ಮಹಾಶಿವರಾತ್ರಿ

ಮಹಾಶಿವರಾತ್ರಿ

ಸಾಮಾನ್ಯವಾಗಿ ಶಿವನು ಸುಲಭವಾಗಿ ಒಲಿಯುವವನು ಎಂದು ಪ್ರತೀತಿ ಇದೆ. ನನಗಂತೂ ಹಾಗೆ ಎನ್ನಿಸುವುದಿಲ್ಲ. ಭಕ್ತನ ಭಕ್ತಿಯು ಪರಾಕಾಷ್ಠೆಯನ್ನು ತಲುಪಿ, ಆತ ತನ್ನ ಜೀವವನ್ನೇ ಪಣಕ್ಕೆ ಹಚ್ಚಿದಾಗಲೇ ಶಿವನೂ ಒಲಿಯುವುದು! ನೀವೆಲ್ಲ ಅರುವತ ಮೂರು ಶಿವಶರಣರ ಕಥೆಗಳೆಲ್ಲವನ್ನೂ ಓದಿರದಿದ್ದರೂ ಸಿರಿಯಾಳ, ಕಣ್ಣಪ್ಪ, ನಂಬಿಯಕ್ಕ, ತಿರುನೀಲಕಂಠ ಮುಂತಾದವರ ಕಥೆಗಳನ್ನು ಅರಿತೇ ಇರುತ್ತೀರಿ. ಯಾರಿಗಾದರೂ ಶಿವನು ಸುಲಭಕ್ಕೆ ಒಲಿದುದುಂಟೇ? ಇಲ್ಲವೇ ಇಲ್ಲ…
ಅವನನ್ನು ಒಲಿಸಲು ನೀರಿನ ಅಭಿಷೇಕ, ಬಿಲ್ವ ಪತ್ರೆಯ ಅರ್ಪಣೆಯೂ ಸಾಕು. ಪ್ರದಕ್ಷಿಣೆ ಬಂದು ನಾಮಜಪ ಮಾಡಿದರಂತೂ ಬಹಳ ಸಂತಸ ಅವನಿಗೆ ಎನ್ನುತ್ತಾರೆ. ಆದರೆ ಭಕ್ತಿಯಿಲ್ಲದೆ ಬರಿ ನೀರಿನ ಅಭಿಷೇಕವನ್ನು ಅವನು ಸ್ವೀಕರಿಸಿಯಾನೆಯೇ? ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸುವಾಗ ತಾಯಿ ಮಗುವನ್ನು ಎಷ್ಟು ಪ್ರೀತಿಯಿಂದ ಕರೆಯುತ್ತಾಳೆ! ಅಪ್ಪ ಬಾರೋ.. ನಮ್ಮಮ್ಮ ಬಾರೇ ಎಂದೆಲ್ಲ! ನೀರಿನಲ್ಲಿ ಕೈಯಿರಿಸಿ ನೋಡಿ ಅದು ಸ್ನಾನಕ್ಕೆ ಹಾಳತವಾಗಿದೆ ಎಂದು ದೃಢಪಡಿಸಿಕೊಂಡೇ ಮಗುವನ್ನು ಸ್ನಾನ ಮಾಡಿಸುತ್ತಾಳೆ. ಇದೇ ಶೃದ್ಧೆ ಭಗವಂತನ ಸೇವೆಯಲ್ಲಿಯೂ ಅಗತ್ಯ.
ಇಂದು ಮಹಾ ಶಿವರಾತ್ರಿ.  ಶಿವನು ಬೇಡರ ಕಣ್ಣಪ್ಪನೆಂಬಾತನಿಗೆ  ಒಲಿದ ಕತೆಯನ್ನೂ ನೀವು ಕೇಳಿರಬಹುದು.
