ಅವಳಿಗೆ ಹೇಗೆ ಥ್ಯಾಂಕ್ಸ್‌ ಹೇಳುವುದು: ಪತ್ನಿಯನ್ನು ಹೀಗೆ ನೆನಪಿಸಿಕೊಂಡಿದ್ದರು

ಕದ್ರಿ ಗೋಪಾಲನಾಥ್ ಎನ್ನುವ ಸಂಗೀತ ಸಾಮ್ರಾಟ, ಸ್ಯಾಕ್ಸೊಫೋನ್ ಮಾಂತ್ರಿಕ ಓರ್ವ ಆದರ್ಶ ಪತಿಯೂ ಹೌದು. ತನ್ನ ಜೊತೆಗಾತಿಯ ಬಗ್ಗೆ ಈ ಮಹಾನ್ ವಿದ್ವಾಂಸನಲ್ಲಿದ್ದ ಆಪ್ಯಾಯತೆಯನ್ನುಕಟ್ಟಿಕೊಡುವ ಈ ಆಪ್ತ ಬರಹವು ಮಯೂರ ಮಾಸಪತ್ರಿಕೆಯಲ್ಲಿ 2012ರ ಜೂನ್‌ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಮದುವೆ ಮಾಡಿಕೊಳ್ಳಲೆಂದು ಹುಡುಗಿ ನೋಡಲು ಹೋದಾಗ ಅವಳ ಮನೆಯವರು ‘ಇವನಿಗೇನು ನಮ್ಮ ಹುಡುಗಿ ತೋರಿಸುವುದು’ ಎಂದು ಅವಳನ್ನು ಬಚ್ಚಿಟ್ಟರೆ ನನಗೆ ಹೇಗನಿಸಬಹುದು? ಹುಡುಗ ಏನು ಕೆಲಸ ಮಾಡುತ್ತಾನೆ? ಏನೂ ಇಲ್ಲ. ಇವನಿಗೆ ಹೇಗೆ ಹೆಣ್ಣು ಕೊಡುವುದು’ ಅಂತ ಹುಡುಗಿಯ ಮನೆಯವರ ತರ್ಕ. ಆದರೆ ಹೆಣ್ಣು ನೋಡಲು ಹೋಗಿದ್ದ ಹುಡುಗನಾದ ನಾನು ನಿರುದ್ಯೋಗಿಯಾಗಿರಲಿಲ್ಲ. ನಾನು ಸಂಗೀತ ಕಲಾವಿದ! ನನಗೆ ಹೆಣ್ಣು ಕೊಡಿ ಎಂದು ಅವರನ್ನು ಒಪ್ಪಿಸುವುದು ಹೇಗೆ?‌ ಸ್ಯಾಕ್ಸೋಫೋನ್‌ ಚಕ್ರವರ್ತಿ ಕದ್ರಿ ಗೋಪಾಲನಾಥ್‌ ನಿಧನ ಕಾಸರಗೋಡಿನ ನೀರ್ಚಾಲು ಸಮೀಪದ ಮುಂಡಿತ್ತಡ್ಕ ಎಂಬಲ್ಲಿಗೆ ನನ್ನ ಭಾವನೊಂದಿಗೆ ಹೆಣ್ಣು ನೋಡಲು ಹೋಗಿದ್ದೆ. ಅಲ್ಲಿ ಶಾಲೆ ನಡೆಸುತ್ತಿದ್ದ ಮಂಜಯ್ಯ ಮಾಸ್ಟರ್ ಅವರ ನಾಲ್ವರು ಹೆಣ್ಣು ಮಕ್ಕಳಲ್ಲಿ ಕಿರಿಯವಳಾದ ಸರೋಜಿನಿ ಅದೇ ಶಾಲೆಯಲ್ಲಿ ಟೀಚರ್ ಆಗಿದ್ದಳು. ಅವಳಿಗೆ ಟೀಚರ್ ಕೆಲಸ ಇತ್ತಲ್ಲ, ಆದ್ದರಿಂದ ಕೆಲಸವಿಲ್ಲದ ಇವನಿಗೆ ಅವಳನ್ನು ತೋರಿಸುವುದೂ ಬೇಡ ಅಂದುಕೊಂಡ ಅವಳ ಮನೆಯವರು ‘ನಮ್ಮ ಹುಡುಗಿ ಮನೆಯಲ್ಲಿಲ್ಲ. ಪೇಟೆಗೆ ಹೋಗಿದ್ದಾಳೆ, ಇನ್ನೂ ಬಂದಿಲ್ಲ’ ಅಂದುಬಿಟ್ಟರು ನನಗೆ ಬಂದ ಕೋಪ ಅಷ್ಟಿಷ್ಟಲ್ಲ. ‘ಹೋಗ್ರೀ ಭಾವ, ಇವಳಲ್ಲದಿದ್ದರೆ ಇವಳಮ್ಮನಂಥ (!) ಹೆಣ್ಣನ್ನು ಮದುವೆಯಾಗ್ತಿನಿ. ಏನು ಅವರು ಹುಡುಗಿ ತೋರಿಸಿದರೆ ಹೊತ್ತುಕೊಂಡು ಹೋಗಿ ಬಿಡ್ತೀನಾ? ಎಂದು, ಹುಡುಗಿ ನೋಡಲು ಬಾ ಎಂದು ನನ್ನನ್ನು ಕರೆದುಕೊಂಡು ಹೋಗಿದ್ದ ಭಾವನ ಮೇಲೆ ಚೆನ್ನಾಗಿ ರೇಗಿದೆ. ಇವರಲ್ಲದಿದ್ದರೆ ಇವರಪ್ಪನಂಥ ಮನೆಯೋರು ನನಗೆ ಹೆಣ್ಣು ಕೊಡುತ್ತಾರೆ ಎಂದು ಉರಿಯುತ್ತ ವಾಪಾಸ್ ಬಂದುಬಿಟ್ಟೆ.ಇದನ್ನೂ ಓದಿ: ಕದ್ರಿ ಗೋಪಾಲನಾಥ್ ಮನದ ಮಾತು: ಸಂಗೀತಕ್ಕೆ ಜಾತಿ ಇಲ್ಲ ಸಂಗೀತಗಾರರ ಮನೆತನದಲ್ಲಿ ಹುಟ್ಟಿದ ನಾನು ಸಂಗೀತಗಾರ ಆದದ್ದೇನು ವಿಶೇಷವಲ್ಲ. ಚಿಕ್ಕಂದಿನಲ್ಲೇ ತಂದೆ ತನಿಯಪ್ಪ ಅವರಿಂದ ನಾದಸ್ವರ ಕಲಿತೆ. ಹದಿನೈದು ವರ್ಷದವನಿದ್ದಾಗ ಮೈಸೂರು ಅರಮನೆಯಲ್ಲಿ ಬ್ಯಾಂಡ್ ಸಂಗೀತ ಕೇಳುವ ಅವಕಾಶ ಸಿಕ್ಕಿತು. ಬ್ಯಾಂಡಿನಲ್ಲಿದ್ದ ಹಲವಾರು ವಿದೇಶಿ ವಾದ್ಯಗಳ ಪೈಕಿ ಸ್ಯಾಕ್ಸೊಫೋನ್‌ನ ಮಧುರ ಗಂಭೀರ ನಾದ ನನ್ನನ್ನು ಸಮ್ಮೋಹಗೊಳಿಸಿತು. ಅದನ್ನು ಕಲಿಯಬೇಕೆಂಬ ತೀವ್ರ ಹಂಬಲ ನನ್ನನ್ನು ಸಂಗೀತ ಲೋಕದಲ್ಲಿ ದೃಢವಾಗಿ ಉಳಿಸಿತು. ಮದುವೆಯಾಗುವ ಹುಡುಗನಿಗೆ ಅದೇ ವೃತ್ತಿ, ಉದ್ಯೋಗ ಅಲ್ಲವೇನು? ಹುಡುಗಿಯ ಮನೆಯವರಿಗೆ ಹಾಗನಿಸಲಿಲ್ಲ. ಆದರೆ ಸರೋಜಿನಿಯೇ ನನ್ನ ಹೆಂಡತಿ ಎಂದು ಬರೆದಿತ್ತು. ಅವಳು ನನ್ನನ್ನೇ ಮದುವೆಯಾಗುವುದಾಗಿ ಹೇಳಿಬಿಟ್ಟಳು. ’ಅವರು ಕಲಾವಿದರಲ್ಲವೆ? ಒಳ್ಳೆ ಕಲೆ ಉಂಟು ಅವರಲ್ಲಿ’ ಎಂದು ಅವಳು ನನ್ನ ಬಗ್ಗೆ ಮೆಚ್ಚುಗೆಯ ಮಾತನಾಡಿದಳು. ಅದನ್ನು ಕೇಳಿದ ಅವರ ಮನೆಯ ಹಿರಿಯಾಕೆ ಒಬ್ಬರು ‘ಎಂತ ಅವರು ಕಲಾವಿದರಂತ? ಅವರಲ್ಲಿ ಕಲೆ ಉಂಟಾ? ಎಂತ ಅದು ಗೇರುಬೀಜದ ಕಲೆಯ?’ ಎಂದೆಲ್ಲ ನಗಾಡಿದರಂತೆ. ಕೊನೆಗೆ ನಮ್ಮ ನೆರವಿಗೆ ಬಂದದ್ದು ಜಾತಕ ಮತ್ತು ಜ್ಯೋತಿಷ್ಯ! ನನ್ನ ಜಾತಕ ನೋಡಿದವರೊಬ್ಬರು ‘ಈ ಹುಡುಗ ತುಂಬ ಮುಂದಕ್ಕೆ ಬರುತ್ತಾನೆ. ದೇಶವಿದೇಶದಲ್ಲಿ ಪ್ರಸಿದ್ಧಿ ಗಳಿಸುತ್ತಾನೆ. ಇವನಿಗೇ ನಿಮ್ಮ ಮನೆಯ ಹೆಣ್ಣು ಕೊಡಿ’ ಎಂದರಂತೆ. ಅಂತೂ ನಮ್ಮ ಮದುವೆ ನಿಶ್ಚಯವಾಯಿತು. ವಿಡಿಯೊ ನೋಡಿ ಮಂಗಳೂರಿನಲ್ಲಿ ನೀಡಿದ ಕೊನೆಯ ಸಂಗೀತ ಕಛೇರಿ ಸರೋಜಿನಿಯ ಜೊತೆ ನನಗೆ 1974ರಲ್ಲಿ ನಮ್ಮ ಸಂಪ್ರದಾಯದ ಪ್ರಕಾರ ಮದುವೆಯಾಯಿತು. ಮದುವೆ ದಿನ ನನಗೆ ವಿಪರೀತ ಜ್ವರ. ಒಂದೆರೆಡು ದಿನಗಳಲ್ಲಿ ಅದು ಟೈಫಾಯಿಡ್‌ಗೆ ಹೊರಳಿತು. ಆಹಾ! ಮದುಮಗಳಿಗೆ ಎಂಥಾ ಸ್ವಾಗತ! ನನ್ನ ಸ್ಥಿತಿ ಕಂಡು ಅವಳಿಗೆ ತುಂಬಾ ಭಯ, ಬೇಸರ ಆಯಿತು. ಗಂಡನ ಬೀಡಿಗೆ ಬಂದವಳೇ ತಿಂಗಳುಗಟ್ಟಲೆ ರೋಗಿಯ ಸೇವೆ ಮಾಡಬೇಕಾಯಿತು. ಮಂಗಳೂರಿನಲ್ಲಿ ವಾಸವಾಗಿದ್ದ ನಮ್ಮ ಕುಟುಂಬದಲ್ಲಿ ಅವಳಿಗೆ ಎಲ್ಲರೂ ಹೊಸಬರು. ನಮ್ಮ ತಂದೆತಾಯಿಯ ಎಂಟು ಮಕ್ಕಳು, ಅವರಲ್ಲಿ ನಾನೇ ಹಿರಿಯವ. ಎಪ್ಪತ್ತೈದು ರೂಪಾಯಿಗಳಿಗೆ ಸ್ವಲ್ಪ ದೊಡ್ಡ ಮನೆಯನ್ನು ಬಾಡಿಗೆಗೆ ಹಿಡಿದೆವು. ಚಿಕ್ಕ ವಯಸ್ಸಿನ ಹುಡುಗಿ ಹೊಸದೆಲ್ಲದಕ್ಕೂ ಹೊಂದಿಕೊಂಡಳು. ತವರು ಮನೆಯಲ್ಲಿ ಸರೋಜಿನಿ ಟೀಚರ್ ಆಗಿದ್ದಳಲ್ಲ. ಇಲ್ಲಿ ಮಂಗಳೂರಿನಲ್ಲಿ ಅವಳಿಗೊಂದು ಕೆಲಸ ಹುಡುಕುವುದೇ ಬಹಳ ಕಷ್ಟವಾಯಿತು. ಕೊನೆಗೆ ಸಾಕಷ್ಟು ದೂರದ ಕೈರಂಗಳ ಅನ್ನುವಲ್ಲಿದ್ದ ಒಂದು ಶಾಲೆಯಲ್ಲಿ ಕೆಲಸ ‘ಪಡೆದು’ಕೊಂಡೆವು. ಆದರೆ ಮನೆಯಿಂದ ಶಾಲೆಗೆ ಹೋಗಲು ಮೂರು ಬಸ್ ಹಿಡಿಯಬೇಕಿತ್ತು. ಬೆಳಗ್ಗೆ ಮನೆಯಲ್ಲಿ ಸಾಧ್ಯವಾದಷ್ಟು ಕೆಲಸ ಮುಗಿಸಿ ಏಳು ಗಂಟೆಗೆಲ್ಲ ಬಸ್ ನಿಲ್ದಾಣದಲ್ಲಿದ್ದರೆ ಮಾತ್ರ ಅವಳು 9ಕ್ಕೆ ಶಾಲೆಗೆ ತಲುಪಲು ಸಾಧ್ಯವಿತ್ತು. ಸಂಜೆ ಮತ್ತೆ ಮೂರು ಬಸ್ ಹಿಡಿದು ಮನೆ ತಲುಪುವಷ್ಟರಲ್ಲಿ ಕತ್ತಲು ಬಿದ್ದಿರುತ್ತಿತ್ತು. ಆ ಸಮಯಕ್ಕೆ ನನ್ನ ಬಳಿ ಸ್ಕೂಟರ್ ಇತ್ತಾದ್ದರಿಂದ ಬಿಡುವಿದ್ದಾಗ ಅವಳಿಗೆ ನೆರವಾಗುತ್ತಿದ್ದೆ. ಆದರೆ ನನಗೆ ಸಂಗೀತ ಕಛೇರಿಗಳಿದ್ದಾಗ ಸಾಧ್ಯವಾಗುತ್ತಿರಲಿಲ್ಲ. ಇದನ್ನೂ ಓದಿ:ವಿಶೇಷ ಸಂದರ್ಶನ | ಸೈನಿಕರಿಗೆ ಸಂಗೀತ: ಕದ್ರಿ ಕನಸು ಕದ್ರಿ ಗೋಪಾಲನಾಥ್ ಮತ್ತು ಅವರ ಪತ್ನಿ ಸರೋಜಾ ಅವರನ್ನು 14ನೇ ಮೇ 2011 ಬೆಂಗಳೂರು ವಿಶ್ವವಿದ್ಯಾಲಯ ಅಭಿನಂದಿಸಿದ ಕ್ಷಣ. (ಪ್ರಜಾವಾಣಿ ಚಿತ್ರ: ಆನಂದ ಬಕ್ಷಿ) ಆ ಮೊದಲ ಹತ್ತಾರು ವರ್ಷಗಳನ್ನು ಈಗ ನೆನಪಿಸಿಕೊಂಡರೆ ಸರೋಜಿನಿ ಅಷ್ಟೆಲ್ಲಾ ಕೆಲಸಗಳನ್ನೂ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸಿದಳು ಎಂದು ಆಶ್ಚರ್ಯವಾಗುತ್ತದೆ. ನಮ್ಮ ಮೊದಲ ಮಗ ಗುರುಪ್ರಸಾದ್, ಎರಡನೇ ಮಗ ಮಣಿಕಾಂತ್, ಮಗಳು ಅಂಬಿಕಾ ಹುಟ್ಟುವಾಗಲೂ ಬಸುರಿ– ಬಾಣಂತಿ ತಪ್ಪದೆ ಶಾಲೆಗೆ ಹೋಗುತ್ತಿದ್ದಳು. ಮನೆಯ ಕೆಲಸಗಳನ್ನೂ ಮಾಡುತ್ತಿದ್ದಳು. ಮನೆಯಲ್ಲಿ ನನ್ನ ತಂದೆ ತಾಯಿಗಳ ಯೋಗಕ್ಷೇಮ ನೋಡುತ್ತಿದ್ದಳು. ಆ ವರ್ಷಗಳಲ್ಲಿ ನಾನು ಸಂಗೀತ ಸಾಧನೆಯಲ್ಲಿ ಮುಳುಗಿರುತ್ತಿದ್ದೆ. ಮನೆಯಲ್ಲಿದ್ದಾಗ ಮೂರು,ನಾಲ್ಕು ಗಂಟೆಗಳ ಕಾಲ ಸ್ಯಾಕ್ಸೊಫೋನ್ ಅಭ್ಯಾಸ ಮಾಡುತ್ತಿದ್ದೆ. ವಿದೇಶಿ ವಾದ್ಯವನ್ನು ಕರ್ನಾಟಕ ಸಂಗೀತದ ಗಮಕಗಳಿಗೆ ಪಳಗಿಸುವುದು ನನಗೊಂದು ಸವಾಲೇ ಆಗಿತ್ತು. ‘ಆ ಕೃತಿ ಕಷ್ಟ ಅನ್ನುತ್ತಿದ್ದರಲ್ಲ ಅದನ್ನು ಪೂರ್ತಿ ಕೈಹತ್ತುವವರೆಗೆ ಪ್ರಾಕ್ಟೀಸ್ ಮಾಡಿಕೊಳ್ಳಿ’ ಎಂದು ಸರೋಜಿನಿ ಪ್ರೋತ್ಸಾಹಿಸುತ್ತಿದ್ದಳು. ನನ್ನ ಕಛೇರಿಗಳಿಗೆ ಬರುತ್ತಿದ್ದಳು. ಅಲ್ಲಿ ಕಲಾವಿದನಾಗಿ ನನಗೆ ಸಿಗುತ್ತಿದ್ದ ಮರ್ಯಾದೆ ಅವಳಿಗೆ ಸಂತೋಷ ಕೊಡುತ್ತಿತ್ತು. ಮದುವೆಗೆ ಮೊದಲಿನಿಂದಲೂ ಅವಳಿಗೆ ಸಂಗೀತ ಚೆನ್ನಾಗಿ ಗೊತ್ತಿತ್ತು. ತಾನೂ ಹಾಡುತ್ತಿದ್ದಳು. ನಮ್ಮ ಮನೆಗೆ ತುಂಬಾ ಸಂಗೀತ ಕಲಾವಿದರು, ಸಂಘಟಕರು ಬರುತ್ತಿದ್ದರು. ಅವಳು ಮನೆಯಲ್ಲಿದ್ದರೆ ಅವರನ್ನೆಲ್ಲ ಚೆನ್ನಾಗಿ ಉಪಚರಿಸುತ್ತಿದ್ದಳು. ನಾನು ಚೆನ್ನೈನಲ್ಲಿ ಮ್ಯೂಸಿಕ್ ಅಕಾಡೆಮಿಯಲ್ಲಿ ಕಛೇರಿ ಕೊಡಲು ಆಹ್ವಾನ ಪಡೆದ ಮೇಲೆ, ಮುಂಬೈನಲ್ಲಿ ಜಾಝ್ ಸಂಗೀತದ ಜೊತೆ ಬೆರೆತ ಮೇಲೆ ನನ್ನ ಸಂಗೀತದ ದಿಕ್ಕೇ ಬದಲಾಗಿ, ಮುನ್ನಡೆಯತೊಡಗಿದೆ. ವಿಪರೀತ ಕಛೇರಿಗಳು ಗೊತ್ತಾಗಿರುತ್ತಿದ್ದು ಸದಾ ಬೇರೆ ಊರುಗಳಿಗೆ ಸಂಚರಿಸುತ್ತಿದ್ದೆ. ಆಗೆಲ್ಲ ಅವಳು ನಾನಿರುವುದಿಲ್ಲ ಎಂದು ಗೊಣಗದೆ ತನ್ನ ಶಾಲೆ, ತನ್ನ ಮನೆ, ತನ್ನ ಮಕ್ಕಳು ಎಂದು ಇರುತ್ತಿದ್ದಳು. ಅವಳ ಈ ತ್ಯಾಗವೇ ನನ್ನ ಮುನ್ನಡೆಗೆ ಭದ್ರವಾದ ಬುನಾದಿ ಹಾಕಿತು ಎಂದು ಹೇಳಿದರೆ ತಪ್ಪಲ್ಲ. ವೇದಿಕೆಯ ಮೇಲೆ ಕುಳಿತೊಡನೆ ಕಲಾವಿದನಾದ ನಾನು,.ಕಷ್ಟವನ್ನೇನು ಸುತ್ತಲಿನ ಪ್ರಪಂಚವನ್ನೇ ಮರೆಯುತ್ತಿದ್ದೆ. ಅವಳು ಮಾತ್ರ ಈ ಎಲ್ಲದರೊಂದಿಗೆ ಇರಬೇಕಿತ್ತಲ್ಲ! ಮಂಗಳೂರಿನಲ್ಲಿ ಮನೆ ಕಟ್ಟಿಸಿದ್ದು ನಮ್ಮಿಬ್ಬರ ಜೀವನದಲ್ಲಿ ಒಂದು ಸಾಧನೆಯಾಗಿತ್ತು. ಮನೆ ಕಟ್ಟುವಾಗ ಹಣ ಕಡಿಮೆ ಬಿದ್ದಾಗ ತನ್ನ ತವರುಮನೆಯಿಂದ ತಂದಿದ್ದ ಚಿನ್ನಾಭರಣಗಳನ್ನು ಸರೋಜಿನಿ ಒಂದಿಷ್ಟೂ ಬೇಸರಿಸದೆ ಎತ್ತಿಕೊಟ್ಟಿದ್ದಳು. ಸಂಗೀತದ ಕಾರಣಕ್ಕಾಗಿ ಮುಂದೆ ನನ್ನ ವಾಸ್ತವ್ಯವನ್ನು ಚೆನ್ನೈಗೆ ಬದಲಾಯಿಸುವ ಮುಖ್ಯ ನಿರ್ಧಾರ ಕೈಗೊಂಡೆ. ಅವಳು ಮಂಗಳೂರಿನಲ್ಲೇ ಉಳಿದಳು. ನಾನು ಬಿಡುವಾದಾಗ ಮಂಗಳೂರಿನ ಮನೆಗೆ ಬರುತ್ತಿದ್ದೆ. ಕಛೇರಿಗಳಿಗಾಗಿ ವಿದೇಶ ಯಾತ್ರೆಗಳೂ ತುಂಬಾ ಹೆಚ್ಚಿದವು. ಯೂರೋಪಿನ ಪ್ರಮುಖ ಸಂಗೀತೋತ್ಸವಗಳಿಗೆ ಆಹ್ವಾನ ಪಡೆದೆ. ‘ಗಂಡ ದೂರವಿರುತ್ತಾನೆ. ಸದಾ ಕಲಾವಿದರ ಜೊತೆ ಇರುತ್ತಾನೆ. ದೇಶ ವಿದೇಶ ಸುತ್ತುವುದೇ ಕೆಲಸ. ಏನೋ ಎಂತೋ’ ಎಂದು ಅವಳು ಅನುಮಾನಿಸಿದ್ದರೆ ನಾನು ಇಷ್ಟು ನೆಮ್ಮದಿಯಾಗಿ ನನ್ನ ಸಂಗೀತದ ಅನುಸಂಧಾನವನ್ನು ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಕಲಾವಿದನಾದವನಿಗೆ ಸಂಗಾತಿಯ ಸಹಕಾರ ಎಲ್ಲಕ್ಕಿಂತ ಬಹಳ ಮುಖ್ಯ. ಬೇರೆಯ ವಿಷಯಗಳಂತೆ. ಅದರಲ್ಲಿ ಕೂಡಾ ನಾನು ಬಹಳ ಅದೃಷ್ಟವಂತ. ನಾನು ಯಾವುದೇ ಊರಿನಲ್ಲಿರಲಿ, ಸರೋಜಿನಿಯ ಜೊತೆ ಸಂಪರ್ಕದಲ್ಲಿ ಇದ್ದೇ ಇರುತ್ತೇನೆ. ಎಂಬತ್ತರ ದಶಕದ ಆ ದಿನಗಳಲ್ಲಿ ಅಮೆರಿಕ ಮತ್ತಿತರ ದೇಶಗಳಿಂದ ಟೆಲಿಫೋನ್‌ ಮಾಡುವುದು ಸಾಹಸದ ಕೆಲಸವಾಗಿತ್ತು. ಪತ್ರ ಮುಟ್ಟಲು ಹದಿನೈದು ದಿನಗಳು ಹಿಡಿದರೂ ತಪ್ಪದೆ ಅವಳಿಗೆ ಪತ್ರ ಬರೆಯುತ್ತಿದ್ದೆ. ಈಗ ನಮ್ಮ ಮೂವರೂ ಮಕ್ಕಳಿಗೂ ಮದುವೆಯಾಗಿದೆ. ಮೊದಲ ಮಗ ಗುರುಪ್ರಸಾದ್‌ ತನ್ನ ಮಡದಿ, ಮಗಳ ಜೊತೆ ದುಬೈನಲ್ಲಿ ಇದ್ದಾನೆ. ನಾನು ಚೆನ್ನೈನಲ್ಲಿ ಮನೆ ಮಾಡಿದಾಗ ಮಣಿಕಾಂತ ನನ್ನ ಹಾಗೆ ಶಾಸ್ತ್ರೀಯ ಸಂಗೀತದಲ್ಲೇ ಮುಂದುವರೆಯಲಿ ಎಂದು ನನ್ನ ಜೊತೆ ಇರಿಸಿಕೊಂಡೆ. ಅವನೀಗ ಫ್ಯೂಷನ್‌ ಸಂಗೀತ, ಚಿತ್ರ ಸಂಗೀತದಲ್ಲಿ ಹೆಸರು ಮಾಡುತ್ತಿದ್ದಾನೆ. ಪಂಜಾಬಿ ಹುಡುಗಿಯನ್ನು ಮದುವೆಯಾಗಿರುವ ಅವನಿಗೆ ಗಂಡು ಮಗು ಇದ್ದು ಎಲ್ಲ ಚೆನ್ನಾಗಿದ್ದಾರೆ. ಇದನ್ನೂ ಓದಿ ರಾಮನವಮಿ ಸಂಗೀತೋತ್ಸವದಲ್ಲಿ ಇನ್ನು ಕೇಳದು ‘ಕದ್ರಿ‘ ಸ್ಯಾಕ್ಸೋಫೋನ್‌ ಇಂಪು ಮಣಿಕಾಂತನ ಪ್ರೇಮ ವಿವಾಹವಾದ ಸಂದರ್ಭ ನಮ್ಮ ಕುಟುಂಬಕ್ಕೆ ಹೊಸದು. ಆ ಹುಡುಗಿಯ ತಾಯಿ ತಂದೆ ನಮ್ಮ ಮನೆಗೆ ಬಂದು ಮದುವೆಯ ವಿಷಯ ಮುಂದಿಟ್ಟರು. ಸರೋಜಿನಿಗೆ ಮೊದಲು ಕಷ್ಟವಾದರೂ ನಾನು ಅವಳೊಂದಿಗೆ ಸಾಕಷ್ಟು ದಿನಗಳು ಮಾತನಾಡಿದ ನಂತರ ಸ್ವೀಕರಿಸಿದಳು. ನಾನು ಸ್ವಲ್ಪ ಸೆಂಟಿಮೆಂಟಲ್‌. ಅವರಿಬ್ಬರೂ ಪ್ರೀತಿಸಿದ್ದಾರೆ, ಅವರ ಜಾತಕ ಅದ್ಬುತವಾಗಿ ಹೊಂದಿಕೊಳ್ಳುತ್ತದೆ ಎಂದು ಅವಳನ್ನು ಒಪ್ಪಿಸಿದೆ. ಸೊಸೆಯೂ ನಮ್ಮ ಮನೆಗೆ ಹೊಂದಿಕೊಂಡಿದ್ದಾಳೆ. ಮಗಳು ಅಂಬಿಕಾ ಮತ್ತು ಇಂಜಿನಿಯರ್‌ ಆಗಿರುವ ಅವಳ ಗಂಡ ಮೋಹನ್‌ ಮಂಗಳೂರಿನಲ್ಲಿ ನಮ್ಮ ಮನೆಯ ಸಮೀಪವೇ ಪುಟ್ಟ ಮಗಳೊಂದಿಗೆ ಇದ್ದಾರೆ. ಸರೋಜಿನಿಗೆ ಮಗಳು, ಮೊಮ್ಮಗಳು ಹತ್ತಿರದಲ್ಲೇ ಇರುವುದು ತುಂಬಾ ಸಂತೋಷ ಕೊಡುತ್ತದೆ. ‘ನೀನು ಮೂರು ಮಕ್ಕಳೇ ಸಾಕು ಎಂದು ತೀರ್ಮಾನಿಸಿಬಿಟ್ಟೆ. ಇನ್ನೊಂದಷ್ಟು ಮಕ್ಕಳು ಆಗಿದ್ದರೆ ನಿನಗೇ ಚೆನ್ನಾಗಿರುತ್ತಿತ್ತು’ ಎಂದು ನಾನು ಆಗಾಗ ಅವಳನ್ನು ಛೇಡಿಸುವುದಿದೆ. ಇಷ್ಟು ನಿಭಾಯಿಸಿದವಳಿಗೆ ಇನ್ನಷ್ಟು ಏನು ಮಹಾ ಅಲ್ಲವೇ! ಶಾಲೆ ಕೆಲಸದಿಂದ ನಿವೃತ್ತಿ ಪಡೆದಿರುವ ಸರೋಜಿನಿ, ನಮ್ಮ ದೊಡ್ಡ ಮನೆಯಲ್ಲಿ ಡಾಬರ್‌ಮನ್‌ ಸೇರಿ ಮೂರು ನಾಯಿಗಳನ್ನು ಪ್ರೀತಿಯಿಂದ ಸಾಕಿದ್ದಾಳೆ. ಈ ದಿನಗಳಲ್ಲಿ ಅವಳಿಗೆ ದಿನಕ್ಕೆರಡು ಬಾರಿ ಅಮೆರಿಕದಲ್ಲಿದ್ದರೂ ನಾನು ಫೋನ್‌ ಮಾಡುವುದು ದೊಡ್ಡ ವಿಷಯವೇ ಅಲ್ಲ. ಕಛೇರಿಗಳಿಗೆಂದು ನಾನು ಒಂದು ಊರಿನಿಂದ ಇನ್ನೊಂದಕ್ಕೆ ಹಾರುವುದೇ ಜಾಸ್ತಿ. ರಜೆಯಲ್ಲಿ ಚೆನ್ನೈನ ಮನೆಗೆ ಬರುವ ಸರೋಜಿನಿ, ಸಾಧ್ಯವಾದಾಗ ನನ್ನೊಂದಿಗೆ ಸಂಚಾರ ಮಾಡುತ್ತಾಳೆ. ಉತ್ತರ ಭಾರತದಲ್ಲಿ ಅವಳು ನೋಡದ ಸ್ಥಳ ಇಲ್ಲ. ಇತ್ತೀಚೆಗೆ ದುಬೈ, ಅಬುಧಾಬಿಗೆ ಹೋಗಿ ಮಗನ ಮನೆಯಲ್ಲೂ ಇದ್ದು ಬಂದೆವು. ಸಿಂಗಪುರ ಮುಂತಾದ ಕಡೆ ಕಛೇರಿ ಇದ್ದರೆ ಬರುತ್ತಾಳೆ. ಯೂರೋಪಿನ, ಅಮೆರಿಕದ ಚಳಿ, ಹಿಮವನ್ನು ಅವಳು ತಡೆಯಲಾರಳು. ಮುಂದೆ ಶ್ರೀಲಂಕಾದಲ್ಲಿ ಮತ್ತೆ ನನ್ನ ಕಛೇರಿ ಇದ್ದಾಗ ಜೊತೆಗೆ ಬಂದು ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳನ್ನು ನೋಡುವುದಾಗಿ ಉತ್ಸಾಹದಿಂದ ಹೇಳಿದ್ದಾಳೆ. ಕಲಾವಿದನಾಗಿ ಸದಾ ಸಂಗೀತವನ್ನೇ ಧ್ಯಾನಿಸುವ ನಾನು ಮನೆಯ ಕಡೆ ಚಿಂತಿಸಿಯೇ ಇಲ್ಲ. ಕರೆಂಟ್‌ ಬಿಲ್‌ ಕಟ್ಟಿಲ್ಲ ಎಂದು ಯಾವತ್ತೂ ನೆನಪಿಸಿಕೊಂಡಿಲ್ಲ. ಸರೋಜಿನಿಯಂಥ ಮಲ್ಟಿ ಟಾಸ್ಕ್‌ ನಿಪುಣೆ ಇದ್ದ ಮೇಲೆ ಇದಕ್ಕೆ ಅವಕಾಶವೇ ಇಲ್ಲ. ಈಗಲೂ ಕಛೇರಿಗಳಿಂದ ಬರುವ ಹಣವನ್ನು ಹಿಂದಿನ ದಿನಗಳಂತೆಯೇ ಅವಳ ಕೈಗಿಟ್ಟ ಮೇಲೆ ನನಗೆ ಚಿಂತೆಯೇ ಇಲ್ಲ. ಅವಳು ನನಗೆ ಕೊಟ್ಟಿರುವ ಮಾನಸಿಕ ನೆಮ್ಮದಿ, ಶಾಂತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವಳಿಗೆ ನಾನು ಹೇಗೆ ಥ್ಯಾಂಕ್ಸ್‌ ಹೇಳುವುದೋ ಗೊತ್ತಿಲ್ಲ. ಅವಳಿಗೆ ದೇವರು ದೀರ್ಘಾಯುಷ್ಯ ಕೊಡಲಿ ಎಂದು ನಾನು ಪ್ರಾರ್ಥಿಸುತ್ತೇನೆ.ಪ್ರಾಣಪ್ರಿಯ ಸ್ಯಾಕ್ಸೊಫೋನ್‌, ನಿರಂತರ ಕಛೇರಿ ಕಾರ್ಯಕ್ರಮಗಳು, ಝಗಮಗಿಸುವ ವೇದಿಕೆಗಳು, ಖಂಡಾಂತರ ವಿಮಾನ ಹಾರಾಟಗಳು– ಹೀಗೆ ಸಾರ್ವಜನಿಕರ ಸಮ್ಮುಖದಲ್ಲೇ ಇರುವ ಅಬ್ಬರದ ಜೀವನ ನನ್ನದು. ಈ ಅಬ್ಬರದ ಸಾಗರಕ್ಕೆ ಸದ್ದಿಲ್ಲದೆ ಬಂದು ಸೇರುವ ಜೀವನದಿ ನೇತ್ರಾವತಿ ಅವಳು. ಈ ಸಂಗಮ ಹೀಗೆ ಇರಲಿ ಎಂದು ಹಾರೈಸುವ ನೀವು. ನನಗಿನ್ನೇನು ಬೇಕು?

author- ಪೂರ್ಣಿಮಾ ಆರ್.

courtsey:prajavani.net

https://www.prajavani.net/artculture/article-features/sarojini-my-soul-kadri-672904.html

Leave a Reply