ದ್ರೌಪದಿಯ ಅಂತರಂಗ!

ಭಾರತೀಯ ಪುರಾಣ ಸಾಹಿತ್ಯದ ಪ್ರಸಿದ್ಧವಾದ ಸ್ತ್ರೀಪಾತ್ರಗಳಲ್ಲಿ ದ್ರೌಪದಿಯ ಪಾತ್ರವೂ ಒಂದು. ಇದು ಮಹಾಭಾರತದಲ್ಲಿಯೇ ಅತ್ಯಂತ ಸಂಕೀರ್ಣವಾದ ಪಾತ್ರ.

ಮಹಾಭಾರತದಲ್ಲಿಯೇ ಅತಿಯಗಿ ನೊಂದವಳೆಂದರೆ ಅವಳೇ! ಇಡಿಯ ಭೂಮಂಡಲದಲ್ಲಿಯೇ ‘ಹೆಣ್ಣಾಗಿ’ ತನ್ನ ಅಸ್ಮಿತೆಯನ್ನು ಗುರುತಿಸಿಕೊಂಡ, ನಿರ್ಭಯವಾಗಿ ತನ್ನ ಮನದಿಂಗಿತವನ್ನು ಅಭಿವ್ಯಕ್ತಿಸಿದ ಮೊದಲ ಮಹಿಳೆ ಈಕೆ! ಅಂದು ಪಣದಲ್ಲಿ ತನ್ನನ್ನು ತಾನೇ ಸೋತ ಪತಿ ಧರ್ಮಜನು, ನಂತರ ಪತ್ನಿಯಾದ ದ್ರೌಪದಿಯನ್ನು ಸೋತಾಗ, ಅವಳನ್ನು ತುಂಬಿದ ಸಭೆಯಲ್ಲಿ ಎಳೆತರಲಾಗಿತ್ತು. ಆಕೆ ಆಗ ಎತ್ತಿದ ಜಿಜ್ಞಾಸೆ- ‘ನನ್ನ ಗಂಡನು ನನ್ನನ್ನು ಮೊದಲು ಪಣಕ್ಕಿಟ್ಟು ಸೋತದ್ದಾದರೆ ಅದು ಪತಿಧರ್ಮವೇ ಅಲ್ಲ. ಒಂದು ವೇಳೆ ತನ್ನನ್ನು ತಾನು ಸೋತು ನಂತರ ನನ್ನನ್ನು ಸೋತಿದ್ದಲ್ಲಿ ಅವನೊಬ್ಬ ದಾಸನಾಗಿರುವುದರಿಂದ ರಾಣಿಯಾದ ನನ್ನನ್ನು ಪಣಕ್ಕಿಡಲು ಅವನಿಗೇನು ಅಧಿಕಾರ?’ ಈ ಪ್ರಶ್ನೆಗಳಿಗೆ ಅಂದು ಸಭೆಯಲ್ಲಿ ಆಸೀನರಾಗಿದ್ದ ಧರ್ಮದಿಗ್ಗಜರೆಲ್ಲರೂ ಉತ್ತರಿಸಲಾಗದೆ ಮೌನ ತಾಳಿದ್ದರು. ಅಂದಿಗಿಂದಿಗೂ ಅದೊಂದು ಯಕ್ಷಪ್ರಶ್ನೆಯೇ!

