ಜಯಶ್ರೀ ದೇಶಪಾಂಡೆಯವರ “ಮಾಯಿ ಕೆಂದಾಯಿ”

ಜಯಶ್ರೀ ದೇಶಪಾಂಡೆಯವರ “ಮಾಯಿ ಕೆಂದಾಯಿ”
ಜಯಶ್ರೀ ದೇಶಪಾಂಡೆಯವರ ಹೆಸರು ಕೇಳಿರದ ಕನ್ನಡ ಸಾಹಿತ್ಯಾಸಕ್ತರೇ ಇಲ್ಲವೆಂದೇ ಹೇಳಬಹುದು. ಅವರ ಹರಟೆಗಳೇ ಇರಲಿ, ಲಲಿತ ಪ್ರಬಂಧಗಳೇ ಇರಲಿ, ಕವನಗಳೇ ಇರಲಿ, ಕಥೆಗಳೇ ಇರಲಿ, ಕಾದಂಬರಿಗಳೇ ಇರಲಿ, ಎಲ್ಲದರಲ್ಲೂ ಒಂದು ಹೊಸತನವಿರುತ್ತದೆ, ಇವರ ಲೋಕಾನುಭವದ, ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ತಿರುಗಿ, ಅಲ್ಲಿಯ ಜನಜೀವನ, ಆಚಾರ-ವಿಚಾರಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ಹಾಗೂ ಅವುಗಳನ್ನು ಅನೇಕ ಸಾಹಿತ್ಯ ಪ್ರಕಾರಗಳ ಮೂಲಕ ಜನಮಾನಸವನ್ನು ತಲುಪಿಸುವ ಗುರಿ ಹೊಂದಿರುವ ಕೃತಿಗಳನ್ನು ಓದುವುದೆಂದರೆ ಓದುಗರಿಗೆ ಒಂದು ರಸದೌತಣವಿದ್ದಂತೆ ಎಂದರೆ ಅತಿಶಯೋಕ್ತಿಯೇನಲ್ಲ!
“ಒಂದು ಕಂಬಕ್ಕೆ ಸೀರೆ ಉಡಿಸಿ ಅದಕ್ಕೆ ಅತ್ತೆ ಎಂದು ಹೆಸರಿಟ್ಟರೆ ಅದೂ ಕೂಡ ಎದ್ದೆದ್ದು ಕುಣಿಯುತ್ತದೆ” ಎಂದು ನಮ್ಮ ಪರಿಚಯದ ಅಜ್ಜಿಯೊಬ್ಬರು ಹೇಳುತ್ತಿದ್ದರು. ಜಗತ್ತಿನ ಎಲ್ಲಾ ಸಂಬಂಧಗಳಲ್ಲಿಯೂ ಅತ್ಯಂತ ಅಪಖ್ಯಾತಿ ಹೊಂದಿದ ಸಂಬಂಧ ಎಂದರೆ ಈ ಅತ್ತೆ-ಸೊಸೆಯರ ಸಂಬಂಧ ಎಂದೂ ಕೂಡ ಹೇಳುತ್ತಾರೆ. ಶ್ರೀಮತಿ ಜಯಶ್ರೀ ದೇಶಪಾಂಡೆಯವರ “ಮಾಯಿ-ಕೆಂದಾಯಿ” ಓದಿದಾಗ ಈ ಒಂದು ತಪ್ಪು ಗ್ರಹಿಕೆಯು ಕಳೆದು ಅತ್ತೆ-ಸೊಸೆಯರು ತಾಯಿ-ಮಗಳಾಗುವರೇನೋ ಎಂಬ ಒಂದು ಆಶಾಕಿರಣವೂ ಕಾಣುತ್ತದೆ. ಮಾಯಿ ಎಂದರೆ ಅವರಿಗೆ ತಾಯಿಯ ಸ್ವರೂಪರಾದಂಥ ಅವರ ಅತ್ತೆ. ಕೆಂದಾಯಿ ಎಂದರೆ ಕೆಂದು ಬಣ್ಣದ ಅವರ ಮನೆಯ ಕಾಮಧೇನುವಿನಂಥ ಆಕಳು. ಮಾಯಿ ತಾಯಿಯಿಲ್ಲದ ಸೊಸೆಗೆ ಭರಪೂರವಾದಂಥ ತಾಯಿ ಪ್ರೀತಿಯನ್ನುಣಿಸಿದವರು. ಮನೆತನದ ರೀತಿ ರಿವಾಜುಗಳನ್ನು ಕಲಿಸಿದವರು. ಕೆಲ ದಶಕಗಳಿಂದ ಇತ್ತೀಚೆಗೆ ಈ ಸಂಬಂಧದಲ್ಲಿ ಒಂದಿಷ್ಟು ಸುಧಾರಣೆಗಳು ಕಂಡುಬರುತ್ತಿವೆಯಾದರೂ ಇವರು ಸುಮಾರು ದಶಕಗಳ ಹಿಂದೆಯೇ ತಮ್ಮ ಅತ್ತೆಯಲ್ಲಿ ತಾಯಿಯನ್ನು ಕಂಡಿದ್ದರು, ಅವರ ಬಗ್ಗೆ ತಮ್ಮ ಮನದಲ್ಲಿ ಆಪ್ಯಾಯತೆಯನ್ನು ಹೊಂದಿದ್ದರು ಎಂಬುದು ಅತ್ಯಂತ ಸಂತೋಷ ಜೊತೆಗೇ ಆಶ್ಚರ್ಯದ ವಿಷಯವೂ ಹೌದು. ಅತ್ತೆ ಹಾಗೂ ತಾಯಿಯ ಎರಡೂ ರೀತಿಯ ಸ್ವಭಾವಗಳನ್ನು, ಗುಣಗಳನ್ನು ತುಂಬಿಕೊಂಡಿರುವ ಮಾಯಿಯ ಬಗ್ಗೆ ಜಯಶ್ರೀಯವರು ಬರೆದಿರುವಂಥ ನೆನಪಿನ ಚಿತ್ರಗಳು ಇಲ್ಲಿವೆ. ಇದೊಂದು ಆತ್ಮಕಥೆಯ ಸ್ವರೂಪವನ್ನು ಹೊತ್ತಂಥ ಅನುಭವ ಕಥನ. ಈ ಅನುಭವಗಳಲ್ಲಿ ಕೆಲವು ಕಹಿಯಾದಂಥವಾದರೆ, ಇನ್ನು ಕೆಲವು ಸಿಹಿಯಾದವುಗಳೂ ಇವೆ. ಜೀವನವೆಂದರೇ ಹಾಗೆ ಅಲ್ಲವೇ, ಕಹಿ, ಸಿಹಿ, ಒಗರು, ಚೊಗರು..
ಅವರು ಅರ್ಪಣೆಯೊಂದಿಗೇ ತಮ್ಮ ಅತ್ತೆಯ ಮೇಲಿನ ಪ್ರೀತಿಯನ್ನು “ಬದುಕುವ ದಾರಿ ತೋರುತ್ತ ತಾ ಮುನ್ನಡೆದ ನನ್ನೊಳಗಿರುವ ತಾಯಿ ಮಾಯಿಗೆ” ಎಂದು ಹೇಳುತ್ತಾರೆ. ಇದು ಇಪ್ಪತ್ತೊಂದು ಪುಟ್ಟ ಪುಟ್ಟ ಬರಹಗಳ ಒಂದು ಸಂಕಲನವಾಗಿದ್ದು ಇವುಗಳ ಶೈಲಿಯು ಎಲ್ಲಿಯೂ ಕಿಂಚಿತ್ತೂ ಬೇಸರವಾಗದಂತೆ ಓದಿಸಿಕೊಂಡು ಹೋಗುವಂಥದು. ನಡು ನಡುವೆ ಸಂಸ್ಕೃತದ ಶ್ಲೋಕಗಳೂ, ಬೇಂದ್ರೆಯವರ ಕವನಗಳ ಸಾಲುಗಳೂ ಸೇವಂತಿಗೆಯ ಮಾಲೆಯಲ್ಲಿನ ದವನ, ಮರುಗಗಳಂತೆ ಲೇಖನಗಳ ಸೌಂದರ್ಯವನ್ನು ಹೆಚ್ಚಿಸುತ್ತವೆ.
ಮೊದಲನೆಯ ‘ಮಾಯಿ ಎಂದರೆ ತಾಯಿ’ ಎಂಬ ಕಥನದಲ್ಲಿಯೇ ಅವರು ನಮ್ಮ ಉತ್ತರ ಕರ್ನಾಟಕದಲ್ಲಿಯ ಅವಲಕ್ಕಿ ಹಚ್ಚುವ ವಿಶೇಷತೆಯೊಂದಿಗೆ ಆರಂಭಿಸುತ್ತಾರೆ. ನನಗೂ ಇಲ್ಲಿ ನಮ್ಮ ಅವ್ವನು ಅವಲಕ್ಕಿ ಹಚ್ಚುತ್ತಿದ್ದ ರುಚಿಯ ವಾಸನೆಯು ಮೂಗಿಗೆ ಅಡರುತ್ತದೆ. “ಮೆಂತೆ ಹಿಟ್ಟು, ತುಪ್ಪಾ ಎರಡೂ ಮೊದಲು ಕಲಿಸಿ ಅವಲಕ್ಕಿಗೆ ಮೆತ್ತೂ ಹಂಗ ಕೈಯಾಡಿಸಿ ನೋಡು… ” ನಿಜ. ಈಗಲೂ ಅವಲಕ್ಕಿಯನ್ನು ಹಚ್ಚಿದ ನಂತರ ಆ ಬೆರಳುಗಳಿಗೆ ಮೆತ್ತಿದ ಮೆಂತೇದ ಹಿಟ್ಟು ತುಪ್ಪವನ್ನು ನೆಕ್ಕುವುದೂ ಒಂದು ಮಧುರಾನುಭೂತಿಯೇ!
