“ಇಲ್ಲೇ ಇತ್ತವ್ವಾ ಮೂಗುತಿ”

“ಇಲ್ಲೇ ಇತ್ತವ್ವಾ ಮೂಗುತಿ”

“ಇಲ್ಲೇ ಇತ್ತವ್ವಾ ಮೂಗುತಿ” ಎಂದು ಅವ್ವ ಸುಶ್ರಾವ್ಯವಾಗಿ ಹಾಡುವಾಗ ನಾನು ಚಿಕ್ಕಂದಿನಲ್ಲಿ ಅರಳುಗಣ್ಣುಗಳಿಂದ ನೋಡುತ್ತಿದ್ದೆ. ಅವಳ ಧ್ವನಿಯಂತೂ ಸೈ. ಅದರೊಂದಿಗೆ ಪುರಂದರದಾಸರ ಅದ್ಭುತವಾದ ಸಾಧನೆಯ ಕಥೆ.
ಇವರ ಮೊದಲ ಹೆಸರು ಶ್ರೀನಿವಾಸ ನಾಯಕ, ತಂದೆ ವರದಪ್ಪನಾಯಕ, ತಾಯಿ ಲಕ್ಷ್ಮಿದೇವಿ. ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ.
ಇವರು ಕೂಡ ತಂದೆಯವರ ಲೇವಾದೇವಿ ವೃತ್ತಿಯನ್ನು ಮುಂದುವರೆಸಿಕೊಂಡು ಹೋದರು. ಆದರೆ ಅತ್ಯಂತ ಜಿಪುಣ.
ಒಮ್ಮೆ ದೇವರು ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ಮಗನ ಉಪನಯನಕ್ಕೆ ಹಣ ಬೇಡಿದನಂತೆ. ಜಿಪುಣ ಶ್ರೀನಿವಾಸ ಪ್ರತಿ ದಿನವೂ ಮಾರನೆಯ ದಿನ ಬರಹೇಳುತ್ತ, ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ಅದೇ ಬ್ರಾಹ್ಮಣ ಶ್ರೀನಿವಾಸ ನಾಯಕನ ಮನೆಗೆ ಬಂದು ಸರಸ್ವತಿಯ ಬಳಿ ತನ್ನ ಮಗನ ಉಪನಯನದ ಬಗ್ಗೆ ಹೇಳಿ ಅವಳಿಂದ ಸಹಾಯ ಯಾಚಿಸುತ್ತಾನೆ. ಸರಸ್ವತಿ ಮರುಕದಿಂದ ತನ್ನ ಬಳಿ ಯವುದೇ ಧನ ಆಭರಣಗಳಿಲ್ಲ ಎಲ್ಲವೂ ತನ್ನ ಗಂಡನ ಬಳಿ ಇದೆ. ಅವರ ಅನುಮತಿ ಇಲ್ಲದೇ ಏನನ್ನೂ ಕೊಡುವ ಪರಿಸ್ಥಿತಿಯಲ್ಲಿಲ್ಲ ಎಂದು ಬೇಸರ ಪಡುತ್ತಾಳೆ. ಆಗ ಆ ಬ್ರಾಹ್ಮಣ ನಿನ್ನ ತವರಿನಲ್ಲಿ ನಿನಗೆ ಕೊಟ್ಟ ಮೂಗುತಿಯ ಮೇಲೆ ನಿನ್ನ ಅಧಿಕಾರವಿದೆ. ಅದನ್ನೇ ಕೊಡು ಎಂದಾಗ, ಅವನಿಗೆ ತನ್ನ ಮೂಗುತಿಯನ್ನು ತೆಗೆದು ಕೊಟ್ಟಳಂತೆ. ಬ್ರಾಹ್ಮಣ ತಕ್ಷಣ ಮೂಗುತಿಯನ್ನು ಶ್ರೀನಿವಾಸನ ಅಂಗಡಿಗೆ ಒಯ್ದು ಅದನ್ನು ಅಡವಿಡಲು ಪ್ರಯತ್ನಿಸಿದನಂತೆ. ಶ್ರೀನಿವಾಸ ಆ ಮೂಗುತಿಯನ್ನು ಗುರುತಿಸಿ, ಹಣಕ್ಕೆ ನಾಳೆ ಬರುವಂತೆ ಬ್ರಾಹ್ಮಣನಿಗೆ ಹೇಳಿ, ಅದನ್ನು ಡಬ್ಬಿಯಲ್ಲಿಟ್ಟು ತಕ್ಷಣ ಮನೆಗೆ ಬಂದು ಪತ್ನಿಯ ಬಳಿ ಮೂಗುತಿಯನ್ನು ತೋರಿಸಲು ಹೇಳಿದನಂತೆ. ಹೆದರಿದ ಹೆಂಡತಿ ಸ್ನಾನ ಮಾಡುವಾಗ ತೆಗೆದಿಟ್ಟಿದ್ದೆ, ತರುತ್ತೇನೆಂದು ಒಳಗೆ ಹೋಗಿ, ಸ್ನಾನ ಕೊಠಡಿಯಲ್ಲಿ ವಿಷ ಕುಡಿಯುವ ಪ್ರಯತ್ನ ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅದನ್ನು ತಂದು ಶ್ರೀನಿವಾಸನಿಗೆ ಕೊಡುತ್ತಾಳೆ. ಅಂಗಡಿಗೆ ಹಿಂದಿರುಗಿ ಬಂದ ಶ್ರೀನಿವಾಸ ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಮಾಯವಾಗಿತ್ತಂತೆ. ಆಗ ಅವನಿಗೆ ಬಂದ ಬ್ರಾಹ್ಮಣ ಬೇರೆ ಯಾರೂ ಅಲ್ಲ, ತನ್ನನ್ನು ಪರೀಕ್ಷಿಸಲು ಸ್ವತಃ ನಾರಾಯಣನೇ ಬ್ರಾಹ್ಮಣ ವೇಷದಲ್ಲಿ ಬಂದಿದ್ದನೆಂದು ಅರಿತು, ತನ್ನ ಬಗ್ಗೆ ತಾನೇ ನಾಚಿಕೆ ಪಟ್ಟುಕೊಂಡ ಶ್ರೀನಿವಾಸ, ತನ್ನ ಶ್ರೀಮಂತಿಕೆಯನ್ನು ತೊರೆದು ಹರಿದಾಸನಾಗುವ ನಿರ್ಧಾರ ತೆಗೆದುಕೊಂಡನಂತೆ. ದೇವರು ದಾರಿ ತೋರಿಸಿದ್ದರ ಬಗ್ಗೆ ಕೃತಜ್ಞತೆಗಾಗಿ ತಮ್ಮ ಹೆಂಡತಿಯ ಜ್ಞಾಪಕಾರ್ಥ ಒಂದು ಕೀರ್ತನೆಯನ್ನೂ ಪುರಂದರದಾಸರು ರಚಿಸಿದ್ದಾರೆ. ನಂತರ ಶ್ರೀನಿವಾಸ ನಾಯಕ ‘ಪುರಂದರದಾಸ‘ ಎಂಬ ಹೆಸರನ್ನು ಪಡೆದರು.
ದಾಸರೆಂದರೆ ಪುರಂದರ ದಾಸರಯ್ಯ ಎಂದೇ ತಮ್ಮ ಗುರು ಶ್ರೀ ವ್ಯಾಸರಾಯರಿಂದಲೇ ಹೊಗಳಿಕೆಗೆ ಪಾತ್ರರಾದ ಪುರಂದರದಾಸರು ಕನ್ನಡ ಕೀರ್ತನ ಸಾಹಿತ್ಯ ಹಾಗೂ ಕರ್ಣಾಟಕ ಸಂಗೀತಕ್ಕೆ ನೀಡಿದ ಕೊಡುಗೆ ಗಮನಾರ್ಹ. ಪುರಂದರದಾಸರು ಸುಮಾರು 4,25,000 ಕೀರ್ತನೆಗಳನ್ನು ರಚಿಸಿರುವರೆಂಬ ಪ್ರತೀತಿ ಇದೆ. ಆದರೆ ಉಪಲಬ್ದವಿರುವ ಅವರ ಕೀರ್ತನೆಗಳು ಕೇವಲ 1000 ಮಾತ್ರ.
