ಶೆಟ್ಟರ್‌ ಶೈಲಿ ಪರಂಪರೆಯಿಂದ ಭಿನ್ನಗ್ರಹಿಕೆ

ಪ್ರೊ.ಷ. ಶೆಟ್ಟರ್‌ ಅವರು ನಮ್ಮ ನಡುವೆ ಈಗ ಇಲ್ಲವಾಗಿದ್ದಾರೆ. ಇತಿಹಾಸ, ಪ್ರಾಕ್ತನಶಾಸ್ತ್ರ, ಕಲಾ ಇತಿಹಾಸ ಹೀಗೆ ವಿವಿಧ ಶಿಸ್ತುಗಳಲ್ಲಿ ಪರಿಣತಿ ಪಡೆದಿದ್ದ ಅವರ ಹೆಸರು ಕರ್ನಾಟಕದ ಸಂಸ್ಕೃತಿ ಶೋಧನೆ, ಇತಿಹಾಸ ಅಧ್ಯಯನ, ಕಲಾ ಚರಿತ್ರೆಯ ಅಧ್ಯಯನ ಇವುಗಳಲ್ಲಿ ಹೊಸ ಬಗೆಯ ಹೊಳಹುಗಳನ್ನು ತೋರಿಸುವುದರ ಮೂಲಕ ಅಜರಾಮರವನ್ನಾಗಿಸಿಕೊಂಡಿದೆ. ಅನೇಕ ಪ್ರಸಿದ್ಧ ಇತಿಹಾಸ ಅಕಾಡೆಮಿಗಳ ಕಲಾ ಇನ್‌ಸ್ಟಿಟ್ಯೂಟ್‌ಗಳ ನಿರ್ದೇಶಕತ್ವವನ್ನು ನಿಭಾಯಿಸಿ ಪರಿಣಾಮಕಾರಿಯಾದ ಕೆಲಸವನ್ನು ಮಾಡಿದ ಕೀರ್ತಿ ಇವರದು. ಆಚಾರ್ಯ ಕುಂದಕುಂದ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮೊದಲಾದ ಪ್ರಮುಖ ಪ್ರಶಸ್ತಿಗಳನ್ನು ತಮ್ಮ ಬರವಣಿಗೆಯ ಬಲದಿಂದಲೇ ಪಡೆದ ಅವರ ಬರಹ ಮತ್ತು ಚರಿತ್ರೆಯ ಪ್ರಜ್ಞೆ ಬಹುವಿನ್ಯಾಸ ಮಾದರಿಯದ್ದು. ಸದ್ದಿಲ್ಲದೆ ಸಾವಿನ ಕಡೆಗೆ ಸರಿದ ಶೆಟ್ಟರ್ ಅವರ ಪರಿಚಯ ಎಂಬತ್ತರ ದಶಕದಲ್ಲಿ ನನಗೆ ಆಯಿತು. ವಚನಕಾರರು ಮತ್ತು ಐತಿಹಾಸಿಕ ಪ್ರಜ್ಞೆ ಕುರಿತ ನನ್ನ ಸಂಶೋಧನೆಗೆ ಮೌಲ್ಯಮಾಪಕರಾಗಿದ್ದವರು ಅವರು. ಎಂಪಿರಿಕಲ್ ಮಾದರಿಯ ಚರಿತ್ರೆಯ ವಿನ್ಯಾಸಕ್ಕಿಂತ ಭಿನ್ನವಾಗಿದ್ದ ಇತಿಹಾಸದ ಮಾದರಿಯ ಆ ಬರವಣಿಗೆಯು ಅವರಿಗೆ ಹೊಸದಾಗಿ ಕಂಡಿದ್ದು ಮತ್ತು ಆ ಬಗ್ಗೆ ಸಂತೋಷವನ್ನು, ಆಶ್ಚರ್ಯವನ್ನು ಅವರು ವ್ಯಕ್ತಪಡಿಸಿದ್ದು ನನಗೆ ಅವರಲ್ಲಿ ಗೌರವ ಉಂಟಾಗುವಂತೆ ಮಾಡಿತ್ತು. ನಂತರದಲ್ಲಿ ನನ್ನ ಸಂಬಂಧವು ಆಳವಾದ ವೈಚಾರಿಕ ಸಂಬಂಧದಲ್ಲಿ ಅವರೊಡನೆ ಮುಂದುವರಿಯಿತು. ಹೊಸದೃಷ್ಟಿ ಕೋನ ಮತ್ತು ಕುತೂಹಲದ ಅನ್ವೇಷಣೆಯೇ ಅವರ ಬರಹದ ಪ್ರಮುಖ ಶೈಲಿ. ಶೆಟ್ಟರ್ ಅವರು ಕಲೆ ಮತ್ತು ಕಲೆಯ ಇತಿಹಾಸದಲ್ಲಿ ಪ್ರಗಲ್ಭ ವಿದ್ವಾಂಸರಾಗಿದ್ದರು. ಕನ್ನಡ ಸಂಸ್ಕೃತಿ ಮತ್ತು ಇತಿಹಾಸದ ಅನ್ವೇಷಣೆಯನ್ನು ಪರಂಪರಾಗತ ಇತಿಹಾಸದ ವಿದ್ವಾಂಸರಿಗಿಂತ ಭಿನ್ನವಾಗಿ ನೋಡುವ ದೃಷ್ಟಿಕೋನವು ಅವರಿಗೆ ಪ್ರಾರಂಭದಲ್ಲಿಯೇ ದಕ್ಕಿತ್ತು. ಎಂಪಿರಿಕಲ್ ಮಾದರಿಯ ಚರಿತ್ರೆಯ ಒಳಸತ್ವದಲ್ಲಿಯೇ ಹೊಸ ಬಗೆಯಲ್ಲಿ ನೋಡುವ ವಿಧಾನವನ್ನು ಅವರು ರೂಪಿಸಿಕೊಂಡಿದ್ದರು. ಅದಕ್ಕೆ ಅವರಿಗೆ ದಕ್ಕಿದ್ದು ಅವರು ಮೊದಲಿನಿಂದಲೂ ನಡೆಸಿದ ಇತಿಹಾಸಕ್ಕೆ ಸಂಬಂಧಿಸಿದ ಅಂತರ್ ಶಿಸ್ತೀಯ ಅಧ್ಯಯನದಿಂದಲೇ ಎಂದು ಹೇಳಬಹುದು. ಕನ್ನಡ ಸಂಸ್ಕೃತಿ ಮತ್ತು ಇತಿಹಾಸದ ಅನ್ವೇಷಣೆಯನ್ನು ಅವರ ಹಾಗೆ ಪರಂಪರಾಗತ ಇತಿಹಾಸದ ಬರವಣಿಗೆಗಿಂತ ಭಿನ್ನವಾಗಿ ನೋಡಿದವರು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಹಂಪಿಯನ್ನು ಕುರಿತ ಅವರ ವಿಶಿಷ್ಟ ಗ್ರಂಥ, ಹೊಯ್ಸಳ ಕಲೆಯನ್ನು ಕುರಿತ ಅವರ ಪುಸ್ತಕ ಹಾಗೂ ಶ್ರವಣಬೆಳಗೊಳವನ್ನು ಕುರಿತು ಬರೆದ ಕೃತಿಗಳು ಶೆಟ್ಟರ್ ಅವರು ಚರಿತ್ರೆಯನ್ನು ನೋಡುವ ಬಗೆ ಹೇಗೆ ಭಿನ್ನ ಎನ್ನುವುದನ್ನು ಸ್ಪಷ್ಟಪಡಿಸುತ್ತವೆ. ಇವು ಕಥನದ ಮಾದರಿಗಳು. ಈ ಕಥನಗಳಲ್ಲಿ ನಿಧಾನವಾಗಿ ಎದ್ದು ಕಾಣುವುದು ಆಯಾ ಕಾಲದ ಚರಿತ್ರೆಯನ್ನು ಓದುವ ಮಾದರಿಯು ಬರಹದಲ್ಲಿ ಅಲ್ಲದೆ ಚಿತ್ರದಲ್ಲಿ ನೋಡುವ ಮಾದರಿಯಲ್ಲಿ ಇದೆ ಎನ್ನುವ ವಿನ್ಯಾಸದಲ್ಲಿ. ಕಲೆ ಮತ್ತು ಪ್ರಾಕ್ತನಶಾಸ್ತ್ರದಲ್ಲಿ ಅವರಿಗೆ ಇದ್ದ ಪಾಂಡಿತ್ಯವು ಚರಿತ್ರೆಯನ್ನು ಹೀಗೆ ನೋಡುವ ಒಂದು ಶೈಲಿಯನ್ನು ಬೆಳೆಸಿತು. ಇದು ಅವರ ಒಂದು ವಿಶಿಷ್ಟ ಸ್ವರೂಪದ ಮಾದರಿಯ ಬರವಣಿಗೆಯಾದರೆ ಅವರ ಇನ್ನೊಂದು ವಿಶಿಷ್ಟ ಸ್ವರೂಪದ ಮಾದರಿಯ ಬರವಣಿಗೆಯನ್ನು ಚರಿತ್ರೆಯನ್ನು ಅಂತರ್ ಶಿಸ್ತೀಯ ಸ್ವರೂಪದಲ್ಲಿ ಗುರುತಿಸುವ ಅವರ ಇನ್ನೊಂದು ಬರವಣಿಗೆಯ ಮಾದರಿಯಲ್ಲಿ ಗುರುತಿಸಬಹುದು. ‌ ಚರಿತ್ರೆಗೂ, ತತ್ವಜ್ಞಾನಕ್ಕೂ ಇರುವ ಸಂಬಂಧವನ್ನು ಸೂಕ್ಷ್ಮವಾಗಿ ಗುರುತಿಸುವ ಅವರ ಚರಿತ್ರೆಯ ಕಥನವನ್ನು ಕುರಿತ ಒಂದು ಮುಖ್ಯ ಕೃತಿ ಸಾವಿಗೆ ಆಹ್ವಾನ. ‘ಇನ್ವೈಟಿಂಗ್ ಡೆತ್’ ಎಂಬ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪ್ರಕಟವಾದ ಈ ಕೃತಿಯು ಕರ್ನಾಟಕದಲ್ಲಿ ಅತ್ಯಂತ ಪ್ರಬಲವಾದ ಜೈನಧರ್ಮವು ಸಾವನ್ನು ಕುರಿತ ದರ್ಶನವನ್ನು ಯಾವ ರೀತಿಯಲ್ಲಿ ರೂಪಿಸಿತು ಎಂದು ಜೈನ ದರ್ಶನದ ಹಿನ್ನೆಲೆಯಲ್ಲಿ ಐತಿಹಾಸಿಕವಾಗಿ ರೂಪಿಸಿದ ಮೊದಲ ಕೃತಿ. ಶ್ರವಣಬೆಳಗೊಳದಲ್ಲಿ 11ನೇ ಶತಮಾನದ ನಂತರ ಸಲ್ಲೇಖನ ವ್ರತ ಸ್ವೀಕರಿಸಿ ಸಾವನ್ನು ಆಹ್ವಾನಿಸಿದ ಎತ್ತಿ ಮತ್ತು ಶ್ರಾವಕ ಪರಂಪರೆಯ ಕಥನವನ್ನು ವಿಸ್ತಾರವಾಗಿ ಈ ಚರಿತ್ರೆಯ ಪುಸ್ತಕ ಹೇಳುತ್ತದೆ. ಸಾವನ್ನು ಆಹ್ವಾನಿಸುವ ವಿವಿಧ ಬಗೆಯ ದರ್ಶನ ಸಿದ್ಧಾಂತಗಳನ್ನು ಚರಿತ್ರೆಯ ಘಟನೆಗಳನ್ನು ಮೇಳವಿಸಿ ನೋಡಿದ ಈ ಕೃತಿ ಕನ್ನಡದಲ್ಲಿ ಬಂದ ಒಂದು ಅಪರೂಪದ ಕೊಡುಗೆ. ಇತಿಹಾಸ ಮತ್ತು ದರ್ಶನ ಇವುಗಳೆರಡನ್ನು ಮೇಳವಿಸಿ ನೋಡಿದ ಎಂಪಿರಿಕಲ್ ಮಾರ್ಗದಲ್ಲಿ ರೂಪುಗೊಂಡ, ಚರಿತ್ರೆಯ ಕಥನದಲ್ಲಿ ಸಾವಿಗೆ ಆಹ್ವಾನ ಎನ್ನುವ ಪುಸ್ತಕಕ್ಕೆ ಒಂದು ವಿಶಿಷ್ಟ ಸ್ಥಾನ ಸಲ್ಲಲೇಬೇಕು. ಇದುವರೆಗೂ ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದ ಅವರ ಚರಿತ್ರೆಯ ಕಥನಗಳು