ಅತ್ತೀ ಸೊಸೀ ಸಂಬಂಧಾ

ಅತ್ತೀ ಸೊಸೀ ಸಂಬಂಧಾ

ಜಗತ್ತಿನಲ್ಲಿ ಅತಿ ಕೆಟ್ಟ ಹೆಸರನ್ನು ಪಡೆದ ಸಂಬಂಧವೆಂದರೆ ಅತ್ತೆ ಸೊಸೆಯ ಸಂಬಂಧವೇ ಎಂಬುದು ನನ್ನ ಅನಿಸಿಕೆ. ಅತ್ತೆ ಒಳ್ಳೆಯವಳಾಗಲು ಪ್ರಯತ್ನಿಸಿದಷ್ಟೂ ಸೊಸೆ ದುಷ್ಟಳಾಗುತ್ತಾಳೆ. ಸೊಸೆ ಎಲ್ಲವನ್ನೂ ಸಹನೆ ಮಾಡಿಕೊಂಡಷ್ಟೂ ಅತ್ತೆ ದುಷ್ಟತನಕ್ಕಿಳಿಯುತ್ತಾಳೆ.
ಕಾಲ ಬದಲಾಗುತ್ತಿದೆ. ಅದರಂತೆ ಸಂಬಂಧಗಳೂ ಕೂಡ ಬದಲಾಗುತ್ತಿವೆ ಎಂದು ಮೇಲ್ನೋಟಕ್ಕೆ ಎನ್ನಿಸಿದರೂ ಅದು ಮಿಕ್ಕೆಲ್ಲ ಸಂಬಂಧಗಳಿಗೆ ಅನ್ವಯಿಸುತ್ತದಾದರೂ ಈ ಘನ ಸಂಬಂಧದಲ್ಲಲ್ಲ ಎನ್ನುವುದು ವಾಡಿಕೆ. ಆದರೆ ಕೆಲ ಬದಲಾವಣೆ ಗಳಿಂದಾಗಿ ಈ ಸಂಬಂಧವೂ ಹೊಸ ತಿರುವುಗಳನ್ನು ಕಂಡಿದೆಯೇನೋ.
ಈಗಿನ ದಿನಗಳಲ್ಲಿ ಒಬ್ಬರ ಗಳಿಕೆಯಿಂದ ಸಂಸಾರ ಸಾಗುವುದು ಕಷ್ಟ. ಮೊದಲಾದರೆ ಈಗಿನಂತೆ ಮಕ್ಕಳನ್ನು ನರ್ಸರಿಗೆ ಸೇರಿಸುವಾಗಲೇ ಲಕ್ಷ ಗಟ್ಟಲೆ ಡೊನೇಶನ್ನ್ಸ್, ಫೀಜು ಎಂದು ಕೊಡಬೇಕಾಗಿರಲಿಲ್ಲ. ನಂತರ ಟ್ಯೂಶನ್, ಆಟೋ ಮುಂತಾದವಕ್ಕೆ ಖರ್ಚು ಮಾಡಬೇಕಾಗಿರಲಿಲ್ಲ. ಮನೆಯ ಪಕ್ಕದಲ್ಲೇ ಇರುವ ನಂಬರ್ ಒನ್ ಗಂಡುಮಕ್ಕಳ ಶಾಲೆ, ಹೆಣ್ಣು ಮಕ್ಕಳ ಶಾಲೆ ಎಂದೆಲ್ಲವಕ್ಕೆ ಸೇರಿಸಿ ಕೈತೊಳೆದುಕೊಳ್ಳುತ್ತಿದ್ದರು. ಮನೆಯಲ್ಲಿ ದೊಡ್ಡಮಕ್ಕಳ ಪುಸ್ತಕಗಳನ್ನು ಈ ಚಿಕ್ಕವು ಇಟ್ಟುಕೊಳ್ಳುತ್ತಿದ್ದವು. ತೀರಾ ಹರಿದಿದ್ದರೆ ಸ್ವಲ್ಪ ಅಂಟು ಹಚ್ಚಿ ಮೇಲೊಂದು ಹೋದ ವರ್ಷದ ಕ್ಯಾಲೆಂಡರ್ ಹರಿದು ಕವರಿಸಿದರಾಯಿತು. ಖುಶಿಯೋ ಖುಶಿ. ಇನ್ನು ಸ್ಕೂಲ್ ಬ್ಯಾಗ್! ಅಪ್ಪ, ಅಣ್ಣ ಯಾರದೋ ಖಾಕಿ ಪ್ಯಾಂಟ್ ಹರಿದು ಪಕ್ಕದ ಮನೆಯ ಶಿಂಪಿಗರ ಲಕ್ಷುಂಬಾಯಿ ಹೊಲೆದ ಚೀಲ… ಈಗ ಜೂನ್ ತಿಂಗಳು ಬಂತೆಂದರೆ ಸಾಕು, ಪಾಲಕರಿಗೆ ಎದೆ ಡವಡವ.. ಇರಲಿ, ವಿಷಯಕ್ಕೆ ಬರೋಣ.
