ಅಲೆ ಅಲೆಯಾಗಿ ಬಂತು ಆಲೆಮನೆ ನೆನಪು….!

ದಿಮಿಸಾಲ್ ಹೊಡಿರಣ್ಣೋ…! ದಿಮಿಸಾಲ ಹೊಡಿರೋ…! ಎನ್ನುವ ಇನಿದನಿ. ಅದರ ಬೆನ್ನ ಹಿಂದೆಯೇ ಅನುಸರಿಸಿ ಬರುವ ಲಯಬದ್ಧವಾದ ಹೋಯ್…! ಹೋಯ್…! ಎನ್ನುವ ವಿಶಿಷ್ಟ ಕೂಗು. ಫೆಬ್ರವರಿ-ಮಾರ್ಚ್ ತಿಂಗಳ ನಡುವಿನ ಅವಧಿ ಮಲೆನಾಡಿನ ಹಳ್ಳಿ ರಸ್ತೆಯಲ್ಲಿ ಸಾಗುವವರ ಕಿವಿ ತುಂಬುವ ಈ ಇನಿದನಿ, ಅಲ್ಲೇ ಆಸುಪಾಸಿನಲ್ಲಿ ಆಲೆಮನೆ ಚಾಲು ಇದೆ ಅಂತ ಸೂಚನೆ ಕೊಟ್ಟುಬಿಡುತ್ತದೆ. ಇದು ಆಲೆಮನೆಯ’ಕೊಂಗಿ’ ಹೊಡೆಯುವ ಪರಿ. ಕೋಣ ಕಟ್ಟಿ ಗಾಣ ತಿರುಗಿಸುವಾಗಿನ ಆಯಾಸ ಮರೆಯುವಲ್ಲಿ ಹುಟ್ಟುವ ಪದ್ಯಗಳಿವು.

ಆಲೆಮನೆ ಎಂದ ಕೂಡಲೇ ಮನಸ್ಸು ಹಿಂದಕ್ಕೆ ಓಡಿದೆ; ಊರ ನೆನಪಿನ ಮಾಲೆಯೊಂದು ಬಿಚ್ಚಿಕೊಳ್ಳುತ್ತದೆ. ಊರು-ಕೇರಿಯಲ್ಲಿ ಯಾರ ಮನೆಯ ಆಲೆಮನೆ ಎಂದು ತಲಾಶ್ ಮಾಡಿ ಹುಡುಗರ ಗುಂಪು ಅತ್ತ ಓಡುತ್ತಿತ್ತು. ಅವತ್ತಿನ ಕಾಲವೂ ಹಾಗಿತ್ತು. ಎಲ್ಲಿ ನೋಡಿದರಲ್ಲಿ ಹೊಲ-ಗದ್ದೆ ಬಯಲುಗಳೆಲ್ಲಾ ಕಬ್ಬು ಹೊತ್ತು ನಿಂತಿರುತ್ತಿದ್ದ ಪುಷ್ಕಳ ಕಾಲ. ಈಗಿನದ್ದು ಬಿಡಿ; ಅದು ಬೇರೆಯದೇ ಆದೊಂದು ಕಥೆ. ಲಾಭ-ನಷ್ಟದ ಲೆಕ್ಕಾಚಾರದ ತಿರುಗಣಿಗೆ ಸಿಕ್ಕ ಕೃಷಿಕ ಆಹಾರದ ಬೆಳೆಗಳು ಲುಕ್ಸಾನಿನ ಬಾಬತ್ತೆಂದು,ಕಡಿಮೆ ಶ್ರಮ ಬೇಡುವ ವಾಣಿಜ್ಜಿಕ ಬೆಳೆಗಳಿಗೆ ಮನಸೋತ. ಆಹಾರ ಬೆಳೆಗಳ ಸಂಸ್ಕೃತಿ ತತ್ತರಗೊಂಡಿದೆ. ತಾಲೋಕೊಂದರಲ್ಲೇ ಅಂದಾಜು ಶೇಕಡಾ 20ರಷ್ಟು ಕೃಷಿ ಭೂಮಿ ನೆಡುತೋಪು ಬಳಕೆಗೆ ರೂಪಾಂತರಗೊಂಡಿದೆ. ಹೀಗಾಗಿ ಈಗ ಮಲೆನಾಡಿನಲ್ಲಿ ಕಬ್ಬಿನ ಕೃಷಿ, ಆಲೆಮನೆ ಎರಡೂ ಅಪರೂಪವೇ ಆಗಿ ಬಿಟ್ಟಿದೆ.

