಚ್‌ ಮತ್ತು ಸ್ಪಾನಿಷ್‌ ಭಾಷೆಗಳಿಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇಂಥ ಕುತೂಹಲಕಾರಿ ಭಾಷೆಯ ಬೇರುಗಳ ಬಗ್ಗೆ ತಜ್ಞರು ಹಲವು ಸಂಶೋಧನೆ ನಡೆಸುತ್ತಲೇ ಬಂದಿದ್ದಾರೆ. ಹೀಗಿದ್ದೂ ಇದರ ಮೂಲವನ್ನು ಈವರೆಗೂ ಅರಿಯಲು ಸಾಧ್ಯವಾಗಿಲ್ಲ. ಯುರೋಪ್‌ನ ಹಲವು ಸ್ಥಿತ್ಯಂತರಗಳ ನಡುವೆಯೂ ಬ್ಯಾಸ್ಕ್‌ ಭಾಷೆ ಸಣ್ಣ ಪ್ರಮಾಣದಲ್ಲಿಯಾದರೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ದೊಡ್ಡ ಸಂಗತಿ. ಲಿಥುವೇನಿಯನ್‌ ಆಧುನಿಕ ಭಾಷೆಗಳಾದ ಜರ್ಮನಿ, ಇಟಾಲಿಯನ್‌, ಇಂಗ್ಲಿಷ್‌ ಭಾಷೆಗಳಿಗೆ ಜನ್ಮ ನೀಡಿದ ಇಂಡೊ ಯುರೋಪಿಯನ್‌ ಭಾಷಾ ಗುಂಪಿಗೆ ಲಿಥುವೇನಿಯನ್‌ ಭಾಷೆಯು ಸೇರಿದೆ. ಲಿಥುವೇನಿಯನ್‌– ಸಂಸ್ಕೃತ, ಲ್ಯಾಟಿನ್‌, ಪುರಾತ ಗ್ರೀಕ್‌ ಭಾಷೆಗಳಿಗೂ ಸಂಬಂಧವಿದೆ. ವ್ಯಾಕರಣ ಸೂತ್ರ, ಪದ ಉಚ್ಚಾರಣೆಗಳು ಒಂದನ್ನೊಂದು ಹೋಲುತ್ತವೆ. ಇದು ಕೂಡ ಜಗತ್ತಿನ ಅತಿ ಪುರಾತನ ಭಾಷೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಲುಥುವೇನಿಯಾ ಗಣರಾಜ್ಯದ ಅಧಿಕೃತ ಭಾಷೆ ಲಿಥುವೇನಿಯನ್‌. ಇಷ್ಟೇ ಅಲ್ಲದೇ ಯುರೋಪಿಯನ್‌ ಒಕ್ಕೂಟದ ಅಧಿಕೃತ ಭಾಷೆಗಳಲ್ಲಿ ಒಂದು. ಪಾರ್ಸಿ (2,500 ವರ್ಷಗಳ ಇತಿಹಾಸ) ಆಧುನಿಕ ಇರಾನ್‌, ಆಫ್ಗಾನಿಸ್ತಾನ ಹಾಗೂ ತಜಿಕಿಸ್ತಾನದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಭಾಷೆ ಪಾರ್ಸಿ. ಹಳೆಯ ಪರ್ಷಿಯನ್‌ ಭಾಷೆಯ ವಂಶವೆಂದೇ ಈ ಭಾಷೆಯನ್ನು ಗುರುತಿಸಲಾಗಿದೆ. ಆಧುನಿಕ ಪರ್ಷಿಯನ್‌ ಭಾಷೆಯು ಕ್ರಿ.ಶ. 800ರಲ್ಲಿ ರೂಪುಗೊಂಡಿತು ಎನ್ನಲಾಗಿದೆ.

author-ರೂಪಾ ಕೆ.ಎಂ.

courtsey:prajavani.net

https://www.prajavani.net/artculture/article-features/oldest-languages-663631.html

Leave a Reply