ಪುರಂದರದಾಸರ ಕೀರ್ತನೆಗಳಲ್ಲಿಯ ಒಂದು ವಿಶೇಷ ಎಂದರೆ ಹರಿಭಕ್ತಿಯ ಜೊತೆಗೆ ತಳುಕು ಹಾಕಿಕೊಂಡಿರುವ ಸಮಾಜ ವಿಡಂಬನೆ, ತುಳಿತಕ್ಕೊಳಗಾಗಿರುವವರ ಬಗೆಗಿನ ಕಳಕಳಿ.
ಆ ಕಾಲದ ಸಾಮಾಜಿಕ ಬದುಕು ರೋಗಿಷ್ಟವಾಗಿದ್ದಂತೆ ಕಾಣುತ್ತದೆ. ಆದ್ದರಿಂದಲೇ ಬದುಕಿನ ಆಡಂಬರ ಸೋಗಿನ ಡಾಂಭಿಕ ಬೂಟಾಟಿಕೆಯನ್ನು ನಿರಂತರವಾಗಿ ಪುರಂದರದಾಸರು ತಮ್ಮ ಕೀರ್ತನೆಗಳಲ್ಲಿ ದರ್ಶಿಸುವ ಪ್ರಯತ್ನ ಮಾಡುತ್ತಾರೆ. ಪುರಂದರದಾಸರ ಈ ವಾಣಿ ಅದಕ್ಕೊಂದು ಉತ್ತಮ ನಿದರ್ಶನ
“ಬೇವು ಬೆಲ್ಲದೊಳಿಡಲೇನು ಫಲ?
ಹಾವಿಗೆ ಹಾಲೆರೆದೇನು ಫಲ?
ಕುಟಿಲವ ಬಿಡದಿಹ ಮನುಜರು ಮಂತ್ರವ
ಪಠನೆಯ ಮಾಡಿದರೇನು ಫಲ?….
ಬಹು ಸಾರವತ್ತಾದ ಈ ಕೀರ್ತನೆಯಲ್ಲಿ ಪುರಂದರ ದಾಸರು ಮನುಷ್ಯನು ತನ್ನ ಬದುಕಿನಲ್ಲಿ ಮಾಡಬೇಕಾದ ಸತ್ಕರ್ಮಗಳನ್ನು ನೆನಪಿಸುತ್ತಾರೆ. ಹಾಗೆ ನಡೆದುಕೊಳ್ಳದವರ ಡಾಂಭಿಕತೆಯನ್ನು, ತೋರಿಕೆಯ ಆಚರಣೆಯನ್ನು ವಿಡಂಬಿಸುತ್ತಾರೆ. ತತ್ವರಹಿತವಾದ ಆಚರಣೆಗಳು ಎಂದಿಗೂ ನಿಷ್ಪ್ರಯೋಜಕ. ಮೋಸ ಮಾಡುವ ಸುಳ್ಳಾಡುವ ಜನರನ್ನು ಪುರಂದರದಾಸರು ಕಟುವಾಗಿ ಟೀಕಿಸುತ್ತಾರೆ. ತತ್ವ ಮತ್ತು ಆಚರಣೆಗಳು ಯಾವ ಕಾಲಕ್ಕೂ ಅಬೇಧವಾಗಿರತಕ್ಕದ್ದು. ಕಪಟ ಕುತಂತ್ರ, ಹಿರಿಯರಲ್ಲಿ ಅಗೌರವ, ಇತ್ಯಾದಿ ಗುಣಗಳ ಬೆಳೆಸಿಕೊಂಡು , ಲೋಕದ ಕಣ್ಣಿಗೆ ಜಪ ತಪಗಳ ಉಪವಾಸಗಳ ಮಾಡುತ್ತಾ ಸೋಗಿನ ಮುಖವಾಡದ ಜನರನ್ನು ಹೀಗಳೆಯುತ್ತಾರೆ. ಬೇವನ್ನು ಬೆಲ್ಲದಲ್ಲಿಟ್ಟರೂ ತನ್ನ ಕಹಿತ್ವವನ್ನು ನೀಗಿಸಿಕೊಳ್ಳಲಾಗದು. ಹಾಗೆ ದುಷ್ಟರು ಶಿಷ್ಟರ ಸಂಗದಲ್ಲಿದ್ದರೂ ತಮ್ಮ ಕುಟಿಲತೆಯನ್ನು ಬಿಡಲಾರರು.
