ಜಾಹೀರಾತುಗಳು..

ಜಾಹೀರಾತುಗಳು..

ಇಡೀ ವಿಶ್ವದಲ್ಲಿಯೇ ಮೋಹಕ ಹಾಗೂ ಮಾಯಾಜಾಲದ ಪ್ರಪಂಚವೆಂದರೆ ಜಾಹೀರಾತು ಪ್ರಪಂಚ. ಉತ್ಪಾದಕರು ತಾವು ಉತ್ಪಾದನೆ ಮಾಡಿದ ವಸ್ತುಗಳನ್ನು ಉದ್ದೇಶ ಪೂರ್ವಕವಾಗಿ ಮಾರಾಟ ಮಾಡಲು ಪ್ರಯತ್ನ ಮಾಡುತ್ತಾರೆ. ಗ್ರಾಹಕರಿಗೆ ವಸ್ತುಗಳ ಬಗ್ಗೆ ಮಾಹಿತಿಯನ್ನು ಹಲವು ತಂತ್ರಗಳ ಮೂಲಕ ತಿಳಿಸಿದರೆ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಹೀಗೆ ಅವರ ಮನ ಒಲಿಸಿಕೊಂಡು ವಸ್ತುಗಳನ್ನು ಖರೀದಿಸುವಂತೆ ಮಾಡುವ ಸಮೂಹಮಾಧ್ಯಮಗಳೇ ಈ ಜಾಹೀರಾತುಗಳು. ಇಂಥ ಜಾಹೀರಾತುಗಳಲ್ಲಿ ಮಾರುಕಟ್ಟೆ ಹೆಚ್ಚಿಸುವ ದೃಷ್ಟಿಕೋನವಿರುವುದರಿಂದ ಮಾರುಕಟ್ಟೆ ಕೇಂದ್ರಿತವಾಗಿ ಯಾವ ಯಾವ ತಂತ್ರಗಳನ್ನು ಉಪಯೋಗಿಸಿದರೆ ಸಮಾಜವು ತನ್ನನ್ನು ಸ್ವೀಕರಿಸಬಹುದೋ ಅಂಥ ತಂತ್ರಗಳನ್ನೆಲ್ಲ ಬಳಸಿಕೊಂಡು ತಮ್ಮ ಉದ್ದೇಶ ಪೂರೈಸಿಕೊಳ್ಳುತ್ತವೆ.
ಮಾಧ್ಯಮದ ಮೂಲಗುಣವೇ ಬದಲಾವಣೆ. ಹೀಗಾಗಿ ಅದು ತನ್ನ ಅಸ್ತಿತ್ವಕ್ಕಾಗಿ ನಿರಂತರ ಕ್ರಿಯಾಶೀಲತೆಯಿಂದ ಅನೇಕ ತಂತ್ರಗಳನ್ನು ಪ್ರಯೋಗಿಸುತ್ತಲೇ ಇರುತ್ತದೆ.
ಜಾಹೀರಾತಿನ ಮುಖ್ಯ ಉದ್ದೇಶ ಯಾವುದೇ ಉತ್ಪನ್ನದ ಅಥವಾ ಸೇವೆಯ ಬಗ್ಗೆ ಸಂದೇಶಗಳ ಮೂಲಕ ಜನರ ಮನ ಸೆಳೆಯುವುದು. ಈ ಸಂದೇಶಗಳನ್ನು ಅನೇಕ ರೀತಿಯ ಸಂಪರ್ಕಮಾಧ್ಯಮಗಳ ಮೂಲಕ ಜನಮಾನಸಕ್ಕೆ ಹರಿಬಿಡಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ದೂರದರ್ಶನ, ಕೇಬಲ್ ಟಿವಿ, ಅಂತರ್ಜಾಲ, ಗೋಡೆಬರಹಗಳು, ಬಸ್ಸಿನ ಎರಡೂ ಪಾರ್ಶ್ವಗಳು, ರೇಡಿಯೋ, ಬಿಲ್ ಬೋರ್ಡ್, ಪ್ರಿಂಟೆಡ್ ಪೇಪರ್, ಆಕಾಶದಲ್ಲಿ ಹಾರಿ ಬಿಡುವ ಬಲೂನುಗಳು, ಮ್ಯಾಗಜಿನ್ಸ್, ವೃತ್ತಪತ್ರಿಕೆಗಳು ಇತ್ಯಾದಿ.
