ಹಿರಿಯ ಹಾಗೂ ಕಿರಿಯ ತಲೆಮಾರುಗಳ ಹೊಂದಾಣಿಕೆ ಹೇಗೆ?

ಹಿರಿಯ ಹಾಗೂ ಕಿರಿಯ ತಲೆಮಾರುಗಳ ಹೊಂದಾಣಿಕೆ ಹೇಗೆ?

ಹಿರಿಯ ಹಾಗೂ ಕಿರಿಯ ತಲೆಮಾರುಗಳಲ್ಲಿ ಹೊಂದಾಣಿಕೆಯ ಸಾಧ್ಯತೆ ಹೇಗೆ?
ಒಂದು ವೃಕ್ಷವು ಹೂ-ಕಾಯಿ-ಹಣ್ಣುಗಳನ್ನು ಹೊತ್ತು ನಳನಳಿಸುವಲ್ಲಿ ಚಿಗುರಿನಷ್ಟೇ ಬೇರೂ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ತಾಯಿಬೇರನ್ನು ಮರೆತು ಹಸಿರು ಉಳಿಸಿಕೊಂಡ ಮರವನ್ನು ನಾವೆಂದಾದರೂ ನೋಡಿರುವೆವೆ? ಅದೇ ರೀತಿ ಬೇರು ಕಡಿದಮೇಲೆ ವೃಕ್ಷ ಚಿಗುರು ಹೊತ್ತು ನಿಂತ ಉದಾಹರಣೆಯಿದೆಯೇ?
ಮಾನವನ ಜೀವನವೂ ಕೂಡ ವೃಕ್ಷದಂತೆಯೇ. ಸಸಿಯಿಂದ ವೃಕ್ಷವಾಗುವವರೆಗಿನ ಅವನ ಅನುಭವದ ಕಣಜದಲ್ಲಿ ದುಃಖ, ಸುಖ, ನೋವು ನಲಿವು ಎಲ್ಲವೂ ಇವೆ. ಒಂದು ರೀತಿಯಲ್ಲಿ ಮಾಗಿದ ಫಲವಿದ್ದಂತೆ.
ಇಂದು ನಾವು ನೋಡುತ್ತಿರುವಂತೆ ಯುವಜನಾಂಗ ಹಾಗೂ ವೃದ್ಧರ ನಡುವೆ ಒಂದು ಕಂದಕ ಏರ್ಪಡುತ್ತಿದೆ. ಅದಕ್ಕೆ ಕಾರಣ ಇವರಿಬ್ಬರ ನಡುವಿನ ಕೊಂಡಿಯಾದ ಮಧ್ಯವಯಸ್ಕರ ಲ್ಲಿಯ ತಪ್ಪುತ್ತಿರುವ ತಾಳ. ಅವರು ಇವರಿಬ್ಬರಲ್ಲಿ ಸಮರಸದ ಸಂಬಂಧವನ್ನು ಬೆಸೆಯುವುದರಲ್ಲಿ ಸೋಲುತ್ತಿದ್ದಾರೆ. ಅದಕ್ಕೆ ಕಾರಣಗಳು ಹಲವಾರು.
ಮೊದಲಿನಿಂದಲೂ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತ ಬಂದ ಹಿರಿಯರು ಈ ಕಾಲದ ಬದಲಾವಣೆಗಳೊಂದಿಗೆ ಹೊಂದಿಕೊಳ್ಳಲಾರದೆ ಸೋಲುತ್ತಿದ್ದಾರೆ. . ಇಂದಿನ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತ್ಯಂತರಗಳು ಅವರ ತಿಳಿವಳಿಕೆಗೆ ನಿಲುಕವು. ಅವುಗಳ ಬಗ್ಗೆ ಅವರಿಗೆ ತಿಳಿಸಿಹೇಳುವುದು… ಅದು ಸಾಧ್ಯವಿಲ್ಲದ ಪಕ್ಷದಲ್ಲಿ ಅವರನ್ನು ಮೂದಲಿಸದೇ ಸುಮ್ಮನೆಯೂ ಇರಬಹುದು. ‌ತಂದೆತಾಯಿಯರು ವೃದ್ಧರಿಗೆ ಉಚಿತ ಮರ್ಯಾದೆ ಕೊಡದೇಹೋದಲ್ಲಿ ಅವರ ಮಕ್ಕಳೂ ಕೊಡುವುದಿಲ್ಲ.
