ಹೆಳವನಕಟ್ಟೆ ಗಿರಿಯಮ್ಮ

ಹೆಳವನಕಟ್ಟೆ ಗಿರಿಯಮ್ಮ

“ಅತ್ತೀ, ಮನ್ಯಾಗ ಅಡಿಗೀ ಮಾಡ್ಲಿಕ್ಕೆ ಉರಿಗಟಗೀ ಮುಗದಾವ… ಅಡಿಗೀ ಹ್ಯಾಂಗ ಮಾಡ್ಲಿ…”
“ಅಳುಕುತ್ತ ಕೇಳಿದ್ದಳು ಸೊಸೀ..
ತೂಗುಮಂಚದ ಮೇಲೆ ಕುಳಿತು ಸರ ಸರಿಗೆಗಳನ್ನು ನೆಟ್ಟಗೆ ಮಾಡಿಕೊಳ್ಳುತ್ತಿದ್ದ ಅತ್ತೆ ಸೊಸೆಯನ್ನು ದುರುದುರು ನೋಡಿ ಹೇಳಿದ್ದಳು..
“ಮೂರ ಹೊತ್ತೂ ಆ ನಿನ್ನ ರಂಗನ್ನ ನೆನಕೋತ ಕೂತರಾತೇನು? ಇವತ್ತು ನಿನ್ನ ಕಾಲ ಹಚ್ಚಿ ಅಡಿಗೀ ಮಾಡೂ… ಆ ನಿನ್ನ ರಂಗನಾಥ ಬಂದು ಉಳಸತಾನೇನು ನೋಡತೇನಿ!”
ಸೊಸೆ ಅತ್ತೆಯ ಆಜ್ಞೆಯನ್ನು ಪಾಲಿಸಿದ್ದಳು. ಕಾಲನ್ನು ಒಲೆಯಲ್ಲಿ ನೀಡಿ ಅಡುಗೆ ಪೂರೈಸಿದ್ದಳು! ಅತ್ತೆಗೆ ಆಶ್ಚರ್ಯ, ಪತಿಗೆ ಖೇದವಾಗಿತ್ತು… ಸೊಸೆಯ ಕಾಲು ಮಾತ್ರ ರಂಗನಾಥ ಸ್ವಾಮಿಯ ದಯೆಯಿಂದ ಏನೂ ಆಗಿರಲಿಲ್ಲ…
ಇದು ಗಿರಿಯಮ್ಮನ ಕಥೆ. ಅಂದಿನ ವಿಧೇಯ ಸೊಸೆ. ಅಂದಿನ ಟಫ್ ಅಂದರೆ ಕಠಿಣ ಅತ್ತೆ!
ಹನ್ನೆರಡನೆಯ ಶತಮಾನದಿಂದ ಕರ್ನಾಟಕದಲ್ಲಿ ಪ್ರಾರಂಭವಾದ ಭಕ್ತಿ ಪಂಥ ಜನರ ಮನಸ್ಸಿನಲ್ಲಿ ಅಪಾರವಾದ ಪರಿಣಾಮವನ್ನು ಬೀರಿತ್ತು. ಅಂತೆಯೇ ಶರಣ ಸಾಹಿತ್ಯ ಮತ್ತು ದಾಸ ಸಾಹಿತ್ಯ ಜನರ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ.  ಅನೇಕ ಶರಣರು, ದಾಸರು ಕರ್ನಾಟಕದ ಮನೆ ಮಾತಾಗಿದ್ದಾರೆ.  ಅಂತಹ ಭಕ್ತಿ ಪಂಥದಲ್ಲಿ ಸುಮಾರು ೨೦೦ ವರ್ಷಗಳಿಗೂ ಹಿಂದೆ ಕರ್ನಾಟಕದ ಮಧ್ಯ ಭಾಗದಲ್ಲಿರುವ ಇಂದಿನ ದಾವಣಗೆರೆ ಜಿಲ್ಲೆಯಲ್ಲಿ ಹುಟ್ಟಿ, ಬಾಳಿ ತನ್ನ ಭಕ್ತಿಯಿಂದ ದೇವರನ್ನು ಒಲಿಸಿಕೊಂಡು, ಅನೇಕ ಕೀರ್ತನೆಗಳನ್ನು ದಾಸ ಸಾಹಿತ್ಯದ ಶೈಲಿಯಲ್ಲಿ ರಚಿಸಿ, ನೊಂದ ಜನರ ಬಾಳಿಗೆ ಬೆಳಕಾದ ಹೆಳವನಕಟ್ಟೆ ಗಿರಿಯಮ್ಮ, ಕರ್ನಾಟಕದ ಸಂಸ್ಕೃತಿಯಲ್ಲಿ ಚಿರಪರಿಚಿತವಾದ ಹೆಸರು.
ಮಹಿಳೆಯರನ್ನು ಕಡೆಗಣಿಸುತ್ತಲೇ ಬಂದಿರುವ ಈ ಸಮಾಜದಲ್ಲಿ ಎಷ್ಟು ತುಳಿದರೂ ಮತ್ತೆ ಮತ್ತೆ ಫೀನಿಕ್ಸ್‍ನಂತೆ ಪ್ರತಿಕೂಲ ಪರಿಸ್ಥಿತಿಯಲ್ಲೂ ಪುಟಿದೆದ್ದು ಬರುವ ವ್ಯಕ್ತಿತ್ವ ಹೊಂದಿದ ಮಹಿಳಾ ಚೇತನಗಳಿಗೇನೂ ಕಡಿಮೆ ಇಲ್ಲ. ಶರಣ ಸಾಹಿತ್ಯದಲ್ಲಿ ಅಕ್ಕ ಮಹಾದೇವಿಯಂತೇಯೇ ದಾಸ ಸಾಹಿತ್ಯದಲ್ಲಿ ತನ್ನ ಭಕ್ರಿಯಿಂದ, ಕೀರ್ತನೆಗಳಿಂದ ಹೆಸರಾದ ಪ್ರಥಮ ಮಹಿಳೆ ಹೆಳವನಕಟ್ಟೆ ಗಿರಿಯಮ್ಮ.  ಸುಮಾರು ಎಪ್ಪತ್ತಕ್ಕೂ ಹೆಚ್ಚು ಸರಳ, ಸುಂದರ ಭಕ್ತಿ ಭಾವವನ್ನು ಹೊಮ್ಮಿಸುವ ಕೀರ್ತನೆಗಳಲ್ಲದೆ, ಏಳು ವಿಶೇಷ ಕಾವ್ಯಗಳನ್ನು ರಚಿಸಿದ್ದು, ಅವುಗಳೆಲ್ಲ ಆ ಪ್ರದೇಶದ ಜನರ ನಾಲಿಗೆಯಲ್ಲಿ ಕಳೆದ ಇನ್ನೂರು ವರ್ಷಗಳಿಂದ ನಲಿದಾಡುತ್ತಿವೆ.
