ಕನ್ನಡ ಸಾಹಿತ್ಯಕ್ಕೆ 12ನೇ ಶತಮಾನದ ಕೊಡುಗೆ

ಕನ್ನಡ ಸಾಹಿತ್ಯಕ್ಕೆ 12ನೇ ಶತಮಾನದ ಕೊಡುಗೆ

ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು. ಹಳೆಗನ್ನಡ,  ನಡುಗನ್ನಡ ಹಾಗೂ ಆಧುನಿಕ ಕನ್ನಡ ಎಂದು.
ಹಳೆಗನ್ನಡ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೇ ಶತಮಾನದಿಂದ ಸುಮಾರು ಹನ್ನೆರಡನೇ ಶತಮಾನದ ವರೆಗಿನ ಕಾಲಘಟ್ಟವೇ ಹಳೆಗನ್ನಡ. ಈ ಕಾಲದ ಸಾಹಿತ್ಯವು ಮುಖ್ಯವಾಗಿ ಜೈನಧರ್ಮವನ್ನು  ಅವಲಂಬಿಸಿದೆ.
ಮುಂದಿನದೇ ನಡುಗನ್ನಡದ ಕಾಲ. ಇದನ್ನು ವಚನಕಾರರ ಕಾಲ ಎಂತಲೇ ಹೇಳಬಹುದು.
12ನೆಯ ಶತಮಾನದ ಮಧ್ಯಭಾಗದಲ್ಲಿ ಮೈಮುರಿದು ಎದ್ದ ವೀರಶೈವ ಆಂದೋಲನ ಕನ್ನಡ ಸಾಹಿತ್ಯಕ್ಕೆ ಹಾಗೂ ಸಮಾಜಕ್ಕೆ ಕೂಡ ಹೊಸ ತಿರುವು ಕೊಟ್ಟಿತು. ಆಚಾರ-ವಿಚಾರ, ಭಾಷೆ-ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ಹೊಸತನ್ನು ತುಂಬಿತು. ಬಸವಣ್ಣನವರು, ಚನ್ನಬಸವಣ್ಣ, , ಪ್ರಭುದೇವ, ಅಕ್ಕಮಹಾದೇವಿ, ಸಿದ್ಧರಾಮ ಇವರು ಆ ಕಾಲದ ಸುಪ್ರಸಿದ್ಧ ವಚನಕಾರರು.
ಜನಮಾನಸದಲ್ಲಿ ಕನ್ನಡಭಾಷೆಯ ಅಭಿವ್ಯಕ್ತಿ ಸಾಧ್ಯತೆಯನ್ನು ತಳಮಟ್ಟ ಕೈವಶ ಮಾಡಿಕೊಂಡಂಥವರು ಈ ಶತಮಾನದ ವಚನಕಾರರು. ವಚನ ಸಾಹಿತ್ಯವು ಅಂದಿನ ಸಾಮಾಜಿಕ ಕ್ರಾಂತಿಯ ಪ್ರಕ್ರಿಯೆಗೆ ಕನ್ನಡಿಯಾಗಿದೆ. ಬಸವಣ್ಣನವರಿಂದ ಆರಂಭವಾದ ಈ ಕ್ರಾಂತಿ ಜಾತಿ, ಮತ, ಧರ್ಮಗಳ ಯೋಚನೆಗಳ ಕ್ರಾಂತಿಕಾರಿ ಮರು-ಪರಿಶೀಲನೆಗೆ ದಾರಿ ಮಾಡಿಕೊಟ್ಟಿತು.ವಚನ ಸಾಹಿತ್ಯದಿಂದ ಬಂದ ಮುಖ್ಯ ಬೋಧನೆಗಳೆಂದರೆ ಕಾಯಕವೇ ಕೈಲಾಸ ಮತ್ತು ಅಧ್ಯಾತ್ಮಿಕತೆಯ ಬಗ್ಗೆ ಹೊಸ ನೋಟ. ಮುಂದೆ ಬಂದಂಥ ಉಳಿದ ವಚನಕಾರರು ಆ ಸಾಧ್ಯತೆಯನ್ನು ಇನ್ನೂ ಹಿಗ್ಗಿಸಿದರು. ಅನುಭವ ಹಾಗೂ ಅಭಿವ್ಯಕ್ತಿಗಳಲ್ಲಿ ಪ್ರಾಮಾಣಿಕತೆಯನ್ನು ಸಾಧ್ಯ ಮಾಡಿ ತೋರಿಸಿದರು. ಈ ಆಂದೋಲನದ ಅಧಿನಾಯಕ ಬಸವಣ್ಣ. ಅಂತೆಯೇ ಇವರ ಕಾರ್ಯಚಟುವಟಿಕೆಗಳ ಕೇಂದ್ರ ಸ್ಥಳ ಕಲ್ಯಾಣ. ಕಲ್ಯಾಣದ ಅರಸು ಬಿಜ್ಜಳನ ಮಂತ್ರಿಯೂ ಆಗಿದ್ದ ಬಸವಣ್ಣನವರ ಅಂದಿನ ಅನುಭವಮಂಟಪದ ಅಧ್ಯಕ್ಷನಾಗಿ ಮೆರೆದವನೆಂದರೆ ಅಲ್ಲಮಪ್ರಭು. ಈತ ಸಾಕ್ಷಾತ್ ಪರಶಿವನ ಅಂಶವನ್ನು ಹೊಂದಿದವನೆಂದು ಹೇಳುತ್ತಾರೆ. ಇವರು ಹಿರಿಯ ಆತ್ಮಜ್ಞಾನಿ. ನಿಜವಾದ ವೈರಾಗ್ಯವನ್ನು ಪಡೆದವರು. ಮಾಯೆಯನ್ನು ಗೆದ್ದು ಬಂದವರು. ತಮಗಿಂತ ಕಿರಿಯರಾದ ಅಕ್ಕಮಹಾದೇವಿ, ಬಸವಣ್ಣ, ಸಿದ್ಧರಾಮ ಮೊದಲಾದವರ ಧ್ಯೇಯ ಧೋರಣೆಗಳಲ್ಲಿನ ಇತಿಮಿತಿಗಳನ್ನು ಎತ್ತಿ ತೋರಿಸಿ ಅವರನ್ನು ಸರಿಯಾದ ಮಾರ್ಗಕ್ಕೆ ಕೊಂಡೊಯ್ದು ಹಿರಿಯರಿವರು. ಇವರು ತಮ್ಮ ವಚನಗಳಲ್ಲಿ ತಾವು ಕಂಡ ಸತ್ಯವನ್ನು, ತಮಗೆ ಹಿಡಿಸದ ಆಚಾರವಿಚಾರಗಳನ್ನು ತೀಕ್ಷ್ಣವಾಗಿ ಪ್ರಸ್ತಾಪಿಸಿದ್ದಾರೆ.
ಆದರೆ ಎಲ್ಲ ವಚನಕಾರರಲ್ಲಿ ತಮ್ಮ ಸರಳವಾದ ಭಾಷೆಯಿಂದ ಹಾಗೂ ಪ್ರಪಂಚದ ನಿತ್ಯದ ಆಗುಹೋಗುಗಳ ಬಗ್ಗೆ ಆಳವಾದ ವಿಮರ್ಶೆಯಿಂದ ಜನಮನದ ಮೇಲೆ ಪ್ರಭಾವ ಬೀರಿದ ಪ್ರಮುಖ ವಚನಕಾರರೆಂದು ಗುರುತಿಸಲ್ಪಡುವವರು ಬಸವಣ್ಣ ಹಾಗೂ ಅಕ್ಕ ಮಹಾದೇವಿ.
ಭಕ್ತಿಭಂಡಾರಿ ಎಂಬ ಕೀರ್ತಿಗೆ ಭಾಜನರಾದ ಬಸವಣ್ಣನವರ ವಚನಗಳಲ್ಲಿ ಭಕ್ತಿಯ ಶಕ್ತಿಯನ್ನೂ ಕಾಣುತ್ತೇವೆ. ಸಾಹಿತ್ಯಕ ಗುಣಗಳನ್ನೂ ಕಾಣುತ್ತೇವೆ. ಒಂದು ದೇಶದ ಮಹಾಮಂತ್ರಿಯಾಗಿದ್ದರೂ ಅವರು ತಮ್ಮ ಮಿತಿಯನ್ನು ಅರಿತವರು. ಜಂಗಮರ ಸೇವೆಯೇ ಪರಶಿವನ ಸೇವೆ ಎಂದು ತನ್ನ ತನು, ಮನ, ಧನಗಳನ್ನು ಜಂಗಮ ದಾಸೋಹಕ್ಕಾಗಿ ಮುಡಿಪಾಗಿಟ್ಟ ಭಕ್ತ ಶ್ರೇಷ್ಠರಿವರು. ಜೀವನಾನುಭವದ ಸಾರವೇ ಇವರ ವಚನಗಳಲ್ಲಿ ಅಡಗಿದೆ. ಲೋಕಹಿತಸಾಧನೆಯ ಉದ್ದೇಶ ಕೂಡ ಇಲ್ಲಿದೆ. ದಯವಿಲ್ಲದ ಧರ್ಮವನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಮಾನವೀಯತೆಯೇ ಧರ್ಮದ ಮೊದಲ ಮೆಟ್ಟಿಲು ಎಂದು ಹೇಳುತ್ತಾರೆ.
