ಭಾಷಣ ಕಲೆ ಸಿದ್ಧಿಸುವುದು ಹೇಗೆ?

ಭಾಷಣ ಕಲೆ ಸಿದ್ಧಿಸುವುದು ಹೇಗೆ?
ಮಾನವನ ತಲೆಯು ಕಂಪ್ಯೂಟರಿಗಿಂತಲೂ ಶಕ್ತಿಯುತವಾದದ್ದೆಂದು ಸ್ವತಃ ವಿಜ್ಞಾನಿಗಳೇ ಹೇಳಿದ್ದಾರೆ. ನಮ್ಮ ತಲೆಯಲ್ಲಿ ಸಾಕಷ್ಶಟು ವಿಷಯಗಳ ಬಗ್ಗೆ ಜ್ಞಾನವಿದೆ. ಜಗತ್ತಿನಲ್ಲಿ ಹಂಚಿದಷ್ಟೂ ಹೆಚ್ಚುವುದು ಜ್ಞಾನ ಒಂದೇ! ತನ್ನ ಜ್ಞಾನವನ್ನು ಹಂಚಬೇಕಾದಲ್ಲಿ ವ್ಯಕ್ತಿಗೆ ಭಾಷಣಕಲೆಯ ಸಿದ್ಧಿ ಅವಶ್ಯಕವಾಗಿದೆ.
ನಾವು ಮಾತನಾಡುವಾಗ ಉತ್ಸುಕತೆಯನ್ನು ಹೊಂದಿದಂಥ ಕೇಳುಗರನ್ನೇ ಬಯಸುತ್ತೇವೆ. ನಮ್ಮ ಅನುಭವಗಳನ್ನು ಹೇಳುವಾಗ, ನಗೆಯ ಸಂದರ್ಭಗಳನ್ನು ಹೇಳುವಾಗ ಕೇಳುಗರು ಅದನ್ನು ಮನಸಾರೆ ಆಸ್ವಾದಿಸಬೇಕು, ಮನದುಂಬಿ ನಗಬೇಕು ಎಂದೂ ಬಯಸುತ್ತೇವೆ. “ಸಭೆ” ಎಂದರೆ ಕೇಳುಗರು ಒಂದಿಷ್ಟು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಅಷ್ಟೇ. ಸ್ಕೂಲು-ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವವರಿಗೆ, ರಾಜಕೀಯದಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ.. ಹಿಗೆ ಎಲ್ಲ ಕಡೆಗೂ ನಮ್ಮ ವಿಚಾರಗಳನ್ನು, ಅನಿಸಿಕೆಗಳನ್ನು, ನಮ್ಮ ಸಾಧನೆಗಳನ್ನು ಹೇಳಿಕೊಳ್ಳಬೇಕಾದ ಸಮಯ-ಸಂದರ್ಭಗಳು ಎದುರಾಗುತ್ತವೆ. ಸಭಿಕರನ್ನು ನಮ್ಮ ಮಾತಿನ ಮೋಡಿಯಲ್ಲಿ ಹಿಡಿದಿರಿಸಿಕೊಳ್ಳುವ ಜಾಣ್ಮೆಯಿದ್ದಲ್ಲಿ ನಮ್ಮ ವೃತ್ತಿಯಲ್ಲಿ ನಾವು ಮುಂದೆ ಬರಲು ಸಾಧ್ಯ. ಭಾಷಣದ ಪ್ರಾರಂಭದಿಂದ ಕೊನೆಯ ವರೆಗೂ ಸಭಿಕರನ್ನು ನಮ್ಮ ಮಾರತಿನ ಮೋಡಿಯಲ್ಲಿ ಮುಗ್ಧರನ್ನಾಗಿಸಬೇಕಾದಲ್ಲಿ ಕೆಲವು ಸಲಹೆಗಳಿಲ್ಲಿವೆ:
ಒಬ್ಬ ಒಳ್ಳೆಯ ಭಾಷಣಕಾರನಾಗಬೇಕಾದರೆ ನೆನಪಿನಲ್ಲಿರಿಸಿಕೊಳ್ಳಬೇಕಾದ ಮುಖ್ಯ ಅಂಶಗಳೆಂದರೆ,
1. ಮಾತನಾಡಬೇಕಾದ ವಿಷಯದ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು.
