ಹಬ್ಬಗಳು ನಡೆದು ಬಂದ ದಾರಿ…

ಹಬ್ಬಗಳು ನಡೆದು ಬಂದ ದಾರಿ…

ಹೆಂಗಿತ್ತು, ಹೆಂಗಾತು ಗೊತ್ತಾ…?

ಆದಿ ಕಾಂಡ…
ಒಂದು ಕಾಲವಿತ್ತು…ದೀಪಾವಳಿ ಹಬ್ಬದ ತಯಾರಿ ಪಕ್ಷಮಾಸ ಮುಗಿಯುತ್ತಲೇ ಸಣ್ಣದಾಗಿ ಶುರುವಾಗುತ್ತಿತ್ತು..ಶಾವಿಗೆ
,ಚಕ್ಕಲಿ,ಅನಾರಸದ ಹಿಟ್ಟು ಮಾಡಿಟ್ಟುಕೊಳ್ಳುವದು,ಬಟ್ಟೆ ಖರೀದಿಸಿ ಹೊಲಿಯಲು ಕೊಡುವದು,ಎಲ್ಲರೂ ಪರಸ್ಪರರ ಮನೆಗೆ ಹೋಗಿ ಹಬ್ಬದ ಕೆಲಸಗಳಲ್ಲಿ ಕೈಗೂಡಿಸುವದು,ಬಂಧು ಬಾಂಧವರಿಗೆ ಮುಂಚಿತ ಆಹ್ವಾನ ಕೊಡುವದು ಏನೆಲ್ಲ ಯೋಜನೆಗಳು…ವಾರ ಮೊದಲೇ ಉಂಡಿ,ಚಕ್ಕಲಿ,ಅನಾರಸ,ಅವಲಕ್ಕಿ ಚೂಡಾ,ಸೇಂಗಾಉಂಡಿ,ಬೇಸನ್ ಲಾಡುಗಳ ದಾಸ್ತಾನು ದೊಡ್ಡ,ದೊಡ್ಡ ಡಬ್ಬಿಗಳಲ್ಲಿ ಸಂಗ್ರಹವಾಗುತ್ತಿದ್ದವು,ನೀರು ತುಂಬುವ ದಿನವಂತೂ ತಾಮ್ರ,ಹಿತ್ತಾಳೆ ಹಂಡೆಗಳು ಇದೀಗ ಅಂಗಡಿಯಿಂದ ಬಂದಂತೆ ಥಳಥಳಿಸುತ್ತಿದ್ದವು…ರಸ್ತೆಯಲ್ಲಿ ಕೂಗುತ್ತ ಎಲ್ಲರ ಮನೆಗೂ ಉಚಿತವಾಗಿ ಹಂಚುವವರಿಂದ ಮಹಾಲಿಂಗ ಬಳ್ಳಿಗಳನ್ನು
ಪಡೆದು ಅವುಗಳ ಕಂಠಾಭರಣವಾಗಿಸಿ ಅರಿಷಿಣ,ಕುಂಕುಮ,
ಚಂದ ಚಂದದ ಬಣ್ಣದ ರಂಗೋಲಿ ಬಿಡಿಸಿ, ಪೂಜಿಸಿ ಸಕ್ಕರೆ ಹೋಳಿಗೆ,ಚಿತ್ರಾನ್ನ,ಸೇವಿಗೆ ಪಾಯಸ, ಕರಿದ ಹಪ್ಪಳ- ಸಂಡಿಗೆಯ ಅಡಿಗೆ ರಾತ್ರಿ ಊಟಕ್ಕೆ..ಮರುದಿನ‌ನಾಲ್ಕಕ್ಕೇನೆ ಎಲ್ಲರ ಮನೆ ದೀಪಗಳು ಹತ್ತಲು ಪ್ರಾರಂಭ.ನಿದ್ದೆಯಲ್ಲಿ ಮುಲುಗಾಡುವ ಮಕ್ಕಳನ್ನು ರಮಿಸಿ ಎಬ್ಬಿಸಿ,’ ಎದ್ದೆ ಎದ್ದೆ’ ಎನ್ನುತ್ತಲೇ ಮಗ್ಗಲು ಬದಲಾಯಿಸುವ ಸೋಮಾರಿಗಳಿಗೆ ಬಾಯಿಮಾಡಿ ಆರತಿಯ ಸಿದ್ಧತೆ ಸುರುವಾಗುತ್ತಿತ್ತು…ಅದೂ ಅವರವರ ಮನೆಯದಾದರೆ ಆದಂತಲ್ಲ..ಪಕ್ಕದ ಎಲ್ಲ ಮನೆಗಳಿಗೂ ತಪ್ಪದೆ ಭೇಟಿ ನೀಡುವದು ಕಡ್ಡಾಯ.ಎಣ್ಣೆಶಾಸ್ತ್ರ, ಬಿಸಿನೀರಿನ ಸ್ನಾನವಾಯಿತೋ ಯಾವುದಾದರೂ ಗುಡಿಗೆ ಭೇಟಿ..ಕೆಲವರಂತೂ ನಸುಕಿನಲ್ಲಿಯೇ ಗುಡಿಗೆ ಹೋಗಿ ಅರ್ಚಕರಿಂದ ದೇವರಿಗೆ ಎಣ್ಣೆ ಶಾಸ್ತ್ರ ಮಾಡಿಉಳಿದ ಶೇಷ ಎಣ್ಣೆಯಿಂದಲೇ ಅಭ್ಯಂಗ ಸ್ನಾನ..ನಂತರ ಫಲಹಾರ..ಬಂಧುಗಳ ಮನೆಗೆ ಭೇಟಿ..ಪರಸ್ಪರ ಶುಭಾಶಯಗಳ,ಉಡುಗೊರೆಗಳ ವಿನಿಮಯ ಹೀಗೆ ಮುಗಿಯಲಾರದ ಕಾರ್ಯಕ್ರಮಗಳು…ಅಮಾವಾಸ್ಯೆಯ ದಿನ ಲಕ್ಷ್ಮಿಪೂಜೆ,ಪಾಡ್ಯದಂದು ಬಲಿಪೂಜೆ,ಬಿದಿಗೆಯಂದು ಸಹೋದರರಿಗೆ ಔತಣ,ತದಿಗೆಯಂದು ಸಹೋದರಿಯರಿಗೆ ಆತಿಥ್ಯ
ಹೀಗೆ ಒಂದು ವಾರದ ಸಮೀಪ ಕಾರ್ಯಕ್ರಮಗಳ ಉದ್ದನೆಯ ಪಟ್ಟಿ..ವರ್ಷವಿಡಿ ಬೇಕಾದ್ದು ಮಾಡಲಿ ,ದೀಪಾವಳಿಯ ಕಾರ್ಯಕ್ರಮಕ್ಕೆ ಭಂಗಬರುವಂತಿಲ್ಲ…ಎಲ್ಲರ ಮನೆಯಲ್ಲಿಯ ಹಿರಿಯರದೇ ಆಡಳಿತ ಆಗ..ಮನಸ್ಸಿದ್ದರೆ ಪೂರ್ಣ ಆನಂದದಿಂದ,ಒಪ್ಪದಿದ್ದರೆ ಅಸಮ್ಮತಿಯಿದ್ದರೂ ತೋರಗೊಡದೇ ಕಾರ್ಯಕ್ರಮಗಳಲ್ಲಿ ಭಾಗವಾಗುವದು ‘ ಯಮಶಾಸನ’ ಎಂದೇ ಪರಿಗಣಿಸಲ್ಪಡುತ್ತಿತ್ತು…

ಮಧ್ಯಕಾಂಡ…

‌ ‌‌‌‌‌ಒಂದು ಇಪ್ಪತ್ತು,ಇಪ್ಪತೈದು ವರ್ಷಗಳ ಕಾಲಾನಂತರ ಅಷ್ಟಿಟ್ಟು ಸ್ಪಷ್ಟ ಬದಲಾವಣೆಗಳಾಗತೊಡಗಿ ವ್ಯತ್ಯಾಸ ದೊಡ್ಡದಾಗಿಯೇ ಗೋಚರಿಸತೊಡಗಿತು.ಶೈಕ್ಷಣಿಕ ರಂಗದಲ್ಲಾದ ಬದಲಾವಣೆಯಿಂದಾಗಿ ವೃತ್ತಿಪರ course ಗಳನ್ನು ಮಾಡಿದವರು ದೂರದೂರದ ರಾಜ್ಯಗಳಿಗೆ ಹೋಗುವದು ಹೆಚ್ಚಾಗಿ ಕುಟುಂಬದ ಗಾತ್ರ ಕ್ರಮೇಣ ಇಳಿಮುಖವಾಗುತ್ತಿದ್ದಂತೆಯೇ ಆಚಾರ- ವಿಚಾರಗಳಲ್ಲೂ ಕ್ಷಿಪ್ರ ಬದಲಾವಣೆ ಅನಿವಾರ್ಯವೇನೋ ಎಂಬ ಸ್ಥಿತಿಯನ್ನು ಜನ ಒಪ್ಪಿಕೊಳ್ಳಲೇ ಬೇಕಾಯಿತು..ಆ ಹಂತದಲ್ಲಿ ಸಮೀಪದ ಬಂಧುಗಳಷ್ಟೇ ಕಲೆತು ಅತಿ ದೊಡ್ಡದಲ್ಲದ ಪ್ರಮಾಣದಲ್ಲಾದರೂ ಒಂದೆಡೆ ಸೇರಿ ಒಂದೆರಡು ದಿನಗಳಿಗೆ ಹಬ್ಬ ಸೀಮಿತಗೊಳಿಸುವದು,ತಿಂಡಿ ,ತಿನಿಸುಗಳನ್ನು ಕೊಂಡು ತಂದು ಕೆಲಸ ಮುಗಿಸುವದು ,ಅನಿವಾರ್ಯ ದಿನಗಳಿಗಷ್ಟೇ ಹಾಜರಿ ಹಾಕುವದು,ಎಂಬಂಥ ಬದಲಾವಣೆಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಲು ಸಮ್ಮತಿಸಲೇ ಬೇಕಾಯಿತು…

