ಹೆಣ್ಣು ಎಂದರೆ ಇಷ್ಟೇಯೇ?

ಹೆಣ್ಣು ಎಂದರೆ ಇಷ್ಟೇಯೇ?

*ಬೆಚ್ಚನೆಯ ಮನೆಯಾಗೆ ವೆಚ್ಚಕ್ಕೆ ಹೊನ್ನಾಗೆ
ಇಚ್ಛೆಯಾನರಿವ ಸತಿಯಾಗೆ
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ..*
ಈ ಭಾವ ಸಾರ್ವಕಾಲಿಕ ಸತ್ಯವೇನಲ್ಲ. ಏಕೆಂದರೆ ಇದು ಗಂಡಿನ ಸ್ವರ್ಗದ ಕಲ್ಪನೆ. ಹೆಣ್ಣಿನ ಪರಿಕಲ್ಪನೆ ಇದಕ್ಕಿಂತ ಭಿನ್ನ. ಕುಟುಂಬ ವ್ಯವಸ್ಥೆಯಲ್ಲಿ ಗಂಡು ಹೊರಗೆ ದುಡಿದು ತಂದುದನ್ನು ಒಳಗಡೆ ನಿರ್ವಹಿಸುವುದಕ್ಕೇ ಸೀಮಿತವಾಗಿದ್ದ ಹೆಣ್ಣಿನ ಪಾತ್ರ ಈಗ ಹೊರಗೆ ದುಡಿದು ತರುವುದಕ್ಕೂ ವಿಸ್ತರಣೆಗೊಂಡಿರುವುದು ಸಾಮಾಜಿಕ ನಡೆವಳಿಕೆಯಲ್ಲಿ ಬಿಂಬಿತವಾಗುತ್ತಿದೆ.ಆದ್ದರಿಂದ ಮದುವೆಯ ವ್ಯವಸ್ಥೆಯಲ್ಲಿ ಮೊದಲಿದ್ದ ಭದ್ರತೆಯ ಚೌಕಟ್ಟು ಸಡಿಲವಾಗುತ್ತಿದೆ.
ಹಿರಿಯರು ಏರ್ಪಡಿಸಿದ್ದ ಸಂಬಂಧವೇ ಇರಲಿ, ವಯಸ್ಕ ಗಂಡು ಹೆಣ್ಣುಗಳು ತಾವೇ ನಿರ್ಧರಿಸಿಕೊಂಡ ಸಂಬಂಧವೇ ಇರಲಿ, ಮದುವೆಯ ಚೌಕಟ್ಟಿಗೆ ಒಳಪಟ್ಟ ಮೇಲೆ ಅದು ಜೀವಿತಾವಧಿಯ ಬಾಂಧವ್ಯ ಅಂದರೆ ಕಾವ್ಯಮಯವಾಗಿ ಹೇಳುವುದಾದರೆ ಜನುಮ ಜನುಮದಾ ಅನುಬಂಧ ಎಂಬುದು ಭಾರತೀಯ ಸಮಾಜದಲ್ಲಿ ಉಳಿದುಕೊಂಡ ನಂಬಿಕೆ. ದಾಂಪತ್ಯದಲ್ಲಿ ಅಡಿಯಿರಿಸಿದ ನಂತರ ಗಂಡು-ಹೆಣ್ಣು ಪರಸ್ಪರ ಅರ್ಥ ಮಾಡಿಕೊಂಡು ರಸಿಕ ಜೀವನವನ್ನು ನಡೆಯುವುದು, ಅದು ಹಳಸುವ ಮೊದಲೇ ಸಂತಾನೋತ್ಪತ್ತಿಗೆ ಮುಂದಾಗಿ ಪೀಳಿಗೆಯನ್ನು ಮುಂದುವರೆಸುವುದು, ಮಕ್ಕಳ ಪ್ರೀತಿಯ ಸಾಂಗತ್ಯದಲ್ಲಿ ಬಲಗೊಳ್ಳುವ ಪತಿ–ಪತ್ನಿಯರ ನಡುವಿನ ಪರಸ್ಪರ ಅವಲಂಬನೆ—ಕುಟುಂಬ ವ್ಯವಸ್ಥೆ ಯನ್ನು ಬಲಪಡಿಸುವ ಅಂಶಗಳು. ಇದರೊಂದಿಗೆ ಹೆತ್ತವರ ಜೊತೆಗಿನ ಸಹಬಾಳ್ವೆಯೂ ಸೇರಿ ಮನೆ ಎಂದರೆ ಸುರಕ್ಷಿತ ತಾಣ. ದೈಹಿಕ ವಿಶ್ರಾಂತಿಗೂ, ಮಾನಸಿಕ ಶಾಂತಿಗೂ ಆಸರೆಯಾದ ವ್ಯವಸ್ಥೆ.
