“ಹಾಸಣಗಿ ಭಟ್ಟರ ಕಾಯಂ ಗ್ರಾಮ ವಾಸ್ತವ್ಯ”,

ಹಾಸಣಗಿ ಗಣಪತಿ ಭಟ್ಟರು ಅಂತರರಾಷ್ಟ್ರೀಯ ಮಟ್ಟದ ಹಿಂದೂಸ್ತಾನಿ ಸಂಗೀತ ಕಲಾವಿದರು. ದೇಶ, ವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಾರೆ. ಪುಣೆಗೆ ಹೋಗ್ತಾರೆ. ಮುಂಬೈಗೆ ಹೋಗ್ತಾರೆ. ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೊ, ಚಿಕಾಗೊ, ಬೋಸ್ಟನ್, ವಾಷಿಂಗ್ಟನ್ ಹೀಗೆ ಎಲ್ಲ ಕಡೆ ಕಾರ್ಯಕ್ರಮ ನೀಡುತ್ತಾರೆ. ಹಾಗಂತ ಅವರು ಯಾವ ದೊಡ್ಡ ನಗರದಲ್ಲಿ ಕಾಯಂ ಉಳಿಯುವುದಿಲ್ಲ. ಕಾರ್ಯಕ್ರಮ ಮುಗಿಸಿ ತಮ್ಮ ಗ್ರಾಮ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕಿನ ಹಾಸಣಗಿಗೆ ವಾಪಸು ಬರುತ್ತಾರೆ. ಅದೇ ಅವರ ಕರ್ಮಭೂಮಿ. ಅಲ್ಲಿ ಸಂಗೀತ ಬಿತ್ತುತ್ತಾರೆ. ಸಂಗೀತವನ್ನೇ ಬೆಳೆಯುತ್ತಾರೆ. ಅವರದ್ದು ಕಾಯಂ ಗ್ರಾಮ ವಾಸ್ತವ್ಯ. ಯಾಕೆ ಹೀಗೆ? ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ಮಾತಿಗೆ ಸಿಕ್ಕ ಗಣಪತಿ ಭಟ್ಟರು ತಮ್ಮ ಗ್ರಾಮ ವಾಸ್ತವ್ಯದ ಗುಟ್ಟು ಬಿಚ್ಚಿಟ್ಟರು. ಜೊತೆಗೆ ‘ನೀವು ಅಷ್ಟೈಶ್ವರ್ಯ ಕೊಡ್ತೇನೆ ಎಂದರೂ ನಾನು ಹಾಸಣಗಿ ಬಿಟ್ಟು ಬರುವುದಿಲ್ಲ’ ಎಂದೂ ಶಪಥ ಮಾಡಿದರು. ‘ಒಂದು ಕಾಲಕ್ಕೆ ನಾನು ಹಾಸಣಗಿಯಲ್ಲಿ ಇರುವುದು ಅನಿವಾರ್ಯವಾಗಿತ್ತು. ನಾನು ದತ್ತಕಕ್ಕೆ ಬಂದವನು. ನನ್ನನ್ನು ದತ್ತು ಪಡೆದಿದ್ದೇ ನಾನು ಅವರ ವಂಶ ಉದ್ಧಾರ ಮಾಡ್ತೀನಿ ಅಂತ. ಅವರ ಆಸ್ತಿಪಾಸ್ತಿ ನೋಡಿಕೊಳ್ಳುತ್ತೇನೆ ಅಂತ. ನನಗೆ ನಗರದಲ್ಲಿ ಎಷ್ಟೇ ಜನಪ್ರಿಯತೆ ಇದ್ದರೂ ನಾನು ಹಾಸಣಗಿಗೇ ವಾಪಸು ಬರಲು ಇದೇ ಕಾರಣ. ಸಂಗೀತ ಎನ್ನುವುದು ನಗರದಲ್ಲಿಯೇ ಯಾಕಿರಬೇಕು. ಹಳ್ಳಿಯಲ್ಲಿಯೂ ಇರಬಹುದಲ್ವಾ’ ಎಂದು ಪ್ರಶ್ನೆ ಮಾಡ್ತಾರೆ. ‘ಹೋಗಲಿ, ಎಂದಿಗೂ ನಿಮಗೆ ಹಳ್ಳಿಬಿಟ್ಟು ಹೋಗಬೇಕು ಎಂದೇ ಅನಿಸಿಲ್ಲವೇ‘ ಎಂದು ಕೇಳಿದರೆ ಅದಕ್ಕೊಂದು ಸ್ವಾರಸ್ಯಕರ ಕತೆ ಹೇಳ್ತಾರೆ. ‘1985ರಲ್ಲಿ ಪುಣೆ ಸವಾಯಿ ಗಂಧರ್ವ ಸಮಿತಿಯಲ್ಲಿ ನನ್ನ ಮೊದಲ ಕಾರ್ಯಕ್ರಮ. ನನಗೆ ಹಾರ್ಮೋನಿಯಂ ಮತ್ತು ತಬಲಾ ಸಾಥ್ ನೀಡುವವರೂ ಮಹಾರಾಷ್ಟ್ರದವರೇ ಆಗಿದ್ದರು. ನನಗೆ ಯಾರ ಪರಿಚಯವೂ ಇರಲಿಲ್ಲ. ಗ್ರೀನ್ ರೂಂನಲ್ಲಿ ಒಂದು ಕಡೆ ಅಭ್ಯಾಸ ಮಾಡುತ್ತಾ ಕುಳಿತಿದ್ದೆ. ಆಗ ಎದುರಿಗೆ ಭೀಮಸೇನ ಜೋಶಿ ಬಂದರು. ಅವರನ್ನು ನೋಡಿ ನನಗೆ ಹುಲಿಯನ್ನೇ ನೋಡಿದ ಹಾಗಾಯ್ತು. ‘ಏನ್ ಹಾಡ್ತೀರಾ ಇವತ್ತು?’ ಎಂದು ಕೇಳಿದರು. ‘ಮಾಲಕಂಸ್ ಮತ್ತು ಬಾಗೇಶ್ರೀ ಹಾಡ್ತೇನೆ’ ಎಂದೆ. ‘ಏನಾದರೂ ಹಾಡಿ. ಆದರೆ ಚಲೋ ಹಾಡಿ’ ಎಂದು ಆಶೀರ್ವದಿಸಿದರು. ಪಕ್ಕದಲ್ಲಿಯೇ ಇದ್ದ ಮಾಧವ ಗುಡಿ ಅವರನ್ನು ಕರೆದು ‘ಏ ಮಾಧವ, ಅವರ ತಂಬೂರಿ ಸೆಟ್ ಮಾಡಿಕೊಡು’ ಎಂದರು. ನಾನು ವೇದಿಕೆಗೆ ಹೋದ ನಂತರ ಅವರು ಬಂದು ತಂಬೂರಿ ಸೆಟ್ ಮಾಡಿಕೊಟ್ಟರು. ನಾನು ಎಷ್ಟು ಹೆದರಿದ್ದೆ ಎಂದರೆ ನನಗೆ ತಬಲಾ ಸಾಥಿನ ಶಬ್ದ ಕೂಡಾ ಕೇಳಿಸುತ್ತಿರಲಿಲ್ಲ. ನನ್ನ ಎದೆಬಡಿತವೇ ಜೋರಾಗಿ ಕೇಳಿಸುತ್ತಿತ್ತು. ಎದುರಿಗೆ ಕುಳಿತಿದ್ದರು ಭೀಮಸೇನ ಜೋಶಿ. ನನ್ನ ಕಾರ್ಯಕ್ರಮ ಆರಂಭವಾಗಿದ್ದು ರಾತ್ರಿ 12 ಗಂಟೆಗೆ. ನಾನು ಮೊದಲು ಮಾಲಕಂಸ್ ಹಾಡಿದೆ. ಸುಮಾರು 15 ನಿಮಿಷದ ನಂತರ ಮೊದಲ ಚಪ್ಪಾಳೆ ಬಿತ್ತು. ಅದು ನನ್ನಲ್ಲಿ ಉತ್ಸಾಹ ಮೂಡಿಸಿತು. ನಂತರ ಇನ್ನೂ ಹಲವಾರು ಬಾರಿ ಚಪ್ಪಾಳೆ ಬಂತು. ಕೊನೆಗೆ ಬಾಗೇಶ್ರೀ ಹಾಡಿ ನನ್ನ ಒಂದು ಗಂಟೆಯ ಅವಧಿ ಮುಗಿಸಿದೆ. ಆದರೆ ಜನರು ನನಗೆ ಏಳಲು ಕೊಡಲಿಲ್ಲ. ‘ಒನ್ಸ್ ಮೋರ್’ ಎಂದು ಕೂಗಿದರು. ಅದೇ ಸಮಯದಲ್ಲಿ ಒಬ್ಬರು ವಯಸ್ಸಾದವರು ಎದ್ದು ಬಂದು ‘ತಮಾ, ಈಗ ಚಲೋ ಕಾದದ, ಹಾಕಿ ಹಣಿ ಒಂದ್ ಮರಾಠಿ ರಂಗಗೀತೆ’ ಎಂದು ಹೇಳಿ ಹೋದರು. ನಾನು ಮರಾಠಿ ರಂಗಗೀತೆ ಹಾಡಿದೆ. ಭಾರೀ ಪ್ರತಿಕ್ರಿಯೆ ಬಂತು. ಒಂದು ಗಂಟೆ ಹಿಂದೆ ನಾನು ಅಪರಿಚಿತನಾಗಿದ್ದೆ. ಕಾರ್ಯಕ್ರಮ ಮುಗಿದಾಗ ನನ್ನ ಸುತ್ತ ನೂರಾರು ಮಂದಿ ಆಟೊಗ್ರಾಫ್‌ಗೆ ನಿಂತಿದ್ದರು. ಮುಂದೆ ಪುಣೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ಬಂದವು. ಪುಣೆ ಪತ್ರಕರ್ತರು ನನ್ನ ಬಗ್ಗೆ ಬಹಳ ಬರೆದರು. ನಾನು ಮಹಾರಾಷ್ಟ್ರದಲ್ಲಿ ಬಹಳ ಫೇಮಸ್ ಆಗಿಬಿಟ್ಟೆ. ಆದರೆ, ಕಾರ್ಯಕ್ರಮ ಮುಗಿಸಿಕೊಂಡು ನಾನು ಹಾಸಣಗಿಗೆ ಬಂದರೆ ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ನನ್ನ ಲಗೇಜ್ ನಾನೇ ತೆಗೆದುಕೊಂಡು ಹೋಗಬೇಕು. ಮನೆಯಲ್ಲಿ ಹೆಂಡತಿಗೂ ಅಷ್ಟೆ ‘ಏನೇ ಚಾ ಕೊಡ್ತ್ಯನೇ’ ಎಂದು ನಾನೇ ಕೇಳಬೇಕು. ಇಲ್ಲಿ ನಾನು ಅಷ್ಟು ಅಪರಿಚಿತ’. ಹೀಗೆ ಹೇಳಿ ಒಂದು ನಗು ಹಾರಿಸಿದರು. ‘ಆಗ ನನಗೆ ದ್ವಂದ್ವ ಕಾಡಿದ್ದು ನಿಜ. ಪುಣೆಗೇ ಹೋಗಿ ಯಾಕೆ ಇರಬಾರದು ಎಂದು ಚಿಂತಿಸಿದ್ದೂ ಇದೆ. ಆದರೆ ಹಾಸಣಗಿ ನನ್ನ ಬಿಟ್ಟುಕೊಡಲಿಲ್ಲ. ಇಲ್ಲಿಯೇ ಇದ್ದು ಏನಾದರೂ ಸಾಧಿಸಬೇಕು ಎಂದು ನಮ್ಮ ಮನೆಯಲ್ಲಿಯೇ ಸಂಗೀತಾಸಕ್ತರಿಗೆ ಊಟ ಹಾಕಿ ವಸತಿ ನೀಡಿ ಸಂಗೀತ ಕಲಿಸಲು ಶುರು ಮಾಡಿದೆ. 