ಜೈಮಿನಿ ಕವಿ

ಜೈಮಿನಿ ಕವಿ
“ತಿಣುಕಿದನು ಫಣಿರಾಯ ರಾಮಾಯಣದ ತಿಂತಿಣಿಯ ಭಾರದಲಿ” ಎಂದು ಹೇಳಿದ ನಮ್ಮ ನಾರಣಪ್ಪ ಮಹಾಭಾರತವನ್ನು ತನ್ನ ಕಾವ್ಯ ವಸ್ತುವಾಗಿ ಆಯ್ದುಕೊಂಡ! ಹಾಗೆಂದ ಮಾತ್ರಕ್ಕೆ ಮಹಾಭಾರತ ಗ್ರಂಥಗಳ ಸಂಖ್ಯೆಯೇನು ಕಡಿಮೆಯದಲ್ಲ. ನಮ್ಮ ಮಹಾಭಾರತ, ರಾಮಾಯಣಗಳು ಎಷ್ಟೇ ಸಂಖ್ಯೆಯಲ್ಲಿ ರಚಿತವಾದರೂ ಅವುಗಳ ರಸಾಸ್ವಾದನೆಗೇನು ಭಂಗವಿಲ್ಲ… ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಬರೆದರು. ಕುಮಾರವ್ಯಾಸನದು ಕೃಷ್ಣ ಕಥೆಯಾದರೆ ಪಂಪನದು ವಿಕ್ರಮಾರ್ಜುನ ವಿಜಯ… ರನ್ನನದು ದುರಂತಚಕ್ರವರ್ತಿಯ ಊರುಭಂಗವಾದರೆ ನಾಗಚಂದ್ರನದು ಚೆಲುವೆ ಸೀತೆಯ ಕಂಡೊಡನೆ ಪದ್ಮಪತ್ರದ ಜಲಬಿಂದುವಿನಂತೆ ಚಲಿತಚಿತ್ತದವನಾದ ರಾವಣನ ಕಥೆ!
ದೇವನೂರಿನ ಕವಿ ಲಕ್ಷ್ಮೀಶನ ಜೈಮಿನಿ ಭಾರತವು ಜೈಮಿನಿ ಬರೆದ ಭಾರತದ ಉತ್ತರಭಾರತದ ಕಥೆ, ಅಶ್ವಮೇಧಯಾಗ ಕಥಾವಸ್ತು. ಸಂಸ್ಕೃತ ಜೈಮಿನಿಭಾರತವನ್ನು ಸಾಕಷ್ಟು ಬದಲಾವಣೆ ಮಾಡಿಕೊಂಡು ಅನುವಾದ ಮಾಡಲಾಗಿದೆ. ಇದರ ಕಥಾನಾಯಕ ಶ್ರೀಕೃಷ್ಣ. ಭಾಗವತ ಸಂಪ್ರದಾಯದಂತೆ ಇಲ್ಲಿ ಶ್ರೀ ಕೃಷ್ಣನೇ ಸೂತ್ರಧಾರ. ಜೈಮಿನಿ ಭಾರತ ಕನ್ನಡದ ಅತ್ಯಂತ ಜನಪ್ರಿಯ ಕಾವ್ಯಗಳಲ್ಲಿ ಒಂದು. ಲಕ್ಷ್ಮೀಶ ಕವಿ ರಚಿಸಿದ ಈ ಕಾವ್ಯ ತನ್ನ ಸೊಗಸುಗಾರಿಕೆ ಮತ್ತು ಗೇಯ ಗುಣಗಳಿಂದ ಗಮನ ಸೆಳೆಯುತ್ತದೆ. ಜೈಮಿನಿಯ ವಾಚನ ಮತ್ತು ಗಮಕ ಒಂದು ಕಾಲಕ್ಕೆ ಕನ್ನಡದ ಮನೆ-ಮನ-ಗ್ರಾಮಗಳಲ್ಲಿ ನಿತ್ಯ ನಡೆಯುತ್ತಿತ್ತು. ಜೈಮಿನಿ ಭಾರತ ಓದಲು ಆರಂಭಿಸುವವರಿಗೆ ಈ ಗ್ರಂಥವು ಅತ್ಯಂತ ಸಹಾಯಕವಾದ ಪ್ರೈಮರಿ ಪಾಠವಾಗಿದೆ.
