ಹಿಂಗ್ಯಾಕೆ ನಾವೆಲ್ಲ….! ಭಾಗ-3 – ಕಸ ಚೆಲ್ಲಬೇಡಿ

  ಕಸ ಚೆಲ್ಲಬೇಡಿ
– ರಘೋತ್ತಮ ಕೊಪ್ಪರ್

ಇಂದು ನಮ್ಮ ನಗರಗಳನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ತ್ಯಾಜ್ಯ ವಿಲೇವಾರಿಯೂ ಪ್ರಮುಖ ಸಾಲಿನಲ್ಲಿ ಬರುತ್ತೆ. ಎಷ್ಟೋ ಜನರು ಘನ ತ್ಯಾಜ್ಯ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕಿಸುವುದಿಲ್ಲ. ಒಂದೇ ಪ್ಲಾಸ್ಟಿಕ್ ಚೀಲದಲ್ಲಿ ಕಾಯಿಪಲ್ಯೆ ಸಿಪ್ಪೆ, ಒಡೆದ ಬಲ್ಬ್ ಇವೆಲ್ಲ ಹಾಕಿ ಒಗೆದರೆ, ಅದನ್ನು ಪ್ರತ್ಯೇಕಿಸುವವರ ಕೈಗೆ ಬಲ್ಬ್ ಚುಚ್ಚ ಬಹುದು ಎಂಬ ಸಾಮಾನ್ಯ ಜ್ಞಾನವೂ ಇಲ್ಲವೇ! ನಮ್ಮ ಮನೆಯಿಂದ ಹೊರಗೆ ಹೋದರೆ ನಮ್ಮ ಕೆಲಸ ಆಯಿತು ಮುಂದೆ ಏನಾದರೂ ಆಗಲಿ ಎಂಬ ಆಲಸ್ಯಕರ ಧೋರಣೆ ಉಚಿತವೇ? ಇದು ತಪ್ಪಲ್ಲವೇ?
ಪ್ರತಿಯೊಬ್ಬರು ಹಸಿ ತ್ಯಾಜ್ಯ ಒಣ ತ್ಯಾಜ್ಯ ಪ್ರತ್ಯೇಕಿಸಿ, ಆದಷ್ಟೂ ಹಸಿ ತ್ಯಾಜ್ಯವನ್ನು (ಇಲ್ಲಿ ಆದಷ್ಟೂ ಎಂದು ಹೇಳುತ್ತಿದ್ದೇನೆ ಎಲ್ಲವನ್ನೂ ಅಲ್ಲ) ಮನೆ ಮುಂದಿರುವ ತೋಟಗಳಲ್ಲಿ ಹಾಕಿದರೆ ನಮ್ಮ ಗಿಡಕ್ಕೆ ಬೆಸ್ಟ್ ಗೊಬ್ಬರ.

ಮನೆಯ ಹತ್ತಿರ ಒಂದಿಷ್ಟು ಖಾಲಿ ಜಾಗ ಇದ್ದರೆ ಅದು ಕಸದ ತಾಣವೇ ಆಗಿಬಿಡುತ್ತೆ. ಆ ಖಾಲಿ ಜಾಗದಲ್ಲಿ ಕಸ ತುಂಬಿ ತುಂಬಿ ಕಡೆಗೆ ರಸ್ತೆಯ ವರೆಗೂ ಬರುತ್ತೇ. ಆಗ ನಮ್ಮಲೊಬ್ಬ ಏನ್ ಜನಾರಿ ಸ್ವಲ್ಪವೂ ಕಾಮನ್ ಸೆನ್ಸ್ ಇಲ್ಲ ಕಸವೆಲ್ಲ ರಸ್ತೆಯಲ್ಲಿ ಬಿದ್ದಿದೆ, ದುರ್ನಾತ ಬರ್ತಾಯಿದೆ. ಮುನಿಸಿಪಾಲ್ಟಿ ಅವರಾದರೂ ಬಂದು ತುಗೊಂಡು ಹೋಗ್ಬಾರದಾ ಎಂದು ಗೊಣಗುತ್ತಾನೆ. ಆ ಕಸದ ಗುಂಪಿನಲ್ಲಿ ಅವನದ್ದು ಕೆಲವು ಪ್ಲಾಸ್ಟೀಕ್‍ ಗಂಟುಗಳಿರುತ್ತವೆ.

ನಮ್ಮ ಮನೆ ಸ್ವಚ್ಛವಾಗಿದ್ದರೆ ಓಣಿ ಸ್ವಚ್ಛ. ಓಣಿ ಸ್ವಚ್ಛವಾಗಿದ್ದರೆ ಊರೇ ಸ್ವಚ್ಛ, ಊರು ಸ್ವಚ್ಛವಾಗಿದ್ದರೆ ನಾಡು ಸ್ವಚ್ಛ. ಈ ಮಾತನ್ನು ನಮ್ಮಲ್ಲಿ ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಮನೆ ಸ್ವಚ್ಛವಿರಲಿ ಎಂದು ಓಣಿಯನ್ನೇ ಹೊಲಸು ಮಾಡುತ್ತಾರೆ. ಮೇಲೆ ಹೇಳಿರುವ ಯಾವ ವಿಷಯಗಳೂ ಹೊಸವಲ್ಲ ಎಲ್ಲವೂ ಎಲ್ಲರಿಗೂ ನನಗಿಂತ ಚೆನ್ನಾಗಿಯೇ ಗೊತ್ತಿರುವಂತವು. ಇದೆಲ್ಲ ಗೊತ್ತು ಆದರೂ ಹಿಂಗೆ ಮಾಡಿದರೆ ಹೇಗೆ …….. ಹಿಂಗ್ಯಾಕೆ ನಾವೆಲ್ಲ….!

Leave a Reply