ಬಡ್ಗಿ ಬರಮ್ಯಾ

ಬಡ್ಗಿ ಬರಮ್ಯಾ
ಅಂತೂ ಮನೆ ಮನೆ ಎಂದು ದಿನಂಪ್ರತಿ ಗೋಳು ಹೊಯ್ದುವುದಕ್ಕೆ ಫುಲ್ ಸ್ಟಾಪ್ ಸಿಕ್ಕಿತು. ಎರಡು ಬೆಡ್ ರೂಂ, ಕಿಚನ್, ಹಾಲು, ವರಾಂಡಾದಿಂದ ಕೂಡಿದ ನಮ್ಮದೇ ಸ್ವಂತದ್ದು ಎನ್ನುವಂಥ ಚಿಕ್ಕ ಕುಟೀರವೊಂದು ಸಿದ್ಧಗೊಂಡಿತ್ತಾದರೂ ಕೈ ಪೂರ್ತಿ ಖಾಲಿ, ಮೈ ತುಂಬ ಸಾಲ! ಅಂಥದ್ರಲ್ಲಿ ಮೇಲಿಂದ ಮೇಲೆ ವಕ್ರಿಸುತ್ತಿದ್ದ ಹಿತೈಷಿಗಳ ಪುಕ್ಕಟೆ ಸಲಹೆಗಳಿಂದ ಕಿವಿಗೆ ತೂತು ಬಿದ್ದಂತಾಗಿತ್ತು. ಅವರ ಸಲಹೆಗಳೆಂದರೆ ಎಂಥಾವು ಅಂತೀರಿ, ಇಡೀ ಮನೆಯನ್ನು ಮುದ್ದಿ ಮಾಡಿ ಮತ್ತೆ ಕಟ್ಟುವುದಕ್ಕೆ ಪ್ರೇರೇಪಿಸುವಂತಿದ್ದವು. ಅಲ್ರೀ ಈ ಕಿಚನ್ನು ಇಲ್ಲಿ ಬರಬಾರದಿತ್ತು. ಆ ಹಾಲ್ ಇದ್ದಲ್ಲಿ ಕಿಚನ್ ಇರಬೇಕಾಗಿತ್ರಿ. (ಅಂದ್ರೇನು ಮನೀಗೆ ಬಂದಾವ್ರು ಮೊದಲು ಊಟಾ ತಿಂಡಿ ಮಾಡಿಕೊಂಡನ ಒಳಗ ಹಾಲ್ ನಲ್ಲಿ ಕೊಡಬೇಕನ್ನು ವಿಚಾರಾನ ಇವರದು) ಮನಸ್ಸಿನಲ್ಲಿಯೇ ಅಂದುಕೋತಿದ್ದೆ.
‘ಈ ಬೆಡರೂಂ ಹೀಂಗ ಇಲ್ಲಿ ಇರಬಾರದ್ರಿ, ಆ ಬಾಲ್ಕನೀ ಮಾಡಿರಲ್ಲಾ ಅಲ್ಲಿ ಇರಬೇಕ್ರೀ’
ಅಂದ್ರ ಇವರ ಅಂಬೋಣ ಏನು, ಮನ್ಯಾಗ, ಮಲಕೋಬಾರ್ದು, ಗ್ಯಾಲರ್ಯಾಗ ಮಲಕೋಬೇಕಂತೇನು?
ಮತ್ತೆ ಮನಸ್ಸಿನಲ್ಲಿ ನನ್ನ ಈ ಮಾತುಗಳು ಮೂಡಿ ಮರೆಯಾಗುತ್ತಿದ್ದವು. ‘ಈ ಸಂಡಾಸ ಇಲ್ಲಿ ಕಟ್ಟೀರಲ್ಲಾ ಇದು ತಪ್ಪದರೀ, ಕಟ್ಟಿದ್ರ ಕಟ್ಟಿವಲ್ಲರ್ಯಾಕ ಆದರ ಕೂಡೂದು ಮುಖ ಉಲ್ಟಾ ಇರಬೇಕ್ರಿ’
ಅಂದ್ರ ಅವರ ಹೇಳೂ ಪ್ರಕಾರ ಕುತ್ತರ ಬೀಳೂದೇನ ಬ್ಯಾರೇ ಕಲರಾ, ಬ್ಯಾರೇ ವಾಸನೀ ಇರ್ತದಂತೇನು ಇವರ ಪ್ರಕಾರ
ಯಥಾ ಪ್ರಕಾರ ಮನಸ್ಸಿನಲ್ಲಿಯೇ ಅನ್ಕೊತಿದ್ದೆ.
ಇಂಥವೇ ಅಪದ್ಧಪದ್ದ ಮಾತುಗಳು. ಈಗ ಮನೀ ಕಟ್ಟಿದ್ದೇವೆ ಇರಲಿಕ್ಕಂತ, ಬೀಳಿಸಲಿಕ್ಕೆ ಅಲ್ಲ ಅಂತ ತಲೇ ಬಡ್ಕೊಂಡು ಹೇಳಿದ್ರೂ ವಾಸ್ತು ಪ್ರಕಾರ ಹೀಂಗ ಇರಬೇಕಾಗಿತ್ತು, ಈಗ ಹೀಂಗ ಇಲ್ಲ ಅಂತ ತಲೀತಿನ್ನೂದು ಬಿಡದವರು ಈ ಹಿತೈಷಿಗಳು.
ಮನೆ ಕಟ್ಟುವಾಗ ಒಂದಿನವೂ ಹಾಯದೇ, ಸಲಹೆ ಸೂಚನೆ ನೀಡದೇ ಈಗ ಬಂದು ಮಾನಸಿಕವಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆ ಹೇಗಾಗಿರಬೇಡ. ಇಂಥದ್ದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಜಾಯಮಾನದವರಲ್ಲ ನಮ್ಮನೆಯವ್ರು. ಯಾವುದಕ್ಕೂ ಅಭಂ ಇಲ್ಲ ಶುಭಂ ಇಲ್ಲದವರಂತೆ ಇರುತ್ತಿದ್ದರು. ಇವರೆಲ್ಲರ ಮಾತಿಗೆ ತಲೆಗೆ ಏರಬೇಕಾಗಿರುವ ಪಿತ್ಥ ನನ್ನೊಬ್ಬಳದೇ! ಕಿಸೆ, ಕೈ ಖಾಲಿ ಮಾಡಿಕೊಂಡು ಕಟ್ಟಿಸಿದ ಮನೆಗೆ ಹೀಗೆ ಹೀಗಳೆದರೆ ಹೇಗಾಗಿರಬೇಡ. ಸಾಲ ಕೊಡಲಿಕ್ಕೆ ಮತ್ರ್ಯಾವುದರೇ ಮಿಕ ಸಿಗ್ತದೇನೋ ಎಂಬ ನಮ್ಮ ನಿರೀಕ್ಷೆ ಸುಳ್ಳಷ್ಟೇ ಅಲ್ಲ ಅಸಾಧ್ಯವೂ ಕೂಡ ಆಗುತ್ತಿತ್ತು.
ಮೊದಲೇ ಬರಗಾಲ ಅಂಥದ್ರಲ್ಲಿ….. ಎನ್ನುವಂತೆ ಪಕ್ಕದ ಖಾಲಿ ಸೈಟಿನಲ್ಲಿ ಪಿ.ಡಬ್ಲ್ಯೂಡಿ. ಯಲ್ಲಿ ಕೆಲಸ ಮಾಡುತ್ತಿರುವ ಇಂಜನೀಯರ ಮನೆ ತಲೆಎತ್ತ ತೊಡಗಿತು. ಆರೇ ಆರು ತಿಂಗಳಿನಲ್ಲಿ ಭವ್ಯ ಬಂಗಲೆಯೊಂದು ಎದ್ದು ನಿಂತಾಗ ನಮ್ಮ ಕಡ್ಡಿಪೆಟ್ಟಿಗೆಯಂಥಾ ಮನೆ ಒಂಥರಾ ಕಳಪೆಯಾಗಿ ಕಾಣತೊಡಗಿತು. ಹಿತೈಷಿಗಳು ಬಂದಾಗ ಅವರಿಗೆ ಮೂದಲಿಸಲಿಕ್ಕೆ ಒಂದು ವಿಷಯ ಸಿಕ್ಕಂತಾಗುತ್ತಿತ್ತು.
ಪಕ್ಕದ ಮನೆಯವರು ಪೂಜೆ ಏರ್ಪಡಿಸಿ ನಮಗೆಲ್ಲ ಆಮಂತ್ರಣ ಕೊಟ್ಟಾಗ ಹೋಗದೇ ಇರಲಿಕ್ಕೆ ಆಗಲಿಲ್ಲ. ಎಂಥಾ ವೈಭವದ ಮನೆ ಅಂತೀರಿ, ಏನು ಪ್ಲೋರಿಂಗು, ಏನು ಪೇಂಟಿಂಗು, ಏನು ಫರ್ನೀಚರು ಎಂಥಾ ಇಳಿಬಿಟ್ಟ ಚಂದದ ಪರದೆಗಳೇನು? ಅಬ್ಬಬ್ಬಾ, ಒಂದೇ ಎರಡೇ ನೋಡಿ ಮೂಕ ವಿಸ್ಮಿತನಾದೆ.
ನಾವೂ ಮನೆ ಕಟ್ಟಿದ್ದೆವು. ಕಟ್ಟಿ ಕೈ ಖಾಲಿ ಮಾಡಿಕೊಂಡಿದ್ದೆವು. ಮುಂದೆ ಫರ್ನಿಚರ ಬೇಕು, ಪಲ್ಲಂಗ ಬೇಕು ಎಂಬುದಕ್ಕೆಲ್ಲಾ ಫುಲ್ ಸ್ಟಾಪ್ ಸಿಕ್ಕಂತಾಗಿತ್ತು. ಏನೂ ಬೇಡುವಂತೆಯೇ ಇಲ್ಲ. ಈಗ ಈ ಮನೆ ನೋಡಿಕೊಂಡು ಬಂದ ಮೇಲೆ ಸಣ್ಣಗೆ ಮಣಮಣನೇ ಎನ್ನುತ್ತಿದ್ದ ಒಟಗುಟ್ಟುವಿಕೆ ಜೋರಾಗಿಯೇ ಆಗತೊಡಗಿದವು. ಸಣ್ಣಗೆ ಇದ್ದ ರಗಳೆಗಳು ದೊಡ್ಡ ಮನಸ್ತಾಪಕ್ಕೆ ತಿರುಗಿದವು.
‘ಎಂಥದ್ರೀ, ನಾಲ್ಕು ಗೋಡೆ ಎಬ್ಬಿಸಿ ಮೇಲೆ ಸ್ಲ್ಯಾಬ್ ಬಡಿದರೆ ಆಯಿತೇ ಮನೆ, ಕೂಡಲಿಕ್ಕೆ ಫರ್ನೀಚರ ಬೇಡವೇ, ಪಲ್ಲಂಗ ಬೇಡವೇ, ಬಟ್ಟೆ ಎಲ್ಲಾ ಎಲ್ಲೆಂದರಲ್ಲಿ ಹರಿದಾಡುತ್ತಿವೆ. ನೀಟಾಗಿ ಇಡಲಿಕ್ಕೆ ಒಂದು ಕಪಾಟಾದರೂ ಬೇಡವೇ’ ಹೀಗೇ ಇಲ್ಲಗಳ ಲಿಸ್ಟನ್ನು ಹಿಡಿದು ಅವರನ್ನು ಒತ್ತಾಯಿಸುತ್ತಿದ್ದೆ. ಅವರದು ಯಾವಾಗಲೂ ಒಂದೇ ಮಾತು, ‘ಮಾರಾಯ್ತಿ ಕಿಸೆ ಹರಿದು ದೊಡ್ಡ ತೂತೇ ಬಿದ್ದಿದೆ, ಸಾಲದಲ್ಲಿ ಕುತಗೀತನಕಾ ಮುಳುಗಿ ಹೋಗೀನಿ, ಮಂದೀ ಮನೀ ನಮ್ಮ ಮನೀಗೆ ಹೋಲಿಸಬೇಡಾ, ಅವರು ಕಟ್ಟಿದ್ದು ಎಂಥೆಂಥಾ ರೊಕ್ಕದಿಂದೋ ಏನೋ’ ಎಂದು ಹೇಳಿ ತಮ್ಮಲ್ಲಿಯ ತಳಮಳವನ್ನು ಮುಚ್ಚುವ ಪ್ರಯತ್ನ ಮಾಡಿದರು ಅಥವಾ ಹಾಗೆ ಹೇಳಿ ಸೇಡು ತಿರಿಸಿಕೊಂಡರು. ಅದಕ್ಕೆ ನನ್ನಲ್ಲಿ ಉತ್ತರವೇನೂ ಇಲ್ಲ. ಅಂತೂ ಬಹಳ ದಿನದಿಂದ ನನ್ನಿಂದಾಗುವ ಕಿರಿಕಿರಿನೋ, ಪಿರಿ ಪಿರಿನೋ ಅಂತೂ ಒಬ್ಬ ಗುರ್ತಿನ ಬಡಗಿಯನ್ನು ಒಂದು ಶುಭ ಮುಹೂರ್ತದಲ್ಲಿ ಕರೆದುಕೊಂಡೇ ಬಂದರು. ಆತನಿಗೆ ಬಡಗಿಯನ್ನು ಒಂದು ಶುಭ ಮೂಹೂರ್ತದಲ್ಲಿ ಕರೆದುಕೊಂಡೇ ಬಂದರು. ಆತನಿಗೆ ದುಡ್ಡಿನಕ್ಕಿಂತ ಕೆಲಸ ಬೇಕಾಗಿತ್ತು. ಅದಕ್ಕಾಗಿ ಹೆಚ್ಚೇನು ಚೌಕಾಷಿ ಮಾಡದೇ ಕೆಲಸಕ್ಕೆ ಬಂದಿದ್ದ. ಅದೇ ಇವರಿಗೂ ಬೇಕಾಗಿತ್ತು. ಅವನು ಬಂದಿದ್ದು ನೋಡಿ ನನಗಂತೂ ಬಹಳೇ ಖುಷಿಯಾಯಿತು. ಇನ್ನೇನು ನಮ್ಮ ಮನೆ ಕೂಡ ಇನ್ನು ಕೆಲವೇ ಕಾಲದಲ್ಲಿ ಪೀಠೋಪಕರಣಗಳಿಂದ ಕಂಗೊಳಿಸುತ್ತವೆ ಎನ್ನುವ ವಿಷಯವೇ ನನಗೆ ಆನಂದ ತುಂದಿಲನನ್ನಾಗಿಸಿತ್ತು. ಏನೇನು ಬೇಕು ಎಂಬ ಲಿಸ್ಟನ್ನೇ ತಯಾರಿಸಿ ಆತನೆಡೆಗೆ ನೀಡಿದೆ. ಮರುದಿನವೇ ಪೇಟೆಗೆ ಹೋಗಿ ತನಗೆ ಬೇಕಾದ ಕಟ್ಟಿಗೆ ಇನ್ನಿತರ ಸಾಮಾನುಗಳನ್ನು ತಂದು ಕೆಲಸಕ್ಕೆ ಶುರುವಿಟ್ಟುಕೊಂಡ. ಅವನ ವಾಸ್ತವ್ಯ ನಮ್ಮ ಮನೆಯಲ್ಲೇ ಆದ್ದರಿಂದ ಹೊತ್ತು ಹೊತ್ತಿಗೆ ಊಟ ತಿಂಡಿಗಳ ಸರಬರಾಜು ಯಥೇಚ್ಚವಾಗಿ ನಡೆಯುತ್ತಿತ್ತು, ಕಟ್ಟಿಗೆಯ ಕೊರೆತದ ಶಬ್ದ ಮಾತ್ರ ಸುತ್ತಲೂ ಪಸರಿಸಿ ಪಕ್ಕದ ಮನೆಯವರೆಲ್ಲಾ ಕೆಕ್ಕರುಗಣ್ಣಿನಿಂದ ನಮ್ಮೆಡೆಗೆ ನೋಡುವಂತಾಯಿತು. ಎರಡು ದಿನಗಳ ಸತತ ಪರಿಶ್ರಮದಿಂದ ವಾರ್ಡರೋಬಿನ ಬಾಗಿಲುಗಳು ತಯಾರಾದವು. ಸುಂದರವಾದ ಸನ್ಮೈಕ್ ಹಚ್ಚಿದ್ದರಿಂದ ಬಾಗಿಲುಗಳು ಹೊಳೆಯುತ್ತಿದ್ದವು. ಮೂಲೆಯಲ್ಲಿ ಸ್ವಲ್ಪ ಸನ್ಮೈಕ್ ಕಿತ್ತು ಬರುವಂತಾಗಿದ್ದನ್ನು ಬಿಟ್ಟು ಉಳಿದಿದ್ದೆಲ್ಲ ಚೆನ್ನಾಗಿಯೇ ಕಾಣಿಸುತ್ತಿತ್ತು. ಬಡಗೀ ಬರಮ ‘ವೈನೀರೀ, ಬರ್ರೀ, ನಿಮ್ಮ ಕಪಾಟು ತಯಾರಾತು’ ಎಂದು ಕೂಗಿ ಹೇಳಿದರೆ ನನಗಂತೂ ಖುಷಿ ತಡೆಯದೇ ರೂಮಿಗೆ ಹೊಕ್ಕೆ, ಒಳಗೆ ಹೋಗಿ ನೋಡಿದರೆ, ಕಪಾಟಿನ ಬಾಗಿಲುಗಳೆರಡೂ ಉಬ್ಬಿದಂತೆ ಬಸುರಿ ಹೆಂಗಸಿನಂತೆ ನಿಂತು ಬಿಟ್ಟಿವೆ. ‘ಇದೇನೋ ಬರಮಾ, ಬಾಗಿಲ ಫಡಕುಗಳೆರಡೂ ಹೀಗೇ ನಿಂತಿವೆಯಲ್ಲ. ಸರಿಯಾಗಿ ಕುಡಿಸು, ‘ಎಂದರೆ ಆತನ ಉತ್ತರಗಳು ಸಿದ್ಧವಾಗಿದ್ದವು. ‘ಅಲ್ರೀ ವೈನೀ, ರೊಕ್ಕಾ ಹ್ಯಾಂಗ ಇರ್ತಾವು, ಹಂಗ ಮಾಲ ಬರ್ತಾವು, ಸಾಹೇಬ್ರ ಕೊಟ್ಟ ರೊಕ್ಕದಾಗ ಈ ಕಪಾಟಿನ ಬಾಗಿಲು ಆಗಿದ್ದೇ ಹೆಚ್ಚಿನದ್ದು” ಎನ್ನಬೇಕೆ, ನನಗಂತೂ ಏನೂ ತೋಚದೇ ಹೊರಗೆ ಬಂದೆ. ಮತ್ತೇನೇನೋ ರಿಪೇರಿ ಕೆಲಸ ಶುರುಹಚ್ಚಿಕೊಂಡ ಬರಮಾ, ಅಷ್ಟರಲ್ಲಿ ಸ್ಕೂಲಿನಿಂದಾಗಮಿಸಿದ ಮಗರಾಯ ಚಂಗನೇ ಜಿಗಿದು ವಾರ್ಡ್ ರೋಬಿನ ಬಾಗಿಲುಗಳ ವೀಕ್ಷಣೆಗೆ ನಡೆದ, ಉಬ್ಬಿನಿಂತ ಬಾಗಿಲುಗಳು ಸರಿಯಾಗಿ ಕೂಡಿಸಲಾಗದೇ ಎಷ್ಟು ಜೋರಿನಿಂದ ಕೂಡಿಸುತ್ತಿದ್ದನೋ ಅಷ್ಟೇ ಜೋರಿನಿಂದ ಬರುತ್ತಿದ್ದ ಬಾಗಿಲುಗಳಿಂದ ಈತನಿಗೆ ಮೋಜೆನಿಸಿತು.’ ‘ಅಮ್ಮಾ ನೋಡಲ್ಲಿ, every action has a reaction’ ಎನ್ನುತ್ತಾ ಬಾಗಿಲನ್ನು ತಳ್ಳುತ್ತಿದ್ದಂತೇ ಎಷ್ಟು ಫೋರ್ಸಿನಿಂದ ಹಾಕುತ್ತಿದ್ದನೋ ಅಷ್ಟೇ ವೇಗವಾಗಿ ಚರ್ರಂತ ಶಬ್ದ ಮಾಡುತ್ತಾ ಮುಂದೆ ಬಂದು ನಿಲ್ಲುತ್ತಿದ್ದವು. ಅದೊಂದು ಆತನಿಗೆ ಆಟವಾಗಿ ಪರಿಣಮಿಸಿತು. ಹೀಗೆ ಮುಂದುವರಿದರೆ ಬಾಗಿಲುಗಳೇ ಕಿತ್ತು ಬರುವುದು ಗ್ಯಾರಂಟಿ ಎನಿಸಿ ಮಗನಿಗೆ ಝಬರಿಸಿ ಕಳಿಸಿದೆ. ಬಡಗಿ ಗುರ್ತಿನವನಾದ್ದರಿಂದ ಏನೂ ಅನ್ನಲಿಕ್ಕೂ ಬರದಂಥ ಪರಿಸ್ಥಿತಿ ಬಾಗಿಲನ್ನು ಏನೇನೋ ರಿಪೇರಿ ಮಾಡಿ ಅಲ್ಲೊಂದು ಮೊಳೆ ಇಲ್ಲೊಂದು ಮೊಳೆ ಬಡಿದು ಕೂಡಿಸುವಂತೆ ಮಾಡಿದ. ಆದರೆ ಕಳೆಗಟ್ಟುತ್ತಿದ್ದ ಬಾಗಿಲು ತಮ್ಮ ಕಳೆ ಕಳಕೊಂಡು ನುಣ್ಣಗೆ ಬೋಳಿಸಿದ ಮಡಿ ಹೆಂಗಸಿನಂತೆ ಕಾಣತೊಡಗಿತು. ಬಾಗಿಲುಗಳು ಗಟ್ಟಿಯಾಗಿ ಸ್ವಸ್ಥಾನದಲ್ಲಿ ಕೂಡುವುದಕ್ಕೆ ಮಧ್ಯದಲ್ಲೊಂದು ಕಟ್ಟಿಗೆಯ ತುಂಡೊಂದನ್ನು ಅಂಟಿಸಲಾಯಿತು. ಅದರಿಂದ ವಾರ್ಡರೋಬಿನ ಕಳೆಯೇ ಕಳೆದಂತಾಯಿತು. ಮನಸ್ಸಿನಲ್ಲಿಯೇ ಇರಲಿ ಬಿಡು ಎಂದುಕೊಂಡೆ. ಮರುದಿನ ಪಲ್ಲಂಗ ಮಾಡುತ್ತೇನೆಂದ. ಸಾಯಂಕಾಲದೊಳಗೆ ಫಳಿಗಳನ್ನು ಜೋಡಿಸಿ ನಾಲ್ಕು ಕಾಲುಗಳಿಗೆ ಬಡಿದು ಪಲ್ಲಂಗವನ್ನು ರೆಡಿ ಮಾಡಿದ. ಸಾಯಂಕಾಲ ಆಫೀಸಿನಿಂದ ಬಂದ ಯಜಮಾನರು ಪಲ್ಲಂಗವನ್ನು ನೋಡಿ ‘ಏನೋ, ಎಲ್ಲಾ ಕಾಲುಗಳು ಹೀಂಗ್ಯಾಕ ನಾಯಿ ಕಾಲಿನ ಹಾಗೆ ಸೊಟ್ಟಾಗಿವೆ’ ಎನ್ನುತ್ತಾ ತಮ್ಮ ಮೈಭಾರವನ್ನೆಲ್ಲ ಅವರ ಮೇಲೆ ಹಾಕುತ್ತಾ ಕುಳಿತುಕೊಳ್ಳುವುದೊಂದೇ ತಡ, ಪ್ಯಾರಾಲಿಟಿಕಲ್ ಅಟ್ಯಾಕ್ ಆದವರ ಹಾಗೆ ಕಾಟು ಒಪ್ಪಾರೆ ಬಿದ್ದು ಬಿಡುವುದೇ. ‘ಇದೇನಾತು, ಇದೇನಾತು’ ಎಂದೆನ್ನುತ್ತಾ ಕೂಗಿ ಇವರನ್ನು ಕಾಟನ್ನು ಎತ್ತಿ ಇಡುವಲ್ಲಿ ಹೈರಾಣಾದೆವು.
ಮನಸ್ಸಿನಲ್ಲಿ ಯಜಮಾನರನ್ನು ಬೈಯ್ಯುತ್ತಾ ‘ಪೆನ್ನಿ ವೈಜ್ ಫೌಂಡ್ ಫುಲಿಶ್’ ಥು ಒಂದು ಪೈಸೆ ಉಳಿಸಲಿಕ್ಕೆ ನೂರು ಪೈಸೆ ಕಳಕೊಳ್ಳುವ ಹಾಗಾಯ್ತಲ್ಲ ಎಂದು ಮನಸ್ಸಿನಲ್ಲಿಯೇ ಹಳಹಳಿಸಿದೆ. ಯಾವುದೇ ಕೆಲಸ ಆತ ಮಾಡಿದರೂ ಅಪೂರ್ಣ ಹಾಗೂ ಅಸ್ತವ್ಯಸ್ತ. ಆರಾಮ ಛೇರ ಮಾಡಲು ಹೇಳಿದಾಗಲೂ ಕೂಡ ಅದರಲ್ಲಿ ಕುಳಿತ ಮೇಲೆ ಏಳಲುದ್ಯುಕ್ತನಾದಾಗ ಅದರ ಹ್ಯಾಂಡಲ್ಲೇ ಕೈಗೆ ಬರಬೇಕೆ? ಮತ್ತೊಮ್ಮೆ ಪುಸ್ತಕ ಇಡುವ ಶೆಲ್ಫಿಗಾಗಿ ಸಣ್ಣ ಸಣ್ಣ ಮೊಳೆಗಳನ್ನು ಹೊಡೆದು ಶೆಲ್ಫನ್ನು ನೇತು ಹಾಕಿದ್ದಾನೆ. ಅದರಲ್ಲಿ ಪುಸ್ತಕಗಳನ್ನಿಟ್ಟಾಗ ಭಾರ ತಡೆಯದೇ ಆ ಮೊಳೆಗಳೆಲ್ಲ ಮತ್ತೆಂದೂ ಸಿಗದಂತೆ ದೂರ ಜಿಗಿದು ಬಿದ್ದವು. ನೀಟಾಗಿ ಜೋಡಿಸಿಟ್ಟ ಪುಸ್ತಕಗಳೆಲ್ಲ ಚೆಲ್ಲಾಪಿಲ್ಲಿ! ಅವುಗಳನ್ನೆಲ್ಲ ಜೋಡಿಸಲಿಕ್ಕೇ ಎಂಟು ದಿನ ಬೇಕಾಯಿತು. ಇವನೆಂಥ ಬಡಗಿಯೋ, ಸೋವಿ ಸಿಕ್ಕನೆಂದು ಇವನನ್ನು ಕರೆದುಕೊಂಡು ಬರುವುದೇ, ಇವರನ್ನೂ ಕೂಡ ಮನಸ್ಸಿನಲ್ಲಿ ಬೈಯ್ದು ಸಮಾಧಾನ ಪಟ್ಟುಕೊಳ್ಳುತ್ತಿದ್ದೆ.