ಕಾಡಿನಲ್ಲಿ ವಾಸಿಸುವ  ಬೇಡ. ಅವನ ಹೆಸರು ಕಣ್ಣಪ್ಪ. ಅವನು ಒಂದು ದಿನ ಬೆಳಿಗ್ಗೆ ಎದ್ದು ಎಂದಿನಂತೆ ಬೇಟೆಗೆ ಹೊರಟ. ಅವನ ಕುಟುಂಬದವರು ಎಂದರೆ ಹೆಂಡತಿ, ಮಕ್ಕಳು, ತಂದೆ, ತಾಯಿ ಎಲ್ಲರೂ ಹಲವಾರು ದಿನಗಳಿಂದ ಬೇಟೆಯೇ ದೊರೆಯದಿದ್ದುದರಿಂದ ಹಸಿದಿದ್ದರು. ಅಂದೂ ಕೂಡ ಕಣ್ಣಪ್ಪನೂ ಇಡೀ ದಿನ ಬಿಸಿಲಿನಲ್ಲಿ ತಿರುಗಾಡಿ  ದಣಿದರೂ ಬೇಟೆ ಸಿಗಲಿಲ್ಲ. ಅವನಿಗೆ ವಿಪರೀತ ಹಸಿವಾಯಿತು. ಅಷ್ಟರಲ್ಲಿ ರಾತ್ರಿಯಾಯಿತು. ಮನೆಗೆ ಹಿಂದಿರುಗಲು ದಾರಿ ತಿಳಿಯಲಿಲ್ಲ. ಕಾಡುಪ್ರಾಣಿಗಳಿಗೆ ಸಿಗದಂತೆ ರಾತ್ರಿ ಕಳೆಯೋಣ ಎಂದು ಒಂದು ಬಿಲ್ವಪತ್ರೆ ಯ ಮರವನ್ನು ಹತ್ತಿದನು. ಗಾಢ ಕತ್ತಲಾಯಿತು. ನಿದ್ರೆ ಮಾಡುವಂತೆ ಇರಲಿಲ್ಲ. ಏಕೆಂದರೆ ಅವನು ಕುಳಿತದ್ದುದು ಒಂದು ರೆಂಬೆಯ ಮೇಲೆ. ಸ್ವಲ್ಪ ಮೈಮರೆತರೂ ಕೆಳಗೇ ಬೀಳಬಹುದಾಗಿತ್ತು. ಸಮಯ ಕಳೆಯಲು ಕೈಗೆ ಸಿಕ್ಕಿದ ಒಂದೊಂದೇ ಎಲೆಯನ್ನು ಕಿತ್ತು ಕಿತ್ತು ಕೆಳಗೆ ಹಾಕಲಾರಂಭಿಸಿದ. ಇಡೀ ರಾತ್ರಿ ಯನ್ನು ಹಾಗೆಯೇ ಕಳೆದಿದ್ದನು.
ಅಂದು  ಶಿವರಾತ್ರಿ. ಇಡೀ ದೇಶದ ಜನತೆಯೇ ಶಿವನ ಆರಾಧನೆಯಲ್ಲಿ ರಾತ್ರಿ ಜಾಗರಣೆ ಮಾಡಿತ್ತು. ಅವನು ಕೂಡ ಅವನಿಗೆ ಅರಿಯದೆಯೇ ಶಿವರಾತ್ರಿಯ ಜಾಗರಣೆ ಮಾಡಿದ್ದ. ಅವನು ಹತ್ತಿದ ಮರ ಬಿಲ್ವವೇ ಆಗಿತ್ತಲ್ಲವೇ? ಹೀಗಾಗಿ  ಅವನು ಕಿತ್ತು ಕೆಳಗೆ ಹಾಕುತ್ತಿದ್ದ ಆ ಬಿಲ್ವದ ಎಲೆಗಳು ಕೆಳಗಿದ್ದ ಒಂದು ಶಿವಲಿಂಗದ ಮೇಲೆ ಹೋಗಿ ಬೀಳುತ್ತಲಿದ್ದವು. ಹೀಗೆ ಅವನಿಗೇ ಅರಿಯದಂತೆ ಅವನು ಇಡೀ ರಾತ್ರಿ ಉಪವಾಸವಿದ್ದು, ಶಿವನಿಗೆ ಬಿಲ್ವಾರ್ಚನೆ ಮಾಡಿದ್ದ.
ಹೀಗಾಗಿ ಅವನಿಗೆ ಶಿವಪೂಜೆಯ ಪುಣ್ಯ ಪ್ರಾಪ್ತಿಯಾಗಿತ್ತು ಎಂದು ಹೇಳುವ ಕಥೆ ಇದು.
