ಕೊನೆಗೂ ಅವನು ಸಿಕ್ಕಿದ, ಅವಳಿಗೆ ಸಿಗಲಿಲ್ಲ

ಕೊನೆಗೂ ಅವನು ಸಿಕ್ಕಿದ, ಅವಳಿಗೆ ಸಿಗಲಿಲ್ಲ

ಅವನು ರಾಕ್ಷಸ.ಒಂದು ಕಾಲದಲ್ಲಿ ಅವನು ಗಂಧರ್ವ. ಯಾವುದೋ ತಪ್ಪಿಗಾಗಿ ಶಾಪಗ್ರಸ್ತ. ಅವನನ್ನು ರಾಕ್ಷಸನಾಗು ಎಂದು ಶಪಿಸಿದ್ದು ಒಬ್ಬಳು ಗಂಧರ್ವ ಕನ್ನಿಕೆ. ಅವಳನ್ನು ಆತ ಮೋಹಿಸಿದ್ದ. ಅವಳನ್ನು ಮುಟ್ಟಲು ಹೋಗಿದ್ದ. ನನ್ನೊಡನೆ ರಾಕ್ಷಸನಂತೆ ವರ್ತಿಸಿದ್ದಕ್ಕಾಗಿ ನಿನಗಿದು ಶಾಪ ಎಂದು ಸಿಟ್ಟಿನಿಂದ ಹೇಳಿ, ನೀನು ರಾಕ್ಷಸನಾಗಿ ಭೂಮಿಯಲ್ಲಿ ಹುಟ್ಟು ಎಂದಾಕೆ ಶಾಪ ಕೊಟ್ಟಿದ್ದಳು.
ತಪ್ಪಾಯಿತು ಬಿಟ್ಟು ಬಿಡು ಅಂತ ಅವನೇನೂ ಬೇಡಿಕೊಳ್ಳಲಿಲ್ಲ. ಗಂಧರ್ವನಾಗಿದ್ದು ಅವನಿಗೂ ಸಾಕಾಗಿತ್ತು. ತುಂಬ ಒಳ್ಳೆಯತನ ಸಹಜವಲ್ಲ ಅನ್ನುವುದು ಅವನಿಗೂ ಅರ್ಥವಾಗತೊಡಗಿತ್ತು. ಗಂಧರ್ವಲೋಕ ಮನುಷ್ಯರಿಗೆ ಸುಂದರ. ಅಲ್ಲಿ ಎಲ್ಲರೂ ಒಳ್ಳೆಯವರೇ. ಹಸಿವಿಲ್ಲ, ನಿದ್ದೆಯ ಹಂಗಿಲ್ಲ. ಕಣ್ಣೆದುರು ಅನಂತವಾಗಿ ಬಿದ್ದ ಕಾಲ. ಸಾವಿಲ್ಲದ, ಮರುಹುಟ್ಟಿನ ಆಸೆಯೂ ಇಲ್ಲದ ನಿರಂತರ ಜೀವನ. ಪಾಪವೂ ಇಲ್ಲ, ಪುಣ್ಯವೂ ಇಲ್ಲ, ಅವೆರಡಕ್ಕೆ ಕಾರಣವಾಗುವ ಕ್ರಿಯೆಯೇ ಇಲ್ಲ.
ಆ ಗಂಧರ್ವ ಭಗವದ್ಗೀತೆ ಓದಿದ್ದ. ಅರ್ಜುನನ ವಿಷಾದ, ಕೃಷ್ಣನ ಸಾಂತ್ವನ ಕೇಳಿಸಿಕೊಂಡಿದ್ದ. ಅವನು ಯಾವತ್ತೂ ಸಿಟ್ಟು ಮಾಡಿಕೊಂಡಿರಲಿಲ್ಲ. ಸಿಟ್ಟಾಗುವುದು ಅಂದರೇನು ಅನ್ನುವುದೂ ಗೊತ್ತಿರಲಿಲ್ಲ. ಭೂಮಿಯ ಮೇಲೆ ಸುತ್ತಾಡುವಾಗೆಲ್ಲ ಅಲ್ಲಿ ಜನ ಸಿಟ್ಟಿನಿಂದ ಕಿರುಚಾಡುವುದು, ಪ್ರೇಮಿಸುವುದು, ಕಾಮಿಸುವುದು, ಜಗಳ ಆಡುವುದು, ಹೊಟ್ಟೆಕಿಚ್ಟಿನಿಂದ ಶಾಪ ಹಾಕುವುದು ನೋಡಿದ್ದ.
