ಅಂಬರದಲ್ಲಿ ಅರಳಿದ ಹೂಗಳು

ಅಂಬರದಲ್ಲಿ ಅರಳಿದ ಹೂಗಳು
ಇದು  ಸೌಮ್ಯಾ  ಅಂದರೆ ನಮ್ಮೆಲ್ಲರ ಸೋನು ಬರೆದಂಥ ಕಾದಂಬರಿ. ಇದು ಅವರ ಇತ್ತೀಚಿನ ಕಾದಂಬರಿ. ಸೋನು ಭಾವಜೀವಿ ಎನ್ನುವುದು ಈ  ಕಾದಂಬರಿಯಲ್ಲಿ ಹೆಜ್ಜೆ ಹೆಜ್ಜೆಗೆ ಅರಿವಾಗುತ್ತದೆ. ವಿಭಿನ್ನ ಸಮುದಾಯದ ವಿಭಿನ್ನ ವ್ಯಕ್ತಿತ್ವಗಳನ್ನು ಪ್ರೀತಿಯ ಒಂದು ಬಂಧನದಲ್ಲಿ ಬಂಧಿಸುವ, ಆ ಹೃದಯಗಳು  ಶುದ್ಧ  ಸ್ನೇಹ,  ಪ್ರೀತಿಗಳಿಗಾಗಿ  ತುಡಿಯುವುದನ್ನು  ಚಿತ್ರಿಸುವ ಸೋನುವಿನ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಆ ಯುವ ಹೃದಯಗಳ ನೋವು ನಲಿವುಗಳು ಇಲ್ಲಿ ಅತ್ಯಂತ ಸುಂದರವಾಗಿ  ಬಿಂಬಿತವಾಗಿವೆ. ಮೆಹರ್.. ಅಚ್ಚು  ಇವರಿಬ್ಬರ  ಪ್ರೀತಿ  ಬೆಳೆಯುವ  ಪರಿಯಂತೂ  ಮನಮೋಹಕವಾಗಿದೆ.
ಮೊದಲರ್ಧ  ಪ್ರೀತಿ,  ಪ್ರೇಮಗಳಲ್ಲೇ  ಸಾಗುವ ಕಥೆಯಲ್ಲಿ ನಂತರ ಅನೇಕ ತಿರುವುಗಳು ಬರುತ್ತವೆ. ಇವರಿಬ್ಬರ ಪ್ರೀತಿಯನ್ನು ಮನೆಯಲ್ಲಿ  ಒಪ್ಪಿಕೊಳ್ಳುವುದಿಲ್ಲವೇನೋ  ಎಂದು  ಓದುಗ ಯೋಚಿಸುತ್ತಿರುವಂತೆಯೇ  ಕಥೆಯ  ಓಟ  ತನ್ನ  ದಿಕ್ಕನ್ನು  ನಮ್ಮ ಊಹೆಯ ಓಟವನ್ನು ತಪ್ಪಿಸಿ  ಸಾಗಿಬಿಡುತ್ತದೆ. ಮೊದಲು  ಒಪ್ಪಿಗೆ  ಕೊಡುವವರು  ಮೆಹರಳ  ತಾಯಿ. ಆದರೆ ಆಗ ಇವರಿಬ್ಬರ ಪ್ರೀತಿಯ ಪಯಣ ಇನ್ನೂ ತನ್ನ  ಉತ್ತುಂಗವನ್ನು ತಲುಪಿರುವುದಿಲ್ಲ. ನಂತರ  ಅನೇಕ  ಘಟನೆಗಳು  ನಡೆಯುತ್ತವೆ.
ಇಲ್ಲಿ  ಕಥೆಯ  ಓಟ ಹೆಚ್ಚುತ್ತದೆ. ಲೇಖಕಿ  ಸಾಮಾಜಿಕ  ಸಮಸ್ಯೆಗಳಿಗೇ  ಹೆಚ್ಚಿನ  ಒತ್ತು ನೀಡುತ್ತಹೋಗುತ್ತಾರೆ. ಮಾಧವಿ ಎಂಬ ಹುಡುಗಿ  ಜಗತ್ತಿನ  ಕ್ರೂರ  ಕಣ್ಣುಗಳಿಂದ ತನ್ನ ಮಾನ, ಪ್ರಾಣಗಳನ್ನು ಕಾಪಾಡಿಕೊಳ್ಳಲು, ತನ್ನ ತಂದೆಯ  ಅನಿರೀಕ್ಷಿತ ಕೊಲೆಯಿಂದಾಗಿ  ತನ್ನ  ತಂಗಿ  ಹಾಗೂ  ಕ್ಯಾನ್ಸರ್ ಪೀಡಿತ ತಾಯಿಯನ್ನು ಸಾಕಲು ಪುರುಷವೇಷ ಧರಿಸಿದರೆ  ಮೆಹರ್  ತನ್ನ ಅಕ್ಕನಿಗೆ,  ತನ್ನ  ಗೆಳತಿಗೆ  ಆದ ಅನ್ಯಾಯಗಳಿಗೆ ಸೇಡು ತೀರಿಸಿಕೊಳ್ಳಲು ಹುಡುಗಿಯಾಗಿಯೇ  ಹೋರಾಡುತ್ತಾಳೆ. ಹೆಣ್ಣಿನ ಅಮಾಯಕತೆಯನ್ನು  ಉಪಯೋಗಿಸಿಕೊಂಡು  ಅವಳನ್ನು ನಾನಾ ರೀತಿಯಲ್ಲಿ ಹಿಂಸಿಸುವ ಪುರುಷನ  ಪಾಶವೀಶಕ್ತಿಯ ವಿರುದ್ಧ  ಬಂಡೆದ್ದು  