ಎಲ್ಲ ಮಹಾಭಾರತಗಳಿಗೂ ಮೂಲವೆಂದೆನಿಸಿದ ವ್ಯಾಸಭಾರತದಲ್ಲಿ ಅಶ್ವಮೇಧ ಪರ್ವವು ಅಷ್ಟು ವಿಸ್ತಾರವಾಗಿಲ್ಲ. ವ್ಯಾಸರ ಪ್ರಿಯ ಶಿಷ್ಯನಾದ ಜೈಮಿನಿ ಮುನಿಗಳು ಅಶ್ವಮೇಧ ಪರ್ವವನ್ನು ವಿಸ್ತಾರವಾದ ಕಥಾ ಸಂವಿಧಾನದೊಡನೆ ಸಂಸ್ಕೃತದಲ್ಲಿ ರಚಿಸಿದ್ದಾರೆ. ಅದನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಲಕ್ಷ್ಮೀಶ ಕನ್ನಡದಲ್ಲಿ ‘ಜೈಮಿನಿ ಭಾರತ’ ವೆಂಬ ಕಾವ್ಯವನ್ನು ರಚಿಸಿದ್ದಾನೆ. ಈ ಕಾವ್ಯದಲ್ಲಿ ಭಾಗವತ ದೃಷ್ಟಿಯೇ ಎಂದರೆ ಕೃಷ್ಣನ ಮಹಿಮೆಯು ಇದರ ವಿಶೇಷ.  ಇಲ್ಲಿ ಕವಿಯು  ಮಹಾಭಾರತದ ಅಶ್ವಮೇದ ಪರ್ವವನ್ನು ಮಾತ್ರ ವಿಸ್ತರಿಸಿ ಬರೆದಿದ್ದಾನೆ. ಕವಿಯ ಕಾಲ ಸ್ಪಷ್ಟವಾಗಿ ತಿಳಿದಿಲ್ಲ. ಅವನು ಹದಿನಾಲ್ಕನೇ ಶತಮಾದಿಂದ ಹದಿನೇಳನೇ ಶತಮಾನದ ನಡುವಿನ ಕಾಲದಲ್ಲಿದ್ದ ಬ್ರಾಹ್ಮಣ ಕವಿ. ಹದಿನಾರು – ಹದಿನೇಳನೇ ಶತಮಾನದವನೆಂಬುದಕ್ಕೆ ಹೆಚ್ಚು ಸಂಶೋಧಕರ ಒಲವಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ದೇವನೂರಿನವನು.
ಕಥಾಸಾರ:
ಭೀಮನು ಯಜ್ಞದ ಕುದುರೆಯನ್ನು ತರಲು ಪಕ್ಕದ ರಾಜ್ಯ ಭದ್ರಾವತಿಗೆ ಹೋಗಿ ಅಲ್ಲಿಯ ರಾಜನನ್ನು ಸೋಲಿಸಿ, ದ್ವಾರಕೆಗೆ ಹೋಗಿ ಕೃಷ್ಣನ್ನು ಹಸ್ತಿನಾವತಿಗೆ ಕರೆತರುವನು. ನಂತರ ‘ಶಕ್ತರು ಕಟ್ಟಿ ಕಾದುವುದೆಂದು’ ಹಣೆಯ ಮೇಲೆ ಬರೆದ ಯಜ್ಞದ ಕುದುರೆಯನ್ನು ದೇಶ ಸುತ್ತಲು ಬಿಡುವರು. ಅರ್ಜುನ ಹಾಗೂ ಕೃಷ್ಣರು ಅದರ ಬೆಂಗಾವಲಾಗಿ ಹೋಗುವರು. ಅದು ಮಾಹಿಷ್ಮತಿ, ಚಂಪಕಪುರ, ಸ್ತ್ರೀ ರಾಜ್ಯ, (ಮಲಯಾಳ-ಪಾಂಡ್ಯ), ರಾಕ್ಷಸರ ರಾಜ್ಯ, ಮಣಿಪುರ (ಮೈಸೂರಿನ ದಕ್ಣಿಣ ನಗರರಾಜ್ಯವೆಂದು ಊಹೆ) , ರತ್ನಪುರ, ಸಾರಸ್ವತ, ಮತ್ತು ಕುಂತಳ ರಾಜ್ಯಗಳನ್ನು ದಾಟಿ, ನಂತರ ಸಮುದ್ರ ದಾಟಿ, ಸಿಂಧೂ ದೇಶಕ್ಕೆ ಹೋಗಿ ಅಲ್ಲಿಂದ ಹಸ್ತಿನಾಪುರಕ್ಕೆ ಹಿಂತಿರುಗುವುದು.