ಸಾಮಾಜಿಕ ಬದುಕು ಹೆಚ್ಚು ಹೆಚ್ಚು ಸುಧಾರಣೆಯಾಗುತ್ತ, ಗಂಡಿನಷ್ಟೇ ಸಮರ್ಥವಾಗಿ ಹೆಣ್ಣು ಕೂಡ ಈಗಿನ ಎಲ್ಲ ಕ್ಷೇತ್ರಗಳಲ್ಲಿಯೂ ದುಡಿಮೆಯಲ್ಲಿ ತೊಡಗಿರುವಾಗ ಮೊದಲಿದ್ದ ಸಾಂಪ್ರದಾಯಿಕ ಲೆಕ್ಕಾಚಾರಗಳಲ್ಲಿ ಬದಲಾವಣೆ ಕಂಡಿದೆ. ಹೆಣ್ಣು ಮೊದಲಿನಂತೆ ಗಂಡಿನ ಅನುವರ್ತಿಯಾಗಿ, ಆದೇಶಗಳನ್ನು ಪಾಲಿಸುವ ಹಂತದಿಂದ ಆದೇಶ ಮಾಡುವ, ಸ್ವಂತ ನಿರ್ಧಾರ ಕೈಗೊಳ್ಳುವ ಮಟ್ಟಕ್ಕೆ, ತನ್ನ ಬೇಕು ಬೇಡಗಳನ್ನು ನಿರ್ಧರಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾಳೆ. ಹೆಣ್ಣಿನ ಈ ಬೆಳವಣಿಗೆಯನ್ನು ಒಪ್ಪಿಕೊಳ್ಳಲಾಗದ ಗಂಡಿನ ಹಿಂಜರಿಕೆ ಬೇರೆ ಬೇರೆ ರೀತಿಯಲ್ಲಿ ಪ್ರಕಟವಾಗಿ ಒಟ್ಟಾರೆ ಕುಟುಂಬ ವ್ಯವಸ್ಥೆಯಲ್ಲಿ ಬಿರುಕು ಮೂಡಲು ಕಾರಣವಾಗಿವೆ.
ಇದು ಸಣ್ಣಪುಟ್ಟ ಕಾರಣಗಳಿಗಾಗಿ ದಂಪತಿಗಳು ಪರಸ್ಪರ ಬೇರೆಯಾಗುವುದಕ್ಕೆ ಕಾನೂನಿನ ಮಾನ್ಯತೆಯನ್ನು ಪಡೆಯುವ ಹಂತಕ್ಕೆ ಹೋಗುತ್ತಿದೆ. ಮದುವೆಯ ಚೌಕಟ್ಟಿನಲ್ಲಿ ಒಳಪಟ್ಟ ಗಂಡು– ಹೆಣ್ಣುಗಳಿಬ್ಬರೂ ಸುಶಿಕ್ಷಿತರಾಗಿದ್ದು ಹೊಂದಾಣಿಕೆ, ಸಾಮರಸ್ಯ, ಪರಸ್ಪರ ಗೌರವಿಸುವ ಮನೋಭಾವ ತಾಳದಿದ್ದರೆ ಸಹಬಾಳ್ವೆ ಕಷ್ಟವಾಗುತ್ತದೆ. ಕುಟುಂಬ ವ್ಯವಸ್ಥೆ ಅಷ್ಟೇನೂ ಬಿಗಿಯಿಲ್ಲದ ಹಾಗೂ ಮುಕ್ತ ಸ್ವಾತಂತ್ರ್ಯ ವಿಪುಲವಾಗಿರುವ ಅಮೆರಿಕ, ಬ್ರಿಟನ್ ನಂಥ ಸಮಾಜಗಳಿಗೆ ಸಮಾನವಾದ ಭಾರತೀಯ ಪರಿಸರದಲ್ಲಿಯೂ ಸಣ್ಣಪುಟ್ಟ ಕಾರಣಗಳಿಗಾಗಿ ವಿಚ್ಛೇದನಕ್ಕೆ ಯತ್ನಿಸುವ ಗಂಡು ಹೆಣ್ಣಿನ ವರ್ತನೆ ಆಶ್ಚರ್ಯಕರವೆನಿಸುತ್ತದೆ.