1991ರಲ್ಲಿ ನನ್ನ ಗುರುಗಳಾದ ಬಸವರಾಜ ರಾಜಗುರು ತೀರಿಕೊಂಡರು. ಅವರ ನೆನಪಿನಲ್ಲಿ ನಮ್ಮ ಊರಿನಲ್ಲಿಯೇ ಸಂಗೀತ ಕಾರ್ಯಕ್ರಮ ಏರ್ಪಡಿಸಲು ಆರಂಭಿಸಿದೆ. 16 ವರ್ಷ ಇದು ನಡೆಯಿತು. ದೇಶದ ಬಹುತೇಕ ಎಲ್ಲ ಪ್ರಮುಖ ಸಂಗೀತಗಾರರೂ ಇಲ್ಲಿ ಬಂದು ಹೋದರು. ‘ನಿಧಾನಕ್ಕೆ ನಮ್ಮ ಊರು, ತಾಲ್ಲೂಕು, ಜಿಲ್ಲೆ, ರಾಜ್ಯದಲ್ಲಿಯೂ ನಾನು ಜನಪ್ರಿಯ ಆದೆ. ಹಾಸಣಗಿಯಲ್ಲಿ ನಾನು ಉಳಿದೆ. ಹಾಸಣಗಿ ನನ್ನನ್ನು ಉಳಿಸಿತು. ಹಾಸಣಗಿ ಎಷ್ಟು ಚಲೋ ಊರು ಎಂದರೆ ಮನೆಯ ಹಜಾರದಲ್ಲಿ ಒಂದು ಕುರ್ಚಿ ಹಾಕಿಕೊಂಡು ಕುಳಿತುಬಿಟ್ಟರೆ ಇಡೀ ದಿನ ಹಾಗೆಯೇ ಕಳೆದು ಬಿಡಬಹುದು. ಹೆಂಡತಿ ಬಂದು ‘ಏನು ಸ್ನಾನಗೀನ ಮಾಡುತ್ತೀರೋ’ ಎಂದು ಎಬ್ಬಿಸುವ ತನಕ’. ಗಣಪತಿ ಭಟ್ಟರು ಹೀಗೆ ಸಂಗೀತ ಹಾಡಿದಂತೆಯೇ ತಮ್ಮ ಕತೆಯನ್ನು ಹೇಳುತ್ತಾ ಹೋದರು. ‘ನನ್ನ ಸಂಗೀತದ ಪಯಣ ಬಹಳ ವಿಚಿತ್ರ. ನಾನು ಎಸ್ಎಸ್ಎಲ್‌ಸಿ ಮಾಡುವವರೆಗೂ ನನಗೆ ಸಂಗೀತದ ಬಗ್ಗೆ ಆಸಕ್ತಿ ಏನೂ ಇರಲಿಲ್ಲ. ನಮ್ಮ ಊರಿನವರೇ ಒಬ್ಬರು ಧಾರವಾಡಕ್ಕೆ ಹೋಗಿ ಎಂ.ಎ. ಮಾಡಿಕೊಂಡು ಬಂದರು. ಅವರು ಕರೀಂ ಖಾನ್ ಅವರಲ್ಲಿ ಸಿತಾರ್ ಕಲಿತಿದ್ದರು. ನಮ್ಮ ಮನೆಗೂ ಬಂದು ಸಿತಾರ್ ನುಡಿಸುತ್ತಿದ್ದರು. ಸಿತಾರ್ ಹಿಡಿಯುವ ಅವರ ಶೈಲಿ, ನುಡಿಸುವ ಅವರ ಗಾಂಭೀರ್ಯ ಎಲ್ಲ ನೋಡಿ ನನಗೂ ಸಿತಾರ್ ಕಲಿಯಬೇಕು ಎಂದು ಅನ್ನಿಸಿ ನಾನೂ ಧಾರವಾಡದ ಕರ್ನಾಟಕ ಕಾಲೇಜಿಗೆ ಹೋಗಿ ಅದೇ ಕರೀಂ ಖಾನ್ ಅವರ ಬಳಿಯೇ ಸಿತಾರ್ ಕಲಿಯಲು ಆರಂಭಿಸಿದೆ. ಆಗ ನನಗೆ ಧನ್ಯತಾಭಾವ. ಆದರೆ ಸಿತಾರ್ ನನ್ನ ಒಳಗೆ ಇಳಿಯಲೇ ಇಲ್ಲ. ನಾನು