ಕಾಲನ_ಕೂಸು

ಕಾಲನ_ಕೂಸು

ನಾವು ಸೂರ್ಯನಿಗೇ ಟಾರ್ಚ ಬಿಡೋಕೆ ಸಕಲ ಸಿದ್ಧತೆಯಲ್ಲಿದ್ದರೆ ….

ಇಲ್ಲಿ ಕೇರಳದಲ್ಲಿ, ಪಕ್ಕದ ಕೊಡಗಿನಲ್ಲಿ ಕುಂಭದ್ರೋಣ ಮಳೆಯಿಂದಾಗಿ ಭೂಮಿ ಕಂಪಿಸಿ ತನ್ನಿರವನ್ನು ಸಾಬೀತು ಮಾಡುತ್ತಿದೆ…

ಆದರೆ ಮಾನವರಾದ ನಾವು ಏನು ಮಾಡುತ್ತಿದ್ದೇವೆ…
ಪಕ್ಷ ರಾಜಕೀಯ, ಜಾತಿ ರಾಜಕೀಯ, ಪ್ರಾಂತಾವಾರು ರಾಜಕೀಯ ಮತ್ತು ಜಲರಾಜಕೀಯ ಎಂದು ವಿಂಗಡಿಸುತ್ತಾ ಹೋಗುತ್ತಿದ್ದೇವೆ… ಒಮ್ಮೇಲೆ ಶ್ರೀಮಂತರಾಗಿ ತಲೆಮಾರುಗಳು ಕುಂತು ತಿಂದರೂ ಕರಗದಂತಹ ಆಸ್ತಿ ಮಾಡುವತ್ತ ಹೆಜ್ಜೆ ಹಾಕುತ್ತಿದ್ದೇವೆ…

ಇಲ್ಲಿಯ ನಮ್ಮ ಬುಡವನ್ನೇ ಭದ್ರ ಮಾಡಿಕೊಳ್ಳಲಾಗದ ನಾವು, ಚಂದ್ರನ ಮೇಲೆ ಮನೆ ಕಟ್ಟುವ, ಸೂರ್ಯನನ್ನು ಮುಟ್ಟುವ ಕನಸು ಕಾಣುತ್ತಿದ್ದೇವೆ.

ಆದರೆ ಇಲ್ಲಿ ವಿಜ್ಞಾನಿಗಳ, ಜ್ಯೋತಿಷಿಗಳ ಹೇಳಿಕೆಯನ್ನೂ ಮೀರಿ ಪ್ರಕೃತಿ ವಿರಾಟರೂಪ ಪ್ರದರ್ಶಿಸಿದೆ; ಪ್ರದರ್ಶಿಸುತ್ತಿದೆ.
ಮಾನವನ ಹಪಾಹಪಿತನಕ್ಕೆ ಪ್ರಕೃತಿಯೇ ಪಾಠ ಕಲಿಸುತ್ತಿರುವುದು ವಿಪರ್ಯಾಸ.
ಮನುಷ್ಯ ತನ್ನ ಅತೀ ಆಸೆಬುರುಕುತನವನ್ನು ಇನ್ನಾದರೂ ಕಡಿಮೆ ಮಾಡಿ, ಎಲ್ಲವನ್ನೂ ಎಲ್ಲರನ್ನೂ ಇಲ್ಲಿಯೇ ಬಿಟ್ಟು ಹೋಗಬೇಕೆಂಬ ಸಣ್ಣ ಪ್ರಜ್ಞೆ ಇದ್ದರೆ ಸಾಕು… ಉಳಿದಂತೆ ಎಲ್ಲವೂ ಸರಿ ಹೋಗಬಹುದು…

ನಾಳೆಗಾಗಿ ಗಂಟು ಕಟ್ಟಿಕೊಳ್ಳುವ ತೀರಾ ಆಸೆಬುರುಕುತನ ಬಿಟ್ಟು ಬೇಕಾದಷ್ಟು ಮಾತ್ರ ಉಳಿಸಿಕೊಂಡು ಅಗತ್ಯವಿರುವಷ್ಟು ಆಸೆಗಳನ್ನು ಮಾತ್ರ ಪೂರೈಸಿಕೊಳ್ಳುವತ್ತ ಹೆಜ್ಜೆ ಹಾಕಬೇಕಿದೆ…

