ಅನುವಾದ ಸಾಹಿತ್ಯ ಭಾಗ -೧

ಅನುವಾದ ಸಾಹಿತ್ಯ

“ಅವಳ ತೊಡುಗೆ ಇವಳಿಗಿಟ್ಟು ನೋಡಬಯಸಿದೆ. ಇವಳ ತೊಡುಗೆ ಅವಳಿಗಿಟ್ಟು ಹಾಡಬಯಸಿದೆ” ಎಂದು ಭಾಷಾಂತರ ಅಥವಾ ಅನುವಾದದ ಬಗ್ಗೆ ಬಿ. ಎಂ. ಶ್ರೀ. ಯವರು ಹೇಳಿದ್ದಾರೆ.
‘ಭಾಷಾಂತರ ಸೋಮಾರಿಗಳ ಕೆಲಸವಲ್ಲ, ಅದು ಪ್ರತಿಭಾವಂತರು ಕೈಗೊಳ್ಳಬೇಕಾದ ಕಾರ್ಯ ‘ ಎಂದು ದೇ. ಜವರೇಗೌಡರವರು ಹೇಳಿದ್ದಾರೆ.
‘ಒಂದು ಸಂಸ್ಕೃತಿಯ ಸಾಹಿತ್ಯವು ಇನ್ನೊಂದು ಸಂಸ್ಕೃತಿಯಲ್ಲಿ ಮೊದಲು ಪ್ರವೇಶಿಸುವುದೇ ಭಾಷಾಂತರದ ಮೂಲಕ. ಆಮೇಲೆ ಆ ಭಾಷಾಂತರವು ಸ್ವತಂತ್ರ ಸಾಹಿತ್ಯಕೃತಿಗಳಿಗೆ ದಾರಿ ಮಾಡಿಕೊಡುತ್ತದೆ” ಎಂದು ಡಾ. ಎಂ.ಎಂ. ಕಲ್ಬುರ್ಗಿಯವರು ಹೇಳಿದ್ದಾರೆ.
ಕುವೆಂಪುರವರು ಹೇಳುವಂತೆ ಭಾಷಾಂತರವು ಆತ್ಮದಿಂದ, ಮನಸಿನಿಂದ ಹುಟ್ಟಿದ ಭಾವನೆಗಳ ಅಭಿವ್ಯಕ್ತಿಯಾಗಿದೆ. ಇದು ಭಾವನೆ ಮತ್ತು ಭಾಷೆಗಳೆರಡರ ಮಧ್ಯೆ ನಡೆಯುವ ಪ್ರಕ್ರಿಯೆ. ಅಮೂರ್ತದಿಂದ ಮೂರ್ತದ ಕಡೆಗೆ ನಡೆಯುವ ಕಾರ್ಯ. ಇದು ರೂಪ-ರೂಪಗಳನ್ನು ದಾಟಿ ರೂಪಾಂತರವನ್ನು ಹೊಂದಿ, ನಾಮಕೋಟಿಗಳನ್ನು ಮೀಟಿ-ಭಾಷೆಗಳ ನಡುವಿನ ಗೋಡೆಯನ್ನು ಮೀಟಿ, ಎದೆಯ ಬಿರಿಯ ಭಾವ ದೀಟಿ-ಭಾವಾಂತರವನ್ನು ಹೊಂದಿ, ಭಾಷಾಂತರ ಎನ್ನುವ ಚೇತನವು ಅನಿಕೇತನವಾಗಿ ಬೆಳೆಯುತ್ತದೆ.
ಒಟ್ಟಾರೆ ಈ ವ್ಯಾಖ್ಯಾನಗಳನ್ನು ಗಮನಿಸಿದಾಗ ಭಾಷಾಂತರವು ಮೂಲ ಸೃಷ್ಟಿಯ ಪುನಃಸೃಷ್ಟಿ. ಇದು ಅನುವಾದಕನ ಸೃಜನಶೀಲತೆಗೆ ಸವಾಲಾಗಿ ತನ್ನನ್ನು ಗುರುತಿಸಿಕೊಂಡಿದೆ ಎಂದು ಹೇಳಬಹುದು. ಕೃತಿಯೊಂದನ್ನು ಮಹಾನ್ ಕೃತಿಯೆಂದು ಕರೆಯಲು ಅದು ಹಲವಾರು ‘ಓದು’ಗಳಿಗೆ ಅವಕಾಶ ಮಾಡಿಕೊಡುವ ಗುಣದಿಂದಾಗಿಯೂ ಹೌದು. ಅಂತಹ ಓದಿನಲ್ಲಿ ‘ಅನುವಾದ’ ಪ್ರಮುಖವಾದುದು.
