ಗೌರಿ ಹೂವು..!

ಗೌರಿ ಹೂವು..!
ಮಳೆಗಾಲ ಬಂತೆಂದರೆ ಮಲೆನಾಡಿನ ತಪ್ಪಲುಗಳಲ್ಲಿ ಕಾಡು ಹೂವುಗಳು ಯಥೇಚ್ಯವಾಗಿ ಕಾಣಸಿಗುತ್ತವೆ. ಅವು ತಮ್ಮ ನೈಜ ರೂಪ, ಸೌಂದರ್ಯವನ್ನು ಪ್ರದರ್ಶಿಸುತ್ತಾ, ನಿಸರ್ಗದ ಸೊಬಗಿಗೆ ಮೆರಗು ನೀಡುತ್ತವೆ. ನೋಡುಗರನ್ನು ಅಚ್ಚರಿಗೊಳಿಸುತ್ತವೆ. ಅದರಲ್ಲೂ ಶ್ರಾವಣದ ಹಬ್ಬದ ಸಂದರ್ಭದಲ್ಲಿ ಪ್ರಕೃತಿ ಅರಳಿಸಿದ ಕೆಲವೇ ಕೆಲವು ಅಪರೂಪದ ಆಕರ್ಷಣೀಯ ಹೂವುಗಳಲ್ಲಿ ಗೌರಿ ಹೂವು ಕೂಡಾ ಒಂದು. ಗೌರಿ, ಗಣೇಶನ ಪೂಜೆಗೆ ಈ ಹೂವು ಶ್ರೇಷ್ಟವೆಂಬ ನಂಬಿಕೆ ಇದೆ. ಸಸ್ಯಶಾಸ್ತ್ರೀಯವಾಗಿ ಗ್ಲೋರಿಯೊಸಾ ಸುಪರ್ಭಾ  (Gloriosa superba )ಎಂದು ಕರೆಯಲ್ಪಡುವ ಇದು ಕೋಲ್ಚಿಕೇಸಿಯ (Gloriosa superba) ಕುಟುಂಬಕ್ಕೆ ಸೇರಿದೆ. ಸಂಸ್ಕೃತದಲ್ಲಿ ಅಗ್ನಿಶಿಖಾ ಎನ್ನುವ ಈ ಹೂವಿಗೆ ಇಂದ್ರನ ಬಳ್ಳಿ, ಕೆಂಡಹೂವು, ಕಲಿಹಾರೀ, ಹುಲಿಪಂಜ( Tiger clow) ಎಂದು ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರಿನಿಂದ ಕರೆಯಲಾಗುತ್ತದೆ.
ಗೌರಿ ಹೂವು ಇತರ ಹೂಗಳಿಗಿಂತ ವಿಭಿನ್ನವಾಗಿದ್ದು, ಅನಾದಿ ಕಾಲದಿಂದಲೂ ಭಾರತೀಯ ವೈದ್ಯ ಪದ್ದತಿಯಲ್ಲಿ ಈ ಸಸ್ಯವನ್ನು ಔಷಧವಾಗಿ ಬಳಸಲಾಗುತ್ತಿದೆ. ಜಿಂಬಾಬ್ವೆಯ ರಾಷ್ಟ್ರೀಯ ಪುಷ್ಪವಾಗಿರುವ ಗೌರಿ ಹೂವು ನಮ್ಮ ಪಕ್ಕದ ರಾಜ್ಯವಾದ ತಮಿಳುನಾಡಿನ ರಾಜ್ಯ ಪುಷ್ಪವೂ ಹೌದು. ಬೇರಿನ ಮೂಲಕ ಬೆಳವಣಿಗೆ ಹೊಂದಿ ಬಳ್ಳಿಯಂತೆ ಹಬ್ಬುವ ಈ ಸಸ್ಯದ ಮೂಲಸ್ಥಾನ ಆಫ್ರಿಕಾ ಮತ್ತು ಏಷಿಯಾವಂತೆ. ಯಾವುದೇ ಆರೈಕೆ ಇಲ್ಲದೇ ಸೊಂಪಾಗಿ ಬೆಳೆಯುವ ಗೌರಿ ಹೂವಿನ ಬಣ್ಣ ಬಹಳ ಆಕರ್ಷಣೀಯ. ವಾರಕ್ಕೂ ಮಿಕ್ಕಿ ತನ್ನ ತಾಜಾತನವನ್ನು ಉಳಿಸಿಕೊಂಡು ಸಹಜ ಸೌಂದರ್ಯದಿಂದ ಎಲ್ಲರನ್ನೂ ಆಕರ್ಷಿಸುವ ಈ ಹೂವು ಆರಂಭದಲ್ಲಿ ಹಸಿರು ಬಣ್ಣದಿಂದ ಕೂಡಿದ್ದು ನಂತರ ಕೆಳಭಾಗದಲ್ಲಿ ಹಳದಿ, ಹಾಗೂ ಮೇಲ್ಭಾಗದಲ್ಲಿ ಕೆಂಪು ಬಣ್ಣ ಆವರಿಸುತ್ತದೆ. ಆರು ಎಸಳುಗಳು ಇದ್ದು ಅವು ತಿರುಚಿ ನಿಂತಿರುತ್ತವೆ. ಅಂತಿಮವಾಗಿ ಹೂ ರಕ್ತವರ್ಣಕ್ಕೆ ತಿರುಗಿ ಉದುರುತ್ತದೆ. ಈ ಸಸ್ಯದ ಪ್ರತಿಯೊಂದು ಭಾಗವು ವಿಷಕಾರಿಯಾಗಿದ್ದು, ಸೇವಿಸಿದರೆ ಮಾನವ ಮತ್ತು ಪ್ರಾಣಿಗಳಿಗೆ ಅಪಾಯಕಾರಿ ಎನ್ನಲಾಗುತ್ತದೆ. ಈ ಹೂವಿನ ವಿಶೇಷ ಆಕರ್ಷಣೆ ಎಂದರೆ ತಳಭಾಗದಲ್ಲಿರುವ ಹೂವಿನ ಕೇಸರಗಳು.
ಪ್ರಕೃತಿ ನಮಗೆ ನೀಡಿರುವ ಕೊಡುಗೆ ಸಾಮಾನ್ಯದ್ದಲ್ಲ. ಈ ಬಗೆಯ ಸಸ್ಯಗಳನ್ನು ಉಳಿಸಿಕೊಳ್ಳುವುದೆಂದರೆ ಒಂದು ಬಗೆಯ ಆರೋಗ್ಯಕರ ನೈಸರ್ಗಿಕ ಪರಿಸರವನ್ನು ಉಳಿಸಿಕೊಳ್ಳುವುದೆಂದೇ ಅರ್ಥ. ಈಗ ಅಭಿವೃದ್ಧಿಯ ದೆಸೆಯಿಂದಾಗಿ ನಿಸರ್ಗದಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚಿ ಅರಣ್ಯನಾಶವಾಗುತ್ತಿದೆ. ಅಪರೂಪದ ಪ್ರಾಣಿ, ಪಕ್ಷಿ, ಸಸ್ಯ ಪ್ರಭೇದಗಳ ಉಳುವಿಗೆ ದಕ್ಕೆಯಾಗುತ್ತಿದೆ. ನೈಸರ್ಗಿಕ ಸಸ್ಯ ಮೂಲಗಳನ್ನು ಉಳಿಸಿಕೊಳ್ಳುವುದು ಇಂದಿನ ಅತೀ ಅಗತ್ಯ.

ಹೊಸ್ಮನೆ ಮುತ್ತು

 

Leave a Reply