ದ್ರೌಪದಿ ವೀರವನಿತೆ. ಅಪ್ರತಿಮ ಸುಂದರಿ. ಸ್ಥಿತಪ್ರಜ್ಞೆ. ಬಾಲ್ಯದಲ್ಲಿ ವೈಭವದ ಬದುಕನ್ನು ಹೊಂದಿದ್ದರೂ ಬಡಬ್ರಾಹ್ಮಣರನ್ನು ಸ್ವಯಂವರದಲ್ಲಿ ವರಿಸಿದುದು, ನಂತರ ಅತ್ತೆಯ ಆಜ್ಞೆಯೋ, ವಿಧಿಲಿಖಿತವೋ! ಒಟ್ಟಿನಲ್ಲಿ ಐವರು ಪಾಂಡವರಿಗೆ ಪತ್ನಿಯಾದುದು, ರಾಣಿಯಾಗಿ ಮೆರೆದವಳು ರಾಜಸಭೆಯಲ್ಲಿ ಅವಮಾನಿತಳಾಗಿ ವನವಾಸ, ಅಜ್ಞಾತವಾಸಗಳಿಗೆ ಬಲಿಯಾದುದು.. ಇವೆಲ್ಲ ಸಂದರ್ಭಗಳನ್ನು ಅವಳ ಸ್ಥಿತಪ್ರಜ್ಞತೆಯಿಂದಲೇ ಎದುರಿಸಿದುದು ಅವಳ ಬಗ್ಗೆ ಸ್ತ್ರೀಕುಲವೇ ಹೆಮ್ಮೆ ಪಡುವಂತೆ ಮಾಡುತ್ತವೆ.

ದ್ರೌಪದಿಯ ಹುಟ್ಟು ಕೂಡ ಎಲ್ಲರಂತಲ್ಲ, ಆಕೆಯೇ ಹೇಳುವಂತೆ ಆಕೆಯ ತಂದೆ ಆಕೆಯನ್ನು ಪಡೆದದ್ದೇ ಒಂದು ವಿಶಿಷ್ಟ ಉದ್ದೇಶಕ್ಕೆಂದು. ಅವನೊಬ್ಬನೇ ಏನು, ಎಲ್ಲಾ ಕ್ಷತ್ರಿಯರೂ ಹೆಣ್ಣು ಮಕ್ಕಳನ್ನು ಪಡೆಯುವುದೇ ತಮ್ಮ ಬಲವನ್ನು ಹೆಚ್ಚಿಸಿಕೊಳ್ಳುವ, ಅವರನ್ನು ದಾಳಗಳಂತೆ ಉಪಯೋಗಿಸಿಕೊಳ್ಳುವ ಸಲುವಾಗಿ! ಒಮ್ಮೆ ರಾಜ್ಯದಾಹಕ್ಕಾಗಿ, ಒಮ್ಮೆ ಮಾತು ಉಳಿಸಿಕೊಳ್ಳುವುದಕ್ಕಾಗಿ, ಇನ್ನೊಮ್ಮೆ ತಮ್ಮ ಕುಲನಾಶವನ್ನು ತಪ್ಪಿಸಿಕೊಳ್ಳುವುದಕ್ಕಾಗಿ! ಇಲ್ಲಿ, ದ್ರುಪದ ರಾಜ ತನ್ನ ಸಹಪಾಠಿ ದ್ರೋಣನಿಗೆ ಅವಮಾನ ಮಾಡಿದ್ದಾನೆ. ನೊಂದು ಹಠ ಹಿಡಿದ ದ್ರೋಣನು ಅರ್ಜುನನಿಂದ ದ್ರುಪದನು ಸೋಲುವಂತೆ ಮಾಡಿದ್ದಾನೆ. ಸೋತ ದ್ರುಪದನು ಅವಮಾನಿತನೂ, ಹತಾಶನೂ ಆಗಿದ್ದರೂ ಈಗ ಇರುವ ಇಬ್ಬರು ಗಂಡು ಮಕ್ಕಳಿಂದ ಸೇಡು ತೀರಿಸಕೊಳ್ಳಲಾಗಿಲ್ಲ. ಅದಕ್ಕಾಗಿ, ಆತ ದ್ರೋಣನನ್ನು ಸೋಲಿಸುವ ಪಣದಿಂದಾಗಿ ಯಜ್ಞಕ್ಕೆ ಸಿದ್ಧನಾಗುತ್ತಾನೆ. ಯಜ್ಞದಲ್ಲಿ ಬಾಲಕ, ಬಾಲಕಿಯರಿಬ್ಬರು ಅಗ್ನಿಯಿಂದ ಹುಟ್ಟಿ ಬಂದರು. ಅವರೇ ದ್ರೌಪದಿ ಹಾಗೂ ದೃಷ್ಟದ್ಯುಮ್ನ! ಮುಂದೆ ಅವಳು ಬೆಳೆದು ದೊಡ್ಡವಳಾದಾಗ, ತನ್ನ ಮಗಳನ್ನು ಮದುವೆಯಾಗಬೇಕಾದರೆ ಒಂದು ಪಣವನ್ನು ಗೆಲ್ಲುವುದರ ಅನಿವಾರ್ಯತೆಯನ್ನು ಎಲ್ಲರೆದುರೂ ಇಟ್ಟ. ಆಗಿನ ಕಾಲದ ರಾಜವಂಶಜರಲ್ಲಿ ಕೇವಲ ಅರ್ಜುನನಿಗೆ ಮಾತ್ರ ಈ ಪಣವನ್ನು ಗೆಲ್ಲುವ ಅರ್ಹತೆ ಇದ್ದುದು. ಈ ಸ್ಪರ್ಧೆ ಏರ್ಪಟ್ಟಿದುದೇ ಅರ್ಜುನನ್ನು ಅಳಿಯನನ್ನಾಗಿ ಪಡೆಯುವುದಕ್ಕಾಗಿ. ಆದರೆ ಮಧ್ಯ ಪ್ರವೇಶಿಸಿದವನು ಕರ್ಣ. ಸುಂದರವಾದ ನಿಲುವು, ಬಂಗಾರದ ಕಾಂತಿಯ ಮೈಬಣ್ಣ, ಹರವಾದ ಎದೆ.. ಆನೆಯ ಸೊಂಡಿಲಿನಂಥ ಬಾಹುಗಳು.. ಆದರೆ ಆತ ಕ್ಷತ್ರಿಯನಾಗಿರಲಿಲ್ಲವಲ್ಲ!

