ಶಾಲೆಗಳಲ್ಲಿ ಕನ್ನಡದ ಅಸಡ್ಡೆ

ಕರ್ನಾಟಕ ನಮಗೆಲ್ಲಾ ಸೂರು, ಅನ್ನ, ನೀರು ಕೊಡುತ್ತಿದೆ. ಕನ್ನಡವನ್ನು ಸಾಹಿತ್ಯ ಮುಖೇನ ಬೆಳೆಸುವ ಮೂಲಕ ನಾವೆಲ್ಲಾ ಕರ್ನಾಟಕದ ಋಣ ಸಂದಾಯ ಮಾಡುವುದು ಬೇಡವೇ? ಕರ್ನಾಟಕದಲ್ಲಿ ಬಹುತೇಕರಿಗೆ ಮೊದಲಿನಿಂದಲೂ ಆಂಗ್ಲ ಭಾಷೆಯ ವ್ಯಾಮೋಹ. ಆದರೆ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಮತ್ತು ಕನ್ನಡ ಸಂಘಗಳ ಮೂಲಕ ಕನ್ನಡ ಸಾಹಿತ್ಯವನ್ನು ಉಳಿಸುವ ಮತ್ತು ಪಸರಿಸುವ ಕೆಲಸ ಮಾಡುತ್ತಿದ್ದೆವು. 21ನೆಯ ಶತಮಾನದ ಎರಡನೇ ದಶಕದಲ್ಲಿ ಈ ಸಂಘಟನೆಗಳು ಕೂಡಾ ಸ್ತಬ್ಧವಾಗಿವೆ. ಬೇಕಾದರೆ ಒಂದು ಸಮೀಕ್ಷೆ ಮಾಡಿ ನೋಡಿ. ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಮತ್ತು ಕನ್ನಡ ಸಂಘಟನೆಗಳು ಸಾಹಿತ್ಯದ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಶಾಲಾ ಕಾಲೇಜು ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿಯನ್ನೂ ಮೂಡಿಸುತ್ತಿಲ್ಲ. ಆದರೆ ಶಾಲಾಕಾಲೇಜು ಪ್ರಾಸ್ಪೆಕ್ಟಸ್ಸುಗಳಲ್ಲಿ ಸಾಹಿತ್ಯ ಮತ್ತು ಕನ್ನಡ ಸಂಘಗಳ ಅಸ್ತಿತ್ವ ಇದೆ. ಅದಕ್ಕೊಬ್ಬರು ಅಧ್ಯಾಪಕ ಪ್ರತಿನಿಧಿಗಳಿದ್ದಾರೆ. ಅಧ್ಯಕ್ಷ-ಕಾರ್ಯದರ್ಶಿ ಹುದ್ದೆಗಳೂ ಇವೆ. ಆದರೆ ಕಾರ್ಯಕ್ರಮ ಎಲ್ಲಿಯೂ ಜರಗುತ್ತಿಲ್ಲ. ಸಂಬಂಧಿತರನ್ನು ಈ ಬಗ್ಗೆ ಕೇಳಿದರೆ ಅಯ್ಯೋ, ಬಿಡಿ. ಕನ್ನಡ ಸಾಹಿತ್ಯದ ಕಾರ್ಯಕ್ರಮಕ್ಕೆ ಯಾರೂ ಬರುತ್ತಿಲ್ಲ. ಕಂಪ್ಯೂಟರು, ಟಿ.ವಿ, ಮೊಬೈಲು ಬಂದ ಬಳಿಕ ವಿದ್ಯಾರ್ಥಿಗಳ ಆಸಕ್ತಿಗಳೇ ಬದಲಾಗಿವೆ ಎಂಬ ಸಿನಿಕತನದ ಉತ್ತರ ಬರುತ್ತದೆ. ವಾಸ್ತವವಾಗಿ ಹಾಗೆ ಸಬೂಬು ಕೊಡುವ ಅಧ್ಯಾಪಕರೂ ಸಾಮಾಜಿಕ ಜಾಲತಾಣದಲ್ಲಿ ಕಳೆದು ಹೋಗುತ್ತಿರುವುದೇ ದುರಂತ. ನಾಲ್ಕು ದಶಕಗಳ ಹಿಂದೆ ಶಾಲಾ, ಕಾಲೇಜುಗಳ ಮಟ್ಟದಲ್ಲೇ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಕುದುರಿಸುವ ಕೆಲಸವನ್ನು