ಬೇವ ಬಿತ್ತಿ ಮಾವು ಬೇಡಿದರೆ ಹೇಗೆ?

ಬೇವ ಬಿತ್ತಿ ಮಾವು ಬೇಡಿದರೆ ಹೇಗೆ?
ಕೊರತೆ ಮಕ್ಕಳಲ್ಲಿ ಇಲ್ಲ. ಹಿರಿಯರಲ್ಲಿಯೇ ಇದೆ. ಮಕ್ಕಳು ಮೆತ್ತನೆಯ ಮಣ್ಣಿದ್ದಂತೆ. ನಾವು ಮೂರ್ತಿ ಮಾಡುವವರು ಎಚ್ಚರ ವಹಿಸಬೇಕು.

ಈಗಿನ ಈ ಗಡಿಬಿಡಿಯ ಜಗತ್ತಿನಲ್ಲಿ ಆಧುನಿಕ ಪೀಳಿಗೆಗೆ ಮಕ್ಕಳನ್ನು ಹೆರಲೂ ಸಮಯ ಸಾಲುತ್ತಿಲ್ಲ. ಹೆಣ್ಣು-ಗಂಡುಗಳಾದಿಯಾಗಿ ಎಲ್ಲರೂ ಹಣ, ಅಂತಸ್ತು, ಕರಿಯರ್, ಕೀರ್ತಿಗಳ ಹಿಂದೆ ಬೆಂಬತ್ತಿದವರು. ಈಗ ಹೆರಲೂ ಕೂಡ ಬಾಡಿಗೆ ತಾಯಂದಿರು ಸಿದ್ಧವಾಗಿದ್ದಾರೆ. ಬಾಡಿಗೆ ಗರ್ಭ, ಮಕ್ಕಳ ಆರೈಕೆಗೆ ದಾದಿಯರು, ನಂತರ ಶಾಲೆಗಳು, ವಸತಿ ಶಾಲೆಗಳು… ಮಕ್ಕಳಿಗೆ ಜೀವನವೆನ್ನುವುದು ಒಂದು ಕಾರಖಾನೆಯಲ್ಲಿಯ ಸಿದ್ಧವಸ್ತುಶಾಲೆಯಾದಂತಾಗಿದೆ!
ಈ ಪ್ರಕ್ರಿಯೆಯಲ್ಲಿ ಮೊದಲು ಪ್ರಾರಂಭವಾದದ್ದು ಹಿರಿಯರನ್ನು ಹಳ್ಳಿಗಳಲ್ಲಿ ಇರಲು ಬಿಟ್ಟು ನೌಕರಿಯ ಆಶೆಯಿಂದ ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುವುದು. ಹೀಗೆ ವಲಸಿಗರು ಕಡಿಮೆ ಶಿಕ್ಷಣವನ್ನು ಪಡೆದವರಾದ್ದರಿಂದ ಕಷ್ಟಪಟ್ಟು ಪುಟ್ಟ ಮನೆಗಳನ್ನು ಕಟ್ಟಿಕೊಂಡರು. ಅಲ್ಲಿಯೇ ನೆಲೆಸಿದರು. ಮಕ್ಕಳು ತಮ್ಮಂತೆ ದಿನಗೂಲಿಗಳಾಗಬಾರದು, ಒಳ್ಳೆಯ ವಿದ್ಯೆಯನ್ನು ಪಡೆದು ಮುಂದೆ ಬರಬೇಕೆಂಬ ಆಶೆಯಿಂದ ಮಕ್ಕಳನ್ನು ಒಳ್ಳೆಯ ಶಾಲೆಗಳಿಗೆ ಸೇರಿಸಿದರು. ಹಳ್ಳಿಗಳಲ್ಲಿ ಯಾವುದೇ ರೀತಿಯ ಆಕರ್ಷಣೆ ಅವರಿಗೆ ಉಳಿಯಲಿಲ್ಲ. ಹಿರಿಯರನ್ನು ತಮ್ಮಲ್ಲಿ ಇಟ್ಟುಕೊಂಡು ಹೊಟ್ಟೆಗೆ ಹಾಕುವಷ್ಟು ತಾಕತ್ತು ಕಡಿಮೆ ಹಾಗೂ ಪುಟ್ಟ ಮನೆಗಳಲ್ಲಿ ಇರಿಸಿಕೊಳ್ಳಲು ಸೌಲಭ್ಯ ಕೂಡ ಕಡಿಮೆ. ಮುಂದಿನ ಪೀಳಿಗೆಗೆ ಸಾಕಷ್ಟು ಸೌಲಭ್ಯಗಳಿದ್ದರೂ ತಮ್ಮ ತಂದೆ ತಾಯಿಯರನ್ನು ತಮ್ಮೊಂದಿಗೆ ಇರಿಸಿಕೊಳ್ಳುವ ಇಚ್ಛೆಯೂ ಇಲ್ಲವಾಯಿತು. ಅದಕ್ಕೆ ತಕ್ಕಂತೆ ವೃದ್ಧಾಶ್ರಮಗಳು ಅಸ್ತಿತ್ವಕ್ಕೆ ಬಂದವು.