ದ್ರೋಣವಧೆಗೀ ಮಗನು ಪಾರ್ಥಗೆ

ರಾಣಿಯೀ ಮಗಳೆಂದು ದ್ರುಪದ

ಕ್ಷೋಣಿಪತಿ ಸಲುಹಿದನು ಸುತರನು ಸಾನುರಾಗದಲಿ

ಹುಟ್ಟುವಾಗಲೇ ಬಾಳಿನ ಗುರಿಗಳು ನಿಶ್ಚಿತ. ಅಕ್ಷೋಹಿಣೀ ಸೈನ್ಯದ ಅಧಿಪತಿ ದ್ರುಪದನ ಮನಸ್ಸಿನ ಮಾತು ದ್ರೌಪದಿಗೆ ಅರಿಯದೇ? ದ್ರೌಪದಿಗೆ ಚಿಕ್ಕಂದಿನಿಂದ ತನಗೆ ಅರೆದು ಕುಡಿಸಿದ ತನ್ನ ಹುಟ್ಟಿನ ಉದ್ದೇಶದ ನೆನಪಾಗಿತ್ತು. ಆತನನ್ನು ತಡೆದಿದ್ದಳು. ‘ಕೇವಲ ಕ್ಷತ್ರಿಯರಿಗಾಗಿ ಈ ಸ್ಪರ್ಧೆ. ರಥಿಕನ ಮಗ, ಮೇಲಾಗಿ ತಂದೆ ತಾಯಿಗಳನ್ನು ಅರಿಯದ ಅನಾಥರಿಗಲ್ಲ’ ಎಂದು ಆತನ ಕಣ್ಣುಗಳಲ್ಲಿಯ ನಿರಾಶೆಯ ಆಳ ಆಕೆಯನ್ನು ಇರಿಯುವುದನ್ನು ಲೆಕ್ಕಿಸದೆ, ಆಕೆ ನಿರಾಕರಿಸಿದ್ದಳು.