ವೃದ್ಧರ ಆರೋಗ್ಯದತ್ತ ಸಾಕಷ್ಟು ಗಮನವನ್ನು ಕೊಡಬೇಕಾಗುತ್ತದೆ. ಆದರೆ ಕೇವಲ ಗುಳಿಗೆ, ಔಷಧಗಳು, ಅವರ ಆಹಾರ ಇವುಗಳಿಗೆ ಗಮನವಿತ್ತರೆ ಸಾಲದು. ಎಷ್ಟೇ ಕೆಲಸದ ಒತ್ತಡವಿದ್ದರೂ ಅವರೊಂದಿಗೆ ದಿನಕ್ಕೆ ಕನಿಷ್ಟ ಹತ್ತು ಹದಿನೈದು ನಿಮಿಷಗಳಾದರೂ ಒಳ್ಳೆಯ ಮಾತಾಡುತ್ತಲಿದ್ದರೆ ಅವರ ಆರೋಗ್ಯಕ್ಕೆ ಅದು ಟಾನಿಕ್ ಇದ್ದಂತೆ. ಪ್ರೀತಿ ವಿಶ್ವಾಸಗಳ ಅಗತ್ಯ ಅವರಿಗೂ ಇದೆಯೆಂಬುದನ್ನು ಮರೆಯಲಾಗದು. ಇದರಿಂದಾಗಿ ತಮ್ಮ ಮಕ್ಕಳು ಮರಿಗಳಿಗೆ ತಾವು ಬೇಡವಾಗಿಲ್ಲ ಅಥವಾ ಭಾರವಾಗಿಲ್ಲ ಎಂಬ ಭಾವನೆ ಅವರಲ್ಲಿ ಬರುತ್ತದೆ. ಲವಲವಿಕೆ ಹೆಚ್ಚುತ್ತದೆ. ಖಿನ್ನತೆ ಕಡಿಮೆಯಾಗುತ್ತದೆ. ಮೊಮ್ಮಕ್ಕಳೊಂದಿಗೆ ಆಟ ಅವರಿಗೆ ಅತ್ಯಂತ ಪ್ರಿಯವಾದದ್ದು. ಕೆಲವರು ತಮ್ಮ ಮಕ್ಕಳನ್ನು ಅವರೊಂದಿಗೆ ಆಡಲೂ ಬಿಡುವುದಿಲ್ಲ. ಇದರಿಂದ ಅವರ ಮನಸ್ಸಿಗೆ ನೋವಾಗುತ್ತದೆಯೆಂಬುದರ ಅರಿವಿದ್ದೂ. ಇದಕ್ಕೆ ಕಾರಣ ಹಲವಾರಿರಬಹುದು. ಅವರು ತಾವು ಹೊಸದಾಗಿ ಇವರ ಮನೆಗೆ ಮದುವೆಯಾಗಿ ಬಂದಾಗ ಕಾಡಿದ ನೆನಪು… ತಮ್ಮ ತಂದೆತಾಯಿಯರ ಬಗೆಗೆ ಅಸಡ್ಡೆಯಿಂದ ವರ್ತಿಸಿದುದು… ಅಥವಾ ವರದಕ್ಷಿಣೆಯ ಆಶೆ… ಹೀಗೆ. ದೇಹವು ಜರ್ಜರಿತವಾದಂತೆ ರೋಗಗಳು ಕಾಡುವಂತೆ ಹಳೆಯ ಕರ್ಮಗಳೂ ಕಾಡಬಹುದು. ಆದರೆ ಈಗ ಅವುಗಳನ್ನು ನೆನೆಯುತ್ತ ಕೂಡಲು ಸೂಕ್ತ ಸಮಯವಲ್ಲ. ಎಲ್ಲವನ್ನೂ ಮರೆತು ಅವರಿಗೆ ಊರುಗೋಲಾಗುವ ಸಮಯವಿದು. ಭಿನ್ನಾಭಿಪ್ರಾಯವಿಲ್ಲದ ಸಂಸಾರವಿಲ್ಲ. ಈ ಮಟೀರಿಯಲಿಸ್ಟಿಕ್ ಜಗತ್ತಿನಲ್ಲಿ ಸಣ್ಣಪುಟ್ಟ ವೈಷಮ್ಯಗಳು ಸಾಮಾನ್ಯ. ಹಾಗಾದಾಗ ಕೆಲವು ಸಂಸಾರಗಳು ವೃದ್ಧರಿಂದ ಸಿಡಿದು ಬೇರಾಗುವ ಸಾಧ್ಯತೆ ಬಹಳ. ಆರ್ಥಿಕವಾಗಿ ಸಬಲರಾದಂಥವರು ವೃದ್ಧರನ್ನು ವೃದ್ಧಾಶ್ರಮಗಳಲ್ಲಿ ಬಿಡುವ ಯೋಚನೆಯನ್ನೂ ಮಾಡುತ್ತಾರೆ. ಅನಿವಾರ್ಯತೆಯಿದ್ದಲ್ಲಿ ಅಂದರೆ ಮಾಡುವವರು ಇರದಿರುವ ಪಕ್ಷದಲ್ಲಿ ಸರಿ ಆದರೆ ಎಲ್ಲವೂ ಸರಿಯಾಗಿದ್ದರೂ ಹೀಗೆ ಅವರನ್ನು ಒಬ್ಬಂಟಿಯಾಗಿಸುವುದು ಒಳ್ಳೆಯ ನಿರ್ಧಾರವಲ್ಲ.
ಇನ್ನು ವೃದ್ಧರೂ ಕೂಡ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆಹಾರದಲ್ಲಿ ನಿಯಮಿತತನವಿರಬೇಕು. ಡಯಾಬಿಟಿಸ್, ಹೃದಯರೋಗ, ಬಿಪಿ ಇತ್ಯಾದಿಗಳಿದ್ದಲ್ಲಿ ಪಥ್ಯದ ಬಗ್ಗೆ ಗಮನವಿರಬೇಕು. ಮಾಡುವವರಿದ್ದರೂ ಅನುಭವಿಸುವವರು ತಾವೇ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮಕ್ಕಳನ್ನು, ಮೊಮ್ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಬೇಕು. ತಮ್ಮಿಂದ ಆದಷ್ಟು ಸಹಾಯ ಮಾಡಬೇಕು. ಅವರು ಮಾಡುವ ಕೆಲಸಗಳಿಗೆ ಹೆಸರಿಡಬಾರದು. ಸಹನೆಯಿಂದಿರಬೇಕು. ವ್ಯಾಯಾಮ, ವಾಕಿಂಗ್, ತಮ್ಮದೇ ಆದ ಸ್ನೇಹಿತರ ಗುಂಪು ಹೊಂದಿರಬೇಕು. ಆದರೆ ಅಲ್ಲಿ ತಮ್ಮ ಮನೆಯ ಜನರ ನಿಂದನೆ ಮಾಡುವ ಚಟವಿರಬಾರದು. ಒಮ್ಮೊಮ್ಮೆ ಮಾನಸಿಕವಾಗಿ ಅತಿಯಾಗಿ ನೊಂದರೆ ಇತರರಲ್ಲಿ ಹೇಳಿಕೊಳ್ಳಬಹುದಾದರೂ ಎಲ್ಲರೊಂದಿಗೂ ಹಂಚಿಕೊಂಡರೆ ಅದು ಮನೆಯವರ ಕಿವಿಗೆ ಬಿದ್ದಾಗ ಹಗರಣಗಳಾಗುವ ಸಂಭವ ಹೆಚ್ಚು. ಹೀಗೆ ಯಾರಿಗು ಸಾಧ್ಯವಾದಷ್ಟು ಭಾರವಾಗದೇ ಹೊಂದಿಕೊಂಡು ಹೋದರೆ ವೃದ್ಧರು ಅನಿವಾರ್ಯತೆಯಿಂದ ಅಗತ್ಯದ ಹಂತಕ್ಕೆ ಏರುವುದರಲ್ಲಿ ಸಂಶಯವಿಲ್ಲ.
ಮಾಲತಿ ಮುದಕವಿ

Leave a Reply