ಡಾ.ಅಬ್ದುಲ್ ಕಲಾಂ ವಿಧಿವಶ

ಡಾ.ಅಬ್ದುಲ್ ಕಲಾಂ ವಿಧಿವಶ

ಇಂದು 2015ರ ಜುಲೈ 27 ರಂದು ರಾತ್ರಿ 9 ಗಂಟೆಯ ವೇಳೆಗೆ ಸ್ನೇಹಿತರಾದ ಎಲ್.ಮಂಜುನಾಥರವರು ಓದಲು ಕೊಟ್ಟಿದ್ದ ಹೊಸನಗರ ತಾಲೂಕಿನ ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಲಕ್ಷ್ಮಣ ಕೊಡಸೆಯವರ ಪಯಣ ಕಿರು ಕಾದಂಬರಿಯ ಏಳನೆಯ ಅಧ್ಯಾಯ ಮದಲೆ ಚೌಡಿ ಹಬ್ಬ ಎಂಬ ಭಾಗದ ಓದಿನಲ್ಲಿ ನಿರತನಾಗಿದ್ದೆ. ಮಗ ಭಾರ್ಗವ ನಾನಿದ್ದ ಸ್ಥಳಕ್ಕೆ ಬಂದು ಅಬ್ದುಲ್ ಕಲಾಂ ತೀರಿ ಕೊಂಡರಂತೆ ಟಿವಿಯಲ್ಲಿ ಸುದ್ದಿ ಬರುತ್ತಿದೆ ಎಂದ. ಪುಸ್ತಕವನ್ನು ಅಲ್ಲಿಯೆ ಮಡಿಚಿಟ್ಟು ಟೆಲಿವಿಜನ್ ಮುಂದೆ ಕುಳಿತೆ. ಚಾನಲ್ ಒಂದರ ನಿರೂಪಕ ಆ ಸುದ್ದಿಯನ್ನು ರೋಚಕವಾಗಿ ಬಿತ್ತರಿಸುತ್ತ ಅರುಣ ಜೇಟ್ಲಿ, ಅನಂತಕುಮಾರ್, ಖರ್ಗೆ, ಯಡಿಯೂರಪ್ಪ, ಎಸ್.ಎಂ.ಕೃಷ್ಣ, ದೇವೆಗೌಡ, ಕುಮಾರ ಸ್ವಾಮಿ, ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮುಂತಾದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಸಂದೇಶಗಳನ್ನು ಬಿತ್ತರಿಸುತ್ತಿದ್ದ ಮಂದೆ ಟಿವಿ ನೋಡಲು ಬೇಸರವೆನಿಸಿ ರೂಮಿಗೆ ಹೋಗಿ ಕುಳಿತೆ.

ಕಲಾಂ ಬದುಕು ಮನದಾಳದಲ್ಲಿ ಬಿಚ್ಚಿಕೊಳ್ಳ ತೊಡಗಿತು. ಅವರೊಬ್ಬ ಸಾಮಾನ್ಯ ನಾಯಕರಾಗಿರಲಿಲ್ಲ ಶತಮಾನಗಳ ಕಾಲ ನೆನಪಿನಲ್ಲಿಡುವ ವ್ಯಕ್ತಿತ್ವ ಅವರದಾಗಿತ್ತು. ಭಾರತದ ಹೆಮ್ಮೆಯ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ರವರು ನಿಧನರಾಗಿದ್ದಾರೆ. 83ರ ಹದಿ ಹರೆಯದ ಚಿರ ಯುವಕ ನಡೆದಾಡುವ ಚೇತನ ಕಲಾಂ ಇಂದು ಮೇಘಾಲಯದ ಶಿಲ್ಲಾಂಗಿನ ಐಐಎಂನಲ್ಲಿ ಉಪನ್ಯಾಸವನ್ನು ನೀಡಲು ಹೋಗಿದ್ದಾಗ ಉಪನ್ಯಾಸ ನೀಡುವ ವೇಳೆ ಲಘು ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದ ಅವರನ್ನು ತಕ್ಷಣವೆ ಶಿಲ್ಲಾಂಗಿನ ಬೆತನಿ ಆಸ್ಪತ್ರೆಗೆ ಕರೆದೊಯ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ಒಂದು ಆಘಾತಕರ ಸಂಗತಿ ಎಂಬುದು ಒಂದು ಸುದ್ದಿಯಾದರೆ ಇನ್ನೊಂದು ಅವರನ್ನು ಆಸ್ಪತ್ರೆಗೆ ಕರೆ ತರುವ ಮಾರ್ಗದಲ್ಲಿಯೆ ಅವರು ಮೃತ ಪಟ್ಟಿದ್ದರು ಎನ್ನುವ ವರ್ತಮಾನವೂ ಇದೆ. ವಿಷಯ ಏನೆ ಇರಲಿ ಅವರು ನಿಧನರಾಗಿದ್ದಾರೆ ಎನ್ನುವುದು ಅರಗಿಸಿಕೊಳ್ಳಲಾಗದ ಕಟುವಾಸ್ತವ. ಹುಟ್ಟು ಆಕಸ್ಮಿಕ ಆದರೆ ಸಾವು ನಿಶ್ಚಿತ ಇದು ಮನುಷ್ಯ ಜೀವನದ ಫಿಲಾಸಫಿ. ಆದರೆ ಜೀವನದುದ್ದಕ್ಕೂ ಸಾತ್ವಿಕ ರೀತಿಯಲ್ಲಿ ವಿನಮ್ರನಾಗಿ ಬದುಕಿದ ಆತ ಇಡೀ ಭಾರತ ಜಾತ್ಯತೀತವಾಗಿ ಪ್ರೀತಿಸಲ್ಪಟ್ಟ ವ್ಯಕ್ತಿ ಅವರಾಗಿದ್ದರು. ಕಲಾಂ ಎಂದರೆ ನಮಗೆ ನೆನಪಿಗೆ ಬರುವುದು ಅಷ್ಟು ಎತ್ತರವೂ ಅಲ್ಲದ ಅಷ್ಟು ಕುಳ್ಳಗೂ ಅಲ್ಲ ಕಪ್ಪು ಮೈಬಣ್ಣದ ಸದಾ ಮಂದಹಾಸ ತುಂಬಿಕೊಂಡಿರುವ ವದನ ನಕ್ಕರೆ ಕಾಣುವ ಬೆಳಿಯ ಸುಂದರ ದಂತ ಪಂಕ್ತಿ ಮಧ್ಯಕ್ಕೆ ಬಾಚಿ ಎರಡೂ ಬದಿಗೂ ಸಮಪ್ರಮಾಣದಲ್ಲಿ ಬಾಚಿದ ಬಾಚಿದರೆ ಮುಂದಕ್ಕೆ ಇಳಿಬೀಳುವ ಬಿಳಿಯ ಜೊಂಪೆಗೂದಲು ತಕ್ಷಣಕ್ಕೆ ನೆನಪಿಗೆ ಬರುವ ಚಿತ್ರವೆಂದರೆ ಕೆ.ಎಲ್.ಸೈಗಲ್‍ರ ಅಭಿನಯದ ಚಿತ್ರಗಳಲ್ಲಿನ ಅವರ ಕೆಲ ಪಾತ್ರಗಳ ವೇಷ ಭೂಷಣ ತುಂಬು ತೋಳಿನ ಕ್ಲೋಜ್ ಕಾಲರ್ ಕೋಟು ಮಧ್ಯ ಬೈತಲೆ ತೆಗೆದು ಒಪ್ಪ ಓರಣವಾಗಿ ಬಾಚಿದ ತಲೆಗೂದಲಿನ ಚಿತ್ರ ಕಣ್ಮುಂದೆ ಬರುತ್ತದೆ. ಅಖಂಡ ಭಾರತದ ಮಾರ್ಗದರ್ಶಕ ಮತ್ತು ಜಾಗೃತಪ್ರಜ್ಞೆ ಅವರಾಗಿದ್ದರು. ಇದೊಂದು ಅರಗಿಸಿಕೊಳ್ಳಲಾಗದ ಒಂದು ಆಘಾತ.

