ಹಿರಿಯರು ನಿಶ್ಚಯಿಸಿದ ಮದುವೆಯೋ , ಪ್ರೇಮವಿವಾಹವೋ?

ಹಿರಿಯರು ನಿಶ್ಚಯಿಸಿದ ಮದುವೆಯೋ , ಪ್ರೇಮವಿವಾಹವೋ?
ಇಂದಿನ ಯುವಜನರು ತಮ್ಮ ವೈವಾಹಿಕ ಜೀವನ ಹಾಗೂ ಸಂಗಾತಿಯ ಬಗ್ಗೆ ಸಾಕಷ್ಟು ಚಿಂತನೆ ಮತ್ತು ಕನಸುಗಳನ್ನು ಹೊಂದಿರುತ್ತಾರೆ. ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದಾಗ ತಾವು ಬಯಸುವ ವ್ಯಕ್ತಿಗಳನ್ನು ಬಾಳ ಸಂಗಾತಿಯನ್ನಾಗಿ ಪಡೆದುಕೊಳ್ಳಲು ಮನಸ್ಸು ಹಂಬಲಿಸುತ್ಚದೆ. ತಮ್ಮ ಕನಸಿನ ಸಂಗಾತಿಯು ಅಥವಾ ತಮ್ಮ ಭಾವನೆಗಳಿಗೆ ಸ್ಪಂದಿಸುವ ಸಂಗಾತಿಯೊಂದಿಗೆ ಜೀವನವನ್ನು ಕಳೆಯಲು ಎಲ್ಲರೂ ಆಶೆ ಪಡುತ್ತಾರೆ. ಕೆಲವರು ಹಿರಿಯರ ಸಮ್ಮುಖದಲ್ಲಿ ಸಂಗಾತಿಯನ್ನು ಆರಿಸಿಕೊಳ್ಳುವುದಕ್ಕಿಂತ, ತಾವೇ ತಮ್ಮ ಸಂಗಾತಿಯನ್ನು ಆರಿಸಿಕೊಂಡು ಪ್ರೇಮ ವಿವಾಹ ಆಗಲು ಬಯಸುತ್ತಾರೆ. ಇನ್ನು ಕೆಲವರಿಗೆ ತಮ್ಮ ಆಯ್ಕೆಗಿಂತ ಹಿರಿಯರ ಆಯ್ಕೆಯ ಮೇಲೆಯೇ ಭರವಸೆ.