ಜಾಹೀರಾತಿಗೆ ಸಾವಿರಾರು ವರ್ಷಗಳ ಇತಿಹಾಸವೇ ಇದೆ. ಭಿತ್ತಿ ಚಿತ್ರಗಳ ಪರಂಪರೆ ಕ್ರಿ. ಪೂ. 4000 ದಷ್ಟು ಪ್ರಾಚೀನವಾಗಿದೆ. ಆದರೂ19 ನೆಯ ಶತಮಾನದ ತಿರುವಿನಲ್ಲಿ ಇಂದು ನಾವು ಉಪಯೋಗಿಸುತ್ತಿರುವ ಸ್ಲೋಗನ್ ಪರಂಪರೆ ಪ್ರಾರಂಭವಾಯಿತು. ಅದೂ ಮಹಿಳೆಯರನ್ನು ಜಾಹೀರಾತಿಗೆ ಗುರಿಯಾಗಿಸಿಕೊಂಡು ಆ ಕಾಲದಲ್ಲಿ ಮಹಿಳೆಯರಿಗೆ ಉದ್ಯಮದಲ್ಲಿ ಜೀವನೋಪಾಯದ ಆಯ್ಕೆಗಳು ಅತಿ ಕಡಿಮೆಯಾಗಿದ್ದವು. ಆದರೆ ಅದರಲ್ಲಿ ಜಾಹೀರಾತು ಅವಕಾಶವನ್ನು ಪಡೆದಿತ್ತು. ಮಹಿಳೆಯರು ಕುಟುಂಬದ ಬಹುತೇಕ ಖರೀದಿಗೆ ಹೊಣೆಗಾರರಾಗಿದ್ದುದರಿಂದ ಜಾಹೀರಾತುದಾರರು ಅವರನ್ನೇ ಗುರಿಯಾಗಿಸಿದ್ದರೆನ್ನಬಹುದು. ಜಾಹೀರಾತಿನ ಜನಕ ಲಂಡನ್ ನ ಥಾಮಸ್ ಜೆ. ಬರಾಟ್. ಆತ ಮೊಟ್ಟ ಮೊದಲ ಬಾರಿಗೆ ಸ್ಲೋಗನ್ ಉಪಯೋಗಿಸಿದ್ದ. ಜೊತೆಗೆ ಒಬ್ಬ ಮಹಿಳೆಯ ಚಿತ್ರವನ್ನು ಕೂಡ ಉಪಯೋಗಿಸಿದ್ದ. “ಶುಭೋದಯ. ನೀವು ಪಿಯರ್ಸ್ ಸೋಪ್ ಉಪಯೋಗಿಸಿರುವಿರಾ?” ಎಂಬ ಈ ಬರಹ ಆ ಶತಮಾನದಲ್ಲಿ ಬಹಳಷ್ಟು ಪ್ರಸಿದ್ಧಿಯನ್ನು ಹೊಂದಿತ್ತು.
1920 ರ ಆರಂಭದಲ್ಲಿ ರೇಡಿಯೋ ಯುಗ ಅವತರಿಸಿತ್ತು. ರೇಡಿಯೋಗಳಲ್ಲಿ ಪ್ರಚಾರವಾಗುವ ಕಾರ್ಯಕ್ರಮಗಳನ್ನು ಪ್ರಾಯೋಜಿಸುವ ಅಭ್ಯಾಸ ಜನಪ್ರಿಯಗೊಂಡಿತು. 1940 ರ ದಶಕದ ಕೊನೆಯಲ್ಲಿ ಹಾಗೂ 1950 ರ ದಶಕದ ಆರಂಭದಲ್ಲಿ ದೂರದರ್ಶನಕ್ಕೂ ಜಾಹೀರಾತಿನ ಜಾಲ ವಿಸ್ತಾರಗೊಂಡಿತು. ಮುಂದೆ 1960 ರಿಂದ ಸೃಜನಾತ್ಮಕವಾಗಿ ಜಾಹೀರಾತು ಪ್ರಪಂಚ ಬೆಳೆಯಲಾರಂಭಿಸಿತು. ಗ್ರಾಹಕರ ಕಣ್ಣಿಗೆ ಹೆಚ್ಚು ಅಂದವಾಗಿ, ಆಕರ್ಷಕವಾಗಿ ಕಾಣಿಸುವಂಥ ಸಂದೇಶಗಳು ಸೃಷ್ಟಿಯಾಗತೊಡಗಿದವು. ಸಿನಿಮಾ ನಟ ನಟಿಯರನ್ನು ಕೂಡ ಬಳಸಿಕೊಳ್ಳಲಾರಂಭಿಸಿದರು. ನಾವೆಲ್ಲ ಮಕ್ಕಳಾಗಿದ್ದ ಆ ಕಾಲದಲ್ಲಿ ಸುಂದರ ಜಾಹೀರಾತುಗಳನ್ನು ನೋಡಲೆಂದೇ ಸಿನಿಮಾ ಗೃಹಗಳಿಗೆ ಹೋಗುತ್ತಿದ್ದೆವು! ದೂರದರ್ಶನದಿಂದ ಮುಂದೆ ಈ ಪ್ರಪಂಚ ವಿವಿಧ ಚಾನೆಲ್ ಗಳಿಗೂ ವಿಸ್ತಾರಗೊಂಡಿತು.
