ಮುಸ್ಸಂಜೆಯ ಮೂರು ಗಳಿಗೆ

ಮುಸ್ಸಂಜೆಯ ಮೂರು ಗಳಿಗೆ
ಸಂಜೆ ಮುಗಿದಿರಲಿಲ್ಲ. ಇರುಳು ಶುರುವಾಗಿರಲಿಲ್ಲ. ಬಿಸಿಲು ಕಣ್ಮರೆಯಾಗಿದ್ದರೂ, ಸೂರ್ಯನ ನೆರಳು ಚಾಚಿಕೊಂಡಿತ್ತು. ಮನೆಯೊಳಗೆ ಯಾರೋ ಅರೆಮನಸ್ಸಿನಿಂದ ಎಸೆದ ನಸುಬೆಳಕು, ಪುಟ್ಟ ಮಗು ಚೌಕಕ್ಕೆ ತುಂಬಿದ ಕಪ್ಪುಬಣ್ಣದ ನಡುವೆ ಖಾಲಿ ಉಳಿದ ಜಾಗದಂತೆ ಕಾಣಿಸುತ್ತಿತ್ತು. ಹಳೇ ಕಾಲದ ಮೇಜಿನಡಿ ಜೋಡಿನೆರಳುಗಳು ತೆಕ್ಕೆಬಿದ್ದು ಹೆಣೆಯಾಡುತ್ತಿದ್ದವು.
ಅಷ್ಟು ಹೊತ್ತಿಗೆ ಬೆಳಕಾಯಿತು. ದೂರದಲ್ಲೆಲ್ಲೋ ಟ್ರೇನು ಬಂದು ನಿಂತ ಸದ್ದು. ಆ ಸದ್ದಿಗೂ ಕತ್ತಲೆಯ ಸುದ್ದಿ ತಿಳಿದಿತ್ತೋ ಎಂಬಂತೆ ಎಂದಿಗಿಂತ ವೇಗವಾಗಿಯೇ ಅದು ಆ ಕತ್ತಲನ್ನು ಆಗಷ್ಟೇ ಹೊರಹಾಕಿದ್ದ ಮನೆಯ ಒಳಗನ್ನೂ ತಲುಪಿತು.
ಬೆಳಕು ಆವತ್ತು ಮಾತಾಡಲಿಲ್ಲ. ಮಾತಾಡುವುದಕ್ಕೆ ಏನೂ ಉಳಿದೇ ಇಲ್ಲವೇನೋ ಎಂಬಂತೆ ಕತ್ತಲು ಕೂಡ ನೆರಳಿನ ಕೂಡ ಜಗಳ ಆಡುತ್ತಿರಲಿಲ್ಲ. ನಾವಿಬ್ಬರೂ ಸಹಬಾಳ್ವೆ ನಡೆಸಬೇಕಾದ ಜಾಗ ಇದು ಎನ್ನುವುದು ಸ್ಪಷ್ಟವಾಗಿ ಗೊತ್ತಿದ್ದವರ ಹಾಗೆ ಅವೆರಡೂ ಒಂದೇ ತಾಯಿಯ ಮಕ್ಕಳೋ ಎಂಬಷ್ಟು ಸಹಜವಾಗಿ ಆಪ್ತವಾಗಿ ಒಡನಾಡಿಕೊಂಡಿದ್ದವು.