ಸ್ವಯಂವರ ಮುಗಿದಿತ್ತು. ಬ್ರಾಹ್ಮಣನ ವಧುವಾಗಿ ಅತ್ತೆಯ ಮನೆಗೆ ಕಾಲಿರಿಸಿದ ಸೊಸೆಗೆ ಅತ್ತೆ ನೀಡಿದ ಆಶಿರ್ವಾದವಾದರೂ ಎಂಥಹದು! ಒಬ್ಬನು ಹಲವಾರು ಮಡದಿಯರನ್ನು ಹೊಂದಿದ್ದಲ್ಲಿ ಆತ ‘ರಾಜಾ ಬಹುವಲ್ಲಭಾ’ ಎಂದು ಆದರಿಸಲ್ಪಟ್ಟಾನು! ಆದರೆ ಪಾಂಚಾಲಿಯು ಐವರು ವಿರಾಧಿವೀರರನ್ನು ವರಿಸಬೇಕಾಗಿ ಬಂತು. ಈ ಪರಿಸ್ಥಿತಿಗೆ ಅವಳನ್ನು ಅಂದಿನಿಂದಲೂ ನಿಂದಿಸುತ್ತಲೇ ಬಂದಿದ್ದಾರೆ.

ದ್ರುಪದನಿಗೆ ತನ್ನ ಮಗಳು ಅರ್ಜುನನಿಗೆ ವಧುವಾಗದೆ, ಬ್ರಾಹ್ಮಣ, ಅದೂ ಹೊಟ್ಟೆಗಿಲ್ಲದ ಬಡಬ್ರಾಹ್ಮಣನ ಮಡದಿಯಾಗಿದ್ದುದು ಗಂಟಲಿನಲ್ಲಿಳಿದಿರಲಿಲ್ಲ. ಆದರೆ ದೃಷ್ಟದ್ಯುಮ್ನ ತಂದ ಸುದ್ದಿಯಿಂದಾಗಿ ಮನ ನಿರಾಳವಾಗಿತ್ತು. ಅಷ್ಟರಲ್ಲಿಯೇ ಮಗಳು ಪಂಚಪಾಂಡವರ ಪತ್ನಿಯಾಗಿ ಬಾಳಬೇಕಾದ ಸುದ್ದಿಯನ್ನು ಆತ ವಿರೋಧಿಸಿದರೂ ಆತನ ವಿರೋಧವು ನಡೆಯದೆ ಹೋಯಿತು. ಮಣ್ಣಿನೊಳಗಣ ಬೀಜದ ತಾಳ್ಮೆ ಹೆಣ್ಣು ಜನ್ಮಕ್ಕಂಟಿ ಬಂದುದಲ್ಲವೇ? ಆಕೆ ಐದು ಜನರನ್ನು ಅವರವರ ಸ್ವಭಾವಕ್ಕನುಗುಣವಾಗಿ ಸಮತೋಲನದಲಿಟ್ಟುಕೊಂಡು ಸಂಭಾಳಿಸಿದಳು. ಅವರೆಲ್ಲರನ್ನು ಒಂದು ಒಗ್ಗಟ್ಟಿನ ದಾರದಿಂದ ಕಟ್ಟಿರಿಸಿದಳು. ಇದೇ ಕುಂತಿಯ ಇಚ್ಛೆಯೂ ಆಗಿತ್ತೆಂದೂ ಹೇಳುತ್ತಾರೆ. ಐವರಿಗೆ ಐವರು ಹೆಂಡಿರು ಬಂದರೆ ಅವರಲ್ಲಿ ಭಿನ್ನಾಭಿಪ್ರಾಯ ಬರಬಹುದು, ಅದರಿಂದಾಗಿ ಅಣ್ಣ ತಮ್ಮಂದಿರಲ್ಲಿಯ ಒಗ್ಗಟ್ಟಿಗೆ ಧಕ್ಕೆ ಬರಬಹುದೆಂಬ ಮುಂದಾಲೋಚನೆ ಅವಳದು.