ಅರ್ಜುನನ ಬೆಂಗಾವಲಿನಲ್ಲಿ, ದೇಶವನ್ನು ಸುತ್ತಲೆಂದು ‘ಇದು ಯುಧಿಷ್ಟಿರನ ಯಜ್ಞಾಶ್ವ. ದಿಟ್ಟರು, ಶಕ್ತರು ಕಟ್ಟಿಕೊಳ್ಳಬಹುದು -ಇಲ್ಲವಾದರೆ ಶರಣಾಗಿ’ ಎಂದು ಹಣೆಯಮೇಲೆ ಬರೆದ ಅಶ್ವಮೇಧ ಕುದುರೆಯನ್ನು ಬಿಡಲು ಮೊದಲು ಅದು ಮಾಹಿಷ್ಮತಿನಗರಕ್ಕೆ ಬರುತ್ತದೆ. ಅದನ್ನು ಅಗ್ನಿರಕ್ಷಣೆಯುಳ್ಳ ನೀಲಧ್ವಜ ರಾಜನು ಕಟ್ಟುತ್ತಾನೆ. ಅರ್ಜುನ ಅಗ್ನಿಯನ್ನು ಮೆಚ್ಚಿಸಿ ಆ ರಾಜನನ್ನು ಗೆದ್ದು ಕುದುರೆಯೊಡನೆ ಮುಂದೆ ಸಾಗಿದನು. ಮುಂದೆ ನೀಲಧ್ವಜನ ಹೆಂಡತಿ ಸಿಟ್ಟಿನಿಂದ ಗಂಡನನ್ನು ತೊರೆದು ಬಂದು, ಗಂಗೆಯಿಂದ “ತನ್ನ ಮಗ ಭೀಷ್ಮನನ್ನು ಕೊಂದ ಅರ್ಜುನನಿಗೆ ಅವನ ಮಗನೇ ಅವನನ್ನು ಕೊಲ್ಲಲಿ” ಎಂದು ಶಾಪವನ್ನು ಕೊಡಿಸುತ್ತಾಳೆ. ಈಗ ಯಜ್ಞಾಶ್ವವು ಮುಂದೆ ನಡೆಯುವಾಗ ಕಲ್ಲಿನಲ್ಲಿ ಸಿಕ್ಕಿಕೊಂಡಾಗ ಸೌರಭ ಮುನಿಯಿಂದ ಉದ್ದಾಲಕನ ಮತ್ತು ಚಂಡಿಯ ಕಥೆ ಕೇಳಿ, ಕುದುರೆಯನ್ನು ಬಿಡಿಸಿಕೊಂಡು ಮುಂದೆ ಹೋಗುತ್ತಾರೆ. ಹಂಸಧ್ವಜನ ಪಟ್ಟಣಕ್ಕೆ ಹೋದಾಗ ಅವನು ಕುದುರೆಯನ್ನು ಕಟ್ಟಿಹಾಕುತ್ತಾನೆ. ಸಮಯಕ್ಕೆ ಬರದೆ ಯುದ್ಧಕ್ಕೆ ತಪ್ಪಿಸಿಕೊಂಡನೆಂದು ಮಗ ಸುಧನ್ವನ ಮೇಲೆ ಕೊಪಗೊಂಡು ಅವನನ್ನು ಕುದಿಯುವ ಎಣ್ಣೆಕೊಪ್ಪರಿಗೆಗೆ ಹಾಕಿಸುತ್ತಾನೆ. ಆದರೆ ಅವನು ಮಹಾ ಹರಿಭಕ್ತ. ಹರಿಧ್ಯಾನದಿಂದ ಸುಡದೆ ಬದುಕಿ ಉಳಿಯುತ್ತಾನೆ. ಕೃಷ್ಣನ ದರ್ಶನ ಪಡೆಯುವ ಉದ್ದೇಶ ದಿಂದ ಸುಧನ್ವನು ವೃಷಕೇತುವನ್ನು