ಹೀಗೊಬ್ಬ ‘ಕನಸು’ಗಾರ ಶಿಕ್ಷಕನಾದ ಕಥೆ…

ಹೀಗೊಬ್ಬ ‘ಕನಸು’ಗಾರ ಶಿಕ್ಷಕನಾದ ಕಥೆ…
ಅದೊಂದು ಕಾಲವಿತ್ತು. ಆಸಕ್ತಿ, ಅರ್ಹತೆ, ಅನುಕೂಲಗಳು ಇದ್ದವರು ಮಾತ್ರ ಶಿಕ್ಷಣದ ಬಗ್ಗೆ ಯೋಚಿಸುತ್ತಿದ್ದರು. ಬಹುತೇಕ ಜನ ಕುಲಕಸುಬನ್ನು ಅಲಿಖಿತ ಒಪ್ಪಂದದಂತೆ ಸ್ವೀಕರಿಸಿ ಬದುಕುವವರೇ ಜಾಸ್ತಿ. ನಮ್ಮ ಮನೆಯಲ್ಲಿ ಬಹಳಷ್ಟು ಆಸಕ್ತಿ, ಒಂದಿಷ್ಟು ಅರ್ಹತೆ ಬಿಟ್ಟರೆ ಅನುಕೂಲಗಳು ಶುನ್ಯ.
“ಒಂದೂರಿನಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದ. ಅವನಿಗೆ ಮನೆತುಂಬ ಮಕ್ಕಳು” ಎಂದು ಕಥೆ ಸುರುವಾದರೆ “ನಮ್ಮವಲ್ಲ ತಾನೇ” ಅನಿಸಿಬಿಡುವಷ್ಟು ಸಾಮ್ಯತೆ. ನಮ್ಮ ಅಣ್ಣನಿಗೋ ಹೇಗಾದರೂ ಕಲಿಯಲೇ ಬೇಕು ಎಂಬ ಹಟ. ಊರಲ್ಲಿ ಹೈಸ್ಕೂಲ್ ಇರಲಿಲ್ಲವಾದ್ದರಿಂದ ಪರ ಉರುಗಳಲ್ಲಿ ಇರಬೇಕು. ಅವನು ತಯಾರಿದ್ದರೂ ಇಟ್ಟುಕೊಳ್ಳುವವರು ಬೇಕಲ್ಲ! ಕೊನೆಗೆ ಕೂಹಿಡಿದದ್ದು ವಾರಕರಿ. ದಿನಕ್ಕೊಬ್ಬರ ಮನೆಯಲ್ಲಿ ಊಟ. ಕೆಲವರು ನಿಜವಾದ ಸಹಾನುಭೂತಿಯಿಂದ ಊಟ ಹಾಕಿದರೆ, ಇನ್ನು ಕೆಲವರಿಗೆ ಅದು ಒತ್ತಾಯದ ಮಾಘಸ್ನಾನ. ಅತ್ತ ಯೋಚಿಸುವ ಹಾಗೇ ಇಲ್ಲ. ಕಠಿಣ ಪಯಣಕ್ಕೆ ಸಿದ್ಧನಾಗಲೇ ಬೇಕಾದ ಅನಿವಾರ್ಯತೆ. ಆದದ್ದೂ ಆಯಿತು. ಅಣ್ಣ ಊರು ಬಿಟ್ಟು ರಾಣೇಬೆನ್ನೂರು ಸೇರಬೇಕಾಯಿತು.
ವಿವಿಧ ಜನ. ವಿವಿಧ ಮನಸ್ಸುಗಳು. ವಿವಿಧ ಪರಿಸರ. ಜೊತೆಗೆ ಆರ್ಥಿಕ ಮುಗ್ಗಟ್ಟು. ಆದರೂ ಒಂದನ್ನೂ ಮನೆಯವರೆಗೆ ತರದೇ ಎಲ್ಲವನ್ನೂ ಸದ್ದಿಲ್ಲದೇ ನುಂಗಿ ನಂಜುಂಡನಾಗಿ ಹೈಸ್ಕೂಲ್ ಮುಗಿಸಿದೆನೋ ಗೊತ್ತಿಲ್ಲ.
ಮುಂದೇನು? ಬಗೆಹರಯದ [ರಶ್ನೆ. ಕೊನೆಗೆ ಬೆಳಗಾವಿಯಲ್ಲಿ ದೂರದ ಬಂಧುಗಳೊಬ್ಬರ ಮನೆಯಲ್ಲಿದ್ದು ಅವರಿವರ ಅಲ್ಪ ಸ್ವಲ್ಪು ಸಹಾಯ, ಟ್ಯೂಶನ್,Scholarship ಮುಂತಾದ ಹತ್ತು ಹಲವು ಮಾರ್ಗಗಳಿಂದ ಕಾಲೇಜು ಶಿಕ್ಷಣದ ಪ್ರಾರಂಭವಾಯಿತಾದರೂ ದಿನವೊಂದು ಕಳೆದರೆ ಸಾಕಪ್ಪಾ ಎಂಬ ಅನಿಸಿಕೆ. ಬೇಕಾಗಿ ಆಯ್ದುಕೊಂಡ ದಾರಿ, ಗೊಣಗುವಂತಿಲ್ಲ. ಫಿ ತುಂಬುವ ವೇಳೆಗೆ ಪ್ರತಿವರ್ಷ ಮನೆಯಲ್ಲಿದ್ದ ಒಂದೇ ಒಂದು ಪಿತ್ರಾರ್ಜಿತ ಬೆಳ್ಳಿಯ ತಟ್ಟೆ ಅಕ್ಕಸಾಲಿಗರ ಅಂಗಡಿ ಕಂಡು, ಅಣ್ಣನ Scholarship ಹಣ ಕೈಗೆ ಬಂದ ತಕ್ಷಣ ಪುನಃ ಮನೆ ಸೇರುತ್ತಿತ್ತು. ಅಪ್ಪ ಅದನ್ನು ಪಂಜೆಯಲ್ಲಿ ಸುತ್ತಿ ಬಗಲಲ್ಲಿಟ್ಟು ಹೊರಟರೆ ಒರೀಕ್ಷೆ ಬಂತು ಎಂಬುದರ ಸೂಚಕ.
ಕಾಲ ಯಾರಿಗಾಗಿಯೂ, ಯಾವತ್ತಿಗೂ ನಿಂತ ಉದಾಹರಣೆಯಿಲ್ಲ.Degree ಮುಗಿಯಿತು. ಅಣ್ನ ಕಲಿಕೆಯ ದಾಹತೀರಲಿಲ್ಲ. ಆದರೆ ಈಗ ಅವನು ಕಷ್ಟಗಳಿಗೆ ಪಕ್ವವಾಗಿದ್ದ. ಅವುಗಳ ಜೊತೆ ತಕರಾರಿಲ್ಲದೇ ಬದುಕುವನ್ನು ರೂಢಿಸಿಕೊಂಡಿದ್ದ, ಕಲಿಯಬೇಕೆಂಬ ಹಟವೊಂದಕ್ಕೆ ಏನು ಬೇಕಾದರೂ ಮಾಡಲು ಸಿದ್ಧನಿದ್ದ.
ಅರ್ಜಣಗಿ ರಾಮಣ್ಣ ಅವರ ವಿದ್ಯಾರ್ಥಿ ನಿಲಯ ಮಾಳಮಡ್ಡಿ ಧಾರವಾಡ ಅವನ ಮುಂದಿನ ನೆಲೆಯಾಯ್ತು. MSc ಯ ಹುಡುಗ, ದೊಡ್ಡವನಾಗಿದ್ದ. ಅಡ್ಡಾಡಿ ಚಂದಾ ವಸೂಲಿ ಮಾಡಲಾಗದೇ ನಿಲಯದ ವಿದ್ಯಾರ್ಥಿಗಳ ಅಡಿಗೆ ಜವಾಬ್ದಾರಿ ವಹಿಸಿಕೊಂಡು ಬಾಣಸಿಗನಾದ. ಕಲಿಯಲೇಬೇಕೆಂಬ ದುರ್ಯೋಧನನ ಛಲ ಅವನಿಗೆ ಬದುಕಿನ ಹಲವು ಮಜಲುಗಳನ್ನು ಪರಿಚಯಿಸಿ ಅಗ್ನಿಯಲ್ಲಿ ಹಾಯಿಸಿ ಅಪರಂಜಿಯಾಗಿಸಿತು. ಯಾವ ಕಷ್ಟವೂ ಕಷ್ಟವೇಅಲ್ಲ. ಒಳ್ಳೆಯದಕ್ಕೇ ಎಂಬ ಭಾವ ಎಲ್ಲ ಅಗ್ನಿ ಪರೀಕ್ಷೆಗಳಲ್ಲೂ ಕಡೆಹಾಯಿಸಿ ಕಲಿತ ಕಾಲೇಜಿನಲ್ಲೇ ಉಪನ್ಯಾಸಕನಾದ.