ಮನೆಗೆ ಅಂಗಳ ಇರಲಿಲ್ಲ. ಬೀದಿಗೇ ಚಾಚಿಕೊಂಡಿದ್ದ ಬಾಗಿಲು. ಹಾದಿಹೋಕ ತಪ್ಪಿ ಒಂದು ಹೆಜ್ಜೆ ಪಕ್ಕಕ್ಕಿಟ್ಟರೆ ಮನೆಯೊಳಗೆ ಬರಬಹುದಾಗಿತ್ತು. ಆದರೆ, ಹಾಗೆ ತಪ್ಪಿ ಒಳಬಂದವರನ್ನು ಆ ಮನೆ ಯಾವತ್ತೂ ನೋಡಿರಲಿಲ್ಲ. ಬರಬೇಕಾಗಿದ್ದವರೇ ಬಾರದೇ ಉಳಿದ ಮನೆ ಅದು. ಹೀಗಾಗಿ ಅಪರಿಚಿತರ ಪಾಲಿಗಂತೂ ಅದು ಮುಚ್ಚಿದ ಬಾಗಿಲು. ಆ ಬಾಗಿಲಿಗೆ ಒಮ್ಮೊಮ್ಮೆ ಬೀಗ ಜೋತುಬಿದ್ದು, ಇಡೀ ಮನೆಯ ರಕ್ಷಣೆಯ ಹೊಣೆ ನನ್ನದು ಎನ್ನುವ ಅಹಂಕಾರದಲ್ಲಿ ಕೂತಿರುತ್ತಿತ್ತು. ಅದರ ಅಹಂಕಾರವನ್ನು ಅಣಕಿಸುತ್ತಾ, ಕಳ್ಳರ ಅತೀವ ಚಾಣಾಕ್ಷತನಗಳು ಆ ಮನೆಯ ಮುಂದೆಯೇ ಓಡಾಡಿದ್ದುಂಟು. ಅಂಥ ಜಾಣ್ಮೆಗೆ ಸವಾಲಾಗುವ ಶಕ್ತಿಯಂತೂ ಆ ಬೀಗಕ್ಕಿರಲಿಲ್ಲ. ಅದು ಅಷ್ಟು ವರುಷ ನಿಯತ್ತಿನ ಕಾವಲುಗಾರನಾಗಿ ಉಳಿದಿದ್ದಕ್ಕೆ ಕಾರಣ ಅದನ್ನು ಮುಟ್ಟದೇ ಮುಂದೆ ಸಾಗಿದ ಕಸಬುಗಾರಿಕೆಯ ಕರುಣೆಯೇ ಹೊರತು, ಬೀಗದ ಶಕ್ತಿಸಾಮರ್ಥ್ಯ ಅಲ್ಲ.
ರಸ್ತೆ ಆಚೆ ಬದಿಗೆ ಬೀದಿದೀಪವಿತ್ತು. ಅದರ ಬೆಳಕಿಗೆ ಮನೆಯೊಳಗಿನ ಕತ್ತಲೆಯ ಬಗ್ಗೆ ಅತೀವ ಮರುಕವೂ ಇತ್ತು. ಬಾಗಿಲು ತೆಗೆದಾಗೊಮ್ಮೆ ಆ ಬೆಳಕು ಮನೆಯೊಳಗೆ ಕಾಲಿಟ್ಚು ಒಳಗೆ ಮನೆಮಾಡಿದ್ದ ಅರೆಗತ್ತಲ ಹರೆಯಕ್ಕೊಂದು ಕಣ್ಣುಹೊಡೆದು ಮರಳುತ್ತಿತ್ತು. ಆ ಕತ್ತಲನ್ನು ಕೂಡಿ, ತನ್ನ ಪ್ರಜ್ವಲತೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ಅವಕಾಶವಂತೂ ಅದಕ್ಕೆ ಸಿಕ್ಕಿರಲೇ ಇಲ್ಲ. ಆ ಬಗ್ಗೆ ಬೀದಿ ದೀಪದ ಬೆಳಕಿಗೆ ಅಪಾರ ಸಿಟ್ಟೂ ಇದ್ದಂತಿತ್ತು. ಆದರೆ ಆ ಸಿಟ್ಟನ್ನು ವಿಷಾದದ ಅರಿವೆಯಲ್ಲಿ ಸುತ್ತಿಟ್ಟು ಅದು ಮಂದವಾಗಿ ಉರಿಯುತ್ತಿತ್ತು.