ಅವುಲ್ ಫಕೀರ್ ಜೈನುಲಾಬ್ದೀನ್ ಕಲಾಂ 1931 ಅಗಸ್ಟ್ 15 ರಂದು ತಮಿಳ್ನಾಡಿನ ರಾಮೇಶ್ವರಂನಲ್ಲಿ ಮಧ್ಯಮ ವರ್ಗದ ಮುಸ್ಲಿಂ ಕುಟುಂಬ ವೊಂದರಲ್ಲಿ ಜನಿಸಿದರು. ಡೋಣಿಯಲ್ಲಿ ರಾಮೇಶ್ವರದ ಭಕ್ತರನ್ನು ದಡ ಮುಟ್ಟಿಸಿ ಅದರಿಂದ ಮತ್ತು ವ್ಯವಸಾಯದಿಂದ ಬರುವ ಆದಾಯವನ್ನೆ ನಂಬಿ ಜೀವನ ಸಾಗಿಸಿದ ಕುಟುಂಬ ಅವರದಾಗಿತ್ತು. ಆ ಕುಟುಂಬದ ಒಂದು ಕುಡಿ ಈ ಕಲಾಂ. ಇವರ ತಾಯಿಯ ಹೆಸರು ಆಸಿಯಮ್ಮ ಎಂದಾಗಿತ್ತು. ಇವರನ್ನು ಅವರ ಮನೆಯಲ್ಲಿ ಆಜಾದ ಎಂದು ಸಹ ಕರೆಯುತ್ತಿದ್ದರು. ರಾಮೇಶ್ವರದಲ್ಲಿ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಮುಗಿಸಿದ ಅವರು ಮಾಧ್ಯಮಿಕ ವಿದ್ಯಾಭ್ಯಾಸಕ್ಕಾಗಿ ರಾಮ್ನಾಡಿಗೆ (ಈಗಿನ ರಾಮನಾಥಪುರ) ತೆರಳಿದರು. ಅವರ ತಂದೆಯ ಆಶೆ ಮಗ ಕಲೆಕ್ಟರ್ ಆಗಬೇಕೆಂದಾಗಿತ್ತು ಅದನ್ನು ಅವರು ಮಗನಿಗೂ ತಿಳಿಸಿಯೂ ಇದ್ದರು. ಆ ಕುಟುಂಬದ ಎಲ್ಲ ಸದಸ್ಯರ ಆಶಯವೂ ಅದಾಗಿತ್ತು ಎಂಬುದು ಸಹ ಅಷ್ಟೆ ನಿಜ. ಅವರ ತಂದೆ ಜೈನುಲಬ್ದೀನ್ ಖಲೀಲ್ ಗಿಬ್ರಾನ್‍ನನ್ನು ಓದಿ ಕೊಂಡಂತಹ ಪ್ರಾಜ್ಞರಾಗಿದ್ದರು. ಅವರು ಮಗನನ್ನು ಮಾಧ್ಯಮಿಕ ಶಾಲೆಗೆ ಕಳಿಸುವ ವೇಳೆ ಆತನನ್ನುದ್ದೇಶಿಸಿ ಹೀಗೆ ಹೇಳಿದ್ದಾರೆ “ನೀನು ಬೆಳೆಯ ಬೇಕಿದ್ದರೆ ದೂರ ಹೋಗಬೇಕು, ಕಡಲ ಹಕ್ಕಿ ಎಲ್ಲ ಸಂಬಂದಿಗಳನ್ನು ಹಿಂದೆ ಬಿಟ್ಟು ಒಬ್ಬಂಟಿಯಾಗಿ ಮುಂದಿನ ನೆಲೆ ಗೂಡುಗಳನ್ನು ಲೆಕ್ಕಿಸದೆ ಹಾರುವುದಿಲ್ಲವೆ? ಆದ್ದರಿಂದ ಹೊಕ್ಕುಳ ಬಳ್ಳಿಯನ್ನು ಬಿಡಿಸಿಕೋ. ನಮ್ಮ ಪ್ರೀತಿ ನಿನ್ನನ್ನು ಕಟ್ಟಿ ಹಾಕಬಾರದು, ನಮ್ಮ ಅಗತ್ಯಗಳು ನಿನ್ನನ್ನು ಬಂಧಿಸಬಾರದು” ಎಂದು ತಂದೆ ಹೇಳಿದ್ದನ್ನು ಅಬ್ದುಲ್ ಕಲಾಂ ತಮ್ಮ ಜೀವನ ಚರಿತ್ರೆ ‘ವಿಂಗ್ಸ್ ಆಫ್ ಫಯರ್’ ನಲ್ಲಿ ದಾಖಲಿಸಿದ್ದಾರೆ ಕೂಡ. ಅದೇ ರೀತಿಯಾಗಿ ಕಲಾಂ ತಮ್ಮ ಜೀವನ ಪೂರ್ತಿ ಬದುಕಿದರು ಎನ್ನುವುದು ಬಹು ಮುಖ್ಯವಾಗುತ್ತದೆ. ಇವರು ಬಾಲ್ಯದಲ್ಲಿ ತನ್ನ ಅಣ್ಣನಿಗೆ ಸಹಾಯವಾಗಲೆಂದು ದಿನಪತ್ರಿಕೆಗಳನ್ನು ಹಂಚುವ ಕೆಲಸ ಸಹ ಮಾಡಿದ್ದಾರೆ. ಇವರು ಈ ಹಂತಕ್ಕೆ ಏರುವಲ್ಲಿ ಸಹಾಯಕರಾದ ಶಿಕ್ಷಕರಾದ ಶಿವ ಸುಬ್ರಹ್ಮಣ್ಯ ಅಯ್ಯರ್, ಅಯ್ಯದೊರೆ ಸೋಲಮನ್ ಪಂದಳೈರವರನ್ನು ನೆನಯುತ್ತಾರೆ. ಜೊತೆಗೆ ಇವರಲ್ಲಿರುವ ಪ್ರತಿಭೆಯನ್ನು ಪತ್ತೆ ಮಾಡಿ ಪ್ರೋತ್ಸಾಹ ನೀಡಿದ ಎಂಜಿಕೆ ಮೆನನ್ ಮತ್ತು ಪ್ರೊ.ವಿಕ್ರಮ್ ಸಾರಾಭಾಯ್ ಮುಂತಾದವರನ್ನು ಸಹ ಕೃತಜ್ಞತೆಯಿಂದ ನೆನೆಯುವ ಸಹೃದಯತೆ ಇವರದಾಗಿತ್ತು. ಇವರನ್ನು ಒಟ್ಟರ್ಥದಲ್ಲಿ ವಿವರಿಸುವುದಾದರೆ ಇಡಿ ದೇಶವೆ ತನ್ನ ಕುಟುಂಬವೆಂದು ಅರಿತು ಬಾಳಿದ ಮಹಾನ್ ಚೇತನ ಈ ಕಲಾಂ ‘ವಸುದೈವ ಕುಟುಂಬಕಂ’ ಎಂಬ ಉಕ್ತಿಯಂತೆ ಬಾಳಿ ಬದುಕಿ ತೋರಿಸಿದ ಸಾಧಕ ಜೀವಿ ಈತ.

