ಆವೇಗ ಕೊಚ್ಚಿಕೊಂಡು ಹೋಗದಿರಲಿ…!

ಆವೇಗ ಕೊಚ್ಚಿಕೊಂಡು ಹೋಗದಿರಲಿ…!

ತರಗತಿ ಪ್ರಾರಂಭವಾಗಲು ಇನ್ನೂ ಕೊಂಚ ಸಮಯವಿತ್ತು. ಮಕ್ಕಳ ನೋಟ್ಸ್ ತಿದ್ದುತ್ತಾ ಸ್ಟಾಫ್ ರೂಮಿನಲ್ಲಿ ಕುಳಿತಿದ್ದ ಶಿಕ್ಷಕಿಯ ಗಮನ ತಟ್ಟನೆ ಸೆಳೆದದ್ದು, ಶಾಲೆಯ ಮುಂದಿನ ಅಂಗಳದ ಮರಳಲ್ಲಿ ಏಕಾಂಗಿಯಾಗಿ ಆಡುತ್ತಿದ್ದ ಶಾಲಾ ಆಯಾಳ ಎರಡೂವರೆ ವರ್ಷದ ಪುಟ್ಟ ಪೋರ.
ಮಕ್ಕಳ ವಯೋಸಹಜ ವರ್ತನೆಗಳ ಬಗ್ಗೆ ಕುತೂಹಲವಿದ್ದ ಕಣ್ಣು ಪುಟ್ಟ ಪೋರನ ಮರಳ ಆಟದತ್ತಲೇ ಕೇಂದ್ರೀಕೃತವಾಯಿತು. ಮಗುವಿನ ಆಟಿಕೆ ಎಂದರೆ, ಪೇಪರ್ ನ ಎರಡು ಪುಟ್ಟ ಕಾಫೀ ಕಪ್ಪು ಹಾಗೂ ಮೂರಿಂಚು ಅಗಲವಿರಬಹುದಾದ ಪೇಪರ್ ಪ್ಲೇಟು. ಆ ಮಗುವಿನ ಆಟವಾದರೋ; ಪುಟ್ಟ ಕೈಗಳಿಂದ ಕಪ್ಪುಗಳ ತುಂಬಾ ಮರಳು ತುಂಬಿ ಪೇಪರ್ ಪ್ಲೇಟಿನಲ್ಲಿ ಆ ಕಪ್ಪುಗಳನ್ನಿಟ್ಟು ಎತ್ತಕೊಂಡು ಹೋಗುವಂತಹ ಆಟ. ಪ್ರಾಯಶಃ ಶಾಲಾ ಶಿಕ್ಷಕಿಯರಿಗೆ ತನ್ನ ತಾಯಿ ಕಾಫಿ-ಟೀ ಹಂಚುವುದನ್ನೇ ಅನುಕರಣೆ ಮಾಡುವಂತಹದು ಆ ಪುಟ್ಟ ಕಂದನ ಮನದಲ್ಲಿದ್ದ ಬಿಂಬ…! ಅದರಿಂದ ಹೊರಗೆ ಬರದೇ ಆ ಪೋರ ಅದರಲ್ಲಿಯೇ ಬಂಧಿ.
ಮರಳು ತುಂಬಿದ ಆ ಎರಡು ಕಪ್ಪುಗಳನ್ನು ಇನ್ನಿಲ್ಲದ ಉತ್ಸಾಹದಿಂದ ಚಿಕ್ಕ ಪ್ಲೇಟಿನಲ್ಲಿ ಜೋಡಿಸಿದ. ಮುಂದೆ ಪ್ಲೇಟು ಎತ್ತಿಕೊಂಡೊಯ್ಯುವ ಉತ್ಸಾಹದ ಪ್ರಯತ್ನ. ಎಳೆಯ ಕೈಗಳಿಗೆ ಭಾರವಾದ ಪ್ಲೇಟು ಸರಿದೂಗಿಸಲಾಗದೇ ಒಂದು ಕಪ್ಪು ಜಾರಿಬಿತ್ತು. ಮತ್ತೆ ಮೊದಲಿನ ಪ್ರಯತ್ನ ಆದರೆ ಆಗಲೂ ಮೊದಲಿನ ಅದೇ ವಿಫಲತೆ. ಆದರೂ ಅದೇ ತಾಳ್ಮೆ, ಅದೇ ಅನವರತ ಶ್ರದ್ಧೆ. ಮರಳಿ! ಹೊರಳಿ! ಅದೇ ಪ್ರಯತ್ನ ಅದೇ ಫಲ. ಆದರೂ ಮುಖದ ಮೇಲೆ ಕಿಂಚಿತ್ತೂ ಮಾಸದ ಮಸ್ತ್…..! ಮಂದಹಾಸ.
