ಕೊರೋನಾ ಸಮಯದಲ್ಲಿ ವೈದ್ಯನಿಗೆ ತಾಯಿ ಬರೆದ ಪತ್ರ

ಕೊರೋನಾ ಸಮಯದಲ್ಲಿ ವೈದ್ಯನಿಗೆ ತಾಯಿ ಬರೆದ ಪತ್ರ

ಪ್ರೀತಿಯ ಮಗನಿಗೆ,

ನಿನ್ನ ತಾಯಿಯ ಶುಭಾಶಯಗಳು.

ಇಲ್ಲಿ ಎಲ್ಲವೂ ಕುಶಲ. ನಿನಗೆ ಪತ್ರ ಬರೆಯಲು ಕಾರಣವೆಂದರೆ ನೀನು ದೂರದಲ್ಲಿರುವಿ. ನನಗೆ ನಿನ್ನದೇ ಕಾಳಜಿಯಾಗಿದೆ. ಹುಡುಗರು, ಸೊಸೆ ಹೆಂಗಿದ್ದಾರೆ?

ನೀನು ಡಾಕ್ಟರ್. ಈ ಕೋರ್ಸಿಗೆ ಸೇರಿಕೊಳ್ಳುವಾಗಲೇ ಡೆಡಿಕೇಶನ್ ದಿಂದ ಯಾವದ ಭೇದಭಾವ ಮಾಡಲಾರದ ರೋಗಿಗಳ ಸೇವಾ ಮಾಡತೇನಿ ಅಂತ ವಚನ ಕೊಟ್ಟಿರತೀರಿ. ಅದಕ್ಕ ಬದ್ಧ ಆಗಿರಬೇಕಾಗತದ. ಅದೆಲ್ಲಾ ಸರಿ. ಆದರ ಈ ಕೊರೋನಾದಂಥಾ ಜಡ್ಡು ಸುರೂ ಆದೂವಂದ್ರ ನೀವು ಭಾಳ ಎಚ್ಚರಿಕೀ ವಹಿಸಬೇಕಾಗತದ. ನಾ ಡಾಕ್ಟರ್.. ನನಗ ಹೇಳತೀಯಲಾ ಆರೋಗ್ಯ ಸೂತ್ರೋ! ಅಂತ ನೀ ಅನಭೌದು. ನಾನೂ ಡಾಕ್ಟರ್ ಅವ್ವಾ! ಅಂದಮ್ಯಾಲ ಆಧಾ ಡಾಕ್ಟರ್ ಅಲ್ಲೇನಪಾ? ಈ ಕೊರೋನಾದ ಬಗ್ಗೆ ಹೇಳಬೇಕಂದ್ರ

ಬಡವ ಬಲ್ಲಿದ ಭೇದವಿಲ್ಲದೆ ಈ ಜಗದಲ್ಲಿ ನಮ್ಮನ್ನು ಪ್ರೀತಿಯಿಂದ ಅಪ್ಪುವುದೆಂದರೆ ಈ ಕೊರೋನಾ ಒಂದೇ ಎಂಬಂತಾಗಿದೆ. ಮೊದಲು ಎಲ್ಲಿಯೋ ಚೈನಾದ ವುಹಾನ್ ಎಂಬಲ್ಲಿ ಹುಟ್ಟಿದ ಈ ವೈರಾಣು ಅಲ್ಲಿಯ ಜೀವಗಳ ಮೇಲೆ ಏಕಾಏಕಿ ಹಲ್ಲೆ ಮಾಡಿದೆ, ಲಕ್ಷಾಂತರ ಸಂಖ್ಯೆಯಲ್ಲಿ ಜನ ಸಾಯುತ್ತಿದ್ದಾರೆ.. ಅವರೆಲ್ಲ ಹರಿದಾಡುವವುಗಳನ್ನೆಲ್ಲ ತಿನ್ನುವವರು.. ರೊಟ್ಟಿ, ಪಲ್ಯ, ಹಾಲು, ಮೊಸರು, ತುಪ್ಪ, ತರಕಾರಿ ತಿನ್ನುವ ನಮಗೆಲ್ಲ ಬಾರದು ಎಂದು ನಿಶ್ಚಿಂತೆಯಿಂದ ಇದ್ದಾಗ ಅದು ದೆಹಲಿ ಏರ್ಪೋರ್ಟ‍ಗೆ  ಬಂದಿಳಿದಿತ್ತು. ಆಗಲೂ ನಮಗೆ ಭಯವಿರಲಿಲ್ಲ… ದೂರದ ಅಮೇರಿಕಾ, ಇಟಲಿ ಎಲ್ಲೆಡೆಗೂ ಮಾರಣಹೋಮ ನಡೆದಿತ್ತು… ನಂತರ ನಮ್ಮ ದೇಶವನ್ನು ವ್ಯಾಪಿಸುತ್ತಲೇ ನಡೆದ ಅದು ಈಗ ವಿಶ್ವಮೇಧ ಯಾಗ ಮಾಡುತ್ತಲಿದೆ. ನಾ ತಿಳಕೊಂಡಷ್ಟು ಇದರ ಬಗ್ಗೆ ಹೇಳತೇನಿ…