ಕನ್ನಡ ಸಾಹಿತ್ಯ ಕಾರ್ಯ ಪ್ರಾರಂಭವಾದುದು ಅನುವಾದದಿಂದಲೇ. ಹಳಗನ್ನಡ ಕಾವ್ಯಗಳಲ್ಲಿ ಬಹುತೇಕ ಕಾವ್ಯಕೃತಿಗಳು ಸಂಸ್ಕೃತದ ಪ್ರಭಾವದಿಂದ ರಚಿತವಾಗಿವೆ. ಕವಿರಾಜಮಾರ್ಗಕಾರನು ತನ್ನ ಕವಿರಾಜಮಾರ್ಗ ಕೃತಿಯಲ್ಲಿ ಬರುವ ಹಲವು ಪ್ರಕರಣಗಳನ್ನು ವಿವಿಧ ಕೃತಿಗಳಿಂದ ಸ್ವೀಕರಿಸಿದ್ದಾನೆ. ‘ನಾಟ್ಯ ಶಾಸ್ತ್ರ’ದಿಂದ ರಸ ಪ್ರಕರಣ, ‘ಕಾವ್ಯಾದರ್ಶ’ದಿಂದ ಗುಣ ಪ್ರಕರಣ, ‘ಭಾಮಹ’ನಿಂದ ಅಲಂಕಾರ ಪ್ರಕರಣ ಇವುಗಳನ್ನೆಲ್ಲವನ್ನೂ ಅನುವಾದಿಸಿ ತನ್ನ ಪ್ರತಿಭೆಯನ್ನು ತೋರಿಸುತ್ತಾ ಬಂದಿದ್ದಾನೆ.
ಪಂಪನ ಆದಿಪುರಾಣ ಕೃತಿಗೆ ಜಿನಸೇನಾಚಾರ್ಯನ ಪೂರ್ವಪುರಾಣ ಮೂಲ ಆಕರವಾಗಿದೆ. ವ್ಯಾಸಭಾರತವು ಪಂಪಭಾರತದ ಮುಖ್ಯ ಆಕರವಾಗಿದೆ. ರನ್ನ, ಪೊನ್ನ, ನಾಗಚಂದ್ರ ಮುಂತಾದವರು ತಮ್ಮ ಕೃತಿಗಳ ರಚನೆಗೆ ಸಂಸ್ಕೃತ ಕವಿಗಳ ಹಲವು ಕೃತಿಗಳನ್ನು ಮೂಲ ಆಕರವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಜನ್ನನ ಯಶೋಧರ ಚರಿತೆಗೆ  ವಾದಿರಾಜನ ಸಂಸ್ಕೃತ ಯಶೋಧರ ಚರಿತೆಯು ಮೂಲ. ಕುಮಾರವ್ಯಾಸನ ಗದುಗಿನ ಭಾರತವು ವ್ಯಾಸಭಾರತದ ಹತ್ತು ಪರ್ವಗಳನ್ನು ಕನ್ನಡೀಕರಿಸಿದೆ. ಆದರೂ ಕವಿಯ ಸಹಜ ಪ್ರತಿಭೆಯಿಂದಾಗಿ ಕನ್ನಡ ಭಾರತವು ವ್ಯಾಸಭಾರತದ ಅನುವಾದವಾಗಿ ಕಾಣದೆ ಸ್ವತಂತ್ರ ಕಳೆಯುಳ್ಳ ಪ್ರತಿನಿರ್ಮಾಣವಾಗಿದೆ.
