‘ಸಂಗೀತವೇ ಧ್ಯಾನ’

‘ಸಂಗೀತವೇ ಧ್ಯಾನ’

ಯಾರಿಗೆ ಸರಿಯಾಗಿ ಸಮಯ ನಿರ್ವಹಣೆ ಮಾಡಲು ಬರುವುದಿಲ್ಲವೋ ಅವರಲ್ಲಿ ಒತ್ತಡ ಕಾಣಿಸಿಕೊಳ್ಳುತ್ತದೆ. ಸಂಗೀತ ಒಂದು ಉತ್ತಮ ಹಾಗೂ ಪರಿಣಾಮಕಾರಿ ಒತ್ತಡ ನಿರ್ವಾಹಕ.ಎನ್ನುವುದು ಗಾಯಕಿ ಅರ್ಚನಾ ಉಡುಪ ಅವರ ಮಾತು.

ನಾನು ಬೆಳಿಗ್ಗೆ ರೆಕಾರ್ಡಿಂಗ್ ಹೋಗಬೇಕು. ಎದ್ದು ತಿಂಡಿ ಮಾಡಬೇಕು, ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ಮನೆ ಕೆಲಸ ಮಾಡಬೇಕು – ಹೀಗೆಲ್ಲಾ ಇದ್ದಾಗ ನಾನು ಎದ್ದೇಳುವುದು ಕಾಲು ಗಂಟೆ ತಡವಾದರೂ ಆ ಕ್ಷಣದಿಂದಲೇ ಒತ್ತಡ ಕಾಡಲಾರಂಭಿಸುತ್ತದೆ. ಆಮೇಲಿನದೆಲ್ಲಾ ಗಡಿಬಿಡಿ ಹಾಗೂ ಒತ್ತಡವೇ. ಎರಡು ಹೆಜ್ಜೆ ಹಾಕುವ ಕಡೆ ಹತ್ತು ಹೆಜ್ಜೆ ಹಾಕಬೇಕು. ಈ ಗಡಿಬಿಡಿ ಗೊಂದಲವೇ ಒತ್ತಡವಾಗುತ್ತದೆ. ಅದು ನಮ್ಮಲ್ಲಿ ಆತಂಕವನ್ನು ಹುಟ್ಟುಹಾಕುತ್ತದೆ.

ನಮ್ಮ ಕ್ಷೇತ್ರದಲ್ಲಿ, ಅದರಲ್ಲೂ ಗಾಯಕಿಯರಿಗೆ ಮನೆ ಒಳಗಿನ ಕೆಲಸವನ್ನು ನಿಭಾಯಿಸಿ ರೆರ್ಕಾಡಿಂಗ್ ಅಥವಾ ಕಾರ್ಯಕ್ರಮಗಳಿಗೆ ಹೋಗಬೇಕಿರುತ್ತದೆ. ಮನೆಯ ಕೆಲಸವನ್ನೆಲ್ಲಾ ಬೇರೆಯವರು ಮಾಡುತ್ತಾರೆ; ನಾವು ಅವರು ಮಾಡಿಟ್ಟಿರುವ ತಿಂಡಿ ತಿಂದು ನೇರವಾಗಿ ರೆರ್ಕಾಡಿಂಗ್ ನಡೆಯುವ ಸ್ಥಳಕ್ಕೆ ಹೋಗುವುದಲ್ಲ! ಮನೆಯಲ್ಲಿ ಎಲ್ಲಾ ಕೆಲಸವನ್ನು ಮಾಡಿ, ಮನೆಯನ್ನು ಒಪ್ಪ–ಓರಣವಾಗಿಸಿ ಹೊರಡಬೇಕು. ಮಹಿಳೆಯರು ಮಲ್ಟಿಟಾಸ್ಕ್‌ಗಳನ್ನು ನಿಭಾಯಿಸಬೇಕು.

ಒಮ್ಮೊಮ್ಮೆ ಸರಿಯಾಗಿ ನಿದ್ದೆಯಾಗಿರುವುದಿಲ್ಲ, ಹೊಟ್ಟೆ ತುಂಬಾ ಊಟ ಮಾಡಲು ಆಗಿರುವುದಿಲ್ಲ. ಎಷ್ಟೋ ಬಾರಿ ಒಂದು ಕೈಯಲ್ಲಿ ಕೆಲಸ ಮಾಡುತ್ತಲೇ, ಇನ್ನೊಂದು ಕೈಯಲ್ಲಿ ತಿಂಡಿ ತಿನ್ನುತ್ತೇವೆ!

ಒಳ್ಳೆಯ ನಿದ್ದೆ ಮತ್ತು ಹೊಟ್ಟೆ ತುಂಬ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಇವೆರಡು ಸರಿಯಾಗಿ ಸಿಗದಿದ್ದಾಗ ಆಸಿಡಿಟಿ ಕಾಡುತ್ತದೆ; ಅದು ನನ್ನ ಅನುಭವಕ್ಕೂ ಬಂದಿದೆ. ನನ್ನ ಕಂಠದ ಮೇಲೂ ಪರಿಣಾಮ ಬೀರಿದೆ. ಎಷ್ಟೋ ಸಲ ನಿದ್ದೆ ಕಡಿಮೆಯಾಗಿ ಹಾಡುವಾಗ ನನ್ನ ಸ್ವರ ಡಲ್ ಆಗಿದ್ದೂ ಉಂಟು. ಹಾಡಲು ಎನರ್ಜಿ ಸಾಲದೇ ಸರಿಯಾಗಿ ಹಾಡಲು ಆಗದ ಪರಿಸ್ಥಿತಿ ಎದುರಾಗಿದ್ದೂ ಇದೆ. ಆದರೆ ಅವನ್ನೆಲ್ಲಾ ಎದುರಿಸುವ ಶಕ್ತಿ ನಮ್ಮಲ್ಲಿರಬೇಕು.

ದೇಹಕ್ಕೆ ಸುಸ್ತು ಹಾಗೂ ಮನಸ್ಸಿಗೆ ಆಯಾಸವಾದಾಗ ಒತ್ತಡ ಕಾಣಿಸಿಕೊಳ್ಳುವುದು ಸಾಮಾನ್ಯ. ದೇಹದಲ್ಲಿ ಚೈತನ್ಯ ಇಲ್ಲದಿದ್ದಾಗ ಯಾವುದೇ ಕೆಲಸವನ್ನು ಮಾಡಲು ಮನಸ್ಸು ಸಹಕರಿಸುವುದಿಲ್ಲ. ನಾವು ಮಾಡುವ ಕೆಲಸ ಸರಿಯಾಗಿ ಮಾಡಲು ಆಗುತ್ತೋ, ಇಲ್ಲವೋ ಎಂದಾಗ ನಮ್ಮಲ್ಲಿ ಒತ್ತಡ ಕಾಡುತ್ತದೆ. ಆಗ ನಮ್ಮೊಳಗೆ ಆತಂಕ ಹಾಗೂ ಭಯ ಕಾಣಿಸಿಕೊಳ್ಳುತ್ತದೆ.

ನನಗೆ ಮನೆಯಲ್ಲಿ ಸಹಕಾರ ಚೆನ್ನಾಗಿದೆ. ಆ ಕಾರಣಕ್ಕೆ ನನಗೆ ಅಷ್ಟೊಂದು ಒತ್ತಡ ಕಾಡುವುದಿಲ್ಲ. ನಾನು ಮೊದಲು ಟೆನ್ಷನ್ ಮಾಡಿಕೊಳ್ಳುತ್ತಿದ್ದೆ. ಆದರೆ ಕಳೆದ ಎರಡು ವರ್ಷದಿಂದ ಒತ್ತಡ ಪ್ರಮಾಣ ನನ್ನಲ್ಲಿ ಕಡಿಮೆಯಾಗಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಆಗುವುದೆಲ್ಲಾ ಆಗಿಯೇ ತೀರುತ್ತದೆ. ಯಾರು ಏನು ಮಾಡಿದರು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆಗುವುದೆಲ್ಲಾ ಆಗಲಿ – ಎಂದು ಬಿಟ್ಟುಬಿಡುತ್ತೇನೆ. ನಾನು ಯಾವುದಕ್ಕೂ ಗಡಿಬಿಡಿ ಮಾಡಿಕೊಳ್ಳುವುದಿಲ್ಲ. ಎಲ್ಲಾ ಕೆಲಸಗಳೂ ನೀಟಾಗಿ ಆಗಬೇಕು. ಒಂದು ಕೆಲಸಕ್ಕೆ ಬೇರೆಯವರು ಒಂದು ಗಂಟೆ ತೆಗೆದುಕೊಂಡರೆ ನಾನು ಒಂದೂವರೆ ಗಂಟೆ ತೆಗೆದುಕೊಳ್ಳುತ್ತೇನೆ. ಇದು ನನಗೆ ಆರಾಮವಾಗಿರಲು ಸಹಾಯ ಮಾಡುತ್ತದೆ.

