ತುಂಗೆಯ ತೆನೆ ಬಳುಕಿನಲ್ಲಿ ಕಾವ್ಯಕನ್ನಿಕೆಯ ಜಳಕ

ತುಂಗೆಯ ತೆನೆ ಬಳುಕಿನಲ್ಲಿ ಕಾವ್ಯಕನ್ನಿಕೆಯ ಜಳಕ

ಭಾಸ್ಕರ ಅಸ್ತಂಗತನಾದ ಎಂದು ಹೇಳಬೇಡಿ. ಸೂರ್ಯ ಕಂತಿದ ಎಂದು ಬರೆದರೆ ನಿಮ್ಮ ಗಂಟೇನು ಹೋಗುತ್ತದೆ ನೋಡುವಾ ಎಂದು ಸುಮಾರು ಇಪ್ಪತ್ತು ವರುಷಗಳ ಹಿಂದೆ ಶಿವರಾಮ ಕಾರಂತರು ಗುಡುಗಿದ್ದರು. ಹೀಗೆ ಹೇಳಿದ ಕಾರಂತರೇ ಕವಿತೆಗಳನ್ನೂ ಬರೆದಿದ್ದರು ಅಂದರೆ ಆಶ್ಚರ್ಯವಾಗುತ್ತದೆ. ಸರಳವಾಗಿ ಹೇಳುವುದೇ ಒಂದು ದೀಕ್ಷೆಯೋ ಪಟುತ್ವವೋ ಆಗಿಬಿಟ್ಟಾಗ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಅನಗತ್ಯವಾಗಿ ಎಲ್ಲವನ್ನೂ ಸರಳಗೊಳಿಸುವುದಕ್ಕೆ ನಾವು ಶುರುಮಾಡುತ್ತೇನೆ. ಹನ್ನೆರಡನೆಯ ಶತಮಾನದಲ್ಲೇ ವಚನಕಾರರು ಎಷ್ಟು ಸರಳವಾಗಿ ಬರೆದಿದ್ದರು ನೋಡಿ. ಇಪ್ಪತ್ತನೇ ಶತಮಾನದ ಕುವೆಂಪು ಯಾಕೆ ಅಷ್ಟೊಂದು ಕ್ಲಿಷ್ಟವಾಗಿ ಬರೆಯಬೇಕು ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳುತ್ತೇವೆ.
ಸರಳವಾಗಿ ಬರೆಯಬೇಕು ಎನ್ನುವುದು ಗದ್ಯಕಾರರ ಸಂಕಲ್ಪ. ಆದರೆ ಗದ್ಯದಲ್ಲಿ ಸರಳವಾಗಿ ಹೇಳಿದ್ದು ಒಂದು ಅನುಭವವಾಗಿ ನಮ್ಮನ್ನು ತಾಕುತ್ತದೆಯೇ? ಅಲ್ಲು ತುಂಬ ಬಿಡುವಾಗಿದ್ದಾಗ ಓದಿ ಮರೆತುಬಿಡುವ ಬರಹ ಮಾತ್ರ ಆಗಿಬಿಡುವ ಸಾಧ್ಯತೆ ಇಲ್ಲವೇ? ತುಂಬ ಸರಳವಾಗಿ ಹೇಳಿದಾಗ ಇಷ್ಟೇನಾ ಅನ್ನಿಸಿ ಇಡೀ ಅನುಭವದ ಗಾಢತೆಯೇ ನಮ್ಮನ್ನು ತಟ್ಟದೇ ಇರುವ ಸಾಧ್ಯತೆಗಳು ಇಲ್ಲವೆ? ಇವನ್ನೆಲ್ಲ ಸರಳತೆಯ ಬಗ್ಗೆ ಮಾತಾಡುವ ಮಂದಿ ಗಮನಿಸಿದ್ದಾರಾ? ಅಷ್ಟಕ್ಕೂ ಯಾರು ಸರಳವಾಗಿ ಬರೆಯಬೇಕು, ಕವಿಗಳೋ ಕತೆಗಾರರೋ?
ಅಷ್ಟಕ್ಕೂ ತನಗೆ ಬೇಕಾದ ಶೈಲಿಯನ್ನೂ ಭಾಷೆಯನ್ನೂ ಸಂಕೀರ್ಣತೆಯನ್ನೂ ಕಂಡುಕೊಳ್ಳುವುದು ಕಾವ್ಯವೇ ಅಲ್ಲವೇ? ಒಂದು ಒಳ್ಳೆಯ ಕವಿತೆಯನ್ನು ಅದರ ಸದ್ಯದ ಸ್ವರೂಪದಿಂದಲೂ ಮೈಯಿಂದಲೂ ಬೇರ್ಪಡಿಸಿ ನೋಡುವುದಕ್ಕೆ ಸಾಧ್ಯವೇ? ಹಾಗೆ ನೋಡಿದಾಗ ಅದು ಪದ್ಯವಾಗಿಯೇ ಉಳಿಯುತ್ತದೆಯೆ? ಹೀಗೆ ಕಾವ್ಯವನ್ನು ಗಮನಿಸುವಾಗ ಅನೇಕ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಷೇಕ್ಸ್ ಪಿಯರ್  ಥರದ ಕವಿಗಳು ಕಾವ್ಯವನ್ನೂ ಅದಕ್ಕೆ ತುಂಬ ಹತ್ತಿರದ ನಾಟಕವನ್ನೂ ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಆಯ್ದುಕೊಂಡರು. ಕಾಳಿದಾಸ ಕಾವ್ಯ-ನಾಟಕ ಬಿಟ್ಟು ಬೇರೇನೂ ಬರೆಯುವುದಕ್ಕೆ ಹೋಗಲಿಲ್ಲ. ಆದರೆ ಕಾಳಿದಾಸನ ನಾಟಕವೂ ಕಾವ್ಯವೂ ಒಂದೇ. ಕಾರ್ನಾಡರು ಬೇರೇನೂ ಬರೆದರೂ ಕೊನೆಗೂ ನೆನಪಿರುವುದು ಅವರ ನಾಟಕಗಳು ಮಾತ್ರ. ಅನಂತಮೂರ್ತಿ ಕವಿತೆಗಳನ್ನು ಬರೆದರೂ ಕತೆಗಳಷ್ಟೇ ನೆನಪಲ್ಲಿರುತ್ತವೆ. ಲಂಕೇಶರ ವಿಚಾರದಲ್ಲೂ ಇದು ಸತ್ಯ. ಬೇಂದ್ರೆ ಅಡಿಗರ ಪುಟಗಟ್ಟಲೆ ಗದ್ಯ ಸಾಹಿತ್ಯವನ್ನು ಮತ್ತೊಮ್ಮೆ ಓದಬೇಕು ಅಂತಲೂ ಅನ್ನಿಸದೇ ಇದ್ದರೆ ಅದಕ್ಕೆ ಕಾರಣ ಅವರ ಅತ್ಯುತ್ತಮ ಪ್ರತಿಯೆಲ್ಲ ಕಾವ್ಯಕ್ಷೇತ್ರಕ್ಕೆ ಸಂದಾಯವಾಗಿರುವುದು.
ನಮ್ಮ ಅಭಿವ್ಯಕ್ತಿ ಮಾಧ್ಯಮ ಯಾವುದಿರಬೇಕು ಎಂಬ ತರುಣ ಲೇಖಕರ ಪ್ರಶ್ನೆ ಎದುರಿಗಿದೆ. ಹೊಸದಾಗಿ ಬರೆಯಲು ಶುರುಮಾಡುವ ಸಾವಿರಾರು ಮಂದಿ, ಕನಿಷ್ಠ ನೂರಾರು ಮಂದಿ, ನಾನೇನು ಬರೆಯಲಿ ಎಂಬ ಗೊಂದಲಕ್ಕೆ ಬೀಳುತ್ತಾರೆ. ಅನೇಕರಿಗೆ ಕವಿತೆ ಬರೆಯುವುದು ಸುಲಭ, ಗದ್ಯ ಕಷ್ಟ ಅನ್ನುವ ಭಾವನೆಯಿದೆ. ಮತ್ತೆ ಹಲವರಿಗೆ ಈ ಕಾಲದ ಅಭಿವ್ಯಕ್ತಿ ಮಾಧ್ಯಮ ಯಾವುದು ಅನ್ನುವುದೇ ಗೊತ್ತಿಲ್ಲ. ಹಾಗೆಲ್ಲ ಕಾಲಕ್ಕೊಂದು ಅಭಿವ್ಯಕ್ತಿ ಮಾಧ್ಯಮ ಇರುವುದಿಲ್ಲ ಎಂದರೂ ಅವರು ನಂಬುವುದಿಲ್ಲ. ಒಂದು ಕಾಲದಲ್ಲಿ ಸಣ್ಣಕತೆಗಳನ್ನು ತುಂಬ ಓದುತ್ತಿದ್ದರಂತೆ. ಈಗ ಹನಿಗವಿತೆ ಓದುತ್ತಾರಂತೆ. ಹನಿಗವಿತೆ ಬರೆಯೋಣವೇ ಎಂದು ನೇರವಾಗಿ ವಿಷಯಕ್ಕೆ ಬರುವ ತರುಣ ಕವಿಗಳೂ ಇದ್ದಾರೆ.