ಮದುವೆಯಾಗಿದ್ದರೂ ಸಾಂಸಾರಿಕ ಜೀವನದಿಂದ ಹೊರತಾಗಿ, ದೇವರ ಸೇವೆ ಮತ್ತು ನೊಂದ ಜನರ ಸೇವೆಯೇ ತನ್ನ ಜೀವಿತದ ಪರಮೋದ್ದೇಶವಾಗಿ ಕಂಡ ಹೆಳವನ ಕಟ್ಟೆ ಗಿರಿಯಮ್ಮನ ಬದುಕು ಮತ್ತು ಸಾಧನೆ ಅವಿಸ್ಮರಣೀಯ.
ಚಿಕ್ಕಂದಿನಿಂದಲೂ ಗಿರಿಯಮ್ಮ ಸ್ತೋತ್ರಪಾಠಗಳಲ್ಲಿ, ಪೂಜಾಕಾರ್ಯಕ್ಕೆ ನೆರವಾಗುವದರಲ್ಲಿ ಜಾಣೆಯಾಗಿದ್ದಳು. ಇವಳಿಗೆ ೪ ವರ್ಷ ವಯಸ್ಸಾದಾಗ ತಾಯಿ ತೀರಿಕೊಂಡರು. ತಾಯಿಯ ಹಿಂದೆಯೆ ತಂದೆ ಸಹ ಗತಿಸಿದರು. ಗಿರಿಯಮ್ಮ ಚಿಕ್ಕಮ್ಮ, ಚಿಕ್ಕಪ್ಪರ ವಾತ್ಸಲ್ಯದ ಆಶ್ರಯದಲ್ಲಿ ಬೆಳೆದಳು. ಬೆಳೆಯುತ್ತಿದ್ದಂತೆ ಗಿರಿಯಮ್ಮ ದೇವರ ಹಾಡುಗಳನ್ನು ಹಾಡುತ್ತ ನರ್ತಿಸುವದರಲ್ಲಿ ಪರವಶಳಾಗತೊಡಗಿದಳು.
ಆ ಕಾಲದ ಸಂಪ್ರದಾಯದಂತೆ ಗಿರಿಯಮ್ಮನ ಮದುವೆ ಬಾಲ್ಯದಲ್ಲೆ, ಮಲೇಬೆನ್ನೂರಿನ ಶ್ಯಾನುಭೋಗರಾದ ಕೃಷ್ಣಪ್ಪನವರ ಮಗ ತಿಪ್ಪರಸನೊಡನೆ ಜರುಗಿತು. ಗಿರಿಯಮ್ಮನ ಮನಸ್ಸು ರಂಗನಾಥಸ್ವಾಮಿಯಲ್ಲಿಯೆ ನಿಂತುಹೋಗಿತ್ತು. ಅವಳು ಲೌಕಿಕ ಸಂಸಾರ ವಿಮುಖಳಾಗಿದ್ದಳು. ಅವಳ ಪತಿ ತಿಪ್ಪರಸ ಅವಳ ಮನಸ್ಸನ್ನು ಅರಿತಿದ್ದರಿಂದ ಅವಳಿಗೆ ವಿರೋಧವಾಗಿ ನಡೆಯಲಿಲ್ಲ. ಆದರೆ ಅತ್ತೆಯ ಕಾಟ ದಿನೇ ದಿನೇ ಹೆಚ್ಚಾಗತೊಡಗಿತು. ಕೊನೆಗೊಮ್ಮೆ ಗಿರಿಯಮ್ಮನೆ ಸ್ವತಃ ತಿಪ್ಪರಸನಿಗೆ ಕನ್ಯೆ ಹುಡುಕಿ ಎರಡನೆಯ ಮದುವೆ ಮಾಡಿಸಿದಳು.
ಗಿರಿಯಮ್ಮನ ಸಾಧನೆ ಮುಂದುವರಿಯುತ್ತಿದ್ದಂತೆ ಹೆಳವನಕಟ್ಟೆಗೆ ರಂಗನಾಥಸ್ವಾಮಿಯ ದರ್ಶನಕ್ಕೆ ಬರುತ್ತಿದ್ದವರು ಈಕೆಯ ಭಕ್ತರಾಗತೊಡಗಿದರು. ಗಿರಿಯಮ್ಮನ ಕರುಣೆಯಿಂದ ಅನೇಕ ಜನರಿಗೆ ರೋಗನಿವಾರಣೆ ಮೊದಲಾದ ಪರಿಹಾರ ದೊರೆಯತೊಡಗಿದವು.
ಮೊದಲೊಮ್ಮೆ ಉಡುಪಿಗೆ ಹೋಗುತ್ತಿದ್ದಾಗ ದರ್ಶನವಿತ್ತ ಗೋಪಾಲದಾಸರು ಮತೊಮ್ಮೆ ಅದೇ ಮಾರ್ಗವಾಗಿ ಉಡುಪಿಗೆ ಹೋಗುತ್ತಿರುವಾಗ ಗಿರಿಯಮ್ಮನಿಗೆ ಬಾಲಗೋಪಾಲನ ವಿಗ್ರಹ ನೀಡಿ ಆಶೀರ್ವದಿಸಿದರು. “ಹೆಳವನಕಟ್ಟೆ ರಂಗ”ನ ಅಂಕಿತದಲ್ಲಿ ದೇವರ ನಾಮಗಳನ್ನು ರಚಿಸಲು ಸೂಚಿಸಿದರು.
ಗಿರಿಯಮ್ಮನ ಮಹಿಳಾ ಕಳಕಳಿಯ ಬಗ್ಗೆ ಒಂದೆರಡು ಮಾತು ಹೇಳದೆಹೋದರೆ ತಪ್ಪಾಗುತ್ತದೆ.