ಇಬ್ಬರೂ ದುಡಿಯಬೇಕಾಗಿರುವುದು ಅನಿವಾರ್ಯವಾದಾಗ ತಮ್ಮ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲು ಒಳ್ಳೆಯ ಬೇಬಿ ಸಿಟರ್ ಅಗತ್ಯತೆ ಕಂಡು ಬರುತ್ತದೆ. ಅಗತ್ಯತೆಯೇ ಸಂಶೋಧನೆಯ ತಾಯಿಯಲ್ಲವೇ? ಈ ಪತಿ ಪತ್ನಿಯರ ಸಂಶೋಧನೆಯ ಫಲವೇ ಅಜ್ಜಿ ಅಜ್ಜ! ಬೇಕಾದಷ್ಟು ದುಡ್ಡು ಕೊಟ್ಟು ಕಳಿಸುವ ಮಕ್ಕಳ ಮನೆಗಳೂ, ಮನೆಯಲ್ಲಿಯೆ ಇದ್ದು ಮಕ್ಕಳನ್ನು ನೋಡಿಕೊಳ್ಳುವ ದಾಯಿಗಳೂ ನೋಡಿಕೊಳ್ಳಲು ಸಾಧ್ಯವಾಗದಷ್ಟು ಕಾಳಜಿಯಿಂದ ನೋಡಿಕೊಳ್ಳುವವರೆಂದರೆ ಅಜ್ಜ ಅಜ್ಜಿಯರು! ಸೊಸೆ ಹೊರಗಿನವಳಾದರೂ ಮೊಮ್ಮಕ್ಕಳು ಅವರದೇ ಕುಡಿಯಲ್ಲವೇ? ಅನಿವಾರ್ಯವಾಗಿ ಇಬ್ಬರೂ ಈ ವ್ಯವಸ್ಥೆಗೆ ಹೊಂದಿಕೊಳ್ಳುತ್ತಾರೆ. ಕಾಲ ಬದಲಾದಂತೆ ವಿದ್ಯೆ, ಪರಿಸರಗಳ ಪ್ರಭಾವದಿಂದಾಗಿ ಒಂದಿಷ್ಟು ಬದಲಾವಣೆಯೂ ಕಂಡು ಬರುತ್ತಿದೆ. ಮೊದಲಿನ ಕಾಲದಲ್ಲಿಯಂತೆ ಈಗ ಮಾತು ಮಾತಿಗೆ ಜಗಳ, ಕೂಗಾಟಗಳು ಕಡಿಮೆ ಆಗುತ್ತಿವೆ.
ಕೆಲವು ತಿಳಿವಳಿಕಸ್ಥ ಅತ್ತೆಯರೂ ಇರುತ್ತಾರೆ. ಅವರೂ ಒಂದಾನೊಂದು ಕಾಲದಲ್ಲಿ ತಾವೂ ನೌಕರಿ ಮಾಡಿದವರೇ ಅಥವಾ ಮಾಡಬೇಕೆಂದು ಇಷ್ಟ ಪಟ್ಟರೂ ಮನೆಯಲ್ಲಿ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲು ಯಾರೂ ಇಲ್ಲವೆಂಬ ಅಥವಾ ಆರೋಗ್ಯ ಸರಿಯಿರದ ವಯೋವೃದ್ಧ ಅತ್ತೆ ಮಾವರನ್ನು ನೊಡಿಕೊಳ್ಳಬೇಕೆಂಬ ಅನಿವಾರ್ಯ ಕಾರಣಗಳಿಂದ ಮನೆಯಲ್ಲಿ ಕುಳಿತವರು. ಹೀಗಾಗಿ ಹೊರಗೆ ದುಡಿದು ಸಂಸಾರದ ನೊಗವನ್ನು ಹೊತ್ತು ಮಗನಿಗೆ ಅನುಕೂಲವಾಗುವ ಸೊಸೆಯ ಬಗ್ಗೆ ಸಹಾನುಭೂತಿ ಹೊಂದಿದವರಾಗಿರುತ್ತಾರೆ. ಈಗಿನ ಸೊಸೆಯರು ಕೂಡ ಸಂಬಂಧ ಹಾಗೂ ಸಹಚರ್ಯ ಅನಿವಾರ್ಯವೇ ಆಗಿರುವಾಗ ಅದನ್ನು ಹಳಸಿಕೊಂಡು ಅನುಭವಿಸುವುದೇಕೆ, ಅದಕ್ಕೊಂದು ಸುಂದರವಾದ ರೂಪು ಕೊಟ್ಟರಾಗದೇ ಎಂದು ವಿಚಾರ ಮಾಡುವಂಥವರು. ಹೀಗಾಗಿ ಈ ಕಾಲದಲ್ಲಿ ಸಂಘರ್ಷಗಳು ಒಂದಿಷ್ಟು ಕಡಿಮೆಯೇ ಎಂದು ಹೇಳಬಹುದು.
ಈ ಸೋಶಿಯಲ್ ಮೀಡಿಯಾಗಳೂ ಈ ಸಂಬಂಧ ಬೆಸೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆಯೇನೋ. ಟಿವಿ ಸೀರಿಯಲ್ ಗಳಲ್ಲಿ ಅತ್ತೆ ಸೊಸೆಯರು ಅತ್ಯಂತ ಅನ್ಯೋನ್ಯತೆಯಿಂದಿರುವುದನ್ನು ನೋಡಿದಾಗ ಯಾರಿಗಾದರೂ ಕೂಡ ಆಸೆ ಹುಟ್ಟುವುದು ಸಹಜವೇ. ಅದಕ್ಕೇ ಏನೋ ಅವರಿಬ್ಬರೂ ನಗುತ್ತ ಇರುವುದಕ್ಕೆ ಪ್ರಯತ್ನ ಮಾಡುತ್ತಾರೆ. ಹೀಗೆ ಕೆಲವೊಂದು ಬಾರಿ ಈ ಮೂರ್ಖರ ಪೆಟ್ಟಿಗೆಯೂ ಒಂದು ವರವಾಗಿ ಬಿಡುತ್ತದೆ. ಇದರ ಇನ್ನೊಂದು ಮುಖದ ಬಗ್ಗೆ ವಿಚಾರ ಮಾಡಿದರೆ ಅತ್ತೆ ಸೊಸೆಯರು ಒಬ್ಬರ ಮೇಲೆ ಒಬ್ಬರು ಕತ್ತಿ ಮಸೆಯುವವರು, ಖೂನಿ ಮಾಡಿಸುವವರೂ ಆಗಿರುತ್ತಾರೆ.. ಅದು ನಮ್ಮ ಅಜೆಂಡಾ ಅಲ್ಲ ಬಿಡಿರಿ.