ಹಿಂದಿನ ಕಾಲದಲ್ಲಿ ಕೂಡು ಕುಟುಂಬಗಳು ಸಾಮಾನ್ಯ ವಾಗಿರುತ್ತಿದ್ದವು. ಮಕ್ಕಳು ತಂದೆ ತಾಯಿಯರು ಹೊಲಗಳಲ್ಲಿ ಕೆಲಸಕ್ಕೆ ಹೋಗಿದ್ದರೂ ಅಜ್ಜ, ಅಜ್ಜಿ, ಕಾಕಾ, ಕಾಕು, ಅತ್ತೆ, ಅಕ್ಕ, ಅಣ್ಣ ಹೀಗೆ ಎಲ್ಲರ ಕಣ್ಣರಿಕೆಯಲ್ಲಿಯೇ ಬೆಳೆಯುತ್ತಿದ್ದರು. ಇದರಿಂದಾಗಿ ನಾವೆಲ್ಲರೂ ಒಂದು ಎಂಬ ಭಾವನೆಯ ಹುಟ್ಟು ಮನೆಯಿಂದಲೇ ಪ್ರಾರಂಭವಾಗುತ್ತಿತ್ತು. ಹೀಗೆ ಬೆಳೆದ ಮಕ್ಕಳಿಗೆ ಸಾಮಾಜಿಕ ಹೊಂದಾಣಿಕೆಯ ಶಿಕ್ಷಣಕ್ಕಾಗಿ ಪ್ರತ್ಯೇಕವಾಗಿ ನರ್ಸರಿಗೆ ಕಳಿಸುವ ಅಗತ್ಯವಿರಲಿಲ್ಲ. ಅಲ್ಲದೆ ಈ ರೀತಿ ಬೆಳೆದ ಮಕ್ಕಳಿಗೆ ಮುಂದೆ ಸಮಾಜದಲ್ಲಿ ಹೊಂದಿಕೊಳ್ಳುವುದಕ್ಕೂ ಕಷ್ಟವಾಗುತ್ತಿರಲಿಲ್ಲ. ಮಕ್ಕಳ ಪ್ರತಿಯೊಂದು ಚಟುವಟಿಕೆಯ ಮೇಲೂ ಹಿರಿಯರು ಕಣ್ಗಾವಲಾಗಿರುತ್ತಿದ್ದರು. ಹೀಗಾಗಿ ದಾರಿ ತಪ್ಪುವುದಕ್ಕೆ ಅವಕಾಶವೂ ಕಡಿಮೆಯಾಗಿರುತ್ತಿತ್ತು. ನಮ್ಮ ಐತಿಹಾಸಿಕ ಮಹಾಪುರುಷರ, ಪೌರಾಣಿಕ ಮಹಾವಿಭೂತಿಗಳ ಕತೆಗಳನ್ನು ಹೇಳುತ್ತ, ಸತ್ಯವಂತಿಕೆ, ತ್ಯಾಗ, ದೇಶಪ್ರೇಮ, ಪ್ರಾಮಾಣಿಕತೆಗಳ ಮಹತ್ವಗಳನ್ನು ಬಿಂಬಿಸುತ್ತಿದ್ದರು. ಮಕ್ಕಳನ್ನು ಉನ್ನತ ಮಟ್ಟದ ಧ್ಯೇಯಗಳಿಗಾಗಿ ಸಿದ್ಧಪಡಿಸುವ ಹೊಣೆ ಹಿರಿಯರದಾಗಿತ್ತು. ಮಕ್ಕಳಿಗೆ ಹಿರಿಯರಲ್ಲಿ ಗೌರವಾದರಗಳೂ ಕಿರಿಯರಲ್ಲಿ ಪ್ರೀತಿವಾತ್ಸಲ್ಯಗಳೂ ತಾವಾಗಿಯೇ ರಕ್ತಗತವಾಗಿ ಬಂದು ಬಿಡುತ್ತಿದ್ದವು. ಈ ರೀತಿಯಲ್ಲಿ ಮನೆಯ ಹಿರಿಯರು ಮಕ್ಕಳಿಗೆ ಆದರ್ಶವಾಗಿಬಿಡುತ್ತಿದ್ದರು.
