ಕುಂಟೆ ಕಟ್ಟುವುದು…!

ಕುಂಟೆ ಕಟ್ಟುವುದು…!
ಮರದ ಕೊರಡೊಂದನ್ನು ಹಸುವಿನ ಕೊರಳಿಗೆ ಕಟ್ಟಿರುವುದನ್ನು ಚಿತ್ರದಲ್ಲಿ ಕಾಣಬಹುದು. ಕೆಲವು ತುಂಟ ದನಗಳು ಹಿಂಡಿನಿಂದ ತಪ್ಪಿಸಿಕೊಂಡು ಹೋಗಿ ಯಾರ್ಯಾರದೋ ಗದ್ದೆ, ತೋಟಗಳಿಗೆ ನುಗ್ಗಿ ಬೆಳೆದ ಬೆಳೆಗಳನ್ನು ತಿಂದು ಹಾಳು ಮಾಡುವವು. ಇದರಿಂದ ಅನವಶ್ಯಕವಾದ ಜಗಳ, ಮೈಮನಸ್ಸು ತಲೆದೂರುತ್ತದೆ. ಈ ಪುಂಡು ದನಗಳ ಲೂಟಿ ತಪ್ಪಿಸಲು ಅವುಗಳ ಕೊರಳಿಗೆ ಕುಂಟೆ ಕಟ್ಟುವ ವ್ಯವಸ್ಥೆ ಇದೆ.
ಹಸುವಿನ ಉಡಾಫೆಯ ತೀವ್ರತೆಯನ್ನು ಆಧರಿಸಿ, ಅದರ ಸ್ವಭಾವಾನುಸಾರ ಹೀಗೆ ಕಟ್ಟಲಾದ ಕೊಠಡಿನ ಗಾತ್ರದಲ್ಲಿ ವೈವಿಧ್ಯವಿರುತ್ತದೆ. ಸುಮಾರು ನಾಲ್ಕೈದು ಅಡಿ ಉದ್ದ, ಒಂಭತ್ತು ಅಂಗುಲ ದಪ್ಪವುಳ್ಳ ಭಾರವಾದ ಮರದ ತುಂಡೊಂದನ್ನು ಹಗ್ಗದ ಮೂಲಕ ಪುಂಡು ದನದನ ಕುತ್ತಿಗೆಗೆ ಕಟ್ಟುವರು. ಕೊರಡಿನ ಮತ್ತೊಂದು ತುದಿ ಸದಾ ನೆಲದ ಮೇಲೆ ಎಳೆಯುತ್ತಿರುತ್ತದೆ. ಇದರಿಂದ ಸರಾಗವಾಗಿ ಎಲ್ಲೆಂದರಲ್ಲಿ ನುಗ್ಗುವ, ಬೇಲಿ ಹಾರುವ ಕ್ರಿಯೆಗೆ ತೊಂದರೆಯಾಗುತ್ತದೆ. ಹೀಗೆ ಕುಂಟೆ ಕಟ್ಟಿದ ಮೇಲೆಯೂ ಹಾರಾಡುವ ಹಸುಗಳು ಕಾಲಿಗೆ ಏಟು ಮಾಡಿಕೊಳ್ಳುವ, ಕಿರಿದಾದ ಜಾಗದಲ್ಲಿ ಗದ್ದೆಗೆ ನುಗ್ಗಲು ಹೋಗಿ ಕೆಲವೊಮ್ಮೆ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಅಪಾಯವೂ ಇದೆ.
ಹೊಸ್ಮನೆ ಮುತ್ತು

Leave a Reply