ಹೊಸಗನ್ನಡ ಕಾವ್ಯ ಅನುವಾದದಲ್ಲಿ ಪಾಶ್ಚಾತ್ಯರ ಕಾವ್ಯದ ಪ್ರಭಾವ ಹೆಚ್ಚು ಇದೆ. ಬಿ ಎಂ ಶ್ರೀಕಂಠಯ್ಯನವರು, ಎಸ್.ಜಿ.ನರಸಿಂಹಚಾರ್ಯ, ಪಂಜೆಮಂಗೇಶರಾಯ, ಗೋವಿಂದ ಪೈ, ಹಟ್ಟಿಯಂಗಡಿ ನಾರಾಯಣರಾಯರು ಇತ್ತೀಚಿನ ಶ್ರೇಷ್ಠ ಅನುವಾದ ಸಾಹಿತ್ಯ ರಚನೆಕಾರರು. ಕುವೆಂಪುರವರು ಷೇಕ್ಸಪಿಯರನ ಹ್ಯಾಮ್ಲೆಟ್ ನಾಟಕವನ್ನು ರಕ್ತಾಕ್ಷಿ ಎಂಬ ಹೆಸರಿನಿಂದಲೂ, ಟೆಂಪೆಸ್ಟ್ ನಾಟಕವನ್ನು ಬಿರುಗಾಳಿ ಎಂದೂ ಅನುವಾದಿಸಿದ್ದಾರೆ. ಗಳಗನಾಥರು ಮರಾಠಿ ಸಾಹಿತ್ಯದ ಕಾದಂಬರಿಗಳನ್ನು ಸಶಕ್ತವಾಗಿ ಕನ್ನಡೀಕರಿಸಿದ್ದಾರೆ. ಅವರ ಕಾದಂಬರಿಗಳನ್ನು ಓದುವಾಗ ಎಲ್ಲಿಯೂ ಅನುವಾದವೆಂಬ ಅನುಮಾನವೇ ಹತ್ತಿರ ಸುಳಿಯದು.
ಭಾಷಾಂತರ ಎಂದರೆ ಒಂದು ಭಾಷೆಯಲ್ಲಿನ ಮಾತು ಅಥವಾ ಬರವಣಿಗೆಯನ್ನು ಇನ್ನೊಂದು ಭಾಷೆಯಲ್ಲಿ ಸಮಾನ ಅರ್ಥ ನೀಡುವಂತೆ ಪರಿವರ್ತಿಸುವ ಒಂದು ಪ್ರಕ್ರಿಯೆ. ಕನ್ನಡದಲ್ಲಿ ಇದಕ್ಕೆ ಸಂವಾದಿಯಾದ ಇತರ ಪದಗಳು: ಅನುವಾದ, ತರ್ಜುಮೆ, ಕನ್ನಡೀಕರಿಸು (ಬೇರೆ ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರಿಸುವಾಗ), ಮರುಬರವಣಿಗೆ, ರೂಪಾಂತರ, ಅಳವಡಿಕೆ ಇತ್ಯಾದಿ. ಮಾನವನು ತನ್ನ ಬುದ್ಧಿಶಕ್ತಿಯಿಂದ ಕಂಡುಕೊಂಡ ಭಾಷೆ ಸಾಮಾಜಿಕ ಸಂಪರ್ಕ ಮಾಧ್ಯಮವಾಗಿ ಬೆಳೆಯಿತು. ಹಾಗೆ ಸಂವಹನದ ಮತ್ತು ಸಂಪರ್ಕದ ಕೊರತೆಗಳನ್ನು ತೊಡೆದು ಹಾಕಲು ಕಾರಣವಾದುದೇ ಭಾಷಾಂತರ.. ಕೆ.ಎಸ್.ನಿಸಾರ್ ಅಹಮದ್‌ರವರು ತಮ್ಮ ಪ್ಯಾಬ್ಲೊನೆರುಡನ ‘ಬರೀ ಮರ್ಯಾದಸ್ಥರೆ’ ಎಂಬ ಕೃತಿಯಲ್ಲಿ ಭಾಷಾಂತರ ಎಂದರೆ ‘ವಿದ್ಯುತ್ ದೀಪದ ಗೈರು ಹಾಜರಿಯಲ್ಲಿ ಕತ್ತಲೆ ಅನುಭವಿಸುವುದರ ಬದಲು ಮೇಣದ ಬತ್ತಿಯಾದರೂ ಲಭ್ಯವಿದೆಯೆಂದು ಸಮಾಧಾನಪಡುವಂತೆ’ ಎಂದು ಹೇಳುತ್ತಾರೆ. ಎಂದರೆ ಇವರ ಅಭಿಪ್ರಾಯದಲ್ಲಿ  ಸೃಜನಶೀಲ ಸಾಹಿತ್ಯದ ಗೈರು ಹಾಜರಿಯಲ್ಲಿ ಅಜ್ಞಾನವನ್ನು ಹೋಗಲಾಡಿಸಲು ಪರ್ಯಾಯವಾಗಿ ನಿರ್ಮಿಸಿಕೊಂಡ ಮಾರ್ಗವೇ ಭಾಷಾಂತರ’ ಎಂದು ಹೇಳಬಹುದು. ಇದು ಅಷ್ಟು ಸಮಂಜಸ ಅಂತ ಎನ್ನಿಸದು. ಅನುವಾದವು ಮೂಲದ ಛಾಯೆಯಲ್ಲ, ಅನುವಾದವು ಕೇವಲ ಭಾಷಿಕ ಪ್ರಕ್ರಿಯೆಯಲ್ಲ. ಇದರ ಪ್ರಮುಖ ಅಂಶವೆಂದರೆ ಅನುವಾದದ ವಿವಿಧ ವಿನ್ಯಾಸಗಳ ಸ್ವರೂಪ. ಅದಕ್ಕೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳಿವೆ. ಭಾಷಾಂತರವೆಂದರೆ ಎರಡು ಸಂಸ್ಕೃತಿಗಳ ನಡುವಿನ ವಿನಿಮಯ.