ಹೆಂಡತಿ ಚೆನ್ನಾಗಿ ಡ್ರೆಸ್ ಮಾಡುತ್ತಲಿಲ್ಲ, ಅಡುಗೆ ಮಾಡಲು ಬರುವುದಿಲ್ಲ, ಅತ್ತೆ ಮಾವನ ಜೊತೆಗೆ ವಾಸಿಸಲು ಬಯಸುತ್ತಿಲ್ಲ, ಮನೆಗೆಲಸ ಮಾಡುತ್ತಿಲ್ಲ ಎಂಬವೇ ಕಾರಣಗಳನ್ನು ಗಂಡಸರು ವಿವಾಹ ವಿಚ್ಛೇದನಕ್ಕೆ ಕೋರಿದ ಅರ್ಜಿಯಲ್ಲಿ ನಮೂದಿಸಿರುತ್ತಾರೆ. ಚೆನ್ನಾಗಿ ಡ್ರೆಸ್ ಮಾಡುತ್ತಲಿಲ್ಲ ಎನ್ನುವುದು ಅವನ ಆಕ್ಷೇಪಣೆಯಾದರೆ, ಅದು ನನ್ನ ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ದಬ್ಬಾಳಿಕೆ. ಅದೇ ಕಾರಣವಾಗಿದ್ದರೆ ನನ್ನ ಪ್ರೀತಿ, ನಿಷ್ಠೆ ಮತ್ತು ಹೊಂದಾಣಿಕೆಯ ಪ್ರವೃತ್ತಿಗೆ ಅವನೂ ಅರ್ಹನಲ್ಲ ಎಂದು ಗಂಡನ ವಿರುದ್ಧ ಪ್ರತಿ ನುಡಿಯುವ ಸ್ಥೈರ್ಯ ಈಗಿನ ಹೆಣ್ಣುಗಳಿಗಿದೆ. ಗಂಡ ಲೈಂಗಿಕವಾಗಿ ಅಸಮರ್ಥ ಎಂದು ಧೈರ್ಯದಿಂದ ಹೇಳುವ ಹೆಣ್ಣು ಈಗಿನ ಸ್ತ್ರೀ ಸಾಮರ್ಥ್ಯದ ಪ್ರತೀಕ.
ಏನೇ ಆದರೂ ಸಣ್ಣಪುಟ್ಟ ಕಾರಣಗಳಿಗಾಗಿ ಮದುವೆಯ ಚೌಕಟ್ಟಿನಿಂದ ಹೊರಬರುವುದರಿಂದ ವೈಯಕ್ತಿಕ ಸ್ವಾತಂತ್ರ್ಯವನ್ನು ಕಾಯ್ದುಕೊಂಡ ಸಮಾಧಾನ ಇರಬಹುದಾದರೂ ಹೊಂದಾಣಿಕೆಯ ಮನೋಭಾವ ನೀಡುವ ಪ್ರಯೋಜನಗಳನ್ನು ನಿರ್ಲಕ್ಷಿಸಲಾಗದು. ಸಹಬಾಳ್ವೆ, ಸಾಮರಸ್ಯ, ಹೊಂದಾಣಿಕೆ, ಸಹಿಷ್ಣುತೆ, ಪರಸ್ಪರ ಗೌರವ—ಇಂಥ ಮೌಲ್ಯಗಳು ಏಕಾಏಕಿ ಉದ್ಭವಿಸುವ ಸಂಗತಿಗಳಲ್ಲ. ದಾಂಪತ್ಯದ ಯಶಸ್ಸು ನಾಗರಿಕ ಸಮಾಜದ ನಿದರ್ಶನ.

ಮಾಲತಿ ಮುದಕವಿ

Leave a Reply