ಸ್ವಲ್ಪಮಟ್ಟಿಗೆ ಪಶ್ಚಿಮದ ಎಂಪಿರಿಕಲ್ ಮಾರ್ಗವನ್ನು ಪ್ರಮುಖವಾಗಿ ಅನುಸರಿಸಿದವು. ಆದರೂ, ಚರಿತ್ರೆ ಎಂಬುದು ಕೇವಲ ಅನುಕ್ರಮವಾದ ಘಟನೆಗಳ ವಿವರವಾಗದೆ ದರ್ಶನ ಹಾಗೂ ಚಿತ್ರ ಸಹಿತವಾದ ನೋಟಗಳಿಂದ ವಿಭಿನ್ನವಾದ ಅನುಭವವನ್ನು ಓದುಗನಿಗೆ ಕೊಟ್ಟವು.ನಂತರ ಕನ್ನಡದಲ್ಲಿ ಬರೆಯತೊಡಗಿದ ಶೆಟ್ಟರ್ ಅವರು ಇತಿಹಾಸದ ಕ್ರಮವನ್ನು ಗ್ರಹಿಸಿದ ಬಗೆ ಬಹಳ ಭಿನ್ನವಾಗಿ ರೂಪುಗೊಂಡಿತು. ಇಂಗ್ಲಿಷ್‌ನಲ್ಲಿ ಇದುವರೆಗೆ ಕರ್ನಾಟಕದ ಇತಿಹಾಸದ ಕಥನವನ್ನು ಅವರು ರೂಪಿಸುತ್ತಿದ್ದರೂ ಅದು ಒಂದು ಬಗೆಯಲ್ಲಿ ಮಾರ್ಗ ಕಥನವೇ ಆಗಿತ್ತು. ಧರ್ಮ ಮತ್ತು ಪ್ರಭುತ್ವಗಳು ರೂಪಿಸಿದ ಚರಿತ್ರೆಯ ಬಣ್ಣವನ್ನು ನೋಡುತ್ತಿದ್ದ ಶೆಟ್ಟರ್ ಅವರು ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದಾಗ ಅವರಿಗೆ ಇತಿಹಾಸವೆನ್ನುವುದು ಸಂಸ್ಕೃತಿಯ ಮತ್ತು ಸಮುದಾಯದ ಕಥನವೆಂಬಂತೆ ತೋರಿದ್ದು ಆಕಸ್ಮಿಕವೂ ಅಲ್ಲ, ಆಶ್ಚರ್ಯವೂ ಅಲ್ಲ. ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ ಎಂಬ ಅವರ ಪ್ರಸಿದ್ಧ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆಯಿತು. ಪ್ರೊ.ಷ. ಶೆಟ್ಟರ್‌ ಆಕೃತಿ ಶೆಟ್ಟರ್ ಅವರು ಚರಿತ್ರೆಯನ್ನು ನೋಡುವ ಕ್ರಮವನ್ನು ಸಂಪೂರ್ಣವಾಗಿ ಬದಲಾಯಿಸಿದ ಕೃತಿ ಎಂದು ಹೇಳಬಹುದು. ದ್ರಾವಿಡ ಭಾಷಾ ಸಮುದಾಯಗಳ ಅಧ್ಯಯನಗಳ ಮೂಲಕ ಆ ಭಾಷೆಗಳ ತೌಲನಿಕ ಅಧ್ಯಯನವನ್ನು ಮಾಡುವ ಅಪರೂಪದ ಕೆಲಸಕ್ಕೆ ಶೆಟ್ಟರ್ ಅವರು ಕೈಹಾಕಿದರು. ಕನ್ನಡ ಮತ್ತು ತಮಿಳು ಭಾಷೆಗಳ ಗಡಿರೇಖೆಯನ್ನು ಗುರುತಿಸುವ ಸಂದರ್ಭದಲ್ಲಿಯೇ ಈ ಎರಡು ಭಾಷೆಗಳ ನಡುವೆ ಇದ್ದ ಗಡಿ ಭಾಷೆಗಳಂತೆ ಕಾಣುತ್ತಿದ್ದ ಭಾಷಾ ಲಕ್ಷಣಗಳನ್ನು ಅವರು ಗುರುತಿಸುತ್ತಾರೆ. ಅಲ್ಲದೆ ಸಾಂಪ್ರದಾಯಿಕ ಇತಿಹಾಸ ತಜ್ಞರ ಲಿಪಿ ಬರವಣಿಗೆಗಳ ಇತಿಹಾಸಕ್ಕೆ ಸಂಬಂಧಪಟ್ಟ ಒಂದು ಚಿಂತನೆಯನ್ನು ಇಲ್ಲಿ ವಿಶ್ಲೇಷಣೆಗೆ ಗುರಿಪಡಿಸಿದ್ದಾರೆ. ತಮಿಳು ಕನ್ನಡಕ್ಕಿಂತ ಮೊದಲು ಲಿಪಿಯನ್ನು ಹೊಂದಿದ ಭಾಷೆ ಎನ್ನುವ ಹಳೆಯ ಚಿಂತನ ವಿಶ್ಲೇಷಣೆಯನ್ನು ಇವರು ಶೋಧನೆಯ ಮೂಲಕ ಅಲ್ಲಗಳೆದಿದ್ದಾರೆ. ಕನ್ನಡಕ್ಕೆ ತಮಿಳಿಗಿಂತ 300 ವರ್ಷಗಳಷ್ಟು ದೊಡ್ಡ ಇತಿಹಾಸವಿದೆ ಎನ್ನುವ ಅಂಶವನ್ನು ಅವರು ಇಲ್ಲಿ ಮಂಡಿಸಿದ್ದಾರೆ. ಹಳೆಗನ್ನಡ ಮಾಲಿಕೆಯಲ್ಲಿ ಬಂದ ಅವರ ಒಂದನೇ ಕೃತಿ, ಕನ್ನಡದ ಅನಾಮಧೇಯ ಲಿಪಿಕಾರರ ಹೆಸರು ಮತ್ತು ಚರಿತ್ರೆಯನ್ನು ವಿವರಿಸುವ ಅಪರೂಪದ ಬರವಣಿಗೆ. ಸಾಮಾನ್ಯ ಲಿಪಿಕಾರರ ಹೆಸರುಗಳು ಕಲ್ಲಿನ ಯಾವುದೋ ಮೂಲೆಯಲ್ಲಿ ಚರಿತ್ರೆಯ ಕಾಲದಲ್ಲಿ ಮರೆತುಹೋಗಿ, ನೆನಪಿನಿಂದ ಮಾಸುವ ಮೊದಲೇ ಅವುಗಳನ್ನು ಗುರುತಿಸಿ ವಿವರಿಸಿದ ಇನ್ನೊಂದು ವಿಶಿಷ್ಟ ಕೃತಿ ಇದು. ಇದು ಕೇವಲ ದಾಖಲೆ ಮಾತ್ರ ಆಗದೆ ಲಿಪಿಕಾರರಲ್ಲಿ ಇದ್ದ ವೈವಿಧ್ಯಗಳನ್ನು, ಭಿನ್ನತೆಗಳನ್ನು ಹಾಗೂ ವೈಶಿಷ್ಟತೆಗಳನ್ನು ವಿವರವಾಗಿ ರೂಪಿಸುವ ಕಥನ ಶೈಲಿಯ ಬರವಣಿಗೆ ಇದು. ಅವರು ಸ್ವತಃ ಅನೇಕ ಲೇಖನಗಳನ್ನು ಬರೆದು ಸಂಪಾದಿಸಿದ ಇನ್ನೊಂದು ಬಹುಮುಖ್ಯವಾದ ಕೃತಿ ‘ಪ್ರಾಕೃತ ಜಗದ್ವಲಯ’. ಇದು ಕನ್ನಡ ಮತ್ತು ಸಂಸ್ಕೃತದ ನಡುವಣ ಸಂಬಂಧದ ಸಾಂಪ್ರದಾಯಿಕ ಆಲೋಚನೆಯನ್ನು ವಿಶ್ಲೇಷಿಸಿ ನೋಡುತ್ತದೆ. ಕನ್ನಡ ಮತ್ತು ಪ್ರಾಕೃತ ಭಾಷೆಗಳ ನಡುವೆ ಇದ್ದಿರಬಹುದಾದ ಪರಸ್ಪರ ಕೊಡುಗೆಗಳ ಹಾಗೂ ಪ್ರಭಾವದ ಸ್ವರೂಪವನ್ನು ಮೊಟ್ಟಮೊದಲಿಗೆ ವ್ಯಾಪಕವಾಗಿ ವಿವರಿಸಿ ನೋಡಿದ ಕೃತಿ ಇದು. ಕನ್ನಡದ ಹಳೆಗನ್ನಡ ಕೃತಿಗಳನ್ನು ಕುರಿತ ಅಧ್ಯಯನವನ್ನು ಭಾಷೆಯ ಹಿನ್ನೆಲೆಯಲ್ಲಿ ಹಾಗೂ ಚಾರಿತ್ರಿಕ ಅಂಶಗಳನ್ನು ವಿಶ್ಲೇಷಿಸುವ ಹಿನ್ನೆಲೆಯಲ್ಲಿ ನೋಡುವ ಪ್ರಮುಖವಾದಂತಹ ಪ್ರಾಜೆಕ್ಟ್ ಒಂದನ್ನು ಶೆಟ್ಟರ್ ಅವರು ಹಾಕಿಕೊಂಡಿದ್ದರು. ಕನ್ನಡ ಭಾಷೆ, ಕನ್ನಡ ಸಮುದಾಯ ಅವುಗಳ ಪ್ರಾಚೀನತೆ ಮತ್ತು ವೈಶಿಷ್ಟತೆಗಳನ್ನು ಬಹುಸ್ತರದಲ್ಲಿ ನೋಡುವ ಹಂಬಲ ಶೆಟ್ಟರ್ ಅವರದ್ದಾಗಿತ್ತು. ಕನ್ನಡ ಸಂಸ್ಕೃತಿಯ ಬಹುಸ್ತರೀಯ ಲಕ್ಷಣಗಳನ್ನು ಹುಡುಕುವ ಅವರ ಸಂಶೋಧನೆಯ ಹಿಂದಿದ್ದ ಲಕ್ಷಣ ಮುಖ್ಯವಾಗಿ ಕನ್ನಡಕ್ಕಿರುವ ಪ್ರಮುಖ ಗುಣವೆಂದು ತೋರಿಸುವುದೂ ಆಗಿತ್ತು. ಇದು ಕನ್ನಡಗಳನ್ನು ಪರಂಪರೆಯ ಮುಖ್ಯ ಲಕ್ಷಣವೆಂದು ನೋಡಲು ಬಯಸಿದ್ದರಿಂದಲೇ ಅದರ ಮೂಲ ಚೂಲಗಳ ಶೋಧನೆಗೆ ಶೆಟ್ಟರ್ ಅವರು ಉಳಿದವರಿಗಿಂತ ವಿಭಿನ್ನವಾದ ಆದರೆ ಅತ್ಯಂತ ಪ್ರಸ್ತುತವಾದ ಮಾರ್ಗವನ್ನು ತುಳಿದರು ಎಂದೇ ನಾನು ಭಾವಿಸುತ್ತೇನೆ. ಕನ್ನಡ ಸಂಸ್ಕೃತಿಯ ಗುಣವನ್ನು ತಿಳಿಸುವ ಅವರ ಚರಿತ್ರೆಯ ಶೋಧನೆ ಎಂಪಿರಿಕಲ್ ಆದ ಸಾಂಪ್ರದಾಯಕ ಮಾದರಿಯನ್ನು ಮೀರಿದ ಒಂದು ಹೊಸ ಮಾದರಿ ಎಂದು ನಾನು ತಿಳಿಯುತ್ತೇನೆ. ಇತಿಹಾಸವನ್ನು ನೋಡುವ ಸಾಂಪ್ರದಾಯಕ ಮಾದರಿಯ ಚರಿತ್ರಗಾರರಿಗೆ ಶೆಟ್ಟರ್ ಅವರ ಹೊಸ ಐತಿಹಾಸಿಕತೆಯ ತಾತ್ವಿಕತೆ ಹೊಸ ನೋಟವನ್ನು ಒದಗಿಸಿದ್ದು ನಾನು ಆಶಿಸುತ್ತೇನೆ.

courtsey:prajavani.net

https://www.prajavani.net/artculture/article-features/kannada-writer-sha-shettar-and-kannada-literature-708969.html

Leave a Reply