ಅಡುಗೆ ಮನೆಯಲ್ಲಿ ತಟ್ಟೆ ಸದ್ದು ಮಾಡಿತು. ಅದಕ್ಕೆ ವರಾಂಡದಲ್ಲಿ ಕುರ್ಚಿಯ ಮೇಲೆ ಕೂತಿದ್ದ ಕಾಲುಗಳು ಭಂಗಿ ಬದಲಾಯಿದವು. ಸ್ವಲ್ಪ ಹೊತ್ತಿಗೆಲ್ಲ ಶಂಖದ ದನಿ ಮನೆಯೊಳಗಿನ ಅರೆಗತ್ತಲ ನಿದ್ದೆಯನ್ನು ಅರೆಕ್ಷಣ ಓಡಿಸುತ್ತದೆ ಅನ್ನುವುದು ಕತ್ತಲೆಗೂ ಗೊತ್ತಿತ್ತು.
ಮನೆಯೊಳಗೆ ಅದೇನೋ ಸದ್ದಾಯಿತು. ಆ ಅಪರಿಚಿತ ಸದ್ದಿಗೆ ನಾಲ್ಕು ಕಣ್ಣುಗಳೂ ನಾಲ್ಕು ಕಿವಿಗಳೂ ಚುರುಕಾದವು. ಆ ಸದ್ದಿಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಎಂಟೂ ದಿಕ್ಕುಗಳೂ ತೆಪ್ಪಗಿದ್ದವು. ಆ ನೀರವದಲ್ಲಿ ದೂರದಲ್ಲೆಲ್ಲೋ ಮಳೆಯಾದ ಘಮಲು ತೇಲಿಕೊಂಡು ಬಂದು ಕತ್ತಲ ಮೈಗೆ ಸವರಿತು.

ಕತ್ತಲು ಪುಳಕಗೊಂಡು, ಆ ಪರಿಮಳಕ್ಕೆ ತನ್ನನ್ನು ಒಪ್ಪಿಸಿಕೊಂಡುಬಿಟ್ಟಿತು.
ಕೇಶವಮೂರ್ತಿ ರೇಲು ಬಂತು, ಹೋಯ್ತು ಎಂದು ಪಿಸುಗುಟ್ಟಿಕೊಂಡರು. ಶಾಂತಮ್ಮನ ನಿಟ್ಟುಸಿರು ಆ ಪಿಸುಮಾತಿಗೆ ಮುತ್ತಿಡಲು ಹೆಜ್ಜೆ ಮುಂದಿಟ್ಟಿತು. ಅವೆರಡೂ ಕ್ಷಣಾರ್ಧದಲ್ಲಿ ದಿವಂಗತವಾದವು.
-೨-
ಹೊರಟ ಹಾದಿಯಲ್ಲಿ ಹೂಬಿಸಿಲಿತ್ತು. ಅದು ಮಧ್ಯಾಹ್ನದ ಹೊತ್ತಿಗೆ ದೂರ್ವಾಸರ ಹಾಗೆ ಕೆಂಡಾಮಂಡಲವಾಗಿ, ಮತ್ತೆ ಊರ್ವಶಿಯ ಹಾಗೆ ತಂಪಾಗಿ, ಕೊನೆಯಲ್ಲಿ ಮೇನಕೆಯ ಹಾಗೆ ಮೈ ಚಾಚಿಕೊಳ್ಳುವುದಕ್ಕೆ ಕಾಯುತ್ತಿತ್ತು.
ಚಿರಪರಿಚಿತ ರಸ್ತೆ. ತನ್ನನ್ನು ತುಳಿದು ಸಾಗಿದವರನ್ನು ಅದು ಯಾವತ್ತೂ ನಿರಾಸೆ ಮಾಡಿದ್ದಿಲ್ಲ. ಹೊರಟವರನ್ನು ಹೊರಟಲ್ಲಿಗೆ ತಲುಪಿಸಿ ಮರಳಿ ಕರೆತಂದ ಖ್ಯಾತಿ ಅದಕ್ಕಿತ್ತು.
ಚಪ್ಪಲಿ ತೊಟ್ಟ ಪಾದಗಳ ವಿಚಾರದಲ್ಲಿ ಆ ರಸ್ತೆಗೆ ತಕರಾರು. ಬರಿಗಾಲಲ್ಲಿ ನಡೆಯುವವರನ್ನು ಕಂಡರೆ ಅಚ್ಚುಮೆಚ್ಚು. ತೀರ ಸಂತೋಷ ಉಕ್ಕಿದಾಗ ಒಂದೆರಡು ಹಳದಿ ಹೂವುಗಳನ್ನು ಅರಳಿಸಿ ಅದು ರೋಮಾಂಚಗೊಳ್ಳುತ್ತಿತ್ತು. ಆ ಹೂವುಗಳಿಗೆ ದೀರ್ಘಾಯುಷ್ಯವಿಲ್ಲ ಎನ್ನುವ ಕೊರಗೂ ಆ ರಸ್ತೆಗಿತ್ತು. ಆದರೆ, ಶಾಶ್ವತವಾದದ್ದು ಯಾವತ್ತೂ ಸುಂದರವಾಗಿರುವುದಿಲ್ಲ ಎಂಬ ಸತ್ಯವನ್ನು ಅನೇಕರು ಆ ರಸ್ತೆಗೆ ಕಲಿಸಿಕೊಟ್ಟಿದ್ದರು.
ತನಗೊಂದು ಕೊನೆಯಿದೆ ಮತ್ತು ಮೊದಲಿದೆ ಅನ್ನುವುದೇ ಗೊತ್ತಿಲ್ಲದ ಹುಂಬ ರಸ್ತೆ ಅದು. ನಡೆದಷ್ಟೂ ತೆರೆದುಕೊಳ್ಳುತ್ತಿದ್ದ ಅದನ್ನು ಮೆಟ್ಟಿಕೊಂಡು ಹೊರಟವ ಕಾಲುಗಳೆಲ್ಲ ಅರ್ಧಕ್ಕೇ ಹಳಿ ಬದಲಾಯಿಸುತ್ತಿದ್ದವು. ತನ್ನನ್ನು ನಂಬಿದವರನ್ನು ಒಂದು ಗುರಿಗೆ ಖಂಡಿತಾ ತಲುಪಿಸಬಲ್ಲೆ ಎಂಬ ನಂಬಿಕೆಯಿಂದ ಆ ರಸ್ತೆ, ತನ್ನನ್ನೇ ನೆಚ್ಚಿಕೊಂಡು ನಡೆಯುವ ಕಾಲುಗಳಿಗಾಗಿ ಕಾಯುತ್ತಿತ್ತು.
ಅದರ ಆಯಸ್ಸೇನೂ ತೀರಿರಲಿಲ್ಲ. ಧೋ ಎಂದು ಮಳೆಸುರಿದಾಗ ಅದು ತನ್ನ ಸ್ವರೂಪ ಕಳಕೊಂಡು ಎಡಬಲದ ಬಯಲಲ್ಲಿ ಒಂದಾಗುತ್ತಿತ್ತು. ಮತ್ತೆ ಬೇಸಗೆ ಕಾಲಿಟ್ಟಾಗ ಅದು ಮತ್ತೆ ಹಳೆಯ ರೂಪಕ್ಕೇ ಬರುತ್ತಿತ್ತು. ಚಳಿಗಾಲದಲ್ಲಿ ರಸ್ತೆ ನಡುವೆ ಬೆಳೆದ ಹುಲ್ಲಿನ ತುದಿಯಲ್ಲಿ ಕಿರುಜೇಡ ಕಟ್ಟಿದ ಬಲೆಗೆ ಮಂಜಿನ ಹನಿಗಳು ಮುತ್ತಿನ ತೋರಣ ಕಟ್ಟಿ ಸಂಭ್ರಮಿಸುತ್ತಿದ್ದವು. ಅಂಥ ರಸ್ತೆಯ ಮೇಲೆ ಕಾಲಿಟ್ಟ ಆ ಪಾದಗಳು ಆದಷ್ಟು ಬೇಗ ರಸ್ತೆಯ ಸಹವಾಸ ಮುಗಿದರೆ ಸಾಕಪ್ಪ ಎಂಬಂತೆ ದಾಪುಗಾಲು ಹಾಕಿದ್ದವು.