ಇವರ “ಮಳೆಯ ದಯಮಾಡೋ ರಂಗಾ” ಕೀರ್ತನೆ ಯಲ್ಲಿ
ಧಗೆಯಾಗಿ ದ್ರವಗುಂದಿ ಇರುವ ಬಾವಿಯ ನೀರ
ಮೊಗೆ ಮೊಗೆದು ಪಾತ್ರೆಯಲಿ ನಾರಿಯರು
ಹಗಲೆಲ್ಲ ತರುತಿಹರು ಯೋಚನೆಯ ಮಾಡುತ್ತ
ಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ
ಎಂದು ಹೇಳುತ್ತಾರೆ.
ಇಲ್ಲಿ ಮಳೆಯಿಲ್ಲದೆ ಆದಂಥ ತೊಂದರೆ, ಹಾಹಾಕಾರಗಳ ಜೊತೆಗೆ ಸ್ತ್ರೀಯರು ಪಡುವ ತೊಂದರೆಯನ್ನು ವರ್ಣನೆ ಮಾಡುವ ಪರಿ ನೋಡಿರಿ. ಮಳೆಯಿಲ್ಲದೆ ನೀರಿರದ ಬಾವಿಯಲಿ ಪಾತ್ರೆಗಳಲ್ಲಿ ಮೊಗೆಮೊಗೆದು ನೀರು ತೆಗೆದು ಕೊಡವನ್ನು ತುಂಬಿಸುತ್ತಿದ್ದಾರೆ. ವರ್ತಿ ಅಂತ ಹಳ್ಳ, ಬಾವಿಗಳಲ್ಲಿ ಈ ರೀತಿ ನೀರು ತೆಗೆಯುವ ಪದ್ಧತಿ ಆಗಿನ ಕಾಲದಲ್ಲಿ ಇತ್ತು.. ಇದೀಗ ಮಾಯವಾಗಿ ನಲ್ಲಿಗಳು ಗೊಟಗೊಟ ಅಂತಿವೆ!
ಹೆಳವನಕಟ್ಟೆ ಗಿರಿಯಮ್ಮನ ನಿವೇದನೆಯಿದು. ಸ್ತ್ರೀ ಸಹಜ ಭಾವಗಳಾದ ಮಮತೆ, ಪ್ರೀತಿ, ಆರ್ತಭಾವ, ದೀನತೆ, ನಿವೇದನೆ ಮತ್ತು ಆತ್ಮಸಮರ್ಪಣೆ ಎಲ್ಲಾ ಮಹಿಳಾ ಹರಿದಾಸರ ಸಾಹಿತ್ಯದ ಪ್ರಧಾನ ಅಂಶ. ಮಮತೆ, ವಾತ್ಸಲ್ಯದ ಮಧುರ ಭಕ್ತಿಯಿಂದ ಆರಂಭವಾಗುವ ಕೀರ್ತನೆಗಳು ನಂತರ ಪಕ್ವಗೊಂಡ ಮನಸ್ಸಿನಿಂದ, ಆತ್ಮನಿವೇದನೆಯನ್ನು ಮಾಡಿಕೊಂಡ ಕೀರ್ತನೆಗಳನ್ನೂ ನೋಡಬಹುದು. ಅನಾದಿಕಾಲದಿಂದಲೂ ಸ್ತ್ರೀ ಹಾಗೂ ಅವಳ ಸಂವೇದನೆಗಳು ಉಪೇಕ್ಷೆಗೆ ಒಳಗಾದವುಗಳು. ದೇಹ, ಮನಸ್ಸು, ಸ್ವಂತಿಕೆ ಹಾಗೂ ಸಂವೇದನೆಗಳನ್ನೂ ಪುರುಷ ಪ್ರಧಾನ ಸಮಾಜದೆದುರು ಅದುಮಿಟ್ಟುಕೊಂಡೇ ಬದುಕುವ ಯತ್ನ ಸ್ತ್ರೀಯರದ್ದಾಗಿತ್ತು. ಉಪೇಕ್ಷೆಯನ್ನೂ ಕಡೆಗಣಿಸಿಕೊಂಡು ಸ್ತ್ರೀ ಶೋಷಣೆಯನ್ನು ಸಮರ್ಥವಾಗಿ, ಸಾತ್ವಿಕತೆಯಿಂದ ಎದುರಿಸಿದ ಧೀರೆಯರು ಈ ಮಹಿಳಾ ಹರಿದಾಸರು. ಕುಹಕ, ವಿರೋಧದ ನಡುವೆಯೂ ಸಾಮಾನ್ಯರಿಗೆ ಅತೀ ಎನ್ನಿಸುವ ವಿರಕ್ತ ಜೀವನವನ್ನು ಅಪ್ಪಿಕೊಂಡು ನೂರಾರು ಕೀರ್ತನೆಗಳಲ್ಲಿ ಹರಿಭಕ್ತಿಯನ್ನು, ತಮ್ಮ ಅಂತರಂಗದ ಬವಣೆಗಳನ್ನೂ ತೋಡಿಕೊಂಡಿದ್ದಾರೆ.
ತಮ್ಮ ಚಿಗುರು ದೇಹಕ್ಕೆ ಸಮಾಜ, ಧರ್ಮ, ಸಂಪ್ರದಾಯದ ಹೆಸರಿನಲ್ಲಿ ತಾವೇ ಬೆಂಕಿಯ ಕೊಳ್ಳಿ ಹಚ್ಚಿಕೊಂಡವರು. ಅರಳುವ ಮುನ್ನವೇ ಬಾಡಿಹೋದ ಬದುಕುಗಳು. ಹೀಗೆ ಮುರುಟಿಹೋಗುತ್ತಿದ್ದ ಜೀವಗಳಿಗೆ ಸಂಜೀವಿನಿಯಾಗಿ ದೊರೆಕಿದ್ದು ಹರಿದಾಸ್ಯ. ಹರಿಯ ಆರಾಧನೆ ಅವರಲ್ಲಿ ನೆಮ್ಮದಿ ಮೂಡಿಸಿತೋ ಏನೋ? ಕೆಲವರಿಗೆ ತಂದೆಯಂತೆ ಹರಿ ಕಂಡರೆ ಅವನನ್ನು ಪೂಜಿಸಿದರು, ಸಖನೆಂದುಕೊಂಡು ಅವನೊಂದಿಗೆ ಹರಟಿ ವಾಗ್ವಾದ ನಡೆಸಿದರು, ಅವನೊಂದಿಗೆ ಹಾಡಿ ಕುಣಿದರು, ಜೋಕಾಲಿಯಾಡಿದರು, ವಾಸ್ತವಕ್ಕೆ ಇಳಿದಾಗ ಅವನ ಹೆಗಲಿಗೆ ತಲೆಯಿಟ್ಟು ರೋದಿಸಿದರು. ಮಾತೃ ಹೃದಯದ ಇವರಿಗೆ ಬೆಣ್ಣೆಕಳ್ಳ ಕೃಷ್ಣ ಮಗುವಾಗಿ ಕಂಡಾಗ ಅವನಿಗಾಗಿ ಜೋಗುಳ ಹಾಡಿದರು ತೊಟ್ಟಿಲು ತೂಗಿದರು ಈ ಮಾತೆಯರು. ಹೀಗಾಗಿ ಅವರ ಕೀರ್ತನ ಪ್ರಪಂಚದ ತುಂಬ ಹರಿ, ಹರಿ, ಹರಿ. ಒಟ್ಟಿನಲ್ಲಿ ಅವರ ಭಾವಪ್ರಪಂಚದಲ್ಲಿ ಹರಿ ದೊರೆಯಾದರೆ ಅವರು ರಾಣಿಯರಾದರು, ಸಖಿಯಾದರು, ದಾಸಿಯಾದರು ಮತ್ತು ಮಮತೆಯ ಮಾತೆಯರೂ ಆಗಿಹೋದರು. ಹರಿಯೊಂದಿಗಿರುವಾಗ ಬಾಹ್ಯ ಪ್ರಪಂಚದ ಕೊಂಕು, ಟೀಕೆಗಳು ಮುಟ್ಟಲೇ ಇಲ್ಲ. ಮುಟ್ಟಿದರೂ ಅದು ಬಾಡಿದ ದೇಹಕ್ಕಷ್ಟೇ ಹೊರತು ಹರಿಯಿಂದ ತುಂಬಿಹೊದ ಮನಸ್ಸಿಗಲ್ಲ.
ಆರಂಭದಲ್ಲಿ ಈ ಸಂತಮಹಿಳೆಯರು ಹೆಚ್ಚು ಗಮನವಿತ್ತಿದ್ದು ಹರಿಯ ಒಂದು ಅವತಾರವಾದ ಮುರಲೀಮನೋಹರ ಶ್ರೀಕೃಷ್ಣನ ಲೀಲೆಗಳಿಗೆ. ನಿಜ, ಅಂತಹ ಚುಂಬಕ ವ್ಯಕ್ತಿತ್ವ ಗಿರಿಧಾರಿಯದು. ಹುಟ್ಟಿನಿಂದ ತೊಡಗಿ ತನ್ನ ನಿರ್ವಾಣದವರೆಗೂ ವಿವಾದ, ಕುತೂಹಲದ ಕೇಂದ್ರವಾಗಿದ್ದ.  ವಿಶ್ವದ ಎಲ್ಲಾ ನಿಗೂಢತೆಯನ್ನು ತನ್ನೊಡಲಲ್ಲಿರಿಸಿಕೊಂಡ ವಾಸುದೇವಕೃಷ್ಣ ಈ ನೊಂದ ಸಾಧ್ವಿಯರಿಗೆ ಪರಮಾಪ್ತನಾದ.  ಹೆಚ್ಚಿನ ಮಹಿಳಾ ಹರಿದಾಸರ ಕೀರ್ತನೆಗಳಲ್ಲಿ ಶ್ರೀಕೃಷ್ಣನ ಅಲಂಕಾರ, ಬಾಲಲೀಲೆಗಳು, ತನ್ನನ್ನು ನಂಬಿದವರನ್ನು ಕೃಷ್ಣ ಕಾಪಾಡುತ್ತಿದ್ದ ಪರಿ ಅಲ್ಲದೆ ಹರಿಯ ದಶಾವತಾರಗಳ ವರ್ಣನೆಯನ್ನು ಮಾಡಿದ್ದಾರೆ.

ಮನದ ಚಿಂತೆಯಬಿಡಿಸೊ ಮಾಧವಾ ಮುಕಂದ ಹರಿ
ದನುಜಾರಿದಯಾವಾರಿಧಿ
ಅನುದಿನದಿ ನಿಮ್ಮ ಚರಣವ ನಂಬಿದವರಿಗಿಂಥ
ಬಿನುಗುದುರಿತಗಳು ಬಾಧಿಸುವುದ್ಯಾತಕೊ ಸ್ವಾಮಿ

ಸಣ್ಣ ವಯಸ್ಸಿನ ಮಹಿಳಾ ಹರಿದಾಸರು ಪ್ರಪಂಚದ ಜೀವವಿರೋಧಿ ನೀತಿಗೆ ನೊಂದು “ಯಾಕೆನಗೆ ವೈರಾಗ್ಯ ಪುಟ್ಟಲಿಲ್ಲವೋ ದೇವಾ” ಎಂದು ಪ್ರಶ್ನಿಸಿಕೊಂಡು  “ಅಸಾರವಾದ ಸಂಸಾರದಿಂದ ಪಾರು ಮಾಡುವುದೆಂದಿಗೋ ರಂಗಯ್ಯ” ಎಂದು ಗೋಗರೆಯುವುದನ್ನು ಕಾಣಬಹುದು. ನಿಜ, ಪ್ರಕೃತಿ ಧರ್ಮವನ್ನು ಅರ್ಥೈಸಿಕೊಳ್ಳದೆ ಮನುಷ್ಯ ತನ್ನ ಹಿಡಿತದಲ್ಲಿರುವ ಪ್ರತಿಯೊಂದರ ಮೇಲೂ ಹಕ್ಕು ಚಲಾಯಿಸಿ ಜೀವವಿರೋಧಿಯಾಗುತ್ತಾನೆ. ಇಂಥದ್ದನ್ನು ಮಹಿಳಾ ಹರಿದಾಸರು ನಿವೇದನೆಯ ಮೂಲಕ ವಿರೋದಿಸಿದರು. ಹೀಗೆ ಉಪದೇಶ, ಲೋಕನೀತಿಯ ಬೋಧನೆ, ಕೃಷ್ಣ ಲೀಲಾ ವರ್ಣನೆಗಳ ಕೀರ್ತನೆಗಳಲ್ಲದೇ ಕಥನಾತ್ಮಕಗಳೊಂದಿಗೆ, ದೀರ್ಘವಾದ ಕೀರ್ತನೆಗಳನ್ನೂ ಮಹಿಳಾ ಸಾಹಿತ್ಯದಲ್ಲಿ ಕಾಣಬಹುದು.

ಪುರಂದರದಾಸ, ಕನಕದಾಸರ ಕೀರ್ತನಸಾಹಿತ್ಯದಲ್ಲಿ ಕಂಡುಬರುವ ಜೀವನಾನುಭವ, ಲೋಕಾನುಭವದ ಕೊರತೆ ಮಹಿಳಾ ಹರಿದಾಸಸಾಹಿತ್ಯದಲ್ಲಿ ಕಂಡುಬಂದರೂ ಅದಕ್ಕೆ ಕಾರಣಗಳಿವೆ. ಸಾಮಾಜಿಕ ಕಟ್ಟುಪಾಡುಗಳಿಂದ ಬಂಧಿತರಾದ ಈ ಸಂತಮಹಿಳೆಯರಿಗೆ ಮನೆಯೇ ಬೃಂದಾವನವಾಗಿತ್ತು. ಹೊಸ್ತಿಲು ದಾಟಿದರೆ ಸಿಗುವ ಲೋಕಾನುಭವ ಇವರಿಗಾಗುವುದೇ ಇಲ್ಲ. ಆಳವಾದ ಶಾಸ್ತ್ರಜ್ಞಾನ, ವೇದಾಂತದ ಛಾಯೆಯು ಅಷ್ಟಾಗಿ ಕಾಣದಿದ್ದರೂ ಮಾನಸಿಕ ಉನ್ನತಿಯನ್ನು ಸಾಧಿಸಿದ್ದನ್ನು ಗುರುತಿಸಬಹುದು.

ಈ ಮಹಿಳಾ ಹರಿದಾಸರದು ನಿಜಕ್ಕೂ ಅಳಿಲಸೇವೆ. ಖಂಡಿತ ಕಡೆಗಣಿಸುವಂತಿಲ್ಲ. ಎಲ್ಲದಕ್ಕಿಂತಲೂ ಹೆಚ್ಚಾಗಿ ಈ ಮಹಿಳೆಯರು ಯಾರ ಬೆಂಬಲವಿಲ್ಲದೆ ತಮ್ಮದೇ ಆದ ರೀತಿಯಲ್ಲಿ ಸಮಾಜವನ್ನು ಎದುರಿಸಿದವರು. ಸಮಾಜದ ಹರಿತ ಕುಡುಗೋಲಿಗೆ ತಮ್ಮ ಬದುಕು ಬಲಿಯಾಗಿದ್ದರೂ, ಸಮಾಜಕ್ಕೆ ತಿರುಗಿ ಕೀರ್ತನೆಗಳ ಹೂ ಮಳೆಯನ್ನು ನೀಡಿದ್ದಾರೆ. ಈ ಎಲ್ಲಾ ಮಹಿಳಾ ಹರಿದಾಸರದು ನಿವೇದನಾ ಕಾವ್ಯ. ಒಬ್ಬೊಬ್ಬರ ಬದುಕು ಒಂದೊಂದು ಕಾವ್ಯ. ಅವರವರ ಕಾವ್ಯದಲ್ಲಿ ಅವರೇ ನಾಯಕಿಯರು, ನಾಯಕ ಮಾತ್ರ ಅವನೊಬ್ಬ ಮಾಂತ್ರಿಕ, ಶ್ರೀಕೃಷ್ಣ. ಈ ಲೋಕನಾಯಕ ತನ್ನನ್ನು ನಂಬಿದ, ಆರಾಧಿಸಿದ ನಾಯಕಿಯರನ್ನು ವಿಠಲ, ಪಾಂಡುರಂಗ, ರಂಗ, ಮಾಧವ, ಶ್ರೀನಿವಾಸ ಹೀಗೆ ಸಹಸ್ರ ಹೆಸರುಗಳಿಂದ ಬಿಡದೇ ಸಂತೈಸಿದ. ಎಷ್ಟೆಂದರೂ ಹರಿ ಜಗನ್ನಾಥನಲ್ಲವೇ?

ಪಾರಿಜಾತ’ ಸತ್ಯಭಾಮೆಯ ಸವತಿ ಮಾತ್ಸರ್ಯವನ್ನು, ಕೃಷ್ಣನ ಪತ್ನೀ ಪ್ರೇಮವನ್ನು ವ್ಯಕ್ತಗೊಳಿಸುತ್ತದೆ. ಕೃಷ್ಣನ ಓಲಗಕ್ಕೆ ನಾರದ ಪಾರಿಜಾತದ ಪುಷ್ಪ ತರುತ್ತಾನೆ. ಪುಷ್ಪ ಯಾರಿಗೆ ? ಎಂದು ಕೃಷ್ಣ ಕೇಳಲು ರುಕ್ಮಿಣಿಗೆ ಎಂದು ನಾರದ ಹೇಳುತ್ತಾನೆ. ವಿಷಯ ತಿಳಿದ ಭಾಮೆ ‘ಎದೆ ದಿಗಿಲೆಂದು ಭುಗಿ ಭುಗಿಲೆಂದು ಮನದಲ್ಲಿ’ ನೋಯುತ್ತಾಳೆ. ‘ನೆಚ್ಚಿ ಇದ್ದೆನೆ ಎನ್ನೊಳು ವಂಚಿಸಿದನೆ’ ಎಂದು ಕೊರಗುತ್ತಾಳೆ. ‘ಬಾರದಿದ್ದರೆ ಪ್ರಾಣ ಉಳಿಯದು’ ಎಂದು ವಿರಹದಿಂದ ಪರಿತಪಿಸುತ್ತಾಳೆ. ‘ಹೆಣ್ಣು ಜನ್ಮದ ಬಾಳು ಯಾತಕೆ ಹೇಳು’ ಎಂದು ನಿಟ್ಟುಸಿರು