ಹಿರಿಯರು ನಿಶ್ಚಯಿಸುವ ವಿವಾಹಗಳಲ್ಲಿ ಮೊದಲ ಹೆಜ್ಜೆ ಮನೆತನ, ಆ ಮನೆತನದ ಜನರ ಸ್ವಭಾವ ಇತ್ಯಾದಿಗಳನ್ನು ಮೊದಲು ನೋಡಿ ನಂತರವೇ ಸಂಬಂಧದ ಕುರಿತಂತೆ ಮಾತನಾಡುತ್ತಾರೆ. ಅವರ ಬಾಯಿಂದಲ್ಲದೆ ಇತರರಿಂದಲೂ ಕೂಡ ಆ ಹುಡುಗ ಅಥವಾ ಹುಡುಗಿಯ ಸ್ವಭಾವಗಳ ಬಗ್ಗೆಯೂ ವಿಚಾರ ಮಾಡುತ್ತಾರೆ. ಹುಡುಗನು ಸ್ವಾವಲಂಬಿ ಆಗಿದ್ದಾನೊ ಇಲ್ಲವೋ, ಮುಂದೆ ಹೆಂಡತಿ ಮಕ್ಕಳ ಜವಾಬ್ದಾರಿ ಹೊರುವ ಯೋಗ್ಯತೆ, ಅವನ ಅಥವಾ ಅವಳ ಆರೋಗ್ಯ ಇವುಗಳ ಬಗ್ಗೆ ವಿಚಾರಿಸಿ ಮುಂದೆ ಕುಂಡಲಿ ಮುಂತಾದವನ್ನು ಕೂಡಿಸಿ ನೋಡುವ ಹೆಜ್ಜೆ. ಗ್ರಹಗಳು ಮತ್ತು ಅವುಗಳ ದೆಸೆಯ ಗುಣಗಳು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತವೆಯೆಂದು ಅವರ ಅನಿಸಿಕೆ.
ನನ್ನ ಅಭಿಪ್ರಾಯದಲ್ಲಿ ಹಿರಿಯರು ನೋಡಿ ಒಪ್ಪಿ ಮಾಡಿದ ಮದುವೆಗಳೇ ಹೆಚ್ಚು ಸುರಕ್ಷಿತ. ಮದುವೆ ಎಂದರೆ ಕೇವಲ ಎರಡು ಹೃದಯಗಳ ಮಿಲನವಲ್ಲ. ಎರಡು ಕುಟುಂಬದ ಸದಸ್ಯರ ಪರಸ್ಪರ ಪ್ರೀತಿ, ಸಹಕಾರಗಳೂ ಕೂಡ ಇಲ್ಲಿ ಅವಶ್ಯಕ. ಇಷ್ಟು ಕಾಳಜಿ ವಹಿಸಿದ ನಂತರವೂ ಕೂಡ ಗಂಡ ಹೆಂಡತಿಯರಲ್ಲಿ ವೈಮನಸ್ಸು ಬರುವುದಿಲ್ಲವೆಂದೇನು ಗ್ಯಾರಂಟಿ ಎಂದೂ ಕೆಲವರು ಕೇಳಬಹುದು. ಪ್ರೇಮ ವಿವಾಹಗಳಂತೆಯೇ ಇಲ್ಲೂ ಕೂಡ ಕೆಲವೊಮ್ಮೆ ಭಿನ್ನಾಭಿಪ್ರಾಯಗಳು ಬಂದೇ ಬರುತ್ತವೆ. ವಿವಾಹ ಎಂದರೆ ಕೇವಲ ದೈಹಿಕ ಮಿಲನವೇ ಎಂದೇನಲ್ಲ. ಸಾಮಾಜಿಕ, ವೈಯಕ್ತಿಕ ಎಲ್ಲದರ ಹೊಂದಾಣಿಕೆ ಇಲ್ಲಿ ಅನಿವಾರ್ಯ. ಹೆಣ್ಣು ತನ್ನವರನ್ನು ತೊರೆದು ಒಬ್ಬ ಅಪರಿಚಿತ ವ್ಯಕ್ತಿಗೆ ತನ್ನ ತನುಮನಗಳನ್ನೂ ತನ್ನ ಮುಂದಿನ ಜೀವನದ ಭರವಸೆಯನ್ನೂ ಒಪ್ಪಿಸಿ ಬಂದಿರುತ್ತಾಳೆ. ಅವನೊಂದಿಗೆ, ಅವನ ಕುಟುಂಬದ ಸದಸ್ಯರೊಂದಿಗೆ ಅವಳು ಹೊಂದಿಕೊಳ್ಳುವುದೇನೂ ಸುಲಭವಲ್ಲ. ಹಿರಿಯರು ನಿಶ್ಚಯಿಸಿರುವ ಮದುವೆಯೇ ಇರಲಿ, ತಾವೇ ನಿಶ್ಚಯಿಸಿಕೊಂಡು ಮಾಡಿಕೊಂಡಿರುವ ಮದುವೆಯೇ ಇರಲಿ, ಈ ಹೊಂದಾಣಿಕೆಯಂತೂ ಅನಿವಾರ್ಯ. ಒಂದು ವೇಳೆ, ಲೈಲಾ ಮಜನೂ, ಶಿರೀನ್ ಫರಹಾದ್, ರೋಮಿಯೊ ಜೂಲಿಯೆಟ್ ಇವರ ಪ್ರೀತಿಯೂ ಕೂಡ ಫಲಿಸಿ, ಮದುವೆಯಲ್ಲಿ ಪರ್ಯವಸಾನ ಹೊಂದಿದ್ದರೆ ಅವರ ಕಥೆ ಅಲ್ಲಿಗೆ ಮುಗಿಯುತ್ತಿರಲಿಲ್ಲ. ಅಕ್ಕಿ ಬೇಳೆ ತರಲೆಂದು ಹೊರಟರೆ, ಮನೆಗೆಲಸ-ಮಕ್ಕಳ ಲಾಲನೆ ಪಾಲನೆ ಮಾಡತೊಡಗಿದ್ದರೆ ಅವರ ಪ್ರೀತಿಯ ಕತೆ ಮುಗಿದು ಎಲ್ಲರಂತೆಯೇ ಅವರೂ ಜಗಳವಾಡಲು ಸೊಂಟ ಕಟ್ಟಿ ನಿಲ್ಲುತ್ತಿದ್ದರೇನೋ! ಇರಲಿ, ಈ ರೀತಿಯ ಹೊಂದಾಣಿಕೆಯ ಸಂದರ್ಭಗಳಲ್ಲಿ ಮನೆಯ ಹಿರಿಯರು ಸಹಕರಿಸುತ್ತಾರೆ. ಪ್ರೇಮ ವಿವಾಹಗಳಲ್ಲಿ ಕೆಲವೊಮ್ಮೆ ಈ ಸಹಕಾರದ ಕೊರತೆ ಕಂಡುಬರುತ್ತದೆ.
ನಂತರವೂ ಕೂಡ ಗರ್ಭಿಣಿಯರ ಸಮಸ್ಯೆ, ಮಕ್ಕಳ ಬೆಳವಣಿಗೆಯ, ಅವರ ಕಾಯಿಲೆಗಳ ಸಮಸ್ಯೆಗಳಲ್ಲೂ ಕೂಡ ಮನೆಯ ಹಿರಿಯರ ಸಹಕಾರ, ಸಹಾಯ ಬೇಕೇ ಆಗುತ್ತದೆ. ಈಗಲಂತೂ ಪತಿ ಪತ್ನಿಯರಿಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಅಂಥ ಸಂದರ್ಭದಲ್ಲಿ ಹಿರಿಯರ ಸಹಾಯ ಅನಿವಾರ್ಯ.
ಇದು ಲಿವಿಂಗ್ ಟುಗೆದರ್ ಕಾಲವಾಗಿದೆ. ನಮ್ಮಂಥ ಹಿರಿಯರ ಇಂಥ ಅಭಿಪ್ರಾಯಗಳನ್ನು ಓದಿ ಕೆಲ ಕಿರಿಯರು ನಗಲೂಬಹುದು. ಆದರೂ ಹಿರಿಯರು ನಿಶ್ಚಯಿಸಿದ ಮದುವೆಗಳೇ ಕ್ಷೇಮಕರ ಎಂಬುದು ನನ್ನ ಎನಿಸಿಕೆ.

Leave a Reply