ತನ್ನನ್ನು ತುಳಿಯುವ ಕಾಲುಗಳು ದಾರಿತಪ್ಪದಂತೆ ಕಾಪಾಡುವ ಕಣ್ಣುಗಳು ತನ್ನ ಮೇಲಿದೆ ಅನ್ನುವುದು ಗೊತ್ತಿದ್ದರೂ ಆ ಕಣ್ಣ ಕಳವಳ ಏನೆಂಬುದನ್ನು ತಿಳಿದುಕೊಳ್ಳಲು ರಸ್ತೆ ಯಾವತ್ತೂ ಆಸಕ್ತಿ ತೋರಿರಲೇ ಇಲ್ಲ. ತನ್ನುದ್ದ ಚಾಚಿಕೊಳ್ಳುವ ರಾತ್ರಿ, ಹಗಲು ತನ್ನನ್ನು ಮುತ್ತಿಕೊಳ್ಳುವ ನೆರಳು ಮತ್ತು ಎಂದಾದರೊಮ್ಮೆ ಅತಿಥಿಯ ಹಾಗೆ ಬಂದು ಹೋಗುವ ಮಳೆಯ ಕುರಿತೂ ರಸ್ತೆಗೆ ಆಸಕ್ತಿ ಇರಲಿಲ್ಲ.
ಆ ಮುಸ್ಸಂಜೆ ತನ್ನ ಮೇಲೆ ಉಪ್ಪುನೀರ ಬಿಂದುಗಳನ್ನು ಅಲ್ಲಲ್ಲಿ ಸುರಿಸುತ್ತಾ ಹೋಗುತ್ತಿದ್ದ ಕಣ್ಣುಗಳ ಮೇಲೆ ರಸ್ತೆಗೆ ಇದ್ದಕ್ಕಿದ್ದಂತೆ ಕರುಣೆ ಉಕ್ಕಿಬಂತು. ಆ ನೀರ ಬಿಂದುಗಳನ್ನು ಅದು ವಿಪರೀತ ದಾಹಗೊಂಡ ಮನುಷ್ಯನ ಹಾಗೆ ಕುಡಿದು ಸುಮ್ಮಗಾಯಿತು. ಹಾಗೆ ಕುಡಿದ ಉಪ್ಪುನೀರ ಬಿಂದುಗಳನ್ನು ಹಳದಿ ಹೂವಿನ ಬದಲಾಗಿ ನೀಲಿ ಹೂವುಗಳಿಗೆ ದಾನ ಕೊಡಬೇಕು ಅನ್ನುವ ಆಸೆಯೊಂದು ಮೂಡಿ ರಸ್ತೆ ಒಮ್ಮೆ ಮೈಮುರಿಯಿತು.
ಆ ಮೈಮುರಿಯುವ ಸಂಭ್ರಮಕ್ಕೆ ಅದಕ್ಕೆ ತನ್ನನ್ನು ತುಳಿಯುತ್ತಾ ಸಾಗುತ್ತಿದ್ದ ಕಾಲುಗಳ ಪರಿವೆಯೇ ಇರಲಿಲ್ಲ.