ಮುಂದೆ ರಾಜಸೂಯ ಯಾಗ… ಅಲ್ಲಿ ನಡೆದ ಘಟನೆ ದುಯೋಧನನಲ್ಲಿ ಅಸೂಯೆಯ ಕಿಡಿ ಹೊತ್ತಿಸಿತ್ತು. ತಾನು ಬಂಜರ ಭೂಮಿಯನ್ನಿತ್ತರೂ ಅವರು ಅದರಲ್ಲಿ ಸ್ವರ್ಗ ನಿರ್ಮಿಸಿದುದು ಆತನಿಗೆ ಪಚನವಾಗದೆ ಹೋಯಿತು. ಅದು ಕಪಟ ದ್ಯೂತಕ್ಕೆ ನಾಂದಿಯಾಯಿತು. ದ್ರೌಪದಿ ನಕ್ಕದ್ದರಿಂದಲೇ ಕುರುಕ್ಷೇತ್ರ ಯುದ್ದವಾಯಿತು ಎನ್ನುವ ಅಪಕೀರ್ತಿ ದ್ರೌಪದಿಗೆ ಬಂದಿತು. ಎಲ್ಲ ಅನಿಷ್ಟಗಳಿಗೂ ಹೆಣ್ಣೇ ಕಾರಣ ಎಂಬ ಅವೈಜ್ಞಾನಿಕ ಇತ್ತಂಡವಾದವೊಂದು ಯಾವಾಗಲೂ ಇದೆಯಲ್ಲ! ಹೀಗೆ ದ್ರೌಪದಿ ತಾನು ಹೊಣೆ ಅಲ್ಲದವುಗಳಿಗೂ ಹೊಣೆಗಾರಳಾಗುತ್ತ ಹೋಗುತ್ತಾಳೆ. ಇಡೀ ಮಹಾಭಾರತದಲ್ಲಿ ತನ್ನ ತಪ್ಪೇ ಇಲ್ಲದೆ ಶಿಕ್ಷೆಗೆ ಒಳಗಾಗುವ ಏಕೈಕ ಪಾತ್ರ ಆಕೆಯದೆಂದು ಹೇಳಬಹುದು. ಅದಕ್ಕೂ ಮೀರಿದ ಬೆರಗೆಂದರೆ ಎಲ್ಲಾ ಸಂಕಷ್ಟಗಳನ್ನೂ ಎದುರಿಸುವ ಅವಳ ಕೆಚ್ಚೆದೆಯ ಗಾಂಭೀರ್ಯ! ಅವಳ ವ್ಯಕ್ತಿತ್ವವೇ ಹಲವಾರು ಸೋಜಿಗಗಳಿಂದ ಕೂಡಿದುದು. ದ್ರೌಪದಿ ಒಂದು  ಬೆಂಕಿಯ ಚೆಂಡು. ವಿದುರನಿಗೆ ಸಮಾನವಾಗಿ ಯೋಚನಾ ಶಕ್ತಿ ಹೊಂದಿರುವವಳು, ಪಾಂಡವರ ಹಿಂದೆ ವನವಾಸಕ್ಕೆ ಹೋಗುವ ಅಸಹಾಯಕ ಹೆಣ್ಣಾದಳು. ಪರಿಪರಿಯ ಕಷ್ಟಗಳನ್ನು ಅನುಭವಿಸಿದಳು. ವರ್ಷಕ್ಕೊಂದು ಬಾರಿ ಬಿಡುವ ನೇರಳೆ ಹಣ್ಣನ್ನು ಗಿಡದಿಂದ ಕಿತ್ತು, ಋಷಿಯ ಶಾಪದಿಂದ ಉಳಿದುಕೊಳ್ಳಲು ಆಕೆ ತನ್ನ ಪಾತಿವ್ರತ್ಯದ ಪ್ರಶ್ನೆ ಎದುರಿಸಬೇಕಾಯಿತು. ಕೇವಲ ಹೆಣ್ಣಿಗಷ್ಟೇ ಈ ನಿಯಮವೇ? ಅರ್ಜುನ, ಭೀಮರು ಮತ್ತೆ ಬೇರೆ ಹೆಣ್ಣುಗಳನ್ನು ಮದುವೆಯಾಗಲಿಲ್ಲವೇ?