ಕಲಾಂರವರ ತಾಯಿ ಆಸ್ಯಮ್ಮ ತಾವಾಯಿತು ತಮ್ಮ ಕುಟುಂಬವಾಯಿತು ಎಂದು ಬದುಕಿದ ಸಹೃದಯಿ ಕರುಣಾಮಯಿ ಹೆಣ್ಣುಮಗಳು. ಅವರದು ಕೂಡು ಕುಟುಂಬವಾಗಿದ್ದು ಅದರೆಲ್ಲ ಹೊಣೆಗಾರಿಕೆ ಇವರದಾಗಿತ್ತು. ಇದೊಂದು ಅನ್ನ ದಾಸೋಹದ ಮನೆಯಾಗಿತ್ತು ಎಂದು ಕಲಾಂ ಜ್ಞಾಪಿಸಿಕೊಳ್ಳುತ್ತಾರೆ. ಅವರ ಮನೆಯಲ್ಲಿ ಊಟ ಮಾಡುತ್ತಿದ್ದವರಲ್ಲಿ ಮನೆ ಮಂದಿಗಿಂತ ಹೊರಗಿನವರೆ ಹೆಚ್ಚಿಗಿರುತ್ತಿದ್ದರು ಎಂಬದುನ್ನು ಕಲಾಂ ಗಮಿನಿಸಿದ್ದನ್ನು ದಾಖಲಿಸುತ್ತಾರೆ. ತ್ಯಾಗ ಮತ್ತು ದಯಾಗುಣಗಳು ತನ್ನಲ್ಲೇನಾದರೂ ಬಂದಿದ್ದರೆ ಅದು ತನ್ನ ತಾಯಿಯಿಂದ ಬಂದ ಬಳುವಳಿ ಎನ್ನುತ್ತಾರೆ. ರಾಮ್ನಾಡಿನ ಹಾಸ್ಟೆಲ್‍ನಲ್ಲಿ ಕಲಾಂ ಇದ್ದಾಗ ಅವಕಾಶ ಸಿಕ್ಕಾಗಲೆಲ್ಲ ತಾಯಿಯ ಕೈಯ ಸಿಹಿ ತಿಂಡಿ ಪೋಳಿಯನ್ನು ತಿನ್ನಲು ಬರುತ್ತಿದ್ದುದನ್ನು ನೆನಪಿಸಿಕೊಳ್ಳುವ ಅವರು ಆಕೆ ಹನ್ನೆರಡು ಬಗೆಯ ಪೋಳಿಗಳನ್ನು ತಯಾರಿಸುತ್ತಿದ್ದರು ಎನ್ನುತ್ತಾರೆ. ಕಲಾಂ ರವರಿಗೆ ತಂದೆಯೆ ಮೊದಲ ಗುರು ಮತ್ತು ಆತ್ಮಮಿತ್ರ ಮತ್ತು ಆ ಭಾಗದಲ್ಲಿ ಇಂಗ್ಲೀಷ್ ಓದಲು ಮತ್ತು ಬರೆಯಲು ಬರುತ್ತಿದ್ದ ಏಕೈಕ ವ್ಯಕ್ತಿಯಾಗಿದ್ದರು ಎಂಬುದನ್ನು ಹೆಮ್ಮೆಯಿಂದ ನೆನಯುತ್ತಾರೆ. ಆ ಕಾಲದಲ್ಲಿ ರಾಮೇಶ್ವರದಲ್ಲಿ ವಿವಿಧ ಕೋಮುಗಳ ಸಾಮರಸ್ಯ ಎಷ್ಟು ಚೆನ್ನಾಗಿತ್ತು ಎಂಬುದನ್ನು ಸಾಕ್ಷಿ ಸಮೇತ ಅವರು ತಮ್ಮ ಜೀವನ ಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಶಿಕ್ಷಣವೆಂದರೆ ‘ನನಗೆ ನೀನೇನು ಮಾಡಬಲ್ಲೆ ಎಂಬ ಹಂತದಿಂದ ನಾನು ನಿನಗೇನು ಮಾಡಬಲ್ಲೆ’ ಎಂಬ ಹಂತಕ್ಕೆ ಬೆಳೆಸಬೇಕು ಎನ್ನುವುದು ಅವರ ಚಿಂತನೆಯಾಗಿತ್ತು. ಅದರಂತೆ ಅವರು ಕೊನೆಯ ಗಳಿಗೆಯ ವರೆಗೆ ಬದುಕಿದರೂ ಕೂಡ. ರಾಮನಾಡಿನ ಶ್ವಾರ್ಟ್ಸ ಹೈಸ್ಕೂಲ್‍ನಲ್ಲಿ ಶಿಕ್ಷಣ ಮುಗಿಸಿದ ಇವರು ಮುಂದೆ 1950 ರಲ್ಲಿ ‘ಸೊಸೈಟಿ ಆಫ್ ಜೀಸಸ್’ ಎಂಬ ಕ್ರೈಸ್ತ್ ಮಿಸನರಿ ಸಂಸ್ಥೆಯ ಜೆಸುವಿಟ್ಸ್ ಕಾಲೇಜಿಗೆ ಸೇರಿ ಕಾಲೇಜು ಶಿಕ್ಷಣ ಪಡೆದರು. ಶುದ್ಧ ಸಸ್ಯಾಹಾರಿಯಾಗಿದ್ದ ಇವರು ಆ ಕಾಲೇಜಿನಲ್ಲಿ ಮೂರನೆ ವರ್ಷದಲ್ಲಿ ಕಲಿಯುತ್ತಿದ್ದಾಗ ಸಸ್ಯಾಹಾರಿ ಅಡುಗೆ ವಿಭಾಗದ ಕಾರ್ಯದರ್ಶಿಯಾಗಿದ್ದರು ಎನ್ನುವುದು ಗಮನಿಸ ಬೇಕಾದ ಸಂಗತಿ. ಸೇಂಟ್ ಜೋಸೆಫ್ಸ್ ನಲ್ಲಿ ಬಿಎಸ್‍ಸಿ ಯಲ್ಲಿ ಇವರು ಕಲಿತ ಪ್ರಧಾನ ವಿಷಯ ಭೌತಶಾಸ್ತ್ರ. ಆ ಕಾಲದಲ್ಲಿ ಇವರ ಮನೋಧರ್ಮವನ್ನರಿತು ಮಾರ್ಗದರ್ಶನ ನೀಡುವವರು ಕಲಾಂ ಹುಟ್ಟಿ ಬೆಳೆದ ಆ ಪರಿಸರದಲ್ಲಿ ಯಾರೂ ಇರಲಿಲ್ಲವೆನ್ನುವ ಅವರು ‘ಎಲ್ಲ ಮಿಶ್ರ ವಸ್ತುಗಳು ವಿದಲನ ಹೊಂದುತ್ತವೆ ಆದ್ದರಿಂದ ಎಚ್ಚರಿಕೆಯಿಂದ ಹೆಜ್ಜೆಯಿಡು’ ಅಯ್ಯರ್ ಮೇಸ್ಟ್ರು ಹೇಳಿದುದು ಇದನ್ನೆ ಅಲ್ಲವೆ ಎಂದು ಸಮಾಧಾನ ಪಟ್ಟು ಕೊಳ್ಳುವ ಅವರು ಕೊನೆಗೂ ವಿಜ್ಞಾನವೆಂಬುದು ಆಧ್ಯಾತ್ಮದ ರಸಾನುಭೂತಿ ಪಡೆಯಲು ಇರುವ ಒಂದು ಮಾರ್ಗ. ದೇವರಿಗೂ ವಿಜ್ಞಾನಕ್ಕೂ ಎಂದು ಸಂಘರ್ಷವಿಲ್ಲ ಎಂಬ ತೀರ್ಮಾನಕ್ಕೆ ಅವರು ಬರುತ್ತಾರೆ. ವಿಶ್ವವೆಂದರೆ ಚಲನೆ ಎಂಬ ಸತ್ಯದ ಸಾಕ್ಷಾತ್ಕಾರ ತನಗೆ ಕಾಲೇಜಿನಲ್ಲಾಯಿತು ಎನ್ನುತ್ತಾರೆ.

ಅವರು ಕಾಲೇಜ್ ವಿದ್ಯಾಭ್ಯಾಸ ಮುಗಿದೊಡನೆ ಏನು ಮಾಡಬೇಕೆಂಬ ಸಮಸ್ಯೆ ಆಗಿರಲಿಲ್ಲ. ಉನ್ನತ ಶಿಕ್ಷಣ ಪಡೆದವರನ್ನು ಹಗಲಿನಲ್ಲಿ ದೀಪ ಹಿಡಿದು ಹುಡುಕಬೆಕು ಎಂಬಂತಹ ಸ್ಥಿತಿ ಆಗ ನಮ್ಮ ದೇಶದಲ್ಲಿತ್ತು. ಕಲಾಂ ರವರಿಗೆ ಕೆಲಸವೊಂದರ ಗ್ಯಾರಂಟಿ ಇ��್ತು ಆಕಾಶದಲ್ಲಿ ಹಾರಬೇಕು ಎನ್ನುವ ಕನಸು ಕಲಾಂ ಅವರದಾಗಿದ್ದರೆ ಅವರ ತಂದೆಯ ಕನಸು ಮಗ ಕಲೆಕ್ಟರ್ ಆಗಬೇಕೆನ್ನುವದಾಗಿತ್ತು. ಅವರಲ್ಲಿ ಒಂದು ರೀತಿಯ ಮಾನಸಿಕ ತುಮುಲ. ಕೊನೆಗೆ ‘ಮದ್ರಾಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ.’ ಎಂಬ ಇಂಜನಿಯರಿಂಗ್ ಕಾಲೇಜನ್ನು ಪುನಃ ಸೇರಿದರು. ಇದು ದಕ್ಷಿಣ ಭಾರತದ ಶ್ರೇಷ್ಟ ತಂತ್ರಜ್ಞಾನದ ಕಾಲೇಜು ಎಂಬ ಖ್ಯಾತಿಯನ್ನು ಪಡೆದಿತ್ತು. ಅವರಿಗೆ ಆ ಕಾಲೇಜಿನಲ್ಲಿ ಸೀಟೇನೋ ದಕ್ಕಿತ್ತು ಆದರೆ ತುಂಬ ಬೇಕಾದ ಸಾವಿರ ರೂಪಾಯಿಗಳ ಮೊತ್ತ ಬಹಳ ದುಬಾರಿಯಾಗಿತ್ತು. ಅವರ ಮನೆಯವರಿಗೆ ಅದನ್ನು ಭರಿಸುವ ಶಕ್ತಿ ಇರಲಿಲ್ಲ. ಆಗ ಸಹಾಯಕ್ಕೆ ಬಂದವಳು ಆತನನ್ನು ಬಹುವಾಗಿ ಪ್ರೀತಿಸುತ್ತಿದ್ದ ಅಕ್ಕ ಜೋಹರಾ. ಆಕೆ ಮತ್ತು ಅತನ ಭಾವ ಜಲಾಲುದ್ದೀನ್‍ಗೂ ಸಹ ಆಜಾದ್(ಕಲಾಂ) ಎಂದರೆ ಬಹಳ ಅಕ್ಕರೆ. ಹೀಗಾಗಿ ಅಕ್ಕ ತನ್ನ ಬಂಗಾರದ ಒಡವೆಗಳನ್ನು ಒತ್ತೆಯಿಟ್ಟು ಆತನಿಗೆ ಅವಶ್ಯವಿದ್ದ ಹಣವನ್ನು ಆತನ ಕೈಗಿಟ್ಟು ದೇವರು ನಿನಗೆ  ಒಳ್ಳೆಯದು ಮಾಡಲಿ ಎಂದು ಹರಸಿ ಕಳಿಸುತ್ತಾಳೆ. ತಮ್ಮ ಜೀವನ ಚರಿತ್ರೆಯಲ್ಲಿ ಈ ಘಟನೆಯನ್ನು ದಾಖಲಿಸಿರುವ ಅವರು ‘ಭಾರತೀಯ ಸಂಸ್ಕೃತಿಯಲ್ಲಿ ಇಂತಹ ಅಕ್ಕ ತಂಗಿಯರು ಬಹಳಷ್ಟು ಇದ್ದಾರೆ ಎಂದು ಕೃತಜ್ಞತೆಯಿಂದ ನೆನೆಯುತ್ತಾರೆ. ಈ ಘಟನೆ ಅವರ ಮೇಲೆ ಬಹಳ ಪರಿಣಾಮವನ್ನುಂಟು ಮಾಡುತ್ತದೆ. ಅವರೊಂದು ನಿರ್ಧಾರಕ್ಕೆ ಬರುತ್ತಾರೆ. ಕಷ್ಟಪಟ್ಟು ಓದಿ ಒಳ್ಳೆಯ ಅಂಕಗಳನ್ನು ಪಡೆದು ಸ್ಕಾಲರ್‍ಶಿಪ್ ಗಳಿಸುವುದು. ತಮ್ಮ ನಿರೀಕ್ಷೆಯನ್ನು ಅವರು ಹುಸಿಗೊಳಿಸಿಕೊಳ್ಳಲಿಲ್ಲ ಹಗಲು ರಾತ್ರಿ ಓದಿದರು. ತಮ್ಮ ವಿಚಾರಧಾರೆಗೆ ರೂಪ ಕೊಟ್ಟ ಮೂವರು ಪ್ರೊಫೆಸರುಗಳಾದ ವಿಶಿಷ್ಟ ವ್ಯಕ್ತಿತ್ವದ ಸ್ಪಾಂಡರ್, ಕೆಎವಿ ಪಂದಳೈ ಮತ್ತು ನರಸಿಂಗರಾವ್ ಸಹಾಯವನ್ನು ನೆನಯುತ್ತಾರೆ. ಸ್ಪಾಂಡರ್‍ರವರು ಕಲಾಂಗೆ ವಿಮಾನ ಚಲನೆಯ ತಂತ್ರಜ್ಞಾನವನ್ನು