ಒಟ್ಟಿನಲ್ಲಿ ಯಾವುದೇ ಕೀರ್ತನೆಯನ್ನು ತೆಗೆದುಕೊಂಡರೂ ಅದರ ಉದ್ದೇಶವೆಂದರೆ “ಆತ್ಮವಿಮರ್ಶೆ, ಆತ್ಮನಿಂದನೆ, ಮೋಕ್ಷ, ಮುಕ್ತಿ, ತತ್ವ ಮತ್ತು ನೀತಿ.”
“ಕೀರ್ತನೆಗಳು ಹುಟ್ಟಿಕೊಂಡದ್ದು ಹಾಡಾಗಿಯೇ, ಹಾಡುವುಕ್ಕಾಗಿಯೇ. ಮೊದಲು ಪಲ್ಲವಿ, ಅನುಪಲ್ಲವಿ ಅನಂತರ ನಾಲ್ಕು ಪಾದಗಳ ಕೆಲವು ಪದ್ಯಗಳು. ಇದು ಕೀರ್ತನೆಗಳ ರೂಪ. ಮಾದ್ವಮತದ ತತ್ವಜ್ಞಾನ, ತಾರತಮ್ಯಗಳನ್ನು ಅನುಸರಿಸಿ ದೇವತಾ ಸ್ತುತಿ, ಪರಮಾತ್ಮನ ವಿವಿಧ ಲೀಲೆಗಳ ಉಲ್ಲೇಖ, ವೈಯಕ್ತಿಕವಾದ ಅನಿಸಿಕೆ, ಕೀರ್ತನೆಗಳಲ್ಲಿ ಸಾಹಿತ್ಯ ಬೇಕಾದರೆ ಸಾಹಿತ್ಯವಿದೆ, ಸಂಗೀತ ಬೇಕಾದರೆ ಸಂಗೀತವಿದೆ, ಆಧ್ಯಾತ್ಮ, ತತ್ವ, ನೀತಿ ಬೇಕಾದರೆ ಅದೂ ಇದೆ. “ಪುರಂದರದಾಸರ ರಚನೆಗಳಲ್ಲಿ ಸಂಗೀತದ ಮಾಧುರ್ಯವೂ, ಸಾಹಿತ್ಯದ ಸ್ವಾರಸ್ಯವೂ, ಧರ್ಮದ ಸಂದೇಶವೂ ಸರಿಸಮಾನಾಗಿ ಬೆರೆತು ಎಲ್ಲರಿಗೂ ಪ್ರಿಯವಾದುವುಗಳಾಗಿವೆ.” ಇವರ ಕೀರ್ತನೆಗಳಲ್ಲಿ ಸಂಸ್ಕೃತದ ಆಡಂಬರವಿಲ್ಲ, ಸಂಧಿ-ಸಮಾಸಗಳ ಕ್ಲಿಷ್ಟತೆಯಿಲ್ಲ. “ಅಂತರಂಗದ ಅನುಭವಗಳನ್ನು, ತುಮುಲಗಳನ್ನು ನೇರವಾಗಿ, ಪ್ರಾಮಾಣಿಕವಾಗಿ, ತಿಳಿದ ಭಾಷೆಯಲ್ಲಿ, ಜನಸಾಮಾನ್ಯರಿಗೆ ತಿಳಿಯುವಂತೆ” ಹೇಳಿದರು.
ಸಾಹಿತ್ತಿಕ ವಸ್ತುವಿನ ದೃಷ್ಟಿಯಿಂದ ಅದೇನೆ ಇದ್ದರೂ, ಸಾಮಾಜಿಕ ಮತ್ತು ಸಂಗೀತದ ದೃಷ್ಟಿಯಿಂದ ದಾಸಸಾಹಿತ್ಯದ ಕೊಡುಗೆ ಅಪೂರ್ವವಾದುದು. ಪುರಂದರ ದಾಸರು ತಮ್ಮ ಕೀರ್ತನೆಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದೇ ಹೇಳಬಹುದು. ಇಂದು ಪುರಂದರದಾಸರ ಆರಾಧನಾ ದಿನ. ಬನ್ನಿ, ಆ ಮಹಾ ಹರಿದಾಸಶ್ರೇಷ್ಠರಿಗೆ ನಮಿಸಿ ಪುನೀತರಾಗೋಣ.

Leave a Reply