ಯುದ್ಧದಲ್ಲಿ ಸೋಲಿಸುತ್ತಾನೆ. ಆಗ ಅರ್ಜುನನು ಕೃಷ್ಣನನ್ನು ಸಾರಥಿಯಾಗಿ ಮಾಡಿಕೊಂಡು ಯುದ್ಧದಲ್ಲಿ ಸುಧನ್ವನ ತಲೆಯನ್ನು ಕತ್ತರಿಸುತ್ತಾನೆ. ಸುಧನ್ವನ ತಮ್ಮ ವೀರ ಸುರಥನ ತಲೆಯನ್ನು ಯುದ್ಧದಲ್ಲಿ ಅರ್ಜುನನು ಕತ್ತರಿಸಲು ಕೃಷ್ಣನು ಅವನ ತಲೆಯನ್ನು ಪ್ರಯಾಗದಲ್ಲಿ ಹಾಕಲು ಗರುಡನಿಗೆ ಆಜ್ಞೆ ಮಾಡಿದನು. ಆದರೆ ಆ ತಲೆಯನ್ನು ಶಿವನು ಸ್ವೀಕರಿಸಿ ತನ್ನ ರುಂಡ ಮಾಲೆಯಲ್ಲಿ ಸೇರಿಸಿಕೊಳ್ಳುತ್ತಾನೆ. ಯಜ್ಞದ ಕುದುರೆಯು ಮುಂದೆ ಸಾಗಿ ಪಾರ್ವತಿಯ ತಪೋಭೂಮಿಯಾಗಿದ್ದ ಕಾಡಿನಲ್ಲಿ ಹೆಣ್ಣುಕುದುರೆಯಾಗಿ ನಂತರ ಕೊಳದ ನೀರು ಕುಡಿದು ಬ್ರಹ್ಮಶಾಪದಿಂದ ಹುಲಿಯಾಗಿ ಕೃಷ್ಣನ ಕೃಪೆಯಿಂದ ಮೊದಲಿನಂತಾಯಿತು. ನಂತರ ಪ್ರಮೀಳೆಯ ಸ್ತ್ರೀರಾಜ್ಯ ಪ್ರವೇಶ ಮಾಡುತ್ತದೆ. ಅರ್ಜುನನು ಆ ರಾಣಿಯನ್ನು ಸಂತೈಸಿ ನಂತರ ಮುಂದೆ ರಾಕ್ಷಸ ರಾಜ್ಯವನ್ನು ಪ್ರವೇಶಿಸುವನು. ಅಲ್ಲಿ ಭೀಷಣನೆಂಬ ರಾಕ್ಷಸನನ್ನೂ ಮೇಧೋಹೋತನನ್ನೂ ಯೋಜನಸ್ತನಿ ಮೊದಲಾದ ಅನೇಕ ರಾಕ್ಷಸಿಯರನ್ನೂ ಸಂಹರಿಸಿ ಉತ್ತರದ ಬಬ್ರುವಾಹನನ ರಾಜ್ಯ ಮಣಿಪುರಕ್ಕೆ ಕುದುರೆಯನ್ನು ಹಿಂಬಾಲಿಸಿ ಹೋದನು. ಕುದುರೆಯನ್ನು ಕಟ್ಟಿದ ಬಬ್ರುವಾಹನನು ಅರ್ಜುನನೇ ತನ್ನ ತಂದೆಯೆಂದು ಅರಿತು ಅವನನ್ನು ಸನ್ಮಾನಿಸಲು ಹೋದಾಗ ಅರ್ಜುನನು ಅವನನ್ನು ಹೇಡಿಯೆಂದು ಜರೆಯುತ್ತಾನೆ. ಆಗ ಕೋಪಗೊಂಡ ಬಬ್ರುವಾಹನನು ಅರ್ಜುನನ ಮೇಲೆ ಯುದ್ಧಕ್ಕೆ ನಿಲ್ಲುತ್ತಾನೆ. ಆಗ ಹಿಂದೆ ರಾಮನಿಗೂ ಅವನ ಮಕ್ಕಳಿಗೂ ಯುದ್ಧವಾದಂತೆ ಎಂದು ಜೈಮಿನಿಯು ಹೇಳುತ್ತ ಜನಮೇಜಯನಿಂದ ರಾಮನು ಅಶ್ವಮೇಧ ಯಾಗದ ಕೊನೆಯಲ್ಲಿ ತನ್ನ ಮಕ್ಕಳೊಡನೆ ಯುದ್ಧಮಾಡಿದ ಕಥೆಯನ್ನು ಹೇಳಿಸುತ್ತಾನೆ. ಬಬ್ರುವಾಹನನು ಯುದ್ಧಕ್ಕೆ ಬಂದಾಗ ಪ್ರದ್ಯುಮ್ನ ಮೊದಲಾದವರು ಹೋರಾಡುತ್ತಾರೆ. ಆದರೆ ಎಲ್ಲರೂ ಸೋತುಬಿಡುತ್ತಾರೆ. ಕರ್ಣನ ಮಗ ವೃಷಕೇತು ಅವನನ್ನು ಎದುರಿಸಿ ಸಾವಿಗೀಡಾಗುತ್ತಾನೆ. ಕೊನೆಗೆ ಗಂಗೆಯ ಶಾಪದ ಫಲವಾಗಿ ಅರ್ಜುನ ತಲೆಯನ್ನು ಕೂಡ ಕತ್ತರಿಸಿ ಹಾಕುತ್ತಾನೆ. ಶ್ರೀಕೃಷ್ಣನು ಗರುಡಗಮನದಿಂದ ಬಂದು ಸತ್ತುಬಿದ್ದಿದ್ದ ಅರ್ಜುನ, ಕರ್ಣಸುತರನ್ನು ಬಬ್ರುವಾಹನನು ತಂದ ಸಂಜೀವಿನಿ ಮಣಿಯ ಸಹಾಯದಿಂದ ಬದುಕಿಸುತ್ತಾನೆ. ಮುಂದೆ ಯಜ್ಞದ ಕುದುರೆಯು ಮಯೂರಧ್ವಜನ ರಾಜ್ಯವನ್ನು ಪ್ರವೇಶಿಸುತ್ತದೆ. ಅಲ್ಲಿ ಮಯೂರಧ್ವಜನ ಮಗ ತಾಮ್ರಧ್ವಜನು ಕುದುರೆಯನ್ನು ಕಟ್ಟಿ ಕೃಷ್ಣಾರ್ಜುನರಾದಿಯಾಗಿ ಎಲ್ಲರನ್ನೂ ಸೋಲಿಸಿ ಕುದುರೆಯನ್ನು ತಂದೆಗೆ ತಂದೊಪ್ಪಿಸುತ್ತಾನೆ. ಆಗ ಕೃಷ್ಣನು ಬ್ರಾಹ್ಮಣ ವೇಷಧಾರಿಯಾಗಿ ಬಂದು “ತನ್ನ ಮಗನನ್ನು ಉಳಿಸುವಂತೆ ಕೇಳಿಕೊಳ್ಳುತ್ತಾನೆ. “ತನ್ನ ಮಗನನ್ನು ಹಿಡಿದ ಸಿಂಹಕ್ಕೆ ರಾಜನ ಅರ್ಧ ದೇಹ ಬೇಕಂತೆ. ಕೊಡುವೆಯಾ” ಎನ್ನಲು, ರಾಜನಾದ ಮಯೂರದ್ವಜನು ಒಪ್ಪಿ ತನ್ನ ದೇಹವನ್ನು ಸೀಳಿಸಿಕೊಳ್ಳುತ್ತಾನೆ. ಆಗ ಮಯೂರಧ್ವಜನ ದಾನಶೂರತ್ವ, ತ್ಯಾಗಗಳಿಗೆ ಕೃಷ್ಣನು ಮೆಚ್ಚಿ ತನ್ನ ನಿಜ ರೂಪ ತೋರುತ್ತಾನೆ. ಮಯೂರಧ್ವಜನು ಕುದುರೆಯನ್ನು ಬಿಟ್ಟುಕೊಡುತ್ತಾನೆ. ಕುದುರೆಯು ಮುನ್ನಡೆದಾಗ ಸಾರಸ್ವತಪುರದ ಅರಸನಾದ ವೀರವರ್ಮನು ಕುದುರೆಯನ್ನು ಕಟ್ಟಿಹಾಕುತ್ತಾನೆ. ಅರ್ಜುನನು ಕೃಷ್ಣನ ಮೂಲಕ ಯಮನ ವೃತ್ತಾಂತವನ್ನು ಕೇಳಿ ತಿಳಿದು ಯಮನ ಮಾವನಾದ ವೀರವರ್ಮನನ್ನು ಸ್ನೇಹದಿಂದ ಕೃಷ್ಣನ ಸಂಧಾನದಿಂದ ಜಯಿಸುತ್ತಾನೆ. ಮುಂದೆ ಹೋದಂತೆ ಅರ್ಜುನನ ಕುದುರೆ ಕಾಣದಿರಲು ನಾರದರು ಬಂದು ಚಂದ್ರಹಾಸನ ಕಥೆಯನ್ನು ಹೇಳಿದರು. ಕುಂತಳ ದೇಶದ ಮಂತ್ರಿ ದುಷ್ಟಬುದ್ಧಿಯು ಅವನ ರಾಜಯೋಗ ತಿಳಿದು, ಅದನ್ನು ತಡೆಯಲು ಚಂದ್ರಹಾಸನನ್ನು ಕೊಲ್ಲಲು ಮಗನ ಬಳಿಗೆ ಕಳಿಸಿದುದು, ಉದ್ಯಾನವನದಲ್ಲಿ ಬಂದು ಮಲಗಿ ನಿದ್ರಿಸುತ್ತಿದ್ದ ಚಂದ್ರಹಾಸನ ಸೊಂಟದಲ್ಲಿದ್ದ ಪತ್ರವನ್ನು ದುಷ್ಟಬುದ್ಧಿಯ ಮಗಳು ಓದಿ ಅರ್ಥಾನುಸಾರವಾಗಿ ಅವನೇ ತನ್ನ ಪತಿಯಾಗುವಂತೆ ತಿದ್ದುವುದು, ನಂತರ ಚಂದ್ರಹಾಸನು ರಾಜಪುತ್ರಿಯನ್ನೂ ಮಂತ್ರಿಪುತ್ರಿಯನ್ನೂ ಮದುವೆಯಾಗುವುದು, ಚಂದ್ರಹಾಸನನ್ನು ಕೊಲ್ಲಲು ಹವಣಿಸಿದ ಮಂತ್ರಿಯ ಮಗನೊಡನೆ ತಾನೇ ಹತನಾದದ್ದು, ಚಂದ್ರಹಾಸನು ಚಂಡಿಕಾದೇವಿಯನ್ನು ಪ್ರಾರ್ಥಿಸಿ ಅವಳ ವರಪ್ರಸಾದದಿಂದ ಅಲ್ಲಿ ಹತರಾಗಿ ಬಿದ್ದಿದ್ದ ಮಂತ್ರಿ ಮತ್ತು ಅವನ ಮಗ ಮದನನ್ನು ಬದುಕಿಸುವುದು ಎಲ್ಲ ಕಥೆಯನ್ನು ಹೇಳುತ್ತಾರೆ. ಚಂದ್ರಹಾಸನು ತನ್ನ ಮಕ್ಕಳು