ಇನ್ನು ನಾನು ಅರಳಿಸುವ ಹಳದಿ ಹೂವು ಕೆಂಪುಬಣ್ಣದ ಹಣೆಬೊಟ್ಟಿಟ್ಟುಕೊಂಡು ಕಣ್ತೆರೆಯುತ್ತದೆ ಅನ್ನುವ ಕಲ್ಪನೆ ರಸ್ತೆಗೆ ಇರಲಿಲ್ಲ. ಪ್ರೀತಿಸುವವರನ್ನೂ ದ್ವೇಷಿಸುವವರನ್ನು ಸಮಾನವಾಗಿ ಪ್ರೀತಿಸುತ್ತೇನೆ ಎಂದುಕೊಂಡು ರಸ್ತೆ ಭಗವದ್ಗೀತೆಗೆ
ಶರಣಾಗುವ ಹೊತ್ತಿಗೆ, ಶಾಕುಂತಲೇ ರಸ್ತೆಯಿಂದಾಚೆ ಬಂದಾಗಿತ್ತು. ಅದಕ್ಕೂ ಮುಂಚೆ..
ಶಾಕುಂತಲೆಯ ಬೆರಳು ಕಲ್ಲೊಂದಕ್ಕೆ ಎಡವಿತು. ಒಂದು ಹನಿ ನೆತ್ತರು ರಸ್ತೆ ಪಾಲಾಯಿತು.
-೩-
ತಾನು ಹುಟ್ಟಿದ್ದನ್ನೇ ಮರೆತ ಕತ್ತಲು ಮತ್ತು ತಾನು ತಲುಪಿದ್ದನ್ನೆ ಮರೆತ ರಸ್ತೆ ಎರಡನ್ನೂ ದಾಟಿಕೊಂಡು ಕಾಲುಗಳು ಮನೆಯ ಬಾಗಿಲಿಗಾಗಿ ಹುಡುಕಾಡಿದವು. ಬಾಗಿಲು ಮುಚ್ಚಿತ್ತು. ಕತ್ತಲು ಕಣ್ಮುಚ್ಚಿಕೊಂಡು ಕಾವಲು ಕಾಯುತ್ತಿತ್ತು.
ಮಂದ ಬೆಳಕಿಗಾಗಿ ಕಣ್ಣು ಹಂಬಲಿಸಿತು. ಬಾಗಿಲು ಬಡಿಯುವುದಕ್ಕೆ ಕೈಗಳು ಕಾದು ಕಂಪಿಸುತ್ತಿದ್ದವು. ತನ್ನ ಕೈ ಹೊರಡಿಸುವ ಸದ್ದು, ತನ್ನನ್ನು ಶಾಶ್ವತವಾಗಿ ಮತ್ತೊಂದು ಜಗತ್ತಿನ ಪಾಲಿಗೆ ಎರವಾಗುವಂತೆ ಮಾಡುತ್ತದೆ ಎಂಬ ಕಲ್ಪನೆ ಆ ಕೈಗಿತ್ತು. ಬೆರಳುಗಳು ತಾನಾಗಿ ಮಡಿಸಿಕೊಂಡವು. ನಡುಬೆರಳು ಬಾಗಿ, ಬಾಗಿಲನ್ನು ಎರಡು ಸಾರಿ ತಟ್ಟಿತು.
ಬಾಗಿಲು ರಸ್ತೆಗೆ ತೆರೆದುಕೊಂಡಿತು. ಒಳಗಿದ್ದ ಅರೆಬೆಳಕು, ಹೊರಗಿದ್ದ ಕತ್ತಲೆಯ ಸೊಂಟಕ್ಕೆ ಕೈ ಹಾಕಿ ಬರಸೆಳೆಯಿತು. ಮುಗಿದು ಹೋದ ಕತೆಯ ನಂತರ ಉಳಿದಿರಬಹುದಾದ ವಿಷಾದದ ಹಾಗೆ ಬೆಳಕು ನರಳಿತು.