ಈ ಕೊರೋನಾ ಎಂದರೇನು? ಇದೊಂದು ವೈರಾಣು.

ಇದು ನಮ್ಮ ದೇಹವನ್ನು ಸೇರಿಕೊಂಡ ನಂತರ ತನ್ನ ದಾಳಿಯನ್ನು ಪ್ರಾರಂಭ ಮಾಡುವುದು ಎರಡು ಮೂರು ದಿನಗಳ ನಂತರವೇ. ಇದರ ಲಕ್ಷಣಗಳೆಂದರೆ ಸಾಮಾನ್ಯ ಶೀತ. ನಂತರ ಮೂಗು ಸೋರುವಿಕೆ. ಗಂಟಲಿನ ಊತ. ಕೆಮ್ಮು, ತಲೆನೋವು, ಅತ್ಯಂತ ಹೆಚ್ಚಿನ ಜ್ವರ.

ಇನ್ನೂ ಈ ರೋಗಕಕ್ಕೆ ಔಷಧಿ ಅಥವಾ ವ್ಯಾಕ್ಸಿನ್ ಕಂಡು ಹಿಡಿಯಲಾಗಿಲ್ಲ. ಆದ್ದರಿಂದ ಅದು ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದೇ ನಮ್ಮ ಮುಂದಿರುವ  ಇರುವ ಏಕೈಕ ಮಾರ್ಗ.

ನಮ್ಮ ದೇಹವು ಪ್ರತಿನಿತ್ಯ ಕರೋನಾದಂತಹ ವೈರಸ್ಸುಗಳೊಡನೆ, ಅನೇಕ ರೀತಿಯ ಬ್ಯಾಕ್ಟೀರಿಯಾಗಳೊಡನೆ, ಇನ್ನೂ ಅನೇಕ ರೋಗಾಣು ಜೀವಿಗಳೊಂದಿಗೆ ಹೋರಾಡುತ್ತಲೇ ಇರುತ್ತದೆ. ಆದರೂ ಈ ರೋಗಾಣುಗಳು ನಮ್ಮ ದೇಹದಲ್ಲಿ ಬೆಳೆಯುತ್ತಲೇ ದೇಹದ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತಲೇ ಇರುತ್ತವೆ.

ಆದ್ದರಿಂದ ಈ ರೋಗವನ್ನು ತಡೆಗಟ್ಟಬಹುದಾದ ಒಂದೇ ಒಂದು ಉಪಾಯವೆಂದರೆ ನಮ್ಮ ರೋಗ  ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದು. ಆದರೆ ನಾವು ಈ ರೋಗನಿರೋಧಕ ಶಕ್ತಿಯನ್ನು ಆಗಿಂದಾಗಲೇ ಪಡೆಯಲು ಸಾಧ್ಯವಿಲ್ಲ. ದೇಹವನ್ನು ಅದಕ್ಕಾಗಿ ಸಿದ್ಧಗೊಳಿಸಬೇಕಾಗುತ್ತದೆ.

*ದೇಹಕ್ಕೆ ವ್ಯಾಯಾಮ, ಯೋಗ, ಪ್ರಾಣಾಯಾಮಗಳ ಅಗತ್ಯವಿದೆ.

*ಅದರ ಜೊತೆಗೆ ಸಮತೋಲ ಆಹಾರವೂ ಬೇಕು. ವಿಟಮಿನ್ ಸಿ, ಬಿಗಳು ಹೇರಳವಾಗಿ ಬೇಕು. ಹಾಗೆಂದು ಟ್ಯಾಬ್ಲೆಟ್ ಮೊರೆ ಹೋಗಬೇಕಿಲ್ಲ. ಹಾಲು, ಹಣ್ಣು, ತರಕಾರಿಗಳಲ್ಲಿ ಸಾಕಷ್ಟು ಪೌಷ್ಟಿಕ ಅಂಶಗಳಿವೆ. ತಾಜಾ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯವಿರಲಿ. ಪರಿಸರಕ್ಕೆ ತಕ್ಕ ಆಹಾರಶೈಲಿ ಇರಲಿ. ಆಹಾರ ಸೇವನೆಯಲ್ಲಿ ಸಮಯದ ಪಾಲನೆಯಿರಲಿ.

