ಅವಳ ಹೊಣೆ… ಅವಳೇ ಹೊಣೆ

ಅವಳ ಹೊಣೆ… ಅವಳೇ ಹೊಣೆ

ಇಂದು ಜಗತ್ತು ಸಾಕಷ್ಟು ಮುಂದುವರೆದಿದೆ.. ಪುರುಷ ಹಾಗೂ ಮಹಿಳೆ ಇಂದಿನ ಯುಗದಲ್ಲಿ ಸಮಾನರು. ಆದರೂ ಕೂಡ ಅವಳು ಈ ಸಮಾನತೆಯನ್ನು ಬಳುವಳಿಯಾಗಿ ಪಡೆದಿಲ್ಲ. ಅದಕ್ಕೆ ನಿತ್ಯವೂ ತಲೆದಂಡವನ್ನು ಕೊಡಬೇಕಾಗುತ್ತದೆ. ಆದರೂ ಕಾಲ ಬದಲಾಗಿದೆ.
ತಾಯಿಯ ಗರ್ಭದಲ್ಲಿದ್ದಾಗಲೇ ಈ ಸವಾಲಿನ ಮೊದಲ ಅನುಭವ. ಚೊಚ್ಚಲ ಬಸಿರಿ ನಮಸ್ಕಾರ ಮಾಡಿದೊಡನೆ ಗಂಡು ಮಗುವಿನ ತಾಯಾಗು.. ಎಂದು ಹೇಳುತ್ತಿದ್ದರು. ಮೊದಲನೆಯದು ಗಂಡು ಮಗುವಾದರೆ ಸೈ. ಎರಡನೆಯದು ಏನೇ ಹುಟ್ಟಿದರೂ ಅವಳಿಗೆ ಚಿಂತೆಯಿಲ್ಲ. ಇಲ್ಲವಾದರೆ ಕೆಲವು ಕುಟುಂಬದ ಸದಸ್ಯರು ಕಳುವಿನಿಂದ ಲಿಂಗ ಪರೀಕ್ಷೆಗೆ ಒಳಪಡಿಸುವುದಕ್ಕೂ ಪ್ರಯತ್ನ ಮಾಡುತ್ತಿದ್ದರು. ಅಂಥ ಸಂದರ್ಭದಲ್ಲಿ ಅವಳು ಬದುಕುವುದೇ ಒಂದು ಸವಾಲಾಗುತ್ತಿತ್ತು. ಹಾಗೂ ಹುಟ್ಟಿದ ಕೂಡಲೇ ಅಯ್ಯೋ ಹೆಣ್ಣೇ ಎಂದು ಹೀಗಳೆಯುತ್ತಿದ್ದರು. ಮೂರು ನಾಲ್ಕು ಹೆಣ್ಣು ಮಕ್ಕಳು ಹುಟ್ಟಿ, ಮುಂದೊಮ್ಮೆ ಗಂಡುಮಗು ಹುಟ್ಟಿದರೆ ಅವನು ಎಲ್ಲರ ಕಣ್ಮಣಿ. ಹಾಲು ಮೊಸರು, ಅಪರೂಪದ ತಿಂಡಿ ತಿನಿಸಿಗೂ ಕೂಡ ತತ್ವಾರ. ಒಳ್ಳೆಯ ಬಟ್ಟೆ, ಶಾಲೆಯ ಪುಸ್ತಕ, ಇವೂ ಕೂಡ ಅವನ ನಂತರದ ಸ್ಥಾನದಲ್ಲೇ. ಶಾಲೆಗೆ ಹೋಗುವಾಗಲೂ ಅವಶ್ಯಕ ನೋಟ್ ಬುಕ್, ಶಾಲಾ ಪುಸ್ತಕಗಳಿಗೆ ಕೂಡ ಹೆಣ್ಣುಮಕ್ಕಳು ಪರದಾಡಬೇಕಾಗುತ್ತಿತ್ತು. ಗಂಡು ಮಗು ಎಷ್ಟೇ ದಡ್ಡನಾಗಿದ್ದರೂ ಅವನ ಬೇಡಿಕೆಯನ್ನು ತಕ್ಷಣ ಈಡೇರಿಸುತ್ತಿದ್ದ ಪಾಲಕರು ಜಾಣೆಯಾದ ಮಗಳನ್ನು ಓದಿಸಲು ಹಿಂದೆ ಮುಂದೆ ನೋಡುತ್ತಿದ್ದರು. ಎಸ್ ಎಸ್ ಎಲ್ ಸಿ ಮುಗಿದನಂತರ ಕಾಲೇಜು ಕಲಿಯಲಂತೂ ಹೆಣ್ಣು ಮಕ್ಕಳಿಗೆ ಅವಕಾಶವೇ ಇರುತ್ತಿರಲಿಲ್ಲ. ‘ನೀಯೇನ ಸಾಲೀ ಕಲತ ನಮ್ಮ ಹೊಟ್ಟಿಗೆ ಹಾಕಬೇಕಾಗೇದ? ಅಡಿಗೀ, ಮನೀಕೆಲಸಾ, ಹಾಡು ಹಸಿ ಕಲಕೋ ಸಾಕು… ‘ ಎಂದು ಹೇಳುವ ಹಿರಿಯರು. ಇವರನ್ನು ತಾನು ಮುಂದೆ ಕಲಿಯಲು ಓಲೈಸುವುದೇ ಒಂದು ಕಷ್ಟದ ಕೆಲಸವಾಗಿತ್ತು. ಹಾಗೆ ಒಂದು ವೇಳೆ ಒಪ್ಪಿಗೆಯನ್ನು ಪಡೆದಮೇಲೂ, ‘ಸಂಜಿ ಆಗೋದರಾಗ ಮನೀಗೆ ಬರಬೇಕು… ಗಂಡು ಹುಡುಗರ ಜೋಡೀ ಮಾತಾಡಬ್ಯಾಡಾ… ರಸ್ತೆದಾಗ ತಲಿ ಎತ್ತಿ ನಡಿಬ್ಯಾಡಾ… ಧನಿ ತಗದ ನಗಬ್ಯಾಡಾ.. ಸಾಲೀ ಹುಡುಗೂರ ಜೋಡೆ ಪ್ರವಾಸಾ ಗಿವಾಸಾ ಅಂತೆಲ್ಲಾ ತಿರಗಾಡಂಗಿಲ್ಲಾ… .’ ಎಂದೆಲ್ಲ ಕರಾರುಗಳು.
ನೋಡಲು ಒಂದಿಷ್ಟು ಛಂದವಾಗಿದ್ದರಂತೂ ಹೊರಗೆ ತಿರುಗಾಡುವಾಗ ಎಲ್ಲ ಪಾಪಿ ಕಣ್ಣುಗಳೂ ಇವಳ ಮೇಲೇ.. ಆದರೂ ಅವರನ್ನು ದಿಟ್ಟತನದಿಂದ ಎದುರಿಸುವಹಾಗಿಲ್ಲ. ಮರ್ಯಾದಸ್ಥ ಹುಡಿಗೆಯರು ಬಾಯಿಮುಚ್ಚಿಕೊಂಡೇ ಬದುಕಬೇಕಲ್ಲ! ಹದಿನೆಂಟು ಆಗುವ ಹೊತ್ತಿಗೆ ವರಾನ್ವೇಷಣೆ ಶುರು. ಆಗಲೂ ಅವನು ಅವಳಿಗೆ ಒಪ್ಪಿಗೆಯೇ ಇಲ್ಲವೇ ಎಂದು ಕೇಳುವ ಪಾಲಕರು ಬೆರಳೆಣಿಕೆಯಷ್ಟು. ಅವನು ಗಳಿಸಾಳಿಯಾಗಿದ್ದರಾಯಿತು, ಅವನ ರೂಪ, ಗುಣಗಳಿಗೆ ಯಾವುದೇ ಮಹತ್ವ ಇಲ್ಲ. ಒಂದೊಮ್ಮೆ ಉದ್ಯೋಗಸ್ಥಳಾಗಿದ್ದರೂ ಮದುವೆಯ ನಂತರ ಪತಿಯ ಮನೆಯವರು ನೌಕರಿ ಬೇಡವೆಂದರೆ ಬಿಟ್ಟು ಬಿಡಬೇಕು. ಅವರು ಒಪ್ಪಿಗೆ ಕೊಟ್ಟು ಉದ್ಯೋಗಕ್ಕೆ ಹೋದರೂ ಅಲ್ಲಿ ಬಾಸ್ ಹೇಗೇ ನಡೆದುಕೊಂಡರೂ ಅವನ ವಿರುದ್ಧ ದನಿಯೆತ್ತುವಹಾಗಿಲ್ಲ. ಹಾಗೇನಾದರೂ ದನಿ ಎತ್ತಿದರೆ ಅದನ್ನು ನಂಬುವವರಾರು? ಆಫೀಸಿನ ಜನರಿಗೆ ಬಾಸ್ ವಿರುದ್ಧ ದನಿಯೆತ್ತಿದರೆ ಮಾರನೆಯ ದಿನವೇ ತಮ್ಮ ಕೆಲಸವೂ ಹೊರಟು ಹೋಗುವುದೆಂಬ ಚಿಂತೆ. ತಮ್ಮ ಸಂಸಾರ ಬೀದಿಗೆ ಬರುವ ಚಿಂತೆ. ಮನೆಯಲ್ಲಿ ಪತಿಗೆ ಹೇಳಿದರೆ ಮಾರನೆಯ ದಿನವೆ ನೌಕರಿಗೆ ತಿಲಾಂಜಲಿಯನ್ನಿಡಲು ಹೇಳುತ್ತಾನೆ.
ಗಂಡನೊಂದಿಗೆ ಹೊಂದಿಕೊಳ್ಳುವುದೂ ಒಂದು ರೀತಿಯಲ್ಲಿ ಅವಳಿಗೆ ಸವಾಲೇ. ಎಲ್ಲರೂ ಪುರುಷೋತ್ತಮರೇ ಆಗಿರುವರೆಂಬ ನಂಬಿಕೆ ಎಲ್ಲಿದೆ? ಕೆಲವೊಮ್ಮೆ ದುಷ್ಟ, ಏಕಾಂತದಲ್ಲಿ ಪಶುವಾಗುವವರಾಗಿದ್ದರೂ ಪಾಲಿಗೆ ಬಂದದ್ದು ಪಂಚಾಮೃತವೆಂದುಕೊಂಡು ಅವನ ಜೊತೆಗೆ ಸಂಸಾರ ಮಾಡಬೇಕು. ಇಲ್ಲವಾದರೆ ಅವಳಿಗೆ ತವರಿನಲ್ಲಿ ಜಾಗವಿಲ್ಲ. ಪತಿಯ ಮನೆಯವರೂ ಅವಳಿಗೆ ಮರ್ಯಾದೆ ಕೊಡರು. ಅವಳು ಒಬ್ಬಂಟಿಯಾಗಿ ನೆಮ್ಮದಿಯಿಂದ ಬದುಕಲು ಈ ಸಮಾಜ ಅವಕಾಶ ನೀಡದು. ಒಂದು ವೇಳೆ ಗಂಡನಿಗೆ ವಿವಾಹೇತರ ಸಂಬಂಧಗಳಿದ್ದರೂ ಅವಳು ಕ್ಷಮಯಾಧರಿತ್ರಿ ಆಗಿ ಅವನನ್ನು ಕ್ಷಮಿಸಿಬಿಡಬೇಕು. ಅವ ನ ಮನೆ ಬೆಳಗಬೇಕು. ವಂಶೋದ್ಧಾರಕನನ್ನು ಕೊಡಬೇಕು. ಇದು ಅವಳ ಕರ್ತವ್ಯ. ಗಂಡು ಮಕ್ಕಳನ್ನು ಹೆತ್ತರೂ ಅವರನ್ನು ತಿದ್ದುವ ಅವಕಾಶ ಅವಳಿಗಿಲ್ಲ. ಆದರೂ ಅವರು ಒಂದು ವೇಳೆ ದಾರಿ ತಪ್ಪಿದರೆ ಅದಕ್ಕೆ ತಾಯಿಯೇ ಹೊಣೆ. ಮನೆಯಲ್ಲಿ ಹಿರಿಯರ ಸೇವೆ ಮಾಡುವುದೂ ಅವಳದೇ ಹೊಣೆ. ಹೀಗೆ ಅನೇಕ ಸವಾಲುಗಳನ್ನು ಎದುರಿಸಿ ಅವಳು ಅಂದು ಬದುಕಿದಳು.