ಮರಳು ತುಂಬುವುದು, ಮತ್ತೆ ಬೀಳಿಸುವುದು ಇದೇ ಆ ಪೋರನ ಆಟವಾಯಿತು. ಆಟ ಕೆಟ್ಟಿತೆಂಬ ಹನಿ ಆತಂಕವಾಗಲೀ, ಬೇಸರವಾಗಲೀ ಇದ್ದಂತೆ ಕಾಣಿಸಲಿಲ್ಲ. ಹುಡುಗನ ಮುಖದಲ್ಲಿ ಆಗಾಗ ಅದೇ ‘ಕಿಲಕಿಲ’ ನಗು. ಕಣ್ಣಲ್ಲಿ ಆಡುತ್ತಿರುವ ಖುಷಿ ತುಂಬಿ ತುಳುಕುತ್ತಿತ್ತು. ಆದರೆ ಆಯಿತು ಇಲ್ಲದಿದ್ದರೆ ಇಲ್ಲ ಎಂಬಂತೆ ಆ ಮಗು ಆಟ ಆಡುತ್ತಿತ್ತು. ಮಧ್ಯೆ ಮಧ್ಯೆ ದೇವಲೋಕದ ಕಿನ್ನರರ ಜೊತೆ ಸಂಭಾಷಿಸುವನೋ ಎಂಬಂತೆ ಮಾತು. ಕಂಗಳಲ್ಲಿ ಮಿನುಗುವ ನಕ್ಷತ್ರದಂಥ ಹೊಳಪು. ಫಕ್ಕನೆ ಎಲ್ಲಿಂದಲೋ ಇನ್ನೊಂದು ಮಗು ಬಂದು ಜೊತೆಯಾಯ್ತು. ಮುಂದೆ ಮಕ್ಕಳ ಆಟದ ಚಿತ್ರಣವೇ ಬದಲಾಯಿತು.
ಬಾಲ್ಯದ ಮಧುರ ಅನುಭೂತಿಯೇ ಅಂತಹದು. ಕನಸುಗಳನ್ನು ಕಟ್ಟಿಕೊಡಬಲ್ಲ; ಆಸೆಗಳ ಗರಿಗೆದರಿಸಬಲ್ಲ; ನಾವದಲ್ಲ ನಮ್ಮನ್ನು ನಮಗೇ ಒಪ್ಪಿಸಿಕೊಟ್ಟು ಅದರಿಂದ ಸಿಗುವ ಲವಲವಿಕೆಯನ್ನು ಎಂದಿನ ಬದುಕಿಗೆ ತುಂಬಿಸಿ ಕೊಡುವಂತಹದು. ತನ್ನ ಗ್ರಹಿಕೆಯ ತೆಕ್ಕೆಗೆ ಬರುವ ಸಕಲ ವಸ್ತುಗಳಲ್ಲೂ ಅದರಲ್ಲೇ ಮನೋಲ್ಲಾಸ ಹುಡುಕುವುದು. ಮಾನವನ ಮನಸ್ಸಿನ ಈ ಮುಗ್ಧತೆಯ ಗೂಢ ಮರ್ಮ; ಬುದ್ಧಿ –ಚಿಂತನೆಗಳ ಅಳವಿಗೆ ಸಿಗುವಂತಹದಲ್ಲ.
ಜೀವನದಲ್ಲಿ ಬಾಲ್ಯದ ಸುಂದರ ನೆನಪುಗಳು ಬಹಳ ಬೇಗ ಮಾಸಿ ಹೋಗುವಂತಹದಲ್ಲ. ಅದು ಸದಾ ನವನವೀನ. ಅಳಿಸದ ಮಧುರ ಭಾವಗೀತ. ಬಾಲ್ಯ ಹಲವಾರು ಕಾರಣಗಳಿಗಾಗಿ ಅತಿ ಮುಖ್ಯವಾದದ್ದು. ಆಗ ನೂರೆಂಟು ಕನಸುಗಳು ಹಾಗೂ ಗುರಿಗಳು. ಏನೆಲ್ಲಾ ವಿಷಯಗಳನ್ನು ಯೋಚಿಸುವ, ಆನಂದಿಸುವ ಅದ್ಭುತ ಕಲ್ಪನಾ ಶಕ್ತಿ. ಈ ಹಂತದಲ್ಲಿ ಏನೆಲ್ಲಾ ವಿಷಯಗಳನ್ನು ಕಲಿಯುವ ಮತ್ತು ಕಲಿತಿದ್ದನ್ನು ಮನದಲ್ಲಿ ಚಿರಕಾಲ ಕಾಪಿಟ್ಟುಕೊಳ್ಳಬಲ್ಲಂತಹ ಶಕ್ತಿ, ಸಾಮಥ್ರ್ಯ ಇದ್ದುದಾದರೆ ಅದು ಬಾಲ್ಯಕ್ಕೆ ಮಾತ್ರ. ಬದುಕಿನ ಒಟ್ಟು ಕಾಲಮಾನದಲ್ಲಿನ ಆನಂದದ ಘಳಿಗೆಗಳಲ್ಲಿ ಬಾಲ್ಯದ್ದೇ ಸಿಂಹಪಾಲು.