ಮಾಯಿಯು ಒಂದು ಊಟದ ಡಬ್ಬಿ ಕಟ್ಟುವುದರಲ್ಲಿಯೂ ಕಲಾತ್ಮಕತೆಯನ್ನೇ ಹೊಂದಿದ್ದರು! “ಮಲ್ಲಿಗೆ ಹೂವಿನಂಥಾ ಹೊಗೀಯಾಡೋ ಅನ್ನ ಝಾರೀ ಸೌಟಿನಿಂದ ಹಗೂರಕ ತೆಗೆದು ಒಂದು ಭಾಂಡಿಯೊಳಗ ಹಾಕಿ ಮ್ಯಾಲ ಚೈನಾಮಣ್ಣಿನ ಭರಣಿಯೊಳಗಿನಿಂದ ‘ಘಂ’ ಅಂತ ಅರಳಿ ನಕ್ಕ ಬೆಣ್ಣೀ ಕಾಸಿದ ತುಪ್ಪಾ ಒಂದ ಚಮಚಾ ಸುತ್ತಗಟ್ಟಿ ಸುರದು, ಚಿಟಿಕಿ ಉಪ್ಪು ಹಾಕಿ ಅದೇ ಝಾರಿ ಸೌಟಿನ ತಳದಿಂದಲೇ ಮೆತ್ತಗ ಒತ್ತಿ ಹದಾ ಮಾಡಿ ಮ್ಯಾಲಿಂದ ಅರ್ಧಾ ಅರ್ಧಾ ಸೌಟಿನಷ್ಟೇ ಹುಳಿ ಮತ್ತ ಮತ್ತ ಹಾಕ್ಕೋತ ಹೋಳುಸಹಿತ ಎಲ್ಲಾ ಏಕಜೀವ ಆಗೂತನಕಾ ಹೌರಗ ಕಲಿಸಿ ಒಂದೇ ಅಳತೀ ತುಂಬೂ ಹಂಗ ಡಬ್ಬಿಗೆ ಇಳಿಸಿ ನೆತ್ತೀ ಮ್ಯಾಲೊಂದು ಹೋಳು ಕಡದ ಕಾಯಿ ಮಾವಿನಕಾಯಿ ಉಪ್ಪಿನಕಾಯಿ ಹೋಳಿಟ್ಟು..” ಎಂದು ಹೇಳುವುದನ್ನು ಕೇಳಿಯೇ ಅದರ ರುಚಿಯ ಕಲ್ಪನೆ ಓದುಗರಿಗಾಗುತ್ತದೆ. ಬಾಯಲ್ಲಿ ನೀರು ಬರುತ್ತವೆ!
ಬ್ರಿಟಿಶರು ನಮ್ಮ ದೇಶವನ್ನು ಬಿಟ್ಟು ಹೋದ ನಂತರದ ಸಮಯದಲ್ಲಿಯ ಬದಲಾವಣೆಗಳನ್ನು ನಾವು ಇಲ್ಲಿ ನೋಡುತ್ತೇವೆ. ಅಂದಿನ ಆ ವಿಜಾಪುರದಲ್ಲಿ ಜನರಿಗಿಂತ ದನಗಳೇ ಹೆಚ್ಚು ಎಂದು ಹೇಳುತ್ತಾರೆ ಲೇಖಕಿ. ನಿಜ. ಈಗಲೂ ಕೂಡ ಕೃಷ್ಣಾ ತೀರದ ಆ ನಾಡು ಹೈನಕ್ಕೆ ಬಹಳ ಪ್ರಸಿದ್ದಿಯನ್ನು ಪಡೆದಿದೆ. ಅಲ್ಲಿಯ ಒಂದು ಸಿರಿವಂತ ದೇಶಪಾಂಡೆ ಮನೆತನದ ಕಥೆಯನ್ನು ವರ್ಣಿಸುತ್ತ, ಹೊಲ
-ಮನಿಗಳ ಆ ಪರಂಪರಾಗತ ಪದ್ಧತಿಗಳನ್ನು ಪರಿಚಯಿಸುತ್ತಾರೆ. ಮಾಯಿ ಎನ್ನುವ ಆ ಮಹಾಶಕ್ತಿ ಮನೆಯ ಸಮಸ್ತ ಬಾಂಧವ್ಯಗಳನ್ನು ನಿಭಾಯಿಸಿದ ರೀತಿಯಂತೂ ಬಹಳ ಛಂದ. ಜೊತೆಗೇ ಲೇಖಕಿಗೆ ಕೆಂದು ಹಸು ಕೆಂದಾಯಿಯ ಬಗ್ಗೆಯೂ ಅನೇಕ ಆಶ್ಚರ್ಯವನ್ನುಂಟು ಮಾಡುವ ಅಂಶಗಳಿವೆ. ಅದರಲ್ಲಿ ಮಿಕ್ಕೆಲ್ಲ ದನಗಳೂ ಮನೆಯ ಹಿಂಬಾಗಿಲಿಂದ ತಮ್ಮ ಕೊಟ್ಟಿಗೆಗೆ ಹೋದರೆ ಅದು ಯಾವಾಗಲೂ ಅತ್ಯಂತ ಠೀವಿಯಿಂದ ಮುಂಬಾಗಿಲಿಂದಲೇ ಮನೆಯನ್ನು ಪ್ರವೇಶಿಸುತ್ತಿದ್ದುದೂ ಒಂದು ಆಶ್ಚರ್ಯದ ಸಂಗತಿಯೇ!