1960 ಸೃಜನಾತ್ಮಕ ಜಾಹೀರಾತುಗಳ ಯುಗದ ಪ್ರಾರಂಭದ ದಿನಗಳು ಎಂದು ಹೇಳಬಹುದು. ಜಾಹೀರಾತು ಪ್ರಪಂಚ ಇನ್ನೂ ಹೆಚ್ಚು ನಿಖರವಾಗಿ ಬೆಳೆಯಲಾರಂಭಿಸಿತ್ತು. ಜಾಹೀರಾತುಗಳು ಗ್ರಾಹಕರ ಕಣ್ಣಿಗೆ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಸುಂದರ ಸಂದೇಶಗಳೊಂದಿಗೆ ಬಿತ್ತರಗೊಳ್ಳತೊಡಗಿದವು.1990 ರಲ್ಲಿ ಕೇಬಲ್ ಮತ್ತು ಎಂ ಟಿ ವಿ ಪರಿಕಲ್ಪನೆಯ ಪ್ರವೇಶವಾಗಿತ್ತು. ಸಂಗೀತದ ವಿಡಿಯೋ ಪರಿಕಲ್ಪನೆ ಪ್ರಾರಂಭಗೊಂಡಿತ್ತು. ಹೀಗೆ ಜಾಹೀರಾತು ಒಂದು ಉಪವಸ್ತು ಅಥವಾ ಹಿನ್ನೆಲೆಯಾಗುವ ಬದಲಾಗಿ ಗ್ರಾಹಕರು ಜಾಹೀರಾತಿನ ಸಂದೇಶಕ್ಕೆಂದೇ ದೂರದರ್ಶನದ ಚಾನೆಲ್ ಆಯ್ಕೆ ಮಾಡತೊಡಗಿದರು. ನಂತರದ್ದು ಸಂಪೂರ್ಣವಾಗಿ ಜಾಹೀರಾತಿಗೇ ಮೀಸಲಾಗಿರಿಸಿದ ಟೆಲೆಶಾಪೀ, ಹೋಂ ಶಾಪೀ ಮುಂತಾದ ಚಾನೆಲ್ ಗಳ ಪ್ರಾರಂಭದ ಯುಗ. ಗೂಗಲ್ ಕೂಡ ಈ ದಿಸೆಯಲ್ಲಿ ಬಳಕೆದಾರರಿಗೆ ಸಹಾಯ ಮಾಡುವುದಕ್ಕಾಗಿ ಈ ಕ್ಷೇತ್ರದಲ್ಲಿ ಬದಲಾವಣೆ ಆರಂಭಿಸಿತು.
(ಮುಂದಿನ ಅಂಕಣದಲ್ಲಿ ಮುಂದುವರಿದಿದೆ.)