ಬಾಲ್ಯದಲ್ಲಿ ಎಲ್ಲವನ್ನೂ ಬೆರಗುಗಣ್ಣಿನಿಂದ ನೋಡುವ, ಮಾಡುವ ಇಚ್ಚೆ ನಮ್ಮ ನೆನಪಿನ ಕೋಶದಲ್ಲಿ ಶಾಶ್ವತವಾಗಿ ಅಚ್ಚಾಗಿರುವ ಬಾಲ್ಯದ ನೆನಪುಗಳು ಮುಂದೆ ನಮ್ಮ ಬದುಕಿನುದ್ದಕ್ಕೂ ಖುಷಿಯ ಸಿಂಚನ ಎರೆಚುತ್ತಿರುತ್ತದೆ. ಭಾವುಕರಾಗಿ ಬಾಲ್ಯವನ್ನು ಬಯಸುವ, ಪ್ರೀತಿಸುವ ಎಲ್ಲರಿಗೂ ಬಾಲ್ಯದ ಸವಿ ಅದು ನೆಲ್ಲಿ ತಿಂದು ನೀರು ಕುಡಿದಂತೆ. ಬಾಲ್ಯ ಚೌಕಟ್ಟಿಲ್ಲದ ಚಿತ್ರಪಟ. ದೊಡ್ಡ ‘ಕ್ಯಾನ್ವಾಸ್’ನ ಚಿತ್ರದಂತೆ. ಅಷ್ಟು ಓಟ, ಅಷ್ಟು ನೋಟ, ಅಷ್ಟು ಮಾಟ. ಪೋರನ ಆಟ ನೋಡುತ್ತಾ ತನ್ನೊಳಗೆ ತಾನೇ ನಕ್ಕ ಆ ಶಿಕ್ಷಕಿಯ ಮನಸ್ಸಿಗೆ ತಟ್ಟನೆ ಅನ್ನಿಸಿದ್ದು; ಹುಟ್ಟಿನಿಂದಲೇ ಮನುಷ್ಯ ತನ್ನ ಬೆನ್ನಿಗಂಟಿಸಿಕೊಂಡೇ ಬಂದ ಆ ಮುಗ್ಧತೆ, ಅನುಕಂಪ, ಪ್ರೀತಿಯನ್ನು ದೊಡ್ಡವನಾದಂತೆ ಲೌಕಿಕದ ಜಂಜಾಟದಲ್ಲಿ ಕಳೆದುಕೊಂಡೇ ಬಿಡುವುದು. ವಿಪರ್ಯಾಸವೆಂದರೆ ಹೀಗೆ ಬೆಳೆಯುತ್ತಾ ಹೋದಂತೆಲ್ಲಾ ಮನಸ್ಸಿನ ‘ತಿಳಿ’ಯನ್ನೂ, ‘ಬಿಳಿ’ಯನ್ನೂ ಕಳೆದುಕೊಂಡು ‘ಆಡಂಬಾವಿ’ಯಾಗಿ, ಕೃತಕ ಮಾತಿನವನಾಗಿ ಕಾಣಿಸಿಕೊಳ್ಳುವುದು.
ಮಕ್ಕಳಂತೆ ಎಷ್ಟೋ ನಿಶ್ಯಬ್ದ ಸಂಗತಿ, ಸೂಕ್ಷ್ಮಗಳಿಗೆ ತನ್ನ ಮನಸ್ಸನ್ನು ತೆರೆಯಲಾರ. ತನ್ನನ್ನು ಸುತ್ತುವರಿದಿರುವ ಪ್ರಾಪಂಚಿಕ ತಲ್ಲಣಗಳ ಹೊಡೆತದಿಂದ ‘ಅರಿವಿನ ಅಂತರಂಗ’ ಆತನಿಗೆ ಅಪರಿಚಿತವಾಗಿಯೇ ಬಿಡುತ್ತದೆ. ಸಿಟ್ಟು-ಸೆಡವುಗಳು, ದುಃಖ-ದುಮ್ಮಾನಗಳು ಆಳತೊಡಗುತ್ತವೆ. ಇವನ್ನು ಶಾಂತವಾಗಿ ಪರಿಗ್ರಹಿಸುವ ‘ದೊಡ್ಡಸ್ತಿಕೆ’ ಮಾಯವಾಗಿ ಬಿಡುತ್ತದೆ. ಏನೇ ಇರಲಿ ಯಾವ ಆವೇಗವೂ ನಮ್ಮನ್ನು ಕೊಚ್ಚಿಕೊಂಡು ಹೋಗದಿರಲಿ!

Leave a Reply