ಅಷ್ಟಕ್ಕೂ ಇದು ಗಂಭೀರವಾದ ಸಮಸ್ಯೆಯಾ? ತನ್ನ ಅಭಿವ್ಯಕ್ತಿ ಮಾಧ್ಯಮವನ್ನು ಕಂಡುಕೊಳ್ಳುವ ಜವಾಬ್ದಾರಿ ಆಯಾ ಬರಹಗಾರನದೇ ಅಲ್ಲವೇ? ಹಿಂದೆ ಮೇಷ್ಟ್ರುಗಳು `ನೋಡಯ್ಯಾ, ನಿನಗೆ ಕಾವ್ಯ ಆಗಿಬರೋಲ್ಲ. ನೀನು ಕಾದಂಬರಿ ಬರಿ’ ಎಂದು ತಮ್ಮ ಶಿಷ್ಯಂದಿರನ್ನು ತಿದ್ದುತಿದ್ದರಂತೆ. ಹಾಗೆ ತಿದ್ದುವ ಮೂಲಕ ಎಷ್ಟೊ ಕವಿಗಳನ್ನು ಆ ಮೇಷ್ಟ್ರುಗಳು ಹುಟ್ಟುವ ಮೊದಲೇ ಸಾಯಿಸಿರಬಹುದು!
ಅಭಿವ್ಯಕ್ತಿ ಮಾಧ್ಯಮ ಯಾವುದಿರಬೇಕು ಅನ್ನುವುದನ್ನು ನೋಡುವ ಮೊದಲು ಇದೊಂದು ಉದಾಹರಣೆ ನೋಡೋಣ;
ಜೋಗದಲ್ಲಿ ಶರಾವತಿ ನದಿ ಅದೆಷ್ಟೋ ಮೀಟರ್ ಎತ್ತರದಿಂದ ಧುಮುಕುತ್ತಾಳೆ. ಆ ಜೋಗ ಜಲಪಾತದ ಬಗ್ಗೆ ಅನೇಕರು ಅನೇಕ ಕವಿತೆಗಳನ್ನು ಬರೆದಿದ್ದಾರೆ. ಸಾಯೋಕ್ಮುಂಚೆ ಒಂದ್ಸಾರಿ ನೋಡು ಜೋಗಾದ್ಗುಂಡೀ ಅನ್ನುವ ಮೂಗೂರು ಮಲ್ಲಪ್ಪನ ಗೀತೆಯಿಂದ ಹಿಡಿದು ವಿಶ್ವೇಶ್ವರಯ್ಯ ಹೇಳಿದರು ಎನ್ನಲಾದ ` ಎಂಥಾ ಅಗಾಧ ನಷ್ಟ’ ಎಂಬ ಉದ್ಗಾರದ ತನಕ ಜೋಗ ಎಲ್ಲರನ್ನೂ ಒಂದಲ್ಲ ಒಂದು ಭಾವನೆಯನ್ನು ಹುಟ್ಟುಹಾಕಿದೆ.
ಎಲ್ಲರೂ ಜೋಗದ ಬಗ್ಗೆ ಬರೆದಿದ್ದನ್ನು ಓದಿದ ನಂತರ ನಾಲ್ಕನೇ ತರಗತಿಯ ಕನ್ನಡ ಪಾಠ ಪುಸ್ತಕ ನೋಡಿ. ಜೋಗ ಜಲಪಾತದಿಂದ ಧುಮ್ಮಿಕ್ಕುವ ನೀರನ್ನು ಹಿಡಿದು ಹೇಗೆ ವಿದ್ಯುತ್ ಉತ್ಪಾದನೆ ಮಾಡುತ್ತಾರೆ. ಅದು ಹೇಗೆ ಕರ್ನಾಟಕದ ಮನೆ ಮನೆಯನ್ನು ಬೆಳಗುತ್ತದೆ ಅನ್ನುವ ವಿವರಗಳಿವೆ.
ಇದನ್ನೆಲ್ಲ ಕಾವ್ಯದಲ್ಲಿ ಹೇಗೆ ಹಿಡಿದಿಡಬಹುದು?