ಭಾಷೆಗಳು ಆರಂಭವಾದಾಗಿನಿಂದ ಭಾಷಾಂತರವು ಆರಂಭಗೊಂಡಿದೆ. ಭಾಷೆ ಎಷ್ಟು ಹಳೆಯದೊ ಭಾಷಾಂತರವೂ ಅಷ್ಟೇ ಹಳೆಯದಾದ ಪ್ರಕ್ರಿಯೆ.
ಒಂದು ಭಾಷೆ ಮತ್ತು ಸಾಹಿತ್ಯ ಬೆಳೆಯಬೇಕಾದರೆ ಅದರ ವ್ಯಾಪ್ತಿ ವಿಸ್ತೃತವಾಗುತ್ತಾ ಹೋಗಬೇಕು. ಭಾಷಾ ಸಾಹಿತ್ಯದ ಕಂಪು ಎಲ್ಲೆಡೆ ಪಸರಿಸಬೇಕಾದರೆ ನಮ್ಮ ಸಾಹಿತ್ಯ ಇನ್ನೊಂದು ಭಾಷೆಗೆ ಅನುವಾದವಾಗುವುದು ಮುಖ್ಯ. ನೊಬೆಲ್ ಪ್ರಶಸ್ತಿಗೆ ಕೃತಿಯೊಂದನ್ನು ಆಯ್ಕೆ ಮಾಡಬೇಕಾದರೆ ಆ ಭಾಷೆಯ ಕೃತಿ ಇಂಗ್ಲೀಷ್‌ಗೆ ಅನುವಾದವಾಗಿರುತ್ತದೆ. ಪ್ರಶಸ್ತಿ ನಿರ್ಣಾಯಕರ ಮಂಡಳಿ ಪ್ರಾದೇಶಿಕ ಭಾಷೆಯಲ್ಲಿರುವ ಕೃತಿಯನ್ನು ಇಂಗ್ಲಿಷ್‌ನಲ್ಲಿ ಓದಿದ ನಂತರವೇ ಅದನ್ನು ಪ್ರಶಸ್ತಿಗೆ ಪರಿಗಣಿಸುತ್ತದೆ. ಹೀಗಿರುವಾಗ ಅಲ್ಲಿ ಅನುವಾದ ಹೆಚ್ಚಿನ ಪ್ರಾಧಾನ್ಯತೆಯನ್ನು ವಹಿಸುತ್ತದೆ. ಆದರೆ ರಾಜ್ಯಕ್ಕೊಂದು, ಜಿಲ್ಲೆಗಳಿಗೊಂದು, ಸಮುದಾಯಗಳಿಗೊಂದು ಭಾಷೆಯಿರುವ ನಮ್ಮ ದೇಶದಲ್ಲಿ ಇತರ ಭಾಷೆಗಳ ಕೃತಿಗಳು ಪ್ರಾದೇಶಿಕ ಭಾಷೆಗಳಿಗೆ ಅನುವಾದಗೊಂಡರೆ ಮಾತ್ರ ಅದು ಸಾಮಾನ್ಯ ಜನರನ್ನು ತಲುಪುತ್ತದೆ. ಕನ್ನಡ ಭಾಷೆಯ ಮಟ್ಟಿಗೆ ಹೇಳುವುದಾದರೆ ಕನ್ನಡದ ಹಲವಾರು ಕೃತಿಗಳು ಇತರ ಭಾಷೆಗಳಿಗೆ ತರ್ಜುಮೆಯಾಗಿವೆ.    ಭಾಷೆ ಮತ್ತು ಸಾಹಿತ್ಯದ ಸಂದರ್ಭದಲ್ಲಿ ಭಾಷಾಂತರಕ್ಕೆ ಮಹತ್ವದ ಸ್ಥಾನವಿದೆ.  ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಅನ್ಯದೇಶಿ ಭಾಷೆಗಳು ಪ್ರಭಾವ ಬೀರಿವೆ. ಪ್ರಾಚೀನ ಕನ್ನಡ ಸಾಹಿತ್ಯದ ಮೇಲೆ ಸಂಸ್ಕೃತ, ಪ್ರಾಕೃತದ ಪ್ರಭಾವವಿದ್ದರೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಗ್ರೀಕ್, ಲ್ಯಾಟಿನ್, ಇಂಗ್ಲೀಷ್ ಹಾಗೂ ಹಲವಾರು ಭಾಷೆಗಳ ಪ್ರಭಾವವಿದೆ. ಹೀಗೆ ವಿವಿಧ ಭಾಷೆ, ದೇಶ, ಸಂಸ್ಕೃತಿಗಳು ಸಾಹಿತ್ಯಿಕವಾಗಿ, ಸಾಮಾಜಿಕವಾಗಿ, ಸಾಮೂಹಿಕವಾಗಿ, ಸಾಂಸ್ಕೃತಿಕವಾಗಿ ಒಂದುಗೂಡಲು ಭಾಷಾಂತರ ಮತ್ತು ಅನುವಾದಗಳು ಕಾರಣವಾಗಿವೆ ಎಂದು ಹೇಳಬಹುದು.
ಒಟ್ಟಿನಲ್ಲಿ ಅನುವಾದವು ಮೂಲ ಸಾಹಿತ್ಯದ ಭಾವಕ್ಕೆ, ಚೌಕಟ್ಟಿಗೆ, ಅರ್ಥ ಸ್ವಾರಸ್ಯಕ್ಕೆ ಭಂಗ ತರದೆ ಉದ್ದಿಷ್ಟ ಭಾಷೆಯಲ್ಲಿ ಕೂಡ ಒಂದು ಹೊಸತನ ಮೂಡಿಸುವ, ಇಲ್ಲಿನ ಸಂಸ್ಕೃತಿ, ಆಚಾರ, ವೈಚಾರಿಕ ದೃಷ್ಟಿಕೋನ ಇವುಗಳ ಅರಿವು ಇಟ್ಟುಕೊಂಡು ರಚಿಸಿದ ವಿಶಿಷ್ಟ ಬರಹ ಎನ್ನಬಹುದು. ಅನುವಾದದಲ್ಲಿ ಗಮನಿಸಬೇಕಾಗಿರುವುದು ಕೇವಲ ಭಾಷಿಕ ಅಂಶವನ್ನು ಮಾತ್ರವಲ್ಲ, ಸಾಂಸ್ಕೃತಿಕ ಅಂಶಗಳಿಗೂ, ರಾಜಕೀಯ ಅಂಶಗಳಿಗೂ ಗಮನ ಕೊಡಲೇಬೇಕಾಗುತ್ತದೆ ಎಂದಮೇಲೆ ಅನುವಾದ ಎಂದರೆ ಸಾಹಿತ್ಯದೊಂದಿಗೆ ಸಂಸ್ಕೃತಿಯ ಸಂವಹನವೂ ಆದಂತಲ್ಲವೆ?
ಖ್ಯಾತ ಲೇಖಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯರವರ ಪ್ರಕಾರ ಅನ್ಯವನ್ನು ಒಳಗೊಳ್ಳುವುದೇ ಆನುವಾದದ ಮೂಲ ಆಶಯ. ಅನುವಾದವೆಂದರೆ ಬೇರೆ ಬೇರೆ ಜಗತ್ತುಗಳನ್ನು ಒಂದುಗೂಡಿಸುವುದು ಎಂಬ ವ್ಯಾಖ್ಯಾನವೂ ಇದೆ. ಅನುವಾದಕ್ಕೆ ಸುದೀರ್ಘ ಇತಿಹಾಸವಿದೆಯಾದರೂ ಇದೊಂದು ಅಧ್ಯಯನದ ವಿಷಯವಾಗಿ ಮೊದಲು ಪರಿಗಣಿಸಲ್ಪಟ್ಟಿರಲಿಲ್ಲ. ಭಾಷಾಂತರ ಅಧ್ಯಯನಕ್ಕೆ ಸ್ವತಂತ್ರ ಅಧ್ಯಯನ ಕ್ಷೇತ್ರದ ಸ್ಥಾನವನ್ನು ಕಲ್ಪಿಸಿಕೊಟ್ಟವರಲ್ಲಿ ಜೇಮ್ಸ್ ಹೋಮ್ಸ್ ಮೊದಲಿಗ.