ಈ ಹೊತ್ತಿಗೆ ಮಲೆನಾಡಿನ ಕೆಲ ಭಾಗಗಳಲ್ಲಿ ಕಬ್ಬಿನ ಗಾಣ ಆಡುತ್ತಿರುತ್ತದೆ. ಈಗೊಂದೆರಡು ದಶಕದಿಂದೀಚೆಗೆ ಗಾಣ ತಿರುಗಲು ಯಂತ್ರಗಳನ್ನು ಅಳವಡಿಸಿದ್ದು ಬಿಟ್ಟರೆ, ಮೊದಲೆಲ್ಲಾ ಕಬ್ಬಿನ ಗಾಣಗಳು ತಿರುಗುತ್ತಿದ್ದುದು ಕೋಣಗಳ ಸಹಾಯದಿಂದ. ಸಹ್ಯಾದ್ರಿ ಘಟ್ಟದ ಮೇಲಿನ ಹಳ್ಳಿಗಳಿಗೆ ಘಟ್ಟದ ಕೆಳಗಿನ ಆಚೀಚೆಯ ಊರುಗಳಿಂದ ಸುಮಾರು ನೂರೈವತ್ತು ಕಿ.ಮೀ. ರಸ್ತೆ ಮಾರ್ಗವಾಗಿ ನಡದೇ ಬರಬೇಕಿತ್ತು. ಎರಡು ಜೊತೆ ದಷ್ಟ-ಪುಷ್ಟ ಕೋಣಗಳೊಂದಿಗೆ, ಹಲವು ತಂಡಗಳಲ್ಲಿ ತಮ್ಮ ಭಾಗದ ಕೃಷಿ ಚಟುವಟಿಕೆ ಮುಗಿಸಿಕೊಂಡು, ದುರ್ಭರ ಘಟ್ಟ ಪ್ರದೇಶ ಹತ್ತಿ ಮಲೆನಾಡಿನ ಹಳ್ಳಿಗಳಿಗೆ ಬರುತ್ತಿದ್ದರು. ಹೀಗೆ ಬಂದವರು ಮಲೆನಾಡಿನ ಹಳ್ಳಿಯ ಗಾಣದ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು, ಸುತ್ತಲ ಹಲವೆಂಟು ಹಳ್ಳಿಯ ಬೆಳೆಗಾರರ ಕಬ್ಬು ಅರೆದು ಕೊಡುತ್ತಿದ್ದರು.

ಕೃಷಿರಂಗಕ್ಕೆ ಯಂತ್ರಗಳು ದಾಪುಗಾಲಿಡುತ್ತಿದ್ದಂತೆ, ಕೃಷಿ ಬದುಕಿಗೆ ಒತ್ತಾಸೆಯಾಗಿ ನಿಂತ ಪ್ರಾಣಿಗಳ ಜಾಗವನ್ನು ಯಂತ್ರಗಳು ಹಿಡಿದುಕೊಂಡವು. ಅವುಗಳ ಭರಾಟೆಯಲ್ಲಿ ಅಂದಿನ ಆಲೆಮನೆಯ ಗೌಜು-ಗಮ್ಮತ್ತು ಅಂದಿಗೇ ಕಳೆದುಹೋಯಿತು. ಅಂದು ಹುಡುಗರಾದ ನಮಗೆ ಆಲೆಮನೆ ಅಂದರೆ ಏನೋ ಸಂಭ್ರಮ-ಸಡಗರ. ಊರಲ್ಲಿ ಯಾರ ಮನೆಯ ಆಲೆಮನೆಯಾದರೂ ನಮಗೆ ಏನೇನೂ ನಿರ್ಭಂದವಿಲ್ಲ. ಕಬ್ಬು, ಕಬ್ಬಿನ ಹಾಲು ಜೊತೆಗೆ ಬಿಸಿ ಬಿಸಿಯಾದ ಜೋನಿಬೆಲ್ಲ ತಿನ್ನುವುದಕ್ಕೆ ಏನೇನು ಬರವಿಲ್ಲ. ಇಂತಹಾ ಆಲೆಮನೆಗಳು ಮರದ ಗುಂಪಿನ ನಡುವೆ, ಅಥವಾ ವಿಶಾಲವಾದ ಆಲದ ಮರದ ಕೆಳಗೆ ನಡೆಯುತ್ತಿದ್ದವು.