ಕಣ್ಣಂಚಿನಲ್ಲಿ ನೀರಾಡಿತು. ಮತ್ತೆರಡು ಕಾಲುಗಳಿಗೆ ಮತ್ತೆರಡು ಕಣ್ಣುಗಳು ಹುಡುಕಾಡಿದವು. ನಾಲ್ಕು ಕಣ್ಣು ಎಂಟಾಗದ ಅಚ್ಚರಿ ಮತ್ತು ಆತಂಕವನ್ನು ಮತ್ತಷ್ಟು ಸ್ಪಷ್ಟಪಡಿಸಲು ಕತ್ತಲೆ ಅಂಜಿಕೊಂಡಿತು. ಬೆಳಕು ತನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ದೀಪದ ತುದಿಗೆ ಆತುಕೊಂಡಿತ್ತು.
ಮೂರು ಕಣ್ಣುಗಳು ಆರಾದವು. ಆರು ಕಣ್ಣುಗಳಲ್ಲಿ ಆರಿದ ಬೆಳಕು ಕತ್ತಲೆಯನ್ನೂ ಅಂಜಿಸುವಂತಿತ್ತು. ದೂರದಲ್ಲೆಲ್ಲೋ ಮೋಡದ ಮೇಲೆ ಚಿನ್ನದ ನೀರು, ಚೆಲ್ಲುತ ಸಾಗಿದೆ ಹೊನ್ನಿನ ತೇರೂ..’ ಎಂಬ ದನಿ ಕತ್ತಲನ್ನು ಕೂಡಿ ಕಳೆದುಹೋಗುತ್ತಿತ್ತು. ಇದ್ದಕ್ಕಿದ್ದಂತೆ ಮತ್ತೊಂದು ರೇಲು ಬಂದು ನಿಂತ ಸದ್ದಿಗೆ ಭೂಮಿ ಕಂಪಿಸಿತು. ಆ ರೇಲು ನಿಂತಂತೆ ಮಾಡಿ ಮತ್ತೆ ಅದೇ ರಭಸದಲ್ಲಿ ಸಿಳ್ಳೆಯ ದನಿಯಂತೆ ಕಿವಿಮರೆಯಾಯಿತು.
-೪-
ಏನಾಯ್ತು, ಕೇಶವಮೂರ್ತಿ ಕೇಳಲೋ ಬೇಡವೋ ಎಂಬ ಸಂದಿಗ್ಧದಲ್ಲಿ ಕೇಳಿ, ಉತ್ತರಕ್ಕಾಗಿ ಕಾದರು. ಶಾಂತಮ್ಮ ಶಕುಂತಲೆಯ ಮಾತು ಬೆಳಕಾಗಲಿ ಎಂದು ಎತ್ತಲೋ ನೋಡಿದರು. ಅವರೆತ್ತ ನೋಡಿದರು ಅನ್ನುವುದು ಕತ್ತಲಿಗೂ ಕಾಣಿಸಲಿಲ್ಲ.
ಶಕುಂತಲೆ ಎಚ್ಚರವೂ ಅಲ್ಲದ, ಸಾವೂ ಅಲ್ಲದ, ಅರಿವೂ ಅಲ್ಲದ, ಪರಿವೆಯೂ ಇಲ್ಲದ ದನಿಯಲ್ಲಿ ವಾಪಸ್ ಬಂದುಬಿಟ್ಟೆ’ ಅಂದಳು.
ಕತ್ತಲು ಮತ್ತು ಬೆಳಕು ಮತ್ತೆ ಸಂಧಿಸುವ ಮತ್ತೊಂದು ಸಂಧ್ಯಾಕಾಲಕ್ಕೆ ಕುಕ್ಕರಗಾಲಲ್ಲಿ ಕಾಯುತ್ತಾ ಕೂತವು.
ಕತ್ತಲು ಬೆಳೆಯುತ್ತಿತ್ತು.
ಬೆಳಕು ಅಳಿಯುತ್ತಿತ್ತು.

Leave a Reply