ಜಯವಿಜಯರೆಂಬ ಸೋದರರು ದ್ವಾರಪಾಲಕರಾದರು

ಜಯವಿಜಯರೆಂಬ ಸೋದರರು ದ್ವಾರಪಾಲಕರಾದರು

ಕನಕದಾಸರು ಉಡುಪಿಯ ಶ್ರೀಕೃಷ್ಣನನ್ನು ತಮ್ಮ ಕಡೆಗೆ ತಿರುಗಿಸಿಕೊಂಡದ್ದು, ಗೋಡೆಯಲ್ಲೊಂದು ಕಿಂಡಿ ಮೂಡಿ ಕೃಷ್ಣ ದರ್ಶನ ನೀಡಿದ್ದು ಜನಜನಿತ. ಹೊರಗಡೆ ನಿಂತು ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ ಎಂದು ಕನಕದಾಸ ಹಾಡಿದ್ದೂ ಮನೆಮಾತು.
ಈ ಭಕ್ತಿಗೀತೆಯಲ್ಲೇ ಬರುವ ಮತ್ತೊಂದು ಸಾಲು ನಿಮಗೆ ನೆನಪಿರಬಹುದು; ಕರಿರಾಜ ಕಷ್ಟದಲಿ ಆದಿಮೂಲ ಎಂದು ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೆ ಇಂಥ ಪದಗಳನ್ನು ಹಾಡುವವರಿಗೂ ಕೇಳುವವರಿಗೂ ಕರಿರಾಜನಿಗೆ ಬಂದ ಕಷ್ಟವೇನು? ಅವನ ಕಷ್ಟಕ್ಕೆ ಆದಿಮೂಲ ಬಂದು ಒದಗಿದ್ದಾದರೂ ಹೇಗೆ ಅನ್ನುವುದು ತಿಳಿಯದೇ ಹೋದರೆ ಹಾಡು ಪೂರ್ತಿಯಾಗಿ ಅರ್ಥವಾಗುವುದಿಲ್ಲ.
ಈ ಗಜೇಂದ್ರ ಮೋಕ್ಷದ ಕತೆಯ ಸುತ್ತ ಎರಡು ಶಾಪದ ಪ್ರಸಂಗಗಳಿವೆ. ಎರಡೂ ಕತೆಗಳೂ ಅಷ್ಟೇ ವಿಚಿತ್ರವಾಗಿವೆ. ಒಂದಕ್ಕೊಂದು ಸಂಬಂಧ ಇಲ್ಲದೇ ಹೋದರೂ ಎರಡರ ಸನ್ನಿವೇಶಗಳೂ ಬಹುತೇಕ ಒಂದೇ.
ಮೊದಲ ಕತೆ;
ಇಂದ್ರದ್ಯುಮ್ನ ಎಂಬವನು ಪಾಂಡ್ಯದೇಶದ ರಾಜ. ಮಹಾ ವಿಷ್ಣುಭಕ್ತ. ವಿಷ್ಣುವಿನ ಧ್ಯಾನದಲ್ಲಿ ಎಷ್ಟು ತಲ್ಲೀನನಾಗಿರುತ್ತಿದ್ದ ಎಂದರೆ ಒಮ್ಮೆ ತನ್ನಲ್ಲಿಗೆ ಬಂದ ಅಗಸ್ತ್ಯ ಮಹರ್ಷಿಯನ್ನು ಈಗ ಗಮನಿಸುವುದೇ ಇಲ್ಲ. ಈ ಋಷಿಗಳದೊಂದು ಗೋಳು. ಅವರು ಅಪಾಯಿಂಟಿಲ್ಲದೇ ಬರುವವರು. ಬಂದೊಡನೆ ಒಳಗೆ ಕರೆದು ಆತಿಥ್ಯ ನೀಡದಿದ್ದರೆ ಸಿಟ್ಟಾಗುವವರು. ದೂರ್ವಾಸರು ಇದಕ್ಕೆ ಹೆಸರುವಾಸಿಯಾದರೂ ಅಗಸ್ತ್ಯರ ಸಿಟ್ಟೇನೂ ಕಡಿಮೆಯಲ್ಲ. ಅಗಸ್ತ್ಯರು ಆನೆಯಂತೆ ಕಣ್ಮುಚ್ಚಿಕೊಂಡು ಅಲ್ಲಾಡದೇ ಕುಳಿತಿದ್ದ ಇಂದ್ರದ್ಯುಮ್ನನನ್ನು ಗಜಜನ್ಮ ಪಡೆಯುವಂತೆ ಶಪಿಸುತ್ತಾರೆ.