ಗಾಯಕ ಆಗಬೇಕು ಎಂದುಕೊಂಡೆ. ನನ್ನ ಅಪ್ಪ ಕೂಡ ‘ಚಲೋ ಅವಾಜ್ ಇದೆ. ಗಾಯಕ ಆಗು. ಸಿತಾರ್ ಗಿತಾರ್ ಎಲ್ಲ ಬೇಡ’ ಎಂದರು. ಧಾರವಾಡದ ಮಾಳಮಡ್ಡಿಯಲ್ಲಿ ನನ್ನ ರೂಂ. ಅದರ ಎದುರಿಗೇ ಬಸವರಾಜ ರಾಜಗುರು ಅವರ ಮನೆ. ನನ್ನ ಸ್ನೇಹಿತ ಹಬ್ಬು ಅಂತ ಇದ್ದ. ಅವನನ್ನು ಕರೆದುಕೊಂಡು ಹೋದೆ. ನಾನು ಹೋದ ತಕ್ಷಣ ಎದುರಿಗೆ ಒಬ್ಬರು ಬಂದರು. ಪಟ್ಟೆಪಟ್ಟೆ ಅಂಡರ್ವೇರ್ ಹಾಕಿಕೊಂಡಿದ್ದರು. ಹೊಲಿಸಿಕೊಂಡ ಬನಿಯನ್. ತಲೆಗೆ ಡಿಸೈನ್ಡ್‌ ಟೊಪ್ಪಿಗೆ. ಒಂದು ಕನ್ನಡಕ. ಅದೇ ವ್ಯಕ್ತಿ ರಾಜಗುರು ಎಂದು ಗೊತ್ತಾಗದೆ ‘ಬಸವರಾಜ ರಾಜಗುರು ಎಲ್ಲಿದ್ದಾರೆ’ ಎಂದು ಅವರನ್ನೇ ಪ್ರಶ್ನಿಸಿದ್ದೆ. ‘ನಾನೇ ಇದ್ದೀನಿ ಏನಾಗಬೇಕಾಗದ’ ಎಂದು ಅವರು ಕೇಳಿದರು! ನಾನು ನರ್ವಸ್ ಆಗಿಬಿಟ್ಟೆ. ‘ಬರ‍್ರಿ, ಬರ‍್ರಿ’ ಎಂದು ಕರೆದುಕೊಂಡು ಹೋದರು. ನನ್ನ ಸ್ನೇಹಿತ ನನ್ನ ಬಗ್ಗೆ ಹೇಳಿದ. ‘ನಿಮ್ಮತ್ರ ಸಂಗೀತ ಕಲಿಬೇಕು ಅಂತ ಅಂದುಕೊಂಡಿದ್ದಾನೆ. ನಿಮ್ಮ ಬಗ್ಗೆ ಭಾರೀ ಭಕ್ತಿ’ ಎಂದು ಸುಳ್ಳು ಸುಳ್ಳೆ ಏನೋ ಒಂದಿಷ್ಟು ಹೇಳಿದ. ‘ಹೀಂಗೇನು, ನಾನು ಈಗ ಊರಿಗೆ ಹೊಂಟೇನಿ. 15 ದಿನ ಬಿಟ್ಟು ಬಾ’ ಎಂದರು ಗುರುಗಳು. ಹದಿನೈದು ದಿನ ಆದ ಮೇಲೆ ನಾನು ಒಬ್ಬನೆ ಹೋದೆ. ನನ್ನ ನೋಡಿದ ತಕ್ಷಣ ‘ನೀನ್ ಮತ್ತೆ ಬಂದಿ, ಬಾ ಬಾ’ ಎಂದರು. ‘ನಿನಗೆ ಹಾಡು ಹೇಳಲು ಬರ್ತದೇನು?’ ಎಂದು ಕೇಳಿದರು. ‘ಬರ್ತದೆ’ ಎಂದೆ. ‘ಬಾ ಪೆಟ್ಗಿ ತಗೊ’ ಅಂತ ಅಟ್ಟಕ್ಕೆ ಕರೆದುಕೊಂಡು ಹೋದರು. ಆ ಅಟ್ಟ ಎಂದರೆ ಅದೊಂದು ದೊಡ್ಡ ಉಗ್ರಾಣ. ಅಲ್ಲಿ ನನ್ನನ್ನು ಕೂಡ್ರಿಸಿ ಹಾಡು ಹೇಳು ಎಂದರು. ನಾನು