ಈಗಿನ ಮಕ್ಕಳಿಗೆ ನೀತಿ ಪಾಠ ಹೇಳಿಕೊಡಬೇಕಾದ ಹಿರಿಯರು ವೃದ್ಧಾಶ್ರಮಗಳನ್ನು ಸೇರಿದ್ದಾರೆ ಅಥವಾ ಮೊಮಕ್ಕಳ ಮುಖ ನೋಡಲು ಕಾತರರಾಗಿ ಯಾವುದೋ ಕೊಂಪೆಯಲ್ಲಿ ದಿನಗಳೆಯುತ್ತಿದ್ದಾರೆ. ಅವರ ಆದರ್ಶಗಳು ಈಗ ಅವರ ಮಕ್ಕಳಿಗೆ ಗೊಡ್ಡು ನಂಬಿಕೆಗಳಾಗಿವೆ. ಬೇಬಿ ಸಿಟ್ಟಿಂಗುಗಳಲ್ಲಿಯೋ, ಬೋರ್ಡಿಂಗ್ ಶಾಲೆಗಳಲ್ಲಿಯೋ ಬೆಳೆಯುತ್ತಿರುವ ಮಕ್ಕಳಿಗೆ ನೀತಿಪಾಠವಾದರೂ ಎಲ್ಲಿಂದ ದೊರೆತೀತು? ಅವರಿಗೆ ಸರಿ ತಪ್ಪುಗಳ ಜ್ಞಾನವನ್ನು ಮಾಡಿಕೊಡುವವರಾದರೂ ಯಾರು? ಪಾಲಕರು ಕೇವಲ ಆರಾಮದಾಯಕ ಭೌತಿಕ ವಸ್ತುಗಳ ಪೂರೈಕೆಯೊಂದೇ ಮಕ್ಕಳ ಬೆಳವಣಿಗೆಗೆ ಪೂರಕ ಎಂದು ತಿಳಿದಿದ್ದಾರೆ. ಮಾನಸಿಕ ವಿಕಾಸವು ಇಂದಿನ ಪ್ರಗತಿಯ ಮಾನದಂಡದಲ್ಲಿ ಗೌಣ ಸ್ಥಾನವನ್ನು ಪಡೆದಿದೆ. ಅಲ್ಲದೆ ಪಾಲಕರು ತಾವು ತಮ್ಮ ಬಾಲ್ಯದ ದಿನಗಳಲ್ಲಿ ಪಡೆಯಲಾಗದ ಸೌಲಭ್ಯಗಳನ್ನು ಮಕ್ಕಳಿಗೆ ಒದಗಿಸುವುದೇ ಒಂದು ಮಹಾಸಾಧನೆ ಎಂದು ತಿಳಿದಿದ್ದಾರೆ. ಒಂದೋ ಎರಡೋ ಮಕ್ಕಳಿರುವ ಕುಟುಂಬಗಳು ಈಗಿನವು. ಆ ಮಕ್ಕಳಿಗೆ ಏನೂ ಶ್ರಮವಿಲ್ಲದೆ ಬಯಸಿದುದೆಲ್ಲ ದೊರೆಯುವುದರಿಂದ ವಸ್ತುಗಳನ್ನು ಪಡೆಯುವುದಕ್ಕೆ ಶ್ರಮ ಬೇಕಾಗುತ್ತದೆ ಎಂಬ ಸಣ್ಣ ವಿಷಯವೂ ಅರಿಯದಾಗಿದೆ.