ಇಲ್ಲಿ ಗಮನಿಸಬೇಕಾದಂಥ ವಿಷಯವೆಂದರೆ ಈ ಪ್ರಕ್ರಿಯೆಯಲ್ಲಿ ಮೂಲದಷ್ಟೇ ಅನುವಾದಿತ ಕೃತಿಗೂ ಮಹತ್ವ ಸಿಗಬೇಕೆನ್ನುವುದು.
ರಾಮಾನುಜನ್ ಹೇಳುವಂತೆ ಅನುವಾದದಲ್ಲಿ ಪಠ್ಯವಷ್ಟೇ ಮುಖ್ಯವಾಗಿರದೆ ಆ ಪಠ್ಯದ ಪರಿಸರವೂ ಪ್ರಧಾನವಾಗಿರುತ್ತದೆ. ಕೃತಿಯನ್ನು ರೂಪಿಸಿದ ಸಂಸ್ಕೃತಿ, ಸಂದರ್ಭ, ಭಾಷೆಯ ಧ್ವನಿ ಇವೆಲ್ಲವೂ ಅನುವಾದದಲ್ಲಿ ಆಕೃತಿ ಪಡೆಯಬೇಕು. ಅವರೇ ಹೇಳುವಂತೆ ಹಾಗೆ ಅನುವಾದವನ್ನು ಓದುವಾಗ ಮೂಲಭಾಷೆಯ ಓದುಗ ಪಡೆಯುವ ಅನುಭವವನ್ನೇ ಪಡೆಯುವಂತಿರಬೇಕು. ಮೂಲಕ್ಕೆ ಚ್ಯುತಿ ಬಾರದಂತೆ ಅನುವಾದಿಸಬೇಕು. ಆದರೆ ಈ ನಿಲುವನ್ನು ವಸಾಹತೋತ್ತರ ಚಿಂತನೆಯಲ್ಲಿ ಪ್ರಬಲವಾಗಿ ವಿರೋಧಿಸುತ್ತಾರೆ.
ಈಗ ನಾವು ಭಾರತೀಯ ಭಾಷೆಯಲ್ಲಿ ಅನುವಾದದ ರೀತಿಯನ್ನು ಗಮನಿಸಿದಾಗ ಇದೊಂದು ಮರುಸೃಷ್ಟಿಯೇ ಎನ್ನುವುದನ್ನು ನಾವು ಒಪ್ಪಲೇಬೇಕಾಗುತ್ತದೆ. ಸಂಸ್ಕೃತದಿಂದ ವಾಲ್ಮೀಕಿ, ವ್ಯಾಸರನ್ನು ಭಾರತೀಯ ದೇಸಿ ಭಾಷೆಗಳೆಲ್ಲವೂ ತಮ್ಮದಾಗಿಸಿಕೊಳ್ಳುವಾಗ ತಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಳ್ಳುವ ಸ್ವಾತಂತ್ರ‍್ಯವನ್ನು ನಮ್ಮ ಪ್ರಾಂತೀಯ ಭಾಷೆಗಳ ಕವಿಗಳು ಹೊಂದಿದವರು. ಪಂಪನು ವ್ಯಾಸಭಾರತವನ್ನು  ‘ವಿಕ್ರಮಾರ್ಜುನ ವಿಜಯ’ವನ್ನಾಗಿಸುವಾಗ, ತಾನು ಹೇಳುವ ಕತೆಯು ‘ಪಿರಿದಾದೊಡೇಂ ಕತೆಯ ಮೆಯ್ಗೆಡಲೀಯದೆ ಮುಂ ಸಮಸ್ತಭಾರತಂ’ ಎಂದು ಹೇಳುತ್ತಾನೆ. ಎಂದರೆ ತಾನು ಮೂಲವನ್ನು ಯಥಾವತ್ತಾಗಿ ಅಲ್ಲ, ಆದರೆ ಅದರ ಅಂದಗೆಡದ ಹಾಗೆ ಅದನ್ನು ಪುನರ‍್ರಚನೆ ಮಾಡಿದ್ದೇನೆ ಎಂಬ ಅರಿವು ಅವನಿಗಿದೆ.
ಇನ್ನೊಂದು ಗ್ರಂಥದಲ್ಲಿರುವ ಶಬ್ದಗಳಿಗೆ ಅರ್ಥವಾಗಿ ಶಬ್ದಗಳ ಜೋಡಣೆಯನ್ನು ಅನುವಾದ ಅಂತ ಹೇಳಲು ಆಗುವುದಿಲ್ಲ. ನಾವು ಅಲ್ಲಲ್ಲಿನ ಪರಿಸರವನ್ನು ಗಮನಿಸಬೇಕಾಗುತ್ತದೆ. ಅಲ್ಲಿನ ವಾತಾವರಣ, ಸಂಸ್ಕೃತಿಯನ್ನು ನಾವು ನಮ್ಮ ಅನುವಾದದ ಭಾಷೆಯಲ್ಲಿ ತರಲೇಬೇಕಾಗುತ್ತದೆ. ಅನುವಾದವೆನ್ನುವುದು ಸರಳವೇನಲ್ಲ.
ಎಚ್‌ಎಸ್‌ವಿಯವರು ಹೇಳಿದಂತೆ ಅನುವಾದ ಅಂದರೆ ಬೇರೆ ಆತ್ಮವನ್ನು ಮತ್ತೊಂದು ಆತ್ಮಕ್ಕೆ ಜೋಡಿಸುವುದು. ಅನುವಾದದಲ್ಲಿ ಬೇರೆಯವರ ಭಾವನೆಗಳನ್ನು ಆವಾಹಿಸಿಕೊಂಡು ಅದನ್ನು ಅಕ್ಷರ ರೂಪಕ್ಕೆ ತರಬೇಕಾಗುತ್ತದೆ. ಇದು ಹಾರ್ಟ್ ಸರ್ಜರಿಯಿದ್ದಂತೆ! ಎರಡೂ ದೇಹಗಳನ್ನು ಜೊತೆಯಲ್ಲಿಯೇ ಅಕ್ಕ ಪಕ್ಕದಲ್ಲಿ ಮಲಗಿಸಿ ಅವುಗಳ ನಾಡಿಬಡಿತ, ರಕ್ತದ ತುಡಿತಗಳನ್ನು ಅನುಸರಿಸಿ ಸರ್ಜರಿ ಮಾಡುವ ಜಾಣ ಸರ್ಜನ್ ಇದ್ದಂತೆ ಈ ಅನುವಾದಕ.
ಕನ್ನಡದಲ್ಲಿ ಅನುವಾದಿತ ಕೃತಿಗಳಿಗೆ ಒಳ್ಳೆಯ ಸ್ಪಂದನೆಯೂ ಇದೆ. ಅನುವಾದಕ್ಕೆ ಮುಖ್ಯ ಕಾರಣವೆಂದರೆ ಬೇರೊಂದು ಭಾಷೆಯಲ್ಲಿಯ ಒಂದು ಕೃತಿಯಿಂದ ಆಕರ್ಷಿತನಾದಂಥ ವ್ಯಕ್ತಿಯು ಆ ಒಂದು ಒಳ್ಳೆಯ ಕೃತಿಯು ಕನ್ನಡದ ಓದುಗರಿಗೂ ಸಿಗಲಿ ಎಂಬ ಬಯಕೆಯನ್ನು ಹೊಂದುವುದು. ಆದರೆ ಕೇವಲ ಈ ರೀತಿಯ ಬಯಕೆಗಳಿಂದಲೇ ಏನೂ ಸಾಧಿಸಲಾಗದು.
ಅನುವಾದಕನಿಗೂ ಕೆಲವು  ಅರ್ಹತೆಗಳು ಇರಲೇಬೇಕಾಗುತ್ತವೆ. ಅನುವಾದಕನಿಗೆ ಇರುವ ಮುಖ್ಯ ಅರ್ಹತೆಯೆಂದರೆ ಭಾಷೆಯ ಮೇಲೆ ಪ್ರೀತಿ ಇರಬೇಕು. ಅನುವಾದವನ್ನು ಸ್ವಯಂ ಸ್ಫೂರ್ತಿಯಿಂದಲೇ ಮಾಡಬೇಕು. ಅನುವಾದಕನು ನಿರ್ದಿಷ್ಟ ವಿಷಯದ ಮೇಲೆ ಸ್ವತಂತ್ರವಾಗಿ ತಾರ್ಕಿಕ ಅರ್ಥವನ್ನು ಹೊಂದಿರಬೇಕು, ಮೂಲ ಲೇಖಕರ ಅಸ್ಪಷ್ಟವಾಗಿ ವ್ಯಕ್ತಪಡಿಸಿದ ಆಲೋಚನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು.
