ದೇವರಿಗೊಂದು ಪತ್ರ (39)

ದೇವರಿಗೊಂದು ಪತ್ರ (39)

ಹರಿ “ಮನ” ದ ಮಾತೊಂದು ಹೇಳುವುದಿದೆ ನಿನ್ನಲ್ಲಿ

ಹಿಂದೆ ನೊಂದಿರಲಿಲ್ಲ ಈ “ಮನ” ಇಂದು ನೊಂದಿದೆ ನೋವಿನಲಿ

ದಿನ ದಿನದ ಮುಖವಾಡ ಅರಿಯುವುದು ಹೇಗೆ ಹೇಳು ನನ್ನಲ್ಲಿ

ಯಾರ ಹೇಗೆ ನಂಬುವುದು ಅರಿಯದಾದೆ ನಾ ಈ ಜಗದಲ್ಲಿ

ಮುಂದೆ ಹಾಡಿ ಹಿಂದಾಡಿಕೊಳುವರಯ್ಯ ಏನ ಹೇಳಲಿ

ಎತ್ತಿ ಹಿಡಿವರು ಒಮ್ಮೆ ಮತ್ತೆ ಎತ್ತಿ ಒಗೆವರು ಕೆಳಗೆ ನೆಲದಲ್ಲಿ

ಕಣ್ಣ ಒರೆಸುವರು ಮುಂದೆ, ವ್ಯಂಗ್ಯ ನಗುವರು ಹಿಂದೆ ಏನ ಹೇಳಲಿ

ಹೊಗಳುವರು ಹೊಗಳು ಭಟ್ಟರಂತೊಮ್ಮೆ ಮಗದೊಮ್ಮೆ ತೆಗಳುವರಿಲ್ಲಿ

ನಿನ್ನ ಹೊರತು ಮತ್ತಿಲ್ಲ ಎನ್ನುವರು, ಅತ್ತ ಮತ್ತೊಬ್ಬರ ಆದರಿಸುವವರೇ ಇಹರಯ್ಯ ಇಲ್ಲಿ

ದೂರವೇ ಆದರು… ಕಾಣದೆ ಇರಲಾರೆ ಎನುತೆನುತಲಿ

ಬೇಡವೆಂದವರ ಬೆನ್ನ ಮೇಲೆ ಕೂರಿಸಿ ಬೇಕೆಂದವರ  ಜರೆದರಿಲ್ಲಿ

ಸುಳ್ಳು ತಾಟುಗಳ ಮಧ್ಯೆ ಸತ್ಯವರಿಯಲಿ ಹೇಗೆ ನಿತ್ಯದಲಿ

ಇದಾವ ಬಣ್ಣ ಬಣ್ಣದ ರಂಗದಾಟ ನಾನರಿಯದಾದೆ ಹರಿ ಇಲ್ಲಿ

ಬಣ್ಣದ ಮಾತಿನ ಮಾಯೆಯು ತಂತ್ರ ಹೂಡದಿರಲಿ ನನ್ನಲ್ಲಿ

ನಂಬಿಕೆಯು ಬಲವಾಗಿ ಇದೆ ಎನಗೆ ನಿನ್ನಲ್ಲಿ

 

ಉಮಾ ಭಾತಖಂಡೆ.

Leave a Reply