ಬೆಟ್ಟದ ನೆಲ್ಲಿ ಕಾಯಿ, ಲಿಂಬೆಹಣ್ಣಿನ ಪಾನಕ, ದ್ರಾಕ್ಷಿ, ಮೋಸಂಬಿ, ನೇರಳೆ,ಹುಳಿಮಾವಿನಕಾಯಿಇವುಗಳನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಬಹುದು.

ಈ ಎಲ್ಲ ಮಾಹಿತಿಗಳನ್ನು ತಿಳಿದುಕೊಂಡು ಅಕ್ಷರಸ್ಥರಾದವರು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ನಮ್ಮನ್ನು ಮತ್ತು ನಮ್ಮ ಸುತ್ತಲಿನ ಇತರರನ್ನು ರಕ್ಷಿಸಬೇಕು.

 

ಕೊರೋನಾ  ಹರಡುವುದನ್ನು ತಡೆಗಟ್ಟಲು ಪಾಲಿಸಬೇಕಾದ ಅಂಶಗಳು:

* ಆಗಾಗ್ಗೆ ನಮ್ಮ ಕೈಗಳನ್ನು ತೊಳೆದುಕೊಳ್ಳಬೇಕು.  ಸೋಪು ಮತ್ತು ನೀರನ್ನು ಅಥವಾ ಆಲ್ಕೋಹಾಲ್-ಆಧಾರಿತ ಹ್ಯಾಂಡ್ ರಬ್‍ಅನ್ನು ಬಳಸಬೇಕು.

*ಯಾರಾದರೂ ಕೆಮ್ಮುತ್ತಿದ್ದರೆ ಅಥವಾ ಸೀನುತ್ತಿದ್ದರೆ ಅವರಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಲೇಬೇಕು. ಕೆಮ್ಮು, ಶೀನು ಅಥವಾ ಶೌಚಾಲಯ ಬಳಸಿದ ಬಳಿಕ 20 ಸೆಕೆಂಡು ಕಾಲ ಸಾಬೂನು ಹಾಕಿ ಕೈಗಳನ್ನು ತೊಳೆಯಬೇಕು.

*ನಮ್ಮ ಕಣ್ಣುಗಳು, ಮೂಗು ಅಥವಾ ಬಾಯಿಯನ್ನು ವಿನಾಕಾರಣವಾಗಿ ಸ್ಪರ್ಶಿಸಬಾರದು.

ನಾವು ಕೆಮ್ಮುವಾಗ ಅಥವಾ ಸೀನುವಾಗ ನಮ್ಮ ಮೂಗು ಮತ್ತು ಬಾಯಿಯನ್ನು ನಮ್ಮ ಮಡಿಚಿದ ಮೊಣಕೈಯಿಂದ ಅಥವಾ ಟಿಶ್ಯೂನಿಂದ ಮುಚ್ಚಿಕೊಳ್ಳಬೇಕು. ಅಥವಾ ನಮ್ಮ ತೊಟ್ಟ ಬಟ್ಟೆಯಲ್ಲಿ ಮುಖ ಹುದುಗಿಸಿ ಕೆಮ್ಮಬೇಕು. ಕೆಮ್ಮುವಾಗ ಮತ್ತು ಸೀನುವಾಗ ಉತ್ಪತ್ತಿಯಾಗುವ ಉಸಿರಾಟದ ಹನಿಗಳ ಮೂಲಕ ಸೋಂಕು ಸಾಮಾನ್ಯವಾಗಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.     ಒಂದು ವೇಳೆ ನಮಗೆ ಅನಾರೋಗ್ಯದ ಭಾವನೆ ಅಂದರೆ ಆರೋಗ್ಯ ಕಿರಿಕಿರಿ  ಎನಿಸಿದಲ್ಲಿ ಮನೆಯಲ್ಲಿಯೇ ಇರಬೇಕು. ಆದಷ್ಟು ಇತರರಿಂದ ದೂರ ಇರಬೇಕು. ಸೆಲ್ಫ್ ಕ್ವಾರಂಟೈನ್‍ನಲ್ಲಿ ಇರಬೇಕು.