ವಸಂತ ಆಗಷ್ಟೇ ತನ್ನ ಕೈಚಳಕ ತೋರುವ ಹೊತ್ತು ಶಿಶಿರದಲ್ಲಿ ಬೋಳಾದ ಮರಗಳೆಲ್ಲಾ ಚಿಗುರು ಹೊತ್ತು ನಿಂತಿರುತ್ತಿದ್ದವು. ಬಳ್ಳಿಯಂತೆ ಇಳಿಬಿದ್ದ ರಂಬೆಗಳಲ್ಲಿ ಅರಳಿದ ಆಲದ ಎಳೆಯ ಎಲೆಗಳನ್ನು ಕಿತ್ತು ಎರಡು-ಮೂರು ಜೋಡಿಸಿ ಆಲಿಕೆ ಆಕಾರ ಮಾಡಿದರೆ, ಬಿಸಿ ಜೋನಿಬೆಲ್ಲ ತಿನ್ನಲು ‘ಕೊಟ್ಟೆ’ ರೆಡಿ. ಹಾ…, ಹು… ಎಂದು ಗಾಳಿ ಊದುತ್ತಾ…, ಅಳ್ಳಟ್ಟೆ (ಕಬ್ಬಿನ) ಸಿಪ್ಪೆಯ ತುಂಡನ್ನೇ ಚಮಚದಂತೆ ಬಳಸಿ ತಿನ್ನುವ ಘಮ್ಮತ್ತು ಅಂದಿಗೇ ಮರೆಯಾಗಿ ಬಿಟ್ಟಿತು. ಭಾವನಾತ್ಮಕ ಎಳೆಯ ಗಂಟುಗಳು ಸಡಿಲವಾಗುತ್ತಿರುವ ಅನುಭವ. ಯಂತ್ರ ನಾಗರೀಕತೆಯಿಂದ ಅಮೂಲ್ಯವಾದುದನ್ನೇನೋ ಕಳೆದುಕೊಂಡ ಭಾವ.
ಯಾವತ್ತೂ ಹಂಚಿ ತಿಂದರೆ ಅದು ಹಬ್ಬದ ಊಟವೆಂದೇ ಭಾವಿಸುವ ಕೃಷಿಕ, ದಾರಿಕೋಕರು ಯಾರೇ ಆಲೆಮನೆಗೆ ಬಂದರೂ ಹೊಟ್ಟೆತುಂಬಾ ಕಬ್ಬಿನ ಹಾಲು ಕುಡಿದು ಕೈಯಲ್ಲೆರಡು ಜಲ್ಲೆ ಹಿಡಿಯದೇ ಹಿಂತಿರುಗಿದ್ದು ಕಾಣ. ಇದೇನೋ ಒಂದಾನೊಂದು ಕಾಲದಲ್ಲಿ ಎಂದು ಆರಂಭವಾಗುವ ಅಡುಗೋಲಜ್ಜಿಯ ಕಾಲದ ಕಥೆಯಲ್ಲ. ಸುಮಾರು ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ಆದರ್ಶಮಯ ಉದ್ದೇಶಗಳು ವಾಸ್ತವದೆದುರು ಮುರಿದು ಬೀಳುತ್ತವೆ. ‘ಕೆಂಬೂತದ ಬಣ್ಣಕ್ಕೆ ಮನಸೋತ ಕಾಗೆ’ ಮೈಸುಟ್ಟುಕೊಂಡಿತೆಂಬ ಮಾತಿನಂತೆ; ಅಂದೆಂದೋ ಅಡಕೆಗೆ ಸಿಕ್ಕ ರೇಟಿನಿಂದ ಭತ್ತ, ಕಬ್ಬು ಹೊತ್ತು ತೊನೆದಾಡುತ್ತಿದ್ದ ಗದ್ದೆಗಳಿಂದು ಅಡಿಕೆ ಮರಹೊತ್ತು ಬೆವರಿಳಿಸುತ್ತಿವೆ. ಕೃಷಿ, ಹೈನುಗಾರಿಕೆಗೆ ಒತ್ತಾಸೆಯಾಗಿ ನಿಂತ ಸೊಪ್ಪಿನ ಬೆಟ್ಟಗಳಲ್ಲಿ ರಬ್ಬರ್ ಗಿಡಗಳು ಅಂಕುರಿಸುತ್ತಿವೆ.