ಧೈರ್ಯದಿಂದ  ಅವರನ್ನು  ಸದೆಬಡಿಯುವ ವೀರವನಿತೆಯಾಗಿ ಮೆಹರ್ ಚಿತ್ರಿತವಾದರೆ, ಅವಳಿಗೆ ಸಹಾಯ ಮಾಡುವ ಮಾಧವಿಯದೂ  ಅಸಾಮಾನ್ಯ  ವ್ಯಕ್ತಿತ್ವವೇ! ಒಬ್ಬಂಟಿಯಾಗಿ  ರೌಡಿಗಳನ್ನು  ಸದೆಬಡಿಯಲು  ಹೋದ ಮೆಹರ್ ಳನ್ನು ಹುಡುಕಿಕೊಂಡು  ಹೋದ  ಅಚ್ಚುವಿಗೆ ಎದುರಾದದ್ದು ಇನ್ನೊಂದು  ದಾರುಣ  ಸನ್ನಿವೇಶ. ಹೆರಾಯಿನ್ ಕಳ್ಳಸಾಗಾಣಿಕೆಯ  ಧಂಧೆ  ನಡೆಸುತ್ತಿದ್ದ  ಮಕರಂದ. ಪ್ಲಾಸ್ಟಿಕ್  ಚೀಲಗಳಲ್ಲಿ  ಹೆರಾಯಿನ್ ತುಂಬಿಸಿ ಅವುಗಳನ್ನು ಹಣದ ಸಲುವಾಗಿ  ನುಂಗುವ  ಬಡಪಾಯಿಗಳು.. ಅವರಲ್ಲಿ ಒಬ್ಬ ಮಹಿಳೆ.. ಅವಳು ನುಂಗಿದ ಚೀಲವೊಂದು ಹೊಟ್ಟೆಯಲ್ಲಿಯೇ ಒಡೆದಾಗ  ಅವಳು  ಅಪಾರ  ಹೊಟ್ಟೆ  ನೋವಿಂದ ಬಳಲುತ್ತಿದ್ದಂತೆ ಅವಳ ಹೊಟ್ಟೆಯನ್ನು ಒಂದಿಷ್ಟೂ ಮಾನವೀಯತೆಯಿಲ್ಲದೆ  ಕೊಯ್ದು  ಆ  ಉಳಿದ  ಚೀಲಗಳನ್ನು ತೆಗೆದುಕೊಳ್ಳುವ ಧನಪಿಪಾಸು ಮಕರಂದ! ಇದನ್ನು ತನ್ನ ಮೊಬೈಲ್ನಲ್ಲಿ ವೀಡಿಯೊ ಮಾಡಿದ  ಅಚ್ಚುವಿಗೆ ತಲೆಗೆ ಹೊಡೆದು ಆ ರೌಡಿ ಪರಾರಿಯಾಗುತ್ತಾನೆ. ಅಚ್ಚು ಮೆದುಳಿಗೆ ಬಲವಾದ ಏಟು ಬಿದ್ದಾಗ ಮೆಹರ್ ಅವನನ್ನು ಮಾಧವಿಯ ಸಹಾಯದಿಂದ ಆಸ್ಪತ್ರೆಗೆ ಸೇರಿಸುತ್ತಾಳೆ. ಆದರೆ ಅವನು ಉಳಿಯುವುದಿಲ್ಲ. ಅವನ ಹೃದಯವನ್ನು ಒಬ್ಬ ಹೃದಯರೋಗಿ ಮಗುವಿಗೆ ಕಸಿಮಾಡಲಾಗುತ್ತದೆ. ಆಗ ಮೆಹರ್ ಪಡುವ ಯಾತನೆಯನ್ನು ಅತ್ಯಂತ ಮನೋಜ್ಞವಾಗಿ ಬಿಂಬಿಸಿದ್ದಾರೆ ಲೇಖಕಿ. ಕೊನೆಯಲ್ಲಿ ಮೆಹರ್ ಕೂಡ ಆತ್ಮಹತ್ಯೆ ಮಾಡಿಕೊಂಡು ಅಚ್ಚುವಿನ ಜೊತೆಗೆ ಸಮಾಧಿ ಹೊಂದುವುದರೊಂದಿಗೆ ಕಥೆ ಮುಗಿಯುತ್ತದೆ.
ಲೇಖಕಿ ಸೋನು ಸಮಾಜದ ಈ  ಅತ್ಯಾಚಾರ, ಅನ್ಯಾಯ, ಯುವಪೀಳಿಗೆಯನ್ನು ದಾರಿ ತಪ್ಪಿಸುತ್ತಿರುವ ಡ್ರಗ್ ಮಾಫಿಯಾ ಬಗ್ಗೆ ತಮ್ಮ ಆಕ್ರೋಶವನ್ನು ಕಥಾರೂಪದಲ್ಲಿ ವ್ಯಕ್ತಗೊಳಿಸುವ ರೀತಿಯೂ ತುಂಬ ಇಷ್ಟವಾಗುತ್ತದೆ.
ಒಟ್ಟಿನಲ್ಲಿ ಇದು ಸಮಾಜದ ಕಣ್ಣು ತೆರೆಸುವ ಒಂದು ಅದ್ಭುತ ಕಾದಂಬರಿ. ಈ ಲೇಖಕಿಯಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾದಂಬರಿಗಳು, ಕಥೆಗಳು ಹೊರಬರಲಿ. ಸಮಾಜವನ್ನು ತಿದ್ದುವ ಕೆಲಸ ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತೇನೆ.

Leave a Reply