ಕಲಿಸಿದವರು. ಸ್ಪಾಂಡರ್ ಎಂದರೆ ಆತ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಆಷ್ಟ್ರಿಯಾದಲ್ಲಿ ಹುಟ್ಟಿ ಬೆಳೆದಿದ್ದ ಅತ ಏರೋನಾಟಿಕಲ್ ಎಂಜನೀಯರಿಂಗ್‍ನಲ್ಲಿ ನಿಷ್ಣಾತನಾಗಿದ್ದುದರ ಜೊತೆಗೆ ಎರಡನೆ ವಿಶ್ವ ಯುದ್ಧದಲ್ಲಿ ಭಾಗವಹಿಸಿದ್ದ ಯುದ್ಧ ವಿಮಾನಗಳ ಪೈಲಟ್ ಈತನಾಗಿದ್ದ. ಆ ಯುದ್ಧದಲ್ಲಿ ಸೆರೆ ಸಿಕ್ಕು ನಾಜಿಗಳ ಚಿತ್ರ ಹಿಂಸಾ ಶಿಬಿರದಲ್ಲಿ ಇಡಲ್ಪಟ್ಟ. ಅದೇ ಕಾಲೇಜಿನಲ್ಲಿ ಏರೊನಾಟಿಕಲ್ ವಿಭಾಗದ ಮುಖ್ಯಸ್ಥರಾಗಿ ಪ್ರೊ..ವಾಲ್ಟರ್ ರೆಪಂಥಿನ್ ಎನ್ನುವ ಜರ್ಮನ್‍ರಿದ್ದರು. ಜರ್ಮನ್‍ರ ಕುರಿತ ತನ್ನ ಭಾವನೆಗಳನ್ನು ಸ್ಪಾಂಡರ್ ತನ್ನ ವೃತ್ತಿ ಜೀವನದಲ್ಲಿ ತರುತ್ತಿರಲಿಲ್ಲ. ಅದೇ ಎಂಐಟಿಯ ಎದುರು ವಾಯು ಸೇನೆಯ ಎರಡು ಹಳೆಯ ಯುದ್ಧವಿಮಾನಗಳನ್ನು ವಿದ್ಯಾರ್ಥಿಗಳ ಕಲಿಕೆಗೆ ಸಹಾಯಕವಾಗಲಿ ಎನ್ನುವ ಉದ್ದೇಶದಿಂದ ನಿಲ್ಲಿಸಲಾಗಿತ್ತು. ಒಂದು ದಿನ ಸ್ಪಾಂಡರ್ ಕಲಾಂರನ್ನು ಕರೆದೊಯ್ದು ಅದರ ತಂತ್ರಜ್ಞಾನದ ಒಳ ಹೊರಗನ್ನು ತಿಳಿಸಿದ್ದನ್ನು ಮತ್ತು ಆ ಕಾಲೇಜಿನ ವಿದಾಯದ ದಿನದಂದು ಫೋಟೊ ಸೆಶನ್ ವೇಳೆ ಕಲಾಂರನ್ನು ಕರೆದು ತಮ್ಮ ಪಕ್ಕದಲ್ಲಿ ಕೂಡ್ರಿಸಿಕೊಂಡುದನ್ನು ಕೃತಜ್ಞತೆಯಿಂದ ನೆನಯುತ್ತಾರೆ. ಅವರನ್ನು ಕಲಿಕೆಯ ಭಾಗವಾಗಿ ಬೆಂಗಳೂರಿನ ಹೆಚ್‍ಎಎಲ್ ಗೆ ಕಳಿಸಿದಾಗ ವಿಮಾನಗಳ ಸರ್ವಿಸಿಂಗ್ ಮಾಡುವವರಿಗೆ ಸಹಾಯ ಮಾಡುತ್ತ ನೈಜ ವಿಮಾನ ನಿರ್ವಹಣೆಯ ವಿದ್ಯೆಯನ್ನು ಕರಗತ ಮಾಡಿಕೊಳ್ಳುತ್ತಾರೆ. ವಿಮಾನಗಳ ಪೀಸ್ಟನ್, ಟರ್ಬೈನ್ ಎಂಜಿನ್ ಮತ್ತು ಕ್ರ್ಯಾಕ್ ಶಾಪ್ಟ್ ಗಳ ತಪಾಸಣೆ ಕುರಿತು ವಿಶೇಷ ಆಸಕ್ತಿ ವಹಿಸಿ ಕಲಿತು ಕೊಳ್ಳುತ್ತಾರೆ. ಆ ತರಬೇತಿ ಮುಗಿಸಿ ಏರೋನಾಟಿಕಲ್ ಎಂಜನೀಯರಿಂಗ್ ಪದವೀಧರನಾಗಿ ಹೊರ ಬಂದ ಆತನಿಗೆ ವಾಯು ಸೇನೆಯಲ್ಲಿ ಒಂದು ಹುದ್ದೆಗೆ ಮತ್ತು ಸರಕಾರದ ತಾಂತ್ರಿಕ ಅಭಿವೃದ್ಧಿ ಹಾಗೂ ಉತ್ಪಾದನಾ ನಿರ್ದೇಶನಾಲಯದಲ್ಲಿ ಒಂದು ಹುದ್ದೆಗೆ ಅಭ್ಯರ್ಥಿಗಳನ್ನು ಆಹ್ವಾನಿಸಿರುತ್ತಾರೆ ಎರಡೂ ಹುದ್ದೆಗೆ ಅರ್ಜಿ ಹಾಕಿದ ಕಲಾಂಗೆ ಎರಡೂ ಸಂಸ್ಥೆಗಳಿಂದ ಇಂಟರ್‍ವ್ಯೂಗೆ ಕರೆ ಬರುತ್ತವೆ. ಮೊದಲನೆಯದು ಡೆಹರಾಡೂನ್‍ನಲ್ಲಾದರೆ ಎರಡನೆಯದು ದೆಹಲಿಯಲ್ಲಿ ಕಲಾಂ ದೆಹಿಲಿಯ ರೈಲು ಹತ್ತುತ್ತಾರೆ.