ಇಲ್ಲಿ ಉತ್ತರ ಕರ್ನಾಟಕದ ಕಡೆಯ ಒಂದೊಂದು ಹಬ್ಬವನ್ನೂ, ಆ ಹಬ್ಬಗಳ ಆಚರಣೆಯನ್ನೂ ಅತ್ಯಂತ ಸುಂದರವಾಗಿ ತಿಳಿಸಿಕೊಟ್ಟಿದ್ದಾರೆ ಲೇಖಕಿ. ಸಂಕ್ರಮಣ ಹಾಗೂ ರಥಸಪ್ತಮಿಯ ಹಿಂದಿನ ದಿನಗಳನ್ನು ಭೋಗಿ ಎಂದು ಆಚರಿಸುತ್ತಾರೆ. ಅಂದು ಮುತ್ತೈದೆಯರಿಗೆ ಭೋಗಿ ಕೊಡುವ ಪದ್ಧತಿ. ಉತ್ತರಾಯಣದ ಪುಣ್ಯಕಾಲ ಹಾಗೂ ಮಳೆಗಾಲ ಹಾಗೂ ಚಳಿಗಾಲ ಎರಡೂ ಮುಗಿದ ನಂತರದ ಬೇಸಿಗೆಯ ಮುನ್ಸೂಚನೆ ಇದು. “ಅಂದು ಸೀತನಿ, ಸುಲಗಾಯಿ, ಹೊಸ ಬೆಲ್ಲ, ಸೆಜ್ಜಿ ಹಿಟ್ಟು, ಕಬ್ಬು, ಹೆಸರಬ್ಯಾಳಿ, ಬಾರಿಕಾಯಿ, ಬೆಣ್ಣಿ ತುಂಬಿ ಮಾಡಿದಂಥ ಕರಿಕಪ್ಪು ಬದನಿಕಾಯಿ, ಕೇಸರಿ ಪಳಪಳ ಅನ್ನುವ ಉದ್ದ ಬಾಲದ ಗಜ್ಜರಿ, ಧಡೆಗಟ್ಟಲೆ ತ್ವಾಟದೊಳಗಿನ ಎಮ್ಮಿ ಹಾಲಿನ ಬೆಣ್ಣಿ, ಹುಣಸೆಹಣ್ಣು, ಘಮಾ ಘಮಾ ಅನ್ನೋ ಅಂಬೆ ಮೋರಿ ಅಕ್ಕಿ,.. ಇವೆಲ್ಲವನ್ನೂ ಮೊರದಲ್ಲಿಟ್ಟು, ಮೇಲೆ ಮತ್ತೆ ಸೇರುಗಟ್ಟಲೆ ದವಸ ಧಾನ್ಯಗಳನ್ನು ಕೊಡುವ ಸಂಪ್ರದಾಯ ಮಾಯಿಯದು..” ಎಂದು ಹೇಳುವಾಗ ಆಗಿನ ಕಾಲದ ಸಮೃದ್ಧಿ, ಇದ್ದುಳ್ಳವರ ದೊಡ್ಡ ಮನಸ್ಸು ಎಲ್ಲವನ್ನೂ ನೋಡಿ ಮನಸ್ಸು ಅರಳುತ್ತದೆ. “ಕಾಲ್ಜೋಡಿ ತೀಡಿ ಹಚ್ಚಿಸಿಕೊಳ್ರೀ.. ಎಣ್ಣಿ, ಗಂಧ, ಕುಂಕುಮ ಘಟ್ಟಿಯಾಗಿ ಕೂಡಂಗ ಅವರ ಪಾದಾ ತೀಡು..” ಎಂದು ಮಾಯಿ ಸೊಸೆಗೆ ಹೇಳುವಲ್ಲಿ ಆ ಕೆಲಸದ ಮೇಲಿನ ಶ್ರದ್ಧೆಯ ಅರಿವಾಗುತ್ತದೆ.
ಮುಂದಿನ ಹಬ್ಬ ಹೋಳಿ. ಅಂದು ಬಣ್ಣ ಆಡುವ ಸಂಭ್ರಮ. ಅಂದು ಮನೆಯ ಮಂದಿಗಷ್ಟೇ ಅಲ್ಲದೆ ದನ ಕರುಗಳಿಗೂ ಕೂಡ ಹೋಳಿಗೆ ತುಪ್ಪ ತಿನ್ನಿಸುವ ಸಂಭ್ರಮ.