2. ಪ್ರಾರಂಭ ಹಾಗೂ ಮುಕ್ತಾಯಗಳನ್ನು ಮೊದಲೇ ನಿರ್ಧರಿಸುವುದು. ಸ್ವಾಭಾವಿಕವಾಗಿ ಒಂದು ಭಾಷಣದಲ್ಲಿ ಮೂರು ಭಾಗಗಳಿರುತ್ತವೆ. ಮೊದಲಿನದು ವಿಷಯದ ಪ್ರಾರಂಭ. ಮದ್ಯದಲ್ಲಿ ಮುಖ್ಯ ಅಂಶಗಳು. ಕೊನೆಯದು ಸಮಾಪ್ತಿ. ಮಾತನಾಡಬೇಕಾದ ಅಂಶಗಳನ್ನು ಸರಿಯಾಗಿ ಹೊಂದಿಸಿಕೊಳ್ಳಬೇಕು. ಅವಶ್ಯವೆನಿಸಿದಲ್ಲಿ ಪುಟ್ಟ ಕಾಗದದಲ್ಲಿ ಮುಖ್ಯ ಅಂಶಗಳನ್ನು ಬರೆದುಕೊಂಡರೂ ಸರಿ.
3. ಭಾಷಣದ ಲೇಖನವನ್ನು ಸಿದ್ಧಪಡಿಸಿಕೊಂಡ ನಂತರ ಒಬ್ಬರೇ ಇದ್ದಾಗ ರಿಹರ್ಸಲ್ ಮಾಡಿಕೊಳ್ಳಬೇಕು. ಭಾಷಣಕ್ಕಾಗಿ ಸ್ಟೇಜು ಹತ್ತುವುದಕ್ಕಿಂತ ಮೊದಲು ಎರಡು ಮೂರು ಬಾರಿಯಾದರೂ ರೂಢಿ ಮಾಡಿಕೊಳ್ಳಲೇಬೇಕು.
4. ಇನ್ನು ನಾವು ಆರಿಸಿಕೊಳ್ಳಬೇಕಾದ ಮಾತಿನ ಶೈಲಿ. ಒಂದು ವೇಳೆ ಪ್ರೇಕ್ಷಕರು ಜ್ಞಾನಿಗಳಾಗಿದ್ದಲ್ಲಿ ನಾವು ಅವರ ಮಟ್ಟದ ಭಾಷೆಯಲ್ಲಿಯೇ ಮಾತನಾಡಬೇಕು. ಒಂದು ವೇಳೆ ಸಾಮಾನ್ಯ ಮಟ್ಟದ ಸಭಿಕರಾಗಿದ್ದಲ್ಲಿ ಆಡು ಭಾಷೆಯನ್ನೇ ಉಪಯೋಗಿಸಬೇಕು. ಸಭಿಕರ ವಯೋಮಾನ ಹಾಗೂ ಜ್ಞಾನ ಇವೆರಡೂ ಸಭಿಕರು ನಮ್ಮಿಂದ ಯಾವ ತರದ ಶೈಲಿಯನ್ನು ಇಷ್ಟಪಡುತ್ತಾರೆ ಎಂಬುದಕ್ಕೆ ಅಳತೆಗೋಲಾಗುತ್ತವೆ.
ಸಾರ್ವಜನಿಕವಾಗಿ ಮಾತನಾಡುವುದೆಂದರೆ ಯಾವಾಗಲೂ ಜನರೊಂದಿಗಿನ ಸಂಪರ್ಕವೆಂದೇ ಹೇಳಬೇಕಾಗುತ್ತದೆ. ಏರಿಳಿತವಿಲ್ಲದ ದ್ವನಿಯು ಯಾರ ಮೇಲೆಯೂ ಪ್ರಭಾವವನ್ನು ಬೀರಲು ಸಾಧ್ಯವಿಲ್ಲ. ನಮ್ಮ ವಿಚಾರಗಳನ್ನು ಸಭಿಕರಿಗೆ ಮನದಟ್ಟು ಮಾಡಿಕೊಡಬೇಕಾದಲ್ಲಿ ದೇವರು ನಮಗೆ ಕೊಟ್ಟಿರುವ ಕಂಠಸಿರಿಯನ್ನು ಉಪಯೋಗಿಸಬೇಕು. ನಮ್ಮ ಶಬ್ದಗಳ ಉಚ್ಚಾರವು ಸ್ಪಷ್ಟ ಹಾಗೂ ತಪ್ಪಿಲ್ಲದಂತಿರಬೇಕು. ವಾಕ್ಯದ ಕೊನೆಗೆ ಧ್ವನಿಯು ಸಣ್ಣದಾಗಿರಬೇಕು. ಅಂದರೆ ಜನರಿಗೆ ಒಂದು ರೀತಿಯ ಆಕರ್ಷಣೆ ಉಂಟಾಗುತ್ತದೆ. ವಾಕ್ಯದ ಪ್ರಾರಂಭದಲ್ಲಿಯೂ ಧ್ವನಿಯು ಸಣ್ಣದಾಗಿರಬೇಕು.
