ಕೈ ಚಕ್ಕುಲಿ

ಕೈ ಚಕ್ಕುಲಿ

ಹಬ್ಬ ತಪ್ಪಿದರೆ ಹೋಳಿಗೆಯೋಂದೇ ಅಲ್ಲ ಕೈ ಚಕ್ಕುಲಿಯೂ ತಪ್ಪುತ್ತದೆ….! ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಮಲೆನಾಡಿನ ಕೆಲವಷ್ಟು ಮನೆಗಳಲ್ಲಿ ಕೈಯಲ್ಲಿಯೇ ಚಕ್ಕುಲಿ ತಯಾರಿಕೆ ಆರಂಭವಾಗುತ್ತದೆ.
ಚಕ್ಕುಲಿ ಹೆಸರು ನಾವೆಲ್ಲಾ ಕೇಳಿದ್ದೇವೆ. ಆದರೆ ಇದ್ಯಾವುದು ಕೈ ಚಕ್ಕುಲಿ….!? ಸಾಮಾನ್ಯವಾಗಿ ಹಿಟ್ಟನ್ನು ಹದಗೊಳಿಸಿ ಚಕ್ಕುಲಿ ಮಟ್ಟಿನಲ್ಲಿ ಸುತ್ತಿದಾಗ ಚಕ್ಕುಲಿ ಸಿದ್ದವಾಗುತ್ತದೆ. ಆದರೆ ಇಲ್ಲಿ ಹಾಗಲ್ಲ, ಯಾವುದೇ ಸಾಧನವಿಲ್ಲದೆಯೇ ಚಕ್ಕುಲಿ ತಯಾರಾಗುತ್ತದೆ. ಇದೊಂದು ಮಲೆನಾಡಿನ ಸಾಂಪ್ರದಾಯಿಕ ತಿನಿಸು, ಇಲ್ಲಿ ಕೈ ಬೆರಳುಗಳೇ ಚಕ್ಕುಲಿ ತಯಾರಿಕೆಯಲ್ಲಿ ಬಳಕೆಯಾಗುವ ಪರಿಕರ. ನಾದಿದ ಹಿಟ್ಟನ್ನು ಅಂಗೈಯಲ್ಲಿ ಹಿಡಿದು ಹೆಬ್ಬೆರಳು ಹಾಗೂ ತೋರು ಬೆರಳ ಸಹಾಯದಿಂದ ಮರದ ಮಣೆಯ ಮೇಲೆ ವರ್ತುಲಾಕಾರದಲ್ಲಿ ಸುತ್ತಿದರೆ ಕೈ ಚಕ್ಕುಲಿ ರೆಡಿ. ಹೀಗೆ ಚಕ್ಕುಲಿ ಸುತ್ತುವುದೂ ಒಂದು ಕಲೆ, ಆದರೆ ಕೊಂಚ ಪಳಗಿದ ಕೈಗಳು (ಚಾಕಚಕ್ಯತೆ) ಬೇಕಾಗುತ್ತದೆನ್ನಿ.
ಈ ಚಕ್ಕುಲಿ ತಿನ್ನಲು ಸ್ವಲ್ಪ ಗಟ್ಟಿಯಾಗಿರಲೇಬೇಕು! ಕಾರಣ ಇದು ಮಾಮೂಲಿ ಚಕ್ಕುಲಿಗೆ ಹೋಲಿಸಿದರೆ ಕೊಂಚ ಗಟ್ಟಿ. ಆದರೆ ಬಾಯಲ್ಲಿ ನೀರೂರಿಸುವ ರುಚಿ…! ಇದರ ಪರಿಮಳ ಹಾಗೂ ರುಚಿಗೆ ಮನ ಸೋಲದವರಿಲ್ಲ. ಈ ರೀತಿ ತಯಾರಾದ ಚಕ್ಕುಲಿಯನ್ನು ಡಬ್ಬದಲ್ಲಿ ಹಾಕಿಟ್ಟು ತಿಂಗಳು ಗಟ್ಟಲೆ ಸವಿಯಬಹುದು. ಗಣೇಶ ಚತುರ್ಥಿ ಸಮಯದಲ್ಲಿ ಕೈ ಚಕ್ಕುಲಿ ತಯಾರಿಕೆ ಶುರುವಾಗುತ್ತದೆ. ನೆರೆಹೋರೆಯವರು, ಊರಿನವರೆಲ್ಲ ಭಾಗಿಯಾಗಿ ಸಾಮೂಹಿಕವಾಗ ತಯಾರಿಸುವ ಕೈ ಚಕ್ಕುಲಿಗೊಂದು ಪ್ರಾದೇಶಿಕ ಸೊಗಡಿದೆ. ಆದರೆ ಬದಲಾದ ಕಾಲ ಘಟ್ಟದಲ್ಲಿ ಎಲ್ಲರೂ ಕೆಲಸ ಸುಲಭಗೋಳಿಸುವ ನವ ನವೀನ ಉಪಕರಂಗಳೆಡೆಗೆ ಮುಖ ಮಾಡಿರುವ ಕಾರಣ, ಸಾಂಪ್ರದಾಯಿಕ ಕೈ ಚಕ್ಕುಲಿಯ ತಯಾರಿಕೆ ಈಗ ಕಡಿಮೆಯಾಗಿದೆ.
ಹೊಸ್ಮನೆ ಮುತ್ತು

Leave a Reply