ಯಾವುದೋ ಒಂದು ರಂಗಗೀತೆ ಹೇಳಿದೆ. ‘ಅಡ್ಡಿಲ್ಲ. ಕಲಿಸೋಣು. ಆದರೆ ನಿಮ್ಮ ಮನೆಯ ಯಾರಾದರೂ ಹಿರಿಯರಿದ್ದರೆ ಅವರನ್ನು ಕರಕೊಂಡು ಬಂದು ಭೇಟಿ ಮಾಡಿಸು’ ಎಂದರು. ಆಗ ನನಗೆ ಯಾರನ್ನು ಕರೆದುಕೊಂಡು ಹೋಗಬೇಕು ಎಂಬ ಚಿಂತೆಯಾಯ್ತು. ನನ್ನ ಕಸಿನ್ ಒಬ್ಬರು ಹುಬ್ಬಳ್ಳಿಗೆ ಬಾಳೆಕಾಯಿ ವ್ಯಾಪಾರಕ್ಕೆ ಬರ್ತಿದ್ದರು. ಅವರಿಗೆ ಹೇಳಿದೆ. ಅವರು ಬಂದು ರಾಜಗುರುಗಳನ್ನು ಭೇಟಿ ಮಾಡಿದರು.ಅಲ್ಲಿಗೆ ನನ್ನ ಶಿಷ್ಯತ್ವ ಶುರುವಾಯಿತು. ‘ನೋಡಪಾ ಮೊದಲ 6 ತಿಂಗಳು ನೋಡ್ತೇನೆ. ಇದು ಸಂಗೀತ. ಎಲ್ಲರಿಗೂ ಬರ್ತಿರೋದಿಲ್ಲ. ಬರ್ತದೆ, ನಿನಗೆ ಅಡ್ಡಿ ಇಲ್ಲ ಅಂದರ ಮುಂದುವರಿಸೋಣ. ಇಲ್ಲವಾದರೆ ಮತ್ತೆ ನನ್ನ ಕಾಡಬೇಡ’ ಎಂದರು. 6 ತಿಂಗಳ ನಂತರ ಕಂಡೀಷನ್ ಎಲ್ಲ ಮರೆತು ಹೋಯಿತು. ನಾನು ಅವರ ಬಳಿ 12 ವರ್ಷ ಕಲಿತೆ. 1966ರಲ್ಲಿ ನನ್ನ ಸಂಗೀತ ಕಲಿಕೆ ಆರಂಭವಾಯಿತು. ಸುಮಾರು ಒಂದು ವರ್ಷ ಕಾಲ ಎರಡೇ ರಾಗ. ಬೆಳಿಗ್ಗೆ ಹೋದರೆ ಬೈರವ್, ಸಂಜೆ ಹೋದರೆ ಯಮನ್. ಇದು ಬಿಟ್ಟರೆ ಮೂರನೆ ರಾಗವನ್ನು ಅವರು ಕಲಿಸಲೇ ಇಲ್ಲ. ಶ್ರುತಿ ಮಾಡಿ ಕುಳಿತುಬಿಟ್ಟರೆ ಸಮಯದ ಪ್ರಜ್ಞೆ ಇರಲಿಲ್ಲ. ಬೆಳಿಗ್ಗೆ ಕುಳಿತಿದ್ದು ಮಧ್ಯಾಹ್ನದವರೆಗೆ ಆದರೂ ಆಗುತ್ತಿತ್ತು. ಒಂದು ವರ್ಷ ಯಮನ್ ಬೈರವ್ ಯಮನ್ ಬೈರವ್, ಏನಪಾ ಇದು ಮುಂದೆ ಹೋಗೋದೆ ಇಲ್ಲವಲ್ಲ ಅನ್ನಿಸುತ್ತಿತ್ತು. ಆದರೆ ಘರಾಣಾ ಗಾಯಕರ ಕಲಿಸುವ ಕ್ರಮವೇ ಹಾಗೆ. ಅವರು ಶಿಷ್ಯನ ಗಂಟಲಲ್ಲಿ ತಮ್ಮ ಶೈಲಿಯನ್ನು ಮೊದಲು ಕೂಡ್ರಿಸುತ್ತಾರೆ. ಅದು ಗಂಟಲಲ್ಲಿ ಕುಳಿತ ನಂತರ ಬೇಗ ಬೇಗ ಇತರ ರಾಗಗಳನ್ನು ಕಲಿಸುತ್ತಾರೆ. ಸಂಗ್ರಹ ಮಾಡುವುದು ದೊಡ್ಡದಲ್ಲ. ಅದು ಪಕ್ಕಾ ಆಗುವುದು ದೊಡ್ಡದು. ಒಮ್ಮೊಮ್ಮೆ ನಾನು ಬೆಳಿಗ್ಗೆ ಹೋದರೆ ಸಂಜೆ ಮುಂದೆ ಬಾ ಅನ್ನೋರು. ಸಂಜೆ 4 ಗಂಟೆಗೆ ಹೋದರೆ ಮಲಗಿಕೊಂಡಿರೋರು. ಒಂದು ಗಂಟೆ ಬಿಟ್ಟು ಹೋದರೆ ಸ್ನೇಹಿತರೊಂದಿಗೆ ಇಸ್ಪೀಟು ಆಡುತ್ತಾ ಕಳಿತುಕೊಂಡಿರುತ್ತಿದ್ದರು. ‘ಬಂದ್ಯ ನೀನ್, ಕೂಡು ಕೂಡು’ ಎನ್ನೋರು. ನಾನು ಅಲ್ಲಿ ಕುಳಿತು ಬೇಸರ ಬಂದ ನಂತರ ‘ನಾನು ಬರ್ತೇನ್ರಿ’ ಎಂದರೆ ‘ನಾಳೆ ಮುಂಜಾನಿ’ ಅನ್ನೋರು. ಹೀಗೆ ವಾರಗಟ್ಟಲೆ ಮುಂಜಾನೆ ಸಂಜಿ ಅಂತ ಆಗೋದು, ಪಾಠನೇ ಇಲ್ಲ. ಪಾಠ ಮಾಡುವಾಗ ಏನನ್ನೂ ನೋಟ್ ಬುಕ್ ನಲ್ಲಿ ಬರೆದಿಟ್ಟುಕೊಳ್ಳುವ ಹಾಗಿಲ್ಲ. ಎಲ್ಲವೂ ತಲೆಯಲ್ಲಿಯೇ ಇರಬೇಕಿತ್ತು. ಗುರುಗಳು ದೊಡ್ಡೋರು. ಅವರ ಸಂಗ ಮಾಡಿ ನಾನೂ ದೇಶ, ವಿದೇಶಗಳಲ್ಲಿ ಹೆಸರು ಮಾಡಿದೆ. ಖರೇ ಹೇಳ್ತೀನಿ. ನಾವು ದೊಡ್ಡೋರು, ದೊಡ್ಡವರ ಜೊತೆಗೆ ಇರ್ತೀವಿ ಅಂತ ನಾವು ಅಂದುಕೊ ಬಹುದು. ಆದರೆ ನಾನು ಎಷ್ಟು ಸಣ್ಣವ, ಇನ್ನೂ ಭೂಮಿ ಮ್ಯಾಲೇ ಇರೋವ ಅನ್ನೋದನ್ನ ನನ್ನ ಹೆಂಡತಿ ತಿಳಿಸಿಕೊಡುತ್ತಾಳ. ಏನಂತೀರಿ’ ಎಂದು ನಸುನಕ್ಕರು. ವಿಕ್ಷಿಪ್ತ ಗುರು! ಗುರು ಬಸವರಾಜ ರಾಜಗುರು ಜೊತೆ ತಿರುಗಾಟದ ಅನುಭವವೇ ಬಹಳ ಮಜಾ. ಬೇಕಾದ್ದು ಬೇಡಾಗಿದ್ದು ಎಲ್ಲ ಕಟ್ಟಿಕೊಂಡು ಬಿಡೋರು. ಕೊಡಪಾನದಂತಹ, ತಿರುಗಣಿ ಇರುವ ಒಂದು ತಾಮ್ರದ ತಂಬಿಗೆ. ಅದರಲ್ಲಿ ಕುಡಿಯುವ ನೀರು ಇಟ್ಟುಕೊಂಡಿರೋರು. ಅದೇ ನೀರನ್ನು ಕುಡಿಯುತ್ತಿದ್ದರು. ನಿಜವಾಗಿ ಆ ನೀರು ಹೊರಲಿಕ್ಕೇ ಒಬ್ಬ ಶಿಷ್ಯ ಬೇಕಿತ್ತು. ಯಾರಿಗಾದರೂ ಜೀವ ಹೋಗತ್ತೆ ಅಂದರೂ ಒಂದು ತೊಟಕು