ಗಡಿಬಿಡಿಯ ಪ್ರಾರಂಭ ಬೇಡ. ವೇದಿಕೆಯ ಮೇಲೆ ಬಂದಕೂಡಲೆ ಸರಿಯಾದ ಭಂಗಿಯನ್ನು ಆಯ್ದುಕೊಳ್ಳುವುದು ಮೊದಲ ಕೆಲಸ. ಮುಂದಿನ ಹಲವಾರು ನಿಮಿಷಗಳಿಗಿಂತ ಮೊದಲ ಹಲವಾರು ಸೆಕೆಂಡುಗಳೇ ಬಹಳ ಮುಖ್ಯ. ಮೊದಲ ಮಾತುಗಳಲ್ಲಿಯೇ ಜನರ ಲಕ್ಷ್ಯವನ್ನು ಸೆಳೆಯುವ ಮೋಡಿ ಇರಬೇಕು. ಅರ್ಥವತ್ತಾದ ವಾಕ್ಯಗಳಿರಲಿ. ನಾವು ಹೇಳುತ್ತಿರುವುದರ ಬಗ್ಗೆ ಉತ್ಸಾಹದ ಸ್ವರವನ್ನು ನಮ್ಮದಾಗಿಸಿಕೊಳಳಬೇಕು. ಅಮದರೆ ಜನರು ಆಕರ್ಷಿತರಾಗುವುದರಲ್ಲಿ ಸಂಶಯವಿಲ್ಲ. ಭಾಷಣದ ಅರ್ಧ ಯಶಸ್ಸು ನಾವು ನಿಲ್ಲುವ ಭಂಗಿ, ಪ್ರಾರಂಭಿಸುವ ರೀತಿ ಇವೆಲ್ಲದರ ಮೇಲೆ ಅವಲಂಬಿಸಿದೆ. ಇನ್ನರ್ಧವು ನಾವು ನೇಡುವ ಸಂದೇಶದಲ್ಲಿ ಇರುತ್ತದೆ. ನಮ್ಮ ವ್ಯಕ್ತಿತ್ವ, ನಮ್ಮ ಜಾಣತನವೂ ನಮ್ಮ ಭಾಷಣದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಸಭಿಕರೆದುರು ನಿಲ್ಲುವ ಭಂಗಿಯೂ ತುಂಬ ಮಹತ್ವದ್ದು. ಅದು ನಮ್ಮಲ್ಲಿಯ ಆತ್ಮವಿಶ್ವಾಸವನ್ನು ತೋರುತ್ತದೆ. ಬೆನ್ನು ಬಾಗಿಸದೆ, ನೇರವಾಗಿ ನಿಲ್ಲಬೇಕು. ನುರಾರು ಜನರ ಕಣ್ಣುಗಳು ನಮ್ಮ ಮೇಲೆ ನೆಟ್ಟಿರುತ್ತವೆ. ಸನ್ನಿವೇಶಕ್ಕೆ ತಕ್ಕ ಹಾಗೆ ವ್ಯಕ್ತಿತ್ವವಿರಬೇಕು. ಏಕೆಂದರೆ ಮೂರ್ತಿಯಂತೆ ನಿಲ್ಲುವ ಭಾಷಣಕಾರರು ಜನರ ಲಕ್ಷ್ಯವನ್ನು ಸೆಳೆಯಲು ಸಾಧ್ಯವಿಲ್ಲ. ಕೈಗಳನ್ನು ಹೆಣೆದು ಒಂದೇ ರೀತಿಯಲ್ಲಿ ನಿಲ್ಲದೆ, ಒಂದಿಷ್ಟು ಆರಾಮದಿಂದ ನಿಂತರೆ, ನಮ್ಮ ಉದ್ವೇಗ, ನಮ್ಮ ಅಧೈರ್ಯ ಕಡಿಮೆಯಾಗುತ್ತದೆ. ನಮ್ಮ ಮಾತುಗಳಲ್ಲಿ ಉತ್ಸಾಹವಿದ್ದರೆ, ಗುರಿಯಿದ್ದರೆ ಜನರು ತಮ್ಮಿಂದ ತಾವೇ ಸೆಳೆಯಲ್ಪಡುತ್ತಾರೆ. ಅನಗತ್ಯವಾದ ಸಂಜ್ಞೆಗಳು ನಮ್ಮ ಭಾಷಣದ ಆಸಕ್ತಿಯನ್ನು ಅತ್ತಿತ್ತ ಸೆಳೆಯುತ್ತವೆ. ಕಣ್ಣುಗಳ ಸಂಪರ್ಕವೂ ಅಗತ್ಯ. ಇದು ಸಭಿಕರೊಡನೆ ಸಮರ್ಪಕವಾಗಿ ಬೆರೆಯಲು ಅನುಕೂಲವಾಗುತ್ತದೆ. ಪ್ರತಿಯೊಬ್ಬರಿಗೂ ನಾವು ಅವರನ್ನೇ ಉದ್ದೇಶಿಸಿ ಮಾತನಾಡುತ್ತಿದ್ದೇವೆ ಎನ್ನಿಸುವಂತಿರಬೇಕು. ಒಂದು ವೇಳೆ ನಾವು ಛತ್ತನ್ನೋ, ಕೈಯಲ್ಲಿಯ ಕಾಗದದ ತುಣುಕನ್ನೋ ಪದೇ ಪದೇ ನೋಡುತ್ತಲಿದ್ದರೆ ಸಭಿಕರ ಮೇಲಿನ ಹಿಡಿತವನ್ನು ತಪ್ಪಿಸಿಕೊಳ್ಳುತ್ತೇವೆ. ಇದರಿಂದಾಗಿ ಅವರ ಮೇಲಿನ ಭಾಷಣದ ಪ್ರಭಾವವು ಕುಂಠಿತಗೊಳ್ಳುತ್ತದೆ. ನಮ್ಮ ಸ್ನೇಹದ ಮುಖಗಳನ್ನು ಅರಸಿದರೆ ಕೂಡ ನಮ್ಮ ಮಾತುಗಳಿಗೆ ಪ್ರೋತ್ಸಾಹವು ದೊರಕುತ್ತದೆ. ವೇದಿಕೆಯ ಮೇಲಿನ ಗಣ್ಯ ವ್ಯಕ್ತಿಗಳು ಕೂಡ ಒಮ್ಮೊಮ್ಮೆ ನೋಟ ಹರಿಸಿದರೆ ಅವರ ಮೇಲೆ ನಮ್ಮ ಭಾಷಣದ ಪ್ರಭಾವವು ಹೇಗಾಗುತ್ತಲಿದೆ ಎಂಬುದರ ಅರಿವೂ ನಮಗಾಗುತ್ತದೆ.
‘ಪ್ರಾರಂಭವು ಸರಿಯಾದರೆ ಎಲ್ಲವೂ ಸರಿ’. ಮುಗುಳುನಗುವಿನೊಂದಿಗೆ ಯಾವುದೋ ಒಂದು ಲಘುವಾದ ಕಥೆಯೊಂದಿಗೋ, ಘಟನೆಯೊಂದಿಗೋ ಭಾಷಣ ಪ್ರಾರಂಭಿಸಿದರೆ ಒಳ್ಳೆಯದು.
ಪರಿಣಾಮಕಾರಿಯಾದ ಭಾಷಣಕಲೆಯಲ್ಲಿ ಯಾವುದೇ ಕಾಲುದಾರಿ ಇಲ್ಲವೇ ಇಲ್ಲ. ಬರಿಯ ರಹದಾರಿ! ನಾವು ಮೇಲಿಂದಮೇಲೆ ಭಾಷಣ ಕಲೆಯನ್ನು ರೂಢಿಸಿಕೊಳ್ಳುವುದೇ ನಮಗಿರುವ ದಾರಿ! ಅನೇಕ ಭಾಷಣಗಳಿಗೆ ಹೋಗಿ ಪ್ರೇಕ್ಷಕರಾಗಿ ಕುಳಿತು, ಭಾಷಣಕಾರರನ್ನು ವಿಶ್ಲೇಷಿಸಿದರೆ ಮಾತ್ರ ನಾವು ನಮ್ಮ ಭಾಷಣಗಳಿಗೆ ಉತ್ಸಾಹಿ ಸಭಿಕರನ್ನು ದೊರಕಿಸಿಕೊಂಡೇವು!

Leave a Reply