ಎಲ್ಲವನ್ನೂ ವೈಜ್ಞಾನಿಕ ಹಿನ್ನೆಲೆಯಲ್ಲಿ ಒರೆಗೆ ಹಚ್ಚುವ ಬುದ್ಧಿಯಿಂದಾಗಿ ಹಾಗೂ ಸ್ವತಂತ್ರ ಆಲೋಚನಾ ಶಕ್ತಿಯ ಪರಿಣಾಮವಾಗಿ ಹಿಂದಿನ ಕಾಲದ ಆಚಾರ ವಿಚಾರಗಳನ್ನು, ನಂಬಿಕೆ, ಸಂಪ್ರದಾಯಗಳನ್ನು ಪ್ರಶ್ನಿಸುವ ಬುದ್ಧಿಯನ್ನು ಹುಟ್ಟು ಹಾಕಿದವರೇ ಈಗಿನ ಪಾಲಕರು ಎಂದೆನಿಸುತ್ತದೆ. ಅತ್ಯಾಚಾರ, ಕೊಲೆ, ಸುಲಿಗೆಗಳು ಇಂದಿನ ದಿನಗಳಲ್ಲಿ ಹೆಚ್ಚುತ್ತ ಹೋಗುತ್ತಿರುವುದನ್ನು ಗಮನಿಸಿದಾಗ ಮುಂದಿನ ಪೀಳಿಗೆಯು ದಾರಿ ತಪ್ಪುತ್ತಿರುವುದಕ್ಕೆ, ಅವರಲ್ಲಿಯ ನೈತಿಕ ಮೌಲ್ಯಗಳ ಕುಸಿತಕ್ಕೆ ಪರೋಕ್ಷವಾಗಿ ಇಂದಿನ ಪಾಲಕರೇ ಕಾರಣವೇನೋ ಎನ್ನಿಸುತ್ತದೆ.
ಇದಕ್ಕೆ ಪರಿಹಾರವಾಗಿ ಈಗ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಕಲಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಬದುಕುವ ಕಲೆಯನ್ನು ಕಲಿಸಬೇಕಾಗಿದೆ. ಜಗತ್ತಿನಲ್ಲಿಯ ಎಲ್ಲ ವಸ್ತುಗಳೂ ತನಗಾಗಿಯೇ ನಿರ್ಮಿತವಾಗಿವೆ ಎಂಬ ಭಾವನೆಯು ಮಕ್ಕಳಲ್ಲಿ ಬೆಳೆಯದಂತೆ ಕಾಳಜಿ ವಹಿಸಬೇಕಾಗಿದೆ. ತ್ಯಾಗ ಸಹನೆಗಳ ಪಾಠವನ್ನು ಕಲಿಸಬೇಕಾಗಿದೆ. ಶಾಲೆಗಳು ಕೇವಲ ಅಂಕಗಳಿಸುವ ಕಾರಖಾನೆಗಳೆಂದೆನಿಸದೆ ಸಂಸ್ಕಾರ, ನೈತಿಕ ಮೌಲ್ಯಗಳನ್ನು ಕಲಿಸುವ ಕೆಲಸವೂ ಪಾಲಕರು ಹಾಗೂ ಶಿಕ್ಷಕರಿಂದ ನಡೆಯಬೇಕಾಗಿದೆ.
ಇತ್ತೀಚೆಗೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಬಾಲಾಪರಾಧಗಳಿಗೆ ಕೂಡ ಒಳ್ಳೆಯ ಸಂಸ್ಕಾರದ ಕೊರತೆಯೇ ಮುಖ್ಯ ಕಾರಣವಾಗಿದೆ. ಇಂಥ ವಿಕೃತ ಮನಸ್ಸುಗಳ ಹಿಂದಿರುವ ಕಾರಣಗಳನ್ನು ಕಂಡು ಹಿಡಿದು ಅವುಗಳನ್ನು ನಿವಾರಿಸುವ ಕಾರ್ಯವೂ ಕೂಡ ಪಾಲಕ ಹಾಗೂ ಶಿಕ್ಷಕರ ಮುಖೇನ ಆಗಬೇಕಾಗಿದೆ. ಅಪರಾಧಿಗಳ ಬಗ್ಗೆ ಸಮಾಜವು ಯಾವ ರೀತಿಯಿಂದ ವರ್ತಿಸುತ್ತದೆ, ಹಾಗೂ ಸಂಸ್ಕಾರ ವಂತ ಯುವಜನರನ್ನು ಯಾವ ರೀತಿಯಲ್ಲಿ ಗೌರವಿಸುತ್ತದೆ ಎಂಬ ಬಗ್ಗೆ ಕಣ್ತೆರೆಸುವ ಪ್ರಯತ್ನ ಇಂದು ಮಾಧ್ಯಮಗಳಿಂದಲೂ ನಡೆಯಬೇಕಾಗಿದೆ. ಇದರಿಂದಾಗಿ ಯುವಜನರಿಗೆ ತಮ್ಮನ್ನು ಸಮಾಜದಲ್ಲಿ ಗುರುತಿಸಿಕೊಳ್ಳಲು ಒಂದು ಸಕಾರಾತ್ಮಕ ನಿಲುವನ್ನು ಬೆಳೆಸಿಕೊಳ್ಳಲು ಅವಕಾಶವನ್ನು ಇತ್ತಂತಾಗುತ್ತದೆ.

ಮಾಲತಿ ಮುದಕವಿ.

Leave a Reply