ಅನೇಕ ಶ್ರೇಷ್ಠ ವಿದ್ವಾಂಸರು ಪ್ಲೇಟೋನ ಆದರ್ಶರಾಜ್ಯದ ಪರಿಕಲ್ಪನೆಯನ್ನು ಹನ್ನೆರಡನೆ ಶತಮಾನದ ಬಸವಣ್ಣನವರ ಕಲ್ಯಾಣರಾಜ್ಯದ ಪರಿಕಲ್ಪನೆಗೆ ಸಮೀಕರಿಸುತ್ತಾರೆ.  ವೀರಶೈವ ಧರ್ಮದ ಉಗಮವೂ ಕೂಡ ಇವರಿಂದಲೆ ಆದದ್ದು. ವೀರಶೈವ ಧರ್ಮದ ಉಗಮವು ಬುದ್ಧನ ಕ್ರಾಂತಿಭರಿತ ವಿಚಾರಗಳು, ಶಂಕರಾಚಾರ್ಯರ ವೇದಾಂತಗಳನ್ನು ಒಳಗೊಂಡಿದೆ.  ವೀರಶೈವ ಸಾಹಿತ್ಯ ಹಾಗೂ ಅದರ ಧಾರ್ಮಿಕ ತತ್ವಗಳ ವ್ಯಾಪ್ತಿಯು ಕೇವಲ ಕನ್ನಡ ಸಾಹಿತ್ಯಕ್ಕೆ ಮಾತ್ರ ಮೀಸಲಾಗಿರದೆ, ಜಾಗತಿಕ ಸಾಹಿತ್ಯಕ್ಕೆ ಕೂಡ ವಿಸ್ತರಿಸಿದೆ ಎಂದು ಹೇಳಬಹುದು.
ಹನ್ನೆರಡನೆ ಶತಮಾನ ಧಾರ್ಮಿಕ ಸಿದ್ಧಾಂತಗಳ ತಿಕ್ಕಾಟ, ಆಚಾರ-ವಿಚಾರಗಳ ಆತಂಕ, ಜಾತಿ-ಮತ-ಪಂಥಗಳ ಹೊಡೆದಾಟ. ಇಂತಹ ಸಮಾಜದಲ್ಲಿ ಇರುವ ವಿವಿಧ ದೇವರುಗಳ ಪೂಜೆಯನ್ನು ಖಂಡಿಸಿದ ವಚನಕಾರರು ತ್ರಿವಿಧ ದಾಸೋಹಗಳಿಗೆ ಬದ್ಧನಾಗಿ ಇಹಲೋಕದಲ್ಲಿಯೇ, ಆತ್ಮ ಸಾಕ್ಷಾತ್ಕಾರವನ್ನು, ಜೊತೆಗೆ ದೇವರನ್ನೂ ಕಾಣುತ್ತ ಏಕದೇವೋಪಾಸನೆಯ ಬಗ್ಗೆ ಅರಿವು ಮೂಡಿಸುತ್ತಾರೆ.
ಸಾಹಿತ್ಯಿಕವಾಗಿ ಹೇಳುವುದಾದರೆ ಮೊದಲ ಎರಡು ಶತಮಾನಗಳ ಸಾಹಿತ್ಯವು ಜನರಿಗೆ ಎಟುಕುವಂಥದಾಗಿರದೆ ಕೇವಲ ವಿದ್ವಾಂಸರ ಗಂಟಲಿನ ತುತ್ತಾಗಿತ್ತು. ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ಅರಿವಾಗುವಂಥ ಸಾಹಿತ್ಯ ಈ ಕಾಲದ ಒಂದು ಅವಶ್ಯಕತೆಯೇ ಆಗಿತ್ತು. ಹೀಗಾಗಿ ಈ ಕಾಲಘಟ್ಟವನ್ನು ಸಾಹಿತ್ಯಿಕವಾಗಿಯೂ ಅತ್ಯಂತ ಮಹತ್ವದ ಕಾಲವೆಂದೇ ಹೇಳಲಾಗುತ್ತದೆ. ಹಳೆಗನ್ನಡದ ಕಾಲವು ಜೈಧಳನರ ಕಾಲವೆಂದು ಹಣೆಪಟ್ಟಿ ಹೊತ್ತರೆ ವಚನಕಾರರ ಈ ಕಾಲವು ಜಾತ್ಯಾತೀತವೆಂದೆನ್ನಿಸಿತು. ಏಕೆಂದರೆ ವೀರಶೈವ ಧರ್ಮವು ಒಂದು ಕೋಮು ಅಥವಾ ಸಂಕುಚಿತ ಜಾತಿ ಎಂದೆನ್ನಿಸದೆ ವಿಶ್ವದ ಒಂದು ಧರ್ಮವಾಗಿತ್ತು. ಇಲ್ಲಿಯ ವಚನಕಾರರು ಎಲ್ಲಾ ಜಾತಿ, ಧರ್ಮಗಳವರಾಗಿದ್ದರು. ಇದೊಂದು ಚಳುವಳಿಯ ರೂಪವನ್ನೇ ಪಡೆದಿತ್ತು. ಈ ಕಾಲದ ಇತರ ಮಹತ್ವದ ಕಾವ್ಯಗಳೆಂದರೆ ಕೇಶಿರಾಜನ ಶಬ್ದ ಮಣಿದರ್ಪಣ, ಸೂಕ್ತಿ ಸುಧಾರ್ಣವ. ಆದರೂ ಇದು ವಚನಕಾರರ ಯುಗವೆಂದೇ ಪ್ರಸಿದ್ಧವಾಯಿತು.

Leave a Reply