“ಇದು ನಾಗು ಸ್ವರ ಮಾಲಿಕೆ”,

ಅದು ರಾಜ್ಯಮಟ್ಟದ ಅಂತರ್‌ ಕಾಲೇಜು ‘ಶ್ರೀ ರಾಮಾಯಣ ದರ್ಶನಂ–ಕಾವ್ಯವಾಚನ’ ಸ್ಪರ್ಧೆ. ಅಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಹಲವು ಜಿಲ್ಲೆಗಳನ್ನು ಪ್ರತಿನಿಧಿಸಿದ್ದ ಸ್ಪರ್ಧಾಳುಗಳು. ಸಂಗೀತ ಬಲ್ಲ, ನುರಿತ, ಹಿರಿಯರಿಂದ ಕಲಿತು ತರಬೇತಿಗೊಂಡ ವಿದ್ಯಾರ್ಥಿಗಳಿದ್ದರು. ಇಂತಿಪ್ಪ ಸಮಯದಲ್ಲಿ ಯಾವುದೇ ಕಲಿಕೆ, ತರಬೇತಿ ಇಲ್ಲದ, ಪುಟ್ಟ ಗ್ರಾಮದ, ಕೂಲಿಕಾರನ ಮಗಳು ಅಂಜುತ್ತಲೇ ವೇದಿಕೆ ಏರಿದ್ದರು. ಅವರು ಕಾರ್ಯಕ್ರಮದ ಕೊನೆಯ ಸ್ಪರ್ಧಿ. ಪ್ರೇಕ್ಷಕರು ಒಬ್ಬೊಬ್ಬರೆ ಹೊರಡಲು ಸಿದ್ಧರಾಗುತ್ತಿದ್ದರು. ತನ್ನೊಳಗಿನ ಅಳುಕನ್ನು ಅದುಮಿಟ್ಟುಕೊಂಡು, ಕಣ್ಮುಚ್ಚಿ ಧ್ವನಿ ತೆರೆದರು ಆ ಯುವತಿ. ರಸಋಷಿ ಕುವೆಂಪು ಅವರ ರಾಮಾಯಣ ದರ್ಶನದ ಪಾದುಕಾ ಕಿರೀಟವು ಅವರ ಕಂಠದಲ್ಲಿ ಧಾರೆಯಾಗಿ ಹರಿಯಿತು. ಸಭಾಂಗಣದಿಂದ ಹೊರಟು ನಿಂತಿದ್ದವರೆಲ್ಲ ಕುರ್ಚಿಗಂಟಿ ಕೂತರು. ರಾಜ್ಯದ ಅಂಚಿನ ಹಳ್ಳಿ ಯುವತಿಯ ಗಮಕ ವಾಚನ ಹೀಗೆ ಬೆಳಕಿಗೆ ಬಂತು. ಈಗ ಆಕೆ ರಾಜ್ಯಮಟ್ಟದಲ್ಲಿ ಮಿಂಚಿರುವ ಪ್ರತಿಭೆ. ಕನಕಪುರ ತಾಲ್ಲೂಕಿನ ಆಲುಕುಳಿ ಎಂಬ ಕುಗ್ರಾಮದ ಸಂಗೀತ ಪ್ರತಿಭೆ ನಾಗುಶ್ರೀ. ತಂದೆ ಉಗ್ರಾಚಾರ್ ಕೂಲಿಕಾರ್ಮಿಕರು. ತಾಯಿ ರತ್ನಮ್ಮ ಗೃಹಿಣಿ. ಸಂಗೀತದ ಗಂಧವೂ ತಿಳಿಯದ ಕೌಟುಂಬಿಕ ಹಿನ್ನೆಲೆಯ ಇವರಿಗೆ ಬಾಲ್ಯದಿಂದಲೇ ಸಂಗೀತದತ್ತ ಒಲವು. ಆ ಸಮಯದಲ್ಲಿ ಬೆರಳೆಣಿಕೆಯಷ್ಟು ಮನೆಗಳಲ್ಲಿ ಮಾತ್ರ ರೇಡಿಯೊಗಳಿದ್ದವು. ಬಿಡುವಿದ್ದಾಗೆಲ್ಲ ಅಲ್ಲಿ ಹೋಗಿ ಕೂರುತ್ತಿದ್ದ ಇವರಿಗೆ ರೇಡಿಯೊನೇ ಮೊದಲ ಸಂಗೀತದ ಗುರು. ಅದರಲ್ಲಿ ಪ್ರಸಾರವಾಗುತ್ತಿದ್ದ ಹಾಡಿನ ಸಾಹಿತ್ಯವನ್ನು ಬರೆದಿಟ್ಟುಕೊಂಡು, ಚರಣ, ಆಲಾಪಗಳನ್ನು ಗಮನವಿಟ್ಟು ಕೇಳಿ ಅಭ್ಯಾಸ ಮಾಡುತ್ತಿದ್ದರು. ಜೊತೆಗೆ ತನ್ನೂರಿನ ಮಹಿಳೆಯರು ಹಾಡುತ್ತಿದ್ದ ಜಾನಪದ ಹಾಡುಗಳನ್ನು ಕುತೂಹಲದಿಂದ ಕೇಳಿಸಿಕೊಳ್ಳುತ್ತಾ, ಅವುಗಳನ್ನು ಹಾಡುತ್ತಾ ಬೆಳೆದರು. ಜನಪದ ಗೀತೆಗಳಲ್ಲಿ ಆಸಕ್ತಿ ಗ್ರಾಮೀಣ ಸೊಗಡು ಹಾಗೂ ಜನಪದರ ಜೀವನಶೈಲಿ ಪ್ರತಿಬಿಂಬಿಸುವ ಗೀತೆಗಳಲ್ಲಿ ಇವರಿಗೆ ಹೆಚ್ಚಿನ ಒಲವು. ತಾಯಿ, ತವರು, ಬಾಣಂತನದ ಹಾಡು, ಸೋಬಾನೆ ಪದ ಹೀಗೆ ಹಳ್ಳಿ ಜನಜೀವನದ ಬದುಕು–ಬವಣೆಗಳನ್ನು ತಮ್ಮ ಮಧುರ ಕಂಠದಿಂದ ಕಣ್ಮುಂದೆ ಬರುವಂತೆ ಕಟ್ಟಿಕೊಡುತ್ತಾರೆ. ಇವರ ಶಾರೀರ ಸೌಂದರ್ಯ ಮೆಚ್ಚಿದ ರಾಜ್ಯದ ಹಲವು ಶಾಲಾ–ಕಾಲೇಜುಗಳು, ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನಿಸಿವೆ. ಜತೆಗೆ, ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ಕರ್ನಾಟಕ ಸಂಸ್ಥೆ ಮೈಸೂರಿನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ‘ಸಾಂಸ್ಕೃತಿಕ ಹಬ್ಬ’ದಲ್ಲಿ ಜನಪದ ಗೀತೆಯ ಮೂಲಕ ತಾಲ್ಲೂಕನ್ನು ಪ್ರತಿನಿಧಿಸಿದ್ದರು. ಕನಕಪುರದ ರೂರಲ್ ಪದವಿ ಕಾಲೇಜಿನಲ್ಲಿ ನಡೆದ ಗಮಕ ವಾಚನದಲ್ಲಿ ಸತತ ಮೂರು ವರ್ಷಗಳವರೆಗೂ ಪಾಲ್ಗೊಂಡರು. ರಾಜ್ಯದ ವಿವಿಧ ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಜನಪದ, ಭಾವಗೀತೆ, ಭಕ್ತಿಗೀತೆ, ಕ್ರಾಂತಿಗೀತೆಗಳನ್ನು ಹಾಡಿದ್ದಾರೆ. ವೇದಿಕೆಗಳಲ್ಲಿ ಹಾಡುತ್ತಿದ್ದ ನಾಗು ಅವರ ಜನಪದ ಗೀತೆಯ ಗುಂಗನ್ನು ಗುರುತಿಸಿದ ಆಕಾಶವಾಣಿಯ ಶಿವಸ್ವಾಮಿ ಹಾಗೂ ರಘುಪತಿಗೌಡ ಅವರು ‘ಯುವವಾಣಿ’ಯಲ್ಲಿ ಅವರಿಗೆ ಅವಕಾಶ ಒದಗಿಸಿದ್ದರು. ಅಲ್ಲೂ ತಮ್ಮ ಹಾಡುಗಾರಿಕೆಯಿಂದ ಸೈ ಎನಿಸಿಕೊಂಡ ಇವರು ಕೇಳುಗರಿಂದ ಅಪಾರ ಮೆಚ್ಚುಗೆ ಗಳಿಸಿದರು. ನಾಗು ಅವರಿಗೆ ಸಂಗೀತದ ಜತೆಗೆ, ಬರಹದಲ್ಲೂ ಅಪಾರ ಆಸಕ್ತಿಯಿದೆ. ಇವರ ‘ಜನಪದ ಸಾಹಿತ್ಯ’, ‘ಯುವಜನರಲ್ಲಿ ಆತ್ಮಹತ್ಯೆ’ ವಿಷಯದ ಭಾಷಣಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಕಿರುಚಿತ್ರಗಳಲ್ಲಿ ನಟನೆ ಸಂಗೀತ, ಸಾಹಿತ್ಯ, ಬರವಣಿಗೆಯ ಜೊತೆ ಜೊತೆಗೆ ನಟನಾ ಕ್ಷೇತ್ರದಲ್ಲೂ ಹೆಜ್ಜೆ ಗುರುತು ಮೂಡಿಸುತ್ತಿರುವ ಇವರಿಗೆ ರಂಗಭೂಮಿಯ ಒಲವೂ ಇದೆ. ನಿರ್ದೇಶಕ ನಾಗಭೂಷಣ್.ಕೆ ನಿರ್ದೇಶನದ 2017ರಲ್ಲಿ ಬಿಡುಗಡೆಯಾದ ‘ದ ಬೇರ್ ಟ್ರೂತ್’ ಕಿರುಚಿತ್ರದಲ್ಲಿ ತಮ್ಮ ನಟನೆಯ ಛಾಪು ಮೂಡಿಸಿದ್ದಾರೆ. ಹಾಗೆಯೇ ನಾಸೀರ್ ಹುಸೇನ್ ನಿರ್ದೇಶನದ ‘ಕವಡೆ’ ಚಿತ್ರದಲ್ಲೂ ನಟಿಸಿದ್ದಾರೆ. ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್, ಲೋಕಾಯುಕ್ತ ನಿವೃತ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ ಅವರ ಕಾರ್ಯಕ್ರಮಗಳಲ್ಲಿ ಹಾಡುವ ಮೂಲಕ ಅವರಿಂದ ಭೇಷ್ ಎನಿಸಿಕೊಂಡಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ, ತಾಲ್ಲೂಕು ಅಧಿಕಾರಿಗಳು, ನಿಲಯ ಪಾಲಕರು ಇವರ ಚಟುವಟಿಕೆ ಗಮನಿಸಿ ‘ಬಹುಮುಖ ಪ್ರತಿಭೆ’ ಎಂದು ಸನ್ಮಾನಿಸಿದ್ದಾರೆ. ಸದ್ಯ ಬಿ.ಇಡಿ ಮಾಡುತ್ತಿರುವ ನಾಗು ಜಾನಪದದ ಕಂಪನ್ನು ವಿಶ್ವದಾದ್ಯಂತ ಪಸರಿಸುವ ಕನಸು ಹೊಂದಿದ್ದಾರೆ. ‘ಇಂದಿನ ಯುವಜನರು ಗ್ರಾಮೀಣ ಸೊಗಡು ಹಾಗೂ ಜಾನಪದ ಕಲೆಗಳಿಂದ ದೂರಾಗುತ್ತಿರುವುದು ಬೇಸರದ ಸಂಗತಿ’ ಎನ್ನುವ ಅವರು ತಳಮಟ್ಟದಲ್ಲಿ ಯುವಜನರನ್ನು ಒಂದುಗೂಡಿಸಿ ಜನಪದ ತಂಡ ಕಟ್ಟುವ ಗುರಿ ಹೊಂದಿದ್ದಾರೆ.

courtsey:prajavani.net

“author”: “ಪ್ರದೀಪ ಟಿ.ಕೆ”,

https://www.prajavani.net/artculture/music/nagushree-talent-hunt-650217.htm

Leave a Reply