ಬಿಡುತ್ತಾಳೆ. ಆಕೆಯ ದುಃಖ ನಿರಾಶೆಗಳು ನಿಧಾನವಾಗಿ ಕೋಪವಾಗಿ ಮಾರ್ಪಡುತ್ತವೆ. ‘ಎಲ್ಲರೊಡನೆ ಕೋಪಿಸುತ ತೊಟ್ಟತೊಡಿಗೆ ಈಡಾಡುತ’ ಮಂಚದಲ್ಲಿ ಒರಗುತ್ತಾಳೆ. ಕೃಷ್ಣನಿಗೂ ಸತ್ಯಭಾಮೆಯ ಬಗ್ಗೆ ಅಳುಕು ಇದ್ದೇ ಇದೆ. ಆತ ಆತಂಕದಿಂದಲೇ ಸತ್ಯಭಾಮೆಯಲ್ಲಿಗೆ ಬರುತ್ತಾನೆ. ಪಾರಿಜಾತದ ಮರವನ್ನೆ ತಂದು ನಿಲ್ಲಿಸುವ ಭರವಸೆ ನೀಡಿ ಸಮಾಧಾನ ಮಾಡುತ್ತಾನೆ. ಸತ್ಯಭಾಮೆಯ ದುಃಖ, ಕೋಪತಾಪಗಳು ಬಹು ಚೆನ್ನಾಗಿ, ಸಹಜವಾಗಿ ಮೂಡಿ ಬಂದಿದೆ. ಹೆಣ್ಣು ಏನನ್ನೂ ಹಂಚಿಕೊಳ್ಳಬಹುದು. ಆದರೆ ಪತಿಯ ಪ್ರೀತಿಯನ್ನು ಮಾತ್ರ ಇನ್ನೊಬ್ಬಳೊಂದಿಗೆ ಹಂಚಿಕೊಳ್ಳುವುದು ಅಸಾಧ್ಯ ಎಂದು ಹೇಳುವ ಅವಳ ಮಾತು ಎಂಥ ಸತ್ಯ!
ಕೆಲವು ದೀರ್ಘಕೃತಿಗಳಲ್ಲಿ ಕೂಡ ಈ ಸ್ತ್ರೀಯರ ಬಗೆಗಿನ ಕಳಕಳಿ ವ್ಯಕ್ತವಾಗಿದೆ.
1. ಉದ್ದಾಳಿಕನ ಕಥೆಯಲ್ಲಿ ಸಾಂಗತ್ಯದ ಮಟ್ಟಿನಲ್ಲಿರುವ ದೀರ್ಘ ಕೃತಿ ಇದು. ವಿಧಿ ಮನುಷ್ಯನನ್ನು ಹೇಗೆ ಆಡಿಸುತ್ತದೆ ಎಂಬುದನ್ನು ನಿರೂಪಿಸುವ ಕಥಾನಕ.
ವಿಷಯ ತಿಳಿದ ಚಂದ್ರಾವತಿಯ ತಾಯಿ ಓಡಿಬಂದು ಮಗಳನ್ನು ಬಿಗಿದಪ್ಪಿ ದುಗುಡವೇನು ಎಂದು ವಿಚಾರಿಸುತ್ತಾಳೆ. ಇಲ್ಲಿ ತಾಯಹೃದಯದ ವರ್ಣನೆ ಇದೆ.
‘ಬೆಚ್ಚಿದಳೊ ಜಲಧೀಲಿ ಕುಮಾರಿಯು ದೃಷ್ಟಿತಾಕಿತೊ ಬಹುಜನರ’ ಎಂದೆಲ್ಲಾ ಚಿಂತಿಸಿ ಹರಕೆ ಹೊರುತ್ತ್ತಾಳೆ. ತಾಯ ಹೃದಯದ ಮಮತೆ ಆತಂಕಗಳು ಬಹು ಸಹಜವಾಗಿ ಇಲ್ಲಿ ವ್ಯಕ್ತವಾಗಿದೆ. ಕಡೆಗೂ ಮಗಳು ಗರ್ಭಿಣಿ ಎಂದು ತಿಳಿಯುತ್ತದೆ. ಗಂಡುನೊಣವೂ ಸುಳಿಯದಿರುವಾಗ ಇದು ಆದದ್ದು ಹೇಗೆ ಎಂದು ಯಾರಿಗೂ ತಿಳಿಯುವುದಿಲ್ಲ. ರಾಜ ಒಬ್ಬ ಪುರುಷ. ಅವನು ಅಪವಾದಕ್ಕೆ ಹೆದರಿ ಊಳಿಗದವರನು ಕರೆದು ‘ಅರಣ್ಯದಿ ಶಿರವರಿದು ಬನ್ನಿ’ ಎಂದು ಆಜ್ಞೆ ಮಾಡುತ್ತಾನೆ. ಅವಿವಾಹಿತಳಾದ ಮಗಳು ಗರ್ಭಿಣಿ ಎಂದು ತಿಳಿದಾಗ ತಂದೆತಾಯಿಯರಿಗಾಗುವ ಆಘಾತ, ಭಯ, ಚಿಂತೆಗಳನ್ನು ಗಿರಿಯಮ್ಮ ಹೃದಯ ದ್ರವಿಸುವಂತೆ ವರ್ಣಿಸಿದ್ದಾಳೆ. ಅಂದಿಗಿಂದಿಗೂ ಮಹಿಳೆಯ ಪರಿಸ್ಥಿತಿ ಹಾಗೆಯೇ ಇದೆ. ಮಗುವಿನ ಜನನಕ್ಕೆ ಪುರುಷ ಕೇವಲ ಕಾರಣನಷ್ಟೇ! ಅದರ ಪರಿಣಾಮ ಮಾತ್ರ ಮಹಿಳೆಯ ಮೇಲೇ..