ಅಧ್ಯಾಪಕರು ಮಾಡುತ್ತಿದ್ದರು. ಪ್ರಜಾವಾಣಿ, ಸುಧಾ- ಮಯೂರ ಪತ್ರಿಕೆಗಳನ್ನು ತರಗತಿಗೆ ತಂದು ಕಥೆ– ಕಾವ್ಯಗಳನ್ನು ಓದಿಸುತ್ತಿದ್ದರು. ವಿಮರ್ಶೆಯ ಮಾನದಂಡ ಗಳನ್ನು ಹೇಳಿಕೊಡುತ್ತಿದ್ದರು. ಈಗಿನ ಅಧ್ಯಾಪಕರಲ್ಲಿ ಸಾಹಿತ್ಯಾಸಕ್ತಿ ತೀರಾ ಅಪರೂಪ. ಕಾಲೇಜು ಪ್ರಾಧ್ಯಾಪಕರೂ ಇದಕ್ಕೆ ಹೊರತಲ್ಲ. ಮೂರು ದಶಕಗಳ ಹಿಂದೆ ಕಾಲೇಜು ಸಾಹಿತ್ಯ ಮತ್ತು ಕನ್ನಡ ಸಂಘಗಳು ವಿದ್ಯಾರ್ಥಿಗಳ ಮತ್ತು ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿ, ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದವು. ಇದರಿಂದಾಗಿ ಎಷ್ಟೋ ವನಸುಮಗಳು ಬೆಳಕು ಕಾಣುತ್ತಿದ್ದವು. ವಿದ್ಯಾರ್ಥಿಗಳು ಮತ್ತು ಜನಗಳು ಸಾಹಿತ್ಯ ಕೃತಿಗಳನ್ನು ಕೊಂಡು ಓದುತ್ತಿದ್ದರು. ಶಾಲಾ ಕಾಲೇಜುಗಳಲ್ಲಿ ಖ್ಯಾತ ಸಾಹಿತಿಗಳ ಕೃತಿಗಳ ಬಗ್ಗೆ ವಿಚಾರ ಸಂಕಿರಣಗಳು ನಡೆಯುತ್ತಿದ್ದವು. ಖ್ಯಾತ ಮಾತ್ರವಲ್ಲದೆ ಸ್ಥಳೀಯ ಸಾಧಕ ಸಾಹಿತಿಗಳೊಡನೆ ಸಂವಾದ, ವಿಚಾರ ವಿನಿಮಯ ಏರ್ಪಡಿಸಲಾಗುತ್ತಿತ್ತು. ಶಾಲಾ ಕಾಲೇಜುಗಳ ವರ್ಧಂತ್ಯುತ್ಸವ ಕಾಲದಲ್ಲಿ ಸಾಹಿತ್ಯ ಕೃತಿಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಈಗ ಅದರ ಬದಲು ಮರದ ತುಂಡುಗಳನ್ನು ಸ್ಮರಣಿಕೆಯಾಗಿ ನೀಡುತ್ತಿದ್ದಾರೆ. ಅವು ಕೆಲ ದಿನಗಳಲ್ಲಿ ಗೆದ್ದಲು ಹಿಡಿದು ನಾಶವಾಗಿ ಹೋಗುತ್ತವೆ. ಕನ್ನಡ ಸಾಹಿತ್ಯದ ಬೆಳವಣಿಗೆ ತಣ್ಣಗಾಗುತ್ತಿರುವುದರಿಂದ ವಾರ್ತಾ ಪತ್ರಿಕೆಗಳ ಪುಟ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಅನಿವಾರ್ಯವಾಗಿ ಅವು ಪ್ರತಿದಿನ ಸಿನಿಮಾ, ವಿಶ್ವದ ವಾರ್ತೆ ಹಾಕಿ ಓದುಗರನ್ನು ಹಿಡಿದಿಟ್ಟುಕೊಳ್ಳಬೇಕಾಗಿದೆ. ಶಾಲಾ ಕಾಲೇಜುಗಳ ಅಧ್ಯಾಪಕರ ನಿಷ್ಕ್ರಿಯತೆಯಿಂದ ಕನ್ನಡ ಸಾಹಿತ್ಯದ ಬೆಳವಣಿಗೆ ಕ್ಷೀಣಿಸುತ್ತಾ ಹೋಗುತ್ತಿದೆ. ಶಾಲಾ ಕಾಲೇಜುಗಳ ಅತಿಥಿ ಅಧ್ಯಾಪಕರ ವಿಷಯ ಬಿಟ್ಟು