ಆಕಳುಗಳನ್ನು ಕರೆದು ಎದುರಿಗೆ ಹುಲ್ಲು, ಹಿಂಡಿ, ಹತ್ತೀಕಾಳು ತುಂಬಿಸಿಟ್ಟು ಉಣಿಸಿ ತಿನಿಸಿ, ನೀರು ಕುಡಿಸಿ ತಪ್ಪೇಲಿ ತುಂಬ ಹಾಲು ಕರೆದುಕೊಳ್ಳುವ ಹೊತ್ತು. ಆದರೆ ಈಗಿನವರಂತೆ ಕರು ತಾಯಿಯ ಮೊಲೆಗಳನ್ನು ಸ್ಪರ್ಶಿಸುತ್ತಿದ್ದಂತೆಯೋ, ಅಥವಾ ಯಂತ್ರಗಳನ್ನು ಹಚ್ಚಿಯೋ ಕೊನೆಯ ಹನಿಯ ವರೆಗೂ ಹಾಲು ಹಿಂಡಿಕೊಳ್ಳುವ ಪ್ರಕ್ರಿಯೆ ಇದಲ್ಲ. ‘ಕರು ತಾಯಿಹಸುವಿನ ಹತ್ತಿರಕ್ಕೆ ಬಂದದ್ದನ್ನು ಅದರ ನೆತ್ತಿ ಎದಿ ಮೂಸಿ ನೋಡಿದ ಮ್ಯಾಲೇ ಆಕಳ ತೊರೀ ಬಿಡತದ’ ಎನ್ನುವ ಮಾತಿನಲ್ಲಿ ಇರುವ ಆಕಳ ಹೃದಯದ ಭಾಷೆ ಅರಿಯುವ ರೀತಿಯೇ ಚಂದ. ಕೆಂದಾಯಿಯ ಕರು ತೀರಿಕೊಂಡಾಗ ಅದರ ಸಂಕಟ ನೋಡಿದ ಮಾಯಿ “ನಿನ್ನ ಸಂಕಟಾ ನಾ ಹ್ಯಾಂಗ ತೊಗೋಳೇ ಗೌರೀ” ಎಂದು ಹೇಳಿ ಅತ್ತು ಬಿಟ್ಟರೆಂದು ಹೇಳುವಾಗ ಅವರ ಮೃದು ಮನದ ಪರಿಚಯ ನಮಗಾಗುತ್ತದೆ.
ಇನ್ನು ಕೂಸನ್ನು ಎರೆಯುವ ರೀತಿಯಂತೂ ಅತ್ಯಂತ ಕಲಾತ್ಮಕತೆಯಿಂದ ಕೂಡಿದ್ದು ಎಂದು ಲೇಖಕಿ ಹೇಳುತ್ತಾರೆ. ಮಾಯಿಯ ಇನ್ನೊಂದು ರೂಪದ ಅನಾವರಣವಾಗುವುದು ಕಾಂತಾ ಮಾಮಿಯ ಮಗನ ಮದುವೆಯ ಪ್ರಸಂಗದಲ್ಲಿ. ಅಂದು ರುಕ್ಖೋತವನ್ನು ಮುಗಿಸಿದ ಮದುವೆ ಮನೆಯವರು ದಣಿದು ಮರುದಿನದ ಚೌಕಲಾಣಿಯ ಸಿದ್ಧತೆಯು ಸರಿಯಾಗಿದೆಯೋ ಇಲ್ಲವೋ ಎಂದು ನೋಡಿ ಮಲಗಿದ ಹೊತ್ತು. “ಚೊಚ್ಚಲು ಗಂಡು ಮಕ್ಕಳನ್ನು ಹೆತ್ತ ತಾಯಿಯರು ಅವನ ಮದುವೆಯ ವರೆಗೂ “ಹಾಗಲ್ಹಂದರ ಹೊಗಳು ಹಸಿರು ಪತ್ತಲ ಉಡಳು.. ಅಕ್ಕಿಯ ಕಚ್ಚನು ದಾಟಳು.. ಹಸಿರು ಬಳೆಗಳ ತೊಡಳು..” ಎಂಬ ನಿಯಮ. ಹಿಂದಿನ ದಿನ ಒಂಬತ್ತು ವಾರಿ ಸೀರೆಯನ್ನುಟ್ಟು ಮೈತುಂಬ ಬಂಗಾರದ ಒಡವೆಗಳನ್ನು ತೊಟ್ಟು ಮಗನ ಮಗ್ಗುಲಲ್ಲಿ ಕುಳಿತು ರುಕ್ಖೋತದ ಊಟವನ್ನು ನಾಜೂಕಿನಿಂದ ಮಾಡಿದ್ದ ಕಾಂತಾ ಮಾಮಿಗೆ ಅವನೊಬ್ಬನೇ ಮಗ. ಚೊಚ್ಚಲು ಗಂಡಸು ಮಗನ ನೇಮ ಬಿಡಿಸುವ ಚೌಕಲಾಣಿಗೆ ಸಂಭ್ರಮದಿಂದ ಎದುರು ನೋಡುತ್ತ ಕುಳಿತಿದ್ದ ಕಾಂತಾ ಮಾಮಿಗೆ ಆಘಾತ ಕಾಯ್ದಿತ್ತು. ನಲವತ್ನಾಲ್ಕರ ಮಾಮಿ ಮುಟ್ಟಾಗಿಬಿಟ್ಟಿದ್ದರು. ಕಾಂತಕ್ಕನ ಚೌಕಲಾಣಿ ನಿಂತು ಹೋಗಿಬಿಟ್ಟ ಸುದ್ದಿ ಎಲ್ಲಾ ಹೆಣ್ಣುಮಕ್ಕಳ ಬಾಯಲ್ಲಿ ಹರಿದಾಡಿತ್ತು. ಕಾಂತಾ ಮಾಮಿಯ ಹೆಸರಿನಲ್ಲಿ ಲೇಖಕಿಯು ಈ ಚೌಕಲಾಣಿಯಲ್ಲಿ ಮಾಡುವಂಥ ನಿಯಮಗಳ ಬಗ್ಗೆ ಕೂಡ ಹೇಳಿಬಿಡುತ್ತಾರೆ. ಆದರೆ ಮಾಮಿ ತನಗೆ ಚೌಕಲಾಣಿ ಬೇಕೇ ಬೇಕು ಎಂದು ಹಟ ಹಿಡಿದಾಗ ಮಾಯಿ ಕಂಡು ಹಿಡಿದ ರಾಜಿ ಸೂತ್ರವು ಮೆಚ್ಚುಗೆಯಾಗುವಂಥದು.