ಕೂಲಿಬರದ ಕಾರಣವೊಡ್ಡಿ ಭತ್ತ. ಕಬ್ಬು ಬೆಳೆಯುವವರ ಸುಲಭದ ಆಯ್ಕೆ ಹಿಂದೆ ಅಡಿಕೆ ಬೆಳೆಯುವುದಾಗಿತ್ತು. ಈಗ ತೋಟದ ನಿರ್ವಹಣೆಯೂ ಕಷ್ಟವಾದ್ದರಿಂದ ಬಹುತೇಕ ಜನ ನೆಡುತೋಪುಗಳಿಗೆ ಶರಣಾಗಿದ್ದಾರೆ. ನೈಸರ್ಗಿಕ ಸಸ್ಯಗಳ ಬಳಕೆಯ ತಿಳುವಳಿಕೆ ಮರೆಯಾಗುತ್ತಿದೆ. ತಲೆಮಾರಿನಿಂದ, ತಲೆಮಾರಿಗೆ ವರ್ಗಾವಣೆಗೊಂಡು ಬಂದ, ಜನಸಮೂದಾಯದ ಆರೋಗ್ಯಕರ ಬದುಕಿಗೆ ಅಗತ್ಯವಿದ್ದ ಸಾವಯವ ಕೃಷಿಯ ಅಂಶಗಳು ಕೂಡಾ ಆಧುನಿಕತೆಯ ವೈಯಾರದ ಹೊಡೆತಕ್ಕೆ ಸಿಲುಕಿ ಬಣ್ಣಕಳೆದುಕೊಂಡಿವೆ.

ಅಂದು ಹಳ್ಳಿಯ ಯಾವುದೇ ರಸ್ತೆಯಲ್ಲಿ ಹೊರಟರೂ ಆಲೆಮನೆಯ ಘಮಘಮಿಸುವ ಬೆಲ್ಲದ ಪರಿಮಳ ಸುಳಿಯುತ್ತಿತ್ತು. ಹಳೆಯ ಆ ಮಧುರ ನೆನಪಿನೊಂದಿಗೆ ಊರಿನ ಗದ್ದೆ-ಬಯಲು ಸುತ್ತಹೊರಟರೆ ಅಲ್ಲೇನಿದೆ…!‘ಮಣ್ಣಂಗಟ್ಟಿ’…! ಈಗ ವಾಸನೆಯ ಸುಳಿವೂ ಕಾಣ. ಬೆಲ್ಲದ ಸುವಾಸನೆ ಬೀರುವಲ್ಲಿ ಅಡಿಕೆ ಸಿಪ್ಪೆಯ ‘‘ಘಾಟು’’ ತನ್ನ ಜಾಗ ಹಿಡಿದುಕೂತಿದೆ. ಈಗ ಪೇಟೆಯ ಪುಟ್ಟ-ಪುಟ್ಟ ವಿದ್ಯುತ್ ಚಾಲಿತ ಕ್ರಷರ್ ಗಳಲ್ಲಿ ಹನಿಯುವ ಕಬ್ಬಿನರಸ ಹೀರುವಾಗ ಮತ್ತೆ ಅವೆಲ್ಲಾ ನೆನಪಾಗಿ ಕಬ್ಬಿನ ರಸ ರಸವತ್ತಾಗಿ ರುಚಿಸದೇ ಸಪ್ಪೆ ಸಪ್ಪೆ. ಇಲ್ಲಿಂದ ಮುಂದೆ ವಾಸ್ತವತೆಯೇ ನಮ್ಮನ್ನು ಮುನ್ನೆಡೆಸುತ್ತಾ ಹೋಗುತ್ತದೆ. ನಾವು ಈಗ ಕಳೆಯುತ್ತಿರುವ ದಿನಗಳು ಇಂಥವು. ಕಿನ್ನರರ ಆ ಮಾಯಾಲೋಕ ಎಲ್ಲಾ ಕಾಲಕ್ಕೂ ಸಿಗಲಿ.

  -ಹೊಸ್ಮನೆ ಮುತ್ತು.

Leave a Reply