ಕುರುಕ್ಷೇತ್ರ ಯುದ್ಧ ಮುಗಿಯಿತು. ಆಕೆ ಮಹಾರಾಜ್ಞಿಯಾದಳು. ಆದರೂ ತನ್ನ ಕರುಳ ಕುಡಿಗಳನ್ನೂ, ತಂದೆ, ಅಣ್ಣ ಮುಂತಾದ ಬಾಂಧವರನ್ನೂ ಕಳೆದುಕೊಂಡ ದುಃಖ ಅವಳೆದೆಯಲ್ಲಿ ಅಡಗಿತ್ತು.

ಮುಂದಿನದು ಮಹಾಪ್ರಸ್ಥಾನ! ಹನ್ನೆರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತ ವಾಸದಲ್ಲಿ ಪತಿಗಳೈವರನ್ನೂ ಹಿಂಬಾಲಿಸಿದಂತೆ ಇಲ್ಲಿಯೂ ಆಕೆ ಅವರನ್ನು ಹಿಂಬಾಲಿಸಿದ್ದಳು ಒಬ್ಬ ಪಕ್ಕಾ ಪತಿವ್ರತೆಯಂತೆ. ಹಿಮಾಲಯದ ತುತ್ತತುದಿಯಲ್ಲಿ ಇದೆಯೆಂದು ಎಲ್ಲರೂ ನಂಬಿದ ಆ ಕಾಣದ ಸ್ವರ್ಗದ ಆಶೆಯಿಂದ!  ಧರ್ಮಜನಿಗೆ ತಾನೊಬ್ಬ ಮಹಾ ಪುಣ್ಯಶಾಲಿ ಎಂಬ ಹಮ್ಮು ಬೇರೆ ಇತ್ತಲ್ಲ! ಆದರೆ ಮೊದಲೆಲ್ಲ ಅವರಿಗೆ ಎಲ್ಲಾ ಕಷ್ಟಗಳನ್ನೂ ಎದುರಿಸುವಾಗ ವಾಸುದೇವನ ಅಭಯಹಸ್ತವಿತ್ತು. ಆದರೆ ಇಲ್ಲಿ ಆತನಿರಲಿಲ್ಲ. ಋಷಿಮುನಿಗಳು ಪಾವಿತ್ರ್ಯತೆಯಲ್ಲಿ ಸ್ವಲ್ಪ ಲೋಪವಾದರೂ ಅರ್ಧದಾರಿಯಲ್ಲಿಯೇ ಸಾವು ಅನಿವಾರ್ಯ ಎಂದೂ ಎಚ್ಚರಿಸಿದ್ದರು. ಕಠಿಣವಾದ ದಾರಿ… ಕಡಿದಾದ ಪರ್ವತ ಶಿಖರಗಳು. ಸ್ವಲ್ಪವೇ ಮೈಮರೆತರೂ ಆಳವಾದ ಪ್ರಪಾತದಲ್ಲಿಯೇ ಸಮಾಧಿ!