ಈ ಪ್ರಶ್ನೆಗೆ ಉತ್ತರವಾಗಿ ನೀವು ನಿಸಾರರ ಕವಿತೆ ಓದಬೇಕು. ಒಂದು ವಿಸ್ತೃತವಾದ ಪ್ರಾಸೆಸ್ಸು ಕವಿಯ ಕೈಗೆ ಸಿಕ್ಕಾಗ ಎರಡೇ ಪದಗಳಲ್ಲಿ ಹೇಗೆ ಅಭಿವ್ಯಕ್ತಗೊಳ್ಳುತ್ತದೆ ಅನ್ನುವುದನ್ನು ನೋಡಬೇಕು. ಶರಾವತಿ ನದಿ ಜೋಗದಲ್ಲಿ ಧುಮುಕಿ ಕರೆಂಟು ಉತ್ಪಾದಿಸುವ ಯಂತ್ರಗಳನ್ನು ಹಾದು, ಆ ಕರೆಂಟು ತಂತಿಗಳಲ್ಲಿ ಸಾಗಿ ಮೊಳಕಾಲ್ಮೂರಿನ ಬೀದಿಗಳನ್ನು ಬೆಳಗಿತು ಅನ್ನುವುದು ನಿಸಾರ್ ಎಷ್ಟು ಚಿಕ್ಕದಾಗಿ ಹೇಳಿದ್ದಾರೆ; ಜೋಗದ ಸಿರಿಬೆಳಕಿನಲ್ಲಿ….ಈ ಎರಡು ಪದಗಳನ್ನೇ ಒಂದು ಕತೆಯಿದೆ, ಇತಿಹಾಸವಿದೆ, ಪ್ರಾಸೆಸ್ಸಿದೆ. ಹಾಗೇ ತುಂಗೆಯ ತೆನೆ ಬಳುಕಿನಲ್ಲಿ… ಅನ್ನುವ ಪದದಲ್ಲಿರುವ ಅಚ್ಚರಿ ಗಮನಿಸಿ. ಇದನ್ನು ಇಂಗ್ಲಿಷಿಗೆ ಅನುವಾದಿಸುವುದಂತೂ ಕಷ್ಟ. ತುಂಗೆ ಹರಿಯುತ್ತಾಳೆ. ಅವಳ ನೀರಿನಿಂದ ಎಲ್ಲೋ ಬತ್ತ ಬೆಳೆಯುತ್ತದೆ. ಆ ಭತ್ತ ತೆನೆಬಿಡುತ್ತದೆ. ಇಷ್ಟೆಲ್ಲವೂ ಸೇರಿ, ತುಂಗೆಯ ತೆನೆ ಬಳುಕಿನಲ್ಲಿ ಎಂದು ಒಂದು ಉದ್ಗಾರದಲ್ಲಿ ಬಂದುಹೋಗುತ್ತದೆ. ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ಅನ್ನುವ ಸಾಲಲ್ಲೂ ಒಂದು ಬೆರಗಿದೆ. ಲೋಹದ ಅದಿರು ಅಡಗಿರುವುದು ಆಳದಲ್ಲಿ, ಭೂಗರ್ಭದಲ್ಲಿ. ಆದರೆ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ಅಂತಾರೆ ನಿಸಾರ್.
ಕುವೆಂಪು ಕಾವ್ಯದ ಭಾಷೆಯೂ ಅಷ್ಟೇ. ಅದು ಕ್ಲಿಷ್ಟ ಅನ್ನುವವರು ಈ ಸಾಲುಗಳನ್ನು ಬೇರೆ ಥರ, ಕನಿಷ್ಟ ಗದ್ಯದಲ್ಲಾದರೂ ವಿವರಿಸಲಿ ನೋಡೋಣ;

ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ;
ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮೀ ನೀ, ಚತುರ್ಮುಖನ ರಾಣಿ;
ದಿವ್ಯವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು ವಾಣಿ.
ಅಭವದೊತ್ತಾದೆ, ಭವದ ಬಿತ್ತಾದೆ, ಋತದ ಚಿತ್ತಾದೆ ನೀ
ಇಳಿದು ಬಾ ಇಳೆಗೆ, ತುಂಬಿ ತಾ ಬೆಳಗೆ ಜೀವಕೇಂದ್ರದಲ್ಲಿ;
ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥಿವಿಯಲ್ಲಿ..

ಕಾವ್ಯವನ್ನು ಬೇರೆ ಥರ ಹೇಳಕ್ಕಾಗಲ್ಲ ಅನ್ನುವ ಕಾರಣಕ್ಕೇ ಅದು ಕಾವ್ಯ. ಬೇರೆ ಥರ ಹೇಳಲಿಕ್ಕೆ ಸಾಧ್ಯವಾದರೆ ಅದು ವರದಿ.

Leave a Reply