ಔರ್ ಕುಛ್ ಭೀ ನಹೀ, ಹಮ್ ಸಬ್ ಕೀ ಕಹಾನಿ ಹೈಂ

” ಔರ್ ಕುಛ್ ಭೀ ನಹೀ, ಹಮ್ ಸಬ್ ಕೀ ಕಹಾನಿ ಹೈಂ”
( ಮಹಿಳಾ Special…)
ನನ್ನ ಕೋಣೆಯ ಕೊನೆಯಖಾನೆಯ ಏಳನೆಯ ಪೆಟ್ಟಿಗೆ ನನಗೆ ತುಂಬ ಖಾssಸ…ಅದರ ತುಂಬ ನನ್ನವೇ ಸೀರೆಗಳು. ತಿಂಗಳು/ಎರಡು ತಿಂಗಳಿಗೊಮ್ಮೆ ಅದನ್ನು ತೆರೆದು ಹರಡಿಕೊಂಡುಕೂಡುತ್ತೇನೆ.ಅಬ್ಬಾ !!! ಎಷ್ಟೊಂದು ಸೀರೆಗಳು, ಬನಾರಸಿ, ಚಂದೇರಿ, ಮೈಸೂರು ಸಿಲ್ಕ, ಕಾಸ್ಮೀರಿ, ಇಳಕಲ್, ಬಾಂದನಿ, ಮಾಹೇಶ್ವರಿ, ಇಕತ್, ನಾರಾಯಣ ಪೇಟ್, ಗದ್ವಾಲ್, ಶಿಫಾನ್,ಕಲ್ಕತ್ತಾ cotton, ಜೈಪುರ, ರಾಜಕೋಟ್ ಇತ್ಯಾದಿಗಳು. ಓಹೋಹೋ ಅನ್ನುತ್ತ ಆಗ ಬರುತ್ತಾರೆ ಯಜಮಾನರು.-“ಏನು ಇಷ್ಟೊಂದು ಸೀರೆಗಳು? ಏನು ಮಾಡುತ್ತೀ ಇಷ್ಟೊಂದು ಇಟ್ಟುಕೊಂಡು??ಯಾರಾದರೂ ಬಡವರಿಗೆ ಕೊಟ್ಟು ಬಿಡಬಾರದೇ?ಹುಸಿ ಮುನಿಸಿನಿಂದ ಹೇಳುತ್ತೇನೆ- “ನೀವು ಮೊದಲು ಹೊರಗೆ ಹೋಗಿ, ಕಣ್ಣುಹಾಕಬೇಡಿ “ಅವರು ತುಂಬ ಸಭ್ಯರು, ಸುಮ್ಮನೇ ಒಂದು ಮುಗುಳುನಗೆ ನಕ್ಕು ಹೊರಟೇ ಹೋಗುತ್ತಾರೆ. ನನ್ನ ಮನದ ಆಳದಲ್ಲೊಂದು ಚಿಕ್ಕ ಚಿಂತನೆಯ ಗುರುತು ಬಿಟ್ಟು…
ಹೌದಲ್ಲವೇ! ಒಮ್ಮೆ ನೋಡುವದಕ್ಕೇನು ಅಡ್ಡಿ? ಬಹುಶಃ ಬಹಳ ದಿನಗಳಿಂದ ಒಮ್ಮೆಯೂ ಉಟ್ಟುಕೊಳ್ಳದ ಒಂದೆರಡು ಸೀರೆಗಳು ಸಿಕ್ಕರೂ ಸಿಗಬಹುದು, ಅವಶ್ಯಕತೆ ಇದ್ದವರಿಗೆ ಕೊಡಲು ಸಾಧ್ಯವಾಗಲೂ ಬಹುದು..
‌ ಒಂದೊಂದೇ ತೆಗೆದು ನೋಡಲು ತೊಡಗುತ್ತೇನೆ. ಓ! ಇದು ಅಮ್ಮ ಮದುವೆಯಲ್ಲಿ ಕೊಟ್ಟ ಧಾರೆಯ ಮೊದಲ ಸೀರೆ, ನನಗೆ ಮೊದಲ ಪ್ರೀತಿಯ ಉಡುಗೊರೆ.ಆ! ಇದು ನಾವು ಹನಿಮೂನ್ ಗೆ ಹೋದಾಗ ಮನೆಯವರೇ ಇಷ್ಟಪಟ್ಟು ಖರೀದಿಸಿದ್ದು. ಆ ಆಕಾಶ ನೀಲಿ ನಾನು online ಗಂಟೆಗಟ್ಟಲೇ ತಡಕಾಡಿ Order ಮಾಡಿದ್ದು.ಹಾ! ಈ ಕಾಟನ್ ಸೀರೆ ಬೇಸಿಗೆಗೆ ಬೇಕೇ ಬೇಕು.ಇನ್ನು ಶಿಫಾನ್ ಸೀರೆಗಳು ಮಳೆಗಾಲದಲ್ಲೂ ಬೇಗಒಣಗುತ್ತವೆ. ಅವುಗಳನ್ನು ಇಟ್ಟುಕೊಳ್ಳಲೇ ಬೇಕು.ಒಂದೆರೆಡು ಸೀರೆಗಳನ್ನು ಇನ್ನೂ ಉಟ್ಟಿಲ್ಲ, ನಿಜ,ಆದರೆ ಅವುಗಳೆಲ್ಲ ತಂಗಿಯರ/ ನಾದಿನಿಯರ/ ಗೆಳತಿಯರ ಉಡುಗೊರೆಗಳು ಹಾಗೆಲ್ಲ ಕೊಟ್ಟು ಬಿಡುವಹಾಗಿಲ್ಲ.ಇನ್ನು ಕೆಲವು ಸೀರೆಗಳು ನನಗೆ ಅಷ್ಟಾಗಿ ಹಿಡಿಸಿಲ್ಲ, ಬಣ್ಣ ಹೆಚ್ಚು ಗಾಢ, ಉಡಲಿಕ್ಕೂ ಇಲ್ಲ,ಆದರೆ ಅತ್ತೆ ತೆಗೆಸಿ ಕೊಟ್ಟ ಸೀರೆಗಳವು.ಯಾವಾಗಲಾದರೂ