ಆ ಜಗತ್ತಿಗೂ ಈ ಜಗತ್ತಿಗೂ ಇರುವ ವ್ಯತ್ಯಾಸ ಅವನಿಗೆ ಅರ್ಥವಾಗತೊಡಗಿತ್ತು. ಮಂದಿ ಸುಳ್ಳೇ ಸುಳ್ಳೇ ಹಾಗೆಲ್ಲ ಆಡುತ್ತಿದ್ದಾರೆ ಅನ್ನಿಸುತ್ತಿತ್ತು. ಅದೆಲ್ಲ ಒಂದು ನಾಟಕದಂತೆ ಭಾಸವಾಗುತ್ತಿತ್ತು. ಕುಡಿದು ಬಂದ ಗಂಡ, ಹೆಂಡತಿಗೆ ಹಿಗ್ಗಾಮುಗ್ಗಾ ಬಾರಿಸುತ್ತಿದ್ದ. ನೀನು ನೆಗೆದುಬಿದ್ದು ಸಾಯ ಎಂದು ಅವಳು ಬೈಯುತ್ತಿದ್ದಳು. ಅವಳು ಪತಿವ್ರತೆಯೇ ಆಗಿದ್ದಲ್ಲಿ ಅವನು ಸತ್ತು ಹೋಗುತ್ತಾನಲ್ಲ ಅಂತ ಇವನಿಗೆ ಗಾಬರಿ ಆಗುತ್ತಿತ್ತು. ಅಂಥದ್ದೇನೂ ನಡೆಯುತ್ತಿರಲಿಲ್ಲ. ಅವಳು ಅವನನ್ನು ಕೂಡಿ ಮಕ್ಕಳು ಹುಟ್ಟುತ್ತಿದ್ದವು. ಆ ಮಕ್ಕಳನ್ನೇ ಅವರಿಬ್ಬರೂ ಯಾಕಾದ್ರೋ ಹುಟ್ಟಿದ್ರೋ ಎಂದು ಬೈಯುತ್ತಿದ್ದರು.
ಇದನ್ನೆಲ್ಲ ನೋಡುತ್ತಿದ್ದ ಗಂಧರ್ವನಿಗೆ ಸಹವಾಸ ದೋಷದಿಂದಲೋ ಏನೋ ಸಿಟ್ಟು ಬರಲು ಶುರುವಾಯಿತು. ತನ್ನ ಸುತ್ತಲಿನವರೆಲ್ಲ ಬಸಳೆಸೊಪ್ಪಿನಂತೆ ಕಾಣತೊಡಗಿದರು. ಗಂಧರ್ವರ ದೊರೆ ಅಮೃತಬಳ್ಳಿಯಂತೆ ಕಾಣಿಸಿದ, ಅವನ ಹೆಂಡತಿ ಅಲಂಕಾರ ಮಾಡಿಕೊಂಡು ಕೇದಗೆಹೂವಿನ ಸುವಾಸನೆಯಂತೆ ನಿಧಾನ ಚಲಿಸುತ್ತಿದ್ದಳು. ಅವಳನ್ನು ಗಂಧರ್ವರ ದೊರೆ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಅವರ ಸಂಖ್ಯೆ ಜಾಸ್ತಿಯಾಗುತ್ತಲೂ ಇರಲಿಲ್ಲ, ಕಡಿಮೆಯಾಗುತ್ತಲೂ ಇರಲಿಲ್ಲ. ಎಲ್ಲಾ ಒಂದೇ ಥರಹದ ಮುಖಗಳು, ಬದಲಾಗದ ವಯಸ್ಸು, ತಾಯ್ತನವಿಲ್ಲದ ಹೆಣ್ಣುಗಳು, ಅಪ್ಪನಾಗುವ ಹೆಮ್ಮೆಗೆ ಅವಕಾಶವೇ ಇಲ್ಲದ ಗಂಡಸರು.