ಕೆಲವು ಸ್ನೇಹಗಳು ನನಗೆ ಮನಸ್ಸಿಗೆ ತುಂಬಾ ಒತ್ತಡ ನೀಡಿದ್ದು ಇದೆ. ಅಂತಹ ಸ್ನೇಹಗಳು ಮುರಿದುಬಿದ್ದಿವೆ; ನಾನಾಗಿಯೇ ಅಂತಹವನ್ನು ಮುರಿದುಕೊಂಡಿದ್ದೂ ಇದೆ; ನಮ್ಮ ಸ್ನೇಹಕ್ಕೆ ಅವರು ಅರ್ಹರಲ್ಲ, ಅಂತಹವರ ಸ್ನೇಹದಿಂದ ನನ್ನ ಮನಸ್ಸಿನ ನೆಮ್ಮದಿ ಹಾಳಾಗುತ್ತದೆ ಎಂದು ಅನ್ನಿಸುವ ಸ್ನೇಹಗಳನ್ನು ನಾನು ಕಡಿದುಕೊಂಡಿದ್ದೇನೆ.
ಹಿಂದಿನ ಕಾಲದಲ್ಲಿ ಇಷ್ಟೊಂದು ಒತ್ತಡವಿರಲ್ಲಿಲ್ಲ, ಆಗ ಜಗತ್ತು ಇಷ್ಟು ಸ್ಪರ್ಧಾತ್ಮಕವಾಗಿರಲಿಲ್ಲ. ಮನುಷ್ಯನಿಗೆ ತೃಪ್ತಿ, ನೆಮ್ಮದಿ ಇತ್ತು. ಈಗಿನವರು ಹಾಗಲ್ಲ, ಅವರಿಗೆ ಎಷ್ಟಿದ್ದರೂ ಸಾಲುವುದಿಲ್ಲ. ನಮ್ಮ ಹಣೆಯಲ್ಲಿ ಎಷ್ಟು ಸಿಗಬೇಕು ಎಂದು ಬರೆದಿದೆಯೋ ಅಷ್ಟೇ ನಮಗೆ ಸಿಗುವುದು; ಅದನ್ನು ಮೀರಿದ್ದು ನಮಗೆ ಸಿಗುವುದಿಲ್ಲ. ನಾವು ಬೇರೆಯವರಿಂದ ಏನನ್ನು ಪಡೆಯಲು ಸಾಧ್ಯವಿಲ್ಲ; ನಮ್ಮಿಂದ ಬೇರೆಯವರು ಏನನ್ನೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಇರುವುದರಲ್ಲೇ ಸಂತಸವನ್ನು ಕಾಣಬೇಕು. ಇವತ್ತಿನ ದಿನವನ್ನು ಚೆನ್ನಾಗಿ ಕಳೆಯಬೇಕು. ಆದಷ್ಟು ಗಜಿಬಿಜಿ, ಜಗಳದಿಂದ ದೂರವಿರಬೇಕು. ಇವೆಲ್ಲವೂ ನಮ್ಮಿಂದ ಒತ್ತಡವನ್ನು ದೂರವಾಗಿರಿಸುತ್ತವೆ.

ಧ್ಯಾನಕ್ಕೆ ಇನ್ನೊಂದು ಹೆಸರೇ ಸಂಗೀತ. ಸಂಗೀತವೂ ಒಂದು ರೀತಿಯ ಯೋಗ. ನನಗೆ ಮಾನಸಿಕ ಕ್ಲೇಶಗಳು ಎದುರಾದಾಗ, ತುಂಬಾ ಒತ್ತಡ ಎನ್ನಿಸಿದಾಗ ಉಸಿರಾಟದಲ್ಲಿ ಏರುಪೇರಾದ ಅನುಭವವಾಗುತ್ತದೆ. ಆಗ ನಾನು ಸುಮ್ಮನೆ ಹೋಗಿ ಕುಳಿತು ಸಂಗೀತಾಭ್ಯಾಸ ಮಾಡುತ್ತೇನೆ. ಯೋಗ ಮಾಡಿದಾಗ ಹೇಗೆ ಮೈ ಬೆವರುತ್ತದೋ ಹಾಗೇ, ಚಕ್ಕಳಮಕ್ಕಳ ಹಾಕಿ ಕುಳಿತು ಅರ್ಧ ಗಂಟೆ ಹಾಡಿದಾಗ ಮೈ ಬೆವರಲು ಆರಂಭಿಸುತ್ತದೆ. ಆಗ ಹಿಂದಿನ ಎಲ್ಲ ಕೆಟ್ಟ ಘಟನೆಗಳು ಮರೆತು ಒಂದು ಹೊಸ ಆಹ್ಲಾದಕರ ಭಾವನೆ  ಮೂಡುತ್ತದೆ. ಸಂಗೀತ ಒಂದು ಉತ್ತಮ ಹಾಗೂ ಪರಿಣಾಮಕಾರಿ ಒತ್ತಡ ನಿರ್ವಾಹಕ.

Courtesy : Prajavani.net

http://www.prajavani.net/news/article/2018/01/03/544520.html

Leave a Reply