ದೆಹಲಿಗೆ ಹೋಗಿ ಅಲ್ಲಿನ ಇಂಟರ್‍ವ್ಯೂವನ್ನು ಮುಗಿಸುತ್ತಾರೆ ಅದೊಂದು ಸುಲಭದ ಸಂದರ್ಶನವಾಗಿತ್ತು. ಒಂದು ವಾರ ದೆಹಲಿಯಲ್ಲಿದ್ದ ಅವರು ಮುಂದೆ ಇನ್ನೊಂದು ವಾಯು ಸೇನೆಯ ಇಂಟರ್‍ವ್ಯೂಗೆ ಹಾಜರಾಗಲು ಡೆಹರಾಡೂನಿಗೆ ತೆರಳುತ್ತಾರೆ. ಅಲ್ಲಿ ಏರ್‍ಫೋರ್ಸ್ ಪೈಲಟ್ ಹುದ್ದೆಗಳು ಒಟ್ಟು ಎಂಟು ಇದ್ದು ಕಲಾಂ ಸೇರಿ 25 ಅಭ್ಯರ್ಥಿಗಳು ಅಲ್ಲಿಗೆ ಬಂದಿರುತ್ತಾರೆ. ಕಲಾಂರ ಮನಸೆಲ್ಲ ಆ ಹುದ್ದೆಯ ಮೇಲೆಯೆ ಇರುತ್ತದೆ. ಆ ಸಂದರ್ಭದಲ್ಲಿ ಸಂಭ್ರಮ ಭಯ ಧೃಡ ನಿಶ್ಚಯ ಆತಂಕ ಮತ್ತು ಆತ್ಮ ವಿಶ್ವಾಸ ಮತ್ತು ದಿಗಿಲಿನ ಸಮ್ಮಿಶ್ರ ಭಾವದಲ್ಲಿ ತಾವಿದ್ದಿದ್ದಾಗಿ ನಿರೂಪಿಸುವ ಅವರು ಫಲಿತಾಂಶ ಬಂದಾಗ ತಾನು
9ನೆ ಯವನಾಗಿ ಇಂಟರ್‍ವ್ಯೂ ಮುಗಿಸಿದ್ದು ಪೈಲಟ್ ಆಗುವ ಕನಸು ನುಚ್ಚು ನೂರಾಯಿತು ಎಂದು ದಾಖಲಿಸುತ್ತಾರೆ. ಬೇಸರದ ಮನಸ್ಥಿತಿಯಲ್ಲಿದ್ದ ಅವರು ಕಾಲ್ನಡಿಗೆಯಲ್ಲಿಯೆ ಕೆಳಗಡೆಯಿದ್ದ ಹೃಷಿಕೇಶಕ್ಕೆ ತೆರಳುತ್ತಾರೆ. ಸ್ಪಟಿಕ ಸದೃಶ ಗಂಗಾ ನದಿಯ ನೀರಲ್ಲಿ ಸ್ನಾನ ಮಾಡುತ್ತಾರೆ ಅಲ್ಲಿಂದ ಶಿವಾನಂದಾಶ್ರಮಕ್ಕೆ ತೆರಳುತ್ತಾರೆ. ಸ್ವಾಮಿ ಶಿವಾನಂದರ ದರ್ಶನ ಪಡೆಯುತ್ತಾರೆ. ತಮ್ಮ ಮನಸ್ಥಿತಿಯನ್ನು ಅವರಿಗೆ ವಿವರಿಸುತ್ತಾರೆ. ಸ್ವಾಮಿ ಶಿವಾನಂದರು ‘ತಮ್ಮಾ ನಿನ್ನ ಪ್ರಾಪ್ತಿಯೇನೋ ಅದನ್ನು ಸ್ವೀಕರಿಸಿ ಮುಂದಕ್ಕೆ ನಡೆ ಜೀವನ ನಿರಂತರ ನೀನು ಪೈಲಟ್ ಆಗಬೇಕೆಂದು ವಿಧಿ ಬಯಸಿಲ್ಲ ಅದು ಬೇರೇನನ್ನೋ ನಿನಗೆ ಮುಂದೆ ಕೊಡಲಿದೆ ಅದು ಈಗ ಗೊತ್ತಾಗದು ಆದರೆ ಅದೆಲ್ಲವೂ ನಿರ್ಧಾರವಾಗಿದೆ ದೇವರ ಇಚ್ಛೆಗೆ ಶರಣಾಗು ಮುಂದಿನ ದಾರಿಯನ್ನು ಅವನು ತೋರುತ್ತಾನೆ’ ಎನ್ನುತ್ತಾರೆ. ಸ್ವಾಮಿ ಶಿವಾನಂದರ ಭೇಟಿಯಿಂದ ಸಂತೃಪ್ತರಾದ ಅವರು ದೆಹಲಿಗೆ ವಾಪಸು ಬರುತ್ತಾರೆ. ಡಿಟಿಡಿ ಆಂಡ್ ಪಿ (ವಾಯು) ಇಂಟರ್‍ವ್ಯೂನ ಗತಿ ಏನಾಯಿತು ಎಂಬುದನ್ನು ತಿಳಿಯುವುದಕ್ಕೆ ಹೋಗುತ್ತಾರೆ. ಅಲ್ಲಿ ಅವರಿಗೆ ಉದ್ಯೋಗದ ನೇಮಕಾತಿ ಪತ್ರ ದೊರೆಯುತ್ತದೆ. ಕಲಾಂರನ್ನು ‘ಸೀನಿಯರ್ ಸೈಂಟಿಫಿಕ್ ಅಸಿಸ್ಟಂಟ್’ ಎಂದು ನೇಮಕ ಮಾಡಲಾಗಿರುತ್ತದೆ. ಮರುದಿನವೆ ಅವರು ಕೆಲಸಕ್ಕೆ ಹಾಜರಾಗುತ್ತಾರೆ.. ಇವರಿಗೆ 250 ರೂಪಾಯಿ ಸಂಬಳ ನಿಗದಿ ಯಾಗಿರುತ್ತದೆ. ಅಲ್ಲಿ ಮೊದಲ ವರ್ಷ ಸೂಪರ್‍ಸಾನಿಕ್ ಗುರಿ ವಿಮಾನದ ವಿನ್ಯಾಸ ರಚಿಸುವಲ್ಲಿ ವಿಭಾಗದ ಮುಖ್ಯಸ್ಥರಿಗೆ ಸಹಾಯ ಮಾಡಿ ಮೆಚ್ಚುಗೆಯನ್ನು ಪಡೆಯುತ್ತಾರೆ. ಅವರನ್ನು ಇನ್ನಷ್ಟು ಅನುಭವ ಬರಲಿ ಎನ್ನುವ ಮುಂದಾಲೋಚನೆಯಿಂದ ಅವರನ್ನು ಕಾನ್ಪುರಕ್ಕೆ ವರ್ಗಾಯಿಸಲಾಗುತ್ತದೆ. ಅಲ್ಲಿ ನ್ಯಾಟ್ 1 ವಿಮಾನ ಉಷ್ಣ ವಲಯದ ಹವಾಮಾನದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದರ ಮೌಲ್ಯ ಮಾಪನ ನಡೆದಿರುತ್ತದೆ. ಏರೋನಾಟಿಕಲ್ ಇಂಜನೀಯರ್ ಆಗಿದ್ದ ಇವರಿಗೆ ಆ ಕಾರ್ಯಕ್ಕೆ ನೇರ ಪ್ರವೇಶ ದೊರೆಯುತ್ತದೆ. ಮತ್ತೆ ದೆಹಲಿಗೆ ಮರಳಿ ಅಲ್ಲಿ ಮೂರು ವರ್ಷ ಕೆಲಸ ಮಾಡುತ್ತಾರೆ.