ಗಂಧರ್ವ ಸಿಟ್ಟು ಬಂದು ಅದೇ ವಿಕಾರದಲ್ಲಿ ಹೋಗಿ ಅವಳನ್ನು ತಬ್ಬಿಕೊಂಡಿದ್ದ. ಅಂಥ ಬಿರುಸನ್ನು ಅವಳು ಯಾವತ್ತೂ ಕಂಡಿರಲಿಲ್ಲ. ವಿನಯದಿಂದ ಜತೆಗಿರೋಣ ಬಾ ಅಂದಿದ್ದರೆ ಅವಳೇನೂ ನಿರಾಕರಿಸುತ್ತಿರಲಿಲ್ಲ. ಅವನು ತನ್ನ ಮೇಲೆ ದಬ್ಬಾಳಿಕೆ ನಡೆಸುವುದಕ್ಕೆ ಬಂದಿದ್ದಾನೆ, ರಾಕ್ಷಸರ ಥರ ವರ್ತಿಸುತ್ತಿದ್ದಾನೆ ಅನ್ನಿಸಿದ್ದೇ ತಡ ಅವಳಿಗೂ ಸಿಟ್ಟು ಬಂತು. ಶಾಪ ಕೊಟ್ಟೇ ಬಿಟ್ಟಳು.
ಭೂಮಿಯಲ್ಲಿ ಯಾರೋ ಯಾರನ್ನೋ ರಾಕ್ಷಸ ಅಂತ ಬೈಯುತ್ತಿದ್ದರು. ಸುಂದರಿಯನ್ನು ನೋಡಿದವನೊಬ್ಬ ಗಂಧರ್ವಗಾನವಾಣಿ ಎಂದು ಹೊಗಳುತ್ತಿದ್ದ. ಇಂಥ ಯದ್ವಾತದ್ವಾ ಜಗತ್ತಿನಲ್ಲಿ ಒಂಥರಾ ಮಜಾ ಸಿಗತೊಡಗಿತು ಅವನಿಗೆ. ಅವನನ್ನು ಕಂಡರೆ ಜನ ಹೆದರುತ್ತಿದ್ದರು. ಕೈ ಮುಗಿಯುತ್ತಿದ್ದರು. ಗಂಧರ್ವರ ರಾಜನಿಗೇ ಯಾರೂ ನಮಸ್ಕರಿಸಿದ್ದನ್ನು ಅವನು ನೋಡಿರಲಿಲ್ಲ. ಹೀಗಾಗಿ ಸುಮ್ಮನೆ ಯಾರನ್ನೋ ಹೆದರಿಸುತ್ತಾ, ತಮಾಷೆ ನೋಡುತ್ತಾ ರಾಕ್ಷಸ ತುಂಬ ದಿನ ಭೂಮಿಯಲ್ಲೇ ಸುಖವಾಗಿದ್ದ.

-2-
ಅತ್ತ ಗಂಧರ್ವನನ್ನು ಶಪಿಸಿದ ನಂತರ ಆಕೆಗೆ ತಾನು ಹಾಗೆ ಮಾಡಬಾರದಿತ್ತು ಅನ್ನಿಸಿತು. ಆಕೆಗೂ ಗಂಧರ್ವಲೋಕದ ನಯನಾಜೂಕುಗಳು ಬೋರು ಹೊಡೆಸಿದ್ದವು. ತನ್ನನ್ನು ರಾಕ್ಷಸನಂತೆ ಸಮೀಪಿಸಿದ ಒರಟಾಗಿ ಅಪ್ಪಿದ ಗಂಧರ್ವನನ್ನು ಆಕೆ ಹುಡುಕಿಕೊಂಡು ತಿರುಗಾಡಿದಳು. ಅವನಾಗಲೇ ಭೂಲೋಕಕ್ಕೆ ಹೋಗಿದ್ದ. ಅವಳಿಗೂ ಭೂಲೋಕಕ್ಕೆ ಹೋಗಿ ಅವನನ್ನು ಭೇಟಿ ಮಾಡಿ ಕ್ಷಮೆ ಕೇಳಬೇಕು ಅನ್ನಿಸಿತು. ಅವಳು ಭೂಲೋಕಕ್ಕೆ ಹೋಗುವ ಹಾಗಿರಲಿಲ್ಲ. ಒಂದು ವೇಳೆ ಹೋದರೆ ಅಲ್ಲೇ ಹದಿನಾರು ವರುಷ ಕಳೆಯಬೇಕಿತ್ತು. ಗಂಧರ್ವ ಕನ್ನಿಕೆಯರು ಬೇಕು ಬೇಕಾದಾಗೆಲ್ಲ ಭೂಮಿಗೆ ಹೋಗಿ ಅಲ್ಲಿರುವ ಮಹಾರಾಜರನ್ನು ಆಕರ್ಷಿಸಿ, ಅವರಿಗೆ ಮಕ್ಕಳನ್ನು ಹೆತ್ತುಕೊಟ್ಟು ಮರಳುವುದನ್ನು ನೋಡಿದ ಗಂಧರ್ವ ರಾಜ ಹಾಗೊಂದು ನಿಯಮ ಮಾಡಿಬಿಟ್ಟಿದ್ದ.