ತತ್ಕಾಲ ಕಾಂಡ…

1985 ರಿಂದ ಈಚೆಗೆ ಸುಮಾರು ಮೂವತೈದು ವರ್ಷಗಳಿಂದ ಆದ software ಕ್ರಾಂತಿಯಿಂದ ಜಗತ್ತು global village ಆಗಿ ಪರಿವರ್ತನೆ ಕಂಡಿದೆ. ಡಾಕ್ಟರ್,ಇಂಜಿನಿಯರ್ ಆಗದಿದ್ದರೆ ಶಿಕ್ಷಣವೇ ಅಲ್ಲ ಎಂಬ ಸ್ಥಿತಿಗೆ ಬಂದು ನಿಂತಿದೆ..ಉಳಿದವರನ್ನು ಸರಿಗಟ್ಟಲು,ಕೆಲವೊಮ್ಮೆ ಹಿಂದೆ ಹಾಕಲು ನಡೆಯುವ rat race ಗಳಲ್ಲಿ ವಿವೇಚನೆಯಿಲ್ಲದೇ ಸೇರಿಕೊಂಡ ಕಾರಣದಿಂದ ಹಣ,ಅಂತಸ್ತು,ಅಧಿಕಾರಗಳ ಅಬ್ಬರದಲ್ಲಿ ಹಬ್ಬ- ಹರಿದಿನಗಳಿಗೆ ಕೊಡಲು ಸಮಯ,ಆಸಕ್ತಿಯ ತೀವೃ ಕೊರತೆಯಿದೆ…ಈಗಂತೂ ಮನೆಗೆ ಕನಿಷ್ಠ ಇಬ್ಬರಾದರೂ ವಿದೇಶಗಳಲ್ಲಿ ನೆಲೆಸಿ, ತಾಯ್ನೆಲಕ್ಕೆ ದೂರವಿದ್ದ ಕಾರಣದಿಂದಾಗಿ ಕೌಟುಂಬಿಕ ನೆಲೆಯಲ್ಲಿ ಹಬ್ಬ- ಹರಿದಿನಗಳ ಆಚರಣೆ ಕ್ಷೀಣವಾಗುತ್ತಿದೆ…ವೇಗದ ಆತುರದ,ಒತ್ತಡದ ಬದುಕಿನ ಪಾರ್ಶ್ವ ಪರಿಣಾಮಗಳಾದ ರಕ್ತದೊತ್ತಡ, ಮಧುಮೇಹ,ಹೃದಯದ ತೊಂದರೆಗಳಿಂದಾಗಿ ಊಟ ತಿಂಡಿಗಳಲ್ಲಿ ಒಂದು ರೀತಿಯ ಭಯದ,ಗೊಂದಲದ,ಅಸಮ್ಮತಿಯ ಪ್ರವೃತ್ತಿ ಬೆಳೆದು ಎಲ್ಲದಕ್ಕೂ ಹಿಂಜರಿಯುವ ಧೋರಣೆ ಕಾಣುತ್ತಿದೆ.. ಕೆಲವೆಡೆತಾವು ಇದ್ದಲ್ಲಿಯೇ ತಮ್ಮತಮ್ಮಲ್ಲಿ ಗುಂಪುಗಳನ್ನು ಕಟ್ಟಿಕೊಂಡು ಹಬ್ಬಗಳ ಆಚರಣೆ ಮಾಡುತ್ತಿದ್ದರೂ ಮೊದಲಿನ ಸಮಗ್ರ ಖದರು ಹಬ್ಬಗಳಿಗಿಲ್ಲ… ಇಲ್ಲಿದ್ದ ವಯಸ್ಕರಲ್ಲೂ ಸಹ ಮಾನಸಿಕ,ದೈಹಿಕ ತೊಂದರೆಗಳಿಂದಾಗಿ ಮನಸ್ಸಿದ್ದರೂ ಮಾಡಲಾಗದ ಅಸಹಾಯಕತೆ…ಈ ಕಾರಣಗಳಿಂದ ನಿರುತ್ತೇಜಕ,ನೀರಸ ಅನಿವಾರ್ಯವೆಂಬ ಮಟ್ಟಿಗೆ ಹಬ್ಬದಾಚರಣೆಗಳಾಗುವದನ್ನು ನಾವೆಲ್ಲ ನೋಡಬೇಕಾಗಿದೆ…
“ಕಾಲಾಯ ತಸ್ಮೈ ನಮಃ”

Leave a Reply