1959 ರಲ್ಲಿ ಬೆಂಗಳೂರಿನಲ್ಲಿ ವಿಮಾನ ಅಭಿವೃದ್ಧಿ ಸಂಸ್ಥೆ ಸ್ಥಾಪನೆಯಾಗುತ್ತದೆ. ಅಲ್ಲಿಗೆ ಕಲಾಂರನ್ನು ವರ್ಗ ಮಾಡಲಾಗುತ್ತದೆ. ಬೆಂಗಳೂರಿಗೆ ಬಂದ ಇವರು ಎಡಿಇ ನಿರ್ದೇಶಕ ಓ.ಪಿ.ಮೇದಿರತ್ತ ಅವರು ನಾಲ್ಕು ಜನ ಏರೋನಾಟಿಕಲ್ ಇಂಜನಿಯರರನ್ನು ಸೇರಿಸಿ ಹಾವರ್ ಕ್ರಾಫ್ಟ್ ತಯಾರಿಸುವ ಸರ್ಕಾರದ ಯೋಜನೆಯನ್ನು ತಿಳಿಸುತ್ತಾರೆ. ಅದು ಪರೀಕ್ಷೆಗೆ ಸಿದ್ಧವಾದಾಗ ಕಲಾಂ ಅದಕ್ಕೆ ನಂದಿ ಎಂದು ನಾಮಕರಣ ಮಾಡುತ್ತಾರೆ. ಇದರ ಪರೀಕ್ಷಾ ಹಾರಾಟಕ್ಕೆ ಬಂದಿದ್ದ ಆಗಿನ ರಕ್ಷಣಾ ಮಂತ್ರಿ ಕೃಷ್ಣ ಮೆನನ್ ಸಂತಸಪಟ್ಟು ಕಲಾಂ ತಂಡದ ಕೆಲಸವನ್ನು ಮೆಚ್ಚಿ ಶ್ಲಾಘಿಸುತ್ತಾರೆ. ಮುಂದೆ ಮೆನನ್ ಸಚಿವ ಸ್ಥಾನ ಕಳೆದು ಕೊಂಡು ಆ ಯೋಜನೆ ಅಲ್ಲಿಗೆ ನಿಲ್ಲುತ್ತದೆ. ಒಮ್ಮೆ ಡಾ.ಮೇದಿರತ್ತರವರು ಬಂದು ಟಿಐಎಫ್‍ಆರ್‍ನ ನಿರ್ದೇಶಕ ಪ್ರೊ.ಎಂಜಿಕೆ ಮೆನನ್ ಬರಲಿದ್ದಾರೆ ಅವರಿಗೆ ನಿಮ್ಮ ನಂದಿ ಹಾವರ್ ಕ್ರಾಫ್ಟರ್ ಹಾರಾಟದ ಪ್ರದರ್ಶನ ಏರ್ಪಡಿಸಲು ಹೇಳುತ್ತಾರೆ. ಮರುದಿನ ಅವರು ಬಂದು ನಂದಿಯ ಹಾರಾಟ ಕಂಡು ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ. ಒಂದು ವಾರ ಬಿಟ್ಟು ಇಂಕೋ ಸ್ಟಾರ್‍ನಿಂದ ರಾಕೆಟ್ ಇಂಜನೀಯರ್ ಹುದ್ದೆಯ ಸಂದರ್ಶನಕ್ಕೆ ದೂರವಾಣಿಯ ಕರೆ ಬರುತ್ತದೆ. ಅದರಂತೆ ಅವರು ಮುಂಬೈಗೆ ಇಂಟರ್‍ವ್ಯೂಗೆ ತೆರಳುತ್ತಾರೆ. ಸಂದರ್ಶನದ ಕೊಠಡಿಯಲ್ಲಿ ಇಂಕೋ ಸ್ಟಾರ್‍ನ ಅಧ್ಯಕ್ಷ ಡಾ.ವಿಕ್ರಂ ಸಾರಾಭಾಯಿ, ಪ್ರೊ,ಎಂಜಿಕೆ ಮೆನನ್ ಮತ್ತು ಪರಿಮಾಣು ಶಕ್ತಿ ಆಯೋಗದ ಡೆಪ್ಯೂಟಿ ಸೆಕ್ರೆಟರಿ ಸರಾಪ್ ರವರುಗಳು ಇರುತ್ತಾರೆ. ಸಂದರ್ಶನ ಮಾಡಿದ ಅವರುಗಳು ಎರಡು ದಿನ ಕಾಯುವಂತೆ ತಿಳಿಸುತ್ತಾರೆ. ಆದರೆ ಮರುದಿನ ಸಾಯಂಕಾಲವೆ ಅವರ ಆಯ್ಕೆಯ ಸುದ್ದಿಯನ್ನು ತಿಳಿಸುತ್ತಾರೆ. ಕಲಾಂಗೆ ಹರುಷವಾಗುತ್ತದೆ. ಮುಂಬೈನ ಟಿಐಎಫ್‍ಆರ್ ಕಂಪ್ಯೂಟರ್ ಸೆಂಟರನಲ್ಲಿ ಕಲಾಂ ಪ್ರಾರಂಭಿಕ ತರಬೇತಿ ಪಡೆಯುತ್ತಾರೆ. ಮುಂದೆ ಕೆಲವೆ ತಿಂಗಳುಗಳಲ್ಲಿ ಕೇರಳದ ತುಂಬಾ 600 ಎಕರೆ ಪ್ರದೇಶದಲ್ಲಿ ರಾಕೆಟ್ ಉಡಾಯಿಸುವ ಈಕ್ವೆಟೋರಿಯಲ್ ಕೇಂದ್ರವನ್ನು ಸ್ಥಾಪಿಸಲು ಇಂಕೋಸ್ಟಾರ್ ತೀರ್ಮಾನಿಸುತ್ತದೆ. ಹೀಗೆ ಸಣ್ಣ ಪ್ರಮಾಣದಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನೆ ತುಂಬಾದಲ್ಲಿ ಪ್ರಾರಂಭವಾಯಿತು 1957-58 ನೇ ವರ್ಷ ವಿಶ್ವ ಸಂಸ್ಥೆಯ ಆಧೀನದಲ್ಲಿ ಅಂತಾರಾಷ್ಟ್ರೀಯ ಭೂ ಭೌತ ವರ್ಷ ಎಂದು ಘೋಷಿಸಿದವು. ಭಾರತವನ್ನು ಸಹ ಇದರಲ್ಲಿ ಸೇರಿಸಿಕೊಳ್ಳಲಾಯಿತು. ಆಗಿನ ಪ್ರಧಾನಿ ನೆಹರೂ ಮ���್ತು ವಿಕ್ರಂ ಸಾರಾಭಾಯಿಯವರ ದೂರದೃಷ್ಟಿಯ ಫಲವಾಗಿ ಈ ಕೇಂದ್ರ ಸ್ಥಾಪನೆಗೆ ಮುಂದಾದರು. ಮುಂದೆ ಪಿಆರ್‍ಎಲ್‍ನ ಸ್ಥಾಪನೆಗೆ ವಿಕ್ರಂ ಸಾರಾಭಾಯಿಯವರು ಕಾರಣರಾಗುತ್ತಾರೆ. ಅವರು ಅಮೇರಿಕದ ಎಂಐಟಿ ತಂಡದೊಂದಿಗೆ ಕೈ ಜೋಡಿಸುತ್ತಾರೆ. ಮುಂದೆ ಅಂತರರಾಷ್ಟ್ರೀಯ ವಿಜ್ಞಾನಿಗಳಿಗೆ ಇದು ನೆಚ್ಚಿನ ತಾಣವಾಗುತ್ತದೆ. ಈ ಕೇಂದ್ರ ಸ್ಥಾಪನೆಗೆ ಅಮೇರಿಕ,ಬ್ರಿಟನ್, ರಷ್ಯಾ, ಫ್ರಾನ್ಸ್, ಜರ್ಮನಿ ಮತ್ತು ಜಪಾನ್ ದೇಶಗಳು ಹಣ ಮತ್ತು ಉಪಕರಣಗಳ ಸಹಾಯಯವನ್ನು ನೀಡಿದವು ಅಮೇರಿಕ ರಾಕೆಟ್ ಒದಗಿಸಿದರೆ ರಶಿಯಾ ಕಂಪ್ಯೂಟರ್ ನೀಡಿತು ಸಾರಾಭಾಯಿಯವರು ಆರಿಸಿದ ರಾಕೆಟ್ ಇಂಜನೀಯರುಗಳನ್ನು ಅಮೇರಿಕಕ್ಕೆ ತರಬೇತಿಗೆ ಕಳಿಸಲಾಯಿತು ಅವರಲ್ಲಿ ಕಲಾಂ ಕೂಡ ಒಬ್ಬರಾಗಿದ್ದರು. ಈ ಇಂಕೋವನ್ನು 1969 ರಲ್ಲಿ ಇಸ್ರೊದ ಆಧೀನಕ್ಕೆ ತರಲಾಯಿತು. ಮುಂದೆ ಅದನ್ನು ಪರಿಮಾಣು ಶಕ್ತಿ ಇಲಾಖೆಯ ಆಧೀನಕ್ಕೆ ಕೊಡಲಾಯಿತು ಡಾ.ವಿಕ್ರಂ ಸಾರಾಭಾಯಿ ಅದರ ಪ್ರಥಮ ಅಧ್ಯಕ್ಷರಾದರು. ಮುಂದಿನ ಅದರ ಸಾಧನೆ ಜಗಕ್ಕೆ ತಿಳಿದ ವಿಷಯ. ಈ ಸಂಸ್ಥೆಯ ಸಾಧನೆಯಲ್ಲಿ ಕಲಾಂ ಮುಂದೆ ಪ್ರಮುಖ ಪಾತ್ರ ನಿರ್ವಹಿಸಿದರು.