ಹೀಗೆ ವೃತ್ತಪತ್ರಿಕೆಗಳು, ನಿಯತಕಾಲಿಕೆಗಳು ಇತ್ಯಾದಿಗಳ ಜಾಹೀರಾತು ಮಾಧ್ಯಮ ಗಳಿಗಿಂತ ಜನರು ಹೆಚ್ಚಾಗಿ ದೂರದರ್ಶನ, ರೆಡಿಯೋಗಳಲ್ಲಿಯ (ಇದೂ ಕೂಡ ಎರಡನೆಯ ಸ್ಥಾನವನ್ನೇ ಪಡೆಯಿತು.) ಜಾಹೀರಾತುಗಳನ್ನೇ ಇಷ್ಟಪಡತೊಡಗಿದರು. ಇತ್ತೀಚಿನ ಗೆರಿಲ್ಲಾ ಪ್ರಚಾರಗಳೂ, ಸಂಚಾರೀ ಸರಕು ವಾಹನಗಳ ಮೇಲಿನ ಜಾಹೀರಾತು ಫಲಕಗಳೂ ಕೂಡ ಕಲ್ಪನೆಯ ಕೂಸುಗಳೇ. ಆದರೆ ಇತ್ತೀಚೆಗೆ ಜಾಹೀರಾತು ನಮ್ಮ ನಿತ್ಯ ಜೀವನದ ಚಟುವಟಿಕೆಗಳ ಮೇಲೂ ಸಾಮ್ರಾಜ್ಯ ಸ್ಥಾಪಿಸಹೊರಟಿದೆ ಎಂದು ನನ್ನ ಭಾವನೆ. ಅದಕ್ಕೆ ಪೂರಕವಾಗಿ ಇಂದು ನಮಗೆ ಬೆಳಗಾಗುವುದೇ ಈ ಜಾಹೀರಾತುಗಳಿಂದ. ಹಾಸಿಗೆಯಿಂದ ಎದ್ದು ಹಲ್ಲುಜ್ಜಲು ಸಿಂಕಿನ ಕಡೆಗೆ ಹೊರಟಿರಾ? …”ನೀವು ನಿನ್ನೆ ರಾತ್ರಿ ಬದನೆಕಾಯಿ ಪಲ್ಯ ತಿಂದದ್ದು ಯಾರಿಗೂ ತಿಳಿಯಬಾರದೆಂದಿದ್ದರೆ ಇಂತಿಂಥ ಟೂಥ್ ಪೇಸ್ಟ್ ಉಪಯೋಗಿಸಿರಿ” ಎಂಬ ಸಲಹೆ. ಅಥವಾ ನೀವು ಇನ್ನೂ ಲಕಿ ಇದ್ದರೆ, “ನಿಮ್ಮ ಟೂಥ್ ಪೇಸ್ಟ್ ನಲ್ಲಿ ಉಪ್ಪಿದೆಯಾ?” ಎಂದು ಪ್ರಸಿದ್ಧ ತಾರೆಯೊಬ್ಬಳು ನಿಮ್ಮ ಮನೆಯಂಗಳದಲ್ಲಿ(ಕ್ಷಮಿಸಿ, ನಿಮ್ಮ ಟಿವಿ ಪರದೆಯಲ್ಲಿ) ಜಿಗಿದು ಬರುತ್ತಾಳೆ! ಆಯ್ತು.. ಯಾವುದೋ ಒಂದು ಎಂದುಕೊಂಡು ಹಲ್ಲುಜ್ಜಿ ಟೇಬಲ್ ಗೆ ಬರುತ್ತಿದ್ದಂತೆಯೇ ಚಹಾ..! “ಇಂಥದೇ ಚಹಾ ಕುಡಿಯಿರಿ.. ಇದರಲ್ಲಿ ಆರೋಗ್ಯಕರ ಅಂಶಗಳಿರುವುದರಿಂದ ನೀವು ಎಂದೂ ಆಫೀಸಿಗೆ ಗೈರು ಹಾಜರಾಗುವುದಿಲ್ಲ…. ಆಗ ನಿಮಗೆ ನಿಮ್ಮ ಚಹಾದ ಕಪ್ ನ ಜೊತೆಗೆ ಆಫೀಸಿನಲ್ಲಿ ಕೂಡ ಬಹುಮಾನವಾಗಿ ಕಪ್ ಸಿಗಬಹುದಾದ ಚಾನ್ಸ್” … ಹಾಂ. ನಿಮ್ಮ ಚಹಾದ ಜೊತೆಗೆ ಬಿಸ್ಕತ್ ನ ಸರದಿ. ಅದರಲ್ಲಿ ಮೈದಾ ಇದೆಯೇ? ಬೇಡ. ನಿಮಗೆ ಅನಾರೋಗ್ಯ ಕಾಡೀತು! ಇನ್ನು ಗಡ್ಡ ಬೋಳಿಸುವ ಸರದಿ. ತೆಂಡೂಲ್ಕರ್ ಉಪಯೋಗಿಸುವ ಬ್ಲೇಡ್ ನೀವ್ಯಾಕೆ ಉಪಯೋಗಿಸಬಾರದು? ನೋಡಿರಿ, ಇದರಿಂದಾಗಿ ನಿಮ್ಮ ಬೆನ್ನ ಹಿಂದೆ ಹುಡಿಗೆಯರ ದಂಡು! ಸ್ನಾನಕ್ಕೆ ಹೊರಟಿರಾ? ಇಂಥದ್ದೊಂದು ಸೋಪ್ ಉಪಯೋಗಿಸಿದರೆ ನಿಮ್ಮ ಚರ್ಮ ಅಗದೀ ಸ್ಮೂಥ್. ಇಂಥದೇ ವಾಟರ್ ಹೀಟರ್ … ಇಂಥದೇ ಶಾಂಪೂ.. ಇಂಥದೆ ಕಂಡೀಶನರ್… ಅಥವಾ ಟೂ ಇನ್ ಒನ್. ಅಥವಾ ತಲೆಗೂ ಹಾಕಿರಿ, ಬೇಕಿದ್ದರೆ ಭುಜಕ್ಕೂ ಹಾಕಿರಿ! ತಲೆಗೆ ಎಣ್ಣೆ… ತಲೆಕೂದಲು ಕಪ್ಪಗಿರಬೇಕೇ? ಇಗೋ, ಇದರಲ್ಲಿ ಅಮೋನಿಯಾ ಇಲ್ಲ. ನಿಮ್ಮ ಮುಖ ಬೆಳ್ಳಗಾಗಬೇಕೇ? ಇಗೋ, ಆರು ವಾರಗಳಲ್ಲಿ ಬೆಳ್ಳಗಾಗುವಿರಿ… ಹೆಂಗಸರ ಕ್ರೀಂ ಬೇರೆ.. ಗಂಡಸರದೇ ಬೇರೆ. ವ್ಹೈಟ್ ಟೋನ್…. ಬೆಳ್ಳಗೆ ಕಾಣಿಸಿರಿ. ಕಾಲೇಜಿನಲ್ಲಿ ಎಲ್ಲ ಹುಡುಗಿಯರಲ್ಲಿ ಛಕ್ ಪಕ್ ಹೊಳೆಯಬೇಕಲ್ಲ! ಕೊನೆಗೆ ನಿಮ್ಮ ಒಳ ಉಡುಪನ್ನು ಆಯ್ಕೆ ಮಾಡುವ ಕೆಲಸ ಕೂಡ ಜಾಹೀರಾತು ಕಂಪನಿಯವರದೇ! ನಾಶ್ತಾದ ವಿಷಯದಲ್ಲಿ ಕೂಡ ಅವರು ಹಿಂದೆ ಬಿದ್ದಿಲ್ಲ. ಮಕ್ಕಳಿಗೆ ಎರಡೇ ನಿಮಿಷದಲ್ಲಿ ತಯಾರಾಗುವ, ಹತ್ತು ಕೈಗಳಿಂದ ಇಡ್ಲಿ, ವಡೆ, ದೋಸೆಗಳನ್ನು ಕ್ಷಣದಲ್ಲಿ ತಯಾರಿಸುವ ಮಾಂತ್ರಿಕತೆ ಅವರಲ್ಲಿದೆ. ಆಫೀಸಿಗೆ ಹೊರಟಿರಾ? ಯಾವ್ಯಾವ ಸಂದರ್ಭದಲ್ಲಿ ಯಾವ್ಯಾವ ಟೂ ವ್ಹೀಲರುಗಳನ್ನು ಉಪಯೋಗಿಸಬೇಕು ಎಂಬುದರ ಬಗ್ಗೆ ನೀವು ಪುಕ್ಕಟೆಯಾಗಿ, ಅಲ್ಲಲ್ಲ, ನಿಮ್ಮ ಸಮಯ, ನಿಮ್ಮ ಇಲೆಕ್ಟ್ರಿಸಿಟಿ ಬಿಲ್ ತೆತ್ತು ಸ್ವಲ್ಪವೇ ಖರ್ಚಿನಲ್ಲಿ ಸಲಹೆ ಪಡೆಯಬಹುದು. ನಿಮ್ಮದು ಇಷ್ಟು ಗಡಿಬಿಡಿಯ ಜೀವನವೆಂದಮೇಲೆ ತೂಕ ಏರುವುದು ಗ್ಯಾರಂಟಿ. ಇಗೋ ಇಲ್ಲಿದೆ ನಮ್ಮ ತೂಕ ಇಳಿಸುವ ಮಶಿನ್! ನಮ್ಮ ಔಷಧಿ… ನೋ ಸೈಡ್ ಇಫೆಕ್ಟ್! ಕೇವಲ ಎರಡೇ ದಿನಗಳಲ್ಲಿ ನಿಮ್ಮ ತೂಕ ಇಳಿಯುತ್ತದೆ. ಡಯಟ್ ಬೇಡವೇ ಬೇಡ! ವ್ಯಾಯಾಮ ಕೂಡ ಬೇಡ. ಆಯ್ತು. ರೋಗಿ ಬಯಸಿದ್ದೂ ಹಾಲನ್ನವೇ!