ಗಂಧರ್ವಲೋಕದಿಂದ ನೋಡಿದಾಗ ತಾನು ಶಪಿಸಿದ ಗಂಧರ್ವ ಎಲ್ಲೂ ಕಾಣಿಸಲಿಲ್ಲ. ಅವನನ್ನು ಗುರುತು ಹಿಡಿಯುವುದೂ ಕಷ್ಟವೆಂದು ಅವಳಿಗೆ ಗೊತ್ತಿತ್ತು. ಅವನ ರಾಕ್ಷಸ ರೂಪಲ್ಲಿ ಅಲೆದಾಡುತ್ತಿರುವುದರಿಂದ ಅವನನ್ನು ನೋಡದೇ ಮಾತಾಡದೇ ಪತ್ತೆ ಮಾಡುವುದು ಸಾಧ್ಯವೇ ಇಲ್ಲ ಅನ್ನುವುದೂ ಅರ್ಥವಾಗಿತ್ತು. ಅವನ ಚಿಂತೆ ಬಿಟ್ಟು ಬಿಡುವುದೇ ವಾಸಿ ಅನ್ನಿಸಿ, ತನ್ನ ಲೋಕದಲ್ಲೇ ಇದ್ದ ಗಂಧರ್ವರ ಹಿಂದೆ ಕೆಲವು ದಿನ ಸುತ್ತಾಡಿದಳು. ಸುಖಿಸಿದಳು. ಅವನ ಸ್ಪರ್ಶದ ಮುಂದೆ ಅವರ ಮೃದುಮಧುರ ಸಲ್ಲಾಪಗಳು ಸಪ್ಪೆ ಅನ್ನಿಸಿದವು. ಯಾರೂ ತನಗಾಗಿ ಹಂಬಲಿಸುತ್ತಿಲ್ಲ ಅನ್ನಿಸಿತು. ಎಲ್ಲರಿಗೂ ಅದೊಂದು ಯಾಂತ್ರಿಕ ಕ್ರಿಯೆ. ಪ್ರೀತಿಯೇ ಬೇಕಿಲ್ಲ ಅಲ್ಲಿ. ಪ್ರೀತಿಸದೇ ಹೋದರೂ ದಕ್ಕುತ್ತಾರೆ ಎಂದು ಗಂಧರ್ವರೆಲ್ಲ ನಿರ್ಲಿಪ್ತರೂ ಅನ್ಯಮನಸ್ಕರೂ ಆಗಿದ್ದರು. ಅದರಿಂದ ಆಕೆಗೆ ಪಾರಾಗಲೇ ಬೇಕಿತ್ತು.
ಕೊನೆಗೆ, ಏನಾದರಾಗಲಿ ಎಂದುಕೊಂಡು ಗಂಧರ್ವಕನ್ನಿಕೆ ಭೂಮಿಗೆ ಹೋಗಲು ನಿರ್ಧಾರ ಮಾಡಿದಳು. ಹದಿನಾರು ವರ್ಷ ಕಳೆಯುವುದೇನೂ ಕಷ್ಚವಲ್ಲ. ರಾಕ್ಷಸ ಸಿಕ್ಕರೆ ಅವನ ಜೊತೆಗೇ ಸಂಸಾರ ಮಾಡುವುದು, ಇಲ್ಲದಿದ್ದರೆ ಅವನಿಗಾಗಿ ಹುಡುಕಿಕೊಂಡು ಅಲೆಯುವುದು ಎಂದು ತೀರ್ಮಾನ ಮಾಡಿ ಭೂಮಿಗೆ ಜಿಗಿದೇ ಬಿಟ್ಟಳು.