ದಿನನಿತ್ಯ ಸೂರ್ಯನ ಕಿರಣಗಳಿಗೆ ಮೈ ಒಡ್ಡಿ ವಿಟಮಿನ್ ಡಿ ಸಿಗುವಂತೆ ನೋಡಿಕೊಳ್ಳಬೇಕು.    ಮಧುಮೇಹ ರೋಗಿಗಳು  ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಪರೀಕ್ಷಿಸುತ್ತಲಿರಬೇಕು. ಸಮಯಕ್ಕೆ ಸರಿಯಾಗಿ ನಿದ್ದೆಯನ್ನು ಮಾಡಬೇಕು. ರೋಗಕ್ಕೆ ಹೆದರದೆ, ಊಟ, ತಿಂಡಿ ಮಾಡಿ ಮತ್ತು ಔಷಧಿಗಳನ್ನು ತೆಗೆದುಕೊಂಡು ಧೈರ್ಯದಿಂದ ಇರಬೇಕು.

ವೈರಸ್ ಇರುವವರು ಮತ್ತು ಅವರನ್ನು ಆರೈಕೆ ಮಾಡುವವರು ಮಾಸ್ಕನ್ನು ಧರಿಸಬೇಕಾಗುತ್ತದೆ. ಇದು ಸಾಮಾನ್ಯ ಜನರಿಗೆ ಅಲ್ಲ.

ಇದಕ್ಕೆ ಯಾವುದೇ ಲಸಿಕೆ ಅಥವಾ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ.  ರೋಗಲಕ್ಷಣಗಳನ್ನು ಅರಿತು ಚಿಕಿತ್ಸೆಯೆಂದರೆ ಮುಖ್ಯವಾಗಿ ಪ್ರತ್ಯೇಕತೆ ಮತ್ತು ಪ್ರಾಯೋಗಿಕ ಕ್ರಮಗಳು.

ಒಂದು ವೇಳೆ ಜ್ವರದ ಜೊತೆಗೆ ಕೆಮ್ಮು ಅಥವಾ ಉಸಿರಾಟದಲ್ಲಿ ತೊಂದರೆ ಇದ್ದರೆ, ತಕ್ಷಣ ವೈದ್ಯಕೀಯ ಸಹಾಯ ಪಡೆದುಕೊಳ್ಳಬೇಕು.  ಭೇಟಿಗೆ ಮುಂಚಿತವಾಗಿ ವೈದ್ಯರಿಗೆ ಕರೆ ಮಾಡುವದು ಸೂಕ್ತ.

ಸಣ್ಣ ಪುಟ್ಟ ಕಾಯಿಲೆಗಳು ಕಾಡಿದರೆ ವೈದ್ಯಕೀಯ ಕೇಂದ್ರಗಳಿಗೆ ಅನಗತ್ಯ ಭೇಟಿಗಳನ್ನು ತಪ್ಪಿಸಬೇಕು.

