ಬಣ್ಣಿಸಲಾಗದ ಸಂತೆ
ಒಂದು ಗೊತ್ತಾದ ಸ್ಥಳದಲ್ಲಿ ವರದ ಒಂದು ನಿರ್ದಿಷ್ಟ ದಿನ, ಒಂದು ನಿರ್ದಿಷ್ಟ ಸ್ಥಳದಲ್ಲಿ ಜನರು ಒಂದುಗೂಡಿ ತಾವು ಬೆಳೆದ ಅಥವಾ ಉತ್ಪಾದಿಸಿದ ಉತ್ಪನ್ನಗಳನ್ನು ಮಾರುವ, ಇಲ್ಲವೇ ಕೊಳ್ಳುವ ಆರ್ಥಿಕ ವ್ಯವಸ್ಥೆಯೇ ಸಂತೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸಂತೆ ಜರುಗುತ್ತಿದ್ದುದಕ್ಕೆ ಶಾಸನಾಧಾರಗಳಿವೆ. ‘ಸಂತೆ ಹೊತ್ತಿಗೆ ಮೂರೂ ಮೊಳ ನೆದ ಹಾಗೆ…!’ ‘ಚಿಂತಿಲ್ಲದ ಮುಕ್ಕನಿಗೆ ಸಂತೇಲೂ ನಿದ್ದೆ…!’ ಎಂಬ ಗಾದೆಗಳಂತೆ, ‘ಸಂತೆ ಜಾಣಕೆಲ್ಲ ಒಂದೇ ಹಾಸಿಗೆ ಒಂದೇ ಹೊದಿಕೆ’ (ಭೂಮಿ-ಆಕಾಶ), ‘ಸಂತ್ಯಾಗ್ ತರ್ತಾರೆ ಮನ್ಯಾಗ್ ಅಳ್ತಾರೆ…!’ (ಈರುಳ್ಳಿ) ಎನ್ನುವ ಒಗಟುಗಳೂ ಇವೆ. ಶನಿವಾರಸಂತೆ, ಸಂತೇಬೆನ್ನೂರು, ಸಂತೇಮರೂರು, ಸಂತೇಬಾಚಳ್ಳಿ, ಸಂತೆ ಕೋಡೂರು, ಬರೆಸನ್ತೇ ಹೀಗೆ ಕೆಲವು ಸ್ಥಳಗಳು ಸಂತೆಯಿಂದಾಗಿಯೇ ಈ ಹೆಸರುಗಳನ್ನು ಹೊಂದಿವೆ. ಈ ಆಧುನಿಕ ಯುಗದ ಹವಾನಿಯಂತ್ರಿತ ಮಾಲ್, ಮಾರ್ಟ್ , ಬಜಾರ್ ಗಳ ಅಬ್ಬರದಲ್ಲಿ ಸಂತೆಗಳ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ಹಿಂದಿನ ಕಾಲದಲ್ಲಿ ಜರುಗುತ್ತಿದ್ದ ಸಂತೆಯ ನೋಟವನ್ನು, ಹೊಸ ತಲೆಮಾರಿನ ಯುವ ಜನರಿಗೆ ಪರಿಚಯಿಸಲೆಂದೇ ಸಿಮೆಂಟಿನಲ್ಲಿ ಕಲಾತ್ಮಕವಾಗಿ ಕಡೆದು ನಿಲ್ಲಿಸಿರುವ ಜನಪದರ ಸಂತೆಯ (Folk Market) ದೃಶ್ಯ ಹಾವೇರಿ ಜಿಲ್ಲೆ, ಶಿಗ್ಗಾವ್ ತಾಲ್ಲೂಕಿನ ಗೊಟಗೋಡಿಯ ‘ಉತ್ಸವ್’ ರಾಕ್ ಗಾರ್ಡನ್ ‘ ನಲ್ಲಿ ಕಾಣಬಹುದು.
ಹೊಸ್ಮನೆ ಮುತ್ತು
You must log in to post a comment.