ಹಿಂದೂ ಮುಸ್ಲಿಮರ ಏಕತೆಗೆ ಒಂದು ಉದಾಹರಣೆ ಈ ತಾಬೂತ್ ಎಂಬ ಮೊಹರ‍್ರಮ್ಮಿನ ಕುಣಿತ. ನಿಜ ಹೇಳಬೇಕೆಂದರೆ ನಾವು ಚಿಕ್ಕವರಿದ್ದಾಗಲೂ ಈ ಮೊಹರ‍್ರಮ್ಮಿನ ಮೆರವಣಿಗೆ ನೋಡಲು ಬಹಳ ಉತ್ಸಾಹ ನಮಗೆ. ಇಲ್ಲಿಯೂ ಆ ಕುಣಿತವನ್ನು ಹಾಗೂ ಅದರ ಹಿಂದಿನ ಕುಣಿಯುವವರ ಕಥೆಗಳನ್ನೂ ಲೇಖಕಿ ಸುಂದರವಾಗಿ ಹೇಳುತ್ತಾರೆ. ಅಪ್ಪ, ಮಗ ಇಬ್ಬರೂ ದೊಡ್ಡ ಮನೆಯವರೊಂದಿಗೆ ಹೊಂದಿದ್ದ ಆತ್ಮೀಯ ಸಂಬಂಧವನ್ನೂ ನೆನಪಿಸಿಕೊಳ್ಳುತ್ತಾರೆ. ಆ ಕಾಲವೇ ಹಾಗಿತ್ತು ಈಗಿನ ಈ ದ್ವೇಷ, ಅಸೂಯೆಗಳ ದಳ್ಳುರಿಗೆ ಸ್ಥಾನವೇ ಇರಲಿಲ್ಲ. “ಅವರ ಹಬ್ಬ ಇವರಿಗೆ ಕೌತುಕ, ಇವರ ದೇವರು ದಿಂಡರು ಎಂದರೆ ಅವರಿಗೆ ಭಯ ಭಕ್ತಿ” ಎಂದು ಹೇಳಿ, ಅವರ ದೇವರಿಗೆ ಇವರು ಉತ್ತತ್ತಿ ಪೂಜಾ, ಸಕ್ರಿ ತಟ್ಟೆ ನೈವೇದ್ಯ ಮಾಡುವುದು ವಾಡಿಕೆಯಾಗಿತ್ತು ಎನ್ನುವುದನ್ನು ಉದಾಹರಿಸುತ್ತಾರೆ. ಋಣಾನುಬಂಧದ ಸುಖದ ನೆನಪು ಮಾಡಿಕೊಳ್ಳುತ್ತಾರೆ.
ರೇಶಿಮೆಯ ಪದರಗಳಲ್ಲಿ ಘಮಘಮಿಸುವ ಹೂರಣವನ್ನಿಟ್ಟು ಮುಚ್ಚಿ ತೀಡಿ ಬೇಯಿಸಿ, ಮನೆಯಲ್ಲಿಯೇ ಬೆಣ್ಣೆ ತೆಗೆದು ಕಾಯಿಸಿದ ಹೆತ್ತುಪ್ಪವನ್ನು ಸುರಿದ ಅಂದಿನ ಕಾಲದ ಸಮೃದ್ಧ ಜೀವನದೊಂದಿಗೆ ಇಂದಿನ ಕಾಲದ ಪ್ಯಾಕೆಟ್ಟಿನ ಬಿಳಿಬೆಲ್ಲ, ಪಾಲಿಶ್ ಬೇಳೆ, ಎಂದೋ ಕಾಯಿಸಿಕೊಂಡು ಬಾಟ್ಲಿಗೆ ಇಳಿದು ಲೇಬಲ್ ಬಡಿದುಕೊಂಡು ಊರಿಂದೂರಿಗೆ ಹಾರಿ ಬಂದ ತುಪ್ಪದ, ಒಬ್ಬಟ್ಟೆಂಬ ಹೋಳಿಗೆಯ ಜೊತೆಗೆ ಜ್ಞಾಪಿಸಿಕೊಳ್ಳುವ ಲೇಖಕಿ ಆ ಸಮೃದ್ಧ ಜೀವನವು ಇಂದು ನೆನಪು ಮಾತ್ರ ಎಂದು ಹೇಳುತ್ತಾರೆ.