-3-
ಎಷ್ಟೋ ತಿಂಗಳು, ಎಷ್ಟೋ ದಿನ, ಎಷ್ಟೋ ವರ್ಷ ಅವಳು ಅವನಿಗಾಗಿ ಹುಡುಕಿಕೊಂಡು ಅಲೆದಳು. ಅವನ ಸ್ಪರ್ಶ ಮಾತ್ರ ಅವಳಿಗೆ ಪರಿಚಿತವಿತ್ತು. ಹೀಗಾಗಿ ಅವಳು ಅವನನ್ನು ಹುಡುಕುವ ಹಾದಿಯಲ್ಲಿ ಅನೇಕ ರಾಕ್ಷಸರನ್ನು ಸ್ಪರ್ಶಿಸಬೇಕಾಗಿ ಬಂತು. ರಾಕ್ಷಸರ ಸಂಖ್ಯೆಯೋ ಸಾವಿರಾರು. ಒಂದು ದೇಶಕ್ಕೆ ಹೋಗುವುದು. ಅಲ್ಲಿರುವ ರಾಕ್ಷಸನ ಜೊತೆ ಒಂದಷ್ಟು ಹೊತ್ತು ಕಳೆಯುವುದು. ಅವನ ಸ್ಪರ್ಶಕ್ಕೆ ನಲುಗುವುದು. ಇವನಲ್ಲ ಎಂದುಕೊಂಡು ಮತ್ತೆ ಹುಡುಕಾಡುವುದು. ಹೀಗೆ ಅವಳ ಪ್ರಯಾಣ ಸಾಗಿತ್ತು.
ಆರೇಳು ವರ್ಷಗಳಲ್ಲಿ ಅವಳು ಭೂಲೋಕದಲ್ಲಿರುವ ಎಲ್ಲಾ ರಾಕ್ಷಸರನ್ನೂ ಸ್ಪರ್ಶಿಸಿಬಿಟ್ಟಿದ್ದಳು. ಅವನು ಸಿಕ್ಕಿರಲಿಲ್ಲ. ಒಂದು ರಾತ್ರಿ ಯೋಚಿಸುತ್ತಾ ಕುಳಿತ ಅವಳಿಗೊಂದು ಅನುಮಾನ ಶುರುವಾಯಿತು. ತಾನು ಆ ತನ್ನ ಪ್ರೀತಿಯ ರಾಕ್ಷಸನ ಸ್ಪರ್ಶವನ್ನು ಮರೆತೇಬಿಟ್ಟಿದ್ದೇನಾ. ನಿಜವಾಗಿಯೂ ಅವನ ಸ್ಪರ್ಶ ಹೇಗಿತ್ತು. ಸಾವಿರಾರು ರಾಕ್ಷಸರನ್ನು ಮುಟ್ಟಿ ತಡವಿದ ತನ್ನ ಮೈಮನಗಳು ಆ ಸ್ಪರ್ಶವನ್ನು ಗುರುತಿಸುವಲ್ಲಿ ಸೋತಿದೆಯಾ? ಅಷ್ಟಕ್ಕೂ ಅವನ ಸ್ಪರ್ಶ ಹೇಗಿತ್ತು. ಎಲ್ಲಾ ರಾಕ್ಷಸರ ಸ್ಪರ್ಶವೂ ಒಂದೇ ಥರ ಇರುತ್ತದಾ.
ಇದಕ್ಕೆ ಬೇರೇನಾದರೂ ಮಾಡಬೇಕು ಅಂದುಕೊಂಡು ಆಕೆ ಮತ್ತೊಂದು ಉಪಾಯ ಹುಡುಕಿದಳು. ತಾನು ಶಪಿಸಿದ ರಾಕ್ಷಸನಿಗೊಂದು ಉಪಶಾಪ ಕೊಡುವುದು. ನಿನ್ನನ್ನು ನಾನು ಪ್ರೀತಿಯಿಂದ ಸ್ಪರ್ಶಿಸಿದ ತಕ್ಷಣ ನೀನು ಮತ್ತೆ ಗಂಧರ್ವನಾಗುತ್ತಿ ಅಂತ ಶಾಪವಿಮೋಚನೆಯ ಮಾರ್ಗ ತೋರಿಸುವುದು, ಭೂಲೋಕದಲ್ಲಿರುವ ತನಗೆ ಆ ಶಕ್ತಿ ಇದೆಯಾ. ಗಂಧರ್ವರಾಜನನ್ನು ಮನಸ್ಸಿನಲ್ಲೇ ಸ್ಮರಿಸಿ, ತನ್ನ ಶ್ರದ್ಧೆಯನ್ನೆಲ್ಲ ಒಂದು ಬಿಂದುವಿಗೆ ತಂದು ನಿಲ್ಲಿಸಿ, ಆಕೆ ತಾನು ಶಪಿಸಿದ ಗಂಧರ್ವನಿಗೆ ಶಾಪವಿಮೋಚನೆಗೊಂದು ಮಾರ್ಗ ಕಲ್ಪಿಸಿದಳು. ನಾನು ಯಾರನ್ನು ರಾಕ್ಷಸನಾಗು ಎಂದು ಶಪಿಸಿದ್ದೆನೋ ಅವನು ನನ್ನ ಸ್ಪರ್ಶದಿಂದ ಮತ್ತೆ ಗಂಧರ್ವನಾಗಲಿ ಎಂದು ಉಸುರಿದಳು.
ಮತ್ತೆ ಶುರುವಾಯಿತು ಅವಳ ಹುಡುಕಾಟ.ಮತ್ತೆ ಮತ್ತೆ ರಾಕ್ಷಸರನ್ನು ಸ್ಪರ್ಶಿಸುವ ಆಟ. ಅವನಲ್ಲ, ಇವನಲ್ಲ, ಮೂರನೆಯವನೂ ಅಲ್ಲ, ಮತ್ತೊಬ್ಬನೂ ಅಲ್ಲ, ಮಗದೊಬ್ಬನೂ ಅಲ್ಲ. ದಿನದಿನವೂ ಹೊಸ ರಕ್ಕಸರ ಜೊತೆ ಆಟ, ಬೇಟ. ಅವನ ಬಿಟ್ಟು ಅವನ ಬಿಟ್ಟು ಅವನ್ಯಾರು ಎಂಬ ಪರದಾಟ. ಹೀಗೆ ಸಾಗುತ್ತಾ ಸಾಗುತ್ತಾ ವರ್ಷಗಳು ಉರುಳಿದವು.
ಕೊನೆಗೊಂದು ದಿನ ಅವಳು ಬಯಸಿದ ಗಳಿಗೆ ಬಂದೇ ಬಂತು. ಜಿಂಕೆಯೊಂದನ್ನು ತನ್ನ ಕಬಂಧಬಾಹು ಚಾಚಿ ಹಿಡಿದ ಅವನು ಅದನ್ನು ಕಚಕ್ಕನೆ ಕತ್ತರಿಸಿ ತಿಂದ. ಅವನ ಬಳಿಸಾರಿ ವಯ್ಯಾರದಲ್ಲಿ ನಿಂತು ಗಂಧರ್ವಕನ್ನಿಕೆ ಬಿಂಕ ತೋರಿದಳು. ಅವನು ���ೈಲಿದ್ದ ಜಿಂಕೆ ಬಿಸುಟು ಅವಳೆಡೆಗೆ ಬಂದ. ಅವಳನ್ನು ಎತ್ತರಿಂದ ನೋಡಿದ. ಅವಳು ಅವನ ಕೈ ಹಿಡಿದೆಳೆದಳು. ಮೃದುವಾದಳು, ಮುದ್ದಾಡಿದಳು. ಉನ್ಮತ್ತ ಸ್ಥಿತಿಯಲ್ಲಿ ಅವನು ಇದ್ದಕ್ಕಿದ್ದಂತೆ ಗಂಧರ್ವನಾಗಿ ರೂಪಾಂತರ ಹೊಂದಿದ. ಅವಳ ಸಂತೋಷ ಹೇಳತೀರದು. ಅವನನ್ನು ಅತ್ಯಂತ ಪ್ರೀತಿಯಿಂದ ನೋಡುತ್ತಾ, ಇವತ್ತಿಗೆ ನನ್ನ ಹುಡುಕಾಟ ಫಲಿಸಿತು ಎಂದಳು. ಬಾ ನನ್ನ ಜೊತೆ ಎಂದು ಕರೆದಳು.
ಗಂಧರ್ವ ಅವಳನ್ನು ಒಮ್ಮೆ ಹೀನಾಯವಾಗಿ ನೋಡಿ ನಿನ್ನಂಥವಳಿಗೆ ಗಂಧರ್ವರೇ ಬೇಕಾ. ಯಾರಾದರೂ ರಾಕ್ಷಸರನ್ನು ಹುಡುಕಿಕೋ , ರಾಕ್ಷಸಿ ಎಂದು ಹೇಳಿ ಆಕಾಶಕ್ಕೆ ಹಾರಿದ.