‘ನೀನು ಮೊದಲೇನಾದರೂ ರಿಪೇರಿ ಅಂಗಡಿಯಲ್ಲಿ ಕೆಲಸಕ್ಕಿದ್ದೆಯೋ ಹೇಗೆ?’ ತಡೆಯದೇ ನಗುತ್ತಾ ಕೇಳಿಯೇ ಬಿಟ್ಟೆ. ಮೊದ ಮೊದಲು ಅತ್ತಿಂದತ್ತ ಜೋಕಾಲಿ ತೂಗುವ ಹಾಗೆ ಗೋಣೇನೋ ಅಲ್ಲಾಡಿಸಿದ. ಆದರೆ ನಾನು ಮತ್ತೆ ಮತ್ತೆ ಅವನನ್ನು ಕೇಳಲಾರಂಭಿಸಿದೆ. ‘ಅಲ್ಲೋ ನಿನಗೆ ಬಡಗೀ ಕೆಲಸ ಬರ್ತದೆಯೋ ಇಲ್ಲವೋ?’ ನಿನಗೆ ಹೇಳಿ ಕೊಟ್ಟವರಾದರೂ ಯಾರು? ಜೋರು ಮಾಡಿ ಕೇಳಿದಾಗ ಅಧೀರನಾದ. ‘ಹಂಗೇ ನೋಡಿ ಕಲ್ಕೊಂಡಿನ್ರೀ ವೈನಿ’ ಬಾಯಿ ಬಿಟ್ಟ.
‘ಯಾವುದೇ ಕೆಲ್ಸಾ ಮಾಡಿದ್ರೂ ನಿಷ್ಠೆ ಅನ್ನೂದು ಬೇಕಪ್ಪಾ. ಹೀಂಗೆಲ್ಲಾ ಮಾಡ್ತಾ ಹೋದ್ರೆ ಜನ ನಿನ್ನ ಮತ್ತೆ ಕರೀಬೇಕಲ್ಲಾ….’ ಮಾತು ಮುಂದುವರೆಸಲು ಇಚ್ಛಿಸದೆ ನಾನು ಯಜಮಾನರಿಗೆ ಒಳಗೆ ಕರೆದು ದುಡ್ಡು ಕೊಟ್ಟು ಆತನನ್ನು ಕಳಿಸಿ ಬಿಡ್ರಿ, ಮುಂದೆ ಕೈಯ್ಯಲ್ಲಿ ದುಡ್ಡಿದ್ದಾಗ ಮಾಡಿಸಿದ್ರಾತು ಎಂದೆ. ಒಳಗೊಳಗೇ ಖುಷಿಗೊಳ್ಳುತ್ತಾ ಇವರು “ಈಗ ಗೊತ್ತಾತಿಲ್ಲೋ, ನಾನು ಮೊದಲೇ ಹೇಳಿದ್ರೆ ಕೇಳ್ಳಿಲ್ಲಾ, ನೋಡೀಗ ರೊಕ್ಕಾನೂ ದಂಡ, ವೇಳ್ಯಾನೂ ದಂಡ” ಎನ್ನುತ್ತಾ ಅವನ ದುಡ್ಡು ಕೊಟ್ಟು ಅವನನ್ನು ಹೊತ್ತು ಹಾಕಿದರೆನ್ನಿ. ಒಳಗೆ ಬರುತ್ತಾ, ‘ಇವನೇನು ಬಡಗೀನೋ ಏನೋ, ಮಗನ ಮುಕಳಿ ಕೊಯ್ದು ಮೂರು ಮಣಿ ಮಾಡಿದ್ರಂತಾರಲ್ಲ, ಹಾಂಗಿದ್ದಾನ ದಂಡ ಪಿಂಡ….’ ಶಪಿಸುತ್ತಲೆ ಒಳಗೆ ಬಂದಾಗ ಭಾಳದಿನದಿಂದ ಒಳಗೊಳಗೇ ಇದ್ದ ನಗು ಖಿಲ್ಲನೆ ಹೊರಬಂದಿತು. ಸಾಕಪ್ಪಾ ಬಡಗಿಯ ಸಹವಾಸ ಎನ್ನುವಂತಾಗಿತ್ತು ಅವನಿಗೆ ಹೊತ್ತು ಹೊತ್ತಿಗೆ ಮಾಡಿ ಹಾಕುತ್ತ ಸೊರಗಿ ಹೋದ ನನಗೆ ಇಂದು ನಿರಾಳವಾದಂತೆನಿಸಿತು. ‘ನಡ್ರೀರ್ರೀ, ದೋಸೆ ಡೆನ್ನಿಗೆ’ ಎಂದೆ.

Leave a Reply