ಲೇಖಕಿಯ ನೆನಪಿನ ಬುತ್ತಿಯಲ್ಲಿ ಅಂದಿನ ದೀಪಾವಳಿಯ ಸಂಭ್ರಮವೂ ಇದೆ. ಆಗಿನ ಕಾಲದ ಮದುವೆಗಳೊಂದಿಗೆ ಈಗಿನ ಕಾಲದ ಮದುವೆಗಳನ್ನು ಹೋಲಿಸಿ ನೋಡಿದಾಗ ಆಗಿನ ಮದುವೆಗಳಲ್ಲಿಯ ಸಂಭ್ರಮದ ಮುಂದೆ ಈಗಿನ ಮದುವೆಗಳಲ್ಲಿಯ ನಾಟಕೀಯತೆಯೂ, ಆ ಮಣಭಾರದ ಘಾಗ್ರಾ ಚೋಲಿ, ಮೂರಿಂಚಿನ ಮೇಕಪ್ಪಿನಲ್ಲಿ ಹೊಳೆಯುತ್ತಿರುವ ವಧು, ಶೇರವಾನಿ ಸೂಟುಗಳಲ್ಲಿ ಕಷ್ಟವಾದರೂ ನಗುತ್ತ ನಿಂತ ವರ ನೆನಪಾಗುವುದು ಅಚ್ಚರಿಯೇನಲ್ಲ.
ಅಜ್ಜನ ಹೋಲ್ಡ್ ಆಲ್! ಹೆಸರೇ ಹೇಳುವಂತೆ ಇದು ಎಲ್ಲವನ್ನೂ ತನ್ನ ಹೊಟ್ಟೆಯೊಳಗೆ ಸೇರಿಸಿಕೊಂಬಂಥ ಒಂದು ಹಾಸಿಗೆಯ ಸುರುಳಿ! ಅಜ್ಜನು ವರ್ಷಕ್ಕೊಮ್ಮೆ ಊರಿಗೆ ಹೋಗುತ್ತಿದ್ದುದರಿಂದ ಅದು ಅಟ್ಟದ ಮೇಲಿನಿಂದ ಕೆಳಗೆ ಬರುತ್ತಿದ್ದುದೇ ವರ್ಷಕ್ಕೊಮ್ಮೆ! ಅದನ್ನು ಧೂಳು ಜಾಡಿಸುವದರಲ್ಲಿ ಇಡೀ ಮನೆಯ ಮಕ್ಕಳೆಲ್ಲಾ ಒಟ್ಟುಗೂಡುತ್ತಿದ್ದಂಥ ಸಂಭ್ರಮದ ಪರಿ ಓದಲು ಛಂದ. ಅದರಲ್ಲಿ ಏನುಂಟು ಏನಿಲ್ಲ! ಶಾಲು.. ದೇವರ ಪಟಗಳು, ಪುಸ್ತಕಗಳು, ಕೃಷ್ಣಾಜಿನ, ತುಳಸೀ ಮಾಲೆ ಇವೆಲ್ಲವೂ ಅಜ್ಜನ ಧ್ಯಾನಕ್ಕೆ ಅಗತ್ಯ ವಸ್ತುಗಳು. ಅಮೃತಾಂಜನದ ಎರಡು ಮೂರು ಬಾಟಲಿಗಳು, ಹಿಂಗಾಷ್ಟಕ ಚೂರ್ಣದ ಡಬ್ಬಿ. ಶುದ್ಧಿಗಾಗಿ ಉಪಯೋಗಿಸುತ್ತಿದ್ದಂಥ ಗೋಮೂತ್ರದ ಬಾಟಲು, ಹೋಲ್ಡಾಲಿನ ಇನ್ನೊಂದು ಭಾಗದಲ್ಲಿ ಅಜ್ಜನ ಮಲಮಲ್ಲಿನ ಧೋತ್ರಗಳು, ಶರ್ಟುಗಳು, ವೇಸ್ಟ್ ಕೋಟು, ಗಾಂಧಿ ಟೋಪಿ, ಪಂಚೆ… ಇಷ್ಟೇ ಅಲ್ಲ, ಹಲ್ಲಿನ ಪುಡಿ, ಸೀಗೆಕಾಯಿ ಪುಡಿ… ಇನ್ನೂ ಏನೇನೊ! ಆ ಹೋಲ್ಡ್ ಆಲ್ ಅನ್ನು ನಮ್ಮ ಈಗಿನ ವಿಐಪಿ ಬ್ಯಾಗುಗಳಿಗೆ ಹೋಲಿಸಿ ಆ ಅಜ್ಜನ ಹೋಲ್ಡ್ ಆಲ್ ಗೆ ಇದ್ದಂಥ ಶಕ್ತಿ, ಪ್ರೀತಿಗಳನ್ನು ಶ್ಲ್ಯಾಘಿಸುತ್ತಾರೆ.