ಕಟ್ಟಿದ ಕುದುರೆಯನ್ನು ಕೃಷ್ಣಾರ್ಜುನರಿಗೆ ಒಪ್ಪಿಸುತ್ತಾನೆ. ಆದರೆ ಹಿಂತಿರುಗುವಾಗ ಕುದುರೆಗಳು ಅವರನ್ನು ಸಮುದ್ರದೊಳಗೆ ಕೊಂಡೊಯ್ಯುತ್ತವೆ. ಕೃಷ್ಣನು ಸಮುದ್ರಗಮನ ಸಾಧ್ಯರಾದ ಐವರನ್ನು ಕೂಡಿಕೊಂಡು ಸಮುದ್ರ ಮಧ್ಯದಲ್ಲಿದ್ದ ಬಕದಾಲ್ಬ್ಯ ಮುನಿಯನ್ನು ಕಾಣುತ್ತಾನೆ. ಅನೇಕ ಚತುರ್ಯುಗಗಳಿಂದ ತಪವನ್ನು ಮಾಡುತ್ತಿದ್ದ ಅವನ ಕಥೆಯನ್ನು ಕೇಳಿ ಸಿಂಧೂದೇಶದ ಮೂಲಕ ಹಸ್ತಿನಾವತಿಗೆ ಯಜ್ನಾಶ್ವ ಮತ್ತು ಪರಿವಾರ ಸಮೇತ ಹಿಂದಿರುಗಿದರು.
ದಿಗ್ವಿಜಯ ವೃತ್ತಾಂತವನ್ನು ಕೃಷ್ಣನಿಂದ ತಿಳಿದು ಧರ್ಮರಾಯನು ಯಜ್ನವನ್ನು ಆರಂಭಿಸುತ್ತಾನೆ. ಸಕಲರೂ ಮೆಚ್ಚುವಂತೆ ಯಜ್ಞವನ್ನು ಪೂರೈಸಿ, ಶ್ರೀ ಕೃಷ್ಣಾದಿ ಅತಿಥಿಗಳನ್ನು ಸತ್ಕರಿಸಿ ಅವರವರ ಸ್ಥಳಕ್ಕೆ ಕಳುಹಿಸಿಕೊಟ್ಟು, ತಾನು ಧರ್ಮದಿಂದ ರಾಜ್ಯವನ್ನು ಪಾಲಿಸುತ್ತಿದ್ದನು.
ಇದಿಷ್ಟು ಈ ಭಾರತ ಭಾಗದ ಕಥಾಸಾರಾಂಶ.
ಈ ರೀತಿಯಾಗಿ ಈ ಕೃತಿಗೆ “ನಾಯಕನು ಆದನು ಅಮರಪುರದ ಒಡೆಯ ಲಕ್ಷ್ಮೀಕಾಂತನು” ಎಂದು ಹೇಳುತ್ತ ಕೃಷ್ಣನೇ ಕಾವ್ಯದ ನಾಯಕನೆಂದಿದ್ದಾನೆ. ಈ ಪುಣ್ಯ ಕಥೆಯನ್ನು ಕೇಳಿದವರಿಗೆ ಸರ್ವ ಬಗೆಯ ಪುಣ್ಯವೂ ಲಭಿಸುವುದೆಂದು ಹೇಳುವ ಫಲಶ್ರುತಿಯೊಂದಿಗೆ ಈ ಕಾವ್ಯದ ಮಂಗಳಾಚರಣೆಯಾಗುವುದು. ಇದು ವಾರ್ಧಕ್ಯ ಷಟ್ಪದಿಯಲ್ಲಿ ಬರೆದ ಕಾವ್ಯವಾಗಿದ್ದು ನವರಸಗಳೂ ಓತಪ್ರೋತವಾಗಿವೆ. ಆದರೂ ಮುಖ್ಯ ಭಾವವು ವೀರರಸ.

Leave a Reply