ಮುಂದೆ ಈ ಗಜೇಂದ್ರ ಒಂದು ಕೊಳದಲ್ಲಿ ನೀರು ಕುಡಿಯುತ್ತಿದ್ದಾಗ ಮೊಸಳೆಯೊಂದು ಬಂದ ಈತನ ಕಾಲು ಹಿಡಿದುಕೊಳ್ಳುತ್ತದೆ. ಆಗ ವಿಷ್ಣುವಿನಲ್ಲಿ ಮೊರೆಯಿಡುವ ಗಜೇಂದ್ರ ತನ್ನ ಪೂರ್ವಜನ್ಮ ಸಂಸ್ಕಾರದಿಂದ ವಿಷ್ಣುವಿನ ಮೊರೆಹೋಗುತ್ತಾನೆ. ವಿಷ್ಣು ಪ್ರತ್ಯಕ್ಷನಾಗಿ ಮೊಸಳೆಯನ್ನು ಒಂದು ಗಜೇಂದ್ರನನ್ನು ರಕ್ಷಿಸುತ್ತಾನೆ.
ಮತ್ತೊಂದು ಕತೆ;
ಕರ್ದನು ಬ್ರಹ್ಮನ ಸಂದರ್ಶನ ಮಾತ್ರದಿಂದಲೇ ತೃಣಬಿಂದು ಪುತ್ರಿಯಾದ ದೇವಹೂತಿಗೆ ಅವಳಿ ಮಕ್ಕಳಾಗುತ್ತವೆ. ಅವರ ಹೆಸರು ಜಯ-ವಿಜಯ. ಇವರಿಬ್ಬರ ತಮ್ಮ ಕಪಿಲ ಮುನಿ. ಈ ಜಯವಿಜಯರು ವಿಷ್ಣು ಭಕ್ತಿ ಸಂಪನ್ನರು. ಇಂದ್ರಿಯಗಳನ್ನು ಜಯಿಸಿದವರು ಎಂಬ ಹೆಗ್ಗಳಿಕೆಯೂ ಇವರಿಗಿತ್ತು. ಅದಕ್ಕೆ ಸಂಬಂಧಿಸಿದ ಕತೆಗಳೂ ಇವೆ. ಅವೆಲ್ಲ ಇಲ್ಲಿ ಅನಗತ್ಯ. ಪ್ರತಿದಿನ ಪೂಜಾ ಸಮಯಕ್ಕೆ ಭಗವಂತ ಇವರಿಗೆ ದರ್ಶನ ನೀಡುತ್ತಿದ್ದನಂತೆ.
ಒಮ್ಮೆ ಇವರಿಬ್ಬರೂ ಮರುತ್ತರಾಜನ ಯಕ್ಷಕ್ಕೆ ಹೋದರು. ಯಜ್ಞಬ್ರಹ್ಮನಾಗಿ ಜಯ ಕುಳಿತಿದ್ದ. ಯಾಗದ ಪ್ರಧಾನ ಋತ್ವಿಜನಾಗಿ ವಿಜಯನಿದ್ದ. ಇವರು ಯಜ್ಞವನ್ನು ನಿರ್ವಹಿಸಿದ ಚಾತುರ್ಯಕ್ಕೆ ಎಲ್ಲರೂ ಬೆರಗಾದರು. ಮರುತ್ತ ಇವರಿಗೆ ವಿಪುಲ ಸಂಪತ್ತನ್ನು ನೀಡುತ್ತಾನೆ.
ಆಶ್ರಮಕ್ಕೆ ಹಿಂತಿರುಗುವ ಹಾದಿಯಲ್ಲಿ ಆ ಸಂಪತ್ತನ್ನು ಹೇಗೆ ಹಂಚಿಕೊಳ್ಳಬೇಕು ಎಂಬ ವಿಚಾರದಲ್ಲಿ ಇಬ್ಬರಿಗೂ ಜಗಳವಾಗುತ್ತದೆ. ಇಬ್ಬರು ಸಮಪಾಲು ಮಾಡಿಕೊಳ್ಳಬೇಕು ಎಂದು ಜಯನೂ, ಅವರವರ ಸಂಪಾದನೆ ಅವರದು ಎಂದು ವಿಜಯನೂ ಕಿತ್ತಾಡುತ್ತಾರೆ. ಈ ಜಗಳದಲ್ಲಿ ಸಿಟ್ಟು ಬಂದು ಜಯ ನೀನು ಮಹಾಜಿಪುಣ, ಮೊಸಳೆಯಾಗು’ ಎಂದು ಶಾಪ ಕೊಡುತ್ತಾನೆ. ವಿಜಯನೂ ಸಿಟ್ಟು ಹತ್ತಿ `ನೀನು ಮದೋನ್ಮತ್ತ, ಆನೆಯಾಗು’ ಎಂದು ಶಾಪ ಕೊಡುತ್ತಾನೆ. ಈಗಿನ ಮಕ್ಕಳೂ ಸಿಟ್ಟಲ್ಲಿ ಕತ್ತೆ, ಕೋತಿ, ಗೂಬೆ ಎಂದು ಬೈದುಕೊಳ್ಳುವುದು ಸದ್ಯ, ಕಾರ್ಯರೂಪಕ್ಕೆ ಬರುವುದಿಲ್ಲ.
ಇಬ್ಬರೂ ಶಾಪಗ್ರಸ್ತರಾದರು. ವಿಷ್ಣುವಿನ ಮುಂದೆ ಪೂಜಾ ಸಮಯದಲ್ಲಿ ತಮ್ಮ ತಪ್ಪೊಪ್ಪಿಕೊಂಡರು. ವಿಷ್ಣು ನಾನು ನಿಮಗೆ ಕೆಲಕಾಲ ನಂತರ ಬಿಡುಗಡೆ ನೀಡುವೆ ಎಂದು ಭರವಸೆ ಕೊಟ್ಟ.
ಇದಾಗಿ ಎಷ್ಟೋ ಕಾಲದ ನಂತರ ಆನೆಯಾಗಿದ್ದ ಜಯ ನೀರು ಕುಡಿಯಲು ಗಂಡಕಿ ನದಿಗೆ ಇಳಿದಾಗ ಅಲ್ಲಿ ಮೊಸಳೆಯಾಗಿದ್ದ ವಿಜಯ ಆತನನ್ನು ಹಿಡಿಯುತ್ತಾನೆ. ಜಯ ವಿಷ್ಣುವಿನ ಮೊರೆ ಹೋಗುತ್ತಾನೆ. ವಿಷ್ಣು ಅಲ್ಲಿಗೆ ಬಂದು ಸುದರ್ಶನ ಚಕ್ರದಿಂದ ಇಬ್ಬರೂ ಸಾಯುತ್ತಾರೆ. ವಿಷ್ಣು ಅವರಿಗೆ ಸಾರೂಪ್ಯಮುಕ್ತಿಯನ್ನು ಅನುಗ್ರಹಿಸಿ ತನ್ನ ದ್ವಾರಪಾಲಕರನ್ನಾಗಿ ಮಾಡಿಕೊಳ್ಳುತ್ತಾನೆ. ಇಬ್ಬರೂ ಅದೇ ಹೆಸರಿನಿಂದ ವೈಕುಂಠಕ್ಕೆ ಸೇರುತ್ತಾರೆ. ವಿಷ್ಣು ಕಾಲಿಟ್ಟ ಜಾಗ ಎಂಬ ಕಾರಣಕ್ಕೆ ಗಂಡಕೀ ನದಿಗೆ ಹರಿಕ್ಷೇತ್ರ ಎಂಬ ಹೆಸರು ಬಂತು. ವಿಷ್ಣುವಿನ ಸುದರ್ಶನ ಚಕ್ರ ನೀರಿನಲ್ಲಿ ತಿರುಗಿದಾಗ ಅಲ್ಲಿದ್ದ ಶಿಲೆಗಳ ಮೇಲೆ ಚಕ್ರದ ಗುರುತುಗಳು ಮೂಡಿದುವಂತೆ. ಅದನ್ನೇ ವೈಷ್ಣವರು ಸಾಲಿಗ್ರಾಮ ಎಂದು ಪೂಜಿಸುತ್ತಾರೆ.
ಮುಂದೆ ಇದೇ ಜಯವಿಜಯರು ಮತ್ತೊಮ್ಮೆ ಸನಕಾದಿ ಮುನಿಗಳನ್ನು ಅಡ್ಡಗಟ್ಟಿ ಮತ್ತೊಮ್ಮೆ ಶಾಪಗ್ರಸ್ತರಾಗಿ ಮೂರು ರಾಕ್ಷಸಜನ್ಮ ಎತ್ತಿದ್ದು ಮತ್ತೊಂದು ಕತೆ.

Leave a Reply