ಆದರೆ ಆಗಿನ್ನೂ JSS college. ಧರ್ಮಸ್ಥಳದ ಆಡಳಿತಕ್ಕೆ ಒಳಪಟ್ಟಿರಲಿಲ್ಲ. ಸಂಸ್ಥೆ ಆರ್ಥಿಕ ಮುಗ್ಗಟ್ಟಿನಲ್ಲಿದ್ದು ಹಲವಾರು ತಿಂಗಳುಗಳ ವರೆಗೆ ವೇತನವೇ ಸಿಗುತ್ತಿರಲಿಲ್ಲ. ಆದರೂ ನೌಕರಿಯಿದೆ ಎಂಬ ಸಮಾಧಾನದಲ್ಲಿ ಅಲ್ಲಿಲ್ಲಿ ಕೈಗಡ ಮಾಡಿ ಕೆಲವರ್ಷಗಳನ್ನು ಹಾಗೂ ಹೀಗೂ ಕಳೆದು, ತಮ್ಮ ತಂಗಿಯರಿಗಲ್ಲದೇ ಊರಿಂದ ಬರುವ ಅರ್ಹ, ಬಡ ವಿದ್ಯಾರ್ಥಿಗಳನ್ನೂ ತೆಕ್ಕೆಗಳೆದುಕೊಂಡು ದಡ ಕಾಣಿಸಿ ಅವರವರ ಬದುಕು ಕಟ್ಟಿಕೊಳ್ಳಲು ಆಸರೆಯಾಗಿ ನಿಂತ ದೊಡ್ಡತನ ಅವನದು.
ಮತ್ತೆ ಕೆಲವೇ ವರ್ಷಗಳಲ್ಲಿ ಟ್ಯೂಶನ್ Class ಗಳನ್ನು ಪ್ರಾರಂಭಿಸಿ ಅದು ಸರಿಯಾದ ಲಯ ಕಂಡುಕೊಂಡಮೇಲೆ ಇನ್ನೂ ಸಾಕಷ್ಟು ವರ್ಷ ಕೆಲಸವಿದ್ದರೂ ಸ್ವಯಂ ನಿವೃತ್ತಿ ಪಡೆದು ತನ್ನದೇ ಒಂದು ಕಾಲೇಜು ಪ್ರಾರಂಭಿಸಿದ. ಅದಕ್ಕಾಗಿ ವಿದ್ಯಾರ್ಥಿಗಳಿಗಾಗಿ ತನ್ನ ವಂತ ಮನೆಯನ್ನು ಬಿಟ್ಟು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ರೂಮ್ ಮಾಡಿಕೊಂಡು ವಾಸ್ತವ್ಯವನ್ನೇ ಕಾಲೇಜಿಗೆ ಸ್ಥಳಾಂತರಿಸಿದ. ಈಗ ಕಾಲೇಜೇ ಅವನ ಮನೆ. ಸಾವಿರಾರು ವಿದ್ಯಾರ್ಥಿಗಳೂ ಸ್ವಂತ ಮೂರು ಮಕ್ಕಳ ಜೊತೆಗೆ ಸೇರ್ಪಡೆಯಾಗಿದ್ದಾರೆ.
ಹೋದ ವರ್ಷವಷ್ಟೇ ವಿಜಯಕರ್ನಾಟಕದ “ಶಿಕ್ಷಣ ಕ್ಷೇತ್ರದಲ್ಲಿ ಸಾಧಕ”ರ ಪಟ್ಟಿಯಲ್ಲಿ ಸ್ಥಾನ ಪಡೆದು ಪ್ರಶಸ್ತಿ ಪಡೆದದ್ದು ಅವನಿಗೆ ವೈಯಕ್ತಿಕ ನೆಲೆಯಲ್ಲಿ ವ್ಯತ್ಯಾಸವೆನಿಸದಿದ್ದರೂ ನಮಗೆಲ್ಲ ಹೆಮ್ಮೆ.
ಹಲವಾರು legendary figure ಗಳಲ್ಲಿ ನಮ್ಮ ಅಣ್ಣನನ್ನೂ ಸೇರಿಸುವಂತಾದುದು ನಮ್ಮ ಪುಣ್ಯ. ಇತ್ತೀಚೆಗೆ ಆರೋಗ್ಯ ಕೈಕೊಟ್ಟಿದೆ. ಆದರೂ ತನ್ನ class ಗಳ ಸಂಖ್ಯೆಯಲ್ಲಿ ಕಡಿತವಿಲ್ಲ. ದಿನಚರಿಯಲ್ಲಿ ವ್ಯತ್ಯಾಸವಿಲ್ಲ. ಅಂತಃಕರಣದಲ್ಲಿ ಬೇರಾರೂ ಸಾಟಿಯಿಲ್ಲ. ಅವನೊಂದು ದೊಡ್ಡ ಆಲದಮರ. ಅದರ ಕೆಳಗೆ ನಮ್ಮಂಥ ಲಕ್ಷಾನುಗಟ್ಟಲೇ ದಾರಿಹೋಕರು. ತಂಪೋ ತಂಪು.
ಇಂದು ಶಿಕ್ಷಕರ ದಿನ. ನಮ್ಮೆಲ್ಲರಿಂದ ಈ ಸಾಧಕನಿಗೆ ಎರಡೂ ಕೈಯೆತ್ತಿ ಸಾಷ್ಟಾಂಗ ನಮಸ್ಕಾರಗಳು. ಅವನಂಥ ಸಂತತಿ ಊರ್ಜಿತವಾಗಲಿ. ನಮ್ಮ ಅಣ್ಣ ನಮ್ಮೆಲ್ಲರ ಹೆಮ್ಮೆ.

Leave a Reply