ಈ ಕಣ್ಣಪ್ಪನೆಂಬಾತನ ಇನ್ನೂ ಒಂದು ಕಥೆ ಇದೆ.  ಅದನ್ನು ತ್ರಿಷಷ್ಟಿ ಪುರಾತನರ ಕಥೆಯಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಚೋಳಮಂಡಲದಲ್ಲಿ ತಿರುಕಾಲತ್ತಿ  ಎಂದರೆ ಶ್ರೀ ಕಾಳಹಸ್ತಿ ಎನ್ನುವುದು ಒಂದು ಶೈವಕ್ಷೇತ್ರ. ಆ ಬೆಟ್ಟದ ತಪ್ಪಲಲ್ಲಿ ಬೇಡರ ಗುಂಪೊಂದಿತ್ತು. ಅದರ ಒಡೆಯನೇ ಕಣ್ಣಪ್ಪ. ಒಂದು ಸಂಜೆ ಮರದಡಿಯಲ್ಲಿ ಮಲಗಿದ್ದಾಗ ಕಣ್ಣಪ್ಪನ ಕನಸಿನಲ್ಲಿ ಶಿವ ಬಂದು ಆ ಕಾಡಿನಲ್ಲಿ ಶಿವಲಿಂಗವಿರುವುದನ್ನು ತಿಳಿಸಿ ಅದನ್ನು ಅನುನಯದಿಂದ ಪೂಜಿಸಬೇಕೆಂದು ಹೇಳುತ್ತಾನೆ. ಕನಸು ನಿಜವೆನ್ನುವಂತೆ ದೂರದಲ್ಲಿ ಶಿವಲಿಂಗ ಕಾಣುತ್ತದೆ. ಅದನ್ನು ನೋಡಿದ ಕಣ್ಣಪ್ಪ ಆನಂದಭರಿತನಾಗಿ ಮುಗ್ಧಮನಸ್ಸಿನಿಂದ ಶಿವಲಿಂಗವನ್ನು ಅಪ್ಪಿ ಎಳೆಯ ಮಕ್ಕಳನ್ನು ಲಾಲಿಸುವಂತೆ ಮಾತನಾಡಿಸಿ ಪೂಜೆ ಮಾಡತೊಡಗುತ್ತಾನೆ. ಬೇಟೆಯಾಡಿ ತಂದಂಥ  ಪ್ರಾಣಿಗಳ ಮಾಂಸವೇ ಶಿವನಿಗೂ ನೈವೇದ್ಯ. ಅದೂ ಕೂಡ  ಮಾಂಸವನ್ನು ಬೇಯಿಸಿ ತಂದು, ನೆಕ್ಕಿ, ನೋಡಿ, ರುಚಿಯಾದ ಭಾಗವನ್ನು ಶಿವನ ಪಾದದಡಿಯಿಟ್ಟು ತಾನು ತಲೆಯಲ್ಲಿ ಮುಡಿದಿದ್ದ ಕಕ್ಕೆ ಮೊದಲಾದ ಹೂಗಳಿಂದಲೇ ಪೂಜಿಸುತ್ತಿರುತ್ತಾನೆ. ಹಿಂದಿನ ದಿನ  ಪೂಜೆ ಮಾಡಿದ್ದ ಲಿಂಗದ ತಲೆಯ ಮೇಲಿನ ನಿರ್ಮಾಲ್ಯದ ಹೂವುಗಳನ್ನು ತನ್ನ ಕೆರದ ಕಾಲಿನಿಂದ ಅತ್ತ ನೂಕಿ ತನ್ನ ಬಾಯಲ್ಲಿ ನೀರನ್ನು ತುಂಬಿ ತಂದು ಲಿಂಗಕ್ಕೆ ಅಭಿಷೇಕ ಮಾಡಿ ತಾನು ಮುಡಿದಿದ್ದ ಹೂಗಳನ್ನೇ ದೇವರ ತಲೆಯ ಮೇಲೆ ಹಾಕಿ ಆ ಎಂಜಲು ಮಾಂಸವನ್ನು ಪ್ರತಿ ದಿನ ನೈವೇದ್ಯ ಮಾಡುತ್ತಿರುತ್ತಾನೆ. ಆದರೆ ಅವನದು ಮುಗ್ಧತೆಯ ಭಕ್ತಿ. ಆ ನಿಸ್ಸ್ವಾರ್ಥ ಭಕ್ತಿಯಿಂದ ಮಾಡಿದ ಪೂಜೆಯಿಂದ ಶಿವನು  ಸಂತುಷ್ಟನಾಗುತ್ತಾನೆ.  