ನಾವು ಸಾಕು ಎನ್ನುವುದು ತಿನ್ನುವಾಗ ಮತ್ತು ಕುಡಿಯುವಾಗ ಮಾತ್ರ…

ಉಳಿದಂತೆ ನಮಗೆ ಎಷ್ಟು ಇದ್ದರೂ ಸಾಲದು.. ತಿನ್ನುವುದನ್ನು ಏನಾದರೂ ತಿಂಗಳಿಗಾಗುವಷ್ಟು ತಿಂದು ಜೀರ್ಣಿಸಿಕೊಳ್ಳುವಂತಿದ್ದರೆ… ಹೇಗಿರುತ್ತಿತ್ತು ಎಂದು ಯೋಚಿಸಿದರೇ ನಡುಕ ಬರುತ್ತದೆ…

ಪ್ರಕೃತಿಯ ಮುಂದೆ ಮಾನವನ ಯಾವ ಪ್ರಯತ್ನವೂ ನಡೆಯುವುದಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದ್ದರೂ ಮಾನವನ ಅತೀ ಆಸೆಗೆ ಕೊನೆ ಮೊದಲಿಲ್ಲ…

ಪ್ರಕೃತಿ ವಿಕೋಪ, ವರ್ಷಧಾರೆಯಿಂದ ಕೊಡಗಿನ ಜನ ತತ್ತರಿಸಿದ್ದಾರೆ.
ದೇಶ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಕೊಡಗಿನ ವೀರರು ಈಗ ನೆಲೆಯೇ ಇಲ್ಲದೆ ತಮ್ಮ ಮನೆ, ಮಠ, ಜಾನವಾರು, ಕಾಫಿ ತೋಟ ಮತ್ತಿತರ ಅತ್ಯುಪಯುಕ್ತ ವಸ್ತುಗಳನ್ನು ಕಳಕೊಂಡಿದ್ದಾರೆ…
ಕೆಲವರ ಕುಟುಂಬವೇ ಸರ್ವ ನಾಶವಾಗಿದೆ.. ಊರಿಗೆ ಊರೇ ಸಮಾಧಿಯಾಗಿದೆ… ಆದರಲ್ಲಿದ್ದವರೆಷ್ಟು ಎಂದು ಇನ್ನೂ ತಿಳಿದಿಲ್ಲ..

ಪ್ರವಾಸಿ ತಾಣವಾಗಿದ್ದ ಕೊಡಗು ತನ್ನತ್ತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿತ್ತು… ಹಲವು ಹೋಂ ಸ್ಟೇಗಳು ತಲೆ ಎತ್ತಿ ಪ್ರವಾಸಿಗರನ್ನು ಆಕರ್ಷಿಸಲು ಹಲವು ಪ್ರಕೃತಿ ವಿರೋಧಿ ಕೆಲಸಗಳನ್ನು ಮಾಡಿದ್ದಲ್ಲದೇ, ಮರಗಳ ಮಾರಣ ಹೋಮವೂ ಇದಕ್ಕೆಲ್ಲ ಕಾರಣ ಎನ್ನುವುದು ಅತಿಶಯೋಕ್ತಿಯಲ್ಲ…

ಕೊಡಗಿನ ಜನ ಸ್ವಾಭಿಮಾನಿಗಳು ಎಂಬುದು ತಿಳಿದ ವಿಷಯ. ಆದರೆ ಈಗ ಮನೆ ಮಾರು ಕಳೆದುಕೊಂಡು ನಿರಾಶ್ರಿತರಾಗಿ ತಮ್ಮ ಸ್ವಂತಿಕೆಯನ್ನು ಕಳಕೊಳ್ಳುವ ಸ್ಥಿತಿಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ…

ಮನುಷ್ಯನ ಆಸೆಗೆ ಮಿತಿ ಇರಬೇಕೆಂಬುದು ವಾಡಿಕೆಯ ಮಾತು. ಆದರೆ ಪ್ರಕೃತಿಯ ಜೊತೆ ಸೆಣಸುತ್ತೇನೆಂಬ ಮನುಷ್ಯನ ಅಹಂ ಅನ್ನು ಪ್ರಕೃತಿ ಈ ಮೂಲಕ ತೀರಿಸಿಕೊಳ್ಳುತ್ತಿದೆ..