ಬಿಡೋಣ. ಸಾವಿರಗಟ್ಟಲೆ ವೇತನ ಪಡೆಯುತ್ತಿರುವ ಶಾಲಾ ಅಧ್ಯಾಪಕರು, ತಿಂಗಳಿಗೆ ಒಂದೂವರೆ-ಎರಡು ಲಕ್ಷ ರೂಪಾಯಿ ಯುಜಿಸಿ ವೇತನ ಪಡೆಯುತ್ತಿರುವ ಕಾಲೇಜು ಅಧ್ಯಾಪಕರು ಕನ್ನಡ ಸಾಹಿತ್ಯ ಉಳಿಸಲು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಹಾಕಿದರೆ ಸಿಗುವ ಉತ್ತರ ತೀರಾ ನಿರಾಶಾದಾಯಕ. ಅವರು ಸಮಸ್ತ ಭಾರವನ್ನು ಪ್ರಾಂಶುಪಾಲರ ಅಥವಾ ಆಡಳಿತ ಮಂಡಳಿಯ ಮೇಲೆ ಹಾಕಿ ಪಲಾಯನ ಸೂತ್ರ ಪಠಿಸುತ್ತಿದ್ದಾರೆ. ಕಾಲೇಜು ಅಧ್ಯಾಪಕರಲ್ಲಿ ಬೆರಳೆಣಿಕೆಯಷ್ಟು ಮಂದಿ ಸಾಹಿತ್ಯ ಸೃಷ್ಟಿಯ ಕೆಲಸವನ್ನು ತೀರಾ ವಿರಳವಾಗಿ ಮಾಡುವುದುಂಟು. ಅಂಥವರು ತಮ್ಮನ್ನು ಬೇರೆ ಶಾಲಾ ಕಾಲೇಜುಗಳ ಸಾಹಿತ್ಯ ಅಥವಾ ಕನ್ನಡ ಸಂಘಟನೆಗಳು ಸಂಪನ್ಮೂಲ ವ್ಯಕ್ತಿಗಳಾಗಿ ಕರೆಯಲಿ ಎಂದು ಕಾಯುತ್ತಿದ್ದಾರೆಯೇ ವಿನಾ ಕನ್ನಡ ಸಾಹಿತ್ಯ ಉಳಿಸಿ ಬೆಳೆಸಲು ತಮ್ಮ ಸಂಸ್ಥೆಗಳಲ್ಲಿ ಏನನ್ನೂ ಮಾಡುತ್ತಿಲ್ಲ. ಇದು ತೀರಾ ವಿಷಾದದ ಸಂಗತಿ. ಕನ್ನಡ ಸಾಹಿತ್ಯ ಉಳಿಸಿ ಬೆಳೆಸಬೇಕಾದವರು ಶಾಲಾ-ಕಾಲೇಜುಗಳ ಅಧ್ಯಾಪಕರು. ಅವರು ಪ್ರಾಮಾಣಿಕರಾದರೆ ವಿದ್ಯಾರ್ಥಿಗಳು ಅವರ ಮಾತನ್ನು ಕೇಳುತ್ತಾರೆ. ಸಾಹಿತ್ಯದ ಕಡೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಕೆಲಸವನ್ನೇ ಅಧ್ಯಾಪಕರು ಮಾಡದ ಕಾರಣ ವಿದ್ಯಾರ್ಥಿಗಳು ಸುಲಭವಾಗಿ ರಾಜಕೀಯಕರಣಗೊಳ್ಳುತ್ತಿದ್ದಾರೆ. ಹೊಡೆದಾಟ ಮತ್ತು ಕ್ರಿಮಿನಲ್ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಕರ್ನಾಟಕ ನಮಗೆಲ್ಲಾ ಸೂರು, ಅನ್ನ, ನೀರು ಕೊಡುತ್ತಿದೆ. ಕನ್ನಡವನ್ನು ಸಾಹಿತ್ಯ ಮುಖೇನ ಬೆಳೆಸುವ ಮೂಲಕ ನಾವೆಲ್ಲಾ ಕರ್ನಾಟಕದ ಋಣ ಸಂದಾಯ ಮಾಡುವುದು ಬೇಡವೇ?

courtrsey:prajavani.net

https://www.prajavani.net/artculture/article-features/kannada-language-is-sidelined-in-schools-710401.html

Leave a Reply