“ಏಕ ಲಡಕೀಕೊ ದೇಖಾ ತೊ ಐಸಾ ಲಗಾ”…

“ಏಕ ಲಡಕೀಕೊ ದೇಖಾ ತೊ ಐಸಾ ಲಗಾ”…

ಯಾಕೋ ಬರೆಯುವದು ಇತ್ತೀಚೆಗೆ ಸ್ವಲ್ಪ ನಿಧಾನವಾಗುತ್ತಿದೆ.ನನಗೇನೂ ಅದರಿಂದ ಅಸಮಾಧಾನವಿಲ್ಲ…ಅದೊಂದು ಮೂಡು ಅಷ್ಟೇ..ಬರೆಯುವದಕ್ಕಿಂತ
ಓದುವದು, ಉಳಿದವರ ಲೇಖನಗಳನ್ನು ನೋಡುವದು,ಕಾಲಹರಣ ಅನ್ನಿ ,ಒಮ್ಮೊಮ್ಮೆ ಲಘುವಾದ ವೀಡಿಯೋ ವೀಕ್ಷಣೆ ಎಲ್ಲ ನಡೆದಿರುತ್ತದೆ.
‌‌‌‌ ಹಾಗೇ ಈ ದಿನವೂ ಒಂದು ವೀಡಿಯೋ ನೋಡಿದೆ..fashion show ಒಂದರಲ್ಲಿ ಶ್ವೇತಾ ಬಚ್ಚನ್ ಇನ್ನೊಬ್ಬ ಸಹಚರನೊಂದಿಗೆ ಭಾಗವಹಿಸಿದ ವೀಡಿಯೋ…ಅದಕ್ಕೆ ಬಂದ ಪ್ರತಿಕ್ರಿಯೆಗಳ ಮಹಾಪೂರ ನೋಡಿ ಇನ್ನೂ ದಂಗಾಗಿಯೇ ಇದ್ದೇನೆ.ಕುತೂಹಲಕ್ಕೆ ಒಂದೆರಡು ನೋಡೋಣ ಅಂದರೆ ಸಾವಿರ ಸಂಖ್ಯೆ ಮೀರಿ ಪರ, ವಿರೋಧೀ ಪ್ರತಿಕ್ರಿಯೆಗಳು..ಸುಮ್ಮನೇ ವ್ಯಕ್ತಪಡಿಸಿದ ಪುಡಿ ಅನಿಸಿಕೆಗಳಲ್ಲ.ಅಂತರ್ರಾಷ್ಟ್ರೀಯ ವೇದಿಕೆಯೊಂದರಲ್ಲಿ ಗಂಭೀರ ವಿಷಯವೊಂದರಮೇಲೆ ಬಹುದೇಶೀಯ ಚರ್ಚೆಗಳು ನಡೆದಂಥ ರೀತಿಯಲ್ಲಿ..