ಇಂದೂ ಕೂಡ ಹೆಣ್ಣು ಸವಾಲುಗಳನ್ನು ಎದುರಿಸುತ್ತಿದ್ದಾಳೆ. ಆದರೆ ಅವುಗಳ ರೂಪ ಬದಲಾಗಿದೆ. ಆ ಸವಾಲುಗಳನ್ನು ಅವಳು ಎದುರಿಸಬೇಕಾದರೆ ಕೆಲವೊಂದು ಆಂಶಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಆಕೆ ಆರ್ಥಿಕ, ಸಾಮಾಜಿಕ ಸ್ವಾವಲಂಬನವನ್ನು ಅದರೊಂದಿಗೆ ನೆಮ್ಮದಿಯನ್ನು ಪಡೆದು ಬದುಕಬೇಕಾದಲ್ಲಿ ಮೊದಲು ತನ್ನ ಸಾಂಪ್ರದಾಯಿಕ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು. ಅವಳು ಪುರುಷ ವಿರೋಧಿಯಾಗಬೇಕಿಲ್ಲ. ಪುರುಷ ಹಾಗೂ ಸ್ತ್ರೀ ಯನ್ನು ಪ್ರಕೃತಿಯು ಪ್ರತ್ಯೇಕ ಉದ್ದೇಶಗಳಿಗೆಂದೇ ಸೃಷ್ಟಿ ಮಾಡಿದ್ದಾಳೆ. ಆ ಉದ್ದೇಶ ಪೂರೈಸಬೇಕಾದಲ್ಲಿ ಎರಡೂ ಕೈಗಳ ಸಹಕಾರದ ಅವಶ್ಯಕತೆ ಇದೆ.
ಪುರುಷನೂ ಇದನ್ನು ಮನಗಂಡು ಅವಳಿಗೆ ವೈಯಕ್ತಿಕವಾಗಿ ಗೌರವಯುತವಾದ ಸ್ಥಾನ ಕೊಡಬೇಕು. ಮಹಿಳೆಯೂ ತನ್ನ ಸ್ಥಾನಗೌರವವನ್ನು ಉಳಿಸಿಕೊಳ್ಳುವುದರೊಂದಿಗೆ ತನ್ನ ಇತಿ ಮಿತಿಗಳನ್ನು ಅರಿತು, ಸ್ವಾತಂತ್ರ್ಯವನ್ನು ಸ್ವಚ್ಛಂಧತೆಯಾಗಿ ಮಾರ್ಪಡಿಸಿಕೊಳ್ಳದೆ ಬಾಳಬೇಕು. ಬಾಳಬಂಡಿಯೆಂದರೆ ಕೇವಲ ಪತಿ-ಪತ್ನಿಯರು ಒಬ್ಬರಿನ್ನೊಬ್ಬರೊಂದಿಗಷ್ಟೆ ಅಲ್ಲ, ಎರಡೂ ಕುಟುಂಬಗಳ ಶಾಂತಿ ನೆಮ್ಮದಿಗಳಿಗಾಗಿ ಶ್ರಮಿಸಬೇಕು. ಆಗಲೇ ಸುಖೀಕುಟುಂಬ ಸಾಧ್ಯ.

ಮಾಲತಿ ಮುದಕವಿ
ಧಾರವಾಡ

Leave a Reply