ನಡೆದು ನಡೆದು ದ್ರೌಪದಿಯ ಕಾಲುಗಳು ನೋಯತೊಡಗುತ್ತವೆ. ಆಗತಾನೇ ಬೆಳಗು ಮೂಡುತ್ತಿದೆ. ದಣಿವಿನಿಂದಾಗಿ ಒಂದೆಡೆ ಕೂರುತ್ತಾಳೆ. ಪತಿಗಳನ್ನು ಕೂಗುತ್ತಾಳೆ. ಆದರೆ ಅವರೆಲ್ಲರೂ ತಿರುಗಿಯೂ ನೋಡದೆ ಮುನ್ನಡೆಯುತ್ತಾರೆ. ಯಾಕೆಂದರೆ ಋಷಿಗಳ ಮಾತಿನಂತೆ ಸ್ವರ್ಗಾರೋಹಣ ಪ್ರಾರಂಭವಾದಾಗಿನಿಂದ ಅವರಿಗೆ ಅವಳು ಪತ್ನಿಯೇ ಅಲ್ಲ. ಉಳಿದವರು ತಿರುಗಿ ನೋಡಿದರೂ ಅವರಿಗೆ ಅಣ್ಣನ ಆಜ್ಞೆಯೇ ಮಾನ್ಯ. ಆಗ ಆಕೆಗೆ ತಾನು ಈ ಎಲ್ಲ ಪತಿಗಳ ಬಂಧನದಿಂದ ಮುಕ್ತಳಾದಂಥ ಭಾವ ಸುಳಿಯುತ್ತದೆ. ಎಂಥ ಪತಿಗಳಿವರು! ನಂಬಿ ಕೈಹಿಡಿದು ಜೊತೆ ನಡೆದವಳಿಗಿಂತಲೂ ಸ್ವರ್ಗ ಸುಖವೇ ಹೆಚ್ಚಾಯಿತೇ? ಎಂದೆನ್ನಿಸುತ್ತದೆ.

ಕರ್ಣ! ಅವನು ತನಗಾದ ಅವಮಾನವನ್ನು ತುಂಬಿದ ಸಭೆಯಲ್ಲಿ ಸೀರೆ ಸೆಳೆದು ಹಾಕಲು ಹೇಳಿ ಸೇಡು ತೀರಿಸಿಕೊಂಡ. ಅಂಥ ಹೊತ್ತಿನಲ್ಲಿ ಈ ಪತಿಗಳೈವರು ಶೂರರು. ಮೂರು ಲೋಕದ ಗಂಡರು.. ತಲೆ ತಗ್ಗಿಸಿ ಕುಳಿತಿದ್ದರು. ಹಿರಿಯರೂ ಕೂಡ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡರು. ಅಂಥ ಸಮಯದಲ್ಲಿಯೂ ಈ ಪತಿಗಳು ಸತ್ಯ ವ್ರತದ ನೆವನವನ್ನೊಡ್ಡಿ ಹಲ್ಲು ಕಿತ್ತ ಹಾವಂತಾಗಿದ್ದರು! ಆಗ, ತನಗೆ ಒದಗಿದವ ಸ್ನೇಹಿತ ವಾಸುದೇವ! ಆತನ ಸ್ನೇಹ, ಒಡನಾಟದ ಸುಖ ಅವಳಿಗೆ ಒದಗಿತ್ತು. ಆತ ಅಣ್ಣನಾದ. ಅಪದ್ಬಂಧುವಾದ, ಸಖನಾದ.. ಕೆಲವು ನೆನಪುಗಳು ಕೇವಲ ನೋವನ್ನು ಕೊಟ್ಟರೆ ಇನ್ನು ಕೆಲವು ದ್ವೇಷವನ್ನು ಹೆಚ್ಚಿಸಿದ್ದವು.. ಆದರೆ ವಾಸುದೇವನ ನೆನಪು ಆಕೆಯ ಕೊನೆಗಾಲದಲ್ಲಿ ಬೆಂಕಿಯುಗುಳುವ ಅವಳ ವ್ಯಕ್ತಿತ್ವಕ್ಕೆ ತಂಪನ್ನೆರೆದಿತ್ತು.

ಹೀಗೆ ಅವಳ ಅಂತ್ಯವಾಗಿತ್ತು. ಎಲ್ಲರಲ್ಲೂ ಮಹಾಭಾರತ ಓದಿ ಮುಗಿಸಿದಮೇಲೆ ಉಳಿಯುವ ಭಾವ ಒಂದೇ! ಅದೇ “ಅಬ್ಬಾ, ಹೆಣ್ಣೆಂದರೆ ಹೀಗಿರಬೇಕು”! ಎನ್ನುವುದು,,!

Leave a Reply