ಅದು ಅವಳ ಶೋ.ಅವಳದೇ ನಿರ್ಧಾರ. ಅದರಲ್ಲಿ ಅವಳ ಅಮ್ಮ,ಅಪ್ಪ ಇಬ್ಬರೂ ಮುಂದಿನ ಸಾಲಿನಲ್ಲೇ ಕುಳಿತು ಆಸ್ವಾದಿಸುತ್ತಿದ್ದಾರೆ…ಶ್ವೇತಾಳಿಗೂ ನಲವತ್ತು ಮೀರಿದ ವಯಸ್ಸಾಗಿದೆ.ಅವಳ ನಿರ್ಣಯಕ್ಕೆ ಅವಳೇ ಬಾಧ್ಯಸ್ತಳು..ಕೇಳಲು ಗಂಡ,ವಯಸ್ಸಿಗೆ ಬಂದ ಮಕ್ಕಳು ಇದ್ದಾರೆ..ಇದು ಬೇರೆ ಎಲ್ಲರಿಗೂ ಅನ್ವಯಿಸಬೇಕಾದ ವಿಚಾರವೇಕಾಗಬೇಕು.??!!.ಹೌದು, ಸಾರ್ವಜನಿಕ ಕ್ಷೇತ್ರದಲ್ಲಿರುವವರನ್ನು ಜನತೆ ಪ್ರಶ್ನಿಸುತ್ತಾರೆ.. ಅಭಿಮಾನ ವ್ಯಕ್ತ ಪಡಿಸುತ್ತಾರೆ…ಆರಾಧಿಸುತ್ತಾರೆ…ನಿಂದಿಸುತ್ತಾರೆ…ಅದು ಸಾಮಾನ್ಯ..ಸಾಮೂಹಿಕ ಮಾಧ್ಯಮದ ಇನ್ನೊಂದು ಬಹುಮುಖ್ಯ ರೂಪವೇ ಅದೆಂದರೂ ತಪ್ಪಲ್ಲ…
ಆದರೆ ಇವತ್ತಿನ ಅಭಿಪ್ರಾಯಗಳು ಒಂದು ಮಿತಿಮೀರಿ ಸೌಜನ್ಯದ ಎಲ್ಲೆ ಮೀರಿ ವ್ಯಕ್ತವಾದ ಹಾಗೆ ಅನಿಸಿತು ನನಗೆ…ಅದರಲ್ಲಿ ಅವ್ವ,ಅಪ್ಪ ,ತಮ್ಮ,ನಾದಿನಿ,ಗಂಡ,ಮಕ್ಕಳು,ಇಡೀ show biz ವೈಯಕ್ತಿಕ ಅಭಿಪ್ರಾಯಗಳಿಗೆ ಗುರಿಯಾಗಿದೆ.ಅನೇಕ ವೈಯಕ್ತಿಕ ವಿಷಯಗಳು ಚರ್ಚೆಗೊಳಪಟ್ಟಿವೆ.ಅವುಗಳಲ್ಲಿ ಕೆಲವು ನಿಜಕ್ಕೆ ಹತ್ತಿರವೂ ಇರಬಹುದು..ಇರಲಿಕ್ಕೂ ಇಲ್ಲ…ಹಾಗೆಂದು
ಖಂಡಿತಕ್ಕೂ ‘ ಆನೆ ಮುಟ್ಟಿ ನೋಡಿ ಅಭಿಪ್ರಾಯ ಹೇಳಿದ ಹನ್ನೆರಡು ಜನ ಕುರುಡರ ಕಥೆ ಆಗುವದಿಲ್ಲವೆಂಬ ಖಾತ್ರಿ ಏನು? ಎಷ್ಟೋ ವಿಷಯಗಳು ಇದ್ದಂತೆ ಕಾಣುವದಿಲ್ಲ, ನಾವು ನಮ್ಮ ದೃಷ್ಟಿಯಲ್ಲಿ ವಿಶ್ಲೇಷಿಸಿದ ರೀತಿಯಲ್ಲಿ ಇರುತ್ತವೆ..ಇಂಥ ವಿಷಯಗಳಲ್ಲಿ ಎಷ್ಟೇ ಕಾದರೂ ನಿಜ ಪೂರ್ತಿಯಾಗಿ ದಾಖಲಾಗುವದಿಲ್ಲ..ಶ್ವೇತಾ ‘ಬಚ್ಚನ್’ ಕುಟುಂಬದವಳೆಂದು ಅವಳ ವಿಷಯ ಇಲ್ಲಿ ಬರೆದಿಲ್ಲ..ಅದು ಇಲ್ಲಿ ಒಂದು ‘ಹೆಸರು’ ಮಾತ್ರ…
