ಎಲ್ಲರೊಳಗೊಂದಾಗು ಮಂಕು ತಿಮ್ಮ…

ಎಲ್ಲರೊಳಗೊಂದಾಗು ಮಂಕು ತಿಮ್ಮ…
ನಿನ್ನೆ ಎಲ್ಲಾ ಪೂರ್ತಿ ಹೊಸ ವರ್ಷದ ಮುದ… ಮುಂಬರುವ ಬದುಕಿನಲ್ಲಿ ಬದಲಾವಣೆ ಇರುತ್ತೋ ,ಇಲ್ಲವೋ, ಆ ಒಂದು ದಿನ ಮಾತ್ರ ಒಂದು ವಿಶಿಷ್ಠವಾದ ಭಾವವಂತೂ ಕೆಲಸ ಮಾಡುತ್ತಿರುತ್ತದೆ- ಒಂದು ಸಮೂಹ ಸನ್ನಿಯಂತೆ… ಕೆಲವರಂತೂ ಹೊಸ ವರ್ಷಕ್ಕೆ ಅಂತಾನೇ ಕೆಲವು resolutions ಮಾಡುತ್ತಿರುತ್ತಾರೆ.ಪಾಲಿಸಲು ಅಲ್ಲವಾದರೂ ಮುಂದೊಮ್ಮೆ ಮುರಿಯಲಾದರೂ ಬೇಕಲ್ಲ.
‌‌ ಒಂದು ಮಾತು ಮೊದಲೇ ಹೇಳಿಬಿಡುವದು ವಾಸಿ.ನನಗೆ ಇವೆಲ್ಲವುಗಳ ಬಗ್ಗೆ ಖಾಸಾ ಮೋಹವಾಗಲಿ/ವಿರೋಧವಾಗಲಿ ಇಲ್ಲ. ಬಹುಶಃ ನಮ್ಮ ಬಾಲ್ಯದ ಹಳ್ಳಿಯ ಪರಿಸರದಿಂದ ಇಲ್ಲಿಯವರೆಗೆ ಪಯಣಿಸಿದ ದೂರದ ಪ್ರಭಾವದ ಕಾರಣವಿರಬಹುದು.ಅಲ್ಲೆಲ್ಲ ಹೊಸ ವರ್ಷ ಎಂದರೆ ಯುಗಾದಿ, ಬೇವು- ಬೆಲ್ಲ, ಮನೆ ಮುಂದೆ ಥಳಿ-ರಂಗೋಲಿ, ತೋರಣ, ಹಬ್ಬ, ಹೋಳಿಗೆ, ಪಂಚಾಂಗದ ಓದು, ಹೊಸಬಟ್ಟೆ, ಜನಸಂಭ್ರಮ, ಬಂಧು – ಬಳಗ, ಹಿರಿಯರಿಗೆ ನಮಸ್ಕಾರ ಮಾಡುವದು, ತಲೆಯ ಮೇಲೆ ಅವರ ಅಭಯ ಹಸ್ತ ಹೀಗೆ…ಅದೆಲ್ಲ ಆಗ ಪೌರ್ವಾತ್ಯ ಸಂಸ್ಕೃತಿ.ಅದನ್ನು ಬಿಟ್ಟರೆ ನಮಗೆ ಹೆಚ್ಚು ಗೊತ್ತಿರಲೂ ಇಲ್ಲ, ಹೀಗಾಗಿ ಯಾವುದೇ ಗೊಂದಲ,ನಿರಾಶೆಗಳೂ ಇರಲಿಲ್ಲ.ಬದುಕು ನಮಗೆಲ್ಲ ಬಾಗಿನವಾಗಿ ಉಡಿಗೆ ಹಾಕಿದ್ದನ್ನು ಕಣ್ಣಿಗೊತ್ತಿ ಸ್ವೀಕರಿಸುವದಷ್ಟೇ ಗೊತ್ತಿತ್ತು.ಹತ್ತು ವರ್ಷಗಳಿಗೊಮ್ಮೆ ಜಗತ್ತು ಮಗ್ಗಲು ಬದಲಾಯಿಸುತ್ತದಂತೆ .’ಪರಿವರ್ತನೆ ಜಗದ ನಿಯಮ’ – ಇದು ಭಗವದ್ವುವಾಚ. ಅಂದಮೇಲೆ ಇನ್ನು ನಾಲ್ಕು ವರ್ಷಗಳಾದರೆ ಜಗತ್ತಿನ ಎಂಟು ಮಗ್ಗಲು ಕಾಣಬಹುದಾದ ಅವಕಾಶ ನನಗೆ ಸಿಕ್ಕಾಗಿದೆ.ಆ ಮಟ್ಟಿಗೆ ಐದು ತಲೆಮಾರುಗಳ ಬದಲಾವಣೆ ಕಂಡ ‘ಭಾಗ್ಯ’ ನನ್ನದು. ‘ಬಯಲು ಶೌಚ’-ದಿಂದ ಮನೆಯ bedroom ಗೊಂದರಂತೆ ಐದು toilets ಗಳ ಸೌಕರ್ಯಕ್ಕೆ ತೆರೆದುಕೊಂಡವಳು ನಾನು.