ನೀರಿನಲ್ಲಿ ತೇಲಿಬಂದವ ತನ್ನ ಮಗನೇ ಎಂದು ಗುರುತಿಸಿ ಮನೆಗೆ ತಂದು ಸಾಕುತ್ತಾನೆ. ಮಗುವಿನ ಬಾಲಲೀಲೆಯನ್ನು, ಉದ್ದಾಳಿಕನ ಪಿತೃ ವಾತ್ಸಲ್ಯವನ್ನು ಗಿರಿಯಮ್ಮ ಬಹು ಸೊಗಸಾಗಿ ಚಿತ್ರಿಸಿದ್ದಾಳೆ. ಕಾವ್ಯದ ಉದ್ದಕ್ಕೂ ಹೀಗೆ ಗಿರಿಯಮ್ಮ ಮನುಷ್ಯ ಲೋಕದ ಕಷ್ಟ ಸುಖ, ಆನಂದಗಳನ್ನು ಸಹಜವಾಗಿ ನಿರೂಪಿಸಿದ್ದಾಳೆ. ಇಡೀ ಕಾವ್ಯದಲ್ಲಿ ಚಂದ್ರಾವತಿಯ ಪಾತ್ರ ಮನಸೆಳೆಯುತ್ತದೆ. ಯಾವ ತಪ್ಪು ಮಾಡದಿದ್ದರೂ ಹಲವು, ಅಪವಾದ ನಿಂದೆಗಳಿಗೊಳಗಾಗಿ ಆಕೆ ಅನುಭವಿಸುವ ಯಾತನೆ ಮನಸ್ಸನ್ನು ಕರಗಿಸುತ್ತದೆ. ಸ್ತ್ರೀಹೃದಯದ ಕೋಮಲಾಂತಃಕರಣವನ್ನು ಗಿರಿಯಮ್ಮ ಅರಿತು ನಿರೂಪಿಸಿದ್ದಾಳೆ.
2. ಶಂಕರಗಂಡನ ಹಾಡು :ಗಿರಿಯಮ್ಮನ ನಿರೂಪಣಾ ಚಾತುರ್ಯ ಈ ಹಾಡಿನಲ್ಲಿ ಬಹು ಚೆನ್ನಾಗಿ ವ್ಯಕ್ತವಾಗಿದೆ. ತ್ರೈಲೋಕ್ಯವಂದ್ಯ ಕೈಲಾಸಾಧಿಪತಿ ಶಂಕರನೆಂದರೆ ಶಿವ. ಅವನ ಪ್ರೀತಿಯ ತಂಗಿ ರತಿ ಕೋಗಿಲೆಯಂತೆ ಹಾಡುತ್ತಾ ಗಿಳಿಯಾಡಿಸುತ್ತಾ ಚಿನ್ನದ ಮಣೆÉಯ ಮೇಲೆ ಕುಳಿತು ಪಗಡೆಯಾಡುತ್ತಾ ಕಾಲಕಳೆಯುತ್ತಿದ್ದಾಳೆ. ನವಲಾವಣ್ಯವತಿಯಾದ ತಂಗಿಗೆ ಮನ್ಮಥನೇ ಸರಿಯಾದ ವರನೆಂದು ಆಲೋಚಿಸಿ ಬುದ್ಧಿವಂತರನ್ನು ಅವನಲ್ಲಿಗೆ ಕಳಿಸುತ್ತಾನೆ. ರತಿಯ ಚೆಲುವನ್ನು ಕೇಳಿದ್ದ ಮನ್ಮಥನಿಗೂ ಮನದಲ್ಲಿ ಆಸೆ ಉಂಟಾಗಿ ಕೈಲಾಸಪುರಕ್ಕೆ ಬರುತ್ತಾನೆ. ಆಗ ಶಿವ ಮತ್ತು ಕಾಮರ ನಡುವೆ ನಡೆಯುವ ಮಾತುಕತೆ ಬಹು ಸ್ವಾರಸ್ಯವಾಗಿದ್ದು ಹೃದ್ಯವಾಗಿ ಬಂದಿದೆ. ಪ್ರೀತಿಯ ತಂಗಿ ವಿವಾಹವಾದ ಮೇಲೂ ಆಗಾಗ ತನ್ನ ಮನೆಗೆ ಬರುತ್ತಿರಬೇಕೆಂಬ ಇಚ್ಛೆ ಅಣ್ಣ ಶಂಕರಗಂಡನಿಗೆ.
ಸರ್ವಲಕ್ಷಣವುಳ್ಳ ಸರಸಿಜನೇತ್ರೆಯು ಒಬ್ಬಳೆ ರತಿ ನಮ್ಮ ತಂಗಿ
ಹಬ್ಬಹುಣ್ಣಿಮೆಗೆ ಕಳಿಸದೆ ನಮ್ಮನೆಗೆ ನಿರ್ಬಂಧ ಮಾಡುವಿರೆಂದ
ಕೂಡಲೆ ಮನ್ಮಥ ‘ಅನುಮಾನ ಮಾಡುವುದೇಕೋ ನೀ ಇಷ್ಟೊಂದು ಅವಳಿಗೆ ಸ್ವತಂತ್ರವಿಲ್ಲೇನು ನೆನೆದಾಗ ಕಳುಹುವೆ ನಿಮ್ಮ ಮನೆಗೆಂದು ಮನಸಿಜ ನುಡಿದ ದೈನ್ಯದಲಿ’

ಬೇಕಾದಾಗ ತವರು ಮನೆಗೆ ಹೋಗುವ ಸ್ವಾತಂತ್ರ್ಯ ಹೆಣ್ಣಿಗಿರಬೇಕೆಂಬ ಆಧುನಿಕ ವಿಚಾರ ಗಿರಿಯಮ್ಮನಿಗೂ ಇತ್ತೆಂದು ಇಲ್ಲಿ ತೋರುತ್ತದೆ!
ತಂಗಿಯನ್ನು ತವರಿಗೆ ಕರೆಯಲು ಶಿವನ ವೇಷವನ್ನು ರತಿಯಲ್ಲಿ ಅಪಹಾಸ್ಯ ಮಾಡಿ ನುಡಿಯುತ್ತಾನೆ ಮದನ. ಕೂಡಲೆ ರತಿ
ಬಡವನಲ್ಲವೊ ಆತ ಬಹುಪರಾಕ್ರಮಿ ಒಡಹುಟ್ಟಿದಣ್ಣ ತಾ ಮುನಿಯೆ
ಕೆಡುವೋದು ನಮ್ಮ ಐಶ್ವರ್ಯ ಆತನಗೊಡವೆ ನಮಗೆ ಬೇಡವೆಂದ್ಲು
ರತಿ ಇಷ್ಟು ಹೇಳಿದರೂ ಮದನ ಶಿವನನ್ನು ‘ತಲೆಎತ್ತಿ ನೋಡಲಿಲ್ಲವು ಆತನ ಕೂಡೆ ಗೆಲುವಿಂದ ಮಾತಾಡಲಿಲ್ಲ’ ಕೊನೆಗೆ ಶಿವನೇ ತಂಗಿಯನ್ನು ಕಳುಹಿಸಿ ಕೊಡುವಂತೆ ಕೇಳುತ್ತಾನೆ.