‌ ಇದು ಸಾಮಾನ್ಯವಾಗಿ ಎಲ್ಲೆಡೆಯೂ ಕಂಡುಬರುವ ಸಾಮಾನ್ಯ ಮನೋಭಾವ..ಅದು ನಾನಾಗಿರಬಹುದು..ವಿಷಯ ನಿಮ್ಮ ಬಗ್ಗೆ ಇರಬಹುದು..ಅಥವಾ ತಿರುವು ಮುರುವಾಗಿರಲೂ ಬಹುದು..ವಿಷಯ ‘ ಬೇರೊಬ್ಬರ ವಿಷಯದಲ್ಲಿ ಎಷ್ಟು ಮೂಗು ತೂರಿಸಬಹುದೆಂಬುದು’ ಅಷ್ಟೇ ಇರುವ ಪ್ರಶ್ನೆ…ಸ್ವಾತಂತ್ರ್ಯದೊಂದು ವ್ಯಾಖ್ಯಾನವಿದೆ,ನಿಮ್ಮ ಕೈಯಲ್ಲಿಯ ಬಡಿಗೆಯನ್ನು ಹೇಗೇ ಬೇಕಾದರೂ ತಿರುಗಿಸುವ ಸ್ವಾತಂತ್ರ್ಯ ನಿಮಗಿದೆ, ಆದರೆ ಅದು ನನ್ನನ್ನು ಗುರಿಯಾಗಿಸುವ ಹಾನಿಯಾಗಿರಬಾರದು’ ‘Freedom is between the stick of your hand,and the tip of my nose..)
ಇಷ್ಟೆಲ್ಲ ವಿಚಾರಗಳ ಹಿಂದಿರುವದು, ಇರಬೇಕಾದುದು ಒಂದೇ ವಿಚಾರ…ನಾವು ಯಾರನ್ನೂ ಅನವಶ್ಯಕವಾಗಿ ,ಹದ್ದು ಮೀರಿ,ಅವರ ಬದುಕನ್ನೇ ಅಪಾಯಕ್ಕೆ ಒಡ್ಡಬಹುದಾದ ಟೀಕೆಗಳಿಗೆ ಗುರಿ ಮಾಡುವದು ಖಂಡಿತ ಸಲ್ಲದು…ಒಂದು ಗುಂಪಿನಲ್ಲಿ ಒಬ್ಬಿಬ್ಬರು ಕುಳಿತ ಆಡಿದ ‘ ಗಾಳಿಮಾತುಗಳು ಹಲವರ ಬದುಕನ್ನೇ ಬವಣೆಗೊಡ್ಡಿದ ಬಹಳಷ್ಟು ಉದಾಹರಣೆಗಳು ದಿನಾಲೂ ಕಾಣುತ್ತೇವೆ…ನೋಡುತ್ತೇವೆ…ಕೆಲವೊಮ್ಮೆ ಅನುಭವಿಸುತ್ತೇವೆ…ಶ್ವೇತಾ ಬಚ್ಚನ್ ಕುಟುಂಬಕ್ಕೆ ಇದು ಸಮಸ್ಯೆಯೇ ಅಲ್ಲ…ಅಂಥವರು ಇಂಥ ಕ್ಷುಲ್ಲಕ ವಿಷಯಗಳನ್ನು ಗಾಳಿಗೆ ಹಾರಿಸುವಷ್ಟು ಸಮರ್ಥರೂ,ತಿಳುವಳಿಕೆ ಇರುವವರೂ ಇರುತ್ತಾರೆ..ಆದರೆ ಇಂಥ ಬೇಜವಾಬ್ದಾರೀ ಹೇಳಿಕೆಗಳು ನಮ್ಮಂಥ ಜನ ಸಾಮಾನ್ಯರ ಬಗ್ಗೆ ಸಮೂಹ ಮಾಧ್ಯಮದಲ್ಲಿ ಸೃಷ್ಟಿಸಬಹುದಾದ ಅನವಶ್ಯಕ ಗೊಂದಲಗಳಿಗೆ ಹೊಣೆಯಾರು???
‌‌‌ಇದೂ ಒಂದು ಆಲೋಚನೆಗೊಳಪಡಬೇಕಾದ ವಿಷಯವೇ ಹೌದು ತಾನೇ???

Leave a Reply