ವಿಜ್ಞಾನಿಗಳು ಸಂಶೋಧಿಸುತ್ತಲೇ ಇದ್ದಾರೆ.. ಅವರ ಸಂಶೋಧನೆ ಮನುಷ್ಯ ಮನುಷ್ಯರ ನಡುವಿನ ಸಾಮರಸ್ಯ, ಅವರ ಬದುಕು, ಸಮಪಾಲು ಈ ದಿಶೆಯತ್ತಲೂ ಇರಬೇಕಿತ್ತು…

ಚಂದ್ರನಲ್ಲಿ ಇಳಿದು ಸಾಧಿಸುವುದಾದರೂ ಏನು…?!!
ಅಲ್ಲಿ ನಮಗೆ ಬೇಕಾದ ವಸ್ತಗಳು ಸಿಕ್ಕರೆ ಅದನ್ನು ಇಲ್ಲಿಗೆ ತರಲು ಸಾಧ್ಯವೇ…!!! ಅಥವಾ ಒಂದಿಬ್ಬರು ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿದರು ಅಂತಾದರೆ, ಅದು ಶ್ರೀ ಸಾಮಾನ್ಯಿಗೆ ಏನು ಲಾಭ.. ?!

ಇರುವ ಮೂರುದಿನಗಳಲ್ಲಿ ನೆಮ್ಮದಿಯ ಬದುಕು ಬೇಕೆ ಹೊರತು..
ಚಂದ್ರನಲ್ಲಿ ಮನೆ ಕಟ್ಟುವುದಲ್ಲ.. ಆ ಹಣವನ್ನು ಇಂತಹ ವಿಕೋಪಗಳಿಗೆ ಬಳಸಿ…
ಪ್ರಕೃತಿ ಮುನಿಸಿಕೊಳ್ಳದಂತಹ ಯೋಜನೆಗಳನ್ನು ಹಂತಹಂತವಾಗಿ ಮಾಡಬೇಕು… ಮರಗಳ ಮಾರಣಹೋಮ ನಿಲ್ಲಬೇಕು…

ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಿಗೂ ಇದು ವ್ಯಾಪಿಸುವ ಲಕ್ಷಣಗಳು ಕಾಣಿಸುತ್ತಿವೆ…

ಚತುಶ್ಪಥ ರಸ್ತೆ ಕಾಮಗಾರಿಗೆ, ಬಹುಮಹಡಿ ಕಟ್ಟಲು ಅವೈಜ್ಞಾನಿಕವಾಗಿ ಸಂಗ್ರಹಿಸುವ ಮಣ್ಣು, ಕಬ್ಬಿಣ, ಸಿಮೆಂಟ್, ಇಟ್ಟಿಗೆ ಮತ್ತಿತರ ಕಚ್ಚಾವಸ್ತುಗಳು ಪ್ರಕೃತಿಯಿಂದಲೇ ಪಡೆಯುವುದು ತಾನೆ… !!!

ಅದೇನು ಚಂದ್ರನಿಂದಲೋ ಮಂಗಳನಿಂದಲೋ ಉದುರುವುದಿಲ್ಲವಲ್ಲಾ… !!!

ಆದುದರಿಂದ ವೈಜ್ಞಾನಿಕವಾಗಿ ಪಡೆಯುವ ಮಾರ್ಗವನ್ನು ಹುಡುಕಬೇಕಿದೆ.

ಎರಡಂತಸ್ತಿನ ಕಟ್ಟಡವೊಂದು ಜಾರುಬಂಡಿಯಲ್ಲಿ ಜಾರುವಂತೆ ಜಾರಿದ ದೃಶ್ಯವನ್ನು ಟಿ.ವಿ.ಯಲ್ಲಿ ನೋಡಿ ಮನಕಲಕಿತು…
ಮನುಷ್ಯನ ಪ್ರಯತ್ನ ಇಷ್ಟೇ… ಅವನು ಏನು ಮಾಡಿದರೂ ಅದು ಶಾಶ್ವತವಲ್ಲ ಎಂಬುದು ತಿಳಿದು ನಡೆಯಬೇಕಿದೆ.