ಅತ್ತೆಗೆ ಈ ನಿನ್ನೆ ಮೊನ್ನೆ ಬಂದ ಹೆಣ್ಣು ತನ್ನ ಥಳಕಬಳಕಿನಿಂದ ತನ್ನ ಕರುಳಿನ ಕುಡಿಯನ್ನೇ ಕಸಿದುಕೊಂಡಳಲ್ಲ ಎಂಬ ಸಿಟ್ಟು ಮನದಲ್ಲಿದ್ದರೂ ಅದನ್ನು ಹೊರಗೆ ತೋರಗೊಡದೆ ಅವಳ ಜೊತೆಗೆ ನಗುತ್ತಾ ಇರಲು ಪ್ರಯತ್ನಿಸುತ್ತಾಳೆ. ಏಕೆಂದರೆ ಇವಳು ಮನಸ್ಸು ಮಾಡಿದರೆ ತನ್ನ ಮಗನನ್ನು ಇನ್ನೂ ದೂರ ಮಾಡಬಲ್ಲಳೆಂದೂ ಅವಳಿಗೆ ಗೊತ್ತಿದೆ. ಬಿಗಡಾಯಿಸುತ್ತಿರುವ ತಮ್ಮಿಬ್ಬರ ಆರೋಗ್ಯದಿಂದಾಗಿ ಈಗ ಸ್ವತಂತ್ರವಾಗಿ ಇರುವ ಸಾಮರ್ಥ್ಯವೂ ಕಡಿಮೆಯಾಗುತ್ತಿರುವುದೂ ಕಾರಣ. ಅಷ್ಟೇ ಅಲ್ಲ, ಮೊಮ್ಮಕ್ಕಳ ಸಾಂಗತ್ಯವೇನು ಕಡಿಮೆಯೇ? ಅವುಗಳ ಆಟ ಪಾಠಗಳಲ್ಲಿಯೇ ಮತ್ತೊಮ್ಮೆ ಮಾತೃತ್ವವನ್ನು ಅನುಭವಿಸುತ್ತಿರುವುದೂ ಕಾರಣ. ಸೊಸೆಯೂ ಅಷ್ಟೇ. ಗಂಡನ ಜೊತೆಗೆ ಹೊರಗೆ ಹೋಗಬೇಕೆಂದರೂ ಈ ಅತ್ತೆಯ ಮುಖದ ಮೇಲಿನ ಏರಿಳಿತಗಳನ್ನು ಗಮನಿಸಬೇಕಲ್ಲಾ ಎಂಬ ಬೇಸರವಾದರೂ ಅತ್ತೆಯತ್ತ ಯಾವಾಗಲೂ ಏರ್ ಹಾಸ್ಟೆಸ್ ನಗುವನ್ನು ಬೀರುತ್ತಾಳೆ. ತಾನು ಆಫೀಸಿಗೆ ಹೋಗುವುದರಲ್ಲಿಯೆ ಬಿಸಿ ಬಿಸಿ ಅಡುಗೆ ಮಾಡಿ ಬಡಿಸುವ, ತಮಗೆ ಊಟದ ಡಬ್ಬಿ ಕಟ್ಟಿಕೊಡುವ, ತನ್ನ ಕರುಳಿನ ಕುಡಿಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವವರು ಇವರೇ ಅಲ್ಲವೇ? ಹೀಗಾಗಿ ಇವರಿಬ್ಬರೂ ಅನಿವಾರ್ಯವಾಗಿಯಾದರೂ ಸಂತೋಷವಾಗಿರುವುದಕ್ಕೆ ಪ್ರಯತ್ನಿಸುವುದರಿಂದ ಈ ಸಂಬಂಧ ಈಗ ಸ್ವಲ್ಪ ನವೀಕರಣ ಆಗುತ್ತಿದೆಯೇನೋ…
ಮಕ್ಕಳು ದೊಡ್ಡವರಾದಂತೆ ಅವರ ಜೊತೆಗಿನ ಸಂಬಂಧವೆಂದರೆ ರೇಷ್ಮೆಯ ತೆಳುವಾದ ದಾರವಿದ್ದಂತೆ. ಹೆಚ್ಚು ಎಳೆದರೆ ಹರಿದು ಹೋಗುತ್ತದೆ. ಹರಿದಲ್ಲಿ ಗಂಟು ಹಾಕಿ ಜೋಡಿಸಿದರೂ ಅದು ಎದ್ದು ಕಾಣುತ್ತದೆ ಎನ್ನುವುದು ಇಬ್ಬರಿಗೂ ಗೊತ್ತಿದೆ. ಒಟ್ಟಿನಲ್ಲಿ ಹೇಳುವುದಾದರೆ ಈ ಸಂಬಂಧ ಸುಧಾರಿಸಿದರೆ ಮನೆ ನಂದಗೋಕುಲ.

ಮಾಲತಿ ಮುದಕವಿ

Leave a Reply