ಹಸೆ ಚಿತ್ತಾರ

ಹಸೆ ಚಿತ್ತಾರ
ಹಬ್ಬ ಎಂದಾಗ ಕೆಲವು ಪೂರ್ವ ತಯಾರಿ ಬೇಕಾಗುತ್ತದೆ. ಮಲೆನಾಡಿನ ಕೆಲವು ಹಬ್ಬಗಳಲ್ಲಿ ಎಡೆ (ನೈವೇದ್ಯ) ಇಡುವುದಕ್ಕೆಂದೇ ವಿಶೇಷವಾದ ಬುಟ್ಟಿಗಳನ್ನು ಸಿದ್ಧಗೊಳಿಸಲಾಗುತ್ತದೆ. ಮಹಿಳೆಯರು ಬಿದಿರಿನ ಬುಟ್ಟಿಗೆ ಕೆಮ್ಮಣ್ಣು ಬಳಿದು, ವಿವಿಧ ವಿನ್ಯಾಸಗಳಲ್ಲಿ ಚಿತ್ತಾರ ಬಿಡಿಸಿ ನೈವೇದ್ಯದ ಬುಟ್ಟಿಯನ್ನು ಸಜ್ಜುಗೊಳಿಸುತ್ತಾರೆ. ಹೀಗೆ ಶೃಂಗಾರಗೊಳ್ಳುವ ಬುಟ್ಟಿಯನ್ನು ‘ಭೂಮಣ್ಣಿ ಬುಟ್ಟಿ’ ಎಂತಲೂ ಕರೆಯುತ್ತಾರೆ. ಇಲ್ಲಿ ಬಳಕೆಯಾಗುವುದು ಹಸೆ ಚಿತ್ತಾರವೆಂಬ ಪ್ರಾಚೀನ ಜಾನಪದ ಕಲೆ, ಬಿಳಿ ಹಸೆ, ಕಪ್ಪು ಹಸೆ, ಕೆಮ್ಮಣ್ಣು ಹಸೆ ಎಂಬ ವಿಭಾಗಗಳಲ್ಲಿ ಪ್ರಕೃತಿಯನ್ನು ಸಾಂಕೇತಿಸುವ ಚಿತ್ರಗಳೇ ಇಲ್ಲಿ ಆದ್ಯತೆ ಪಡೆದುಕೊಂಡಿರುತ್ತವೆ. ಅಡ್ಡ, ಉದ್ದಗೆರೆ, ತ್ರಿಕೋನ, ವೃತ್ತಗಳನ್ನೇ ಹಲವಾರು ವಿಧದಲ್ಲಿ ಬಳಸುವ ಜಾಣತನ ಇಲ್ಲಿ ಕಂಡುಬರುತ್ತದೆ. ಗ್ರಾಮೀಣ ರೈತ ಮಹಿಳೆಯರ ಅದ್ಭುತ ಸೃಜನಶೀಲತೆ ಅವರ ವ್ಯಕ್ತಿತ್ವದ ಶಿಸ್ತು, ಆಸ್ತಿಕತೆ ಇವೆಲ್ಲಾ ಈ ವಿಶಿಷ್ಟ ಹಸೆ ಚಿತ್ತಾರದ ಕಲೆಯಲ್ಲಿ ಮಿಳಿತಗೊಂಡಿದೆ.
ಚಿತ್ತಾಕಾರ ಕಲೆಗೆ ಮುಖ್ಯವಾಗಿ ಬೇಕಾದ ಬಣ್ಣಗಳನ್ನು ಸ್ಥಳೀಯವಾಗಿ ಸಿಗುವ ಪ್ರಾಕೃತಿಕ ವಸ್ತುಗಳಿಂದಲೇ ತಯಾರಿಸಿಕೊಳ್ಳುತ್ತಾರೆ. ಕೆಮ್ಮಣ್ಣು, ಬಿಳಿ ಜೇಡಿ ಮಣ್ಣು, ಅಕ್ಕಿ ಹಿಟ್ಟು, ಸುಣ್ಣ ಮುಂತಾದವು ಇದಕ್ಕೆ ಬಳಕೆಯಾಗುತ್ತವೆ. ಪುಂಡಿ ನಾರು, ಭತ್ತದ ದಂಟು, ಸೆಣಬಿನ ದಾರಗಳನ್ನು ಕುಂಚದಂತೆ ಬಳಸುತ್ತಾರೆ. ಮಹಾರಾಷ್ಟ್ರದ ವರ್ಲಿ ಮತ್ತು ಬಿಹಾರದ ಮಧುಬನಿ ಕಲೆಯೊಂದಿಗೆ ಕೆಲಮಟ್ಟಿಗೆ ಸಾಮ್ಯತೆ ಹೊಂದಿರುವ ಈ ಹಸೆ ಚಿತ್ತಾರದ ಕಲೆ ನೆಲ ಮೂಲದ, ಪರಿಸರ ಸ್ನೇಹಿ ಬುಡಕಟ್ಟು ಕಲೆ.
ಹೊಸ್ಮನೆ ಮುತ್ತು

Leave a Reply