ಕೊಡುತ್ತಿರಲಿಲ್ಲ. 8 ದಿನ ಆದ್ರೂ ಅದೇ ನೀರು ಆಗಬೇಕು. ಒಮ್ಮೆ ಮುಂಬೈಯಲ್ಲಿ ಕಾರ್ಯಕ್ರಮ. ಅಲ್ಲಿಗೆ ಹೊರಟಿದ್ದರು. ಅವರಿಗೆ ಪುಣೆ ಎಂದರೆ ಬಹಳ ಪ್ರೀತಿ. ಬಸ್ ನಿಲ್ದಾಣದ ಎದುರಿಗೆ ಒಂದು ಹೋಟೆಲ್ ಇತ್ತು. ಮಹಾರಾಷ್ಟ್ರಿಯನ್ ಊಟ ಕೊಡೋರು. ‘ಇಲ್ಲಿ ಉಳಕೊಳ್ಳೋಣ. ಊಟ ಮಾಡಿ ನಾಳೆ ಹೋಗೋಣ’ ಎಂದರು. ಮರುದಿನ ಆ ರೂಂ ಹಾಂಗೇ ಇಟ್ಟು ಮುಂಬೈಗೆ ಹೋದರು. ಅಲ್ಲಿ ಉಳಿಯಬೇಕಾಯಿತು. ಅವರ ನೀರು ಖರ್ಚಾಗಿತ್ತು. ‘ನೋಡ್ ತಮ್ಮ ಒಂದು ಗಾಡಿ ಹಿಡದು ಹೋಗು. ಪುಣಾದಾಗ ರೂಂ ಅದಲ್ಲ. ಅಲ್ಲಿ ಪಾತ್ರದಾಗ ನೀರು ಇದಾವಲ್ಲ, ಅದನ್ನ ಈ ಪಾತ್ರಕ್ಕೆ ಹಾಕಿಕೊಂಡು ಬಂದು ಬಿಡು’ ಎಂದರು. ಏನ್ ಮಾಡೋದು ಹೋಗಲೇ ಬೇಕಲ್ಲ ಎಂದು ಗುರುಗಳನ್ನು ನೆನೆದು ಇನ್ನಷ್ಟು ನಕ್ಕರು ಭಟ್ಟರು. ಬೆಂಗಳೂರಿನಿಂದ ಹೋದರೆ ಹುಬ್ಬಳ್ಳಿಯಲ್ಲಿ ಇಳಿದುಕೊಂಡುಬಿಡೋರು. ಅಲ್ಲಿ ಒಂದು ರೂಂ ತಗೆದುಕೊಳ್ಳುವುದು. ಆ ಮೇಲೆ ‘ಗಣಪತಿ, ಧಾರವಾಡಕ್ಕೆ ಹೋಗು. ಯಜಮಾನ್ರು ಹುಬ್ಬಳ್ಳಿಯಲ್ಲಿ ಉಳಕೊಂಡಾರ, ಊಟ ತರಬೇಕು ಅಂತ ಹೇಳು ಅನ್ನೋರು. ಇಂತಹ ವಿಕ್ಷಿಪ್ತ ನಡವಳಿಕೆ ಕಲಾವಿದರಿಗೆ ಮಾತ್ರ ಸಾಧ್ಯ. ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಇದ್ದರೆ ಹುಡುಗನೊಬ್ಬನಿಗೆ ಎರಡು ತಂಬೂರಿ ಕೊಟ್ಟು ಹುಬ್ಬಳ್ಳಿಗೆ ಹೋಗು, ಅಲ್ಲೊಂದು ರೂಂ ಮಾಡು. ನಾ ನಾಳೆ ಬರ್ತೀನಿ ಅನ್ನೋರು. ಇದೆಲ್ಲಾ ಏನೋ ಎಂತ ಯಾರಿಗೆ ಗೊತ್ತು?

courtsey:prajavani.net

https://www.prajavani.net/artculture/art/ganapathi-bhat-649325.html

Leave a Reply