ಮೇಲೆ ಹೇಳಿದಂತೆ ಅಜ್ಜಿಯಿಂದ ನೆತ್ತಿಗೆ ಎಣ್ಣೆ ಒತ್ತಿಸಿಕೊಂಡಿದ್ದೇನೆ.ಅವ್ವ ಮಾಡಿಕೊಟ್ಟ ಹೋಳಿಗೆ ತಿಂದಾಗಿದೆ. ನಮ್ಮ ಕಾಲಕ್ಕೆ ಬಂಧು ಬಳಗ ಕೂಡಿಸಿ ಕೂಗು- ಕೇಕೆಗಳ ಪರಿಚಯವೂ ಇದೆ. ಈಗ ನನ್ನ ಮಕ್ಕಳ ಕಾಲಕ್ಕೆ Hotel ಗಳಲ್ಲಿ Table book ಮಾಡಿ, ಪಠ್ಯ ಪುಸ್ತಕಗಳನ್ನು ಹೋಲುವ Menu card (book) ನ್ನು ಲಕ್ಷ್ಯವಿಟ್ಟು ‘ಅಭ್ಯಸಿಸಿ’ order ಮಾಡಿ ಉಣ್ಣುವದು ಸುರುವಾಗಿತ್ತು. ಇತ್ತೀಚೆಗೆ ಮೊಮ್ಮಕ್ಕಳ ಜೊತೆಗೆ ಸಹಬಾಳ್ವೆ. ಬಹುಶಃ ನನ್ನ ಬದುಕಿನ ಕೊನೆಯ ಹಂತ- pizza/ pasta/ veg sandwiches/ Nutri Crispy Chat/Soya nuggets/ Baked Macaroni/ಗಳ ಜಮಾನಾಕ್ಕೆ ಕಾಲಿಟ್ಟಿದ್ದೇನೆ.( pure veg options)
ಇದರರ್ಥ ನನಗೆಲ್ಲ ಸೇರುತ್ತದೆ,ಇಷ್ಟಪಟ್ಟು ತಿನ್ನುತ್ತೇನೆ- ಅಂತಲ್ಲ.ಜೊತೆಗೆ ಹೋಗುತ್ತೇನೆ, ಕೂಡುತ್ತೇನೆ ನೋಡುತ್ತೇನೆ, ಬೇಡ ಅನಿಸಿದರೆ Veg soup ಕುಡಿದು ಸದ್ದಿಲ್ಲದೇ ಎದ್ದು ಹೊರಟು ಬರುತ್ತೇನೆ.ನನಗೆ ಬೇಡದಿರುವದು ನನ್ನ ಆಯ್ಕೆಯಂದಾದರೆ, ಅವರಿಗೆ ಬೇಕಾಗಿರುವದು ಅವರ ಹಕ್ಕು ಎಂಬುದನ್ನು ಗೌರವಿಸುವದನ್ನು ಗೊತ್ತು ಮಾಡಿಕೊಂಡಿದ್ದೇನೆ. ನನ್ನೊಳಗೇ ಆಗಾಗ ಒಮ್ಮೊಮ್ಮೆ ಗೊಣಗುವದೂ ಇದೆ.ಅದು ನನ್ನ ಮಾನಸಿಕ ನಿರಾಳತೆಗೆ…ಸ್ವಭಾವದ ಚಡಪಡಿಕೆಯ ಪರಿಹಾರಕ್ಕೆ, ಅಷ್ಟೇ…
‌ ಒಟ್ಟಿನಲ್ಲಿ ಬದುಕು
ಬೇಡುವದಿಷ್ಟೇ-
ಬದಲಾದ ಜಮಾನಾಕ್ಕೆ ಹೊಂದಿಕೊಂಡಿರಬೇಕು,
ಇಲ್ಲವೇ ನಿಧಾನವಾಗಿ ಬೆಂದುಕೊಂಡಿರಬೇಕು…
‌ನನ್ನದು ಮೊದಲ ಆಯ್ಕೆ. ಈಗಾಗಲೇ ಎಪ್ಪತ್ತಾರು ಮುಗಿದಿವೆ. ಉಳಿದಂತೆ ದೇವರ ಲೆಕ್ಕ…ನನ್ನ ಪಾಲಿನಲ್ಲಿ ಉಳಿದಿರುವಷ್ಟು ಆದಷ್ಟೂ  ಹೀಗೇ ಕಳೆಯೋಣ ಎಂಬುದು ನನ್ನ
ಈ ವರ್ಷದ RESOLUTION…
According to me, this is LIFE…
ಅಷ್ಟೇ…
Leave a Reply