ಹೂವಿನ ಮಂಚ ಪಂಚಭಕ್ಷ್ಯ ಪರಮಾನ್ನವುದಾವಾಗ ನಮ್ಮನೆಯಲ್ಲಿ
ಉಣ್ಣಲಾರಳು ಜೋಳದನ್ನವ ನಮ್ಮಾಕೆ ನಾವೀಗ ಕಳಿಸುವೋರಲಲ
ಎಂದು ಆಹಂಕಾರದಿಂದ ನುಡಿಯುತ್ತಾನೆ. ಶಿವ ಅವನಿಗೆ ಬುದ್ಧಿ ಕಲಿಸಲು ನಿರ್ಗತಿಕನನ್ನಾಗಿ ಮಾಡುತ್ತಾನೆ. ಮುಂದೆ ಶಿವನಲ್ಲಿಯೇ ಆಳಾಗಿದ್ದುಕೊಂಡು, ದನಕಾಯುವ ಕೆಲಸ ಮಾಡಿ, ಮೂರು ಬೊಗಸೆ ಅಂಬಲಿ ಕುಡಿಯುವ ದುಸ್ಥಿತಿ ಮನ್ಮಥನಿಗೆ ಒದಗುತ್ತದೆ. ಅವನ ಕಷ್ಟವನ್ನು ನೋಡಲಾರದೆ ರತಿದೇವಿ ‘ಕಣ್ಣಲ್ಲಿ ಉದಕವ ತುಂಬಿ ಇನ್ನಾದರು ಬಿಡಿಸೆನುತ ಅಣ್ಣಗೆ ಬೇಡಿಕೊಂಡು’ ಬಿನ್ನೈಸುತ್ತಾಳೆ. ಮನಕರಗಿದ ಶಂಕರ ಮತ್ತೆ ಅವನಿಗೆ ಸಕಲವನ್ನು ಕರುಣಿಸುತ್ತಾನೆ.
ಮನ್ಮಥನ ಗರ್ವಭಂಗವೇ ಈ ಕಾವ್ಯದ ಮುಖ್ಯ ತಿರುಳು. ಅಹಂಕಾರ ಸಲ್ಲದು, ಐಶ್ವರ್ಯ ನಶ್ವರ, ದೈವಕೃಪೆ ಮುಖ್ಯ ಎಂಬ ಅಂಶಗಳನ್ನು ಗಿರಿಯಮ್ಮ ಬಹು ಸೊಗಸಾಗಿ, ಆಕರ್ಷಕ ಶೈಲಿಯಲ್ಲಿ ನಿರೂಪಿಸಿದ್ದಾಳೆ.
ಕೃತಿಯ ಹೆಸರು ಸೀತಾ ಕಲ್ಯಾಣವಾದರೂ ಕಲ್ಯಾಣದ ವರ್ಣನೆಯಾಗಲಿ ಅದರ ಹಿಂದಿನ ಬಿಲ್ಲು ಮುರಿದ ವಿಷಯವಾಗಲಿ ಇಲ್ಲ. ವಿವಾಹವಾದ ನಾಲ್ಕನೇದಿನ ಮಾಡುವ ‘ಅರಸಿನೆಣ್ಣೆ ಶಾಸ್ತ್ರದ ವರ್ಣನೆಯೇ ಮುಖ್ಯವಾಗಿ ಬಂದಿದೆ.
ಜಾನಕಿ ರಾಮನಿಗೆ ಅರಿಶಿನ ಹಚ್ಚಿಯಾದ ಮೇಲೆ ರಾಮ ಆಕೆಗೆ ಅರಿಶಿನ ಹಚ್ಚುತ್ತಾನೆ. ಈ ಕಾರ್ಯವನ್ನು ಪಾರ್ವತಿ ಹಿರಿಯ ಮುತ್ತೈದೆಯಾಗಿ ನಿಂತು ನಡೆಸುತ್ತಾಳೆ. ರಾಮ ಹಸೆಯಲ್ಲಿ ಕುಳಿತೇ ಅರಶಿನ ಹಚ್ಚೋಣವೆಂದು ಇದ್ದಾಗ ಪಾರ್ವತಿ ಅವನನ್ನು ಛೇಡಿಸುತ್ತಾಳೆ. ಅದನ್ನು ಪಾರ್ವತಿ ಖಂಡಿಸುತ್ತಾಳೆ. ಎದ್ದು ನಿಂತೇ ಅರಿಶಿನ ಹಚ್ಚಬೇಕೆಂದು! ಹೆಣ್ಣನ್ನು ಗೌರವಿಸಬೇಕೆಂಬ ಒಳಧ್ವನಿ ಇಲ್ಲಿದೆ.
ಪುಲ್ಲಲೋಚನೆ ಜಾನಕಿಯೊಡನೆ
ಸಲ್ಲದು ಸಲಿಗೆಯು ರಾಘವ ನೀ
ನಿಲ್ಲಬೇಕೆನುತ ಪಾರ್ವತಿ ನುಡಿದೋರೆ
ರಾಮ ನಿಂತು ತಲೆಬಾಗಿಸಿದ್ದ ಸೀತೆಯ ಮುಖ ತೋರೆಂದು ಕೇಳುತ್ತಾನೆ.
ಈ ರೀತಿ ಇವಳ ಎಲ್ಲಾ ಕಾವ್ಯಗಳಲ್ಲಿ ಮಹಿಳೆಯ ತವರಿನ ಹಂಬಲ, ಪತಿಯ ಮೇಲಿನ ಅಭಿಮಾನ, ಪ್ರೀತಿ, ಸವತಿಯ ಮೇಲಿನ ಅಸಮಾಧಾನ, ಜೀವನದಲ್ಲಿ ತನಗೂ ಒಂದು ಸ್ಥಾನಮಾನ ಇರಲಿ ಎಂಬ ಆಕಾಂಕ್ಷೆ ಎಲ್ಲವೂ ವ್ಯಕ್ತವಾಗಿದೆ.
ಮಾಲತಿ ಮುದಕವಿ

Leave a Reply