*ಈಗ ಕಾಡುತ್ತಿರುವಂತಹ ಕೊರೋನಾ ಸೋಂಕು ಗರ್ಭಿಣಿಯರಲ್ಲಿ ಮತ್ತಷ್ಟು ಭೀತಿ ಉಂಟು ಮಾಡಿದೆ. ಇದರಿಂದ ಗರ್ಭದಲ್ಲಿರುವ ಮಗುವಿಗೆ  ಹಾನಿ ಆಗುತ್ತದೆಯೋ ಏನೋ ಎನ್ನುವ ಭೀತಿಯು ಗರ್ಭಿಣಿಯರಲ್ಲಿದೆ. ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ಪ್ರತಿರಕ್ಷಕ ಮತ್ತು ಶಾರೀರಿಕ ಬದಲಾವಣೆಗಳು ಯಾವಾಗಲೂ ಕಂಡುಬರುವ ಹಿನ್ನೆಲೆಯಲ್ಲಿ ಅವರು ಈ ಕೊರೋನಾದಂತಹ ಶ್ವಾಸಕೋಶದ ವೈರಲ್ ನಂತಹ ಸೋಂಕಿಗೆ ತುತ್ತಾಗುವಂತಹ ಸಾಧ್ಯತೆಯು ಹೆಚ್ಚಾಗಿರುವುದೆಂದು ವೈದ್ಯರು ಹೇಳುತ್ತಾರೆ. ಅಲ್ಲದೆ ಗರ್ಭಿಣಿಯರಿಂದ ಮಗುವಿಗೆ ಸೋಂಕು ತಗುಲಬಹುದಾಗಿದೆ. ಆದರೂ ಗರ್ಭದಲ್ಲಿರುವಂತಹ ಮಗುವಿಗೆ ಕೊರೋನಾ ಸೋಂಕು ತಗುಲಿರುವಂತಹ ಸಾಧ್ಯತೆಯು ಇದುವರೆಗೆ ಕಂಡುಬಂದಿಲ್ಲ ಮತ್ತು ಶಿಶುವಿನಲ್ಲಿ ಪಾಸಿಟಿವ್ ಕೂಡ ಕಂಡುಬಂದಿಲ್ಲ. ಈ ಸೋಂಕು ಇರುವ ತಾಯಿಯ  ಸ್ತನಪಾನದಿಂದಲೂ ಹರಡಿರುವ ಸುದ್ದಿ ಬಂದಿಲ್ಲ. ಆದರೂ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಈ ರೋಗಲಕ್ಷಣಗಳ ಆಕ್ರಮಣದ ಅವಧಿಯು ಸಾಮಾನ್ಯವಾಗಿ ಎರಡರಿಂದ ೧೪ ದಿನಗಳ ನಡುವೆ ಇರುತ್ತದೆ, ಸರಾಸರಿ ಐದು ದಿನಗಳು. ರೋಗನಿರ್ಣಯದ ಪ್ರಮಾಣಿತ ವಿಧಾನವೆಂದರೆ ಗಂಟಲುದ್ರವ ಪರೀಕ್ಷೆ ಹಾಗೂ ಮೂಗಿನ ದ್ರವದ ಪರೀಕ್ಷೆ.  ಇದರಿಂದ ರೋಗಲಕ್ಷಣಗಳು, ಅಲ್ಲಿ ಕಂಡು ಬರುವ ಅಪಾಯಕಾರಿ ಅಂಶಗಳು ಪತ್ತೆಯಾಗುತ್ತವೆ. ನ್ಯುಮೋನಿಯಾದ ಲಕ್ಷಣಗಳನ್ನು ಎದೆಯ CT ಸ್ಕ್ಯಾನ್‌ನಿಂದಲೂ  ಕಂಡುಹಿಡಿಯಬಹುದು.

ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗಾಗಿ ಕೇಂದ್ರ ಸರ್ಕಾರದ ಕೆಲವು ಸಲಹೆಗಳೂ ಇಲ್ಲಿವೆ.

60 ವರ್ಷ ಮೇಲ್ಪಟ್ಟ ವೃದ್ಧರು, ಅದರಲ್ಲಿಯೂ ಅಸ್ತಮಾ, ಸಿಒಪಿಡಿ, ಶ್ವಾಸಕೋಶ, ಹೃದಯಸಂಬಂಧಿ ರೋಗಗಳು, ಕ್ಷಯ, ಕಾಮಾಲೆ, ಮೂತ್ರಪಿಂಡ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮೊದಲಾದ ರೋಗ ಇರುವ ಹಿರಿಯ ನಾಗರಿಕರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಸಲಹೆ ನೀಡಿದೆ.

*ಹಿರಿಯ ನಾಗರಿಕರು ಮನೆಯಲ್ಲಿಯೇ ಇರಬೇಕು.

*ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

*ಮನೆಯಿಂದ ಹೊರಗೆ ಹೋದಾಗ ಕನಿಷ್ಟ ಒಂದು ಮೀಟರ್ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು.

*ಸಭೆ ಅಥವಾ ಗುಂಪುಗಳಲ್ಲಿ ಭಾಗವಹಿಸಬಾರದು. ಮನೆಯಲ್ಲೇ ಚಟುವಟಿಕೆಯಿಂದ ಇರಬೇಕು.

*ಲಘು ವ್ಯಾಯಾಮ ಹಾಗೂ ಯೋಗ ಮಾಡಬೇಕು.

*ಊಟಕ್ಕೆ ಮೊದಲು ಮತ್ತು ಶೌಚಾಲಯ ಬಳಸಿದ ನಂತರ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ಸ್ವಚ್ಛಗೊಳಿಸಬೇಕು.

*ಸೀನುವಾಗ ಮತ್ತು ಕೆಮ್ಮುವಾಗ ಕರವಸ್ತ್ರ ಅಥವಾ ಟಿಶ್ಯೂ ಕಾಗದವನ್ನು ಬಳಸಬೇಕು. ಪೌಷ್ಠಿಕಾಂಶ ಮತ್ತು ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸಲು ತಾಜಾ ಹೆಚ್ಚು ಮತ್ತು ತರಕಾರಿ ರಸವನ್ನು ಸೇವಿಸಬೇಕು.