ನಾನೂ ಒಬ್ಬ ಅನುವಾದಕಳಾಗಿ ನನ್ನ ಅನುಭವಗಳನ್ನು ಹೇಳಬೇಕೆಂದರೆ ಮೊದಲನೆಯದಾಗಿ ನಾವು ಯಾವ ಭಾಷೆಯ ಕೃತಿಯನ್ನು ಅನುವಾದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇವೆಯೋ ಆ ಭಾಷೆ ನಮಗೆ ಚೆನ್ನಾಗಿ ಅರ್ಥವಾಗಬೇಕು. ಹಾಗಿದ್ದರೆ ಮಾತ್ರ ನಾವದನ್ನು ಇನ್ನೊಂದು ಭಾಷೆಗೆ ತರ್ಜುಮೆ ಮಾಡಲು ಸಾಧ್ಯ. ಇಲ್ಲಿ ಎರಡೂ ಭಾಷೆಗಳ ಅರಿವು, ನಿಷ್ಠೆ, ಪ್ರಾಮಾಣಿಕತೆ, ಸಮರ್ಪಣಾ ಭಾವ ಮುಖ್ಯ. ಅನುವಾದಕನಾದವನು ಮೂಲ ಲೇಖಕನ ಜೊತೆಗೆ, ಭಾಷೆ ಜೊತೆಗೆ, ಆ ಭಾಷೆಯ ಓದುಗರ ಜೊತೆಗೆ ಸಹ ಸಂವಾದ ನಡೆಸಬೇಕು. ಅನುವಾದ ಎಂಬುದು ಒಂದು ಅವಧಾನ ಅಂತಲೇ ಹೇಳಬಹುದು. ಅನುವಾದಕ ಒಂದು ಕೃತಿಯನ್ನು ಮರುಸೃಷ್ಟಿ ಮಾಡುತ್ತಾನೆ. ಅಲ್ಲಿ ಆತನಿಗೆ ಅಲ್ಲಿಯ ಸಂಸ್ಕೃತಿಯ ಪರಿಚಯ ಇಲ್ಲದೇ ಹೋದರೆ ಅದು ಉತ್ತಮ ಅನುವಾದ ಎಂದು ಹೇಳಲಾಗದು.
ಧಾರವಾಡ, ಬೆಳಗಾವಿ, ವಿಜಾಪುರ ಮುಂತಾದ ಉತ್ತರ ಕರ್ನಾಟಕದ ಗಡಿ ಜಿಲ್ಲೆಗಳನ್ನು ಮೊದಲು ಮುಂಬಯಿ ಕರ್ನಾಟಕ ಎಂತಲೇ ಹೇಳುತ್ತಿದ್ದರು. ಹೀಗಾಗಿ ನಾನು ಧಾರವಾಡದವಳಾದುದರಿಂದ  ನನಗೆ ಮರಾಠಿ ಭಾಷೆಯ ನಂಟು ಚಿಕ್ಕವಳಿದ್ದಾಗಿನಿಂದಲೂ ಇತ್ತು. ನಮ್ಮ ಮಾವಶಿ ಮುಂಬಯಿಯವಳು… ಆಕೆಯ ಮಕ್ಕಳ ಒಡನಾಟ… ಅದಕ್ಕಿಂತ ಹೆಚ್ಚಾಗಿ ನಾನು ಕಲಿತದ್ದು ಬಾಸೆಲ್ ಮಿಶನ್ ಹೈಸ್ಕೂಲ್. ಅಲ್ಲಿ ಮರಾಠಿ ಮೀಡಿಯಂನ ಹುಡಿಗೆಯರೂ ಇದ್ದುದರಿಂದ ಟೀಚರ್ಸ್ ಮರಾಠಿಯಲ್ಲೂ ಬೋಧನೆ ಮಾಡುತ್ತಿದ್ದರು.. ಹೀಗೆ ಮರಾಠಿಯೊಂದಿಗೆ ನನ್ನ ನಂಟು ಬೆಳೆದು ಬಂದಿದೆ. ಆದರೆ ನನ್ನೊಳಗೆ ಒಬ್ಬ ಅನುವಾದಕಿ ಇದ್ದಾಳೆಂದು ನನಗೆ ಅರಿವಾದದ್ದೇ ತೀರ ಇತ್ತೀಚೆಗೆ….

ಮುಂದುವರೆಯುತ್ತದೆ

Leave a Reply