-4-

ನಮ್ಮ ಹುಡುಕಾಟಗಳೇ ಹಾಗೆ. ಇದಲ್ಲ ಅದು, ಅದಲ್ಲ ಇದು ಎಂದು ಹುಡುಕುತ್ತಾ ಹೋಗುತ್ತೇವೆ. ಕೈಗೆ ಬಂದದ್ದನ್ನು ದೂರಕ್ಕೆ ತಳ್ಳುತ್ತಾ, ಯಾವತ್ತೋ ದೂರ ತಳ್ಳಿದ್ದಕ್ಕಾಗಿ ಮತ್ತೆ ಹಂಬಲಿಸುತ್ತಾ, ಇದು ನನ್ನದಲ್ಲ ಇದು ನನ್ನದಲ್ಲ ಎಂದು ಗೊಣಗುತ್ತಾ, ಮತ್ಯಾವುದು ಅಂತ ಹುಡುಕುತ್ತಾ ಹೋಗುವುದು. ಯಾವುದನ್ನು ನಿರಾಕರಿಸಿದ್ದೆವೋ ಅದರ ಜೊತೆಗೇ ಬಾಳಬೇಕಾಗಿ ಬರುವುದು.
ರಾಕ್ಷಸರೊಳಗೇ ಹುದುಗಿರುವ ಗಂಧರ್ವನನ್ನು ಹುಡುಕುವುದು ಕಷ್ಟ. ಅದರಲ್ಲೂ ಯಾವ ರಾಕ್ಷಸನೊಳಗೆ ಗಂಧರ್ವನಿದ್ದಾನೆ ಅಂತ ಹೇಳುವುದೂ ಕಷ್ಟ. ರಾಕ್ಷಸನೂ ಸಾಮಾನ್ಯನೇನಲ್ಲ. ಅವನೂ ಕಿಲಾಡಿ. ತನ್ನೊಳಗೆ ಗಂಧರ್ವನಿದ್ದಾನೆ ಎಂದು ಅವನು ಹೇಳಿಕೊಳ್ಳದೇ ಇರಬಹುದು. ಅವಳನ್ನು ದೂರ ಇಡಲು ಅವನು ಥೇಟ್ ರಾಕ್ಷಸನಂತೆಯೇ ವರ್ತಿಸತೊಡಗಬಹುದು.
ರಾಕ್ಷಸನೊಳಗಿನ ಗಂಧರ್ವನನ್ನು ಹುಡುಕುವುದೋ ಗಂಧರ್ವನೊಳಗಿನ ರಾಕ್ಷಸನನ್ನು ಹುಡುಕುವುದೋ ಅನ್ನುವುದೇ ಸ್ಪಷ್ಟವಿಲ್ಲ, ನಮಗೆ ಇಷ್ಟವಾಗುವುದು ರಾಕ್ಷಸನೋ ಗಂಧರ್ವನೋ ಗೊತ್ತಿಲ್ಲ. ಮೊದಲು ಸ್ಪರ್ಶಿಸಿದಾಗಲೇ ಅವನನ್ನು ಶಪಿಸದೇ ಹೋಗಿದ್ದರೆ ಅವಳ ಬದುಕು ಏನಾಗುತ್ತಿತ್ತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕರೆ ನಮ್ಮ ಬದುಕಿಗೂ ಉತ್ತರ ಸಿಕ್ಕಂತಾಗುತ್ತದೆ.
ಹಾಗೆಲ್ಲ ಬದುಕು ಸುಲಭವಾಗಿ ಯಾವ ಪ್ರಶ್ನೆಗೂ ಉತ್ತರ ಕೊಡುವುದಿಲ್ಲ. ನಾಳೆ ಬಾ ಅನ್ನುತ್ತದೆ. ಮತ್ತೊಂದು ನಾಳೆಗಾಗಿ, ಮತ್ತೊಬ್ಬ ರಾಕ್ಷಸನಿಗಾಗಿ, ಅವನೊಳಗಿರಬಹುದಾದ ಗಂಧರ್ವನಿಗಾಗಿ ನಾವು ಕಾಯುತ್ತಾ ಹೋಗುತ್ತೇವೆ.
ಆ ಗಂಧರ್ವನ ಬಳಿ ಹೋಗುವ ಹೊತ್ತಿಗೆ ನಾವೂ ರಾಕ್ಷಸರೇ ಆಗಿರುತ್ತೇವೆ.

Leave a Reply