ಒಟ್ಟಿನಲ್ಲಿ ರೋಗ ಬಂದನಂತರ ಪರದಾಡುವುದಕ್ಕಿಂತ ಅದು ಬಾರದಂತೆ ತಡೆಗಟ್ಟುವುದೇ ಒಳ್ಳೆಯದಲ್ಲವೆ? ಇದು ನಿನ್ನ ರೋಗಿಗಳ ಬಗ್ಗೆ ಆಯ್ತು. ನಿನ್ನ ಕಾಳಜೀನೂ ಮಾಡಬೇಕಲಾ… ಯಾಕಂದ್ರೆ ವೈದ್ಯೋ ನಾರಾಯಣೋ ಹರಿಃ ಅಂತ ಹೇಳತಾರ. ನೀವಂದ್ರ ರೋಗಿಗಳಿಗೆ ಸಾಕ್ಷಾತ್ ಶ್ರೀಮನ್ನಾರಾಯಣನ! ರಕ್ಷಕರು ನೀವು.

ಈಗ ವಿಷಯಕ್ಕ ಬರತೇನಿ. ನೀ ಎಲ್ಲಾ ರೋಗಿಗಳನ್ನ ಮುಟ್ಟಿ ತಪಾಸ ಮಾಡಬೇಕಾಗತದ. ನೀ ಮೂರ ಫೂಟ ದೂರ ನಿಂತ್ರ ಹೆಂಗ ನಡದೀತು? ಅದಕ್ಕನ ಪ್ರತಿಯೊಬ್ಬ ರೋಗಿನ್ನ ತಪಾಸ ಮಾಡಿದಾಗೊಮ್ಮೆ ಡೆಟ್ಟಾಲ್ ನೀರಾಗ ಕೈ ತೊಳಕೋ. ನಿಂದನ ಒಂದ ಟಾವೆಲ್ ಬ್ಯಾರೆ ಇಟಗೋ. ರೋಗಿಗಳನ್ನ ತಪಾಸ ಮಾಡೋವಾಗ ಮಾಸ್ಕ್ ಕಂಪಲ್ಸರಿ ಹಾಕ್ಕೋ. ದವಾಖಾನೀಯೊಳಗನ ಚಹಾ ಗಿಹಾ ತರಿಸಿ ಕುಡೀಬ್ಯಾಡಾ. ಮನಿಂದನ ಚಹಾ ತೊಗೊಂಬಾ, ಥರ್ಮಾಸನ್ಯಾಗ. ಅದನ ಕುಡೀ. ಅದೂ ಸ್ವಚ್ಛ ಆಗಿ ಕೈತ್ವಳಕ್ವಂಡೂ! ನಗಬ್ಯಾಡಾ!

ಹೊತ್ತಹೊತ್ತಿಗೆ ಮನೀ ಊಟಾ ಕಂಪಲ್ಸರಿ. ಮನೀಗ ಹೋದಕೂಡ್ಲೇ ಬೇಕಾದಷ್ಟು ಹೊತ್ಯಾಗಿದ್ರೂ ಮೊದಲ ಸ್ನಾನಾ ಮಾಡೇ ಹುಡುಗೂರ್ನ ಮುಟ್ಟು.

ಮತ್ತೇನ ಹೇಳ್ಲಿ? ಹಾಂ. ಇನ್ನೊಂದು ಮಾತು. ದೇವರನ್ನ ಪೂಜೀ ಮಾಡೋದು ನಮ್ಮ ಮನಸಿನ ಸಮಾಧಾನಕ್ಕ. ಶಾಂತಿಗೆ. ದೇವರು ನಮಗೇನ ಕೊಡೂದೂ ಇಲ್ಲಾ, ನಮ್ಮಿಂದ ಏನೂ ಬಯಸಂಗೂ ಇಲ್ಲಾ.. ಆದರೂ ದೇವರ ನಮಗ ಬೇಕು. ಪಾಪಾ ಪುಣ್ಯಾದ ಲಕ್ಷ್ಮಣ ರೇಖಾ ಅಂವಾ.

ಕಾಳಜೀ ತೊಗೋ.

ಎಲ್ಲಾರಿಗೂ ಆಶೀರ್ವಾದ.

ಮಾಲತಿ ಮುದಕವಿ.

Leave a Reply