ಮನುಷ್ಯನ ತಪ್ಪಿನಿಂದ ಪ್ರಕೃತಿ ಮುನಿಸಿಕೊಳ್ಳುತ್ತಿದೆ.. ಪದೇ ಪದೇ ಈ ತಪ್ಪು ಮರುಕಳಿಸದಂತೆ ಈಗಿನಿಂದಲೇ ಎಚ್ಚರ ವಹಿಸಬೇಕಿದೆ…

ಸರಕಾರಿ ಸಂಬಳದ ನಾವೆಲ್ಲ ಒಂದು ದಿನದ ವೇತನವನ್ನು ಪರಿಹಾರ ನಿಧಿಗೆ ನೀಡುತ್ತಿದ್ದೇವೆ…ಹಾಗೆಯೇ ಕೊಡುಗೈ ದಾನಿಗಳು ತಮ್ಮ ಶಕ್ತ್ಯಾನುಸಾರ ಸಹಕರಿಸಿದ್ದಾರೆ; ಸಹಕರಿಸುತ್ತಿದ್ದಾರೆ… ಕೂಲಿ ಕೆಲಸಗಾರರು, ಆಟೋ ಚಾಲಕರು, ತರಕಾರಿ ಮಾರುವವರು ಹೀಗೆ ಎಲ್ಲ ವರ್ಗದ ಜನ ಸ್ಪಂದಿಸಿದ್ದಾರೆ…
ಅವರೆಲ್ಲರಿಗೂ ಕೃತಜ್ಞತೆಗಳು..

ಹಬ್ಬಗಳು ಸಾಲು ಸಾಲು ಬರುತ್ತಿದೆ…ಹಬ್ಬಗಳಲ್ಲಿನ ಖರ್ಚನ್ನು ಸ್ವಲ್ಪ ಕಡಿಮೆ ಮಾಡಿ..
ಸರಕಾರಿ ಸಮಾರಂಭಗಳಲ್ಲಿ ದುಂದುವೆಚ್ಚ ಕಡಿತಗೊಳಿಸಿ…
ಸಮ್ಮೇಳನ, ಉತ್ಸವ ಮತ್ತಿತರ ಸರಕಾರಿ ಜಾತ್ರೆಗಳ ದುಂದುವೆಚ್ಚ ಈ ಬಾರಿ ಕಡಿತಗೊಳ್ಳಲಿ…
ಸ್ವಾಭಿಮಾನಿ ಕೊಡಗಿನ ಜನಕ್ಕೆ ಧೈರ್ಯ ತುಂಬಬೇಕಾಗಿದೆ…
ಅವರಿಗೆ ಸೂರು ಕಟ್ಟಿಕೊಳ್ಳಲು ಸಹಕರಿಸಬೇಕಾಗಿದೆ..
ಕೊಡಗಿನ ಜನಕ್ಕೂ ದೇವರನಾಡೆಂದೇ ಹೆಸರಾಗಿರುವ ಕೇರಳದ ಎಲ್ಲ ಜನತೆಗೂ ಈ ನೋವನ್ನು ಭರಿಸುವ ಶಕ್ತಿ ನೀಡುವಂತೆ ಆ ಪ್ರಕೃತಿಮಾತೆಯನ್ನು ಕೋರುವೆ…

ಹಾಗೆಯೇ ಮತ್ತೆ ನಿನ್ನ ಕಬಂಧಬಾಹುಗಳನ್ನು ಚಾಚಬೇಡ ಈ ಆಸೆಬುರುಕ ಮನುಷ್ಯರನ್ನು ಕ್ಷಮಿಸು ಎಂದು ಪ್ರಕೃತಿಯಲ್ಲಿ ಕೇಳಿಕೊಳ್ಳುವೆ..

#ಹಂಪಿಯಾಜಿ

Leave a Reply