1991 ರಲ್ಲಿ ಕಲಾಂ ಕೇಂದ್ರ ಸರ್ಕಾರದ ಸೇವೆಯಿಂದ ನಿವೃತ್ತರಾಗಬೇಕಿತ್ತು ಆದರೆ ಒಪ್ಪದ ಸರಕಾರ ಡಿಆರ್‍ಡಿಎಲ್‍ನ ಅವರ ಹುದ್ದೆಯನ್ನು ಒಂದುವರ್ಷ ವಿಸ್ತರಿಸಿತು. 1992 ರಲ್ಲಿ ಅವರು ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹೆಗಾರರಾಗಿಯೂ ಡಿಆರ್‍ಡಿಎಲ್‍ನ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸಿದರು. 1992 – 1998 ರ ಅವಧಿಯಲ್ಲಿ ಅಗ್ನಿ ಸರಣಿಯ ಪೃಥ್ವಿ, ನಾಗ್, ಆಕಾಶ ಮುಂತಾದ ಕ್ಷಿಪಣಿ ಕಾರ್ಯಕ್ರಮಗಳು ಸೇರಿದಂತೆ ಪೋಕ್ರಾನ್ ಪರಮಾಣು ಬಾಂಬ್ ಸ್ಪೋಟದಲ್ಲಿ ಕಲಾಂ ಭಾಗವಹಿಸಿದರು. ಈ ಕಾರ್ಯಾಚರಣೆಯಲ್ಲಿ ಅವರು ಚಿದಂಬರಂ ಜೊತೆಗೆ ಯೋಜನಾ ಸಮನ್ವಯಕಾರರಾಗಿ ಕೆಲಸ ಮಾಡಿದರು. ಕಲಾಂ ಕೇಂದ್ರ ಸರಕಾರದ ಹುದ್ದೆಗಳಿಂದ ನಿವೃತ್ತರಾದ ನಂತರ ಮತ್ತೆ ಅಧ್ಯಾಪನ ಉಪನ್ಯಾಸ ಮತ್ತು ಬರವಣಿಗೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇವರು ದೇಶಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ‘ಭಾರತ ರತ್ನ’ ಪ್ರಶಸ್ತಿಯನ್ನು 1997 ರಲ್ಲಿ ಕೇಂದ್ರ ಸರಕಾರ ನೀಡಿ ಗೌರವಿಸಿದೆ. ವಿಜ್ಞಾನಿ ಇಂಜನೀಯರ್ ಮತ್ತು ಉಪನ್ಯಾಸಕರಾಗಿ ಬರವಣಿಗೆಗಾರರಾಗಿ ಜನ ಮೆಚ್ಚುಗೆ ಪಡೆದಿದ್ದರು. ಅವರು ತಮ್ಮ ಜೀವನ ಚರಿತ್ರೆಯನ್ನು ಆಂಗ್ಲ ಭಾಷೆಯಲ್ಲಿ ‘ವಿಂಗ್ಸ್ ಆಫ್ ಫಯರ್’ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಅದೇ ರೀತಿ ಅವರು ತಿ ಲೈಫ್ ಟ್ರೀ, ಚಿಲ್ಡ್ರನ್ ಆಸ್ಕಿಂಗ್ ಕಲಾಂ, ವಿಜನ್ 2020 ಎಂಬ ಕೃತಿಗಳನ್ನು ಸಹ ರಚಿಸಿದ್ದಾರೆ. 2002 ರ ಜೂನ್ 10 ರಂದು ಆಗಿನ ಪ್ರಧಾನಿ ವಾಜಪೇಯಿಯವರು ಕಲಾಂರನ್ನು ಭಾರತದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಲು ಕೇಳಿಕೊಂಡರು. ಒಪ್ಪಿಕೊಂಡ ಕಲಾಂ ಜೂನ್ 15 ರಂದು ಚುನಾವಣೆ ನಡೆದು 18 ರಂದು ಚುನಾಯಿತರಾಗಿ ಜುಲೈ 25 ರಂದು ಈ ದೇಶದ 11 ನೇ ರಾಷ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಕಲಾಂರವರದು ಮುಗಿಯದ ಒಂದು ಯಶೋಗಾಥೆ. ಕೊನೆಯ ಉಸಿರಿರುವರೆಗೂ ಅವರು ಚಟುವಟಿಕೆಯಿಂದಿದ್ದರು. ಅದು ನಮಗೆಲ್ಲರಿಗೂ ವಿಶೇಷವಾಗಿ ಅವರು ಪ್ರೀತಿಸಿದ ಯುವ ಪೀಳಿಗೆಗೆ ಒಂದು ಮಾದರಿಯಾಗಬೇಕು. ಅವರ ಸರಳತೆ ಸಜ್ಜನಿಕೆ ವ್ಯಕ್ತಿಗಳನ್ನು ಗೌರವಿಸುವ ಪರಿ ಮುಂತಾದ ಸದ್ಗುಣಗಳು ಎಲ್ಲ ಕಾಲಕ್ಕೂ ನೆನಪಿನಲ್ಲಿಡ ಬೇಕಾದ ಸಂಗತಿಗಳು. ಅವರು ನಮ್ಮೆಲ್ಲರ ಮನಗಳಲ್ಲಿ ಚಿರಸ್ಥಾಯಿಯಾಗಿರುತ್ತಾರೆ. ಅವರ ಸಾರ್ಥಕ ಬದುಕಿಗೊಂದು ಹೃತ್ಪೂರ್ವಕ ಶ್ರದ್ಧಾಂಜಲಿ.

ದಿನಾಂಕ. 28. 7. 2015
                    ——-ಹನುಮಂತ ಅನಂತ ಪಾಟೀಲ್

Leave a Reply