ಒಮ್ಮೆ “ನಾ ಕೊಟ್ಟದ್ದು ಎಲ್ಲಿ? ಅದನ್ನು ಉಟ್ಟುಕೋ” ಅಂದು ಬಿಟ್ಟರೆ ಏನು ಉತ್ತರ ಹೇಳಲಿ??ಇನ್ನು ಮದುವೆಯಲ್ಲಿ ಅವರಿವರು ಕೊಟ್ಟ, ನನಗೆ ಅಷ್ಟೊಂದು ಸೇರದ ಕೆಲ ಸೀರೆಗಳಿವೆ.ಆದರೆ ಅವು ಮದುವೆಯಂಬ ಸುಂದರ ಅನುಭೂತಿಯ ನೆನಪಾಗಿ ಉಳಿದಿವೆ.ನಾನವುಗಳನ್ನು ಇನ್ನೂ ಒಮ್ಮೆಯೂ ಉಟ್ಟಿಲ್ಲ, ನಿಜ, ಆದರೆ ಅವುಗಳ ಹಿಂದಿರುವ ಸುಂದರ ನೆನಪುಗಳನ್ನು ಅದು ಹೇಗೆ ಕಡಿದುಕೊಳ್ಳಲಿ? ಅವುಗಳ ಜೊತೆಗಿದ್ದ ಮಧುರ ಬಾಂಧವ್ಯವನ್ನು ಅದು ಹೇಗೆ ಮರೆಯಲಿ? ಇಂಥ ನೆನಪುಗಳ ಸರಮಾಲೆಯೇ ನಿಜದರ್ಥದಲ್ಲಿ ಬದುಕು ಅಲ್ಲವೇ? ಅವುಗಳಿಂದ ಯಾರಾದರೂ ಅದು ಹೇಗೆ ಮುಕ್ತರಾಗಲು ಸಾಧ್ಯ? ಇನ್ನುಳಿದವು ಉಪಯೋಗಕ್ಕೆ ಬಾರದ ಅಂಥ ಇಂಥ ಸೀರೆಗಳು. ಅವು ಅದು ಹೇಗೆ ಬಡವರ ಮೈಗಳನ್ನು ಬೆಚ್ಚಗಿರಿಸಬಹುದು!!??
ಅವುಗಳನ್ನು ಕೊಟ್ಟರೆ, ಜೊತೆಗಿನ ನನ್ನೆಲ್ಲ ನೆನಪಿನ ಭಂಡಾರವೇ ಬಡವಾಗಿ ಬಿಡುತ್ತದೆ.ಆಮೇಲೆ ನನ್ನ ಪೆಟ್ಟಿಗೆ ತೆಗೆದರೆ ನನಗೆ ,ನನ್ನ ಮೈ ಮನಸ್ಸಿಗೆ,ನನ್ನ ಆನಂದಕ್ಕೆ, ಮನದ ತಂಪಿಗೆ, ಹಿಡಿಯಷ್ಟು ಖುಶಿಗೆ,
ಜತನವಾಗಿರಿಸಿದ ಇಷ್ಟು ದಿನಗಳ ಸಂಭ್ರಮ ,ಸಂತಸಕ್ಕೆ,ಏನು ತಾನೇ ಮಾಡಲಿ? ಹೇಗೆ ಇದನ್ನು ಕಳೆದುಕೊಳ್ಳಲಿ? ಬಡವರಿಗೆ ನೀವು ಏನು ಬೇಕಾದರೂ ಬೇಕಾದಷ್ಟು ಕೊಟ್ಟು ಕೊಳ್ಳಿರಿ, ಬೇಡವೆನ್ನಲಾರೆ. ನನ್ನ ಪೆಟ್ಟಿಗೆ ( ಕಪಾಟು) ಮಾತ್ರ ಹೀಗೇಏಏಏಏ ಇರಲಿ,ಇತರರಿಗದು ಬಟ್ಟೆಯ / ಹಣದ/ ವೇಳೆಯ ಅಪವ್ಯಯ ಅನಿಸಿದರೂ ಸರಿ…ಅದನ್ನು ಇದ್ದ ಹಾಗೇ ಇರಲು ಬಿಡಿ, ಎಂದಿಗೂ…ಎಂದೆಂದಿಗೂ, please…
( ಒಂದು ಹಿಂದಿ ಕವನದ ಕನ್ನಡ ಅನುವಾದ ನನ್ನಿಂದ…(ಗದ್ಯರೂಪದಲ್ಲಿ) ಬರೆದವರ ಹೆಸರು ಇಲ್ಲ

1 Comment

  1. ವ್ಹಾ, ಭಾಳ ಛಂದ ಬರದೀರಿ

Leave a Reply