ಸೌಗಂಧಿಕಾ, ವಿದಾಯದಂಥ ಲೇಖನಗಳಲ್ಲಿ ಪುರಾಣದ ಘಟನೆಗಳೂ ಇವೆ. ಅಯೋನಿಜೆಯ ಸ್ವಗತದಲ್ಲಿ ಸೀತೆಯು ಲಕ್ಷ್ಮಣನನ್ನು ರಾವಣನ ಸೆರೆಯಲ್ಲಿದ್ದಾಗ ನೆನಪಿಸಿಕೊಳ್ಳುವ ದೃಶ್ಯ ಕರುಳು ಕಲಕುತ್ತದೆ. ಅಷ್ಟೇ ಅಲ್ಲ, ಇಲ್ಲಿ ಕಿತ್ತೂರು ರಾಣಿ ಚೆನ್ನಮ್ಮನೂ ಲೇಖಕಿಯ ಮೆಲುಕಿನಲ್ಲಿ ಬರುತ್ತಾಳೆ. ‘ಅಪ್ಪ ಅಂದರೆ ಅದಮ್ಯ ಸ್ಮೃತಿ’ ಲೇಖನದಲ್ಲಿ ಅಪ್ಪನನ್ನು ನೆನೆಯುತ್ತ, ಅಪ್ಪನ ಆ ಅದಮ್ಯ ಪ್ರೀತಿಯನ್ನು ಎಲ್ಲಿಯೂ ಕಾಣಲು ಸಾಧ್ಯವಿಲ್ಲವೆಂದು ಹೇಳುತ್ತಾರೆ. ತಾವು ಗೆಳತಿಯರೆಲ್ಲ ಸೇರಿ ತಮ್ಮ ಹೊಲಕ್ಕೆ ಸೀತೆನಿ ತಿನ್ನುವುದಕ್ಕೆ ಹೋದಾಗಿನ ಅವಗಢವನ್ನೂ, ಆಗ ತಮ್ಮ ತಂದೆಯವರು ತಮ್ಮ ಜೀವವನ್ನೂ ಲೆಕ್ಕಿಸದೆ ಮಕ್ಕಳು ಕುಳಿತಂಥ ಚಕ್ಕಡಿಯನ್ನು ಅಡ್ಡದರುಬಿದ್ದನ್ನೂ ನೆನೆಯುತ್ತಾರೆ. ಈ ಲೇಖನದಲ್ಲಿ ಹೊಲಗಳ ಸೊಬಗು. ಶುದ್ಧ ಗಾಣದ ಕಬ್ಬಿನ ಹಾಲು, ಸೀತೆನಿಯ ಜೊತೆಗಿನ ಸೇಂಗಾ ಹಾಗೂ ಬೆಳ್ಳುಳ್ಳಿಯ ಖಾರದ ಚಟ್ನಿ, ಬೆಂದ ಸಿಹಿ ಗೆಣಸು, ಹೆತ್ತುಪ್ಪದ ಲೇಪ, ಇವೆಲ್ಲದರ ಜೊತೆಗೆ ಗಟ್ಟಿಯಾದ ಮಜ್ಜಿಗೆ.. ಇವುಗಳನ್ನು ವರ್ಣಿಸುವಾಗ ಬಾಯಲ್ಲಿ ನೀರೂರುತ್ತವೆ.
ಕನ್ನಡಮ್ಮನ ಮೇಲಿನ ಅದಮ್ಯ ಭಕ್ತಿಯನ್ನು ಹೊರಸೂಸುವ ‘ಹುತುತು ಆಟದ ಹಕೀಕತ್ತು’ ಲೇಖನದಲ್ಲಿ ಇಂದಿನ ದೊಡ್ಡವರೂ ಕಲಿಯಬೇಕಾದ ದೇಶಭಕ್ತಿ, ಮಾತೃಭಾಷೆಯ ಮೇಲಿನ ಅಭಿಮಾನಗಳ ಪಾಠವಿದೆ.
ಒಟ್ಟಿನಲ್ಲಿ ನೆನಪುಗಳು, ಬಿಚ್ಚಿಕೊಳ್ಳುತ್ತ ಹೋದಂತೆ ಮನಸ್ಸು ಆ ಹಿಂದಿನ ಕಾಲಕ್ಕೇ ಓಡುವಂಥ ಅನುಭವವು ಜಯಶ್ರೀ ದೇಶಪಾಂಡೆಯವರ ‘ಮಾಯಿ ಕೆಂದಾಯಿ’ಯಲ್ಲಿ ಆಗುತ್ತದೆ.
**

Leave a Reply