ಇದು ಅವನ  ನಿತ್ಯ ಪೂಜಾವಿಧಿ. ಶಿವದೇವಾಲಯದಲ್ಲಿ ನಿತ್ಯವೂ ಮಾಂಸ ಮೂಳೆಗಳಿರುವುದನ್ನು ಕಂಡು ಪೂಜಾರಿ ಇಂಥ ಅನ್ಯಾಯ ಮಾಡುವವನನ್ನು, ಪಾಪಿಯನ್ನು ಪತ್ತೆಹಚ್ಚಲು ಒಂದು ದಿನ ಲಿಂಗದ ಹಿಂದೆ ಅಡಗಿ ಕುಳಿತಿರುತ್ತಾನೆ. ಕಣ್ಣಪ್ಪ ಎಂದಿನಂತೆ ಬಂದು ತನ್ನ ಪೂಜೆಯನ್ನು ಪೂರ್ಣ ಗೊಳಿಸುತ್ತಾನೆ. ಆದರೆ ಪೂಜಾರಿ ಮಾತ್ರ ಕಣ್ಣಪ್ಪನು ಮಾಡುವ ಈ  ಅಪಚಾರದ  ಲಿಂಗಪೂಜೆಯನ್ನು ಕಂಡು ಕೆಂಡವಾಗುತ್ತಾನೆ. ಕಣ್ಣಪ್ಪನ ಈ ಪೂಜಾನಿಷ್ಠೆಯನ್ನು ಪೂಜಾರಿಗಷ್ಟೇ ಅಲ್ಲ, ಆ ಮೂಲಕ ಲೋಕಕ್ಕೂ ಪ್ರಕಟಗೊಳಿಸಬೇಕೆಂದು ಆಲೋಚಿಸಿದ ಶಿವನು ತನ್ನ ಕಣ್ಣಿನಿಂದ ನೀರು  ಹರಿಸುತ್ತಾನೆ. ಶಿವನ ದುಃಖಕ್ಕೆ ಕಾರಣವನ್ನು ತಿಳಿಯದ ಕಣ್ಣಪ್ಪ ಬಹಳವಾಗಿ ಪೇಚಾಡಿ ಇದು ಏನೋ ಕಣ್ಣಿನ ರೋಗವಿರಬೇಕೆಂದು ಬಗೆದು ತನ್ನ ನಿರ್ಮಲವಾದ ಕಣ್ಣನ್ನು ಬಾಣದ ಕೊನೆಯಿಂದ ಕಿತ್ತು ನೀರೊಸರುತ್ತಿದ್ದ ಶಿವನ ಕಣ್ಣಿದ್ದ ಕಡೆ ಇಡುತ್ತಾನೆ. ಕ್ಷಣದಲ್ಲಿ ಕಣ್ಣು ಒಸರುವುದು ನಿಲ್ಲುತ್ತದೆ. ಆದರೆ ಶಿವನ ಇನ್ನೊಂದು ಕಣ್ಣು ಜಿನುಗಲು ಪ್ರಾರಂಭವಾಗುತ್ತದೆ. ಆಗ ಕಣ್ಣಪ್ಪನು ತನ್ನ ಕಾಲಿನ ಉಂಗುಷ್ಠವನ್ನು ಗುರುತಿಗಾಗಿ ಶಿವನ ಕಣ್ಣಿನ ಬಳಿಯಿಟ್ಟುಕೊಂಡು ತನ್ನ ಇನ್ನೊಂದು ಕಣ್ಣನ್ನೂ ಕೀಳಲು ಉದ್ಯುಕ್ತನಾಗುತ್ತಾನೆ. ಮುಗ್ಧ ಭಕ್ತನ ಅದ್ವಿತೀಯ ತ್ಯಾಗಕ್ಕೆ ಶಿವ ಪ್ರಸನ್ನನಾಗುತ್ತಾನೆ. ಕಣ್ಣಪ್ಪ ಕಳೆದುಕೊಂಡಿದ್ದ ಕಣ್ಣುಗಳನ್ನು ಪಡೆಯುತ್ತಾನೆ. ಲಿಂಗದ ಹಿಂದೆ ಅವಿತು ನಿಂತಿದ್ದ ಪೂಜಾರಿ ಪಶ್ಚಾತ್ತಾಪ ಪಟ್ಟು ಮುಂದೆ ಬಂದು ಕಣ್ಣಪ್ಪನನ್ನು ಹೃದಯ ತುಂಬಿ ಪ್ರೀತಿಸುತ್ತಾನೆ. ಅಂದಿನಿಂದ ಈ ಕಣ್ಣಪ್ಪನ ಕಥೆ ಲೋಕಪ್ರಸಿದ್ಧವಾಗುತ್ತದೆ. ಶಿವನ ಭಕ್ತಿಯ ಪರಾಕಾಷ್ಠೆಯ ಇಂಥ ಕಥೆಗಳು ಬಹಳಷ್ಟು ಇವೆ.  ಇಂದು ಒಂದಾದರೂ ಕಥೆಯನ್ನು ಕೇಳಿ ನಾವೆಲ್ಲ ಪುನೀತರಾಗೋಣ.

Leave a Reply