ಓಹೋ.. ನೀವು ಇಂಟರ್ ವ್ಯೂಗೆ ಹೊರಟಿರುವಿರಾ?ನಿಮ್ಮ ಬುದ್ಧಿವಂತಿಕೆಯ ಫೈಲುಗಳನ್ನು ಇತ್ತ ಕಡೆ ಇಡಿ. ನೀವೀಗ ಆಯ್ಕೆ ಆಗಬೇಕೆಂದಾದಲ್ಲಿ ನಿಮಗೆ ಬೇಕು ಈ ಕನಸಿನ ಲೋಕದ ಪೌಡರ್! ನಿಮ್ಮ ಆಫೀಸರ್ ನಿಮ್ಮ ಮೇಲೆ ಫಿದಾ! ಮಕ್ಕಳನ್ನು ಮರೆತಿದ್ದಾರೆಂದು ತಿಳಿದಿರಾ? ಸಾಧ್ಯವಿಲ್ಲ. ಯಾಕೆಂದರೆ ಇವರೇ ಜಾಹೀರಾತು ಲೋಕದ ಅಚ್ಚುಮೆಚ್ಚಿನ ಪೋಷಕರು. ಶಾಲೆಯಲ್ಲಿ ಕಲಿತದ್ದು ನೆನಪಿಡಬೇಕಾದರೆ ಈ ಡ್ರಿಂಕ್ಸ್. ಎಲ್ಲರಿಗಿಂತ ಎತ್ತರವಾಗಿ ಕಾಣಬೇಕಾದರೆ, ಕೆಮ್ಮದೆ, ಉಗುಳದೆ, ಶೀನದೆ ಇರಬೇಕೆಂದಲ್ಲಿ ಬೇಕೇ ಬೇಕೂ ಟಣ್ ಟಣಾ….
ಮೂಢನಂಬಿಕೆಯನ್ನು ಹುಟ್ಟು ಹಾಕುವಲ್ಲಿಯೂ ಈ ದೂರದರ್ಶನದ ಸಹಾಯ ಮರೆಯುವಂತಿಲ್ಲ. ಜ್ಯೋತಿಷ್ಯ ಹೇಳುವವರು.. ಅವ ಜ್ಯೋತಿಷ್ಯದ ಲಾಭ ಪಡೆದವರು. ಹೀಗೆ ದೊಡ್ಡ ದಂಡೇ ಇರುತ್ತದೆ. ಹತ್ತು ಬೆರಳುಗಳಲ್ಲಿಯೂ ದಪ್ಪ ದಪ್ಪದ ಉಂಗುರಗಳು, ಹಣೆಯ ಮೇಲೆ ಕುಂಕುಮ, ವಿಭೂತಿ, ಜರಿಯಂಗಿ, ಹಗ್ಗದಂಥ ಚೈನು! “ನೀವು ಮುಟ್ಟಿದ್ದೆಲ್ಲ ಚಿನ್ನವಾಗಬೇಕಿದೆಯಾ? ಹಾಗಾದರೆ ಈ ಯಂತ್ರ ಧರಿಸಿರಿ… ” ಎಂದು ಹೇಳುವ ಇವರು ತಾವೂ ಇಂಥ ಒಂದಿಷ್ಟು ಯಂತ್ರ ಗಳನ್ನು ಧರಿಸಬಾರದೇ?
ಆದರೆ ಈ ಜಾಹೀರಾತುಗಳು ಒಂದು ದೊಡ್ಡ ಉದ್ಯಮಕ್ಕೇ ಹುಟ್ಟು ಹಾಕಿ, ಅನೇಕ ಜನರಿಗೆ ಉದ್ಯೋಗವನ್ನೂ ಸೃಷ್ಟಿ ಮಾಡಿಕೊಟ್ಟಿವೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಅಷ್ಟೇ ಅಲ್ಲ, ಇಲ್ಲಿ ತರಬೇತಿ ಇದೆ, ಸೃಜನಶೀಲತೆಯಿದೆ, ಸ್ಪರ್ಧೆಯೂ ಇದೆ, ಅಲ್ಲದೆ, ನಿಮ್ಮಲ್ಲಿ ಒಂದು ವೇಳೆ ಆಕಾಶಕ್ಕೇರುವ ಉತ್ಕಟ ಅಭಿಲಾಷೆ, ಅದಕ್ಕೆ ತಕ್ಕಂತೆ ಛಲ, ಜಾಣ್ಮೆ ಇದ್ದರೆ ನಿಮ್ಮಲ್ಲಿ ಅಡಗಿರುವ ಸೃಜನಶೀಲತೆಯು ತೆರೆದುಕೊಳ್ಳಲು ಅವಕಾಶಗಳು ಮುಕ್ತ. ಮುಂದೆ ದುಡ್ಡು, ಕೀರ್ತಿಗಳ ಸುರಿಮಳೆ! ಅಲ್ಲದೆ ಇಲ್ಲಿ ಕೈತುಂಬಾ ಉದ್ಯೋಗಗಳೂ ಇವೆ. ಸಾಹಿತ್ಯಕ್ಕೂ ಕೂಡ ಅಲ್ಲೊಂದು ವಿಭಾಗವೇ ಇದೆ. ಜಾಹೀರಾತಿಗಾಗಿ ಎಲ್ಲರ ಮನ ಸೆಳೆಯಬಹುದಾದ ಸಾಹಿತ್ಯ ಸೃಷ್ಟಿಯಾಗುತ್ತದೆ. ಸಂಸ್ಥೆಯ ಹೆಸರು, ಸ್ಲೋಗನ್, ಸಂಸ್ಥೆಯು ನೀಡಬಹುದಾದ ಉತ್ಪನ್ನಗಳ ವಿವರ ಇದೆಲ್ಲದರ ಪೂರ್ಣ ಪರಿಚಯ ಪಡೆದು ನಂತರ ಅವುಗಳಿಗೆ ಅನುಗುಣವಾಗಿ ಚಿತ್ರ ರಚನೆ, ಪ್ರಾಸಬದ್ಧ ಕವಿತೆಗಳು, ಮಾತುಗಳು, ಅಗತ್ಯವಿದ್ದರೆ ಬದಲಾವಣೆ, ದೃಶ್ಯಮಾಧ್ಯಮವಾಗಿದ್ದಲ್ಲಿ ಕಲಾವಿದರ ಆಯ್ಕೆ, ರೆಡಿಯೋಗಳಲ್ಲಿಯ ಪ್ರಚಾರಕ್ಕೆ ಒಳ್ಳೆಯ ಧ್ವನಿಯ ಅವಶ್ಯಕತೆ, ಸಾಹಿತಿಗಳು, ಫೋಟೋಗ್ರಾಫರುಗಳು, ನಿರ್ಮಾಣ ಸಂಸ್ಥೆಗಳು, ಮುದ್ರಣಕಾರರು… ಹೀಗೆ ಅನೇಕ ಜನರ ಸಹಕಾರದಿಂದ ಇದು ಪೂರ್ಣಗೊಳ್ಳುತ್ತದೆ. ಒಂದು ಜಾಹೀರಾತು ಸಿದ್ಧವಾಗಬೇಕಾದರೆ ಗಿರಾಕಿಯ ಅಗತ್ಯಗಳನ್ನು ವಿಶ್ಲೇಷಿಸಬೇಕು. ನೀಡಬೇಕಾದ ಸಂದೇಶದ ರಚನೆ, ಅದು ತಲುಪಬೇಕಾದ ಶ್ರೋತೃಗಳು ಅಥವಾ ವೀಕ್ಷಕರು ಇತ್ಯಾದಿ ಮುಖ್ಯ ವಿಷಯಗಳನ್ನು ಗಮನಿಸಬೇಕಾಗುತ್ತದೆ. ಅದಕ್ಕನುಗುಣವಾಗಿ ಚಿತ್ರದ ರೂಪುರೇಷೆ, ವಿನ್ಯಾಸ, ರೂಪದರ್ಶಿಗಳು, ಅವರ ಬಟ್ಟೆ ಬರೆ, ನಂತರ ರಚನೆಯನ್ನು ದೃಶ್ಯಕ್ಕೆ ಅಳವಡಿಸುವುದು, ಮಲ್ಟಿಮೀಡಿಯಾ ಪ್ರದರ್ಶನಗಳಿಗೆ ಸಿದ್ಧಗೊಳಿಸುವದು, ತಮ್ಮ ರಚನೆ ಪೂರ್ತಿಗೊಳ್ಳುವಲ್ಲಿ ಸಹ ಕೆಲಸಗಾರರ ನಿರ್ವಹಣೆ ಇದೆಲ್ಲವನ್ನು ಗಮನಿಸಬೇಕಾಗುತ್ತದೆ. ಇದು ಗ್ರಾಫಿಕ್ಸ್ ಡಿಜೈನರುಗಳ ಕೆಲಸ. ಇಲ್ಲಿ ಫೋಟೋಗ್ರಫಿಯದೂ ಮುಖ್ಯ ಪಾತ್ರವೇ. ಮುಂದಿನದು ಅಕೌಂಟೆಂಟ್ ನ ಅವಶ್ಯಕತೆ. ಹಣಸಂಪಾದನೆ ಮಾಡಬೇಕಾದರೆ ಮೊದಲು ಬಂಡವಾಳ ಹಾಕಬೇಕಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಹಣ ಹಾಕಲು ಬಂಡವಾಳದಾರರಿಗೆ ಅಂದಾಜು ವೆಚ್ಚ, ಹಾಗೂ ಮುಂದೆ ಬರಬಹುದಾದ ಲಾಭಾಂಶದ ವಿವರ ಕೊಡಬೇಕಾಗುತ್ತದೆ. ಜಾಹೀರಾತು ಬಯಸಿಬಂದವರ ಅಗತ್ಯ, ಬೇಕು -ಬೇಡಗಳನ್ನೂ ಗಮನಿಸಿ, ಅವರ ಸರಕು ಅಥವಾ ಸೇವೆ ಯ ಜಾಹೀರಾತುಗಳನ್ನು ಅಭಿವೃದ್ಧಿ ಪಡಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಗ್ರಾಹಕರಿಗೆ ಸಮರ್ಥವಾಗಿ ತಲುಪಿಸುವ ಚಾಕಚಕ್ಯತೆಯೂ ಬೇಕಾಗುತ್ತದೆ. ಮಾರುಕಟ್ಟೆಯ ಅಧ್ಯಯನದ ಜೊತೆಗೇ ಅವರ ಮನಸ್ಸನ್ನು ಅರ್ಥ ಮಾಡಿಕೊಂಡು ಅವರಿಗೆ ಉತ್ಕೃಷ್ಟವಾದದ್ದನ್ನೇ ತಲುಪಿಸಬೇಕಾದ ಜವಾಬ್ದಾರಿಯೂ ಇದೆ. ಇಲ್ಲಿ ನಿರೂಪಣೆ ಹಾಗೂ ನಿರ್ವಹಣೆ ಎರಡೂ ಬೇಕಾಗುತ್ತದೆ. ಈ ರೀತಿಯಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡುವುದರಿಂದ ಈ ಕ್ಷೇತ್ರವನ್ನು ಕಡೆಗಣಿಸುವಂತಿಲ್ಲ.
ಕೇವಲ ಮಾಹಿತಿಯನ್ನು ಕೊಡುವ ಕೆಲಸ ಮಾತ್ರವಲ್ಲದೆ ಜಾಹೀರಾತುಗಳು ಮನದ ಮೇಲೆ ಅಚ್ಚೊತ್ತುವಂಥ ಭಾವನಾತ್ಮಕತೆಯನ್ನು ಕೂಡ ಸೃಷ್ಟಿಸುತ್ತವೆ. ಒಟ್ಟಿನಲ್ಲಿ ಬದಲಾಗುತ್ತಿರುವ ಸಮಾಜದ ದೃಷ್ಟಿಕೋನ ಹಾಗೂ ಬೆಳೆಯುತ್ತಿರುವ ಆರ್ಥಿಕ ಮುಕ್ತತೆಯ ಪರಿಣಾಮದಿಂದಾಗಿ ಜಾಹೀರಾತು ಉದ್ಯಮ ಇಂದು ಭದ್ರವಾದ ತಳಪಾಯ ಹೊಂದುತ್ತಿದೆ. ಹೀಗೆ ಮಕ್ಕಳ ಮನಸ್ಸಿಗೆ ತಟ್ಟುವ ಜಾಹೀರಾತುಗಳು ಕೆಲವಾದರೆ, ಹದಿ ಹರೆಯದ, ಹರೆಯದವರನ್ನು ತಟ್ಟುವ ಜಾಹೀರಾತುಗಳೂ ಹಲವು. ಅಂತೆಯೇ ವಯಸ್ಸಾದವರನ್ನು ಆಕರ್ಷಣೆ ಮಾಡುವ ಜಾಹೀರಾತುಗಳೇ ಬೇರೆ. ಹೀಗೆ ಇವು ಎಲ್ಲಾ ವಯೋಮಾನದ, ಎಲ್ಲಾ ವರ್ಗದ ಜನರನ್ನು ಆಕರ್ಷಿಸುತ್ತವೆ ಎಂದರೆ ತಪ್ಪಾಗಲಾರದು. ನಮ್ಮ ಇಡಿಯ ದಿನವನ್ನೇ ಆಳುವ ಈ ಜಾಹೀರಾತು ಪ್ರಪಂಚ ಒಂದು ಮೋಹಕ ಮಾಯಾಜಾಲವೇ ಎನ್ನುವಲ್ಲಿ ಎರಡು ಮಾತಿಲ್ಲ. ಇದರಿಂದ ಯಾರೂ ತಪ್ಪಿಸಿಕೊಳ್ಳಲಾರೆವು ಎನ್ನುವುದು ನಿತ್ಯ ಸತ್ಯ.

Leave a Reply